ಕಲ್ಲರಳಿಸುವ ಕಲೆಯ ಹಿಂದಿದೆ ಬೋವಿ ಸಮುದಾಯದ ಶ್ರಮ

ನಿಸರ್ಗ ಸೌಂದರ್ಯದ ನಡುವೆ ಮಾನವ ನಿರ್ಮಿತ ಕಲಾ ಪ್ರಪಂಚ ನೋಡುಗರ ಗಮನ...

Published: 07th September 2013 02:00 AM  |   Last Updated: 07th September 2013 12:08 PM   |  A+A-


Posted By : Mainashree
ನಿಸರ್ಗ ಸೌಂದರ್ಯದ ನಡುವೆ ಮಾನವ ನಿರ್ಮಿತ ಕಲಾ ಪ್ರಪಂಚ ನೋಡುಗರ ಗಮನ ಸೆಳೆಯುತ್ತದೆ. ಅದರಲ್ಲೂ ಕರ್ನಾಟಕ ಶಿಲ್ಪಕಲೆ ಜಗದ್ವಿಖ್ಯಾತವಾಗಿದೆ. ಈ ಕಲೆಯಲ್ಲಿನ ಒಂದೊಂದು ಕಲ್ಲು ಸಹ ಶತಶತಮಾನಗಳ ಇತಿಹಾಸವನ್ನು ಸಾರಿ ಹೇಳುತ್ತದೆ. ಇಂತಹ ಕಲೆಯ ಹಿಂದೆ ಸಮುದಾಯವೊಂದರ ಶ್ರಮವೂ ಅಡಗಿದೆ.
ಅದುವೇ ವಿಶಿಷ್ಟವಾದ ಬೋವಿ ಸಮುದಾಯ. ವೊಡ್ಡ, ವೊಡ್ಡೆ ಮತ್ತು ಒಡ್ಡರ್ ಎಂಬ ಹೆಸರೂ ಈ ಜನಾಂಗಕ್ಕೆ ಇದೆ. ಮಣ್ಣು ವೊಡ್ಡರು, ಕಲ್ಲು ವೊಡ್ಡರು, ಲಕ್ಕ ವೊಡ್ಡರು ಮತ್ತು ಮೋಜಿ ವೊಡ್ಡರು, ಉಪ್ಪು ವೊಡ್ಡರು ಎಂಬ ವೃತ್ತಿ ಆಧಾರಿತ ಗುಂಪುಗಳು ಇವರಲ್ಲಿ ಇವೆ. ಕಲ್ಲು ಒಡೆಯುವುದು ಇವರ ಪ್ರಮುಖ ಕಸುಬು. ಇದಲ್ಲದೆ ಮಣ್ಣು ತೆಗೆಯುವುದು ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಕಾರ್ಮಿಕರಾಗಿ ಇವರು ದುಡಿಯುತ್ತಾರೆ. ಒಟ್ಟಾರೆ ಬೋವಿ ಸಮುದಾಯದ ಜನ ಶ್ರಮ ಜೀವಿಗಳು.
ಈ ಜನಾಂಗದ ಸಂಶೋಧಕರು ಮತ್ತು ದಕ್ಷಿಣ ಕೊರಿಯಾ ಸರಕಾರದ ಟ್ರೇಡ್ ಪ್ರಮೋಷನ್ ಎಜೆನ್ಸಿ ಮತ್ತು ಇನ್‌ವೆಸ್ಟ್‌ಮೆಂಟ್ ವಿಭಾಗದ ಸಹಾಯಕ ನಿರ್ದೇಶಕ ಟಿ.ಎಸ್.ಚಂದ್ರಶೇಖರ ಅವರು ಸಮುದಾಯದ ವಿಶೇಷಗಳನ್ನು ಹೀಗೆ ವಿವರಿಸುತ್ತಾರೆ.

ಒರಿಸ್ಸಾದಿಂದ ಬಂದವರು
ಬೋವಿ ಸಮುದಾಯದವರು ಶತ ಶತಮಾನಗಳ ಹಿಂದೆ ಒರಿಸ್ಸಾದಿಂದ ವಲಸೆ ಬಂದವರು. ಕರ್ನಾಟಕ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಭಾರತದ ಇತರೇ ರಾಜ್ಯಗಳಲ್ಲಿ ಇವರ ಜನಸಂಖ್ಯೆ 10 ರಿಂದ 15 ಕೋಟಿಯಷ್ಟಿದೆ ಎಂಬ ಅಂದಾಜಿದೆ.
ಈ ಸಮುದಾಯದ ಹಿಂದೆಯೂ ಒಂದು ಪೌರಾಣಿಕ ಕಥೆ ಇದೆ. ಬ್ರಹ್ಮ ಜಗತ್ತನ್ನು ಸೃಷ್ಟಿ ಮಾಡುವಾಗ ಐದು ಜನರ ಸಹಾಯ ಪಡೆದನಂತೆ. ಆ ಐವರಲ್ಲಿ ಒಬ್ಬನು ಪಂಚರಂಗಿಣಿ ವೊಡ್ಡ ಸಮುದಾಯಕ್ಕೆ ಸೇರಿದ್ದನಂತೆ. ಉಳಿದವರಲ್ಲಿ ವಿಶ್ವಕರ್ಮ, ಕುಂಬಾರ, ಬಡಿಗೆ ಜನಾಂಗದವರು ಇದ್ದರಂತೆ. ಕೆಲ ವಿದ್ವಾಂಸರು ಬೋವಿ ಸಮುದಾಯವನ್ನು ಮಹೆಂಜೋದಾರೋ ಸಂಸ್ಕೃತಿಯೊಂದಿಗೆ ಥಳಕು ಹಾಕುತ್ತಾರೆ.  ಅಲ್ಲಿಯ ನಗರ, ಚರಂಡಿ ವ್ಯವಸ್ಥೆಯಲ್ಲಿ ಇವರ ಪಾತ್ರವಿದೆ ಎನ್ನುತ್ತಾರೆ. ವಿಶ್ವಕರ್ಮ ಪುರಾಣದಲ್ಲಿ ವೊಡ್ಡರನ್ನು ಶಿಲ್ಪಿಗಳೆಂದು ಕರೆದಿದ್ದಾರೆ. ತ್ರೇತಾಯುಗದ ಸೇತುಬಂಧದಲ್ಲಿ ಈ ಸಮುದಾಯದವರ ಪಾತ್ರ ಪ್ರಮುಖವಾಗಿದೆ.
ಸೇವಾ ಮನೋಧರ್ಮದ ಇವರು ರಾಮನಿಗೆ ಸಹಾಯ ಮಾಡಿದರು ಎಂಬ ಅಂಶ ರಾಮಾಯಣದಲ್ಲಿದೆ. ನಳ-ನೀಳ (ನಲ-ನೀಲ)ರು ವಿಶೇಷವಾದ ಕಲ್ಲನ್ನು ಕಂಡುಹಿಡಿದು ಸಮುದ್ರದಲ್ಲಿ ಲಂಕೆಯವರೆಗೆ ದಾರಿ ನಿರ್ಮಿಸಿದರೆಂದು ಹೇಳಲಾಗುತ್ತದೆ. ಅಮರಶಿಲ್ಪಿ ಜಕಣಾಚಾರಿ, ಕರ್ಮಯೋಗಿಗಳಾದ ಸಿದ್ಧರಾಮ ಜನಾಂಗದವರಿಗೆ ಪೂಜ್ಯನೀಯರಾಗಿದ್ದಾರೆ.

ಕಲ್ಲರಳಿಸಿ ಹೂವಾಗಿಸುವವರು
ಈ ಜನಾಂಗದ ಕುಲ ಕಸಬು ಕಲ್ಲು ಬಂಡೆಗಳನ್ನು ಒಡೆಯುವದು, ಮಣ್ಣು ಹೊರುವದು, ಕಟ್ಟಡ ಕಟ್ಟುವುದು. ಜೊತೆಗೆ ವಿವಿಧ ಶಿಲ್ಪಕಲೆಗಳನ್ನು ತಯಾರಿಸುವುದಾಗಿದೆ. ಸರ್ವರಿಗೂ ಯೋಗ್ಯ ರೀತಿಯಲ್ಲಿ  ಸೂರನ್ನು ಕಟ್ಟಿಕೊಡುವ ಇವರ ಬದುಕಿಗೆ ಮಾತ್ರ ಪೂರ್ಣಪ್ರಮಾಣದ ಸೂರಿಲ್ಲ. ಹೊಟ್ಟೆ ಪಾಡಿಗಾಗಿ ಊರೂರು ಅಲೆದಾಡಿ ಪ್ರಾಮಾಣಿಕವಾಗಿ ತಮ್ಮ ಕಾಯಕಮಾಡಿ ಬದುಕು ಸಾಗಿಸುವ ಮಂದಿ ಇವರು.
ಈ ಹಿಂದೆ ಅರಮನೆ, ಕೋಟೆಗಳಿಗೆ ಗಚ್ಚನ್ನು ಅರೆಯುವ ಗಾಣದ ಕಲ್ಲು, ದೊಡ್ಡ ಒರಳು(ಎಣ್ಣೆ ತಯಾರಿಸಲು) ರುಬ್ಬು ಗುಂಡುಗಳು, ಮನೆಯಲ್ಲಿ ಬಳಕೆಯಾಗುವ ಮೂತೆ, ಕಾಂಡಕಿ, ಗಲತೆ, ಗದ್ದಿಗೆ, ಪೇಟಿ, ದಿಂಡು ಟಕರೆ, ರಸ್ತೆಗೆ ಬೇಕಾಗುವ ಸೋಲಿಂಗ, ಕಂಕರ, ಕಂಬ, ಮಾಲುಗಂಬ, ಗೂಟದ ಕಲ್ಲುಗಳು ಮತ್ತು ಇತರೆ ವಸ್ತುಗಳನ್ನು ತಮ್ಮ ಜಾಣ್ಮೆತನದಿಂದ ನಿರ್ಮಿಸಿ ಕೆಲಸಗಳಿಗೆ ಉಪಯೋಗಿಸುವುದನ್ನು ನೋಡಿದರೆ ಇವರ ಉದ್ಯೋಗದ ವೈಖರಿಯ ಸ್ಪಷ್ಟ ಚಿತ್ರಣ ಕಂಡು ಬರುತ್ತದೆ.
ಕೆಆರ್‌ಎಸ್, ಕೊಯ್ನಾ, ನಾಗಾರ್ಜುನ ಸಾಗರ ಅಣೆಕಟ್ಟು, ವಿಧಾನ ಸೌಧ, ಉಸ್ಮಾನಿಯಾ, ಕರ್ನಾಟಕದ ವಿಶ್ವವಿದ್ಯಾಲಯ, ಗುಲ್ಬರ್ಗದ ಶ್ರೀ ಶರಣಬಸವೇಶ್ವರ ದೇವಾಲಯ, ಶ್ರವಣಬೆಳಗೊಳದ ಗೊಮ್ಮಟ, ಬೇಲೂರಿನ ಚನ್ನಕೇಶವ ದೇವಾಲಯ, ಹಂಪಿಯ ವಿಜಯನಗರ ಸಾಮ್ರಾಜ್ಯದ ವಿಠಲ ಮಂದಿರದ ಸಪ್ತ ಸ್ವರಗಳು, ಒಂದೇ ಕಲ್ಲಿನ ಗಣಪತಿ, ಮೈಸೂರಿನ ನಂದಿ, ಸೋಮನಾಥ ದೇವಾಲಯ, ಬದಾಮಿ, ಪಟ್ಟದಕಲ್ಲು, ಐಹೊಳೆ, ಅಜಂತಾ, ಎಲ್ಲೋರ, ಕೊನಾರ್ಕ್‌ನ ಸೂರ್ಯ ದೇವಾಲಯದ ನಿರ್ಮಾಣದ ಹಿಂದೆ ಬೋವಿ ಸಮುದಾಯದವರ ಶ್ರಮವಿದೆ.

ಕಲ್ಲುಗಳ ಅಂತರಂಗ ಪತ್ತೆ ಮಾಡುವವರು
ಭೂಮಿಯ ಒಳಗೆ ಮತ್ತು  ಹೊರಗೆ ಇರುವ ಕಲ್ಲುಗಳ ಅಂತರಂಗವನ್ನು ಕಂಡುಹಿಡಿಯುವ ಜಾಣ್ಮೆ ಮತ್ತು ನಿಪುಣತೆ ಇವರಿಗಿದೆ. ಭೂಮಿಯಲ್ಲಿ ಅಡಗಿರುವ ಕಲ್ಲಿಗೆ ಹಾರೆಯಿಂದ (ಗಢಾರಿ) ರಂಧ್ರ ಹಾಕಿ ಆ ಕಲ್ಲು ದೊಡ್ಡದೋ ಅಥವಾ ಅಥವಾ ಸಣ್ಣದೋ ಎಂಬುದನ್ನು ತಿಳಿಯುವ ಕಲಾತ್ಮಕತೆ ಇವರಿಗೆ ಕರಗತವಾಗಿದೆ. ಭೂಮಿಯಿಂದ ತೆಗೆದ ಕಲ್ಲಿನ ಬಾಳಿಕೆಯನ್ನೂ ಹೇಳುವಷ್ಟು ನಿಪುಣರು ಇವರು. ಭಾರಿ ಗಾತ್ರದ ಕಲ್ಲು ಬಂಡೆಗಳನ್ನು ಒಡೆದು ಪುಡಿ ಮಾಡುವ ವಿಧಾನವೂ ಇವರಿಗೆ ಗೊತ್ತಿಗೆ. ಹೀಗಾಗಿ ಬೋವಿ ಸಮುದಾಯದವರಿಗೆ ಕಲ್ಲು, ಮಣ್ಣಿನ ವಿಜ್ಞಾನಿಗಳೆಂಬ ಹೆಗ್ಗಳಿಕೆ ಇದೆ.
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಈ ಸಮುದಾಯ ಸುಧಾರಣೆ ಕಂಡಿಲ್ಲ ಎಂದು ಹೇಳಬಹುದು. ಕೆಲಸ ಮಾಡಿದರೆ ಮಾತ್ರ ಇವರ ಹೊಟ್ಟೆ ತುಂಬುತ್ತದೆ. ತಂತ್ರಜ್ಞಾನ ಮುಂದುವರಿದಂತೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹೊಸ ಹೊಸ ಯಂತ್ರೋಪಕರಣಗಳು ಬಳಕೆಯಾಗುತ್ತಿವೆ. ಇದು ಬೋವಿ ಸಮುದಾಯದವರ ಕಸುಬಿನ ಮೇಲೆ ಪರಿಣಾಮ ಬೀರಿದೆ. ಉದಾಹರಣೆಗೆ ಮಣ್ಣು ತೆಗೆಯುವ ಕೆಲಸದಲ್ಲಿ ಈ ಮೊದಲು ನೂರಾರು ಮಂದಿ ತೊಡಗಿರುತ್ತಿದ್ದರು. ಆದರೆ, ಅಷ್ಟೂ ಮಂದಿಯ ಕೆಲಸವನ್ನು ಈಗ ಒಂದು ಜೆಸಿಬಿ ಮಾಡಿ ಮುಗಿಸುತ್ತಿದೆ. ಹೀಗಾಗಿ ಜೀವನೋಪಾಯಕ್ಕೆ ಅನ್ಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ಅಚಾರ, ವಿಚಾರ, ಸಂಪ್ರದಾಯ

ಈ ಜನಾಂಗದ ಆಚಾರ-ವಿಚಾರ ಮತ್ತು ಸಂಪ್ರದಾಯದ ಬಗ್ಗೆ ಹೇಳುವುದಾದರೆ ಇವರು ಮದುವೆ ಸಂಧರ್ಭದಲ್ಲಿ ಒರಳು ಮತ್ತು ಒನಕೆ ಪೂಜಿಸುತ್ತಾರೆ. ಒನಕೆಗೆ ಬಸರಿ ಗಿಡದ ಎಲೆಗಳನ್ನು ಕಟ್ಟಿ ನವ ದಂಪತಿ ಯಾಗಲಿರುವವರು ಮುತ್ತೈದೆಯರೊಂದಿಗೆ ಐದು 5 ಸುತ್ತು ಹಾಕಿ ಅದರ ಮುಂದೆಯೇ ತಾಳಿ ಕಟ್ಟುವ ಸಂಪ್ರದಾಯವಿದೆ. ಇವರು ಹೆಚ್ಚು ಸ್ತ್ರೀ ದೇವರುಗಳನ್ನು  ಪೂಜಿಸುತ್ತಾರೆ. ವೆಂಕಟರಮಣ, ವೀರನಾಗಮ್ಮ, ವೀರನರಸಿಂಹ, ಎಲ್ಲಮ್ಮ, ಮರಗಮ್ಮ, ಶಟಿಗೆಮ್ಮ, ಅಂಬಾಭವಾನಿ, ತಾಯಮ್ಮ, ಬಾಲನಾಗಮ್ಮ, ಪೋಚಮ್ಮ, ಕನಕರಾಯ, ಬ್ರಹ್ಮಸ್ವಾಮಿ, ಕಾಶಿ ರಾಮೇಶ್ವರ, ಒರಿಸ್ಸಾದ ಜಗನ್ನಾಥ ದೇವರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಜಾತ್ರೆ,ಹಬ್ಬ ಹರಿದಿನಗಳನ್ನು ಸಮಾಜದ ಎಲ್ಲ ಭಾಂಧವರು ಒಟ್ಟಿಗೆ ಸೇರಿ ಆಚರಿಸುತ್ತಾರೆ. ಪ್ರಾಣಿ ಬಲಿ ಪದ್ಧತಿ ಶೇ. 80ರಷ್ಟು  ಕಡಿಮೆಯಾಗಿದೆ. ಇವರು ದೇವರಿಗೆ ಪೂಜೆ ಸಲ್ಲಿಸುವ ಸಂದರ್ಭಧಲ್ಲಿ ಹಸಿರು ಕುಪ್ಪಸ,ಬಳೆ, ಕುಂಕುಮ, ಲೋಹಗಳಿಂದ ಮಾಡಿದ ಕಣ್ಣುಬಟ್ಟು, ಕುದುರೆ, ತೊಟ್ಟಿಲು, ರಥ ಸಲ್ಲಿಸಿ ದೇವರ ಹರಕೆ ತೀರಿಸುತ್ತಾರೆ.

ಮುಖ್ಯ ವಾಹಿನಿಗೆ ಬರಬೇಕು
ಈ ಜನಾಂಗ ಹಲವಾರು ಸಚಿವರು, ಶಾಸಕರು ಮತ್ತು ನಿಗಮ-ಮಂಡಳಿಗಳು ಅಧ್ಯಕ್ಷರನ್ನು ಕಂಡಿದೆ. ಪ್ರಸ್ತುತ ಸರ್ಕಾರದಲ್ಲಿ ಶಿವರಾಜ ತಂಗಡಗಿ ಸಚಿವರಾಗಿದ್ದಾರೆ. ಎಸ್.ರಘು, ಅಖಂಡ ಶ್ರೀನಿವಾಸಮೂರ್ತಿ, ಅರವಿಂದ ಲಿಂಬಾವಳಿ, ಮಾನಪ್ಪ ವಜ್ಜಲ್ ಮತ್ತಿತರರು ಶಾಸಕರಾಗಿದ್ದಾರೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಗೂಳಿಹಟ್ಟಿ ಶೇಖರ್, ಶಿವರಾಜ ತಂಗಡಗಿ, ಅರವಿಂದ ಲಿಂಬಾವಳಿ ಮತ್ತು ವೆಂಕಟರವಣಪ್ಪ ಅವರು ಸಚಿವರಾಗಿದ್ದರು. ಅದರೂ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಬೋವಿ ಸಮುದಾಯದವರನ್ನು ಕಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಬೋವಿ ಸಮುದಾಯ ಇನ್ನೂ ಪ್ರಗತಿ ಕಾಣಬೇಕಿದೆ. ಅದರೂ ಈ ಸಮುದಾಯದಲ್ಲಿ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗಳಿದ್ದಾರೆ.
ಬೋವಿ ಸಮುದಾಯದ ಗುರುಪೀಠ ಚಿತ್ರದುರ್ಗದಲ್ಲಿದೆ. ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಪೀಠಾಧ್ಯಕ್ಷರಾಗಿದ್ದಾರೆ. ಸಮಾಜದ ಏಳಿಗೆಯಲ್ಲಿ ಮುಖಂಡರ ಜೊತೆಗೆ ಅವರೂ ಕೈ ಜೋಡಿಸಿದ್ದಾರೆ ಎನ್ನುತ್ತಾರೆ ಚಂದ್ರಶೇಖರ ಅವರು.

- ಕೆ.ವಿ.ಪ್ರಭಾಕರ
 prabhukolar@yahoo.com

Stay up to date on all the latest ಅಂಕಣಗಳು news with The Kannadaprabha App. Download now
facebook twitter whatsapp