ಕಾಫಿ ಡೇ ಸಿದ್ದಾರ್ಥ್ ಸಾವು! ಭಾರತದ ಆರ್ಥಿಕ ಪರಿಸ್ಥಿತಿಯೇ ಸರಿಯಿಲ್ಲವಂತೆ? ತಿಳಿದುಕೊಳ್ಳೋಣ ನಾವು!!

ಕೆಫೆ ಕಾಫಿ ಡೇ ಸ್ಥಾಪಕ ಸಿದ್ದಾರ್ಥ್ ಅವರ ಸಾವು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಬ್ಬರ ಹುಟ್ಟುಹಾಕಿರುವುದು ಎಲ್ಲರಿಗೂ ತಿಳಿದಿದೆ. ಸಿದ್ದಾರ್ಥ್ ಅವರ ವಿಷಯದಲ್ಲಿ ಏನಾಗಿದೆ ಎನ್ನುವುದರ ಅವಲೋಕನ...
ಕಾಫಿ ಡೇ ಸಿದ್ದಾರ್ಥ್ ಸಾವು! ಭಾರತದ ಆರ್ಥಿಕ ಪರಿಸ್ಥಿತಿಯೇ ಸರಿಯಿಲ್ಲವಂತೆ? ತಿಳಿದುಕೊಳ್ಳೋಣ ನಾವು!!
ಕಾಫಿ ಡೇ ಸಿದ್ದಾರ್ಥ್ ಸಾವು! ಭಾರತದ ಆರ್ಥಿಕ ಪರಿಸ್ಥಿತಿಯೇ ಸರಿಯಿಲ್ಲವಂತೆ? ತಿಳಿದುಕೊಳ್ಳೋಣ ನಾವು!!
ಕೆಫೆ ಕಾಫಿ ಡೇ ಸ್ಥಾಪಕ ನಿರ್ದೇಶಕರಾದ ಸಿದ್ದಾರ್ಥ್ ಅವರ ಸಾವು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಬ್ಬರ ಹುಟ್ಟುಹಾಕಿರುವುದು ಎಲ್ಲರಿಗೂ ತಿಳಿದ ವಿಷಯ. ಸೋಶಿಯಲ್ ಮೀಡಿಯಾ ಹೊರತಾಗಿಯೂ ಸಮಾಜದಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಯಾವುದೇ ದೇಶವಾಗಿರಲಿ ಸಮಾಜದಲ್ಲಿ ನಕಾರಾತ್ಮಕ ಅಂಶಗಳು ಮತ್ತು ಸುದ್ದಿಗಳು ಬಹುಬೇಗ ಹರಡುತ್ತವೆ. ಸಿದ್ದಾರ್ಥ್ ಅವರ ವಿಷಯದಲ್ಲೂ ಹೀಗೆ ಆಗಿದೆ. ಹಾಗೆ ನೋಡಲು ಹೋದರೆ ಈ ವಿಷಯವನ್ನ ಇನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿ ಭಾರತದ ಆರ್ಥಿಕ ಸ್ಥಿತಿಯೇ ಸರಿಯಿಲ್ಲ. ಸೀತಾರಾಮನ್ ಅವರ ಎಕನಾಮಿಕ್ ಪಾಲಿಸಿ ಭಾರತದ ಉದ್ಯಮಿಗಳಿಗೆ ಸಹಾಯ ಮಾಡುತ್ತಿಲ್ಲ. ಇದು ಕೇವಲ ದೊಡ್ಡ ಮತ್ತು ಅತಿ ದೊಡ್ಡ ಉದ್ದಿಮೆದಾರರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಾ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಎಂದಿನಂತೆ ಪುಕ್ಕಟೆ ವಾಟ್ಸಪ್ ಸಂದೇಶಗಳು ಎಗ್ಗಿಲ್ಲದೆ ಹರಿದಾಡುತ್ತಿವೆ. ಎಂದಿನಂತೆ ನಮ್ಮ ಜನ ಅದರ ಸತ್ಯಾಸತ್ಯತೆಯನ್ನ ಗಮನಿಸದೆ ಫಾರ್ವಾರ್ಡ್ ಮಾಡುವುದರಲ್ಲಿ ಮಗ್ನರಾಗಿದ್ದಾರೆ. 
ಗಮನಿಸಿ ಯಾವುದೇ ಎಕಾನಮಿ ಅಚಾನಕ್ಕಾಗಿ ಕುಸಿಯುವುದಿಲ್ಲ. ಅದು ಹತ್ತಾರು ಸಂದೇಶಗಳನ್ನ ಕೊಡುತ್ತದೆ. ಅದು ಜನ ಸಾಮಾನ್ಯನಿಗೂ ತಲುಪುತ್ತದೆ ಎಂದರೆ ಅಲ್ಲಿಗೆ ವ್ಯವಸ್ಥೆಯಲ್ಲಿ ಇರುವ ನೂನ್ಯತೆ ಅತ್ಯಂತ ಹೆಚ್ಚಾಗಿದೆ ಎಂದರ್ಥ. ಸಿದ್ದಾರ್ಥ್ ಅವರ ವಿಷಯದಲ್ಲಿ ಏನಾಗಿದೆ ಎನ್ನುವುದರ ಅವಲೋಕನ ಮಾಡೋಣ ಹಾಗೆಯೇ ಭಾರತದಲ್ಲಿ ಆರ್ಥಿಕ ಪರಿಸ್ಥಿತಿಯ ಒಂದು ಪಕ್ಷಿನೋಟ ಕೂಡ ಪ್ರಯತ್ನ ಕೂಡ ಇಂದಿನ ಅಂಕಣದಲ್ಲಿ ಮಾಡೋಣ. 
ಸಿದ್ದಾರ್ಥ್ ಅವರಿಗಿದ್ದ ಮುಖ್ಯ ಸಮಸ್ಯೆಗಳು ಎರಡು: 
  1. ಟ್ಯಾಕ್ಸ್ ಟೆರರಿಸಂ: ಗಮನಿಸಿ ಭಾರತ ಸ್ವಾತಂತ್ರ್ಯ ಪಡೆದ ದಿನದಿಂದ 2014ರಲ್ಲಿ ಮೋದಿಯವರ ಸರಕಾರ ಬರುವವರೆಗೆ ತೆರಿಗೆಯನ್ನ ಉದ್ಯಮಿಗಳಿಂದ ಇಷ್ಟೊಂದು ಕಟ್ಟುನಿಟ್ಟಾಗಿ ವಸೂಲಿ ಮಾಡಿದ ನಿದರ್ಶನಗಳಿಲ್ಲ. ಹಾಗೆಯೇ ಕಳೆದ ಐದು ವರ್ಷಗಳಲ್ಲಿ ತೆರಿಗೆ ಡಿಪಾರ್ಟ್ಮೆಂಟ್ ನಲ್ಲಿ ದಾಖಲಾಗಿರುವ ದೂರುಗಳ ಸಂಖ್ಯೆಯಲ್ಲಿ ಕೂಡ ಅತ್ಯಂತ ಹೆಚ್ಚಳವಾಗಿದೆ. ತೆರಿಗೆಯಲ್ಲಿ ವಂಚನೆ, ತೆರಿಗೆ ಕಟ್ಟುವುದರಲ್ಲಿ ವಿಳಂಬ ಅಥವಾ ತೆರಿಗೆಯನ್ನ ಪೂರ್ಣವಾಗಿ ಕಟ್ಟದೆ ತಪ್ಪಿಸಿಕೊಳ್ಳುವ ಅವಕಾಶವಿದ್ದ ಸಮಯದಲ್ಲಿ ಸಂಸ್ಥೆಗಳಲ್ಲಿ ಸಾಕಷ್ಟು ಹಣದ ಹರಿವು ಇರುತ್ತಿತ್ತು. ಈಗೇನಾಗಿದೆ ಹಣವನ್ನ ರೊಟೇಟ್ ಮಾಡುವ ಸೈಕಲ್ ನಲ್ಲಿ ವ್ಯತ್ಯಾಸವಾಗಿದೆ. ಇದೊಂದು ಚೈನ್ ರಿಯಾಕ್ಷನ್. ಸಹಜವಾಗೇ ಸಂಸ್ಥೆಯಲ್ಲಿ ಲಿಕ್ವಿಡಿಟಿ ಕುಸಿದಿದೆ. ನಿಮ್ಮ ಸಂಸ್ಥೆ ಲಾಭದಲ್ಲಿದೆ ಅಥವಾ ನಷ್ಟದಲ್ಲಿದೆ ಅದ್ಯಾವುದೂ ಗಣನೆಗೆ ಬರುವುದಿಲ್ಲ ತೆರಿಗೆ ಕಟ್ಟಲೇಬೇಕು. ಹಿಂದೆಲ್ಲ ಇದರಲ್ಲಿ ಒಂದಷ್ಟು ವಿನಾಯಿತಿ ಸಿಗುತ್ತಿತ್ತು. ಅಲ್ಲದೆ ಸಮಾಜದಲ್ಲಿ ಹೇರಳವಾಗಿ ಕಪ್ಪು ಹಣವಿತ್ತು. ಹಣವನ್ನ ರೊಟೇಟ್ ಮಾಡಲು ಹೀಗೆ ಒಂದಷ್ಟು ದಿನ ಅಥವಾ ವಾರಕ್ಕೆ ಇಂತಹ ಹಣದ ಬಳಕೆಯಾಗುತ್ತಿತ್ತು. ಇದೀಗ ಸಮಾಜದಲ್ಲಿ ಹಣದ ಹರಿವು ಕುಸಿದಿದೆ. 
  2. ಪ್ರೈವೇಟ್ ಈಕ್ವಿಟಿ ಷೇರ್ ಹೊಲ್ಡರ್ ಗಳು ತಮ್ಮ ಷೇರನ್ನ ಮರು ಖರೀದಿಗೆ ಒತ್ತಾಯಿಸಿರುವುದು: ಸಿದ್ಧಾರ್ಥ್ ಅವರು ಸಂಸ್ಥೆಯನ್ನ ಕಟ್ಟಲು ಹಣದ ಅವಶ್ಯಕತೆ ಬಂದಾಗ ಖಾಸಗಿ ವ್ಯಕ್ತಿಗಳಿಂದ ಹಣ ಪಡೆದು ಅವರಿಗೆ ಸಂಸ್ಥೆಯ ಷೇರನ್ನ ನೀಡಿದ್ದಾರೆ. ಪ್ರೈವೇಟ್ ಈಕ್ವಿಟಿ ಅಂದರೆ ಹಣ ಪಡೆದು ಸಂಸ್ಥೆಯಲ್ಲಿ ಪಾಲು ನೀಡುವುದು. ಸಂಸ್ಥೆ ಎಲ್ಲಿಯವರೆಗೆ ಲಾಭದಲ್ಲಿ ನಡೆಯುತ್ತದೆ ಅಲ್ಲಿಯವರೆಗೆ ಈ ಪ್ರೈವೇಟ್ ಈಕ್ವಿಟಿ ಹೋಲ್ಡರ್ಗಳು ಸುಮ್ಮನಿರುತ್ತಾರೆ. ಯಾವಾಗ ಸಂಸ್ಥೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಆಗ ಅವರು ತಮ್ಮ ಪಾಲನ್ನ ಮರು ಖರೀದಿ ಮಾಡುವಂತೆ ಪ್ರೊಮೋಟರ್ಸ್ ಹಿಂದೆ ಬೀಳುತ್ತಾರೆ. ಅವರಿಗೆ ಅವರ ಹಣದ ಸುರಕ್ಷತೆ ಮುಖ್ಯ. 
ಹೀಗೆ ಸಿದ್ದಾರ್ಥ್ ಅವರು ಸಾಲದ ಬೆಟ್ಟದ ಮೇಲೆ ಕೂತಿದ್ದರು. ಇವರ ಆಸ್ತಿ ಮತ್ತು ಲಯಬಿಲಿಟಿ ನೋಡಿದರೆ ಸಾಲವೇನೂ ತೀರಿಸಲಾಗದೆ ಓಡಿ ಹೋಗುವ ಹಂತವನ್ನ ಮುಟ್ಟಿರಲಿಲ್ಲ. ಇಂತಹ ಸಾಲವನ್ನ  ಮೈಂಡ್ ಟ್ರೀ ಜೊತೆಗೆ ಇತರ ಸಂಸ್ಥೆಗಳಲ್ಲಿದ್ದ ಹೊಡಿಕೆಯನ್ನ ಹೊರತೆಗೆದು ತೀರಿಸಲು ಒತ್ತಡ ಹೆಚ್ಚಾಗಿತ್ತು. ಈ ಇತರ ಹೂಡಿಕೆಗಳು ಅತ್ಯಂತ ಲಾಭದಾಯವಾಗಿದ್ದವು. ಸನ್ನಿವೇಶಕ್ಕೆ ಪ್ರತಿಕ್ರಿಯಿಸುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅಲ್ಲವೇ? ಸಿದ್ದಾರ್ಥ್ ಇವೆಲ್ಲವುದರಿಂದ ದೂರ ಹೋಗುವುದನ್ನ ಆಯ್ಕೆ ಮಾಡಿಕೊಂಡಿದ್ದಾರೆ. 
 ********
ಭಾರತದ ಆರ್ಥಿಕ ಪರಿಸ್ಥಿತಿ ಹೇಗಿದೆ? 
ನೀವು ಒಬ್ಬ ಅಥ್ಲೆಟ್ ಎಂದುಕೊಳ್ಳಿ ಅಥವಾ ನಿತ್ಯ ಜಾಗಿಂಗ್ ಮಾಡುವ ವ್ಯಕ್ತಿ ಎಂದುಕೊಳ್ಳಿ. ನೀವು ಎಲ್ಲಿಯವರೆಗೆ ನಿಲ್ಲದೆ ಓಡಬಲ್ಲಿರಿ? ಅಥ್ಲೆಟ್ ಅದೂ ಮಾರಥಾನ್ ಓಡುವರಾಗಿದ್ದರೆ 42 ಕಿಲೋಮೀಟರ್ ಓಡುತ್ತಾರೆ. ಮಿಕ್ಕವರು? ಒಂದು ಎರಡು ಅಥವಾ ಐದು ಇನ್ನು ಜಾಸ್ತಿಯೆಂದರೆ ಹತ್ತು ಕಿಲೋಮೀಟರ್ ಓಡಬಹದು. ನಂತರ ನಿಲ್ಲಬೇಕಲ್ಲವೇ? ಆರ್ಥಿಕತೆಯೂ ಹಾಗೆಯೇ! ಸದಾ ಒಂದೇ ಸಮನೆ ಓಡಲು ಸಾಧ್ಯವಿಲ್ಲ. ಒಮ್ಮೆ ನಿಲ್ಲಬೇಕು, ಸುಧಾರಿಸಿಕೊಂಡು ಮತ್ತೆ ಓಡಬೇಕು. ಸದ್ಯಕ್ಕೆ ಭಾರತವೆಂಬ ಓಟರಗಾರನ ಓಟದಲ್ಲಿ ನಿಧಾನವಾಗಿದೆ. ಅಂದರೆ ನಮ್ಮ ಆರ್ಥಿಕತೆ ಸ್ಲೋ ಡೌನ್ ಸ್ಥಿತಿಯಲ್ಲಿದೆ. ಅದಕ್ಕೆ ಅತ್ಯಂತ ಮುಖ್ಯ ಕಾರಣಗಳು ಹೀಗಿವೆ: 
  1. ILI&FS ಅಂದರೆ infrastructure Leasing & Financial Services ಇದೊಂದು ಲಿಮಿಟೆಡ್ ಕಂಪನಿ. ಇದು 250 ಸಹ ಶಾಖೆಗಳನ್ನ ಹೊಂದಿದೆ. ಭಾರತದಲ್ಲಿ ಆಗುವ ಯಾವುದೇ ದೊಡ್ಡ ಅಥವಾ ಅತಿ ದೊಡ್ಡ ಕಾಮಗಾರಿ ಕಾರ್ಯಗಳನ್ನ ಗುತ್ತಿಗೆಗೆ ತೆಗೆದುಕೊಂಡು ಕೆಲಸ ಮಾಡಿಸುವುದು ಈ ಸಂಸ್ಥೆ. ಈ ಸಂಸ್ಥೆಯಲ್ಲಿ ನಮ್ಮ ಎಲೈಸಿ ಹಾಗೂ ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ ಜೊತೆಗೆ ಇನ್ನು ಹಲವು ಸಂಸ್ಥೆಗಳು ಪಾಲುದಾರರು. ಇಲ್ಲಿನ ಕೆಲಸವನ್ನ ಪೂರೈಸಲು ಬ್ಯಾಂಕಿನಿಂದ ಸಾಲವನ್ನ ಪಡೆಯುತ್ತಾರೆ. ಎಲ್ಲವೂ ಅಂದುಕೊಂಡ ಸಮಯದಲ್ಲಿ ಆದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ನಮ್ಮ ದೇಶದಲ್ಲಿ ನೆಲವನ್ನ ಪಡೆದುಕೊಳ್ಳುವುದು ಸುಲಭದ ಕೆಲಸವಲ್ಲ. ಹೀಗಾಗಿ ಪ್ರಾಜೆಕ್ಟ್ ಕಾಸ್ಟ್ ಜಾಸ್ತಿಯಾಗುತ್ತದೆ. ಹಣದ ಮೇಲಿನ ಬಡ್ಡಿ ಕೊಡುವ ಸಮಯ ಕೂಡ ಹೆಚ್ಚಾಗುತ್ತದೆ. ಇವೆರಡೂ ಅತ್ಯಂತ ಕೆಟ್ಟ ಕಾಂಬಿನೇಷನ್. ಇದು ಲಾಭವನ್ನ ನುಂಗಿ ಬಿಡುತ್ತದೆ. ಸಮಯ ಹೆಚ್ಚಾದರೆ ನಷ್ಟ ಗ್ಯಾರಂಟಿ. ಹೀಗಾಗಿ ಇವರು ಬ್ಯಾಂಕಿಗೆ ಕಟ್ಟುವ ಬಡ್ಡಿ ಮತ್ತು ಮೂಲಧನ ಕಟ್ಟದೆ ಉಳಿಸಿಕೊಂಡಿದ್ದಾರೆ. ಇಂತಹ ಅನೇಕ ಕಂಪನಿಗಳು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನ ಶಿಥಿಲಗೊಳಿಸಿವೆ. ಹೀಗಾಗಿ ಬ್ಯಾಂಕ್ಗಳು ಹೊಸ ಸಾಲ ಕೊಡಲು ಹಿಂಜರಿಯುತ್ತವೆ. ಜೊತೆಗೆ ನಮ್ಮಲ್ಲಿ ಅನುತ್ಪಾದಕ ಆಸ್ತಿ ಹೆಚ್ಚಾಗಿದೆ. ಲಿಕ್ವಿಡಿಟಿ ಕಡಿಮೆಯಾಗಿದೆ. 
  2. NBFC ಅಂದರೆ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೋರೇಶನ್ ಎಂದರ್ಥ. ಇವುಗಳು ಎಲ್ಲಿ ನಮ್ಮ ಮುಖ್ಯವಾಹಿನಿ ಬ್ಯಾಂಕ್ಗಳು ಸಾಲ ಕೊಡಲು ಹಿಂಜರಿಯುತ್ತವೆ ಅಥವಾ ಎಲ್ಲಿ ನಮ್ಮ ಬ್ಯಾಂಕ್ಗಳು ತಲುಪಿಲ್ಲ ಅಲ್ಲಿ ಕಾರ್ಯ ನಿರ್ವಹಿಸುತ್ತವೆ. ಭಾರತದಲ್ಲಿ ಹಣವನ್ನ ಸಾಲದ ರೂಪದಲ್ಲಿ ಎಲ್ಲರೂ ಬ್ಯಾಂಕಿನ ಮೂಲಕವೇ  ಪಡೆಯುವುದಿಲ್ಲ. ಒಂದು ಅಂದಾಜಿನ ಪ್ರಕಾರ 35 ಪ್ರತಿಶತ ವಹಿವಾಟು NBFC ಗಳ ಕೈಲಿದೆ. ಇಂದಿಗೆ NBFC ಗಳ ಬಳಿ ಹಣವಿಲ್ಲ. ಇವರು ಕೂಡ ಹಣದ ಹರಿವಿನ ಕೊರತೆಯನ್ನ ಎದುರಿಸುತ್ತ ಇದ್ದಾರೆ. ಇದಕ್ಕೆ ಮುಖ್ಯ ಕಾರಣ ಇವರು ಹಣವನ್ನ ಮುಖ್ಯ ವಾಹಿನಿ ಬ್ಯಾಂಕ್ಗಳ ಮೂಲಕ ಪಡೆಯುತ್ತಾರೆ. ಅದು ಅಲ್ಪಾವಧಿಗೆ ಅಂದರೆ ಆರು ತಿಂಗಳು ಅಥವಾ ವರ್ಷದ ಅವಧಿಗೆ. ಆದರೆ ಇವರು ಸಾಲವನ್ನ ಐದು ವರ್ಷದ ವರೆಗೆ ನೀಡುತ್ತಾರೆ. ಆರು ತಿಂಗಳ ನಂತರ ಬ್ಯಾಂಕಿಗೆ ಹಣ ನೀಡುವ ವೇಳೆಗೆ ಅವರು ಇನ್ನೊಂದು ಸಾಲವನ್ನ ಪಡೆಯಲೇ ಬೇಕು. ಇದೊಂದು ಜಗಲಿಂಗ್ ಇದರಲ್ಲಿ ಟೈಮಿಂಗ್ ಬಹಳ ಮುಖ್ಯ. ಒಂದು ಸುತ್ತು ತಪ್ಪಿದರೂ ಕುಸಿತ ಕಟ್ಟಿಟ್ಟ ಬುತ್ತಿ. ಉದಾಹರೆಣೆ ನೋಡಿ. ರಾಮ ಎನ್ನುವ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೋರೇಶನ್ ನಮ್ಮ ಎಸ್ಬಿಐ ಬಳಿ 1 ಲಕ್ಷ ರೂಪಾಯಿಗಳನ್ನು ಆರು ತಿಂಗಳಿಗೆ ಸಾಲ ಪಡೆಯುತ್ತದೆ. ಅದನ್ನ ಉಮೇಶ ಎನ್ನುವನಿಗೆ 5 ವರ್ಷಕ್ಕೆ ಸಾಲ ನೀಡುತ್ತದೆ. ಆರು ತಿಂಗಳ ಬಳಿಕ ಎಸ್ಬಿಐ ಗೆ ವಾಪಸ್ಸು ಕೊಡಲು ಬೇರೆ ಸಂಸ್ಥೆಯಿಂದ ಹಣವನ್ನ ಸಾಲ ಪಡೆಯಬೇಕು. ಇಂತಹ ವಹಿವಾಟು ಸಾಮಾನ್ಯ ಆರ್ಥಿಕ ಪರಿಸ್ಥಿತಯಲ್ಲಿ ಆತಂಕವಿಲ್ಲದೆ ನೆಡೆದುಕೊಂಡು ಹೋಗುತ್ತದೆ. ಹಣದ ಹರಿವು ಕಡಿಮೆಯಾದ ಸಮಯದಲ್ಲಿ ಇಂತಹ ಜಗಲಿಂಗ್ ವ್ಯವಸ್ಥೆ ಕುಸಿಯುತ್ತದೆ. ನಮ್ಮ ಜನಸಂಖ್ಯೆ 35 ಪ್ರತಿಶತ ಜನ ಹಣದ ಕೊರತೆಯಿಂದ ಬಳಲಿದರೆ ಸಮಾಜ ಹೇಗೆ ಮುಂದುವರಿಯಲು ಸಾಧ್ಯ? ಒಂದು ಕುಸಿತ ಹಲವಾರು ಕುಸಿತಗಳಿಗೆ ಕಾರಣವಾಗುತ್ತದೆ. 
  3. FII ಅಂದರೆ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಎಂದರ್ಥ: ಸೀತಾರಾಮನ್ ಅವರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿ, ಇವರ ಹೂಡಿಕೆಯ ಮೇಲಿನ ಲಾಭಕ್ಕೆ ತೆರಿಗೆಯ ಮೇಲೆ ಸರ್ಚಾರ್ಜ್ ವಿಧಿಸಿರುವುದು ಇವರಿಗೆ ಇಷ್ಟವಾಗಿಲ್ಲ. ನಮ್ಮ ಮಾರುಕಟ್ಟೆಯಿಂದ ಕಳೆದೆರಡು ತಿಂಗಳಲ್ಲಿ ಇವರು ವಾಪಸ್ಸು ಪಡೆದ ಹಣ ಹತ್ತಿರಹತ್ತಿರ ಮೂರು ಬಿಲಿಯನ್ ಅಮೆರಿಕನ್ ಡಾಲರ್. ಇದು ಅತ್ಯಂತ ದೊಡ್ಡ ಮೊತ್ತ. ಮಾರುಕಟ್ಟೆಯಲ್ಲಿ ಅತಿ ಕಡಿಮೆ ಸಮಯದಲ್ಲಿ ಹೀಗೆ ಚಾಲ್ತಿಯಲ್ಲಿದ್ದ ಹಣವನ್ನ ವಾಪಸ್ಸು ಪಡೆದರೆ ಅಲ್ಲಿ ಗೊಂದವಾಗುವುದು ಸಹಜ.  ನಮ್ಮ ಷೇರು ಮಾರುಕಟ್ಟೆ ಇನ್ನಿಲ್ಲದೆ ಕುಸಿಯುತ್ತಿರುವುದಕ್ಕೆ ಇದೊಂದು ಕಾರಣ. ಅಲ್ಲದೆ ಗಮನಿಸಿ ಇನ್ನಷ್ಟು ಕುಸಿಯಬಹದು ಎನ್ನುವ ಭಯ ಪ್ಯಾನಿಕ್ ಆಗಿ ಪರಿವರ್ತನೆಗೊಂಡಿದೆ. ಈ ಎಲ್ಲ ಕಾರಣದಿಂದ ಮಾರುಕಟ್ಟೆ ಕುಸಿಯುತ್ತಲೆ ಇದೆ. 
ಈಗ ಕೇಂದ್ರ ಸರಕಾರ ಏನು ಮಾಡಬೇಕು? 
ಕುಸಿತ ತಡೆಯಬೇಕು. ಇದಾಗಬೇಕಂದರೆ ಸಮಾಜದಲ್ಲಿ ಹಣದ ಹರಿವು ಹೆಚ್ಚಬೇಕು. ಬ್ಯಾಂಕಿಂಗ್ ವ್ಯವಸ್ಥೆ ಭದ್ರವಾಗಬೇಕು. ಇವೆಲ್ಲ ಸಾಧ್ಯವಾಗುವುದು ಇಂದು ನಮ್ಮ ಸಮಾಜದ ದೊಡ್ಡ ಸಮಸ್ಯೆಯಾದ ಮೇಲಿನ ಮೂರು ವಿಷಯಗಳನ್ನ ತ್ವರಿತಗತಿಯಲ್ಲಿ ಉತ್ತರಿಸಬೇಕು. ಮೊದಲೆರಡು ವಿಷಯದಲ್ಲಿ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎನ್ನುವ ಆಶಾಭಾವವಿದೆ. ಆಗಲೇ ಅದರ ಬಗ್ಗೆ ಕಾರ್ಯ ಶುರುವಾಗಿದೆ. ಆದರೆ ಮೂರನೇ ವಿಷಯದಲ್ಲಿ ಸರಕಾರದ ಧೋರಣೆ ಅಷ್ಟೇನೂ ಸಕಾರಾತ್ಮಕವಾಗಿಲ್ಲ. ಹೆಚ್ಚತ್ತಿರುವ ಕಾರ್ಪೊರೇಟ್ ಡೆಟ್ ಸಮಸ್ಯೆಯನ್ನ ಇನ್ನಷ್ಟು ಉಲ್ಬಣಗೊಳಿಸುತ್ತದೆ. 
ಕೊನೆ ಮಾತು: ಇವತ್ತು ಉಂಟಾಗಿರುವ ಹಣಕಾಸು ಬಿಕ್ಕಟಿಗೆ ಪೂರ್ಣವಾಗಿ ಕೇಂದ್ರ ಸರಕಾರ ನೀತಿ ಕಾರಣ ಎನ್ನುವುದು ತಪ್ಪು. ಕೇಂದ್ರ ಸರಕಾರ ಸಮಾಜದಲ್ಲಿ ಒಂದಷ್ಟು ಬಿಗಿ ತರಲು ಒಂದಷ್ಟು ನಿಯಮಗಳನ್ನ ಜಾರಿಗೆ ತಂದಿದೆ. ಇಷ್ಟು ವರ್ಷ ಯಾವುದೇ ನೀತಿ ರೀತಿಗೆ ಬದ್ಧವಾಗಿರದ ಉದ್ದಿಮೆದಾರರು ಸಹಜವಾಗಿ ನೀತಿಯ ವಿರುದ್ಧ ನಿಂತಿದ್ದಾರೆ. ಹಾಗೆಯೇ ಸರಕಾರ ಕೂಡ ಒಮ್ಮೆಲೇ ಎಲ್ಲಾ ಬದಲಾವಣೆಯನ್ನ ತರಲು ಆತುರ ತೋರದೆ ಸ್ವಲ್ಪ ನಿಧಾನಿಸಿ ನಡೆಯುವುದು ಉತ್ತಮ. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com