ಮಾಡರ್ನ್ 'ಅಮ್ಮಾವ್ರ ಗಂಡ'ನ ಅವತಾರದಲ್ಲಿ ಉಪೇಂದ್ರ ರಿಯಾಲಿಟಿ ಚೆಕ್: ಹೋಮ್ ಮಿನಿಸ್ಟರ್ ಚಿತ್ರ ವಿಮರ್ಶೆ
ಉಪೇಂದ್ರ ಸಿನಿಮಾಗಳಿಂದ ಜನರು ಅಪೇಕ್ಷಿಸುವ twisted ಸೀನ್ ಗಳು ಸಿನಿಮಾದಲ್ಲಿವೆ. ಈ ಬಾರಿ ಕೇವಲ ಬುದ್ಧಿವಂತ ಫ್ಯಾನ್ ಗಳಿಗೆ ಮಾತ್ರವಲ್ಲದೆ ಈ ಬಗೆಯ ಸೀನುಗಳು ಫ್ಯಾಮಿಲಿ ಆಡಿಯೆನ್ಸ್ ಗೆ ಇಷ್ಟವಾಗಲಿವೆ ಎನ್ನುವುದು ವಿಶೇಷ.
Published: 01st April 2022 04:34 PM | Last Updated: 02nd April 2022 02:06 PM | A+A A-

ಸಿನಿಮಾ ಪೋಸ್ಟರ್
ವಿಮರ್ಶೆ: ಹರ್ಷವರ್ಧನ್ ಸುಳ್ಯ
ಹೋಮ್ ಮಿನಿಸ್ಟರ್ ಸಿನಿಮಾದ ಹೆಸರು ಕೇಳಿದಾಕ್ಷಣ ಎರಡು ಬಗೆಯ ಚಿತ್ರಣ ಸಿನಿಮಾಸಕ್ತರ ಕಣ್ಣೆದುರು ಬರುವುದು. ನಟ ಉಪೇಂದ್ರ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರುವ ಕಾರಣ ಪಾಲಿಟಿಕ್ಸ್ ಕುರಿತಾದ ಸಿನಿಮಾ ಇದಾಗಿರಬಹುದು ಎನ್ನುವುದು ಮೊದಲ ಊಹೆ. ಅದು ಬಿಟ್ಟರೆ ಎರಡನೆಯದು ಗೃಹಿಣಿಯ ಸಿನಿಮಾ ಎನ್ನುವ ಚಿತ್ರಣ. ಸಿನಿಮಾದ ಹಾಡುಗಳು, ಟ್ರೇಲರನ್ನು ನೋಡಿದ್ದರೆ ಎರಡನೇ ಚಿತ್ರಣವೇ ಕರೆಕ್ಟು ಎನ್ನುವ ಸತ್ಯ ಈಗಾಗಲೇ ಗೊತ್ತಾಗಿರುತ್ತದೆ. ಉಪೇಂದ್ರ ಸಿನಿಮಾಗಳಿಂದ ಜನರು ಅಪೇಕ್ಷಿಸುವ ಟ್ವಿಸ್ಟ್ ಸೀನ್ ಗಳು ಸಿನಿಮಾದಲ್ಲಿವೆ. ಗೃಹಿಣಿಯರು ಸೇರಿಕೊಂಡು ಬ್ಯಾಂಕಾಕ್ ಟ್ರಿಪ್ ಹೋಗುವುದು ಅವುಗಳಲ್ಲೊಂದು. ಈ ಬಾರಿ ಕೇವಲ ಬುದ್ಧಿವಂತ ಫ್ಯಾನ್ ಗಳಿಗೆ ಮಾತ್ರವಲ್ಲದೆ ಈ ಬಗೆಯ twisted ಸೀನುಗಳು ಫ್ಯಾಮಿಲಿ ಆಡಿಯೆನ್ಸ್ ಗೆ ಇಷ್ಟವಾಗಲಿವೆ ಎನ್ನುವುದು ವಿಶೇಷ.
ಅಮ್ಮಾವ್ರ ಗಂಡನ ನೆನಪು
ಈ ಸಿನಿಮಾ ದಶಕಗಳ ಹಿಂದೆ ಶಿವರಾಜ್ ಕುಮಾರ್- ಭಾಗ್ಯಶ್ರೀ ಅಭಿನಯದ, ಫಣಿರಾಮಚಂದ್ರ ನಿರ್ದೇಶನದ 'ಅಮ್ಮಾವ್ರ ಗಂಡ' ಸಿನಿಮಾವನ್ನು ನೆನಪಿಸಿದರೆ ಅದರಲ್ಲಿ ಅಚ್ಚರಿ ಏನೇನೂ ಇಲ್ಲ. ಹೋಮ್ ಮಿನಿಸ್ಟರ್ ಸಿನಿಮಾ ಕಥಾನಾಯಕ ಕಾರ್ಪೊರೆಟ್ ವೃತ್ತಿ ಬಿಟ್ಟು ಮನೆಗೆಲಸ ನೋಡಿಕೊಳ್ಳುವುದು, ಪುಟ್ಟ ಮಗಳ ಪಾಲನೆಯಲ್ಲಿ ತೊಡಗುತ್ತಾನೆ. ಮನೆಯಲ್ಲಿ ಪತ್ನಿಯೊಬ್ಬಳು ಮಾಡುವ ಕೆಲಸಗಳನ್ನು ಪತಿಯಾಗಿ ಉಪೇಂದ್ರ ನಿರ್ವಹಿಸುತ್ತಾರೆ.
ಅಮ್ಮಾವ್ರ ಗಂಡ ಸಿನಿಮಾಗೂ ಹೋಮ್ ಮಿನಿಸ್ಟರ್ ಗೂ ಇದೊಂದೇ ವಿಷಯದಲ್ಲಿ ಸಾಮ್ಯತೆ ಇರೋದು. ಅದು ಬಿಟ್ಟರೆ ಓವರ್ ಆಲ್ ಕಥೆಯನ್ನು ಗಣನೆಗೆ ತೆಗೆದುಕೊಂಡು ಹೇಳುವುದಾದರೆ ಹೋಮ್ ಮಿನಿಸ್ಟರ್ 'ಅಮ್ಮಾವ್ರ ಗಂಡ'ನಿಗಿಂತ ವಿಭಿನ್ನ ಸಿನಿಮಾ. ಹಿಂದಿಯಲ್ಲಿ 'ಕಿ ಅಂಡ್ ಕ' (Ki And Ka) ಎನ್ನುವ ಸಿನಿಮಾ ಕೂಡಾ ಇಂಥದ್ದೇ ಕಥಾಹಂದರವನ್ನು ಹೊಂದಿತ್ತು. ಅರ್ಜುನ್ ಕಪೂರ್ ಮತ್ತು ಕರೀನಾ ಕಪೂರ್ ಆ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
ನೆರೆಮನೆಯಾಕೆಯಿಂದ ಟ್ವಿಸ್ಟ್
ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿರುವ ಉಪೇಂದ್ರ ಕುಟುಂಬದಲ್ಲಿ ವೇದಿಕಾ ದುಡಿಯುವ ಕೈ. ಉಪೇಂದ್ರ ಅವರಿಗೆ ಅಪಾರ್ಟ್ ಮೆಂಟಿನಲ್ಲಿ ನೆಲೆಸಿರುವ ಹೆಂಗಸರೆಲ್ಲಾ ಪರಿಚಯ. ಎಲ್ಲರ ಖಾಸಗಿ ಸಮಸ್ಯೆಗಳನ್ನು ಬಗೆಹರಿಸುವಷ್ಟು ಆಪ್ತ. ಉಪೇಂದ್ರ ಕ್ಯಾರೆಕ್ಟರಿನಲ್ಲಿ ರವಷ್ಟೂ ದೋಷವಿಲ್ಲ. ಹೀಗಾಗಿಯೇ ಅಕ್ಕಪಕ್ಕದ ಮನೆಯ ಹೆಂಗಸರ ಜೊತೆ ಕ್ಲೋಸ್ ಆಗಿದ್ದರೂ ಪತ್ನಿ ವೇದಿಕಾಗೆ ಗಂಡನ ಮೇಲೆ ಸಂಶಯ ಬರೋದಿಲ್ಲ.
ಎಲ್ಲಾ ಸರಿಯಾಗಿ ನಡೆಯುತ್ತಿರುವಾಗ ಒಂದು ದಿನ ನೆರೆಮನೆಯಾಕೆ ಹಣದ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುತ್ತಾಳೆ. ಆಗ ಉಪೇಂದ್ರ ಮನೆಯಲ್ಲಿಟ್ಟಿದ್ದ 10 ಲಕ್ಷ ರೂ. ನೀಡುತ್ತಾರೆ. ಅದು ಮಾವನವರ ಸರ್ಜರಿಗೆಂದು ಪತ್ನಿ ಎತ್ತಿಟ್ಟಿದ್ದ ಹಣ. ಇದಾಗಿ ಎಷ್ಟೋ ದಿನಗಳ ಬಳಿಕ ಹಲವರ ಬಳಿ ಹಣ ಪಡೆದ ನೆರೆಮನೆಯಾಕೆ ಎಸ್ಕೇಪ್ ಆಗುತ್ತಾಳೆ. ಉಪೇಂದ್ರ ಕುಟುಂಬ ಬೇರ್ಪಡುವ ಹಾಗಾಗುತ್ತೆ. ಈ ಸಮಸ್ಯೆಯ ಸುಳಿಯಿಂದ ನಾಯಕ ಹೇಗೆ ಹೊರಬರುತ್ತಾರೆ. ಅಸಲಿಗೆ ಉಪೇಂದ್ರ ಹೋಮ್ ಮಿನಿಸ್ಟರ್ ಆಗೋಕೆ ಏನು ಕಾರಣ ಎಂಬೆಲ್ಲಾ ಸತ್ಯಗಳು ಕೊನೆಯಲ್ಲಿ ಬಹಿರಂಗವಾಗುತ್ತವೆ.
