ಹೂಡಿಕೆಯೆಂದರೆ ಅದು ಕೇವಲ ಹಣ ಮಾತ್ರವಲ್ಲ! 

ಗೊತ್ತಿರದ ಭವಿಷ್ಯಕ್ಕೆ, ಇನ್ನೂ ಹುಟ್ಟೇ ಇರದ ಸಂಸ್ಥೆಯಲ್ಲಿ ಯಶಸ್ಸು ಗಳಿಸುವ ಮಟ್ಟಕ್ಕೆ ಮಕ್ಕಳ ಬೆಳೆಸುವುದಕ್ಕೆ ಪೋಷಕರು ಭಿನ್ನ ದಾರಿ ಹಿಡಿಯಬೇಕಾದ ಅವಶ್ಯಕತೆಯಿದೆ. ಪೋಷಕರು ಏನೆಲ್ಲಾ ಮಾಡಬಹದು ಎನ್ನುವುದರ ಪಟ್ಟಿ ಹೀಗಿದೆ.
ಹೊಡಿಕೆಯೆಂದರೆ ಅದು ಕೇವಲ ಹಣ ಮಾತ್ರವಲ್ಲ! 
ಹೊಡಿಕೆಯೆಂದರೆ ಅದು ಕೇವಲ ಹಣ ಮಾತ್ರವಲ್ಲ! 

ಬಹಳ ವರ್ಷಗಳ ನಂತರ ಬೆಂಗಳೂರು ನಗರದ ಆಟೋದಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿತ್ತು. ಪ್ರಯಾಣದ ಸಮಯವನ್ನ ಸದುಪಯೋಗಪಡಿಸಿಕೊಳ್ಳಲು ಆಟೋ ಚಾಲಕನನ್ನ ಮಾತಿಗೆಳೆದೆ. ತುಮಕೂರು ಜಿಲ್ಲೆಯವರಂತೆ ಬೆಂಗಳೂರಿಗೆ ಬಂದು ನಾಲ್ಕು ವರ್ಷವಾಯಿತಂತೆ ಮಾಸಿಕ ಎಲ್ಲಾ ಖರ್ಚು ಕಳೆದು ಸರಾಸರಿ 25 ಸಾವಿರ ರೂಪಾಯಿ ಗಳಿಸುತ್ತಾರಂತೆ. ಅದರಲ್ಲಿ ಅವರ ಮನೆಯ ಗಾಡಿ ಓಡಿಸಬೇಕು. ಒಂದನೇ ತರಗತಿಗೆ ಹೋಗುವ ಒಬ್ಬ ಮಗನಿದ್ದಾನಂತೆ. ಇಷ್ಟು ಕೇಳಿದ ನಂತರ ಸಹಜವಾಗೇ ನನಗೆ ಕುತೊಹಲ ಉಂಟಾಗಿ ಮಗುವಿನ ಶಾಲೆಗೆ ಎಷ್ಟು ಹಣ ಕಟ್ಟುತ್ತೀರಿ? ಎಂದು ಕೇಳಿದೆ. ಆತ ವಾರ್ಷಿಕ 60 ಸಾವಿರ ರೂಪಾಯಿ ಎಂದರು . ಅಂದರೆ ಗಮನಿಸಿ ಇವರ ಆದಾಯದ 20 ಪ್ರತಿಶತ ಮಗುವಿನ ಓದಿನ ಖರ್ಚಿಗಾಗಿ ವ್ಯಯಿಸುತ್ತಾರೆ. ಮನೆ ಬಾಡಿಗೆ ಜೊತೆಗೆ ಇತರ ಖರ್ಚುಗಳು ಬೇರೆ ಇಷ್ಟೆಲ್ಲಾ ಹೇಗೆ ನಿಭಾಯಿಸುತ್ತೀರಿ ಎಂದೆ. ಆತ ನಿರ್ಲಿಪ್ತನಾಗಿ ನಾಕು ವರ್ಷದಲ್ಲಿ ನಾಲ್ಕು ಕಾಸು ಉಳಿಸಲಾಗಿಲ್ಲ ಎಂದರು. 

ನನ್ನ ಸ್ನೇಹಿತರೊಬ್ಬರು ಟೆಕ್ಕಿ, ಅವರ ಪತ್ನಿಯೂ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಾರೆ. ತೆರಿಗೆ ಕಟ್ಟಿದ ನಂತರ ಹತ್ತಿರಹತ್ತಿರ ವಾರ್ಷಿಕ 16ಲಕ್ಷ ವರಮಾನ ಹೊಂದಿರುವ ಪುಟ್ಟ ಸಂಸಾರ ಇವರದು. ಇವರಿಗೂ ಕೂಡ ಈ ವರ್ಷವಷ್ಟೇ ಒಂದನೇ ತರಗತಿಗೆ  ಸೇರಿದ ಒಂದು ಪುಟಾಣಿ ಹೆಣ್ಣು ಮಗುವಿದೆ. ಮೂರು ದಿನದ ಹಿಂದೆ ಮಾತಿಗೆ ಸಿಕ್ಕಿದ್ದರು. ಮಾತು ಕೊನೆಗೆ ಮಗುವಿನ ಶಾಲೆಯ ಬಗ್ಗೆ ಬಂದಿತು. ಯಾವ ಶಾಲೆ? ಎಷ್ಟು ಫೀಸು? ಎನ್ನುವುದು ಸಹಜವಾಗೇ ಮಾತಿನಲ್ಲಿಅಡಕವಾಗಿತ್ತು. ಎಲೆಕ್ಟ್ರಾನಿಕ್ ಸಿಟಿಯ ಬಳಿಯ ಪ್ರಸಿದ್ಧ ಇಂಟರ್ನ್ಯಾಷನಲ್ ಶಾಲೆಯದು, ಫೀಸು ವಾರ್ಷಿಕ ಮೂರು ಲಕ್ಷ ಐವತ್ತು ಸಾವಿರವಂತೆ!! ನನ್ನಲ್ಲಿರುವ ಲೆಕ್ಕಿಗ ತಕ್ಷಣ ಕೆಲಸಕ್ಕಿಳಿದಿದ್ದ, ಗಮನಿಸಿ ತಮ್ಮ ಆದಾಯದ 22 ಪ್ರತಿಶತ ಹಣವನ್ನ ಮಗುವಿನ ವಿಧ್ಯಾಭಾಸಕ್ಕೆ ವ್ಯಯಿಸುತ್ತಿದ್ದಾರೆ. 

ನನ್ನ ಇನ್ನೊಬ್ಬ ಸ್ನೇಹಿತನ ಮನೆಯದು ಕೂಡಾ ಅದೇ ಕಥೆ. ಪತಿ ಪತ್ನಿ ಇಬ್ಬರೂ ಇಂಜಿನಿಯರ್ ಗಳು ಆದಾಯವೇನೋ ಚೆನ್ನಾಗಿದೆ. ಇಬ್ಬರು ಮಕ್ಕಳು, ಅವರ ಶಾಲೆಯ ವೆಚ್ಚ ಕೂಡ ಆದಾಯದ 20 ಪ್ರತಿಶತಕ್ಕಿಂತ ಹೆಚ್ಚಾಗಿದೆ. 

ಮೇಲಿನ ಮೂರು ಪ್ರಕರಣವನ್ನ ಇಲ್ಲಿ ನಮೂದಿಸುವ ಉದ್ದೇಶ ಸ್ಪಷ್ಟವಾಗಿದೆ. ಆದಾಯ ಎಷ್ಟೇ ಇರಲಿ ಮಕ್ಕಳ ವಿದ್ಯಾಭಾಸಕ್ಕೆ ಎಂದು ಮಾಡುವ ಖರ್ಚು ಬಹಳ ಹೆಚ್ಚಾಗಿದೆ ಎನ್ನುವುದನ್ನ ತಿಳಿಸುವುದು. ಇರಲಿ ಇದೇನು ಹೊಸ ವಿಷಯವಲ್ಲ ಇದು ಮನೆ ಮನೆಯ ಕಥೆ. ಈಗ ಇಲ್ಲಿ ಹೇಳ ಹೊರಟ ವಿಷಯ ಬೇರೆಯದೇ ಇದೆ. 

ಗಮನಿಸಿ ನೋಡಿ ಇಂದಿಗೆ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ತಮ್ಮ ಶಿಕ್ಷಣ ಪೂರ್ತಿ ಮುಗಿಸಿ ಕೆಲಸಕ್ಕೆ ಸೇರುವ ಸಂಸ್ಥೆ ನೂರಕ್ಕೆ ನೂರು ಪ್ರತಿಶತ ಟೆಕ್ನಾಲಜಿ ಕಂಪನಿಯಾಗಿರುತ್ತದೆ ಇದರಲ್ಲಿ ಸಂಶಯ ಬೇಡ. ಆದರೆ ಚಕಿತಗೊಳಿಸುವ ವಿಷಯವೇನು ಗೊತ್ತೇ? ನಿಮ್ಮ ಮಗ ಅಥವಾ ಮಗಳು ಕೆಲಸ ಮಾಡಬಹದಾದ ಆ ಸಂಭಾವ್ಯ ಟೆಕ್ನಾಲಜಿ ಸಂಸ್ಥೆ ಇನ್ನು ಹುಟ್ಟೇ ಇಲ್ಲ!! ಅಂದರೆ ಆ ಹೊಸ ಟೆಕ್ನಾಲಜಿ ಇನ್ನು ಅವಿಷ್ಕಾರವಾಗಿಲ್ಲ. ಇನ್ನೂ ಗೊತ್ತಿರದ ಆ ಹೊಸ ಟೆಕ್ನಾಲಜಿ ಕಂಪನಿಯಲ್ಲಿ ಕೆಲಸ ಮಾಡಲು ಬೇಕಾದ ಬುನಾದಿ ನಮ್ಮ ಶಾಲೆಯಲ್ಲಿ ಹಾಕುತ್ತಿದ್ದಾರೆಯೇ? ಇಲ್ಲ...! ನಮ್ಮ ಶಿಕ್ಷಣ ಇಂದು ಮಕ್ಕಳಿಗೆ ಏನು ಹೇಳಿಕೊಡುತ್ತಾ ಇದ್ದಾರೆ ಅದ್ಯಾವುದೂ ಅವರ ನಾಳಿನ ಭವಿಷ್ಯಕ್ಕೆ ಎಳ್ಳುಕಾಳಿನಷ್ಟೂ ಪ್ರಯೋಜನವಿಲ್ಲ!! ಅಂದ ಮೇಲೆ ಪೋಷಕರು ತಮ್ಮ ಆದಾಯದ ಸರಾಸರಿ 20 ಪ್ರತಶತ ಹಣವನ್ನ ಸುಮ್ಮನೆ ಅರ್ಥವಿಲ್ಲದೆ ಖರ್ಚು ಮಾಡುತ್ತಿದ್ದಾರೆ ಎಂದಾಯ್ತು. 

ಗೊತ್ತಿರದ ಭವಿಷ್ಯಕ್ಕೆ, ಇನ್ನೂ ಹುಟ್ಟೇ ಇರದ ಸಂಸ್ಥೆಯಲ್ಲಿ ಯಶಸ್ಸು ಗಳಿಸುವ ಮಟ್ಟಕ್ಕೆ ಮಕ್ಕಳ ಬೆಳೆಸುವುದಕ್ಕೆ ಪೋಷಕರು ಭಿನ್ನ ದಾರಿ ಹಿಡಿಯಬೇಕಾದ ಅವಶ್ಯಕತೆಯಿದೆ. ಪೋಷಕರು ಏನೆಲ್ಲಾ ಮಾಡಬಹದು ಎನ್ನುವುದರ ಪಟ್ಟಿ ಹೀಗಿದೆ. ನಿಮ್ಮ ಮಕ್ಕಳಿಗೆ ತಕ್ಕಂತೆ ಇದನ್ನ ಪರಿವರ್ತಿಸಿಕೊಳ್ಳುವುದು ಅವಶ್ಯಕ. 

  1.  ಪ್ರಥಮವಾಗಿ ಮಗುವಿನ ಆಸಕ್ತಿ ಏನಿದೆ ಎಂದು ತಿಳಿದುಕೊಳ್ಳಬೇಕು. ಆಸಕ್ತಿ ಇಲ್ಲದ ಮಕ್ಕಳನ್ನ ಸುಮ್ಮನೆ ಓದಿಗೆ ಒತ್ತಾಯ ಮಾಡುವುದು ಎಲ್ಲ ತರಹದಲ್ಲೂ ನಷ್ಟವೇ ಸರಿ. ಅವರ ಆಸಕ್ತಿ ಮುಖ್ಯವಾಹಿನಿ ಓದಿಗಿಂತ ಭಿನ್ನವಾಗಿದ್ದರೆ ಅದಕ್ಕೆ ಅವರನ್ನ ಸೇರಿಸಿ, ಅಲ್ಲಿ ಖರ್ಚಾಗಿ ಮಿಕ್ಕ ಹಣವನ್ನ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋದರೆ ನಿಮ್ಮ ಮಗ ಅಥವಾ ಮಗಳು 20 ನೇ ವಯಸ್ಸಿಗೆ ಬರುವ ವೇಳೆಗೆ ಕೋಟ್ಯಾಧಿಪತಿಯಾಗಿರುತ್ತಾರೆ. ಸುಮ್ಮನೆ ಆ ಹಣವನ್ನ ಶಿಕ್ಷಣ ಸಂಸ್ಥೆಗೆ ಸುರಿಯಬೇಡಿ. 
  2. ನಿಮ್ಮ ಮಕ್ಕಳ ಮೇಲೆ ನಿಗಾ ಇರಲಿ. ಹಣ ತೆತ್ತು ಶಾಲೆಗೆ ಸೇರಿಸಿದರೆ ಕೆಲಸ ಮುಗಿಯಲಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಜಿಯೋ ಸಂಸ್ಥೆ ಬ್ರಾಡ್ ಬ್ಯಾಂಡ್ ಕ್ಷೇತ್ರಕ್ಕೂ ಲಗ್ಗೆ ಇಡಲಿದೆ. ಇಲ್ಲಿಯವರೆಗೆ ಸ್ಟ್ರೀಮಿಂಗ್ ನಲ್ಲಿ ಇದ್ದ ನಿಧಾನಗತಿ ಮಾಯವಾಗಲಿದೆ. ಏಕೆಂದರೆ ಇವರು ಆಪ್ಟಿಕ್ ಫೈಬರ್ ಉಪಯೋಗಿಸಿ ಹೊಸ ಸೇವೆಯನ್ನ ನೀಡಲಿದ್ದಾರೆ. ಇದು ಲಾಗೂ ಅದ  ಹಲವು ತಿಂಗಳಲ್ಲಿ ಭಾರತವನ್ನ ಪೂರ್ಣ ಆಕ್ರಮಿಸಿ ಬಿಡುತ್ತದೆ ಇದರಲ್ಲಿ ಸಂಶಯವಿಲ್ಲ. ಇದನ್ನ ಏಕೆ ಪ್ರಸ್ತಾಪಿಸಿದೆ ಎಂದರೆ ನಮ್ಮ ಮಕ್ಕಳು ಇನ್ನಷ್ಟು-ಮತ್ತಷ್ಟು ಗ್ಯಾಡ್ಜೆಟ್ ಗಳ ದಾಸರಾಗುತ್ತಾರೆ ಎನ್ನುವುದನ್ನ ತಿಳಿಸುವುದಕ್ಕೆ. ನಿಮ್ಮ ಅಕ್ಕ-ಪಕ್ಕದ ಮಕ್ಕಳನ್ನ ಗಮನಿಸಿ  ನೋಡಿ ಅಷ್ಟೇ ಏಕೆ ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅವರನ್ನ ಗಮನಿಸಿ ಅವರೆಲ್ಲರೂ ಗ್ಯಾಡ್ಜೆಟ್ ಗಳ ಗುಲಾಮರಾಗಿದ್ದರೆ. ಇದು ಭಾರತ ಮಾತ್ರವಲ್ಲ ಇದೊಂದು ಅಂತರರಾಷ್ಟ್ರಿಯ ಪಿಡುಗು. ಮಕ್ಕಳಿಗೆ ಕಥೆ ಹೇಳಬೇಕು, ಅವರಿಂದ ಕಥೆ ಹೇಳಿಸಬೇಕು, ಪುಸಕ್ತ ಓದಿ ಎಂದು ಪ್ರೇರೇಪಿಸಬೇಕು. ದುಡ್ಡಿದೆ ಎಂದು ಕಿಂಡಲ್ ಕೊಡಿಸುವುದು ಬಿಡಬೇಕು. 
  3. ಆದಷ್ಟೂ ಹೆಚ್ಚು ಸಮಯವನ್ನ ಮಕ್ಕಳ ಜೊತೆ ಕಳೆಯಬೇಕು. ಕೇವಲ ಹಣವನ್ನ ಅವರ ವಿದ್ಯಾಭ್ಯಾಸದ ಮೇಲೆ ಇನ್ವೆಸ್ಟ್ ಮಾಡಿದ್ದೇವೆ ಎಂದರೆ ಸಾಲದು. ಅವರ ಮೇಲೆ ಟೈಮ್ ಕೂಡ ಇನ್ವೆಸ್ಟ್ ಮಾಡಬೇಕು. ನಿಮಗಿದು ಗೊತ್ತೇ? 10 ವಯಸ್ಸಿನವರೆಗೆ ನಿಮ್ಮ ಮಕ್ಕಳಿಗೆ ದಿನದಲ್ಲಿ ಕನಿಷ್ಟ 10-15 ಅಪ್ಪುಗೆ ಜೊತೆಗೆ ಮೆಚ್ಚುಗೆಯ ಮಾತು ಬೇಕಂತೆ!!. ಮಗು ಎದ್ದ ತಕ್ಷಣ, ಶಾಲೆಗೆ ಹೊರಟಾಗ, ಶಾಲೆಯಿಂದ ಬಂದಾಗ, ಹೀಗೆ ಅವುಗಳಿಗೆ ಪೋಷಕರ ಸ್ಪರ್ಶ ಬೇಕಂತೆ, ಹೀಗೆ ಪೋಷಕರ ಪೂರ್ಣ ಪ್ರೀತಿ ಮತ್ತು ಸಮಯವನ್ನ ಪಡೆದ ಮಕ್ಕಳು ಶಿಕ್ಷಣ ಮಾತ್ರವಲ್ಲ ಎಲ್ಲಾ ಕ್ಷೇತ್ರದಲ್ಲೂ ಜಯಗಳಿಸುತ್ತಾರೆ. ಮೇಲೆ ಹೇಳಿದ ಮೂರು ಉದಾಹರಣೆಯಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಜೊತೆ ಕಳೆಯಲು ಸಮಯವಿಲ್ಲ. ದುಡಿಯಬೇಕು-ವ್ಯಯಿಸಬೇಕು ಎನ್ನುವ ವಿಷ ವರ್ತುಲದಲ್ಲಿ ಸಿಲುಕಿದವರು ಅವರು. ಇದರಲ್ಲಿ ಸಿಲುಕಿದವರು ಕೇವಲ ಆ ಮೂರು ಕುಟುಂಬವಲ್ಲ ಬಹುತೇಕ ಎಲ್ಲರ ಮನೆಯ ಕಥೆಯೂ ಇದೆ. ಇದನ್ನ ಮುರಿಯಬೇಕಿದೆ. 
  4. ಕಂಡಿರದ ಹೊಸ ಸವಾಲಿಗೆ ಮಕ್ಕಳನ್ನ ಮಾನಸಿಕವಾಗಿ ಸಿದ್ಧ ಮಾಡಬೇಕು. ಏನಾದರೂ ಬರಲಿ ಅದನ್ನ ಎದುರಿಸುತ್ತೇನೆ ಎನ್ನುವ ಮನೋಬಲವನ್ನ ಹೆಚ್ಚಿಸಬೇಕು. ಇಂದು ನಮ್ಮ ಮುಖ್ಯವಾಹಿನಿ ಶಾಲೆಯಲ್ಲಿ ಮಕ್ಕಳು ತೆಗೆಯುವ ಅಂಕಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ ಅದರಿಂದ ಏನೂ ಪ್ರಯೋಜನವಿಲ್ಲ. ಪೋಷಕರು ಕೂಡ ಜಿದ್ದಿಗೆ ಬಿದ್ದವರಂತೆ ತಮ್ಮ ಮಕ್ಕಳು 'ಪ್ರಥಮ ಶ್ರೇಣಿ' ಫರ್ಸ್ಟ್ ರಾಂಕ್ ಬರಬೇಕು ಎನ್ನುವ ಬಯಕೆ ಹೊಂದಿದ್ದಾರೆ. ಅಂಕಪಟ್ಟಿಯ ಅಂಕಗಳು ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವುದಿಲ್ಲ. ಆಗೆಲ್ಲಾ ಸಹಾಯ ಮಾಡುವುದು ನಮ್ಮ ಮಕ್ಕಳಿಗೆ ನಾವು ಕಳಿಸಿದ ಸಾಮಾನ್ಯ ಜ್ಞಾನ. ಬದುಕುವ ಕಲೆ, ಧೈರ್ಯ, ಎಲ್ಲವನ್ನೂ ಎದುರಿಸಿ ನಿಲ್ಲುವ ಮನೋಬಲ ಮಾತ್ರ. 
  5. ಕಲಿಕೆಯೊಂದೇ ನಿರಂತರ ಎನ್ನುವ ಮಂತ್ರವನ್ನ ಮಕ್ಕಳಿಗೆ ಹೇಳಿಕೊಡಬೇಕು. ಬದುಕೆಂದರೆ ಶಾಲೆಯಲ್ಲಿ ನೀಡಿದ ಸಿಲಬಸ್ ಅಷ್ಟೇ ಅಲ್ಲ. ಬದುಕು ಅತ್ಯಂತ ವಿಶಾಲವಾದ ಕ್ಯಾನ್ವಾಸ್. ಅದರ ಮೇಲೆ ಚಿತ್ರ ಬರೆದುಕೊಳ್ಳುವ ತಾಕತ್ತು ಮಕ್ಕಳಿಗೆ ಕಲಿಸಬೇಕು. ಕೇವಲ ಶಾಲೆಯ ಪಠ್ಯವನ್ನ ಪಠಿಸಿ ನಂಬರ್ ಒನ್ ಅನ್ನಿಸಿ ಕೊಂಡರೆ ಸಾಲದು. ಬದುಕಿನಲ್ಲಿ ಗೆಲುವುದು ಸಾಧಿಸುವುದು ಮುಖ್ಯ. ಜೊತೆಗೆ ಶಾಲೆಯ ಪಠ್ಯದಲ್ಲೂ ಮುಂದಿದ್ದರೆ ಅದು ಬೋನಸ್. 

ಹೀಗೆ ಇನ್ನು ಹತ್ತಾರು ಅಂಶಗಳನ್ನ ಸೇರಿಸುತ್ತಾ ಹೋಗಬಹದು ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಮಕ್ಕಳೊಂದಿಗೆ ಎಂದೂ ಅಗಲಿಕೆ ಅಂದರೆ ಗ್ಯಾಪ್ ಆಗಲು ಬಿಡಬಾರದು. ಅವರ ನಿತ್ಯ ಜೀವನದಲ್ಲಿ ಆಗುವ ಸಣ್ಣ ಪುಟ್ಟ ಘಟನೆಗಳೂ ಪೋಷಕರಿಗೆ ತಿಳಿಯಬೇಕು. ಹೀಗಾಗಬೇಕಾದರೆ ಅವರು ಮಕ್ಕಳೊಂದಿಗೆ ಹೆಚ್ಚು ಸಮಯ ವ್ಯಯಿಸಬೇಕು. ಮಕ್ಕಳು ಇಂಡಿಪೆಂಡೆಂಟ್ ಆಗುವವರೆಗೆ ಅವರಿಗೆ ಪೋಷಕರ ಹೆಚ್ಚೆಚ್ಚು ಸಮಯದ ಅವಶ್ಯಕತೆ ಇದೆ. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ನಮ್ಮ ಮಾತು ಕೇಳುತ್ತಿಲ್ಲ ಎನ್ನುವ ಸಂಖ್ಯೆ ಅತಿ ಹೆಚ್ಚು. ನೀವು ನಿಮ್ಮ ಮಕ್ಕಳ ಪ್ರಾರಂಭಿಕ ದಿನಗಳಲ್ಲಿ ನಿಮ್ಮ ಟೈಮ್ ಅನ್ನು ಅವರ ಮೇಲೆ ಇನ್ವೆಸ್ಟ್ ಮಾಡಿದ್ದರೆ ಅದರ ಕಥೆ ಬೇರೆ ಇರುತ್ತಿತ್ತು. ನೆನಪಿಡಿ ಹೂಡಿಕೆ ಎಂದರೆ ಅದು ಕೇವಲ ಹಣ ಮಾತ್ರವಲ್ಲ. ಅದು ಟೈಮ್ ಕೂಡ! 

- ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com