ಪ್ರೇಮಿಗಳು ಮದುವೆ ಮುನ್ನ ನೋಡಲೇಬೇಕಾದ ಸೋಷಿಯಲ್ ಎಕ್ಸ್ ಪೆರಿಮೆಂಟ್ ಸಿನಿಮಾ: Bytwo ಲವ್ ಚಿತ್ರವಿಮರ್ಶೆ
ಗ್ಲಾಮರ್ ಮಾತ್ರವಲ್ಲದೆ ನಟನಾ ಚಾತುರ್ಯವನ್ನು ಹೊರಗೆಡಹುವ ಪಾತ್ರ ಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ ಕನಸು. ಧನ್ವೀರ್- ಶ್ರೀಲೀಲಾ ಇಬ್ಬರಿಗೂ ಆ ಕನಸು 'Bytwo ಲವ್' ಸಿನಿಮಾ ಮೂಲಕ ನನಸಾಗಿದೆ. ಆಧುನಿಕ ಕಾಲದ ಪ್ರೇಮಿಗಳ ತಾಕಲಾಟವನ್ನು ಹಾಗೂ ದಾಂಪತ್ಯದ ತೊಳಲಾಟವನ್ನು ನಿರ್ದೇಶಕ ಹರಿಸಂತೋಷ್ ಸೊಗಸಾಗಿ ತೋರ್ಪಡಿಸಿದ್ದಾರೆ.
Published: 19th February 2022 05:03 PM | Last Updated: 19th February 2022 06:22 PM | A+A A-

ಸಿನಿಮಾ ಪೋಸ್ಟರ್
ವಿಮರ್ಶೆ: ಹರ್ಷವರ್ಧನ್ ಸುಳ್ಯ
ಕಾಗದದ ಮೇಲೆ ಬರೆಯುವಾಗ ತಪ್ಪಾದರೆ ಇರೇಸರ್ ನಿಂದ ಅಳಿಸಬಹುದು. ಡಿಜಿಟಲ್ ಪರದೆ ಮೇಲೆ ಟೈಪಿಸುವಾಗ ತಪ್ಪಾದರೂ ಬ್ಯಾಕ್ ಸ್ಪೇಸ್ ಒತ್ತಿ ತಿದ್ದಬಹುದು. ಆದರೆ ಬದುಕು ಹಾಗಲ್ಲ. ಇಲ್ಲಿ ಬ್ಯಾಕ್ ಸ್ಪೇಸ್ ಬಟನ್ ಅಥವಾ undo ಬಟನ್ ಇರೋಲ್ಲ. ಘಟಿಸಿ ಹೋದದ್ದನ್ನು ಮತ್ತೆ ಪುನಃ ಸರಿಪಡಿಸಲಾಗುವುದಿಲ್ಲ. ಅದರಲ್ಲೂ ಮದುವೆ, ಸಂಸಾರದ ವಿಚಾರಗಳಲ್ಲಂತೂ ಎರಡನೇ ಅವಕಾಶ ನಿರೀಕ್ಷಿಸಲಾಗದು.
ಡೇಂಜರಸ್ ಎಕ್ಸ್ ಪೆರಿಮೆಂಟ್
ನಿಜಜೀವನದಲ್ಲಿ Trial and error ಆಯ್ಕೆ ಇದ್ದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು ಎಂಬ ಮನಸ್ಥಿತಿಯ ಹುಡುಗ ಹುಡುಗಿಯ ಮಾಡುವ ಸೋಷಿಯಲ್ ಎಕ್ಸ್ ಪೆರಿಮೆಂಟೇ ಹರಿಸಂತೋಷ್ ನಿರ್ದೇಶನದ 'ಬೈಟು ಲವ್' ಸಿನಿಮಾದ ಹೂರಣ. ಬಾಲು- ಲೀಲಾ ಸಿನಿಮಾದ ನಾಯಕ- ನಾಯಕಿ. ಇಬ್ಬರೂ ಅನಿವಾರ್ಯ ಕಾರಣಗಳಿಂದ ಮನೆ ಬಿಟ್ಟು ಬೆಂಗಳೂರಿಗೆ ಬರುತ್ತಾರೆ. ಇಬ್ಬರಿಗೂ ಮ್ಯಾಟ್ರಿಮೋನಿ ಸಂಸ್ಥೆಯಲ್ಲಿ ಕೆಲಸ.
ಇಬ್ಬರೂ 'ಐ ಹೇಟ್ ಲವ್ ಸ್ಟೋರಿ' ಕೆಟಗರಿಗೆ ಸೇರಿದವರು. ಬಾಲು ಮಾತಲ್ಲೇ ಹೇಳುವುದಾದರೆ ಅವನು ಅಪ್ಪಟ ಆಂಜನೇಯನ ಭಕ್ತ. ಇನ್ನು ಲೀಲಾಗೆ ಫ್ರೆಂಡ್ ಶಿಪ್, ಲವ್ ಮತ್ತು ಮ್ಯಾರೇಜ್ ಎಂದರೆ ಆಗದು. ಪ್ರೀತಿ- ಮದುವೆ ವಿಷಯದಲ್ಲಿ ಇಬ್ಬರೂ ಸಮಾನಮನಸ್ಕರಾಗಿದ್ದರಿಂದ ಇಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಆ ಸ್ನೇಹ ಪ್ರೀತಿಗೆ ತಿರುಗುತ್ತದೆ. ಈ ಹಂತದಲ್ಲಿ ಇಬ್ಬರೂ ಒಂದು ಡೇಂಜರಸ್ ಸೋಷಿಯಲ್ ಎಕ್ಸ್ ಪೆರಿಮೆಂಟಿಗೆ ಕೈ ಹಾಕುತ್ತಾರೆ.
ಪ್ರೇಮ Vs ದಾಂಪತ್ಯ
ಆ ಎಕ್ಸ್ ಪೆರಿಮೆಂಟು ಏನೆಂದರೆ ಮದುವೆಗೆ ಮುನ್ನವೇ ಸಂಸಾರ ಜೀವನ ಹೇಗಿರುತ್ತೆ ಎನ್ನುವುದನ್ನು ಸ್ವಂತ ಅನುಭವದ ಮೂಲಕ ತಿಳಿದು ಮುಂದಡಿ ಇಡಬೇಕು ಎಂದು. ಅದಕ್ಕಾಗಿ ಇಬ್ಬರೂ ಒಂದೇ ಫ್ಲ್ಯಾಟಿಗೆ ಶಿಫ್ಟಾಗುತ್ತಾರೆ. ಅಡ್ಡದಾರಿ ಬಳಸಿ ಅನಾಥ ಮಗುವೊಂದನ್ನು ಖರೀದಿಸಿ ಸಾಕುತ್ತಾರೆ. ನಿಜಜೀವನದಲ್ಲಿ ಸತಿ ಪತಿಗಳ ಥರ ನಾಟಕವಾಡುತ್ತಾರೆ. ಅದರಿಂದ ಸಂಕಷ್ಟಗಳು ಎದುರಾಗುತ್ತದೆ. ಅವರಿಬ್ಬರ ರಂಪ ರಾಮಾಯಣದಲ್ಲಿ ಮಗು ಪ್ರಾಣಪಾಯಕ್ಕೆ ಸಿಲುಕಿಕೊಳ್ಳುತ್ತದೆ.
ಸೋಷಿಯಲ್ ಎಕ್ಸ್ ಪೆರಿಮೆಂಟ್ ನಿಂದ ಸಿಕ್ಕ ತಾತ್ಪರ್ಯ, ಅಂದರೆ ಕನ್ ಕ್ಲೂಷನ್ ಏನು? ಮಗು ಉಳಿಯುತ್ತದಾ? ಇಬ್ಬರೂ ಬೇರ್ಪಡುತ್ತಾರಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಸಿನಿಮಾ ನೋಡಬೇಕು. ನಿರ್ದೇಶಕರು ಬಹಳ ಸೊಗಸಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ನೋಡಿಸಿಕೊಂಡು ಹೋಗುವ ಮನರಂಜನಾತ್ಮಕ ಅಂಶಗಳಲ್ಲದೆ ಮನಸ್ಸನ್ನು ತಟ್ಟುವ, ಸಮಾಜಕ್ಕೆ ಸಂದೇಶಗಳೂ ಸಿನಿಮಾದಲ್ಲಿದೆ.
ಜೀವ ತುಂಬಿದ ಕಲಾವಿದರು
ಧನ್ವೀರ್- ಶ್ರೀಲೀಲಾ ಜೋಡಿ ಪ್ರೇಕ್ಷಕರನ್ನು ಅಕ್ಷರಶಃ ಮೋಡಿ ಮಾಡುತ್ತದೆ. ಕೆಲ ದೃಶ್ಯಗಳಲ್ಲಿ ಅವರಿಬ್ಬರ ನಟನೆ peak ತಲುಪಿ ಕಣ್ಣೀರು ತರಿಸುವಂತಿವೆ. ಗ್ಲಾಮರ್ ಮಾತ್ರವಲ್ಲದೆ ನಟನಾ ಚಾತುರ್ಯವನ್ನು ಹೊರಗೆಡಹುವ ಪಾತ್ರ ಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ ಕನಸು. ಧನ್ವೀರ್- ಶ್ರೀಲೀಲಾ ಇಬ್ಬರಿಗೂ ಆ ಕನಸು ಈ ಸಿನಿಮಾ ಮೂಲಕ ನನಸಾಗಿದೆ. ಆಧುನಿಕ ಕಾಲದ ಪ್ರೇಮಿಗಳ ತಾಕಲಾಟವನ್ನು ಹಾಗೂ ದಾಂಪತ್ಯದ ತೊಳಲಾಟವನ್ನು ನಿರ್ದೇಶಕ ಹರಿಸಂತೋಷ್ ಸೊಗಸಾಗಿ ತೋರ್ಪಡಿಸಿದ್ದಾರೆ.
ಪೋಷಕ ಕಲಾವಿದರಾದ ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಜಹಾಂಗಿರ್, ಶಿವರಾಜ್ ಕೆ.ಆರ್. ಪೇಟೆ ಅಭಿನಯ ಇಷ್ಟವಾಗುತ್ತದೆ. ಪ್ರೇಕ್ಷಕರ ಹೃದಯಗಳಲ್ಲಿ ದೃಶ್ಯಗಳ ಭಾವತೀವ್ರತೆಯನ್ನು ಉದ್ದೀಪಿಸಲು ಅಜನೀಶ್ ಸಂಗೀತ ಸಹಕರಿಸಿದೆ. ಸಿನಿಮೆಟೊಗ್ರಾಫರ್ ಮಹೇಂದ್ರ ಸಿಂಹ ಅವರ ಕ್ಯಾಮೆರಾ ವರ್ಕ್, ಕೆ.ಎಂ.ಪ್ರಕಾಶ್ ಸಂಕಲನ ಪ್ರೇಕ್ಷಕರ ಕಂಗಳು ಪರದೆಯಾಚೆ ಹಾಯದಂತೆ ಹಿಡಿದಿಡುತ್ತದೆ.
ಸಿನಿಮಾ ಸಂದೇಶ
ಒಟ್ನಲ್ಲಿ 'Trial and error' ನಕಲಿ ದಾಂಪತ್ಯದ ಮೂಲಕ ಸಿನಿಮಾದ ನಾಯಕ- ನಾಯಕಿ ಕಂಡುಕೊಳ್ಳುವ ಸತ್ಯಗಳು ಹಲವರಿಗೆ ದಾರಿದೀಪವಾಗಬಲ್ಲವು. ಯುವ ಪ್ರೇಮಿ ಮನಸ್ಸುಗಳಿಗೆ ಈ ಸಿನಿಮಾ ಬದುಕಿನ ವಾಸ್ತವತೆ ಕುರಿತು ಕ್ಲಾರಿಟಿ ಒದಗಿಸಬಲ್ಲುದು. ಈಗಾಗಲೇ ಮದುವೆಯಾದವರಿಗೂ ಈ ಸಿನಿಮಾ ಒಂದು ಫನ್ ರೈಡ್ ನೀಡುತ್ತದೆ. ದಂಪತಿಗಳು ಕನೆಕ್ಟ್ ಮಾಡಿಕೊಳ್ಳಬಹುದಾದ ಹಲವಾರು ಅಂಶಗಳು ಸಿನಿಮಾದಲ್ಲಿದ್ದು ದಾಂಪತ್ಯಕ್ಕೆ ಕೈಗನ್ನಡಿ ಹಿಡಿದಿವೆ.