ಕನ್ನಡದಲ್ಲಿ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇನೆ: ತಮನ್ನಾ ಭಾಟಿಯಾ

Published: 10 Sep 2018 12:45 PM IST | Updated: 10 Sep 2018 12:48 PM IST
ತಮನ್ನಾ ಭಾಟಿಯಾ
ಮಿಲ್ಕಿ ಬ್ಯೂಟಿ,  ಬಹುಭಾಷಾ ತಾರೆ ತಮನ್ನಾ  ಭಾಟಿಯಾ ,  ಸದ್ಯದಲ್ಲೇ  ಕನ್ನಡ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುವ ಇಂಗಿತ ವ್ಯಕ್ತಪಡಿಸಿದ್ದು,  ಒಳ್ಳೆಯ  ಕಥೆಗಾಗಿ ಕಾಯುತ್ತಿರುವುದಾಗಿ  ತಿಳಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಚಿತ್ರದ  ಸಾಂಗ್ ವೊಂದರಲ್ಲಿ ಮೈ ಚಳಿ ಬಿಟ್ಟು ಕುಣಿದು ಸಿನಿರಸಿಕರ ಹೃದಯಕ್ಕೆ ಕನ್ನ ಹಾಕಿದ ಬಾಹುಬಲಿ ಖ್ಯಾತಿಯ  ತಮನ್ನಾ ಭಾಟಿಯಾ, ತಮಿಳು, ತೆಲುಗು, ಹಾಗೂ ಹಿಂದಿಯಲ್ಲೂ ಬೇಡಿಕೆಯ ನಟಿಯಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹಾಡೊಂದರಲ್ಲಿ  ನರ್ತಿಸಿದ್ದಾರೆ.

ಪೊತೀಸ್ ಬ್ರಾಂಡ್ ರಾಯಬಾರಿಯಾಗಿ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಚಿಕ್ಕದಾಗಿ ತೆರೆ ಹಂಚಿಕೊಂಡಿದ್ದ ತಮನ್ನಾ ಭಾಟಿಯಾ , ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರದ ಚಿತ್ರೀಕರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಹಾಗೂ ತಂಡದೊಂದಿಗಿನ ಕೆಲಸ ಉತ್ತಮವಾಗಿತ್ತು ಎಂದು ಕೊಂಡಾಡಿದ್ದಾರೆ.  ಅಲ್ಲದೇ,  ಸ್ಯಾಂಡಲ್ ವುಡ್ ನಲ್ಲಿ ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುತ್ತೇನೆ. ಉತ್ತಮ ಕಥೆ ಸಿಕ್ಕರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡುವುದಾಗಿ  ತಮನ್ನಾ ಭಾಟಿಯಾ ನಿನ್ನೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಲೆವೆರ್ ಆಯುಷ್ ಥೆರಪಿ ಕೇಂದ್ರವನ್ನು ಉದ್ಘಾಟಿಸಲು ಬೆಂಗಳೂರಿಗೆ ಬಂದಿದ್ದ ತಮನ್ನಾ ಭಾಟಿಯಾ, ತನ್ನ ಬ್ಯೂಟಿ ಸಿಕ್ರೆಟ್ ಗುಟ್ಟು ಬಿಟ್ಟುಕೊಟ್ಟರು.  ತ್ವಚೆ ಹಾಳಾಗದಂತೆ ನೈಸರ್ಗಿಕ ದಾರಿಯಲ್ಲಿ ಸಾಗಲು ತಮ್ಮ ತಾಯಿ ಸಲಹೆ ನೀಡುತ್ತಿದ್ದರು. ಅವರ ಆಯುರ್ವೇದ ಸಲಹೆಗಳಿಂದ ಸಾಕಷ್ಟು ಪ್ರಯೋಜನವಾಗಿದ್ದು, ಅದನ್ನೆ ಮುಂದುವರೆಸಿರುವುದಾಗಿ ಹೇಳಿದರು.

ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಆಕೆಯ ಬಗ್ಗೆ ವೀಕ್ಷಕರು  ಹೊಂದಿದ್ದ ದೃಷ್ಟಿಕೋನವನ್ನು ಬದಲಾಯಿಸಿದ್ದು, ಬಾಹುಬಲಿ ನಂತರ  ಬೇರೆ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಬಾಹುಬಲಿ ನಂತರ ಸಾಹಸ ಪ್ರದಾನ ಚಿತ್ರಗಳೇ ಹೆಚ್ಚೆಚ್ಚು ಹುಡುಕಿಕೊಂಡು ಬಂದಿದ್ದು,  ನಟಿಯಾಗಿ ರೂಪುಗೊಳ್ಳಲು ಬಾಹುಬಲಿ ನೆರವಾಗಿದೆ. ಈಗ ಯಾವುದೇ ಪಾತ್ರವನ್ನಾದರೂ ಮಾಡಬಲ್ಲೇ  ಎಂಬ ಆತ್ಮಸ್ಥೈರ್ಯ ಇರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಾಹುಬಲಿ ನಂತರ ಮೆಗಾಸ್ಟರ್ ಚಿರಂಜೀವಿ ಅಭಿಯನದ  'ಸೈರಾ ನರಸಿಂಹರೆಡ್ಡಿ ' ಚಿತ್ರದಲ್ಲಿ ತಮ್ಮಾನಾ ಭಾಟಿಯಾ ನಟಿಸಿದ್ದು, ಆ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ಮಹಿಳಾ ಕೇಂದ್ರಿತ ವಿಷಯದ ಬಗ್ಗೆ ಆಕೆ ಹೆಚ್ಚಿನ ಒಲವು ಇಟ್ಟುಕೊಂಡಿದ್ದಾರೆ.

ತೆಲುಗಿನಲ್ಲಿ ತಮನ್ನಾ ಅಭಿನಯದ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಸೀನು ರಾಮಸ್ವಾಮಿ ನಿರ್ದೇಶದ ತಮಿಳು ಚಿತ್ರ ಕಾಣೆ ಕಲೈಮಾನೆ ಚಿತ್ರದಲ್ಲಿ ಅವರು  ನಟಿಸಿದ್ದು,  ವಿಶಾಲ್ ನಾಯಕ ನಟರಾಗಿ  ಸಿ. ಸುಂದರ್ ನಿರ್ದೇಶಿಸುತ್ತಿರುವ ಸಿನಿಮಾವೊಂದಕ್ಕೆ ಸಹಿ ಹಾಕಿರುವುದಾಗಿ ತಮನ್ನಾ ಭಾಟಿಯಾ ಹೇಳಿದರು.
Posted by: ABN | Source: The New Indian Express

ಈ ವಿಭಾಗದ ಇತರ ಸುದ್ದಿ