ನಜೀಬ ಕಳೆದ ಕರಾಳ 'ಅರೇಬಿಯನ್ ನೈಟ್ಸ್‌'

ಅದೊಂದು ಕಥೆ. ಕಥೆಯಲ್ಲ ಅದು ಜೀವನ. ಅದರಲ್ಲೊಂದು ಘಟನೆ. ಕೇವಲ...

Published: 06th December 2013 02:00 AM  |   Last Updated: 06th December 2013 11:41 AM   |  A+A-


Posted By : Mainashree
ಅದೊಂದು ಕಥೆ. ಕಥೆಯಲ್ಲ ಅದು ಜೀವನ. ಅದರಲ್ಲೊಂದು ಘಟನೆ. ಕೇವಲ ಘಟನೆಯಲ್ಲ ವಾಸ್ತವ. ಅದರಲ್ಲೊಂದು ಪಾತ್ರ, ಕಾಲ್ಪನಿಕವಲ್ಲ ಅವನು ವ್ಯಕ್ತಿ. ಕೇರಳದ ಕರಾವಳಿಯ ಸಮೃದ್ಧ ನೀರಿನಲ್ಲೇ ಹುಟ್ಟಿ ಬೆಳೆದವನು. ನೀರೆಂದರೆ ಸರ್ವಸ್ವ. ಅಂಥವನೊಬ್ಬ ದೂರದ ಅರಬ್ ದೇಶವೊಂದರಲ್ಲಿ ಕೆಲಸ ಅರಸಿ ಹೋಗಿ ಅರಬಾಬ್ ಎಂಬ ಮರಳು ನಾಡಿನ ಬಂಡವಾಳಶಾಹಿಗಳ ನಡುವಿನ ಬರಡು ಜೀವನಕ್ಕೆ ಸೆರೆಯಾಗುತ್ತಾನೆ. ಕರುಣಾಜನಕ ಕಥೆಯಲ್ಲಿನ ಘಟನೆ ಹೀಗಿದೆ...
ಅವತ್ತು ಒಂದು ಭಯಂಕರ ಸಂಗತಿ ನನ್ನಲ್ಲಿ ಸಂಭವಿಸಿತು. ನನಗೆ ಕಕ್ಕಸ್ಸಿಗೆ ಹೋಗಲು ಅವಸರವಾಗತೊಡಗಿತು. ಹಿಂದಿನ ದಿನ ಊರಿಂದ ವಿಮಾನವನ್ನೇರುವುದಕ್ಕೆ ಮುನ್ನ ಯಾವಾಗಲೋ ನಾನು ಮಲ ವಿಸರ್ಜನೆ ಮಾಡಿದ್ದೆ ಅಷ್ಟೆ. ಹಿಂದಿನ ದಿನ ಪೂರ್ತಿ ನಾನು ಏನೂ ತಿನ್ನದೇ ಹಾಗೆಯೇ ಕಳೆದಿದ್ದೆ. ಆದರೆ ಇವತ್ತು ಬೆಳಗ್ಗೆ ಮೂರುನಾಲ್ಕು ಖುಬೂಸ್ ಒಳಕ್ಕೆ ಹಾಕಿದ್ದೇನೆ. ಅದರಿಂದಾಗಿಯೇ ಈಗ ತಳ್ಳಿಕೊಂಡು ಬರುತ್ತಿದೆ. ಆದರೆ ಎಲ್ಲಿ ಹೋಗಿ ನಾನು