ಮನುಷ್ಯ ಜೀವನದ so called ಮೌಲ್ಯಗಳನ್ನು ಟೆಸ್ಟ್ ಮಾಡೋ ರೋಡ್ ಮೂವಿ: 'ತ್ರಿಕೋನ' ಚಿತ್ರವಿಮರ್ಶೆ
ಮನುಷ್ಯನ ತಾಕಲಾಟಗಳ ಜೊತೆಗೇ ವ್ಯವಸ್ಥೆಯ ವಿಡಂಬನೆಯನ್ನೂ ವ್ಯಕ್ತಪಡಿಸಲು 'ರೋಡ್ ಮೂವಿ' ಸಿನಿಮಾ ಪ್ರಕಾರ ಅತ್ಯಂತ ಸೂಕ್ತವಾದುದು. ಅದನ್ನು ನಿರ್ದೇಶಕ ಚಂದ್ರಕಾಂತ್ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. 'ತ್ರಿಕೋನ' ಮೂಲಕ ಬಹಳ ಸಮಯದ ನಂತರ ಕನ್ನಡಕ್ಕೊಂದು ಸಮರ್ಥ ರೋಡ್ ಮೂವಿ ದೊರಕಿದೆ.
Published: 08th April 2022 03:04 PM | Last Updated: 08th April 2022 03:09 PM | A+A A-

ಸಿನಿಮಾ ಸ್ಟಿಲ್
ವಿಮರ್ಶೆ: ಹರ್ಷವರ್ಧನ್ ಸುಳ್ಯ
ಸಿನಿಮಾವಲಯದಲ್ಲಿ ತ್ರಿಕೋನ ಪ್ರೇಮಕಥೆ ಕುರಿತಾಗಿ ಎಲ್ಲರೂ ಕೇಳಿಯೇ ಇರುತ್ತಾರೆ. ಅಷ್ಟೊಂದು ಲವ್ ಟ್ರಯಾಂಗಲ್ ವಿಷಯಾಧಾರಿತ ಸಿನಿಮಾಗಳು ನಮ್ಮಲ್ಲಿ ಬಂದಿವೆ. ತ್ರಿಕೋನ ಕೂಡಾ ಅಂಥದ್ದೇ ಸಿನಿಮಾ ಅಂತಂದುಕೊಂಡರೆ ತುಂಬಾ ತಪ್ಪಾಗುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಇದು ಲವ್ ಟ್ರಯಾಂಗಲ್ ಅಲ್ಲ ಲೈಫ್ ಟ್ರಯಾಂಗಲ್ ಸಿನಿಮಾ. ಇದು ರೋಡ್ ಮೂವಿ ಕೂಡಾ ಹೌದು. ಮನುಷ್ಯನ ತಾಕಲಾಟಗಳ ಜೊತೆಗೇ ವ್ಯವಸ್ಥೆಯ ವಿಡಂಬನೆಯನ್ನೂ ವ್ಯಕ್ತಪಡಿಸಲು ರೋಡ್ ಮೂವಿ ಸಿನಿಮಾ ಪ್ರಕಾರ ಅತ್ಯಂತ ಸೂಕ್ತವಾದುದು. ಅದನ್ನು ನಿರ್ದೇಶಕ ಚಂದ್ರಕಾಂತ್ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ.
ಪ್ರಯೋಗಾತ್ಮಕ ಸಿನಿಮಾ
ಒಂದೇ ಸಿನಿಮಾದಲ್ಲಿ ಮೂರು ವಿಭಿನ್ನ ಕಥೆಗಳನ್ನು ಹೇಳುವ ಪ್ರಯೋಗಗಳು ಕನ್ನಡ ಸಿನಿಮಾಗಳಲ್ಲಿ ಈ ಹಿಂದೆ ಆಗಿವೆ. ಪುಟ್ಟಣ್ಣನವರ ಕಥಾಸಂಗಮ, ಇತ್ತೀಚಿನ ಕಥಾಸಂಗಮ, ಚೌಕ ಸಿನಿಮಾಗಳಲ್ಲೂ ಈ ಬಗೆಯ ಆಂಥಾಲಜಿ ಎಂದು ಕರೆಸಿಕೊಳ್ಳುವ ಪ್ರಯೋಗಗಳು ನಡೆದಿವೆ. ತ್ರಿಕೋನ ಸಿನಿಮಾ ಮೂರು ಸಂಸಾರಗಳ, ಮೂರು ವಿಭಿನ್ನ ಕಥೆಗಳನ್ನು ಜನರ ಮುಂದೆ ಪ್ರಸ್ತುತಪಡಿಸುತ್ತದೆ. ಇವು ಮೂರೂ ಕಥೆಗಳು ಒಂದೇ ಕಾಲಘಟ್ಟದಲ್ಲಿ, ಏಕಕಾಲಕ್ಕೆ ನಡೆಯುವುದು ವಿಶೇಷ.
ಈ ಮೂರೂ ಕಥೆಗಳು ಮನುಷ್ಯಜೀವನದ ಮೂರು ಘಟ್ಟಗಳಾದ ಬಾಲ್ಯ, ಯೌವ್ವನ, ಮುಪ್ಪನ್ನು ಪ್ರತಿನಿಧಿಸುತ್ತವೆ. ಮೂರೂ ಕಥೆಗಳ ಪಾತ್ರಧಾರಿಗಳಲ್ಲಿ ಕ್ರಮಬದ್ಧವಾಗಿ ಕೋಪ, ಅಹಂ ಮತ್ತು ತಾಳ್ಮೆ ಕಂಡುಬರುತ್ತದೆ.
ಮೂರು ಕಥೆಗಳು ಮೂರು ಆಯಾಮಗಳು
ಮೊದಲ ಕಥೆಯಲ್ಲಿ ನಾಯಕ, (ನಟ ರಾಜ್ ವೀರ್) ಓರ್ವ ಯುವಕ, ವಿದೇಶದಲ್ಲಿ ನೆಲೆಸಿರುವ ಬಿಜಿನೆಸ್ ಮೆನ್. ಕಡುಕೋಪ ಅವನ ಗುಣ. ಕೋಟಿಗಟ್ಟಲೆ ರೂ. ಹೋಟೆಲ್ ಡೀಲ್ ಕುದುರಿಸಲು ಮಂಗಳೂರಿಗೆ ಹೊರಡುತ್ತಾನೆ. ಸ್ಟಂಟ್ ದೃಶ್ಯಗಳಲ್ಲಿ ರಾಜ್ ವೀರ್ ಭರವಸೆ ಮೂಡಿಸುತ್ತಾರೆ.
ಎರಡನೇ ಕಥೆಯ ನಾಯಕ ಅಚ್ಯುತ್ ಕುಮಾರ್, ನಾಯಕಿ ಸುಧಾರಾಣಿ. ಅವರಿಬ್ಬರೂ ಇಲ್ಲಿ ಸತಿಪತಿಗಳು. ಅವರದು ಶ್ರೀಮಂತ ಕುಟುಂಬ. ಅಹಂಕಾರ, ದರ್ಪ ಅಚ್ಯುತ್ ಕುಮಾರ್ ಅಳವಡಿಸಿಕೊಂಡ ಗುಣ. ಅದನ್ನು ಬಳಸಿ ಎಲ್ಲರನ್ನೂ ಆತ ನಿಯಂತ್ರಿಸುತ್ತಿರುತ್ತಾನೆ. ಕುಟುಂಬ ಸಮೇತ ಅವರು ಮಂಗಳೂರಿಗೆ ಕಾರಿನಲ್ಲಿ ಪ್ರವಾಸ ಹೊರಡುತ್ತಾರೆ.
ಮೂರನೇ ಕಥೆಯ ನಾಯಕ ಸುರೇಶ್ ಹೆಬ್ಳೀಕರ್, ನಾಯಕಿ ಲಕ್ಷ್ಮೀ. ಸುರೇಶ್ ಹೆಬ್ಳೀಕರ್ ಹೋಟೆಲ್ ಉದ್ಯಮಿ. ಸಾಲದ ಶೂಲಕ್ಕೆ ಸಿಕ್ಕಿಬಿದ್ದ ಆತ ತನ್ನ ಹೋಟೆಲ್ ಮಾರಬೇಕಾಗಿಬರುತ್ತದೆ. ಆದರೆ ಅಷ್ಟರಲ್ಲಿ ಬೇರೆಡೆ ಹಣದ ವ್ಯವಸ್ಥೆಯಾಗಿ ಬ್ಯಾಂಕ್ ಲೋನ್ ಸೆಟಲ್ ಮಾಡಲು ಪತ್ನಿ ಸಹಿತ ಮಂಗಳೂರಿಗೆ ತೆರಳುತ್ತಾರೆ. ತಾಳ್ಮೆ ಆತನ ಗುಣ. ಆತ ಉಳಿಸಿಕೊಳ್ಳಲು ಹೊರಟಿರುವ ಹೋಟೆಲನ್ನೇ ಮೊದಲನೇ ಕಥೆಯ ನಾಯಕ ಖರೀದಿಸಲು ಬಂದಿರುವುದು.
ಟೈಮ್ ಕೆಟ್ರೆ ಆಪತ್ತು
ಬದುಕನ್ನು ಸಾಮಾನ್ಯವಾಗಿ ನಾವು ಪಯಣಕ್ಕೆ ಹೋಲಿಸುತ್ತೇವೆ. ಇದೇ ಪಯಣದಲ್ಲಿ ನಮ್ಮ ಮೂವರು ಕಥಾನಾಯಕ, ನಾಯಕಿಯರು ಹೊರಟಿದ್ದಾರೆ. ಈ ಪಯಣದಲ್ಲಿ ಅವರಿಗೆ ವಿಲನ್ ಆಗೋದು ಕಷ್ಟ ಎನ್ನುವ ರಕ್ಕಸ ಪಾತ್ರಧಾರಿ. ಪ್ರತಿಯೊಬ್ಬರ ಜೀವನ ಮೌಲ್ಯಗಳನ್ನು ಅವನು ಪರೀಕ್ಷೆಗೆ ಹಚ್ಚುತ್ತಾನೆ. ಸಿನಿಮಾದಲ್ಲಿಯೇ ಹೇಳುವಂತೆ ಆತ ಕಾಲ. ಹಾಗೆಂದರೆ ಯಮ ಅಂತಲೂ ಅಂದುಕೊಳ್ಳಬಹುದು, ಸಮಯ ಅಂತಲೂ ಅಂದುಕೊಳ್ಳಬಹುದು. ಹಾಗೆ ನೋಡಿದರೆ ಸಮಯ ಮತ್ತು ಯಮ ಇವೆರಡರ ನಡುವೆ ವ್ಯತ್ಯಾಸವೇನೂ ಇಲ್ಲ. ಎರಡೂ ಒಂದೇ. ವಿಲನ್ ವಾಹನವನ್ನು ಎಮ್ಮೆಯಂತೆ ಸಿಂಗರಿಸಲಾಗಿರುವುದು ಕಾಕತಾಳೀಯವಲ್ಲ.
ಮನರಂಜನೆ ಪ್ಲಸ್ ಪಾಯಿಂಟ್
ಮೇಲೆ ಹೇಳಲಾದ ಮೂರೂ ಕಥೆಗಳನ್ನು ಒಂದರೊಳಗೊಂದು ಕೂಡುವಂತೆ ಜಾಣ್ಮೆಯಿಂದ ಹೆಣೆಯಲಾಗಿದೆ. ಜೀವನವನ್ನು ಮೂರು ಕೋನಗಳಲ್ಲಿ, ಮೂರು ಆಯಾಮಗಳಲ್ಲಿ ಹೇಳಲು ನಿರ್ದೇಶಕ ಚಂದ್ರಕಾಂತ್ ಮತ್ತು ಕಥೆಗಾರ/ ನಿರ್ಮಾಪಕ ರಾಜಶೇಖರ್ ಪ್ರಯತ್ನಿಸಿದ್ದಾರೆ.
ಜನಸಾಮಾನ್ಯರಿಗೆ ಹತ್ತಿರವಾಗುವ ಅಂಶಗಳು ಬಹಳವೇ ಇರುವುದು ಸಿನಿಮಾದ ಹೆಗ್ಗಳಿಕೆ. ಆ ನಿಟ್ಟಿನಲ್ಲಿ ಸಿನಿಮಾ ಜನರಿಗೆ ಹತ್ತಿರವಾಗುವುದರಲ್ಲಿ ಸಂಶಯವಿಲ್ಲ. ಪಾರಮಾರ್ಥಿಕ, ತಾತ್ವಿಕ ಅಂಶಗಳನ್ನು ಬದಿಗಿಟ್ಟು ನೋಡಿದರೂ ಮನರಂಜನಾತ್ಮಕವಾಗಿ ನೋಡಿಸಿಕೊಂಡು ಹೋಗುವುದು 'ತ್ರಿಕೋನ' ಸಿನಿಮಾದ ಪ್ಲಸ್ ಪಾಯಿಂಟ್.