
ಬದುಕು ಸಂಖ್ಯಾಶಾಸ್ತ್ರ; ಸೋಶಿಯಲ್ ಮೀಡಿಯಾ ಚುನಾವಣೆಯ ಅಸ್ತ್ರ!
- ಎಲ್ಲಕ್ಕೂ ಮೊದಲು ಎಷ್ಟು ಜನ ವೋಟ್ ಮಾಡುವ ಅಧಿಕಾರ ಪಡೆದಿದ್ದಾರೆ ಎನ್ನುವುದು ಅತಿ ಮುಖ್ಯ ಮಾಹಿತಿಯಾಗುತ್ತದೆ. ಈ ಬಾರಿ 9೦ ಕೋಟಿ ಜನ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
- ಹತ್ತಿರಹತ್ತಿರ ಎಂಟೂವರೆ ಕೋಟಿ ಹೊಸ ವೋಟರ್ಸ್ ಈ ಬಾರಿಯ ಎಲೆಕ್ಷನ್ ನಲ್ಲಿ ಮತ ಚಲಾಯಿಸಲಿದ್ದಾರೆ. ಅಂದರೆ 2014 ಕ್ಕೆ ಹೋಲಿಸಿದರೆ ಎಂಟೂವರೆ ಕೋಟಿ ಹೆಚ್ಚಿನ ಮತದಾರರು ತಮ್ಮ ಹಕ್ಕನ್ನ ಚಲಾಯಿಸಲಿದ್ದಾರೆ.
- ಒಂದೂವರೆ ಕೋಟಿ ಮತದಾರರು 18 ಅಥವಾ 19 ವಯಸ್ಸಿನವರು. ಪ್ರಥಮ ಬಾರಿಗೆ ತಮ್ಮ ಮತವನ್ನ ಚಲಾಯಿಸಲಿದ್ದಾರೆ.
- ಹತ್ತಿರತ್ತಿರ 72 ಸಾವಿರ ಅನಿವಾಸಿ ಭಾರತೀಯರು ಮತ ಚಲಾಯಿಸಲು ನೊಂದಾವಣಿ ಮಾಡಿಕೊಂಡಿದ್ದಾರೆ.
- ಎಲೆಕ್ಷನ್ ಏಪ್ರಿಲ್ 11 ರಿಂದ ಮೇ 19 ರ ವರೆಗೆ ನೆಡೆಯಲಿದೆ .
- ಮೇ 23 ಮತ ಎಣಿಕೆ ಶುರುವಾಗುತ್ತದೆ ಮತ್ತು ಅದೇ ದಿನ ಫಲಿತಾಂಶ ಕೂಡ ತಿಳಿಸಲಾಗುತ್ತದೆ.
- ಒಟ್ಟು 543 ಪಾರ್ಲಿಮೆಂಟ್ ಸದಸ್ಯ ಸ್ಥಾನಗಳಿವೆ. ಈ ಸ್ಥಾನಗಳನ್ನ ಪಡೆಯುವ ಆಕಾಂಕ್ಷೆ ಹೊಂದಿರುವ 8 ಸಾವಿರಕ್ಕೂ ಹೆಚ್ಚು ಉಮೇದುವಾರರು ಕಣದಲ್ಲಿದ್ದಾರೆ.
- ಹೆಂಗಸರು ಭಾರತದ ಜನಸಂಖ್ಯೆಯ 49 ಪ್ರತಿಶತವಿದ್ದರೂ ಸಂಸತ್ತಿನಲ್ಲಿ ಅವರ ಪ್ರತಿನಿಧಿತ್ವ ಮಾತ್ರ 11 ಪ್ರತಿಶತವಿದೆ.
- ಉತ್ತರ ಪ್ರದೇಶ ಅತಿ ಹೆಚ್ಚು ಸದಸ್ಯರನ್ನ ಸಂಸತ್ತಿಗೆ ಕಳಿಸುತ್ತದೆ. 543 ರಲ್ಲಿ 80 ಸದಸ್ಯರು ಉತ್ತರ ಪ್ರದೇಶದವರು.
- 2014 ರಲ್ಲಿ ಇಂಟರ್ನೆಟ್ ಬಳಸುವರ ಸಂಖ್ಯೆ 25 ಕೋಟಿ. ಇಂದಿಗೆ ಇಂಟರ್ನೆಟ್ ಬಳಸುವರ ಸಂಖ್ಯೆ 62 ಕೋಟಿ.
- ವಾಟ್ಸಪ್ಪ್ ಬಳಕೆದಾರರ ಸಂಖ್ಯೆ 20 ಕೋಟಿಗೂ ಹೆಚ್ಚಿದೆ .
- ನರೇಂದ್ರ ಮೋದಿಯವರು ಟ್ವಿಟ್ಟರ್ ನಲ್ಲಿ 4 ಕೋಟಿ 60 ಲಕ್ಷ ಜನ ಹಿಂಬಾಲಕರನ್ನ ಪಡೆದಿದ್ದಾರೆ. ರಾಹುಲ್ ಗಾಂಧಿ 90 ಲಕ್ಷ ಜನ ಹಿಂಬಾಲಕರನ್ನ ಹೊಂದಿದ್ದಾರೆ.
- ಕಾಂಗ್ರೆಸ್ ಪಕ್ಷಕ್ಕೆ ಅಪರೋಕ್ಷವಾಗಿ ಸಂಬಂದಿಸಿದ 687 ಫೇಸ್ಬುಕ್ ಪುಟಗಳನ್ನ ಅಳಿಸಿಹಾಕಿದೆ. ಹಾಗೆಯೇ ಭಾರತೀಯ ಜನತಾ ಪಾರ್ಟಿಯ 15 ಫೇಸ್ಬುಕ್ ಪೇಜ್ ಗಳನ್ನ ಕೂಡ ನಿರ್ಬಂಧಿಸಲಾಗಿದೆ.
- ಮೊಬೈಲ್ ಡೇಟಾ ಶುಲ್ಕ ಭಾರತದಲ್ಲಿ ಅತಿ ಕಡಿಮೆ. ತನ್ನ ಪ್ರಥಮ ದಿನಗಳ ಶುಲ್ಕಕ್ಕೆ ಹೋಲಿಸಿದರೆ 2 ಸಾವಿರ ಪ್ರತಿಶತ ಕುಸಿತ ಕಂಡಿದೆ. ಅಲ್ಲದೆ ಜಗತ್ತಿನ ಅತಿ ಅಗ್ಗದಲ್ಲಿ ಈ ಸೇವೆಯನ್ನ ನೀಡುವ ದೇಶ ಎನಿಸಿಕೊಂಡಿದೆ.
- ಇಂಟರ್ನೆಟ್ ನ ಭವಿಷ್ಯ ಪೂರ್ತಿ ಭಾರತೀಯರ ಕೈಲಿದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ.
- ಪ್ರಮುಖ ರಾಜಕೀಯ ಪಕ್ಷಗಳು ಫೇಸ್ಬುಕ್ ನಲ್ಲಿ ತಮ್ಮ ಜಾಹೀರಾತಿಗಾಗಿ ಕೋಟ್ಯಂತರ ಹಣವನ್ನ ವ್ಯಯಿಸಿವೆ .
- 2014 ರಿಂದ ಇತ್ತೀಚಿಗೆ ಹೊಸದಾಗಿ ಇಂಟರ್ನೆಟ್ ಬಳಸುವರ ಸಂಖ್ಯೆ 20 ಕೋಟಿಗೂ ಹೆಚ್ಚಿದೆ. ಈ ಹೊಸ ಬಳಕೆದಾರರನ್ನ ತಮಗೆ ಬೇಕಾದ ಮಾಹಿತಿ ಕೊಟ್ಟು ದಾರಿ ತಪ್ಪಿಸುವುದು ಬಹಳ ಸುಲಭ.
- ಹೀಗೆ ಇಂಟರ್ನೆಟ್ ಬಳಸುವರಲ್ಲಿ 97 ಪ್ರತಿಶತ ಮೊಬೈಲ್ ಮೂಲಕ ಇದನ್ನ ಬಳಸುತ್ತಾರೆ.
ಮೇಲೆ ಹೇಳಿದ ಅಂಶಗಳು ಅತ್ಯಂತ ಮೂಲಭೂತ ಅಂಶಗಳು. ಇದರೊಂದಿಗೆ ಪ್ರತಿ ಹಂತದಲ್ಲೂ ಅವುಗಳನ್ನ ಮತ್ತಷ್ಟು ಆಳವಾಗಿ ವಿಭಾಗಿಸಲಾಗುತ್ತದೆ. ಉದಾಹರಣೆಗೆ ಒಂದೂವರೆ ಕೋಟಿ 18/19 ವರ್ಷದ ಹೊಸ ಮತದಾರರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೆಷ್ಟು? ಗಂಡು ಮಕ್ಕಳ ಸಂಖ್ಯೆಯೆಷ್ಟು? ಇವರಲ್ಲಿ ಎಷ್ಟು ಜನ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ? ಎಷ್ಟು ಜನ ಹಳ್ಳಿಗಳಲ್ಲಿ? ಅವರ ಎಕನಾಮಿಕ್ ಬ್ಯಾಕ್ ಗ್ರೌಂಡ್, ಅವರ ಕಲ್ಚರಲ್ ಬ್ಯಾಕ್ಗ್ರೌಂಡ್.., ಹೀಗೆ ಪ್ರತಿಯೊಂದನ್ನು ಅತ್ಯಂತ ಸೂಕ್ಷ್ಮವಾಗಿ ವಿಭಜಿಸಿ ವಿಶ್ಲೇಷಣೆ ಮಾಡಲಾಗುತ್ತದೆ. ಹೊಸ ತಲೆಮಾರು ಟ್ವಿಟ್ಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. 62 ಕೋಟಿ ಜನ ಇಂಟರ್ನೆಟ್ ಬಳಕೆದಾರರಿದ್ದಾರೆ. ಇವರೆಲ್ಲಾ ನಿತ್ಯವೂ ತಮಗೆ ಅರಿವಿಲ್ಲದೆ ತಮ್ಮ ಬದುಕುವ ರೀತಿಯನ್ನ, ತಮ್ಮ ಇಷ್ಟ, ಅನಿಷ್ಟಗಳನ್ನ, ಬೇಕು ಬೇಡಗಳನ್ನ ಎಲ್ಲವನ್ನೂ ಬಿಟ್ಟು ಹೋಗುತ್ತಿದ್ದಾರೆ. ಇದನ್ನ ಡಿಜಿಟಲ್ ಫುಟ್ ಪ್ರಿಂಟ್ ಎನ್ನಲಾಗುತ್ತದೆ. ನಮ್ಮ ಮಾಹಿತಿಗಳನ್ನ ಕಲೆ ಹಾಕಿ ಅವುಗಳನ್ನ ನಮ್ಮ ಪ್ರಚೋದನೆಗೆ ಬಳಸಲಾಗುತ್ತದೆ. ಭಾರತದಲ್ಲಿ ಇಂದು 96 ಕೋಟಿ ಮೊಬೈಲ್ ಫೋನ್ ಗಳಿವೆ ಆದರೆ ಅವುಗಳಲ್ಲಿ ಸ್ಮಾರ್ಟ್ ಫೋನ್ ಗಳ ಸಂಖ್ಯೆ 34 ಕೋಟಿ. 2022 ರ ವೇಳೆಗೆ ಇದು 80 ಕೋಟಿ ತಲುಪಲಿದೆ ಎನ್ನುತ್ತದೆ ಅಂಕಿ-ಅಂಶ. ಅಂದರೆ ಗಮನಿಸಿ ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾಗಳು ಅತ್ಯಂತ ಪ್ರಬಲ ಅಸ್ತ್ರಗಳಾಗುತ್ತವೆ. ಅದು ಚುನಾವಣೆ ಇರಬಹದು ಅಥವಾ ಮತ್ಯಾವುದೇ ಪ್ರಮುಖ ಘಟನೆಯಾಗಿರಬಹದು. ಸೋಶಿಯಲ್ ಮೀಡಿಯಾ ಅಲ್ಲಿನ ಫಲಿತಾಂಶದ ಮೇಲೆ ಬೃಹತ್ ಪರಿಣಾಮ ಬೀರುತ್ತದೆ.
ಹಾಗೆ ನೋಡಲು ಹೋದರೆ 2014 ರಲ್ಲಿ ನರೇಂದ್ರ ಮೋದಿಯವರ ಗೆಲುವಿಗೆ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿಗೆ, ಬ್ರೆಕ್ಸಿಟ್ ಎನ್ನುವ ಹೊಸ ನಾಟಕ ಶುರುವಿಗೆ ಎಲ್ಲಕ್ಕೂ ಸೋಶಿಯಲ್ ಮೀಡಿಯಾದ ಕಾಣಿಕೆ ಬಳಷ್ಟಿದೆ. 2019೧೯ ರ ಭಾರತದ ಈ ಮಹಾನ್ ಚುನಾವಣೆಯಲ್ಲಿ ಕೂಡ ಸೋಶಿಯಲ್ ಮೀಡಿಯಾಗಳ ಅಬ್ಬರ ಬಹಳಷ್ಟಿದೆ. ಈ ಅಸ್ತ್ರವನ್ನ ಸರಿಯಾಗಿ ಬಳಸಲು ಬರುವರು ಮಾತ್ರ ಜಯಶೀಲರಾಗಿ ಹೊರಹೊಮ್ಮುತ್ತಾರೆ. ಭಾರತದ ಆಡಳಿತ ಪಕ್ಷಕ್ಕೆ ಈ ಅಸ್ತ್ರವನ್ನ ಬಳಸಿಕೊಳ್ಳುವ ಕಲೆ ಸಿದ್ದಿಸಿದೆ. ಪ್ರಧಾನ ವಿರೋಧ ಪಕ್ಷ ಈ ವಿಷಯದಲ್ಲಿ ಸ್ವಲ್ಪ ಹಿಂದೆ ಆದರೆ 2014 ಕ್ಕೆ ಹೋಲಿಸಿ ನೋಡಿದರೆ ಅಂತರ ಕಡಿಮೆಯಾಗಿದೆ ಅನ್ನಬಹದು.