ನಾಯಕನಿಗೆ ಸವಾಲೆಸೆಯಬಲ್ಲ conflict ಮತ್ತು ವಿಲನ್ ಇಲ್ಲದಿರುವುದೇ ಈ ಸಿನಿಮಾದ ಪ್ರಾಬ್ಲಮ್ಮು: ಶ್ಯಾಮ್ ಸಿಂಘ ರಾಯ್ ತೆಲುಗು ಚಿತ್ರವಿಮರ್ಶೆ
ನ್ಯಾಚುರಲ್ ಸ್ಟಾರ್ ನಾನಿಗೆ ಪ್ರಖ್ಯಾತಿಯನ್ನು ತಂದುಕೊಟ್ಟಿದ್ದು ಪುನರ್ಜನ್ಮದ ಕಥೆಯನ್ನು ಹೊಂದಿದ್ದ ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾ. ಇದೀಗ 'ಶ್ಯಾಮ್ ಸಿಂಘ ರಾಯ್' ಮೂಲಕ ನಾನಿ ತಮಗೆ ಚಿತ್ರರಂಗದಲ್ಲಿ ಹೊಸ ಹುಟ್ಟು ನೀಡಿದ್ದ ಪುನರ್ಜನ್ಮ ಕಥಾಪ್ರಕಾರಕ್ಕೆ ಮೊರೆ ಹೋಗಿದ್ದಾರೆ.
Published: 28th January 2022 06:03 PM | Last Updated: 28th January 2022 06:03 PM | A+A A-

ಸಿನಿಮಾ ಪೋಸ್ಟರ್
ವಿಮರ್ಶೆ: ಹರ್ಷವರ್ಧನ್ ಸುಳ್ಯ
ನ್ಯಾಚುರಲ್ ಸ್ಟಾರ್ ನಾನಿಗೆ ಪ್ರಖ್ಯಾತಿಯನ್ನು ತಂದುಕೊಟ್ಟಿದ್ದು ಪುನರ್ಜನ್ಮದ ಕಥೆಯನ್ನು ಹೊಂದಿದ್ದ ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾ. ಇದೀಗ 'ಶ್ಯಾಮ್ ಸಿಂಘ ರಾಯ್' ಮೂಲಕ ನಾನಿ ಚಿತ್ರರಂಗದಲ್ಲಿ ತಮಗೆ ಹೊಸ ಹುಟ್ಟು ನೀಡಿದ್ದ ಪುನರ್ಜನ್ಮ ಕಥಾಪ್ರಕಾರಕ್ಕೆ ಮೊರೆ ಹೋಗಿದ್ದಾರೆ. ಆದರೆ, 'ಈಗ' ಮ್ಯಾಜಿಕ್ ಈ ಸಿನಿಮಾದಲ್ಲಿ ಕಾಣುವುದಿಲ್ಲ.
ಚಿತ್ರರಂಗದಲ್ಲಿ ಸಾಧನೆ ಮಾಡಬೇಕೆಂಬ ಉತ್ಸಾಹದಲ್ಲಿರುವ ನಾಯಕ ವಾಸು ತನ್ನ ಶಾರ್ಟ್ ಫಿಲಂಗಾಗಿ ನಾಯಕಿಯ ಹುಡುಕಾಟದಲ್ಲಿರುತ್ತಾನೆ. ನಾಯಕಿ ಸಿಕ್ಕಿಯೂ ಬಿಡುತ್ತಾಳೆ. ಚಿತ್ರೀಕರಣ ಪ್ರಕ್ರಿಯೆಯಲ್ಲಿ ಇಬ್ಬರಿಗೂ ಪ್ರಣಯವೂ ಏರ್ಪಡುತ್ತದೆ. ಎಲ್ಲಾ ಪುನರ್ಜನ್ಮದ ಕಥೆಗಳಲ್ಲೂ ತೋರಿಸುವಂತೆ ಈ ಸಿನಿಮಾದಲ್ಲೂ ವಾಸುವಿಗೆ ಗತ ಜನ್ಮದ ನೆನಪು ಮಿಂಚು ಹೊಡೆದಂತೆ ಆಗಾಗ್ಗೆ ಆಗುತ್ತಿರುತ್ತದೆ. ಅದರಿಂದಾಗಿಯೇ ಎಡವಟ್ಟೊಂದು ಉಂಟಾಗಿ ನಾಯಕಿ ಕೀರ್ತಿ ಅವನಿಂದ ದೂರವಾಗುತ್ತಾಳೆ.
ಇತ್ತ ನಾಯಕನ ಶಾರ್ಟ್ ಫಿಲಂ ಹಿಟ್ ಆಗಿ ದೊಡ್ಡ ಸಿನಿಮಾ ಆಫರ್ ಗಳು ಸಿಗತೊಡಗುತ್ತವೆ. ಒಂದೆರಡು ಸಿನಿಮಾಗಳು ಹೆಸರನ್ನೂ ತಂದುಕೊಡುತ್ತವೆ. ಇನ್ನೇನು ನಾಯಕನ ಕೆರಿಯರ್ ಆಕಾಶಕ್ಕೆ ಏರಬೇಕು ಎನ್ನುವಷ್ಟರಲ್ಲಿ ನಾಯಕನ ಮೇಲೆ ಕಥೆ ಕದ್ದ ಆರೋಪ ಹೊರಿಸಲಾಗುತ್ತದೆ. ಐದಾರು ದಶಕಗಳ ಹಿಂದೆಯೇ ಕೋಲ್ಕತಾದ ಸಾಮಾಜಿಕ ಹೋರಾಟಗಾರ ಮತ್ತು ಕಾದಂಬರಿಕಾರ ಶ್ಯಾಮ್ ಸಿಂಘ ರಾಯ್ ಬರೆದಿದ್ದ ಕಾದಂಬರಿಗಳ ಯಥಾವತ್ತು ನಕಲಾಗಿರುತ್ತದೆ ವಾಸು ಸಿನಿಮಾಗಳ ಕಥೆ.
ಆಂಧ್ರಪ್ರದೇಶದ ವಾಸುವಿಗೂ, ಕೋಲ್ಕತಾದ ಶ್ಯಾಮ್ ಗೂ ಎತ್ತಣಿಂದೆತ್ತ ಸಂಬಂಧ. ಈ ಸಂಬಂಧದ ಅನ್ವೇಷಣೆಯಲ್ಲಿ ರೋಚಕ ತಿರುವುಗಳು, ಘಟನೆಗಳು ತೆರೆದುಕೊಳ್ಳುತ್ತವೆ. ವಾಸು ನಾಯಕಿಯಾಗಿ ನಟಿಸಿರುವ ಕೃತಿ ಶೆಟ್ಟಿ ಬೋಲ್ಡ್ ಆಗಿಯೂ ಬ್ಯೂಟಿಫುಲ್ ಆಗಿಯೂ ಪ್ರೇಕ್ಷಕರ ಮನಸೂರೆಗೊಳ್ಳುತ್ತಾರೆ. 'ಶ್ಯಾಮ್' ನಾಯಕಿಯಾಗಿ ನಟಿಸಿರುವ ಸಾಯಿ ಪಲ್ಲವಿ ಸಾಕ್ಷಾತ್ ದುರ್ಗಾ ದೇವಿಯಂತೆ ನಟನೆಯಲ್ಲಿಯೂ ಅಭಿನಯದಲ್ಲಿಯೂ ಕಂಗೊಳಿಸುತ್ತಾರೆ. ಅವರಿಲ್ಲಿ ದೇವದಾಸಿ ಪಾತ್ರ ನಿರ್ವಹಿಸಿದ್ದಾರೆ.
ದೇವದಾಸಿ ಪದ್ಧತಿ, ಸ್ವಾತಂತ್ರ್ಯ ಹೋರಾಟ, ಜಾತಿ ಪದ್ಧತಿ ಮುಂತಾದ ಸಾಮಾಜಿಕ ಸಂದೇಶಗಳನ್ನು ಸಿನಿಮಾ ಸಾರುತ್ತದೆ. ಸಿನಿಮಾದ ಮೊದಲಾರ್ಧ ಪ್ರೇಕ್ಷಕನಿಗೆ ಹೆಚ್ಚು ಆಪ್ತವಾಗುತ್ತದೆ. ಸಿನಿಮಾದ ಪ್ರತಿ ಸೀನು ವೈಭವಯುತವಾಗಿದ್ದು ಕಣ್ ಸೆಳೆಯುವಂತಿವೆ. ಆದರೆ, ಇಡಿಯಾಗಿ ನೋಡಿದರೆ ಸಿನಿಮಾದಲ್ಲಿ ಕಥೆ ಕಟ್ಟಿ ಕೊಟ್ಟ ರೀತಿ believable ಎಂದೆನ್ನಿಸುವುದಿಲ್ಲ. ಸಿನಿಮಾದಲ್ಲಿ ನಾಯಕನಿಗೆ ಸವಾಲಾಗಬಲ್ಲ conflict (ಸಮಸ್ಯೆ) ಇಲ್ಲದಿರುವುದೇ ಅದಕ್ಕೆ ಕಾರಣವಿರಬಹುದು. ಸಿನಿಮಾ ನಡುವಿನಲ್ಲಿ conflictಗಳು ಎದುರಾಗುತ್ತವಾದರೂ ಅವು ಬೇಗನೆ ಬಗೆಹರಿದುಬಿಡುತ್ತವೆ. ಪ್ರೇಕ್ಷಕನನ್ನು ಆರಂಭದಿಂದ ಅಂತ್ಯದವರೆಗೂ ಹಿಡಿದು ಕೂರಿಸುವ ಒಂದು ಮುಖ್ಯವಾದ conflict ಸಿನಿಮಾದಲ್ಲಿಲ್ಲ. ಒಂದೊಳ್ಳೆ conflict, ಶಕ್ತಿಶಾಲಿಯಾದ ವಿಲನ್ ಇಲ್ಲದಿರುವುದರಿಂದಲೇ ಕ್ಲೈಮ್ಯಾಕ್ಸ್ ಕೂಡಾ ಸಪ್ಪೆ ಎನ್ನಿಸಿಬಿಡುತ್ತದೆ.
ಭಾವತೀವ್ರತೆ ಇಲ್ಲದಿರುವುದನ್ನೇ ಸಕಾರಾತ್ಮಕವಾಗಿ ಪರಿಗಣಿಸುವುದಾದರೆ ಶ್ಯಾಮ್ ಸಿಂಗ್ ರಾಯ್ ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ ಕೂಲ್ ಆಗಿ ನೋಡಬಹುದಾದ ಸಿನಿಮಾ.