ದೇಶಪ್ರೇಮ, ಸ್ನೇಹ ಮತ್ತು ಮೈ ನವಿರೇಳಿಸುವ ಪೌರುಷಪ್ರಧಾನ ಸರ್ಕಸ್: RRR ಚಿತ್ರ ವಿಮರ್ಶೆ
ರೌದ್ರಂ ರಣಂ ರುಧಿರಂ ಸಿನಿಮಾದಲ್ಲಿ ಕಾಡುಪ್ರಾಣಿಗಳಿವೆ. ಮನುಷ್ಯರನ್ನು ಪ್ರಾಣಿಗಳಂತೆ ಕಾಣುವ ಬ್ರಿಟಿಷರಿದ್ದಾರೆ. Physicsಗೆ ಸವಾಲೆಸೆಯಬಲ್ಲ ರೋಮಾಂಚನಕಾರಿ ಸಾಹಸ ದೃಶ್ಯಗಳಿವೆ. ಜನಸಾಮಾನ್ಯರಿಂದ ಹಾಕಲಾಗದ ಕಷ್ಟಸಾಧ್ಯ 'ನಾಟು ನಾಟು' ಸ್ಟೆಪ್ಪುಗಳಿವೆ. ತೆರೆ ಮೇಲೆ ರಾಜಮೌಳಿ ತಂದಿರುವ ಈ ಸರ್ಕಸ್ಸಿನಲ್ಲಿ ಸ್ಟ್ರಾಂಗ್ ಹೆಣ್ಣು ಪಾತ್ರಧಾರಿಗಳಿಲ್ಲ ಎನ್ನುವ ಕೊರತೆಯೂ ಇದೆ.
Published: 25th March 2022 05:08 PM | Last Updated: 25th March 2022 05:08 PM | A+A A-

ಸಿನಿಮಾ ಪೋಸ್ಟರ್
ಚಿತ್ರವಿಮರ್ಶೆ: ಹರ್ಷವರ್ಧನ್ ಸುಳ್ಯ
ಬಾಹುಬಲಿ ಸಿನಿಮಾ ನಂತರ ಆಲ್ ಇಂಡಿಯಾ ಸೆನ್ಸೇಷನ್ ಆದವರು ನಿರ್ದೇಶಕ ರಾಜಮೌಳಿ. 'RRR' ಸಿನಿಮಾ ಘೋಷಣೆಯಾದಾಗಿನಿಂದಲೂ ರಾಜಮೌಳಿ ಅವರ ಹೊಸ ಸಿನಿಮಾ ಕುರಿತು ಭಾರೀ ನಿರೀಕ್ಷೆ ಹೆಚ್ಚುತ್ತಲೇ ಸಾಗಿತ್ತು. ನಿರ್ದೇಶಕ ರಾಜಮೌಳಿ ಅವರ ಹಿಂದಿನ ಟ್ರ್ಯಾಕ್ ರೆಕಾರ್ಡ್ ಗಮನಿಸಿದರೆ ಅವರ ಒಂದೊಂದು ಸಿನಿಮಾ ಕೂಡಾ ಅವರದೇ ಹಿಂದಿನ ಸಿನಿಮಾಗಿಂತ ಅತ್ಯುತ್ತಮವಾಗಿರುತ್ತದೆ. ಆ ಲೆಕ್ಕದಲ್ಲಿ ಹೇಳುವುದಾದರೆ 'RRR' ಸಿನಿಮಾ ರಾಜಮೌಳಿ ಅವರ ಬಾಹುಬಲಿ ಸಿನಿಮಾವನ್ನು ಮೀರಿಸಿಲ್ಲ ಎಂದೇ ಹೇಳಬೇಕಾಗುತ್ತದೆ.
ಅತ್ಯದ್ಭುತ ದೃಶ್ಯವೈಭವ
ರಾಜಮೌಳಿ ಸಿನಿಮಾ ಅಂದರೆ ಮೊದಲ ವಾರದಲ್ಲಿ ಟಿಕೆಟ್ ದರ ಸಾವಿರಾರು ರೂ. ತನಕವೂ ಏರುತ್ತದೆ. ಆ ಮಟ್ಟಿಗಿನ ಕ್ರೇಜ್ ಅನ್ನು ಅವರ ಸಿನಿಮಾ ಹುಟ್ಟಿಹಾಕುತ್ತದೆ. RRR ಸಿನಿಮಾ ಪೈಸಾ ವಸೂಲ್ ಸಿನಿಮಾನಾ? ಈ ಪ್ರಶ್ನೆಗೆ ಉತ್ತರಿಸುವುದು ಕೊಂಚ ಕಷ್ಟ. ಸಿನಿಮಾದ ಓವರ್ ಆಲ್ ಕಥೆಯನ್ನು ಗಮನಿಸಿದರೆ ಸಿನಿಮಾ ಕಡೆಯ ನಿಮಿಷದವರೆಗೂ ಕುತೂಹಲವನ್ನು ಕಾಪಿಟ್ಟುಕೊಳ್ಳುವ ಸಿನಿಮಾ ಏನೂ ಅಲ್ಲ. ಆದರೆ, ಸಿನಿಮಾದಲ್ಲಿ ಹಲವು ರೋಚಕ ಸನ್ನಿವೇಶಗಳಿವೆ, ಅತ್ಯದ್ಭುತ ದೃಶ್ಯವೈಭವವಿದೆ.
ನಾಯಕರ ಫ್ರೆಂಡ್ ಶಿಪ್ ಕಹಾನಿ
ಬ್ರಿಟಿಷರ ಕಾಲದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಸಿನಿಮಾ ಕಥೆ ಸಾಗುತ್ತದೆ. ರಾಜು(ರಾಮ್ ಚರಣ್) ಬ್ರಿಟಿಷ್ ಸೇನೆಯಲ್ಲಿ ಖಡಕ್ ಅಧಿಕಾರಿ ಎಂದು ಹೆಸರು ಮಾಡಿರುತ್ತಾನೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಖ್ತರ್(ಜೂ.ಎನ್.ಟಿ.ಆರ್) ಎಂಬ ಕುಖ್ಯಾತನೊಬ್ಬನನ್ನು ಹಿಡಿಯುವ ಹೊಣೆ ರಾಜು ಹೆಗಲೇರುತ್ತದೆ. ಈ ಮಧ್ಯೆ ರಾಜು ಮತ್ತು ಅಖ್ತರ್ ಇಬ್ಬರಿಗೂ ದೋಸ್ತಿ ಬೆಳೆಯುತ್ತದೆ. ಇಬ್ಬರಿಗೂ ತಾವು ಹುಡುಕುತ್ತಿರುವುದು ಒಬ್ಬರನ್ನೊಬ್ಬರು ಎಂದು ತಿಳಿಯುವುದೇ ಇಲ್ಲ. ಅಖ್ತರ್ ಬ್ರಿಟಿಷ್ ಅಧಿಕಾರಿಯೊಬ್ಬನ ಸಂಬಂಧಿಯನ್ನು ಪ್ರೀತಿಸುತ್ತಾನೆ. ರಾಜು ಅವರಿಬ್ಬರನ್ನು ಒಂದು ಮಾಡುತ್ತಾನೆ.
ಕಡೆಗೆ ಸತ್ಯ ದರ್ಶನವಾಗುತ್ತದೆ. ಅಖ್ತರ್ ಅಸಲಿಗೆ ಮುಸ್ಲಿಂ ಆಗಿರುವುದಿಲ್ಲ. ವೇಷ ಮರೆಸಿಕೊಂಡು ಮುಸ್ಲಿಂ ಕುಟುಂಬದ ಆಶ್ರಯದಲ್ಲಿರುತ್ತಾನೆ. ಅವನು ಬ್ರಿಟಿಷ್ ಹುಡುಗಿಯ ಸಾಂಗತ್ಯ ಬಯಸಲು ಒಂದು ಪ್ರಮುಖ ಕಾರಣವಿರುತ್ತದೆ. ಇತ್ತ ರಾಜು ಬ್ರಿಟಿಷ್ ಅಧಿಕಾರಿಯಾಗಿ ಕೆಲಸ ಮಾಡಲು ಕೂಡಾ ಒಂದು ಪ್ರಮುಖ ಕಾರಣವಿರುತ್ತದೆ. ಪರಿಸ್ಥಿತಿಯ ಕೈಗೊಂಬೆಯಾಗಿ ಪ್ರಾಣ ಸ್ನೇಹಿತರಾಗಿದ್ದವರು ವೈರಿಗಳಾಗುತ್ತಾರೆ. ಪೂರ್ಣ ಸತ್ಯ ತಿಳಿಯಲು ಕಡೆತನಕ ಕಾಯಬೇಕು.
