ಚುನಾವಣೆ ಫಲಿತಾಂಶ ಮೋದಿಯವರ ಪರವಾಗಿದ್ದರೆ ಮುಂದೈದು ವರ್ಷ ಹೇಗಿರಬಹದು?

ಇದು ಚುನಾವಣೆಯ ಸಮಯ. ಯಾವುದೇ ದೊಡ್ಡ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ಹಣಕಾಸಿಗೆ ಸಂಬಂಧಿಸಿದ ವಿಷಯದಲ್ಲಿ ಈ ಮಾತು ಇನ್ನು ಹೆಚ್ಚು ಒಪ್ಪುತ್ತದೆ. ಎಲ್ಲರ ಕಣ್ಣು ಮೇ 23 ರ ಮೇಲೆ
ಮೋದಿ
ಮೋದಿ
ಇದು ಚುನಾವಣೆಯ ಸಮಯ. ಯಾವುದೇ ದೊಡ್ಡ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ಹಣಕಾಸಿಗೆ ಸಂಬಂಧಿಸಿದ  ವಿಷಯದಲ್ಲಿ ಈ ಮಾತು ಇನ್ನು ಹೆಚ್ಚು ಒಪ್ಪುತ್ತದೆ. ಎಲ್ಲರ ಕಣ್ಣು ಮೇ 23 ರ ಮೇಲೆ ನಿಂತಿದೆ.
ಚುನಾವಣೆಯ ಫಲಿತಾಂಶ ದೇಶದ ಮುಂದಿನ ಐದು ವರ್ಷದ ದಿಕ್ಸೂಚಿಯಾಗಲಿದೆ. 2014ರಲ್ಲಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಕೈಗೆ ತೆಗೆದುಕೊಂಡ ನಂತರ ಕಾಲಿಗೆ ಚಕ್ರ ಸುತ್ತಿಕೊಂಡವರಂತೆ ಜಗತ್ತನ್ನ ಸುತ್ತ ತೊಡಗಿದರು. ಅದರ ಫಲಿತಾಂಶ 2014 ರಲ್ಲಿ 25 ಬಿಲಿಯನ್ ಅಮೆರಿಕನ್ ಡಾಲರ್ ಇದ್ದ ವಿದೇಶಿ ಹೂಡಿಕೆ ಇಂದಿಗೆ 193 ಬಿಲಿಯನ್ ಮುಟ್ಟಿದೆ. ಕಳೆದ ಒಂದು ತಿಂಗಳಿಂದ ವಿದೇಶಿ ಹೂಡಿಕೆಯಲ್ಲಿ ಇಳಿಕೆಯಾಗಿದೆ. ಅದಕ್ಕೆ ಕಾರಣ ಚುನಾವಣೆ. ಹೂಡಿಕೆದಾರರು ಕಾ ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ವಾಲ್ಮಾರ್ಟ್ ಕೋಟ್ಯಂತರ ಹಣವನ್ನ ಭಾರತದಲ್ಲಿ ಹೂಡಿಕೆ ಮಾಡಿದೆ. ತನ್ನ ಭಾರತೀಯ ಎದುರಾಳಿ ಫ್ಲಿಪ್ಕಾರ್ಟ್ ಅನ್ನು 16 ಬಿಲಿಯನ್ ಡಾಲರ್ ತೆತ್ತು ಕೊಂಡದ್ದು ಗೊತ್ತಿರುವ ವಿಷಯ. ಇದರ ಜೊತೆಗೆ ಅಮೆಜಾನ್, ಇಕೆಯ, ಮುಂತಾದ ಕಂಪನಿಗಳು ಭಾರತದಲ್ಲಿ ಹೂಡಿಕೆಯನ್ನ ಮಾಡಿದವು. ನರೇಂದ್ರ ಮೋದಿಯವರ ಮೊದಲ ಎರಡು ವರ್ಷದ ವಿದೇಶಿ ಹೂಡಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ಅಂದರೆ 2019ರಲ್ಲಿ ಇದು 30 ಪ್ರತಿಶತ ಇಳಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚಿಗೆ ಈ -ಕಾಮರ್ಸ್ ವಲಯಕ್ಕೆ ಕೇಂದ್ರ ಸರಕಾರ ಹಾಕಿರುವ ಒಂದೆರಡು ನಿಬಂಧನೆಗಳು ಮತ್ತು ಚುನಾವಣೆ. ಮೇ 23 ರಂದು ಚುನಾವಣೆಯ ಫಲಿತಾಂಶಕ್ಕೆ ಕೇವಲ ಭಾರತೀಯರು ಮಾತ್ರ ಕಾದು ಕುಳಿತಿಲ್ಲ , ಜಗತ್ತು ಇಂದು ಭಾರತದತ್ತ ನೋಡುತ್ತಿದೆ. 