ಅಗತ್ಯ ಪೂರೈಸಲಿ... ನನಗೆ ಪಾಯಿಖಾನೆಗೆ ನಾಲ್ಕು ಗೋಡೆಗಳ ಮರೆ ಬೇಕೆಂದೇನೂ ಇಲ್ಲ. ಅಂಥ ರೂಢಿಯೂ ಇಲ್ಲ. ಆದರೆ ಊರಿನಲ್ಲಿ ಯಾವುದಾದರೂ ಹೊಳೆ ಬದಿಯಲ್ಲೋ, ಪೊದೆಕಾಡಿನೊಳಗೆ ಹೋಗಿಯೋ ಕೆಲಸ ಮುಗಿಸಬಹುದು. ಯಾವುದೇ ಸಮಸ್ಯೆಯೂ ಇಲ್ಲ. ಹೊಳೆಯ ನೀರಿಗಿಳಿದು ಶುಚಿ ಮಾಡಿಕೊಳ್ಳಲೂ ಬಹುದು. ಆದರೆ ಇಲ್ಲ ನಿರ್ವಾಹವಿಲ್ಲ. ಸುತ್ತಲೂ ಎತ್ತಲೂ ಬಟಾಬಯಲಾಗಿರುವ ವಿಶಾಲ ಪ್ರದೇಶವೇ. ಎಲ್ಲರೂ ಮಾಡುವಂಥ ಕಾರ್ಯವೇ ಆದರೂ ಕೆಲವು ಸಂಗತಿಗಳಿಗೆ ನಾವು ಮನುಷ್ಯರು ಸ್ವಲ್ಪ ಗೋಪ್ಯತೆಯನ್ನು ಬಯಸುತ್ತೇವೆ. ಮನುಷ್ಯನು ತೀರಾ ನಿಸ್ಸಾರವೆಂದು ಪರಿಗಣಿಸುವ ಕೆಲವು ಕಾರ್ಯಗಳು ಕೂಡಾ ಕೆಲವು ಸಂದರ್ಭಗಳಲ್ಲಿ ಕೆಲವರನ್ನು ಹೇಗೆ ಕಂಗೆಡಿಸುತ್ತವೆ ಎಂದೂ ಭಾರೀ ಮಾನಸಿಕ ಸಂಘರ್ಷದತ್ತ ಒಯ್ದುಬಿಡುತ್ತವೆ ಎಂಬುದನ್ನು ಹೇಳಲು ಈ ಘಟನೆಯನ್ನು ಹೇಳಬೇಕಾಯಿತು. ನಿಮಿಷಗಳುರುಳಿದಂತೆ ಹೊಟ್ಟೆಯಲ್ಲಿ ನೋವು ಹೆಚ್ಚುತ್ತಲಿದೆ. ನಾನು ಮೆಲ್ಲಗೆ ಮಸರದ ಆಚೆ ಕಡೆಗೆ ಹೋದೆ. ನನ್ನ ಮತ್ತು ಅರಬಾಬ್‌ನ ನಡುವೆ, ನನ್ನ ಮತ್ತು ಭೀಕರರೂಪಿಯ ನಡುವೆ ಈಗ ಆಡುಗಳ ಮಸರದ ಒಂದು ಚಿಕ್ಕ ಮರೆ ಇದೆ. ಅತ್ಯಗತ್ಯಕ್ಕೆ ಇಷ್ಟು ಸಾಕು. ನಾನು ಕಣ್ಣುಮುಚ್ಚಿ ಕುಳಿತು ಕೆಲಸ ಮುಗಿಸಿದೆ. ಹಾಯೆನಿಸಿತು. ಜಗತ್ತಿನಲ್ಲಿ ಸಿಗುವಂಥದ್ದರಲ್ಲೆಲ್ಲ ಅತ್ಯಂತ ದೊಡ್ಡ ನೆಮ್ಮದಿಯಾಶ್ವಾಸನ.
