ಕಣಿವೆ ರಾಜ್ಯಗಳ ಮುಂದಿದೆ ಆರ್ಥಿಕತೆಯ ಹೊಸದಾರಿ!

ಹೇಳಿಕೇಳಿ ಈ ಕಣಿವೆ ರಾಜ್ಯವನ್ನು ಭೂಸ್ವರ್ಗ, ಭಾರತದ ಸ್ವಿಸ್ ಎಂದೆಲ್ಲಾ ಕರೆಯಲಾಗುತ್ತದೆ. ಉದ್ಯಮಿಗಳು ಮತ್ತು ವ್ಯಾಪಾರಿಗಳು ಇಲ್ಲಿ ನೆಲವನ್ನ ಕೊಂಡು ನೆಲಸಲು ಪ್ರಾರಂಭಿಸುತ್ತಾರೆ.....

Published: 08th August 2019 12:00 PM  |   Last Updated: 07th August 2019 02:20 AM   |  A+A-


Hanaclasu: The road ahead for Jammu and Kashmir's integrated economy

ಕಣಿವೆ ರಾಜ್ಯಗಳ ಮುಂದಿದೆ ಆರ್ಥಿಕತೆಯ ಹೊಸದಾರಿ!

Posted By : SBV SBV
Source : Online Desk
ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಮಾನ್ಯತೆಯನ್ನ ಕೇಂದ್ರ ಸರಕಾರ ರದ್ದು ಪಡಿಸಿದ್ದು, ಇಂತಹ ಐತಿಹಾಸಿಕ ನಿರ್ಧಾರಕ್ಕೆ ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಇಂದಿಗೆ ಹಳೆಯ ವಿಷಯವಾಗಿದೆ. ಆರ್ಟಿಕಲ್ 370 ಮತ್ತು 35ಎ ವಿಧಿಗಳ ಪ್ರಕಾರ ಈ ರಾಜ್ಯಗಳಿಗೆ ಸ್ವಾಯತ್ತತೆಯನ್ನು ಪ್ರದಾನಿಸಲಾಗಿತ್ತು. 

ಅಂದರೆ ಗಮನಿಸಿ ಜಮ್ಮು-ಕಾಶ್ಮೀರ ಒಂದು ಲೆಕ್ಕದಲ್ಲಿ ಪ್ರತ್ಯೇಕ ದೇಶದಂತೆ ವ್ಯವಹರಿಸುವ ಹಕ್ಕು ಗಳಿಸಿತ್ತು. ತಮ್ಮದೇ ಆದ ಬಾವುಟದಿಂದ ಹಿಡಿದು ಸಕಲವನ್ನೂ ಪ್ರತ್ಯೇಕವಾಗಿ ಹೊಂದಿತ್ತು. ಅವುಗಳ ಆಂತರಿಕ ನಿರ್ಧಾರದಲ್ಲಿ ಭಾರತದ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವಂತಿರಲಿಲ್ಲ. ಯುದ್ಧದ ಸಮಯದಲ್ಲಿ ಮಾತ್ರ ಅಲ್ಲಿ ಕರ್ಪ್ಯೂ ವಿಧಿಸುವ ಅಧಿಕಾರ ಭಾರತದ ಕೇಂದ್ರ ಸರಕಾರಕ್ಕಿತ್ತು ಉಳಿದಂತೆ ನಿತ್ಯದ ದಿನಗಳಿಗೆ ಅನ್ವಯವಾಗುವ ಯಾವೊಂದು ನಿರ್ಧಾರವನ್ನೂ ತೆಗೆದುಕೊಳ್ಳುವ ಶಕ್ತಿ ಇರಲಿಲ್ಲ.

