ಸಿನಿಮಾ ಮುಗಿದರೂ ಕಾಡುವ 'ಎ ಫೀಲ್ ದೆಟ್ ನೆವರ್ ಎಂಡ್ಸ್': 'ಏಕ್ ಲವ್ ಯಾ' ಚಿತ್ರವಿಮರ್ಶೆ
ಜಗತ್ತಿನ ವರ್ಲ್ಡ್ ಫೇಮಸ್ ಲವ್ ಸ್ಟೋರಿಗಳೆಲ್ಲಾ ಹಿಟ್ ಆಗಿರೋದು ಸುಖಾಂತ್ಯದಿಂದ ಅಲ್ಲ, ದುಃಖಾಂತ್ಯದಿಂದ. ಅತ್ತ ಸುಖಾಂತ್ಯವೂ ಅಲ್ಲದ, ದುಃಖಾಂತ್ಯವೆಂದೂ ಹೇಳಲಾಗದ ಕಥೆಯನ್ನು ಹದವಾದ ಅನುಪಾತದಲ್ಲಿ ಮಿಶ್ರಣ ಮಾಡಿ ನಿರ್ದೇಶಕ ಪ್ರೇಮ್ ತಯಾರಿಸಿರುವ ಅದ್ಭುತವಾದ 'ಮಾಕ್ ಟೇಲ್', ರಾಣಾ- ರೀಷ್ಮಾ ನಾಣಯ್ಯ ಜೋಡಿಯ 'ಏಕ್ ಲವ್ ಯಾ'.
Published: 28th February 2022 04:15 PM | Last Updated: 28th February 2022 04:38 PM | A+A A-

ಸಿನಿಮಾ ಸ್ಟಿಲ್
ವಿಮರ್ಶೆ -ಹರ್ಷವರ್ಧನ್ ಸುಳ್ಯ
ಜಗತ್ತಿನ ವರ್ಲ್ಡ್ ಫೇಮಸ್ ಲವ್ ಸ್ಟೋರಿಗಳೆಲ್ಲಾ ಹಿಟ್ ಆಗಿರೋದು ಸುಖಾಂತ್ಯದಿಂದ ಅಲ್ಲ, ದುಃಖಾಂತ್ಯದಿಂದ. ಇತಿಹಾಸ ಪುಟಗಳನ್ನು ತಿರುವಿದರೆ ಈ ಸಂಗತಿ ನಿಚ್ಚಳವಾಗಿ ಕಾಣುತ್ತದೆ. ಸೋತು ಗೆದ್ದ ಪ್ರೇಮಿಗಳಿಬ್ಬರ ಸುಖ- ದುಃಖವನ್ನು ಹದವಾದ ಅನುಪಾತದಲ್ಲಿ ಮಿಶ್ರಣ ಮಾಡಿ ನಿರ್ದೇಶಕ ಪ್ರೇಮ್ ಪ್ರೇಮದ ಮತ್ತೇರುವಂತೆ ತಯಾರಿಸಿರುವ ಅದ್ಭುತವಾದ 'ಮಾಕ್ ಟೇಲ್', ರಾಣಾ- ರೀಷ್ಮಾ ನಾಣಯ್ಯ ಜೋಡಿಯ 'ಏಕ್ ಲವ್ ಯಾ'.
ಮನೋಜ್ಞ ಕ್ಲೈಮ್ಯಾಕ್ಸ್
ಅದುವರೆಗೂ ಯಾರೂ ಕಂಡರಿಯದ ಪ್ರೇಮ ಕಥಾನಕವನ್ನು ಹೊಂದಿದ್ದ ಸಿನಿಮಾ 'ಅಮೃತವರ್ಷಿಣಿ'. ಮೊದಲ ದಿನ ಆ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಮುಗಿದ ನಂತರ ಮಾತಿಲ್ಲದೆ ಗಪ್ ಚುಪ್ ಸೈಲೆಂಟಾಗಿ ಥಿಯೇಟರುಗಳಿಂದ ಹೊರಬಂದಿದ್ದರು. ಪ್ರೇಕ್ಷಕರ ಈ ಒಂದು ರಿಯಾಕ್ಷನ್ ಮಾತ್ರದಿಂದಲೇ ನಿರ್ದೇಶಕ ದಿನೇಶ್ ಬಾಬು ಅವರಿಗೆ ತಮ್ಮ ಸಿನಿಮಾ ಸಕ್ಸಸ್ ಎಂದು ಖಚಿತವಾಗಿ ತಿಳಿದುಹೋಗಿತ್ತು. ಅದೇ ಬಗೆಯ ರಿಸಲ್ಟು 'ಏಕ್ ಲವ್ ಯಾ' ಸಿನಿಮಾಗೂ ದೊರೆತಿದೆ. ಏಕೆಂದರೆ ಸಿನಿಮಾ ಮುಗಿದ ನಂತರವೂ ಕಾಡುವ ಕ್ಲೈಮ್ಯಾಕ್ ಕೊಡುವುದು ನಿರ್ದೇಶಕ ಪ್ರೇಮ್ ಅವರ ಸಿಗ್ನೇಚರ್ ಸ್ಟೈಲು.
'ಏ ಫೀಲ್ ದೆಟ್ ನೆವರ್ ಎಂಡ್ಸ್' ಎನ್ನುವ 'ಜೋಗಿ' ಸಿನಿಮಾದ ಅಡಿಬರಹದಂತೆ ತಮ್ಮ ಸಿನಿಮಾಗಳ ಕ್ಲೈಮ್ಯಾಕ್ಸ್ ಅನ್ನು ಕಾವ್ಯಾತ್ಮಕವಾಗಿ poetic ಆಗಿ ರೂಪಿಸುವುದು ನಿರ್ದೇಶಕ ಪ್ರೇಮ್ ಸಿಗ್ನೇಚರ್ ಸ್ಟೈಲ್. 'ಏಕ್ ಲವ್ ಯಾ' ಸಿನಿಮಾದಲ್ಲೂ ಅದನ್ನು ಕಾಣಬಹುದು. ಪ್ರೇಕ್ಷಕರ ಎದೆಯಲ್ಲಿ ಹೇಳಲಾಗದ ನೋವನ್ನು, ಆ ನೋವಲ್ಲೇ ಒಂದು ಬಗೆಯ ಸುಖವನ್ನು ಉಳಿಸುವಲ್ಲಿ 'ಏಕ್ ಲವ್ ಯಾ' ಯಶಸ್ವಿ.
ಸಿನಿಮಾ ಕಥೆ
ಮೀಸೆ ಚಿಗುರದ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬೀಳುವ ಹುಡುಗ ಹುಡುಗಿ. ಹುಡುಗ ಪ್ರೀತಿಯ ಉತ್ತುಂಗದಲ್ಲಿರುವಾಗ ಯೂಟರ್ನ್ ತೆಗೆದು ಕೈಕೊಡುವ ಹುಡುಗಿ. ಅವಳ ನೆನಪಲ್ಲೇ ದೇವದಾಸ್ ಆಗಿ 'ಬಡವ ರಾಸ್ಕಲ್' ಆಗಿ ನಂತೆ ಕುಡಿತ, ಸ್ಮೋಕಿಂಗ್ ನಲ್ಲಿ ಕಾಲಕಳೆಯುತ್ತಾನೆ. ಈ ಸಮಯದಲ್ಲಿ ಎರಡನೇ ನಾಯಕಿಯ ಪ್ರವೇಶವಾಗುತ್ತದೆ. ನಾಯಕ ಪಾಗಲ್ ಪ್ರೇಮಿಯಂತೆ ಮೊದಲ ನಾಯಕಿ ಮತ್ತೆ ಸಿಕ್ಕರೆ ಕೊಲೆ ಮಾಡುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಾನೆ. ಆದರೆ ಮೊದಲ ಹುಡುಗಿ ಮತ್ತೆ ಸಿಕ್ಕಾಗ ವರ್ಷಗಳ ಕಾಲ ಅದುಮಿಟ್ಟುಕೊಂಡಿದ್ದ ರೋಷ ಸೇಡು ಎಲ್ಲವೂ ಕರ್ಪೂರದಂತೆ ಕರಗುತ್ತದೆ. ಅಂಥಾ ಸ್ಥಿತಿಯಲ್ಲಿ ಅವಳು ಸಿಗುತ್ತಾಳೆ! ಯಾಕೆ? ಏನು? ಹೇಗೆ? ಅವನ ಪ್ರೀತಿ ಯಾರಿಗೆ ದಕ್ಕುತ್ತದೆ? ಹೆಚ್ಚಿನ ಮಾಹಿತಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಬೇಕಾಗಿ ವಿನಂತಿ.
ಫರ್ಸ್ಟ್ ಹಾಫ್ ನಲ್ಲಿ ರಣ್ ಬೀರ್ ಕಪೂರ್ ನನ್ನು ನೆನಪಿಸುವ ನಾಯಕ ರಾಣಾ, ಒಂದು ಆಂಗಲ್ ನಲ್ಲಿ ರವೀನಾ ಟಂಡನ್ ರಂತೆ ಕಂಗೊಳಿಸುವ ನಾಯಕಿ ರೀಷ್ಮಾ. ಇಬ್ಬರೂ ಮೊದಲ ಬಾರಿಗೆ ನಟಿಸಿದ್ದಾರೆ ಎಂದು ನಂಬುವುದು ಕಷ್ಟ. ನಾಯಕನ ಬದುಕಿನಲ್ಲಿ ಬರುವ ಎರಡನೇ ನಾಯಕಿ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಬೋಲ್ಡ್ ಆಗಿ ನಟಿಸಿದ್ದಾರೆ. ಶಶಿಕುಮಾರ್, ಚರಣ್ ರಾಜ್, ಸುಚೇಂದ್ರ ಪ್ರಸಾದ್, 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಖ್ಯಾತಿಯ ಸೂರಜ್, ಮನೋಹರ್ ಮನೋಜ್ಞ ಅಭಿನಯ ನೀಡಿದ್ದಾರೆ.
ದೃಶ್ಯ, ಸಂಗೀತ 'ಪ್ರೇಮ್'ಮಯ
ಕಣ್ಣಲ್ಲಿ ಮುಗ್ಧ ಸ್ಕೂಲ್ ಹುಡುಗನ ಎಕ್ಸೈಟ್ ಮೆಂಟ್ ತೋರುವಾಗಲೂ, ರಗೆಡ್ ಆಕ್ಷನ್ ದೃಶ್ಯಗಳಲ್ಲಿ ಕುರ್ಚಿ ಟೇಬಲ್ಲು ಗ್ಲಾಸುಗಳನ್ನು ಪುಡಿಗಟ್ಟುವಾಗಲೂ ರಾಣಾ ಪ್ರಾಮಿಸಿಂಗ್ ನಾಯಕನಾಗಿ ಭರವಸೆ ಮೂಡಿಸುತ್ತಾರೆ. ನಾಯಕ- ನಾಯಕಿಯರನ್ನು ಮಾತ್ರವಲ್ಲದೆ ಸಿನಿಮಾದ ಪ್ರತಿ ಫ್ರೇಮು ಚೆಂದಗಾಣಿಸಿರುವುದರ ಶ್ರೇಯ ಪ್ರಮುಖವಾಗಿ ಸಿನಿಮೆಟೋಗ್ರಾಫರ್ ಮಹೇನ್ ಸಿಂಹ ಅವರಿಗೆ ಸಲ್ಲಬೇಕು. ಮಹೇನ್ ಸಿಂಹ ಅವರು ಈ ಹಿಂದೆ ಡೈರೆಕ್ಟರ್ ಸ್ಪೆಷಲ್, ಟಗರು, ಇತ್ತೀಚಿನ ಬೈಟು ಲವ್ ಸಿನಿಮಾಗಳಿಗೆ ಕೆಲಸ ಮಾಡಿದವರು.
ಒಂದೇ ಒಂದು ಪುಟ್ಟ ವಯೊಲಿನ್ ಬಿಟ್ ಮೂಲಕ ಇಡೀ ಸಿನಿಮಾದ 'ಫೆಸ್ಟಿವಲ್ ಆಫ್ ಲವ್' ಥೀಮನ್ನು ಕಟ್ಟಿಕೊಟ್ಟಿರುವುದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರೌಢಿಮೆಗೆ ಸಾಕ್ಷಿ. ಸಿನಿಮಾದುದ್ದಕ್ಕೂ ಬ್ಯಾಕ್ ಗ್ರೌಂಡಿನಲ್ಲಿ ಪ್ಲೇ ಆಗುವ ಈ ವಯಲಿನ್ ಬಿಟ್ 'ಯಾರೇ ಯಾರೇ' ಹಾಡಿನಲ್ಲಿ ಪ್ರಮುಖವಾಗಿ ಕೇಳಿಬರುತ್ತದೆ. ಪ್ರೇಮ್ ಸೃಷ್ಟಿಸಿರುವ 'ಏಕ್ ಲವ್ ಯಾ' ಎನ್ನುವ ಸಂಗೀತಮಯ ಪ್ರೇಮಲೋಕದ ಸವಿ ಆಸ್ವಾದಿಸಿದವರಿಗೆ ಮಾತ್ರ ಗೊತ್ತು.