ಚುನಾವಣೆಯ ಫಲಿತಾಂಶ ಮೋದಿಯವರ ಪರವಾಗಿದ್ದರೆ ಯಾವ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಯಾಗಬಹದು ಎನ್ನುವುದನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಇದು ಅತ್ಯಂತ ಸಹಾಯಕಾರಿ ಏಕೆಂದರೆ ಮುಂದಿನ ದಿನಗಳಲ್ಲಿ ಹೂಡಿಕೆಗೆ ಯಾವ ಕ್ಷೇತ್ರ ಉತ್ತಮ ಎನ್ನುವುದರ ಅರಿವಾಗುತ್ತದೆ. ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಆಗುವ ಬದಲಾವಣೆಗಳಿಗೆ ನಾವು ಇಂದೇ ಮಾನಸಿಕವಾಗಿ ಸಜ್ಜಾಗಬಹದು. 
  1. ಕೃಷಿ ಕ್ಷೇತ್ರ:  ಮೋದಿಯವರ ಸರಕಾರದ ಮೇಲೆ ಇರುವ ಅತಿ ದೊಡ್ಡ ನಿಂದನೆಯೆಂದರೆ ಅವರು ಕೃಷಿ ಕ್ಷೇತ್ರವನ್ನ ಕಡೆಗಣಿಸಿದ್ದಾರೆ ಎನ್ನುವುದು. ಆದರೆ ಈ ಮಾತು ನಿಜವಲ್ಲ. ರೈತರ ಹಿತವನ್ನ ಕಾಪಾಡಲು ಹಲವಾರು ಯೋಜಗಳು ಕಾರ್ಯ ನಿರ್ವಹಿಸುತ್ತಿವೆ. ಇರಲಿ. ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆಯನ್ನ ನೀಡಲಾಗುತ್ತದೆ. ಹೇಳಿ-ಕೇಳಿ ಇಂದಿಗೂ ಭಾರತ ಕೃಷಿಕರ ರಾಷ್ಟ್ರ. ಹೀಗಾಗಿ ಕೃಷಿ ಭೂಮಿಯ ಮೇಲಿನ ಹೂಡಿಕೆ ಉತ್ತಮ. 
  2. ಮಾನವ ಸಂಪನ್ಮೂಲ: ಗಮನಿಸಿ ಮೋದಿಯವರ ಸರಕಾರದ ಮೇಲಿನ ಇನ್ನೊಂದು ನಿಂದನೆ ಹೆಚ್ಚಿನ ಕೆಲಸದ ಸೃಷ್ಟಿ ಆಗಿಲ್ಲ ಎನ್ನುವುದು. ಹೀಗಾಗಿ ಈ ಕ್ಷೇತ್ರಕ್ಕೆ ಕೂಡ ಹೆಚ್ಚಿನ ಮಹತ್ವ ಮುಂದಿನ ದಿನಗಳಲ್ಲಿ ಬರಲಿದೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ನಮ್ಮ ಬಡ್ಡಿಯ ದರ 4 ಪ್ರತಿಶತಕ್ಕೆ ಇಳಿಯಲಿದೆ. ಈ ಕಾರಣ ಸಮಾಜದಲ್ಲಿ ಹೆಚ್ಚಿನ ಹಣದ ಹರಿವು ಇರುತ್ತದೆ. ಸುಲಭವಾಗಿ ಜನರಿಗೆ ಮಾಡಬೇಕಾದ ಕಾರ್ಯಕ್ಕೆ ಹಣ ಸಿಗಲಿದೆ. ಕೌಶಲ್ಯ ವೃದ್ಧಿಸಿಕೊಂಡು ತಮ್ಮದೇ ಆದ ಒಂದು ಸಣ್ಣ ಸಂಸ್ಥೆಯನ್ನ ತೆಗೆದು ಕಾರ್ಯ ನಿರ್ವಹಿಸುವ ಇಚ್ಛೆಯುಳ್ಳ ಯುವ ಜನತೆಗೆ ಬಹಳವೇ ಒಳ್ಳೆಯ ದಿನಗಳು ಕಾದಿವೆ. ಸ್ಕಿಲ್ ಡೆವಲಪ್ಮೆಂಟ್, ಟ್ರೈನಿಂಗ್ ಇಂತಹ ಕಾರ್ಯ ಕ್ಷೇತ್ರಗಳಲ್ಲಿ ಕೂಡ ಹೂಡಿಕೆ ಮಾಡಬಹದು. 
  3.  ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಮುಂದಿನ ಐದು ವರ್ಷ ಅತ್ಯಂತ ಮುಖ್ಯವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಲು ಸರಕಾರ ಸಕಲ ಪ್ರಯತ್ನ ಮಾಡುತ್ತದೆ. ಈ ನಿಟ್ಟಿನಲ್ಲಿ ಕಾರ್ಯ ಸೂಚಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳು ಇರುವುದು ತಿಳಿದ ವಿಷಯ. ಇವು ಅತ್ಯಂತ ವೇಗ ಪಡೆದುಕೊಂಡು ಕಾರ್ಯ ಸಾಧನೆಯತ್ತ ಹೆಜ್ಜೆ ಹಾಕಲಿವೆ. ಗುಜರಾತ್ ನಲ್ಲಿ ಗಿಫ್ಟ್ ಸಿಟಿ ಆಗಲೇ ಪೂರ್ಣ ಪ್ರಮಾಣದ ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆ ಪಡೆದಿದೆ. ಹೀಗಾಗಿ ಈ ಕಾರ್ಯ ಕ್ಷೇತ್ರದಲ್ಲಿ ಕೂಡ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿವೆ. 
  4.  ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ ಹೆಚ್ಚು ಹೆಚ್ಚಿನ ಕ್ರೋಡೀಕರಣ ನೋಡಬಹದು.2024 ರ ವೇಳೆಗೆ ಬಲಿಷ್ಠ ನಾಲ್ಕೈದು ಬ್ಯಾಂಕ್ ಮಾತ್ರ ಉಳಿದುಕೊಳ್ಳಲಿವೆ. ಅಂದರೆ ಬ್ಯಾಂಕ್ಗಳ ವಿಲೀನವಾಗುತ್ತದೆ. ಬ್ಯಾಂಕ್ ನಲ್ಲಿ ಬಡ್ಡಿ ದರ ಕುಸಿಯಲಿದೆ. ಮುಂದುವರಿದ ದೇಶಗಳಲ್ಲಿ ಇರುವ ಮಟ್ಟಿಗಲ್ಲದಿದ್ದರೂ ನಮ್ಮ ಬಡ್ಡಿ ದರ 3 ಅಥವಾ 4 ಪ್ರತಿಶತಕ್ಕೆ ಖಂಡಿತ ಹೋಗಲಿದೆ. ಹೀಗಾದಾಗ ಏನಾಗುತ್ತದೆ ಗಮನಿಸಿ. ಬ್ಯಾಂಕ್ನಲ್ಲಿ ಹಣವನ್ನ ತೊಡಗಿಸಿ ಸುಮ್ಮನೆ ಕೂತ ಜನ ತಮ್ಮ ಹಣಕ್ಕೆ ಬರುವ ಆದಾಯ ಕಡಿಮೆಯಾದಾಗ ಆ ಹಣವನ್ನ ಬೇರೆಡೆ ತೊಡಗಿಸಿ ಹೆಚ್ಚು ಹಣವನ್ನ ಗಳಿಸುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಕೆಲಸದ ಸೃಷಿಯಾಗುತ್ತದೆ. ಜೊತೆಗೆ ಬ್ಯಾಂಕ್ ಕೂಡ ಕಡಿಮೆ ಬಡ್ಡಿಯಲ್ಲಿ ಸಾಲವನ್ನ ಜನರಿಗೆ ಕೊಡುವುದರಿಂದ ಹಣದ ಹರಿವು , ವಹಿವಾಟು ಸಮಾಜದಲ್ಲಿ ಹೆಚ್ಚಾಗುತ್ತದೆ. ಇದು ಒಟ್ಟು ಜಿಡಿಪಿ ಹೆಚ್ಚಾಗಲು ಸಹಾಯ ಮಾಡುತ್ತದೆ. ಉತ್ತಮ ಐಡಿಯಾ ಹೊಂದಿರುವ ಆದರೆ ಹಣದ ಕೊರತೆ ಇರುವ ಯುಜನತೆಗೆ ಮುಂಬರುವ ವರ್ಷಗಳು ಆಶಾದಾಯಕವಾಗಿರಲಿದೆ. 
ಮೇಲೆ ಹೇಳಿದ ನಾಲ್ಕು ಕ್ಷೇತ್ರಗಳಲ್ಲಿ ಜನ ಸಾಮಾನ್ಯ ಕೂಡ ಗುರುತಿಸಬಹದುದಾದ ರೀತಿಯ ಬದಲಾವಣೆ ಕಾಣಲಿದೆ. ಉಳಿದಂತೆ ಬೇರೆ ಕ್ಷೇತ್ರಗಳು ಕೂಡ ಬದಲಾಗಲಿವೆ. ಅವುಗಳಲ್ಲಿ ಪ್ರಮುಖವಾಗಿ: 
  1. ವಿದೇಶಿ ಹೂಡಿಕೆಗೆ ಅಲ್ಪ ಮಟ್ಟದ ಕಡಿವಾಣ ಹಾಕಬಹದು. ಮೋದಿಯವರು ಎರಡನೇ ಬಾರಿ ಆರಿಸಿ ಬಂದರೆ ತಮ್ಮ ಪ್ರಥಮ ಅವಧಿಯಲ್ಲಿ ವಿದೇಶಿ ಹೂಡಿಕೆಗೆ ನೀಡಿದ ಉತ್ತೇಜನ, ಪ್ರಾಶಸ್ತ್ಯ ನೀಡುವುದಿಲ್ಲ ಎನ್ನುವ ಮಾತು ಆಗಲೇ ಹಣಕಾಸು ವಲಯದಲ್ಲಿ ಗಿರಕಿ ಹೊಡೆಯುತ್ತಿದೆ. ಚೀನಾ ದೇಶ ಜಗತ್ತಿಗೆ ತನ್ನ ಉತ್ಪನ್ನಗಳನ್ನ ಮಾರುತ್ತ ಬಂದಿದೆ. ಜೊತೆ ಜೊತೆಗೆ ತನ್ನ ಡೊಮೆಸ್ಟಿಕ್ ಬಳಕೆಯನ್ನ ಕೂಡ ಬಹಳ ಹೆಚ್ಚು ಮಾಡಿಕೊಂಡಿದೆ. ಅಂದರೆ ಒಂದು ಹಂತದಲ್ಲಿ ಎಕ್ಸ್ಪೋರ್ಟ್ ಕುಸಿದರೂ ಅದು ತನ್ನ ದೇಸಿ ಬೇಡಿಕೆಯ ಫಲವಾಗಿ ದೇಶವನ್ನ ಕುಸಿತದಿಂದ ತಪ್ಪಿಸುತ್ತದೆ. ಚೀನಾ ಮಾದರಿಯ ದೇಸಿ ಮಾರುಕಟ್ಟೆಯನ್ನ ಬಲ ಪಡಿಸುವ ಪ್ರಕ್ರಿಯೆಗೆ ಮೋದಿಯವರು ಮುಂದಾಗುತ್ತಾರೆ. 
  2. ಮೇಕ್ ಇನ್ ಇಂಡಿಯಾ ಇನ್ನಷ್ಟು ಬಲ ಪಡೆದುಕೊಳ್ಳಲಿದೆ. ನುರಿತ ಕುಶಕರ್ಮಿಗಳು ಹೆಚ್ಚೆಚ್ಚು ಅವಕಾಶ ಪಡೆಯಲಿದ್ದಾರೆ. 
  3. ದೇಸಿ ವಿನಿಮಯ ಮಾಧ್ಯಮಗಳಾದ ರುಪೆ, ಭಾರತ್ ಫೆ ಇತ್ಯಾದಿಗಳು ಅಂತಾರಾಷ್ಟ್ರೀಯ ಮಾಧ್ಯಮಗಳಾದ ವೀಸಾ, ಮಾಸ್ಟರ್ ಕಾರ್ಡ್, ಪೆಟಿಎಂ ಗಳಿಗೆ ಸೆಡ್ಡು ಹೊಡೆದು ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಲಿವೆ. 
  4. ಅಮೇರಿಕಾ ಮತ್ತು ಚೀನಾ ದೇಶಗಳ ನಡುವಿನ ಇನ್ನು ನಿಲ್ಲದ ಟ್ರೇಡ್ ವಾರ್ ನಿಂದ ಲಾಭ ಆಗುತ್ತಿರುವುದು ಭಾರತಕ್ಕೆ, ಅಮೆರಿಕಾ ಭಾರತದ ಪದಾರ್ಥಗಳ ಮೇಲೆ ಸುಂಕ ಹೆಚ್ಚಿಸಿ ಭಾರತದೊಂದಿಗೆ ಕೂಡ ಟ್ರೇಡ್ ವಾರ್ಗೆ ಇಳಿದಿತ್ತು. ಭಾರತ ಅದಕ್ಕೆ ವಿರುದ್ಧವಾಗಿ ಅನೇಕ ಅಮೆರಿಕಾ ಪದಾರ್ಥಗಳ ಮೇಲೆ ಸುಂಕ ಹೆಚ್ಚಿಸಿ ತಾನೇನು ಕಡಿಮೆಯಿಲ್ಲ ಎನ್ನುವ ಸಂದೇಶವನ್ನ ರವಾನಿಸಿತ್ತು. ಮುಂಬರುವ ದಿನಗಳಲ್ಲಿ ಟ್ರೇಡ್ ವಾರ್ ನಲ್ಲಿ ಭಾರತ ಹಿಂದೆ ಬೀಳದೆ ಗಟ್ಟಿಯಾಗಿ ನಿಂತು ಎದುರಿಸುವ ಸಾಧ್ಯತೆ ಹೆಚ್ಚಾಗಲಿದೆ. 
  5. ಬ್ರೆಕ್ಸಿಟ್ ಯೂರೋಪಿನ ಮಟ್ಟಿಗೆ, ಬ್ರಿಟನ್ ಮಟ್ಟಿಗೆ ಕೆಟ್ಟ ಸುದ್ದಿ ಆದರೆ ಭಾರತೀಯ ಹೂಡಿಕೆದಾರರಿಗೆ ಮತ್ತು ಭಾರತಕ್ಕೆ ಇದು ಶುಭ ಸುದ್ದಿಯಾಗಲಿದೆ. ಭಾರತ ಕಾಮನ್ ವೆಲ್ತ್ ದೇಶವಾಗಿರುವದರಿಂದ ಬ್ರಿಟನ್ ಸಹಜವಾಗೇ ಹೆಚ್ಚಿನ ವ್ಯವಹಾರವನ್ನ ಭಾರತದೊಂದಿಗೆ ಮಾಡಲು ಬಯಸುತ್ತದೆ. ವೈದ್ಯಕೀಯ ಮತ್ತು ಔಷಧ ಸಂಬಂಧಪಟ್ಟ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿವೆ. 
  6. ನಮ್ಮ ಷೇರು ಮಾರುಕಟ್ಟೆ ಪ್ರಥಮ 2/3 ಮೂರು ವರ್ಷ ನಾಗಾಲೋಟ ಪಡೆಯಲಿದೆ. 
  7. ಡಿಜಿಟಲ್ ಇಂಡಿಯಾ: ಡಿಜಿಟಲ್ ಇಂಡಿಯಾ ಎನ್ನುವ ಈ ಪರಿಕಲ್ಪನೆಯಿಂದ ಸಮಾಜದಲ್ಲಿ ಕಪ್ಪು ಹಣದ ಓಟ ನಿಧಾನವಾಗುತ್ತದೆ. ಹಲವು ಹತ್ತು ಕ್ಷೇತ್ರದಲ್ಲಿ ನೆಡೆಯುವ ಕೆಲಸಗಳು ವೇಗವನ್ನ ಪಡೆದುಕೊಳ್ಳುತ್ತದೆ . ಒಟ್ಟಾರೆಯಾಗಿ ಸಮಾಜದ ಜನರ ಜೀವನ ಮಟ್ಟವನ್ನ ಸುಧಾರಿಸುತ್ತದೆ . ಗ್ಯಾಸ್ ಸಬ್ಸಿಡಿ ಇರಬಹದು , ಪಿಂಚಣಿಯಿರಬಹದು, ಆರೋಗ್ಯ ವಿಮೆಯ ಸೌಲಭ್ಯವಿರಬಹದು ಇವುಗಳಲ್ಲಿ ಆಗುತ್ತಿದ್ದ ವಿಳಂಬ ಮತ್ತು ಹಣಕಾಸು ಏರುಪೇರುಗಳು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಡಿಜಿಟಲ್ ಇಂಡಿಯಾ ಎನ್ನುವ ಈ ಯೋಜನೆಯ ಮೂಲೋದ್ದೇಶಕ್ಕೆ ಚ್ಯುತಿ ಬರದಂತೆ ನೆಡೆಸಿಕೊಂಡು ಹೋದರೆ ಮುಂಬರುವ ದಿನಗಳಲ್ಲಿ ಜಗತ್ತಿನ ಇತರ ದೇಶಗಳಿಗೆ ಭಾರತ ಮಾದರಿ ದೇಶವಾಗಿ ನಿಲ್ಲಬಹದು. 
  8. ಅನಿವಾಸಿ ಭಾರತೀಯರು ಭಾರತದ ಬೆಳವಣಿಗೆಯಲ್ಲಿ , ಯಶೋಗಾಥೆಯಲ್ಲಿ ಹೆಚ್ಚು ಭಾಗಿಯಾಗಲು ಪ್ರೇರೇಪಿಸಬಹದು. 
ಕೊನೆಮಾತು : ಮೋದಿಯವರು ಎರಡನೇ ಅವಧಿಗೆ ಆರಿಸಿ ಬಂದರೆ ಬಹಳಷ್ಟು ಕೆಲಸ ಕಾರ್ಯಗಳು ವೇಗವನ್ನ ಪಡೆದುಕೊಳ್ಳುತ್ತವೆ . ಭಾರತದ ಅಭಿವೃದ್ಧಿಯ ವೇಗ ಕೂಡ ಹೆಚ್ಚಾಗುತ್ತದೆ . ಆಗಲೇ ಜಗತ್ತಿನಲ್ಲಿ ತನ್ನ ಛಾಪು ಮೂಡಿಸುತ್ತಿರುವ ಭಾರತದ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೊಂದು ಹಂತವನ್ನ ತಲುಪಲಿದೆ. ಭಾರತೀಯತೆ , ರಾಷ್ಟ್ರೀಯತೆ ಇನ್ನಷ್ಟು ಹೆಚ್ಚಿನ ಮಹತ್ವವನ್ನ ಪಡೆದುಕೊಳ್ಳುತ್ತದೆ. ಹಾಗೊಮ್ಮೆ ಭಾರತದಲ್ಲಿ ಮೋದಿಯವರದ್ದಲ್ಲದೇ ಬೇರೆ ಸರಕಾರ ಬಂದರೂ ಭಾರತದ ಬಂಡಿ ನಿಲ್ಲುವುದಿಲ್ಲ. ಏಕೆಂದರೆ ಹೇಳಿಕೇಳಿ ನಮ್ಮದು 130 ಕೋಟಿ ಜನರಿರುವ ಮಾರುಕಟ್ಟೆ ಇದರ ಮೇಲೆ ಅಧಿಪತ್ಯ ಸಾಧಿಸಲು ಹಲವು ಶಕ್ತಿಗಳು ಹೊಡೆದಾಡುತ್ತವೆ. ಆರ್ಥಿಕವಾಗಿ ಭಾರತದ ಬಂಡಿ ಹೊಡೆಯಲು ಹಲವಾರು ಶಕ್ತಿ ಕೇಂದ್ರಗಳು ಜನಿಸುತ್ತವೆ. ವ್ಯವಸ್ಥಿವಾದ ಬೆಳವಣಿಗೆ ಕಡಿಮೆಯಾಗಿ ಹಿಂದಿನಂತೆ ಶಕ್ತಿ ಕೇಂದ್ರಗಳ ಸುತ್ತಮುತ್ತಲ ಬೆಳವಣಿಗೆ ಹೆಚ್ಚಾಗುತ್ತದೆ . 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com