ಬೆಕ್ಕಿನ ಹಾಗೆ ಮೇಲೆ ಸ್ವಲ್ಪ ಕಲ್ಲು ಮಣ್ಣು ಬಾಚಿ ಹಾಕಿ ಮೇಲೆದ್ದೆ. ಇನ್ನು ಶುಚಿ ಮಾಡಿಕೊಳ್ಳಬೇಕು. ಅದೇನೂ ಮಹಾ ವಿಷಯವಲ್ಲ. ಟ್ಯಾಂಕಿನಲ್ಲಿ ಯಥೇಚ್ಛ ನೀರಿದೆ. ಬಕೆಟ್‌ನಲ್ಲಿ ಹಿಡಿದುಕೊಂಡು ಹೋಗಿ ಹಸಿರು ಹುಲ್ಲಿನ ಅಥವಾ ಒಣ ಹುಲ್ಲಿನ ಕಂತೆಗಳ ಮರೆಯಲ್ಲಿ ಹೋಗಿ ಕುಳಿತು ಕೆಲಸ ಸಾಧಿಸಿಬಿಡಬಹುದು. ನಾನು ಹೋಗಿ ಬಕೆಟ್ ತೆಗೆದುಕೊಂಡು ನೀರು ಹಿಡಿದೆ. ಅನಂತರ ಅದರೊಂದಿಗೆ ಹಸಿರು ಹುಲ್ಲಿನ ಕಂತೆಗಳ ಹಿಂದಕ್ಕೆ ನಡೆದೆ. ತಿಕಕ್ಕೆ ಮೊದಲ ಹನಿ ನೀರು ಬೀಳುವುದಕ್ಕೆ ಮುನ್ನವೇ ನನ್ನ ಬೆನ್ನಿಗೆ ಚಾಟಿಯ ಒಂದೇಟು ಬಿತ್ತು. ಅನಿರೀಕ್ಷಿತವಾದ ಆ ಏಟಿಗೆ ನನ್ನ ಬೆನ್ನು ನುಲಿದುಹೋಯಿತು. ನಾನು ಬೆಚ್ಚಿ ತಿರುಗಿ ನೋಡಿದೆ. ಧಗಧಗಿಸುವ ಕಣ್ಣುಗಳೊಂದಿಗೆ ನಿಂತಿದ್ದಾನೆ ಅರಬಾಬ್ ! ನನಗೇನೂ ಅರ್ಥವಾಗಲಿಲ್ಲ. ಅಷ್ಟರಲ್ಲಿ ನಾನೇನು ತಪ್ಪು ಮಾಡಿದೆ... ಅಪರಾಧ ಏನಾದರೂ ಮಾಡಿದೆನೆ... ಅರ್ಥವಾಗಲಿಲ್ಲ.
ಅರಬಾಬ್ ಹತ್ತಿರ ಬಂದು ನನ್ನ ಬಕೆಟ್ ಮತ್ತು ನೀರನ್ನು ಕಿತ್ತು ತೆಗೆದುಕೊಂಡ ಮತ್ತು ಜೋರಾಗಿ ಬಯ್ಯಲಾರಂಭಿಸಿದ. ಬೆಲ್ಟ್‌ನಿಂದ ಹೊಡೆದ. ಹೇಗಾದರೂ ನಾನು ತಡೆಯಲೆತ್ನಿಸಿದಾಗಲೆಲ್ಲ ಅರಬಾಬ್  ಹೆಚ್ಚಿನ ಕೆಚ್ಚಿನಿಂದ ಹೊಡೆದ. ನಾನು ನೆಲಕ್ಕೆ ಬಿದ್ದುಬಿಟ್ಟೆ. ಅರಬಾಬ್ ನೀರಿನ ಬಕೆಟನ್ನೆತ್ತಿಕೊಂಡು ಗುಡಾರಕ್ಕೆ ಹೋದ. ಅವನ ಬಯ್ಗುಳ, ಏಟುಗಳಿಂದ ನಾನು ಅರ್ಥಮಾಡಿಕೊಂಡದ್ದು ಇಷ್ಟು- ಈ ನೀರು ನಿನಗೆ ಕುಂಡಿ ತೊಳೆಯೋದಕ್ಕೆ ಇರುವುದಲ್ಲ. ಇದು ಆಡುಗಳಿಗೆ ಕೊಡುವುದಕ್ಕಾಗಿ ಇರೋದು. 'ಅದರ ಬೆಲೆ ಎಷ್ಟೆಂದು ನಿನಗೆ ಗೊತ್ತಿಲ್ಲ. ಇನ್ನು ಮುಂದೆ ಇಂಥ ಅಲ್ಲಸಲ್ಲದ ಕೆಲಸಗಳಿಗೆ ನೀರು ಮುಟ್ಟಿದರೆ ನಿನ್ನನ್ನು ನಾನು ಕೊಂದು ಹಾಕುತ್ತೇನೆ...'