ಉಳಿದವೆಲ್ಲಾ ಪೋಷಕಪಾತ್ರಗಳು
ಈ ಸಿನಿಮಾಗೆ ನಾಯಕಿಯರಿಲ್ಲ. ಆಲಿಯಾ ಭಟ್ ಇದ್ದಾರಲ್ಲ ಎಂದು ನೀವು ಕೇಳಬಹುದು. ಆದರೆ ಅದು ಪೋಷಕ ಪಾತ್ರದಂತೆ ಹೀಗೆ ಬಂದು ಹಾಗೆ ಹೋಗುತ್ತದೆ.ಸ್ಟ್ರಾಂಗ್ ಹೆಣ್ಣುಮಕ್ಕಳ ಪಾತ್ರಗಳು ರಾಜಮೌಳಿ ಸಿನಿಮಾಗಳ ವೈಶಿಷ್ಟ್ಯತೆ. ಈ ಸಿನಿಮಾದಲ್ಲಿ ಅದೊಂದು ಕೊರತೆ ಎದ್ದು ಕಾಣುತ್ತದೆ. ಇಡೀ ಸಿನಿಮಾವನ್ನು ರಾಮ್ ಚರಣ್ ಮತ್ತು ಜೂ. ಎನ್.ಟಿ.ಆರ್ ಇಬ್ಬರೇ ತಮ್ಮ ಹೆಗಲ ಮೇಲೆ ಮುನ್ನಡೆಸುತ್ತಾರೆ. ಹೀಗಾಗಿ ಅವರಿಬ್ಬರನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಪೋಷಕಪಾತ್ರವರ್ಗಕ್ಕೆ ಸೇರುತ್ತವೆ. ಹಾಲಿವುಡ್ ನಟ ರೇ ಸ್ಟೀವನ್ ಸನ್ ಖಳನಟನಾಗಿ ನಟಿಸಿರುವುದು ವಿಶೇಷ. ಕ್ರೂರ ಬ್ರಿಟಿಷ್ ಅಧಿಕಾರಿಯಾಗಿ ಅವರು ಗಮನ ಸೆಳೆಯುತ್ತಾರೆ.
ರಾಮ್ ಚರಣ್ ಪಾತ್ರ, ರಾಮನನ್ನು ಆವಾಹಿಸಿಕೊಂಡರೆ, ಜೂ.ಎನ್.ಟಿ.ಆರ್ ಪಾತ್ರ ಭೀಮನನ್ನು ಆವಾಹಿಸಿಕೊಂಡಿದೆ. ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ಈ ರೂಪಾಂತರ ಎದ್ದು ಕಾಣುತ್ತದೆ. ಬ್ರಿಟಿಷರು ಭಾರತೀಯರ ಮೇಲೆ ನಡೆಸಿದ ದೌರ್ಜನ್ಯಗಳನ್ನು ಆಧರಿಸಿ ಹಲವಾರು ಸಿನಿಮಾಗಳು ಬಂದಿವೆ. ಭಾರತಿಯರನ್ನು ಬೂಟುಗಾಲಲ್ಲಿ ಒದೆಯುವುದು, ನಂತರ ಭಾರತೀಯರು ಸಿಡಿದೇಳುವುದು, RRR ಸಿನಿಮಾದಲ್ಲೂ ಈ ಬಗೆಯ ದೃಶ್ಯಗಳು ರಿಪೀಟ್ ಆಗಿವೆ.
ನಾಯಕರ ಪರಕಾಯ ಪ್ರವೇಶ
ರೋಮಾಂಚನಕಾರಿ ಆಕ್ಷನ್ ಸೀಕ್ವೆನ್ಸ್ ಗಳು ಈ ಸಿನಿಮಾದ ಹೈಲೈಟ್ಸ್. ಅದರಲ್ಲೂ ಕಾಡುಪ್ರಾಣಿಗಳನ್ನೊಳಗೊಂಡ ಗ್ರಾಫಿಕ್ಸ್ ದೃಶ್ಯಗಳು ಬಹಳ ಚೆನ್ನಾಗಿ ಮೂಡಿಬಂಡಿದ್ದು, ಮಕ್ಕಳಿಂದ ಹಿರಿಯರವರೆಗೂ ಇಷ್ಟವಾಗುತ್ತದೆ. ಎಸ್ಪೆಷಲಿ ಸಿನಿಮಾದ ಕ್ಲೈಮ್ಯಾಕ್ಸ್ ಫೈಟಿಂಗ್ ರಾಜಮೌಳಿ ಅವರ aesthetics, ಸೌಂದರ್ಯಪ್ರಜ್ಞೆಗೆ ಸಾಕ್ಷ್ಯ ನುಡಿಯುತ್ತದೆ. ಬಾಂಬು, ಬೆಂಕಿ, ಮದ್ದುಗುಂಡುಗಳ ಭರಾಟೆ ನಡುವೆಯೂ ನಾಯಕನನ್ನು ದೈವಾಂಶಸಂಭೂತನಂತೆ ರಾಜಮೌಳಿ ತೋರಿಸುತ್ತಾರೆ. ಭಕ್ತಿ ಭಾವಪರವಶರಾಗಿ ಪ್ರೇಕ್ಷಕರು ಕೈಮುಗಿದೇಬಿಡಬೇಕು ಎನ್ನುವಂತೆ. ರಾಮ್ ಚರಣ್ ಮತ್ತು ಜೂ. ಎನ್.ಟಿ.ಆರ್ ಇಬ್ಬರೂ ಪಾತ್ರದೊಳಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೆ. ಚಿತ್ರರಂಗದಲ್ಲಿ ಅವರಿಬ್ಬರಿಗೂ ಹೊಸ ಐಡೆಂಟಿಟಿಯನ್ನು RRR ಸಿನಿಮಾ ನೀಡುವುದರಲ್ಲಿ ಸಂಶಯವಿಲ್ಲ.