ಅಧಿಕಾರದ ಸಮಯದಲ್ಲಿ ಮಾತ್ರ ಆ ರಾಜ್ಯಗಳಿಗೆ ಪೂರ್ಣ ಸ್ವಾಯತ್ತತೆ ನೀಡಿದ್ದರೂ ಸಹಾಯದ ಸಮಯದಲ್ಲಿ ಮಾತ್ರ ಇದು ತದ್ವಿರುದ್ಧ. ಗಮನಿಸಿ ಜಮ್ಮು ಕಾಶ್ಮೀರದ ಬಜೆಟ್ ಎಷ್ಟಿರುತ್ತದೆ ಅದರ ಐವತ್ತು ಅಥವಾ ಅದಕ್ಕೂ ಹೆಚ್ಚು ಹಣವನ್ನ ಕೇಂದ್ರ ಸರಕಾರ ಕಳೆದ 70 ವರ್ಷಗಳಿಂದ ನಿರಂತರವಾಗಿ ನೀಡುತ್ತಾ ಬಂದಿದೆ. ಉದಾಹರಣೆ ನೋಡಿ 2018-2019 ರಲ್ಲಿ ಈ ರಾಜ್ಯವನ್ನ ನಡೆಸಲು ಬೇಕಾಗುವ ಒಟ್ಟು ಹಣ 64 ಸಾವಿರ ಕೋಟಿ ಎಂದು ಬಜೆಟ್ನಲ್ಲಿ  ಅಂದಾಜಿಸಲಾಗಿತ್ತು. ಭಾರತ ಸರಕಾರ ಈ ಸಾಲಿನಲ್ಲಿ ನೀಡಿದ ಸಹಾಯಧನ 34 ಸಾವಿರ ಕೋಟಿ. ಅಂದರೆ ಬಜೆಟ್ ನ 53 ಪ್ರತಿಶತ ಹಣವನ್ನ ಕೇಂದ್ರ ಸರಕಾರದಿಂದ ಪಡೆದು ಉಳಿದ 47 ಪ್ರತಿಶತವನ್ನ ಜಮ್ಮು ಕಾಶ್ಮೀರದ ಜನರಿಂದ ತೆರಿಗೆ ರೂಪದಲ್ಲಿ ವಸೂಲಿ ಮಾಡಲಾಗುತ್ತಿತ್ತು. 

ಇಲ್ಲಿ ಮುಖ್ಯವಾಗಿ ಹೇಳ ಹೊರಟ ವಿಷಯವೇನೆಂದರೆ ಭಾರತದ ಸರಕಾರದಿಂದ ಬೇಕಾದ ಎಲ್ಲಾ ಸವಲತ್ತುಗಳನ್ನ ಪಡೆದು ಆದರೆ ಆ ಸವಲತ್ತು ಪಡೆದ ಇತರ ರಾಜ್ಯಗಳು ತೋರಿಸುವ ಬಾಧ್ಯತೆ, ಬದ್ಧತೆಗಳಿಂದ ಮಾತ್ರ ಜಮ್ಮ-ಕಾಶ್ಮೀರ ವಿಮುಖವಾಗಿತ್ತು. ಇಲ್ಲಿನ ದೇಣಿಗೆ ಬೇಕು ಆದರೆ ಇಲ್ಲಿನ ಯಾವ ರೀತಿ ನೀತಿ, ಕಾನೂನು ಬೇಡ.ಇಂತಹ ಒಂದು ಒಪ್ಪಂದವನ್ನ ಸರಿಯೆಂದು ಒಪ್ಪಿಗೆ ಕೊಟ್ಟದ್ದು 1949ರಲ್ಲಿ ಅಂದಿನ ಕೇಂದ್ರ ಸರಕಾರ. ಇಂತಹ ವಿಶೇಷ ಸವಲತ್ತು ಕೇವಲ ಒಂದಷ್ಟು ವರ್ಷಗಳಿಗೆ ಮಾತ್ರ ಎನ್ನುವ ಲೆಕ್ಕಾಚಾರದಲ್ಲಿ ನೀಡಿದ್ದು ನಂತರದ ದಿನಗಳಲ್ಲಿ ಅದನ್ನ ಎಲ್ಲರೂ ಮರೆತವರಂತೆ ವರ್ತಿಸಿದರು. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಭಾರತವನ್ನ ದ್ವೇಷಿಸುವ ಅಧಿಕಾರದಲ್ಲಿ ಇರುವ ರಾಜಕಾರಿಣಿಗಳಿಗೆ ದೇಣಿಗೆ ರೂಪದಲ್ಲಿ ನೀಡುತ್ತಾ ಬರಲಾಯಿತು. ಇದು ಅವ್ಯಾಹತವಾಗಿ 7 ದಶಕಗಳ ಕಾಲ ನೆಡೆಯಿತು ಎಂದರೆ ನಮ್ಮ ಕೇಂದ್ರ ಸರಕಾರವನ್ನ ವಹಿಸಿಕೊಂಡ ಜನರ ವ್ಯಾವಹಾರಿಕ ಜ್ಞಾನದ ಬಗ್ಗೆ ಸಂಶಯ ಹುಟ್ಟಿಸುವಷ್ಟು. ಇರಲಿ. 

ಜಮ್ಮು ಮತ್ತು ಕಾಶ್ಮೀರ ಇದೀಗ ನಿಜ ಅರ್ಥದಲ್ಲಿ ಭಾರತದ ಭಾಗವಾಗಿದೆ. ಇದರಿಂದ ಕಣಿವೆ ರಾಜ್ಯಗಳಲ್ಲಿ ಏನೆಲ್ಲಾ ಬದಲಾವಣೆ ಆಗಬಹದು? ಎನ್ನುವುದರ ಬಗ್ಗೆ ಅವಲೋಕನ ಮಾಡೋಣ. 
  1. ಜಿಎಸ್ಟಿ 9 ಜುಲೈ 2017ರಿಂದಲೇ ಜಾರಿಗೆ ಬಂದಿದೆ. ಹೌದು ಗಮನಿಸಿ ದೇಶದಾದಂತ್ಯ 1 ನೇ ಜುಲೈ 2017 ರಲ್ಲಿ ಜಾರಿಗೆ ಬಂದ ಏಕರೂಪ ತೆರಿಗೆ ಸಂಗ್ರಹ ವಿಧಾನವಾದ ಜಿಎಸ್ಟಿ ಯನ್ನ ಒಪ್ಪಿಕೊಂಡ ಕೊನೆಯ ರಾಜ್ಯವಾಗಿ ಜಮ್ಮು ಮತ್ತು ಕಾಶ್ಮೀರ 9 ನೇ ಜುಲೈ 2019 ರಲ್ಲಿ ಇದಕ್ಕೆ ಸಹಿಹಾಕಿದ್ದವು. ತೆರಿಗೆ ಸಂಗ್ರಹದಲ್ಲಿ ಇರಬಹದುದಾದ ಲೋಪದೋಷಗಳ ಆಡಿಟ್ ಮಾಡಲು ಅಲ್ಲಿಗೆ ಇಲ್ಲಿಯವರೆಗೆ ಯಾರೂ ಹೋದ ಉದಾಹರಣೆಯಿಲ್ಲ. ಇಂದಿನಿಂದ ನಿಜ ಅರ್ಥದಲ್ಲಿ ಈ ರಾಜ್ಯಗಳು ಭಾರತದ ಅಂಗವಾಗಿವೆ. ಹೀಗಾಗಿ ತೆರಿಗೆ ಸಂಗ್ರಹವನ್ನ ಇತರ ರಾಜ್ಯಗಳಂತೆಯೇ ಶಿಸ್ತು ಮತ್ತು ಕಾನೂನು ಬದ್ಧವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದರಿಂದ ಕೇಂದ್ರದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟ ಕಡಿಮೆಯಾಗುತ್ತದೆ. 
  2. ಇಲ್ಲಿನ ನೆಲವನ್ನ ಭಾರತದ ಇತರ ರಾಜ್ಯದ ಜನರು ಕೊಳ್ಳುವಂತಿರಲಿಲ್ಲ. ಇದರಿಂದ ಕಣಿವೆ ರಾಜ್ಯದಲ್ಲಿ ನೆಲದ ಬೆಲೆ ಹೇಳಿಕೊಳ್ಳುವ ಮಟ್ಟಕ್ಕೆ ಏರಿಲ್ಲ. ಭಾರತಕ್ಕೆ ಭಾರತವೇ ರಿಯಲ್ ಎಸ್ಟೇಟ್ ಬೂಮ್ ನಲ್ಲಿ ಮಿಂದೆದ್ದರೆ ಕಣಿವೆ ರಾಜ್ಯ ಮಾತ್ರ ತಾವೇ ಹಾಕಿಕೊಂಡ ನಿಬಂಧನೆಗಳಿಂದ ಆರ್ಥಿಕವಾಗಿ ಲಾಭ ಪಡೆಯಲು ವಿಫಲವಾಗಿತ್ತು. ಇದೀಗ ಯಾರು ಬೇಕಾದರೂ ಕಣಿವೆ ರಾಜ್ಯದಲ್ಲಿ ನೆಲ ಕೊಳ್ಳುವ ಅವಕಾಶವಿದೆ. ಹೇಳಿಕೇಳಿ ಈ ಕಣಿವೆ ರಾಜ್ಯವನ್ನು ಭೂಸ್ವರ್ಗ, ಭಾರತದ ಸ್ವಿಸ್ ಎಂದೆಲ್ಲಾ ಕರೆಯಲಾಗುತ್ತದೆ. ಉದ್ಯಮಿಗಳು ಮತ್ತು ವ್ಯಾಪಾರಿಗಳು ಇಲ್ಲಿ ನೆಲವನ್ನ ಕೊಂಡು ನೆಲಸಲು ಪ್ರಾರಂಭಿಸುತ್ತಾರೆ. ಇದು ತಕ್ಷಣ ಆಗದಿದ್ದರೂ ಆರು ತಿಂಗಳಿಂದ ವರ್ಷದ ವೇಳೆಯಲ್ಲಿ ರಿಯಲ್ ಎಸ್ಟೇಟ್ ಬೆಲೆ ಏರುವುದರಲ್ಲಿ ಸಂಶಯವಿಲ್ಲ. ಇದರಿಂದ ಅಲ್ಲಿನ ಸ್ಥಳೀಯರು ಧನಿಕರಾಗುತ್ತಾರೆ. 
  3. ಟೂರಿಸಂ ಹೆಚ್ಚಾಗುವ ಸಾಧ್ಯತೆಗಳು ಕೂಡ ಬಹಳ ಹೆಚ್ಚು: ಗಮನಿಸಿ, ಲಡಾಕ್ ಪ್ರದೇಶಕ್ಕೆ ಈಗಾಗಲೇ ಟೂರಿಸಂ ಬಹಳವಿದೆ. ಜಮ್ಮು-ಕಾಶ್ಮೀರ ಪ್ರದೇಶದಲ್ಲೂ ಕೆಲವೊಂದು ಪ್ರಾಂತ್ಯಗಳನ್ನ ಹೊರತುಪಡಿಸಿ ಎಲ್ಲವೂ ಶಾಂತವಾಗೇ ಇದೆ. ಇದೀಗ ಕಣಿವೆ ರಾಜ್ಯ ವಿಶೇಷ ಮಾನ್ಯತೆಯನ್ನ ಕಳೆದುಕೊಂಡಿರುವುದರಿಂದ ಇಲ್ಲಿ ಭಾರತದ ಕೇಂದ್ರ ಸರಕಾರದ ಹಿಡಿತ ಹೆಚ್ಚಾಗಲಿದೆ. ಇಲ್ಲಿ ಟೆರರಿಸಂ ಎನ್ನುವ ಭಯವನ್ನ ಅಳಿಸಿಹಾಕಿ ಬಿಟ್ಟರೆ ಪ್ರವಾಸೋದ್ದಿಮೆ ಇಲ್ಲಿ ಸೊಗಸಾಗಿ ಬೆಳೆಯುತ್ತದೆ. ಗಮನಿಸಿ ಪ್ರವಾಸೋದ್ದಿಮೆ ಬೆಳೆದರೆ ಇಲ್ಲಿನ ಸ್ಥಳೀಯರಿಗೆ ಕೆಲಸ ಹೆಚ್ಚಾಗುತ್ತದೆ. ಹಣದ ಹರಿವು ಕೂಡ ಹೆಚ್ಚಾಗುತ್ತದೆ. ಸಮಯ ಕಳೆದಂತೆ ಭಾರತದ ಇತರ ರಾಜ್ಯಗಳಿಗಿಂತ ಈ ರಾಜ್ಯಗಳು ಸಂವೃದ್ಧವಾಗುತ್ತವೆ. ಇಲ್ಲಿನ ಜನರ ಜೀವನ ಮಟ್ಟ ಬಹುಬೇಗ ಸುಧಾರಿಸುತ್ತದೆ. 
  4. ಕಣಿವೆ ರಾಜ್ಯದ ಆರ್ಥಿಕತೆ ನಿಂತಿರುವುದು ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ಉದ್ದಿಮೆಗಳಿಂದ ಮತ್ತು ಹ್ಯಾಂಡ್ಕ್ರಾಫ್ಟ್ ಗಳಿಂದ. ಪ್ರವಾಸೋದ್ದಿಮೆ ಬೆಳೆದಂತೆಲ್ಲ ಇಲ್ಲಿನ ಕೃಷಿ ಉತ್ಪನ್ನಗಳಾದ ಚೀಸ್, ಸೇಬುಗಳಿಗೆ ಇನ್ನಷ್ಟು ಬೇಡಿಕೆ ಹೆಚ್ಚಾಗುತ್ತದೆ. ಕಲಾಕುಸಿರಿ ವಸ್ತುಗಳು, ಶಾಲು ಇವೆಲ್ಲವುಗಳ ಬೇಡಿಕೆ ಹೆಚ್ಚಾಗುತ್ತದೆ. ಜೊತೆಗೆ ಕೃಷ್ಟಿಯೇತರ ಕೈಗಾರಿಕೆಗಳು ಕೂಡ ನಿಧಾನವಾಗಿ ಇಲ್ಲಿ ತಲೆಯೆತ್ತುತ್ತವೆ. ಇವೆಲ್ಲವೂ ಸ್ಥಳೀಯರ ಬದುಕನ್ನ ಹಸನಾಗಿಸುತ್ತವೆ. ಅತ್ಯಂತ ಕಡಿಮೆ ಸಮಯದಲ್ಲಿ ಕಣಿವೆ ರಾಜ್ಯದ ಜನರು ಆರ್ಥಿಕವಾಗಿ ಸ್ಥಿತಿವಂತರಾಗುತ್ತಾರೆ. 
  5. ಸರಕಾರಿ ಉದ್ಯೋಗದಲ್ಲಿ ಸ್ಥಳೀಯರು ಮಾತ್ರ ಅವಕಾಶವಿತ್ತು. ಇದರಿಂದ ಇತರ ರಾಜ್ಯಗಳಿಂದ ಇಲ್ಲಿಗೆ ವಲಸೆ ಇಲ್ಲವೆನ್ನವಷ್ಟು ಕಡಿಮೆಯಿತ್ತು. ಜೊತೆಗೆ ಯಾವುದೇ ಹೂಡಿಕೆದಾರ ಇಲ್ಲಿ ಹಣವನ್ನ ಹೂಡಲು ಹಿಂಜರಿಯುತ್ತಿದ್ದರು. ಕಾರಣ ಎಲ್ಲಕ್ಕೂ ಸ್ಥಳೀಯರು ಮೊದಲು ಎನ್ನುವ ನೀತಿ ಕಾರಣವಾಗಿತ್ತು. ಗಮನಿಸಿ ಇಲ್ಲಿ ಹೂಡಿಕೆ ಮಾಡಿದವನು ಇಲ್ಲಿಯ ನೆಲ ಕೊಳ್ಳುವಹಾಗಿಲ್ಲ. ತನಗೆ ಬೇಕಾದ ರೀತಿಯಲ್ಲಿ ತನ್ನ ವ್ಯಾಪಾರ ನಡೆಸುವಾಗಿಲ್ಲ. ಹೀಗೆ ಇಲ್ಲ ಎನ್ನುವುದರ ಪಟ್ಟಿಯೇ ದೊಡ್ಡದಿತ್ತು. ಇದೀಗ ಕಣಿವೆ ರಾಜ್ಯಗಳು ಭಾರತದ ಇತರ ರಾಜ್ಯಗಳಂತೆ ಮುಕ್ತವಾಗಿವೆ. ಮುಂದಿನ ದಿನಗಳಲ್ಲಿ ಇಲ್ಲಿ ಹೆಚ್ಚಿನ ಹೂಡಿಕೆಯನ್ನ ನಿರೀಕ್ಷಿಸಬಹದು. 
  6. ಎಲ್ಲಕ್ಕೂ ಮುಖ್ಯವಾಗಿ ಒಮ್ಮೆ ಈ ನೆಲದಲ್ಲಿ ಶಾಂತಿ ನೆಲಸಿ, ಇಲ್ಲಿನ ಜನರ ಆರ್ಥಿಕ ಸ್ಥಿತಿ ಸುಧಾರಿಸಿದರೆ ಅವರ ಭಾರತದ ಬಗ್ಗೆ ಧೋರಣೆ ಬದಲಾಗುತ್ತದೆ. ಹಾಗೆ ನೋಡಲು ಹೋದರೆ ಜಮ್ಮು-ಕಾಶ್ಮೀರದ ಬಹಳಷ್ಟು ಜನ ಕೇಂದ್ರ ಸರಕಾರ ಈ ನಿರ್ಧಾರವನ್ನ ಸ್ವಾಗತಿಸಿದ್ದಾರೆ. ಭಾರತದ ಮುಕುಟದಂತೆ ಇರುವ ಜಮ್ಮು ಕಾಶ್ಮೀರದ ಜನರ ನಿಯತ್ತು ಭಾರತದ ಪರವಾಗಿಬಿಟ್ಟರೆ  ಪಾಕಿಸ್ತಾನದ ಉಪಟಳ ಕಡಿಮೆಯಾಗುತ್ತದೆ. ಪಾಕಿಸ್ತಾನ ಹಲ್ಲು ಕಿತ್ತ ಹಾವಿನಂತೆ ಬುಸುಗುಡುವುದು ಬಿಟ್ಟು ಬೇರೇನೂ ಮಾಡಲಾಗದ ಸ್ಥಿತಿ ತಲುಪುತ್ತದೆ. 
  7. ಕಣಿವೆ ರಾಜ್ಯಗಳ ಅಭಿವೃದ್ಧಿ ಭಾರತದ ಇತರ ರಾಜ್ಯಗಳ ಅಭಿವೃದ್ಧಿಗೂ ಅಪರೋಕ್ಷವಾಗಿ ಸಹಾಯ ಮಾಡುತ್ತದೆ. ದೇಶದಲ್ಲಿ ಹೆಚ್ಚಿದ ಶಾಂತಿ ಹೂಡಿಕೆದಾರರ ಮನದಲ್ಲಿ ಭಾರತಕ್ಕೆ  ಹೂಡಿಕೆದಾರರ ಡಾರ್ಲಿಂಗ್ ಪಟ್ಟ ನೀಡುತ್ತದೆ. ಹೀಗಾಗಿ ಭಾರತದ ಸರ್ವೋತೋಮುಖ ಬೆಳವಣಿಗೆ ಕೂಡ ಇದರಿಂದ ಸಾಧ್ಯವಾಗುತ್ತದೆ. 
ಮುಂದಿನ ಆರು ತಿಂಗಳು ಕಣಿವೆ ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನೆಡೆಯದಂತೆ ನೋಡಿಕೊಳ್ಳುವ ಜವಾಬ್ಧಾರಿ ಕೇಂದ್ರ ಸರಕಾರದ ಮೇಲಿದೆ. ಇದು ತಾತ್ಕಾಲಿಕ ಹೊಣೆಯಲ್ಲ ಮುಂದಿನ ದಿನಗಳಲ್ಲಿ ಕೂಡ ಇಲ್ಲಿ ವ್ಯಾಪಾರ ವಹಿವಾಟು ಸಮೃದ್ಧವಾಗಿ ನೆಡೆಯುವಂತೆ ನೋಡಿಕೊಳ್ಳಬೇಕಿದೆ. ಜೊತೆಗೆ ಭಯೋತ್ಪಾದನೆಯ ಭಯವನ್ನ ಅಳಿಸಬೇಕಾಗಿದೆ. ಇದಾದರೆ ಪ್ರವಾಸ ವೃದ್ಧಿಯಾಗುತ್ತದೆ. 

ಇವೆಲ್ಲವೂ ಚೈನ್ ಲಿಂಕ್ ಇದ್ದಹಾಗೆ, ಒಂದು ಸರಿಯಾದರೆ ಮತ್ತೊಂದು ಸರಿಯಾಗುತ್ತದೆ. ಹೀಗಾಗಿ ಪ್ರಥಮ ಒಂದೆರೆಡು ವರ್ಷ ಅತ್ಯಂತ ಗಮನ ಹರಿಸಿ ಕಣಿವೆ ರಾಜ್ಯವನ್ನ ಕಾಪಾಡಿದರೆ, ಅಲ್ಲಿನ ಜನರ ಕೈಯಲ್ಲಿ ತಾವೇ ದುಡಿದ ಹಣ ಹರಿದಾಡಲು ಶುರು ಮಾಡಿದರೆ ಅಲ್ಲಿಗೆ ಎಲ್ಲವೂ ಸುಖಾಂತ್ಯವಾಗುತ್ತದೆ. ಕೇಂದ್ರ ಸರಕಾರ ತನ್ನ ಇಂದಿನ ಬದ್ಧತೆಯನ್ನ ಕಾಪಾಡಿಕೊಂಡರೆ ಇದ್ಯಾವುದೂ ಅಸಾಧ್ಯವಲ್ಲ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Stay up to date on all the latest ಅಂಕಣಗಳು news with The Kannadaprabha App. Download now
facebook twitter whatsapp