ಹೇತ ಮೇಲೆ ತಿಕ ತೊಳೆಯುವುದು ಅಪರಾಧ ಎಂಬ ಮೊದಲ ಪಾಠವನ್ನು ನಾನು ಕಲಿತದ್ದು ಈ ರೀತಿಯಲ್ಲಿ. ಇಂಥ ಗತಿಗೇಡು ನನ್ನ ಜೀವನದಲ್ಲಿ ಇದುವರೆಗೂ ಉಂಟಾಗಿರಲಿಲ್ಲ. ನಾನು ಹೊಳೆಯಲ್ಲೇ ಬದುಕಿ ಬಾಳಿದವನು. ನೀರನ್ನು ಮುಟ್ಟದೇ ಯಾವುದೇ ಕಾರ್ಯವೂ ನನ್ನ ಜೀವನದಲ್ಲಿ ನಡೆದಿರಲಿಲ್ಲ. ಶುಚಿತ್ವವೆನ್ನುವುದು ನನ್ನ ಜೀವನದ ಧ್ಯೇಯವಾಗಿತ್ತು. ನನ್ನ ಹೆಂಡತಿ ಸೈನು ಸಹ ದಿನವೂ ಎರಡು ಸಲ ಸ್ನಾನ ಮಾಡದಿದ್ದರೆ ನಾನು ಮುನಿಯುತ್ತಿದ್ದೆ. ನಾನಾದರೋ ಸದಾಕಾಲ ನೀರಿನಲ್ಲೇ ಇದ್ದವನು. ಆದರೆ ಜೀವನದಲ್ಲಿ ಅತ್ಯಂತ ಕ್ರೂರವಾದದ್ದೇ ಅದರ ತೊಳೆಯುವಿಕೆಯ ನಿಷೇಧ.
----
ಇನ್ನೊಂದು ಘಟನೆ. ಮರಭೂಮಿಯಲ್ಲಿ ಅಂದಿನ ಹಗಲಿಗೆ ಎಂದಿಗಿಂತ ಹೆಚ್ಚು ಬಿಸಿಯಿತ್ತು ಎಂದು ಅನ್ನಿಸಿತು. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ಗಂಟಲು ಒಣಗುತ್ತಿರುವಂತೆನಿಸಿತು. ಕಬ್ಬಿಣದ ಟ್ಯಾಂಕ್‌ನಲ್ಲಿ ಕುದಿದು ಬಾಡಿದ ನೀರು ಕುಡಿವಾಗ ಗಂಟಲು ಇನ್ನಷ್ಟು ಉರಿಯುವಂತೆನಿಸುತ್ತಿತ್ತು. ಅದಷ್ಟೇ ಅಲ್ಲ, ಆ ಸುಟ್ಟ ನೀರನ್ನು ಎಡೆಬಿಡದೇ ಕುಡಿದ ನನ್ನ ಹೊಟ್ಟೆಯೂ ಕೆಟ್ಟು ಹೋಯಿತು. ಅಂದಿನ ಬೆಳಗ್ಗಿನ ಉಪಾಹಾರದ ಬಳಿಕ ಎಷ್ಟು ಸಲ ನಾನು ಪಾಯಿಖಾನೆಗೆ ಹೋದೆನೆಂಬುದು ನನಗೇ ಗೊತ್ತಿಲ್ಲ. ಹಿಂದಿನ ಸಂಕೋಚವೆಲ್ಲ ಇಲ್ಲದಂತಾಗಿ ನಾನು ಬಹಿರಂಗವಾಗಿಯೇ ಸಾರ್ವಜನಿಕ ಜಾಗದಲ್ಲೇ ಬಯಲಕಡೆ ಕುಳಿತೆ. ಎಲ್ಲಿ ಅವಸರವಾಗುತ್ತಿತ್ತೋ ಅಲ್ಲೇ. ನೀರಿನಿಂದ ತೊಳೆದುಕೊಳ್ಳಲು ಯತ್ನಿಸಿ ಅರಬಾಬ್‌ನ ಏಟು ತಿನ್ನುವುದಕ್ಕೆ ಬದಲಾಗಿ ನನ್ನ ಶುಚಿಗೊಳಿಸುವಿಕೆಯನ್ನು ಕಲ್ಲಿನಿಂದ ಮಾಡಿಕೊಳ್ಳುತ್ತಿದ್ದೆ. ಒಂದೊಂದು ದೇಶದಲ್ಲೂ ಅತ್ಯಂತ ಹೇರಳವಾಗಿ ಸಿಗುವ ವಸ್ತುಗಳಿಂದಲೇ ಅದನ್ನು ನಿರ್ವಹಿಸಿಕೊಳ್ಳುವುದು ಒಂದು ಸಹಜ ಕ್ರಮ ಎಂದು ನಾನು ರುಜುವಾತುಪಡಿಸಿದೆ. ಇಂಗ್ಲಿಷ್ ಜನರಿಗೆ ಅತಿಸುಲಭವಾಗಿ ಸಿಗುವುದು ಪೇಪರ್. ನಮಗೆ ಯಥೇಚ್ಛ ಸಿಗುವುದು ನೀರು. ಹೀಗಾಗಿ ನಾವು ನೀರಿನಿಂದ ಶುಚಿಗೊಳಿಸಿಕೊಳ್ಳುತ್ತೇವೆ. ನನಗೀಗ ಸುಲಭದಲ್ಲಿ ಸಿಗುವುದು ಕಲ್ಲು. ಅದನ್ನೇ ಬಳಸುತ್ತಿದ್ದೇನೆ.
ಮಧ್ಯಾಹ್ನವಾದಾಗ ಬಹಳ ಸೆಖೆ. ದೇಹವಿಡೀ ಬೆಂದು ಹೋದಂತೆ. ಬಳಲಿಕೆಯೂ ಹೆಚ್ಚಿತ್ತು. ಭೇದಿಯ ಆಯಾಸವೂ ಸೇರಿದಾಗ ಮತ್ತಷ್ಟು ಕ್ಷೀಣಿಸಿದೆ. ಇಷ್ಟಾದರೂ ನನ್ನ ಕೆಲಸಕ್ಕೆ ಯಾವುದೇ ರೀತಿಯ ರಿಯಾಯ್ತಿ ಸಿಗಲಿಲ್ಲ. ಸಾಯಂಕಾಲವಾಗುವುದರೊಳಗೆ ಗಂಜಿಯ ಪಸೆ ಬಿದ್ದ ಹಾಗೆ ದೇಹಪೂರ್ತಿ ಅಂಟಂಟಾಗಿತ್ತು. ಅದೆಷ್ಟೋ ದಿನಗಳಿಂದ ಒಮ್ಮೆ ಸ್ನಾನ ಮಾಡಲಾಗದೇ ಇರುವುದರಿಂದ ಹೇಳಿ ತಿಳಿಸಲಾಗದಂಥ ಅಸ್ವಸ್ಥತೆ ಮತ್ತು ಮೈಉರಿ. ಆಡುಗಳಿಗೆ ಕುಡಿಯಲು ತೆಗೆದುಕೊಂಡು ಹೋದ ನೀರಿನಿಂದ ಒಮ್ಮೆ ಅರಬಾಬ್‌ಗೆ ಕಾಣದಂತೆ ಸ್ವಲ್ಪ ತೆಗೆದು ಕೈ ಮತ್ತು ಮುಖವನ್ನು ತೊಳೆದುಕೊಂಡು ಬಿಟ್ಟೆ. ಬ್ರಹ್ಮ ಉರಿ ನನ್ನನ್ನು ಒಮ್ಮೆಲೆ ಕಾಡಿಬಿಟ್ಟಿತು. ಕಾದ ಹೆಂಚಿಗೆ ನೀರು ಹಾಕಿದಂತಾಗಿತ್ತು. ಆದರೂ ನೀರನ್ನೇ ಸೋಕದ ದೇಹದ, ಕಂಕುಳಿನ ಮತ್ತು ಗುಹ್ಯಭಾಗಗಳ ಅಸ್ವಾಸ್ಥ್ಯ ಬಲು ದಯನೀಯವೇ ಆಗಿತ್ತು. ನೀರಿಲ್ಲದ ಆ ದಿನಗಳಲ್ಲಿ ನಾನು ಯೋಚಿಸುತ್ತಿದ್ದುದು ಏನು ಗೊತ್ತೇ? ನಿನ್ನೆಗಳ ಕುರಿತು ವ್ಯಾಕುಲಪಡುವುದಾಗಲೀ, ನಾಳೆಗಳ ಕುರಿತು ಚಿಂತಿಸುವುದಾಗಲೀ ಮಾಡಲಿಲ್ಲ. ಇವತ್ತನ್ನು ಹೇಗೆ ಎದುರಿಸುವುದು ಎಂದಷ್ಟೇ ಯೋಚಿಸುತ್ತಿದ್ದೆ. ಅರಬಾಬ್ ಭಾಷೆಯಲ್ಲಿ ಮಾಯಿನ್ ಎಂದರೆ ಅತ್ಯಂತ ದುರ್ಲಭವೂ, ಬಲು ಎಚ್ಚರಿಕೆಯಿಂದ ಬಳಸಬೇಕಾಗಿರುವಂಥದೂ ಅದ ದ್ರವ. ಅದನ್ನು ಬರೀ ನೀರು ಎಂದು ವಿಶೇಷಣದಿಂದ ಕರೆದು 'ಕೇರಳೀಕರಿಸಬೇಡಿ'. (ಮಲೆನಾಡೀಕರಿಸಬೇಡಿ ಎಂದು ನಾವು ತಿದ್ದಿಕೊಳ್ಳಬಹುದು) ನಮಗೆ ನೀರಿನ ಬಗ್ಗೆ ಇರುವಂಥ ನಿಸ್ಸಾರತೆಯ ಭಾವವಲ್ಲ, ಅರಬರಿಗೆ ಮಾಯಿನ್ ಬಗ್ಗೆ ಇರುವುದು.
---------

ಮರಳುಗಾಡಿನ ಬದುಕು, ಅದರ ಭೀಕರತೆ, ಅಲ್ಲಿನ ವಾತಾವರಣ, ಮಳೆಯ ಸಾಧ್ಯತೆ, ಬಿದ್ದರೆ ಒಮ್ಮೊಮ್ಮೆ ಆ ಬಟಾಬಯಲಿನಲ್ಲಿ ದೊಪ್ಪನೆ ಬಿದ್ದು ಅವಾಂತರ ಜೀವಕುಲವನ್ನೇ ನಾಶಮಾಡಿಬಿಡುವ ಭೀಕರ ಮಳೆ, ಅದು ಸೃಷ್ಟಿಸುವ ಭಯಾನಕತೆ, ಬಿಸಿಲಿನ ತೀವ್ರತೆ, ಓಯಸೀಸ್‌ಗಳ ಸಾನ್ನಿಧ್ಯ, ಭಯ ಹುಟ್ಟಿಸುವ ಬಿಸಿಗಾಳಿ, ಕಣ್ಣಮುಂದೆಯೇ ಮರಳುದಿಬ್ಬವನ್ನು ನಿರ್ಮಿಸುವ ಸುಂಟರಗಾಳಿ ಇವೆಲ್ಲಕ್ಕಿಂತ ಕ್ರೌರ್ಯವೆನಿಸುವ ಅಲ್ಲಿನ ಬಂಡವಾಳಶಾಹಿಗಳ ಕೈಯಲ್ಲಿ ನಲುಗುವ ಜೀತದಾಳುಗಳ ಚಿತ್ರಣವನ್ನು ಬಿಡಿಸಿಡುತ್ತದೆ, 'ಆಡು ಜೀವನ'  ಎಂಬ ಅಪೂರ್ವ ಕಾದಂಬರಿ. ಬೆನ್ನಿ ಬೆನ್ಯಾಮಿನ್ ಎಂಬ ಪ್ರಖ್ಯಾತ ಮಲೆಯಾಳಂ ಬರಹಗಾರನ ಕೃತಿಯಿದು. ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿಯನ್ನು ವೈದ್ಯಮಿತ್ರ, ಖ್ಯಾತ ಶಸ್ತ್ರಚಿಕಿತ್ಸಾ ತಜ್ಞ ಡಾ. ಅಶೋಕ್ ಕುಮಾರ್ ಕನ್ನಡೀಕರಿಸಿದ್ದಾರೆ. ನಜೀಬ್ ಎಂಬ ಕೇರಳಿಗ ತರುಣ ತನ್ನ ಗರ್ಭಿಣಿ ಪತ್ನಿ, ತಾಯಿಯನ್ನು ಬಿಟ್ಟು ಉದ್ಯೋಗ ಅರಸಿ ಅರಬ್‌ನ ರಿಯಾದ್ ಏರ್‌ಪೋರ್ಟ್‌ಗೆ ಸಾವಿರ ಕನಸುಗಳ ಮೂಟೆಯೊಂದಿಗೆ ಬಂದಿಳಿಯುತ್ತಾನೆ. ಆ ಕ್ಷಣದಿಂದ ಅರಬಾಬ್ ಎಂದು ಕರೆಸಿಕೊಳ್ಳುವ ಕುರಿ ಸಾಕಣೆ ಫಾರ್ಮ್‌ನ ದಣಿಯ ವಶದಲ್ಲಿ ನಲುಗಲಾರಂಭಿಸುತ್ತಾನೆ. ಮರಳುಗಾಡಿನಲ್ಲಿ ಈ ಒಂಟಿ ಜೀವಿ, ಜಗತ್ತಿನ ಸಂಪರ್ಕವನ್ನೇ ಕಾಣದೇ ಅನುಭವಿಸುವ ಯಾತನೆಯೇ ಕಥೆಯ ಜೀವಾಳ. ಮನುಕುಲದ ಕಾಲ್ಪನಿಕ ನರಕದ ಪ್ರತ್ಯಕ್ಷ ಅನಾವರಣವದು. ಮನುಷ್ಯ ಮನುಷ್ಯನ ಮೇಲೆ ನಡೆಸುವ ಬರ್ಬರ ಕ್ರೂರತೆಯ ನಡುವೆ ನೀರಿನ ಮೌಲ್ಯ, ಮರಳುಗಾಡಿನ ಭೌಗೋಳಿಕ, ಪಾರಿಸಾರಿಕ ಚಿತ್ರಣವನ್ನು ಅತ್ಯಂತ ಮನೋಜ್ಞವಾಗಿ ಕೃತಿ ಕಟ್ಟಿಕೊಡುತ್ತದೆ. ಸಮೃದ್ಧತೆಯಲ್ಲಿ ನೀರಿನ ಬೆಲೆಯನ್ನೇ ಅರಿಯದ ನಾವು ಅದನ್ನು ಮನಸೋ ಇಚ್ಛೆ ದುಂದು ಮಾಡುತ್ತಿದ್ದೇವೆ. ಅದೇ ಸಂದರ್ಭದಲ್ಲಿ ಜಗತ್ತಿನ ಇಂಥ ಅದೆಷ್ಟೋ ಭಾಗಗಳಲ್ಲಿ ನೀರಿಗಾಗಿ ಪರದಾಟವನ್ನು ಕಂಡಾಗ ನಿಜಕ್ಕೂ ನಾಚಿಕೆ, ಪಶ್ಚಾತ್ತಾಪ, ಆತಂಕ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತದೆ.
ಮರಳುಗಾಡೆಂಬುದರ ಸೃಷ್ಟಿ ಹೇಗೆ ಆಗುತ್ತದೆಂಬುದನ್ನೂ ಲೇಖಕರು ಅತ್ಯಂತ ವೈಜ್ಞಾನಿಕವಾಗಿ ಕೃತಿಯಲ್ಲಿ ವಿವರಿಸುತ್ತಾರೆ. ಒಂದು ಕಾಲದಲ್ಲಿ ಅತ್ಯಂತ ದಟ್ಟ ಅರಣ್ಯಗಳಿದ್ದ, ಹಸುರಿನಿಂದಾವೃತ ಪ್ರದೇಶ ಮಾನವನ ರಕ್ಕಸ ದಾಹಕ್ಕೆ ಸಿಲುಕಿ ನಲುಗುತ್ತದೆ. ಅಂತರ್ಜಲ ಬರಿದಾಗುತ್ತದೆ. ಅರಣ್ಯ ನಾಶವಾಗುತ್ತದೆ. ಹಸಿರು ಕರಗುತ್ತದೆ. ಮಳೆ ಕಣ್ಮರೆ ಆಗುತ್ತದೆ. ಆಗಲೇ ಬಿಸಿಗಾಳಿ ಬೀಸಲಾರಂಭಿಸುತ್ತದೆ. ಜೊತೆಜೊತೆಗೇ ಕಲ್ಲುಮಣ್ಣುಗಳ ಕಣಗಳು ಗಾಳಿಯಲ್ಲಿ ಹಾರಿ ಬಂದು ಅಲ್ಲಿ ರಾಶಿ ಬೀಳುತ್ತದೆ. ನೆಲ ಬೀಳು ಬಿಡುಲಾರಂಭಿಸುತ್ತದೆ. ವಾತಾವರಣದ ಉಷ್ಣಾಂಶ ಹೆಚ್ಚುತ್ತಾ ಹೋಗಿ ಆ ಒಂದಿಡೀ ಪ್ರದೆಶದಲ್ಲಿ ಬೃಹತ್ ಮರಳುಗಾಡು ಸೃಷ್ಟಿಯಾಗುತ್ತದೆ. ಮಾನವ ತನ್ನ ಸರ್ವ ಕುತ್ಸಿತ ಪ್ರವೃತ್ತಿಗಳಿಂದಲೂ ಶ್ರಮಿಸಿದರೂ ಈ ಭೂಮಿಯ ಮೇಲೆ ಜೀವದ ತುಡಿತವನ್ನು ತೊಡೆದು ನಿರ್ನಾಮ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯೋಚಿಸುವ ಕಾಲವೊಂದಿತ್ತು. ಆದರೆ ಎಷ್ಟೋ ವರ್ಷಗಳಿಂದ ಅತನ ಕ್ಷುಲ್ಲಕ ದಾಹಕ್ಕೆ ಸಿಲುಕಿ ಬರಡಾಗಿ ಈ ಭೂಮಿ ಸುಟ್ಟುಬಿದ್ದುಕೊಂಡಿದೆ. ಮರಳ ಕಣಗಳನ್ನು ಬಿಟ್ಟರೆ ಒಂದು ಹುಲ್ಲು ಕಡ್ಡಿಯೂ ಕಾಣದ ನೆಲಗಳು ಮಾನವನ ದುರಾಸೆಯ ಪ್ರತಿಫಲವಾಗಿ ನಿಂತಿವೆ ಈ ಭೂಮಿಯಲ್ಲಿ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನನ್ನ ಶುಷ್ಕ ಭೂಮಿ, ಒಣ ಪ್ರದೇಶಗಳು ನಿಜಕ್ಕೂ ಆತಂಕ ಹುಟ್ಟಿಸುತ್ತವೆ. ಈ ಹೊತ್ತಗೆ ಅಂಥ ಚಿಂತನೆಗೆ ನಮ್ಮನ್ನು ಹಚ್ಚುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಓದಿಗೆ ಮುಖ್ಯ ಕಾರಣವೆನ್ನಿಸಬಹುದಾದ ಡಾ. ಅಶೋಕ ಅವರ ಅನುವಾದ ಮೋಡಿ ಮಾಡುತ್ತದೆ. ಹಸಿಹಸಿಯಾಗಿ, ಮೂಲ ವಸ್ತುವಿಗೆ ಚ್ಯುತಿಬಾರದಂತೆ ಕನ್ನಡತನಕ್ಕೆ ಒಗ್ಗುವಂತೆ ಅವರು ಕಾದಂಬರಿಯನ್ನು ಅನುವಾದಿಸಿದ್ದಾರೆ. ಬೆಂಗಳೂರಿನ ಹೇಮಂತ ಸಾಹಿತ್ಯ ಸಂಸ್ಥೆ ಕೃತಿಯನ್ನು ಪ್ರಕಟಿಸಿದೆ. ಕೃತಿಯ ಮುಖ್ಯ ಪಾತ್ರವಾದ ನಜೀಬ್ ತಾನು ಕೇರಳದ ನದಿಯ ತಟದ ಮನೆಯಲ್ಲಿ ಪೋಲು ಮಾಡಿದ ನೀರಿನ ಅಪಸವ್ಯಕ್ಕೆ ಅರಬಸ್ಥಾನದ ಮರುಭೂಮಿಯಲ್ಲಿ ಒಂದು ಹನಿ ನೀರನ್ನೂ ಕಾಣದೇ ಮರುಗುವಾಗ ಪಶ್ಚಾತ್ತಾಪ ಪಡುತ್ತಾನೆ. ಈ ಪಶ್ಚಾತ್ತಾಪ ನಮ್ಮೆಲ್ಲರದ್ದೂ ಆಗಿರಬಹುದು. ಅಂಥ ಸ್ಥಿತಿಗೆ ಮುನ್ನ ಎಚ್ಚೆತ್ತುಕೊಳ್ಳೋಣ, ಗೆಳೆಯರೇ.

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Stay up to date on all the latest ಅಂಕಣಗಳು news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp