social_icon

ವಿಧಿ 370, ಇದು ಚರ್ಚೆಯಾಗಬೇಕಿರುವ ಹೊತ್ತು

ಒಂದು ತಲೆಮಾರು ಮುಗಿಯುವ ಹೊತ್ತಿಗೆ ಹೊಸ ತಲೆಮಾರು ಯೋಚಿಸುವ ರೀತಿಯೇ...

Published: 09th December 2013 02:00 AM  |   Last Updated: 09th December 2013 03:12 AM   |  A+A-


Posted By : Mainashree
Source :

ಜಮ್ಮುವಿನಲ್ಲಿ ನಡೆದ ಇತ್ತೀಚೆಗಿನ ರ್ಯಾಲಿಯಲ್ಲಿ ನರೇಂದ್ರ ಮೋದಿಯವರು ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿಯವರ ನಿಲುವನ್ನು ಪ್ರಶ್ನಿಸಿದ್ದಾರೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜಮ್ಮು ಕಾಶ್ಮೀರದಲ್ಲಿನ ಹೋರಾಟವನ್ನು, ಬಲಿದಾನವನ್ನು (ನಿಗೂಢ ಸಾವು ಎಂದರೆ ತಪ್ಪಾಗಲಾರದು) ನೆನಪಿಸಿಕೊಂಡಿದ್ದಾರೆ. ಭಾರತ ಸಂವಿಧಾನದ ವಿಧಿ 370 (A‌rt‌i‌cle​ 370) ಯನ್ನು ಚರ್ಚಿಸಬೇಕೆಂದು ಕೇಳಿಕೊಂಡಿದ್ದಾರೆ. ಸಹಜವಾಗಿಯೇ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿಸುವ ಕೆಲ ಮಾಧ್ಯಮ ವರ್ಗದವರು ಮೋದಿಯ ಭಾಷಣವನ್ನು ಆಕ್ಷೇಪಿಸಿದ್ದಾರೆ.
ಒಂದು ತಲೆಮಾರು ಮುಗಿಯುವ ಹೊತ್ತಿಗೆ ಹೊಸ ತಲೆಮಾರು ಯೋಚಿಸುವ ರೀತಿಯೇ ಬೇರೆಯದ್ದಾಗಿರುತ್ತದೆ. ಪ್ರಸ್ತಾಪವಾಗಿರುವುದು ಒಂದು ದೇಶದ ವಿಷಯ. 'ಚರ್ಚೆಯೂ ಬೇಡ, ಪ್ರಶ್ನೆಯೂ ಬೇಡ' ಅಂದರೆ ಅದು ಅನುಮಾನಗಳನ್ನಲ್ಲದೇ ಬೇರೇನನ್ನೂ ಸೃಷ್ಟಿಸುವುದಿಲ್ಲ. ಕಾಲಕಾಲಕ್ಕೆ ಈ ಬದಲಾವಣೆಯೂ, ಚರ್ಚೆಯೂ ಉಪಯುಕ್ತ. ಜಮ್ಮುವಿನಲ್ಲಿ ಮೋದಿಯವರು ವಿಧಿ 370 ರ ಬಗ್ಗೆ ಮಾತನಾಡಿದ ಬಳಿಕ, ಕೆಲ ಪತ್ರಿಕೆಗಳಲ್ಲಿ ಜನಸಾಮಾನ್ಯರು ಸಂಪಾದಕರಿಗೆ ಪತ್ರ ಬರೆದಿದ್ದಾರೆ - 'ಈ ವಿಷಯದ ಬಗ್ಗೆ ಮಾತನಾಡುವುದು ಸರಿಯೇ ಇರಬಹುದು. ಆದರೆ ಮೋದಿ ಕಾಶ್ಮೀರಿ ಪಂಡಿತರ ವೋಟ್‌ಬ್ಯಾಂಕ್‌ಗೋಸ್ಕರವೇ ಈ ವಿಷಯ ಪ್ರಸ್ತಾಪಿಸಿದ್ದಾರೆ'.
ಕಾಶ್ಮೀರಿ ಪಂಡಿತರ, ಕಾಶ್ಮೀರಿ ಹಿಂದುಗಳ ಹೃದಯ ವಿದ್ರಾವಕ ಪರಿಸ್ಥಿತಿಯನ್ನು ಅರಿತವರು ಕಡಿಮೆ. ದಂಗೆಗಳನ್ನೆಬ್ಬಿಸಿ ಮುಗ್ಧ ಜನರು ದೇಶಾಂತರ ಹೋಗುವಂತೆ ಮಾಡಿದ, ತಮ್ಮದೇ ನೆಲದಲ್ಲಿ ತಾವು ನಿರಾಶ್ರಿತರ ಶಿಬಿರಗಳಲ್ಲಿ ಜೀವಿಸುತ್ತಿರುವವರ ಬಗ್ಗೆ ಜನಸಾಮಾನ್ಯರು ಓದಿದ್ದು ಕಡಿಮೆ, ಮಾಧ್ಯಮಗಳು ಆ ವಿಷಯದ ಪ್ರಸ್ತಾಪ ಮಾಡಿದ್ದು ಮತ್ತೂ ಕಡಿಮೆ. ಕಾಶ್ಮೀರದಲ್ಲಿ 1947ರಲ್ಲಿ ಶೇಕಡ 20ರಷ್ಟಿದ್ದ ಕಾಶ್ಮೀರಿ ಪಂಡಿತರ ಸಂಖ್ಯೆ 2010 ರಲ್ಲಿ ಸರ್ಕಾರದ ಗಣತಿಯ ಪ್ರಕಾರ 808 ಕುಟುಂಬಗಳು - 3500 ಜನ. ಇನ್ನುಳಿದಂತೆ ಜಮ್ಮುವಿನ ನಿರಾಶ್ರಿತರ ಶಿಬಿರಗಳಲ್ಲಿರುವವರಿಗೆ ಎಷ್ಟು ಜನರ ಹೆಸರುಗಳು ಚುನಾವಣಾ ಪಟ್ಟಿಯಲ್ಲಿದ್ದೀತು? ಈ ಪುಟ್ಟ ಸಂಖ್ಯೆಯ ವೋಟ್‌ಬ್ಯಾಂಕ್ ಯಾವ ಚುನಾವಣೆ ಗೆಲ್ಲಲು ಸಹಕಾರ ಕೊಟ್ಟೀತು? ಇನ್ನು ಜಮ್ಮು ಮತ್ತು ಕಾಶ್ಮೀರ ದೇಶದ ಭಾಗವಾಗಿರುವುದು 370 ನೇ ವಿಧಿಯ ಅನುಸರಣೆಯಿಂದ ಎಂದು ಹೇಳುವವರಿಗೂ ಚರ್ಚೆಯ ಅಗತ್ಯ ಅಷ್ಟೇ ಇದೆ.
ಮಹಾರಾಜಾ ಹರಿ ಸಿಂಗ್ ಜಮ್ಮು ಕಾಶ್ಮೀರವನ್ನು ಭಾರತಕ್ಕೆ ವಿಲೀನಗೊಳಿಸಲು ಒಪ್ಪಿದ ಮೇಲೆ, (Inst‌r‌u​m​ent​ ‌of​ A‌c‌cess‌i‌on​ ನ ಸಹಿಯಾದ ಬಳಿಕ) ಅಲ್ಲಿ ನಡೆದಿರುವ ವಿದ್ಯಮಾನಗಳನ್ನು  ಗಮನಿಸಿದರೆ, ಅಲ್ಲಿ ಕಾಣ ಬರುತ್ತಿರುವುದು ಒಂದು ಮುಸ್ಲಿಮ್ ವರ್ಗದ ಪ್ರತ್ಯೇಕತೆಯ ಕೂಗು. ಈ ಕೂಗಿಗೆ, ಕೆಲ ರಾಜಕೀಯ ನಾಯಕರ ತುಷ್ಟೀಕರಣದ ರೀತಿಗೆ, ಸಮಾಜ ಸುಧಾರಕರ ಓಲೈಕೆಯ ಮಾತುಗಳಿಗೆ ನಿಜವಾಗಿಯೂ ತೊಂದರೆ ಅನುಭವಿಸುತ್ತಿರುವವರು ಅಲ್ಲಿನ ಕೆಲ ಮುಗ್ಧರು.