ಪಾತ್ರ ಪೋಷಣೆಯ ಗಮ್ಮತ್ತು
ಅಂದಚಂದದಿಂದ ಗಮನ ಸೆಳೆಯುವ ಜೊತೆಗೆ ವೇದಿಕಾ ನಟನೆಯಲ್ಲೂ ಫುಲ್ ಮಾರ್ಕ್ಸ್ ಗಿಟ್ಟಿಸುತ್ತಾರೆ. ಸಿನಿಮಾ ಪಾತ್ರವರ್ಗದಲ್ಲಿ ಸುಮನ್ ರಂಗನಾಥ್, ತಾನ್ಯಾ ಹೋಪ್, ಶುಭ ರಕ್ಷಾ, ಅವಿನಾಶ್, ಸುಧಾ ಬೆಳವಾಡಿ, ಮಾಳವಿಕಾ, ಶ್ರೀನಿವಾಸ ಮೂರ್ತಿ, ಸಾಧು ಕೋಕಿಲ, ತಿಲಕ್ ಗಮನಾರ್ಹ ಅಭಿನಯ ನೀಡಿದ್ದಾರೆ. ಹಿರಿಯ ಗಾಯಕಿ ಕಸ್ತೂರಿ ಶಂಕರ್ ಅತಿಥಿ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಗಿಬ್ರಾನ್ ನೀಡಿರುವ ಹಿನ್ನೆಲೆ ಸಂಗೀತ ಸಿನಿಮಾಗೆ ಸ್ಪೀಡ್ ದೊರಕಿಸಿಕೊಟ್ಟಿದೆ. ಉಪೇಂದ್ರ ಅವರಿಗೆ ಆಂಧ್ರದಲ್ಲಿ ಇರುವ ಅಭಿಮಾನಿಗಳನ್ನು ತಣಿಸಲು ತೆಲುಗು ಸಿನಿಮಾ ನಟರು ಸಿನಿಮಾದಲ್ಲಿದ್ದಾರೆ.
ಹೋಮ್ ಮಿನಿಸ್ಟರ್ ಸಿನಿಮಾದಿಂದ ಉಪೇಂದ್ರ ಫ್ಯಾಮಿಲಿ ಆಡಿಯೆನ್ಸ್ ಗೆ ಇನ್ನಷ್ಟು ಹತ್ತಿರವಾಗುವುದರಲ್ಲಿ ಸಂಶಯವಿಲ್ಲ. ಪತ್ನಿಯನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು, ಸಂಸಾರ ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಸಂದೇಶಗಳು ಸಿನಿಮಾದಲ್ಲಿವೆ. ಮನೆಯಲ್ಲಿದ್ದುಕೊಂಡೇ ಕೆಲಸ ನಿರ್ವಹಿಸುವ ಸಾಧ್ಯತೆಯನ್ನು ವರ್ಕ್ ಫ್ರಮ್ ಹೋಮ್ ಸಾಧಿಸಬಹುದು ಎನ್ನುವ ಸಾಧ್ಯತೆಯನ್ನು ಸಿನಿಮಾ ಪರಿಚಯಿಸಿದೆ. ಸಂಪೂರ್ಣ ವಿಭಿನ್ನ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲವಾದರೂ, ಇರುವ ಸಾಮಗ್ರಿಯನ್ನೇ ಬಳಸಿ ರುಚಿಕರ ಅಡುಗೆಯನ್ನು ನಿರ್ದೇಶಕ ಸುಜಯ್ ಕನ್ನಡ ಪ್ರೇಕ್ಷಕರಿಗೆ ಬಡಿಸಿದ್ದಾರೆ. ಉಪೇಂದ್ರ ಅಭಿಮಾನಿಗಳು ಮಾತ್ರವಲ್ಲದೆ, ಸಿನಿಮಾಸಕ್ತರು ಕುಟುಂಬ ಸಮೇತ ಈ ಸಿನಿಮಾವನ್ನು ಎಂಜಾಯ್ ಮಾಡಲಡ್ಡಿಯಿಲ್ಲ.