ಭಾರತ, ಪಾಕಿಸ್ತಾನವೆಂಬ ಎರಡು ದೇಶಗಳು ಹುಟ್ಟುತ್ತವೆ ಎಂದು, ಜಿನ್ನಾ ಪಾಕಿಸ್ತಾನದ ನಾಯಕ, ನೆಹರೂ ಭಾರತದ ನಾಯಕರಾಗುತ್ತಾರೆಂದು ತಿಳಿಯುತ್ತಿದ್ದಂತೆ,  ತನ್ನ ಸ್ಥಾನವನ್ನು- ಅಧಿಕಾರವನ್ನು ಪಡೆಯಬೇಕೆಂದು ಹೊಂಚು ಹಾಕುತ್ತಿದ್ದವನೇ ಶೇಖ್ ಅಬ್ದುಲಾ. ಈತ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಕುಡಿ. ಮುಸ್ಲಿಮ್ ಪ್ರತ್ಯೇಕತಾವಾದ, ಮುಸ್ಲಿಮ್ ರಾಷ್ಟ್ರೀಯತೆ ತದನಂತರದ ಪಾಕಿಸ್ತಾನ ನಿರ್ಮಾಣದ ಚಿಂತನೆ ಇವೆಲ್ಲವೂ ಈ ವಿಶ್ವವಿದ್ಯಾಲಯದ ವಿಷ ಬೀಜಗಳು. ಈ ಶೇಖ್ ಅಬ್ದುಲ್ಲಾ ಅಂದಿನ ಭಾರತದ ವೈಸ್‌ರಾಯ್ ಲಾರ್ಡ್ ಮೌಂಟ್‌ಬ್ಯಾಟನ್, ಪಂಡಿತ್ ನೆಹರೂ ಜೊತೆ ನಿಕಟ ಸಂಪರ್ಕ ಹೊಂದಿದ್ದನು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಸಮಯದಲ್ಲೇ, ನೆಹರೂರ ಅಭಯದಿಂದಾಗಿ 'ಕಾಶ್ಮೀರ ಬಿಟ್ಟು ತೊಲಗಿ' ಎಂಬ ಕರೆಯನ್ನು ಮಹಾರಾಜಾ ಹರಿ ಸಿಂಗ್‌ಗೆ ನೀಡಿದ ಶೇಖ್, ನೆಹರೂಗೆ ಇನ್ನೂ ಆಪ್ತನಾಗುತ್ತಾ ಬಂದ. ಮಹಾರಾಜನು ಶೇಖ್‌ನನ್ನು ಜೈಲಿಗೆ ಅಟ್ಟಿದರೂ ಅವನಿಗಿದ್ದ ನೆಹರೂ ಜತೆಗಿನ ಸ್ನೇಹ ಜೈಲಿನಿಂದ ಹೊರಬರಲು ಸಹಾಯ ಮಾಡಿತು. ಜಮ್ಮು ಕಾಶ್ಮೀರ ಭಾರತದ ಜತೆ ವಿಲೀನವಾದ ಬಳಿಕ, ನೆಹರೂರ ಆಜ್ಞೆಯ ಮೇರೆಗೆ ಮಹಾರಾಜರು ಶೇಖ್‌ಗೆ ಅಧಿಕಾರ ನೀಡಿದರು. ಅಧಿಕಾರ ಕೈಗೆ ಬಂದ ದಿನ ಭಾಷಣಕ್ಕೆ ನಿಂತ ಶೇಖ್ ಮಾತನಾಡಿದ್ದು ಅಲ್ಲಿನ ಜನರನ್ನು ಪ್ರಚೋದಿಸುವಂತೆ. 'ನಾವೀಗ ಕಾಶ್ಮೀರದ ಕಿರೀಟವನ್ನು ಧೂಳಿನಿಂದ ಕಸಿದುಕೊಂಡಿದ್ದೇವೆ. ಭಾರತದ ಜೊತೆಗೋ, ಪಾಕಿಸ್ತಾನದ ಜೊತೆಗೋ ವಿಲೀನವಾಗುವುದು ಸದ್ಯದ ಆಸಕ್ತಿಯ ವಿಷಯವಲ್ಲ. ನಮಗೆ ಮೊದಲು ಬೇಕಿರುವುದು ಸಂಪೂರ್ಣ ಸ್ವಾತಂತ್ರ್ಯ' ಅವನ ಮಾತಿನಿಂದ ಗಮನಿಸಬೇಕಾದ ಅಂಶಗಳು ಇವು:
 1. ಧೂಳು - ಕಾಶ್ಮೀರವನ್ನು ಆಳುತ್ತಿದ್ದ ಡೋಗ್ರಾ ಕುಟುಂಬವನ್ನು ಕುರಿತು.
2. ಆದಾಗಲೇ ಮಹರಾಜರು  ವಿಲೀನ ಪತ್ರಕ್ಕೆ ಸಹಿ ಹಾಕಿಯಾಗಿತ್ತು. ಜಮ್ಮು ಕಾಶ್ಮೀರ ಭಾರತದ ಭಾಗವೂ ಆಗಿತ್ತು.
3. ಜಮ್ಮು ಕಾಶ್ಮೀರವನ್ನು ಸ್ವತಂತ್ರ್ಯ ದೇಶವನ್ನಾಗಿಸುವ ಉದ್ದೇಶವೇ ಸಂಪೂರ್ಣ ಸ್ವಾತಂತ್ರ್ಯದ ಉಲ್ಲೇಖಕ್ಕೆ ಕಾರಣ.
ಪಾಕಿಸ್ತಾನ ನಿರ್ಮಾಣವಾದ ದಿನದಿಂದಲೇ ಪಾಕ್ ಯುವಕರು ಜಮ್ಮು ಕಾಶ್ಮೀರದ ಭಾಗವಾದ ಗಿಲ್ಗಿಟ್, ಬಾಲ್ಟಿಸ್ತಾನ್ ಅನ್ನು ಆಕ್ರಮಿಸಿದ್ದರು. ಅಷ್ಟರಲ್ಲಾಗಲೆ ಕೊಲೆ, ಸುಲಿಗೆ, ಹಿಂದು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಪಾಕಿಸ್ತಾನದ ಈ ಯುವಕರು ಸಾಕಷ್ಟು ಜಾಗವನ್ನು ಆಪೋಷಣ ತೆಗೆದುಕೊಂಡಿದ್ದರು. ತಾವು ನಡೆದು ಹೋದ ದಾರಿಯೆಲ್ಲಾ ತಮ್ಮದೆನ್ನುವಂತೆ ವರ್ತಿಸುತ್ತಿದ್ದರು. ಮಹಾರಾಜರ ಆಳ್ವಿಕೆ ಮುಗಿದು ಶೇಖ್‌ನ ಆಡಳಿತ ಪ್ರಾರಂಭವಾಗುತ್ತಿದ್ದಂತೆ ಮತ್ತಷ್ಟು ಸೊಕ್ಕಿನಿಂದ ಕೂಡಿದ್ದ ಮುಸ್ಲಿಮರು ಮೀರ್ಪುರ್, ಕೋಟ್ಲಿ - ಭೇಂಬೇರ್‌ಗಳಲ್ಲಿ ಹಿಂದುಗಳ ಮಾರಣ ಹೋಮ ನಡೆಸಿದರು. ಅದನ್ನು ತಡೆಯುವ ಸಲುವಾಗಿ ಭಾರತದ ಆಗಿನ ಗೃಹ ಮಂತ್ರಿ ಸರ್ದಾರ್ ಪಟೇಲರು ಆ ಭಾಗಕ್ಕೆ ಸೇನೆ ನಿಯೋಜಿಸಿದರೆ, ಸೇನೆಯನ್ನು ನಿಯಂತ್ರಿಸುತ್ತಿದ್ದದ್ದು ಇದೇ ಶೇಖ್. ಪಾಕಿಸ್ತಾನ್ ಆಕ್ರಮಿತ ಭಾರತವನ್ನು ಬಿಡುಗಡೆಗೊಳಿಸಲು ಗಿಲ್ಗಿಟ್ ಬಾಲ್ಟಿಸ್ತಾನದೆಡೆಗೆ ಮುನ್ನುಗ್ಗಿದ್ದ ಸೇನೆಗೆ ಹಿಂದಾಗಲು ಬಲವಂತದ ಆದೇಶ ನೀಡುತ್ತಿದ್ದುದೂ ಶೇಖ್. ಈ ಬಗ್ಗೆ ನೆಹರೂರಲ್ಲಿ ದೂರಿದ್ದ ಜನರಲ್ ಪರಾಂಜಪೆಗೆ ಸಿಕ್ಕ ಕಿವಿಮಾತೂ - ಶೇಖ್‌ನ ಮಾತು ಕೇಳಬೇಕೆಂದು. ನೆಹರೂರವರು ಅದೇನು ಮುಸ್ಲಿಮ್ ವೋಟ್ ಓಲೈಕೆಯ ಪ್ರಾಥಮಿಕ ಹೆಜ್ಜೆ ಇಡುತ್ತಿದ್ದರೋ ಅಥವಾ ಶೇಖ್‌ನನ್ನು ಅಪಾರವಾಗಿ ನಂಬುತ್ತಿದ್ದ ಬಗೆಯೋ ಅರ್ಥವಾಗದೇ ಉಳಿಯುತ್ತದೆ.
ಶೇಖ್ ಅಬ್ದುಲ್ಲಾ ಹೇಳಿದಂತೆ ನಡೆದುಕೊಳ್ಳುತ್ತಿದ್ದ ನೆಹರೂ ಹಾಗೂ ಕೆಲ ಸಹೋದ್ಯೋಗಿಗಳೂ ಮುಂದೆ ಎಡವಿದ್ದು ಭಾರತದ ಸಂವಿಧಾನದ ವಿಧಿ 370ರ ಅನುಷ್ಠಾನದಲ್ಲಿ. ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಮಂಡಿಸಿದ್ದ ಮೂಲ ಕರಡಿನಲ್ಲಿ 370 ವಿಧಿಯ ಪ್ರಸ್ತಾಪವಿಲ್ಲ ಎನ್ನಲಾಗಿದೆ. ಗೋಪಾಲಸ್ವಾಮಿ ಅಯ್ಯಂಗಾರ್ ಭಾರತದ ಸಂವಿಧಾನ ಮಂಡಳಿಯಲ್ಲಿ ಮಂಡಿಸಲಾದ 370ನೇ ವಿಧಿಯ ಬಗ್ಗೆ ಚರ್ಚೆ ನಡೆದದ್ದೂ ಅಷ್ಟಕ್ಕಷ್ಟೇ. ಈ ಹಿಂದೆ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಈ ವಿಷಯದ ಚರ್ಚೆ ನಡೆದಾಗ ಗೋಪಾಲಸ್ವಾಮಿ ಅಯ್ಯಂಗಾರ್‌ರ ಸಮರ್ಥನೆಗೆ ನಿಂತವರು ಮೌಲಾನಾ ಅಬುಲ್ ಕಲಾಂ ಆಜಾದ್ ಒಬ್ಬರೇ. ಕಾನೂನು ಸಚಿವರಾಗಿದ್ದ ಅಂಬೇಡ್ಕರ್, ಶೇಖ್ ಕುರಿತು ಖಡಾಖಂಡಿತವಾಗಿ ಹೇಳಿದ್ದು 'ನಾನು ಭಾರತದ ಕಾನೂನು ಸಚಿವನಾಗಿ ಭಾರತದ ಸಂವಿಧಾನವನ್ನು ಎತ್ತಿಹಿಡಿಯುವ ಮಹತ್ಕಾರ್ಯದಲ್ಲಿ ತೊಡಗುತ್ತೇನಾಗಲಿ ಭಾರತದ ಅವಮರ್ಯಾದೆ ಮಾಡಲು ಸಿದ್ಧನಿಲ್ಲ. ನಿಮಗೆ ಭಾರತಕ್ಕೆ ಜಮ್ಮು ಕಾಶ್ಮೀರದ ಅಧಿಕಾರ ನೀಡಲು ಮನಸ್ಸಿಲ್ಲ. ಆದರೆ ಕಾಶ್ಮೀರಿಗಳಿಗೆ ಸಮಾನ ಹಕ್ಕುಗಳು ಬೇಕೆನ್ನುತ್ತೀರಿ....' ಶೇಖ್ ಹಿಡಿದ ಪಟ್ಟು ಬಿಡಲೇ ಇಲ್ಲ. ನೆಹರೂ ಅವರು ಶೇಖ್‌ರ ಮನ ಪರಿವರ್ತಿಸುವ ಬದಲು, ಓಲೈಕೆಯ ಹಾದಿ ಹಿಡಿದರು. ಸಂಪುಟದಲ್ಲಿದ್ದ ಉಳಿದ ಕಾಂಗ್ರೆಸ್ ನಾಯಕರು ನೆಹರೂರನ್ನು ಒಲಿಸಲು 370ನೇ ವಿಧಿಯನ್ನು ಅಂತರ್ಗತಗೊಳಿಸಲು ಸಮ್ಮತಿಸಿದರು. ಸರ್ದಾರ್ ಪಟೇಲರಿಗಾಗಲಿ, ಅಂಬೇಡ್ಕರ್ ಅವರಿಗಾಗಲಿ, ಅಂದಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದರಿಗಾಗಲಿ ಇದು ಸರಿ ಎಂದು ಅನ್ನಿಸಿರಲೇ ಇಲ್ಲ. ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ, 370ನೇ ವಿಧಿಯ ಅನ್ವಯ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುವ ಬಗ್ಗೆ ತೀವ್ರ ಪ್ರತಿರೋಧ ಒಡ್ಡಿದ್ದರು. ಕಾಶ್ಮೀರಿ ಪ್ರಧಾನ ಮಂತ್ರಿಯ ಅನುಮತಿಯಿಲ್ಲದೇ ಭಾರತದ ರಾಷ್ಟ್ರಪತಿಯೂ ಕಾಶ್ಮೀರದ ನಾಡಿನಲ್ಲಿ ಕಾಲಿಡುವಂತಿಲ್ಲ ಎಂಬ ಉದ್ಧಟತನದ ನಿರ್ಬಂಧಕ್ಕೆ 'ಈ ದೇಶದಲ್ಲಿ ಎರಡು ಸಂವಿಧಾನ, ಇಬ್ಬರು ಪ್ರಧಾನ ಮಂತ್ರಿ, ಎರಡು ಧ್ವಜಗಳು(ಚಿನ್ಹೆಗಳು) ಇರಕೂಡದು' ಎಂದು ಗುಡುಗಿ, ಕಾಶ್ಮೀರಕ್ಕೆ ಸತ್ಯಾಗ್ರಹದ ಸಲುವಾಗಿ ತೆರಳಿದ್ದರು. ರಾಜೇಂದ್ರ ಪ್ರಸಾದರು 'ಈ ವಿಧಿಯನ್ನು ಅನುಷ್ಠಾನಗೊಳಿಸಿ ಏನು ಸಾಧಿಸುವಿರಿ. ದೇಶದ ರಾಷ್ಟ್ರಪತಿಗಿಂತಲೂ ಜಮ್ಮು ಕಾಶ್ಮೀರದ ವಿಧಾನ ಸಭೆ ಮಿಗಿಲೇ?' ಎಂದು ನೆಹರೂಗೆ ಪತ್ರ ಬರೆದಿದ್ದರಾದರೂ, ನೆಹರೂ ತುಷ್ಟೀಕರಣದ ಪೊರೆಯನ್ನು ಕಳಚಿ ಹೊರ ಬರಲೇ ಇಲ್ಲ.
ದೇಶದ ಸಂವಿಧಾನದಲ್ಲಿ 370 ನೇ ವಿಧಿಯನ್ನು ಸೇರ್ಪಡೆಗೊಳಿಸಿದುದು ಒಂದು ತಾತ್ಕಾಲಿಕ ಕ್ರಮವಾಗಿ, ವಿಶೇಷ ಕಾರಣದಿಂದ ಮತ್ತು ಸಂಕ್ರಮಣ ವಿಧಿ (t‌ran​s‌i​t‌i‌on​al​ ‌cla‌u​se)  ಎಂಬ ನೆಲೆಯಲ್ಲಿ, ಹಾಗೂ ಪರೋಕ್ಷವಾಗಿ ಸೂಚಿಸುವುದು:
- ಜಮ್ಮು ಕಾಶ್ಮೀರ ತನ್ನ ಸ್ವಂತದ ಸಂವಿಧಾನವನ್ನು ರಚಿಸಿಕೊಳ್ಳಬಹುದು
- ಭಾರತದ ಸಂವಿಧಾನ ಮಂಡಲಿಯ ರಾಜ್ಯದ ಮೇಲಿನ ಅಧಿಕಾರ ಇದ್ದುದು - ಭದ್ರತೆ, ವಿದೇಶಾಂಗ ವ್ಯವಹಾರ ಗಳ ವಿಷಯದಲ್ಲಿ ಮಾತ್ರ.
-ಭಾರತದ ಯಾವುದೇ ಸಂವಿಧಾನದ ನಿಬಂಧನೆಯನ್ನು ಜಮ್ಮು ಕಾಶ್ಮೀರ ಸರ್ಕಾರದ ಅನುಮತಿ ಇಲ್ಲದೇ ಹೇರುವಂತಿಲ್ಲ.
ಈಗ ಒಮ್ಮೆ ಯೋಚಿಸಿ ನೋಡೋಣ. ಮೇಲೆ ಹೇಳಿರುವ ಯಾವುದಾದರೂ ಅಂಶ ಜಮ್ಮು ಕಾಶ್ಮೀರವನ್ನು ನಮ್ಮ ದೇಶದ ಅಂಗ ಎಂದು ಬೆಸೆಯುವ ಸಂದೇಶ ನೀಡುತ್ತದೆಯೇ?
ಈ ವಿಧಿಯ ನಿಯಮವನ್ನು ಬಳಸಿಯೇ ಪ್ರತ್ಯೇಕತಾವಾದಿಗಳು ಹೋರಾಟ ಹಾರಾಟ ನಡೆಸುತ್ತಿದ್ದಾರಲ್ಲವೇ? ಈ ಪ್ರತ್ಯೇಕತಾವಾದವೂ ಹೊರಡುತ್ತಿರುವುದು ಕಾಶ್ಮೀರ ಕಣಿವೆಯಿಂದಷ್ಟೆ. ಇದು ಕೇವಲ ಶೇಕಡ 15ರ ಮುಸಲ್ಮಾನರ ಕೂಗು ಎಂಬುದು ನೆನಪಿರಲಿ. 2013ರ ವರೆಗೆ ಭಾರತದ ಸಂವಿಧಾನದ 260 ವಿಧಿಗಳು ಮಾತ್ರ ಜಮ್ಮು ಕಾಶ್ಮೀರದಲ್ಲಿ ಸೇರ್ಪಡಿಸಲಾಗಿದೆ. ನಮ್ಮ ದೇಶದ ಸಂವಿಧಾನದಲ್ಲಿರುವುದು 444 ವಿಧಿಗಳು. ವಿಶ್ವದ ಅತಿ ದೊಡ್ಡ ಸಂವಿಧಾನ ನಮ್ಮದು ಎಂಬ ಹೆಮ್ಮೆ ನಮಗಿದೆ.
ಇಡಿ ದೇಶದಲ್ಲಿ ಸಿಖ್ ಸಮುದಾಯ ಅಲ್ಪಸಂಖ್ಯಾತ. ಆದರೆ ಪಂಜಾಬ್‌ನಲ್ಲಿ ಇವರನ್ನು ಅಲ್ಪಸಂಖ್ಯಾತ ಎಂದು ಕರೆಯಲಾಗುವುದಿಲ್ಲ. ಅಲ್ಪಸಂಖ್ಯಾತರ ಸವಲತ್ತುಗಳು ಸಿಖ್‌ರಿಗೆ ದೊರೆಯುವುದಿಲ್ಲ. ಆದರೆ ಕಾಶ್ಮೀರದಲ್ಲಿನ ಕತೆಯೇ ಬೇರೆ. ಶೇಖಡ 58 ರಷ್ಟು ಮುಸ್ಲಿಮ್ ಜನಸಂಖ್ಯೆ ಇರುವ ಈ ರಾಜ್ಯದಲ್ಲಿ ಮುಸ್ಲಿಮರೇ ಅಲ್ಪಸಂಖ್ಯಾತರು. ಇಲ್ಲಿನ ಅಲ್ಪಸಂಖ್ಯಾತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 1991ರ ವರೆಗೆ ಯಾವ ಮೀಸಲಾತಿಯೂ ಇರಲಿಲ್ಲ. 1991 ರಲ್ಲಿ ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಮಾತ್ರ ಮೀಸಲಾತಿ. ಈ ಮೀಸಲಾತಿ ರಾಜಕಾರಣದಲ್ಲಿ ಇಂದಿನವರೆಗೂ ಬಂದಿಲ್ಲ. ಮುಂದೆ ಬರುವ ಲಕ್ಷಣಗಳು ಕಾಣುತ್ತಿಲ್ಲ.
ಇನ್ನೆಷ್ಟು ದಿನ ಈ ಅನ್ಯಾಯ ಚರ್ಚೆಯೂ ನಡೆಯಲಿ. 370ನೇ ವಿಧಿಯೂ ರದ್ದಾಗಲಿ.

- ಪ್ರವೀಣ ಪಟವರ್ಧನ
ಹವ್ಯಾಸಿ ಲೇಖಕ


Stay up to date on all the latest ಅಂಕಣಗಳು news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp