ಟೆಲಿಕಾಂ ಕ್ಷೇತ್ರದಲ್ಲಿ ಸದ್ದಿಲ್ಲದೇ ಅಡಗಲಿದೆಯೇ ಪೈಪೋಟಿ ? 

ಮಾರುಕಟ್ಟೆ ಮಂದ ಎನ್ನುವ ಕೂಗುಗಳ ನಡುವೆ ರಿಲೈಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಸೆಪ್ಟೆಂಬರ್ 5, 2019 ರಂದು ಭಾರತದ ಎಲ್ಲಾ ಮನೆಯನ್ನ ಹೊಕ್ಕಲು ತಯಾರಾಗಿದೆ. ಇದರ ಸೇವೆಯನ್ನ ಪಡೆಯಲು ನೊಂದಣಿ ಮಾಡಿಸಿಕೊಳ್ಳಲು ಜನ ಆಗಲೇ ಮುಗಿ ಬೀಳುತ್ತಿದ್ದಾರೆ.

Published: 22nd August 2019 01:25 AM  |   Last Updated: 22nd August 2019 01:25 AM   |  A+A-


Hanaclasu: Here is all you need to know about the competition in Indian telecom industry

ಟೆಲಿಕಾಂ ಕ್ಷೇತ್ರದಲ್ಲಿ ಸದ್ದಿಲ್ಲದೇ ಅಡಗಲಿದೆಯೇ ಪೈಪೋಟಿ ?

Posted By : Srinivas Rao BV
Source : Online Desk

ಟೆಲಿಕಾಂ ಕ್ಷೇತ್ರದಲ್ಲಿ ಜಿದ್ದಿನ ಪೈಪೋಟಿ ನಡೆಯುತ್ತಿರುವುದು ನಮಗೆಲ್ಲ ಗೊತ್ತಿರುವ ವಿಷಯವಾಗಿದೆ. ಟಾಟಾ ಡೊಕೊಮೊ ಸದ್ದಿಲ್ಲದೇ ಅಡಗಿ ಹೋದದ್ದು ಇದಕ್ಕೊಂದು ನಿದರ್ಶನ. ಭಾರತಿ ಏರ್ಟೆಲ್, ಏರ್ಸೆಲ್ ಇವುಗಳು ಕೂಡ ಪೈಪೋಟಿಯಲ್ಲಿ ಭಾಗಿಗಳು. ಬಿಎಸ್ಎನ್ಎಲ್  ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾಗಿದ್ದು ಇದೀಗ ಕುಂಟುತ್ತಾ, ತೆವಳುತ್ತಾ ಸಾಗುತ್ತಿರುವುದು ಕೂಡ ಎಲ್ಲರಿಗೂ ಇಂದು ಹಳೆಯ ವಿಷಯ. ಇವೆಲ್ಲವುಗಳ ನಡುವೆ ಮಾರುಕಟ್ಟೆ ಮಂದ ಎನ್ನುವ ಕೂಗುಗಳ ನಡುವೆ  ರಿಲೈಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಸೆಪ್ಟೆಂಬರ್ 5, 2019 ರಂದು ಭಾರತದ ಎಲ್ಲಾ ಮನೆಯನ್ನ ಹೊಕ್ಕಲು ತಯಾರಾಗಿದೆ. 

ಇದರ ಸೇವೆಯನ್ನ ಪಡೆಯಲು ನೊಂದಣಿ ಮಾಡಿಸಿಕೊಳ್ಳಲು ಜನ ಆಗಲೇ ಮುಗಿ ಬೀಳುತ್ತಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಇಂತಹ ಬದಲಾವಣೆಗಳು ಸಮಾಜದಲ್ಲಿ ಸಹಜ ಜೊತೆಗೆ ಅನಿವಾರ್ಯ ಕೂಡ. ಈ ಸೇವೆಯಿಂದ ಭಾರತೀಯರು ಬದುಕುವ ರೀತಿ ಬದಲಾಗುತ್ತದೆ ಇದರಲ್ಲಿ ಸಂಶಯವಿಲ್ಲ. ವಸ್ತು ಅಥವಾ ವಿಷಯ ಯಾವುದೇ ಇರಲಿ ಅಲ್ಲಿ ಎರಡಕ್ಕೂ ಹೆಚ್ಚು ಆಯಾಮವಂತೂ ಇದ್ದೆ ಇರುತ್ತದೆ. ಇದರಿಂದ ಆಗುವ ಒಳಿತು ಒಂದು ಆಯಾಮವಾದರೆ, ಕೆಡುಕು ಇನ್ನೊಂದು ಆಯಾಮ. ನೆನೆಪಿರಲಿ ಒಳಿತಿನ ಹಿಂದೆಯೇ ಕೆಡುಕು ಯಾವಾಗಲೂ ನೆರಳಿನಂತೆ ಹಿಂಬಾಲಿಸುತ್ತದೆ. ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಕೂಡ ಇದಕ್ಕೆ ಹೊರತಾಗಿಲ್ಲ. ಇಂದಿನ ಲೇಖನದಲ್ಲಿ ಎರಡೂ ಆಯಾಮವನ್ನ ನೋಡೋಣ. ಜೊತೆಗೆ ಮೂರನೇ ಆಯಾಮವೇನು ತಿಳಿಯೋಣ. ಇದಕ್ಕೂ ಮೊದಲು ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಎನ್ನುವ ಸಂಸ್ಥೆಯ ಬಗ್ಗೆ ಕೂಡ ಒಂದಷ್ಟು ತಿಳಿದುಕೊಳ್ಳೋಣ. 

ಏನಿದು ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ? 

ಇದೊಂದು ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆ. 14 ನೇ ಅಕ್ಟೋಬರ್ 2003ರಲ್ಲಿ ಇದರ ಉಗಮವಾಗುತ್ತದೆ. ಆದರೆ ಪೂರ್ಣ ಪ್ರಮಾಣದ ಕಾರ್ಯಕ್ರಮ ಶುರುವಾದದ್ದು ಮೇ 2009ರಲ್ಲಿ. ಇದಕ್ಕೂ ಮೊದಲು ಇದ್ದ ಮೊನಾಪೊಲಿಸ್ ರೆಸ್ಟ್ರಿಕ್ಷನ್ ಆಕ್ಟ್ ಇಂದಿಗೆ ಇಲ್ಲ. ಅದರ ಬದಲಿಗೆ ಕಾಂಪಿಟೇಷನ್ ಕಮಿಷನ್ ಎನ್ನುವ ಈ ಸಂಸ್ಥೆಯನ್ನ ನಿರ್ಮಿಸಲಾಗಿದೆ. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ಮತ್ತು ನ್ಯಾಯಯುತ ಸ್ಪರ್ಧೆಯನ್ನ ಜೀವಂತವಾಗಿಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಆ ಮೂಲಕ ಸಮಾಜದ ಜನರಿಗೆ ಹೆಚ್ಚು ಹೆಚ್ಚು ಆಯ್ಕೆಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಕೂಡ ಈ ಸಂಸ್ಥೆಯ ಕಾರ್ಯವಾಗಿದೆ. 

ಯಾವುದೇ ದೊಡ್ಡ ಸಂಸ್ಥೆ ತನ್ನ ಎದುರಾಳಿ ಸಂಸ್ಥೆಯನ್ನ ತನ್ನ ಬಲ ಅಥವಾ ಹಣ ಉಪಯೋಗಿಸಿ ಕೊಳ್ಳುವ ಅಥವಾ ಅದನ್ನ ಮಾರುಕಟ್ಟೆಯಿಂದ ಓಡಿಸಲು ಸಾಧ್ಯವಾಗದ ಹಾಗೆ ಕಾಯಿದೆಯನ್ನ ಜಾರಿಗೊಳಿಸುವುದು ಕೂಡ ಇದರ ಉದ್ದೇಶ. ಸರಳವಾಗಿ ಹೇಳಬೇಕಂದರೆ ಮಾರುಕಟ್ಟೆಯ ಮೇಲೆ ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿಯ ಹಿಡಿತವಿರದ ಹಾಗೆ ನೋಡಿಕೊಳ್ಳುವುದು ಈ ಸಂಸ್ಥೆಯ ಕೆಲಸ. ಅಂದರೆ ಮೊನಾಪಲಿ ಅಥವಾ ಏಕಸ್ವಾಮ್ಯತೆಯನ್ನ ತಡೆಗಟ್ಟುವುದು ಇದರ ಪ್ರಮುಖ ಉದ್ದೇಶ. ಮಾರುಕಟ್ಟೆಯಲ್ಲಿ ಒಂದೇ ಸೇವೆಯನ್ನ ನೀಡುವ ಹಲವಾರು ಸಂಸ್ಥೆಗಳು ಇರಬೇಕು ಅದು ಗ್ರಾಹಕನಿಗೆ ಉತ್ತಮ ಸೇವೆಯನ್ನ ಒದಗಿಸಲು ಸಹಾಯವಾಗುತ್ತದೆ ಎನ್ನುವುದು ಈ ಸಂಸ್ಥೆಯ ನಿಲುವು. 

ಜಿಯೋ ಬಳಕೆದಾರರಿಗೆ ಏನೆಲ್ಲಾ ಸವಲತ್ತು ನೀಡುತ್ತದೆ, ಇದರಿಂದ ಆಗುವ ಅನುಕೊಲಗಳೇನು? 

1.ಇಲ್ಲಿ ಹೇಳುವ ಎಲ್ಲಾ ಸೇವೆಗಳು ಎಲ್ಲಾ ಜಿಯೋ ಗ್ರಾಹಕರಿಗೆ ಸಿಗುತ್ತದೆ ಎನ್ನುವ ಹಾಗಿಲ್ಲ ಇಲ್ಲೇನಿದ್ದರು ಕಾಸಿಗೆ ತಕ್ಕ ಕಜ್ಜಾಯ. ಮೆಂಬರ್ ಶಿಪ್ ದರ್ಜೆ ಮೇಲೆ ಈ ಸೇವೆಗಳು ಲಭ್ಯ. ಇರಲಿ. 

2.ಮನೆಯಲ್ಲಿ ಕೂತು ಪ್ರಥಮ ದಿನ ಪ್ರಥಮ ಶೋ ಸಿನಿಮಾ ವೀಕ್ಷಿಸುವ ಸವಲತ್ತು ನೀಡಲಿದೆ. ಅಂದರೆ ಗಮನಿಸಿ ಸಿನಿಮಾ ಥಿಯೇಟರ್ ಗೆ ಹೋಗುವ ಅವಶ್ಯಕೆತೆ ಬರುವುದಿಲ್ಲ. 

3.ನಿಮ್ಮ ಯಾವುದೇ ಮೆಚ್ಚಿನ ಗೇಮ್ ಅನ್ನು ಇವರು ನೀಡುವ ಸೆಟ್ ಅಪ್ ಬಾಕ್ಸ್ ಗೆ ಸ್ಮಾರ್ಟ್ ಫೋನ್ ಅನ್ನು ಕಂಟ್ರೋಲರ್ ಆಗಿ ಬಳಸಿ ಆಡಬಹದು. 

4.ಶಾಪಿಂಗ್ ಮಾಡುವುದು ಅತ್ಯಂತ ಖುಷಿ ನೀಡುವ, ಮನಸ್ಸಿಗೆ ಮತ್ತೊಂದು ರೀತಿಯ ಅನುಭವ ನೀಡಲಿದೆ. ಇಲ್ಲಿ ನಿಮಗೆ ಮಿಕ್ಸೆಡ್ ರಿಯಾಲಿಟಿ ಅನುಭವ ಸಿಗಲಿದೆ. ಅಂದರೆ ನೀವು ಮಾಲ್ ನಲ್ಲಿ ಓಡಾಡಿದಂತೆ ನಿಮ್ಮದೇ 3ಡಿ ಇಮೇಜ್ ತಂತ್ರಜ್ಞಾನದ ಸಹಾಯದಿಂದ ಓಡಾಡುತ್ತದೆ. ಕೊಳ್ಳಲು ಬಯಸುವ ವಸ್ತುಗಳು ಕೂಡ ನೀವು ಅಲ್ಲೇ ನಿಂತು ನೋಡುತ್ತಿರುವಂತೆ ಭಾಸವಾಗುತ್ತದೆ. ಇವುಗಳು ಕೂಡ 3ಡಿ ಹೀಗಾಗಿ ಮನೆಯಲ್ಲಿ ಕುಳಿತು ಶಾಪಿಂಗ್ ಅನುಭವವನ್ನ ಪಡೆಯಬಹದು, ಜೊತೆಗೆ ಬೇಕಾದ್ದನ್ನು ಕೊಳ್ಳಬಹದು. 

5. ಮನೆ ಮಂದಿಯೆಲ್ಲ ಒಂದೇ ಡೇಟಾ ಪ್ಯಾಕ್ ಶೇರ್ ಮಾಡಬಹದು. ಎಲ್ಲರಿಗೂ ಸೇರಿ ಒಂದೇ ಬಿಲ್ ಪಡೆಯಬಹದು. 

6. ಇಷ್ಟು ದಿನ ಸ್ಟ್ರೀಮಿಂಗ್ ನಲಿದ್ದ ನಿಧಾನ ಇನ್ನು ಮುಂದೆ ಇರುವುದಿಲ್ಲ. ಯಾವುದೇ ಸಿನಿಮಾ ಅಥವಾ ಕಾರ್ಯಕ್ರಮವನ್ನ ಅಡೆತಡೆಯಿಲ್ಲದೆ ವೀಕ್ಷಿಸಬಹದು. ವಿಡಿಯೋ ಕಾನ್ಫರೆನ್ಸ್ ಗುಣಮಟ್ಟ ಕೂಡ ಸುಧಾರಿಸಲಿದೆ. 

7. ಗ್ರಾಹಕರು ತಮಗೆ ಬೇಕಾದ ಸಮಯದಲ್ಲಿ ಈ ಸೇವೆಗಳನ್ನು ಪಡೆಯಬಹದು. ಇಲ್ಲಿ ಸಮಯದ ನಿರ್ಬಂಧ ಇಲ್ಲ. ಜೊತೆಗೆ ಗ್ರಾಹಕರ ಓಡಾಟದ ಸಮಯ ಮತ್ತು ಓಡಾಟದ ಖರ್ಚು ಕೂಡ ಉಳಿಯುತ್ತದೆ. 

ಮೊದಲೇ ಹೇಳಿದಂತೆ ಇವೆಲ್ಲ ಗ್ರಾಹಕ ಪ್ರೇಮಿ ಸವಲತ್ತುಗಳು. ಇದರ ಬೆನ್ನ ಹಿಂದೆಯೇ ಬೇತಾಳದಂತೆ ಬರುವ ಅಪಾಯಗಳ ಅರಿವು ಗ್ರಾಹಕನಿಗೆ ಇರುವುದಿಲ್ಲ. ಇಂತಹ ಅಪಾಯ ಅಥವಾ ಮುಂದಿನ ದಿನಗಳಲ್ಲಿ ಆಗುವ ತೊಂದರಗಳೇನಿರಬಹದು? ಗಮನಿಸೋಣ. 

1. ಎಲ್ಲಕ್ಕೂ ಪ್ರಥಮವಾಗಿ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಎನ್ನುವ ಒಂದು ಸಂಸ್ಥೆ ಸಮಾಜದಲ್ಲಿ ಹಲವು ಹತ್ತು ಸಂಸ್ಥೆಗಳು ಇರಬೇಕು ಇದರಿಂದ ಗ್ರಾಹಕನಿಗೆ ಒಂದಲ್ಲ ಹಲವು ಆಯ್ಕೆಗಳು ಸಿಗುತ್ತವೆ ಅಲ್ಲದೆ ಅವರು ವಿಧಿಸುವ ಶುಲ್ಕ ಕೂಡ ಕಾಂಪಿಟೇಟಿವ್ ಆಗಿರುತ್ತದೆ ಎಂದು ಪ್ರತಿಪಾದಿಸುವ ಮತ್ತು ಸಮಾಜದಲ್ಲಿ ಇಂತಹ ಸ್ವಾಸ್ಥ್ಯವನ್ನ ಕಾಪಾಡಲು ಇರುವ ಸಂಸ್ಥೆ. ಈ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಯಾವುದೇ ದೊಡ್ಡ ಸಂಸ್ಥೆ ಇನ್ನೊಂದು ತನ್ನ ಎದುರಾಳಿ ಸಂಸ್ಥೆಯನ್ನ ಕೊಳ್ಳಲು ಅಥವಾ ಆ ಸಂಸ್ಥೆಯಲ್ಲಿ ಪಾಲುದಾರಿಕೆ ಹೊಂದಲು ಅಥವಾ ಇನ್ನ್ಯಾವುದೇ ವಿಧದಲ್ಲಿ ಎದುರಾಳಿ ಸಂಸ್ಥೆಯ ಮೇಲೆ ಹಿಡಿತ ಹೊಂದಲು ಸುಲಭವಾಗಿ ಬಿಡುವುದಿಲ್ಲ. ಈ ರೀತಿ ಮಾಡಲು ಅನುಮತಿ ಪಡೆಯಬೇಕು. ಇದು ಸಮಾಜದ ಮತ್ತು ಗ್ರಾಹಕರಿಗೆ ಒಳ್ಳೆಯದು ಎನ್ನುವ ಕಾರಣವಿದ್ದರೆ ಮಾತ್ರ ಅನುಮತಿ ನೀಡುತ್ತದೆ. 

2.ನಿಮಗೆಲ್ಲಾ ಡೆಲ್ ನೆಟ್ವರ್ಕ್ ಮತ್ತು  ಹಾತ್ ವೇ ನೆಟ್ವರ್ಕ್ ಬಗ್ಗೆ ತಿಳಿದಿರುತ್ತದೆ. ಇವೆರಡು ಭಾರತದ ದೊಡ್ಡ ಕೇಬಲ್ ನೆಟ್ವರ್ಕ್ ಸಂಸ್ಥೆಗಳು. ಜನವರಿ 2019 ರಲ್ಲಿ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ರಿಲಯನ್ಸ್ ಜಿಯೋ ಸಂಸ್ಥೆಗೆ ಈ ಕೇಬಲ್ ನೆಟ್ವರ್ಕ್ ಕೊಳ್ಳಲು ಅನುಮತಿ ನೀಡಿದೆ. ಹೀಗಾಗಿ ರಿಲಯನ್ಸ್ ಇದೀಗ ಡೆಲ್ ನೆಟ್ವರ್ಕ್ ನ 66 ಪ್ರತಿಶತ ಷೇರನ್ನು ಖರೀದೀಸಿ ಅದರ ಮೇಲೆ ಹಿಡಿತ ಸಾಧಿಸಿದೆ. ಅಂತೆಯೇ ಹಾತ್ ವೇ ಸಂಸ್ಥೆಯ 51.3 ಪ್ರತಿಶತ ಮಾಲೀಕತ್ವವನ್ನು ರಿಲಯನ್ಸ್ ಖರೀದಿಸಿದೆ. ಇದರಿಂದ ಏನಾಗಿದೆ? ಅಥವಾ ಏನಾಗುತ್ತದೆ ಅಂದರೆ ಮಾರುಕಟ್ಟೆಯಲ್ಲಿ ರಿಲೈಯನ್ಸ್ ಜಿಯೋ ಗೆ ಯಾರೂ ಎದುರಾಳಿಯೆ ಇಲ್ಲದಂತಾಗುತ್ತದೆ. ಆನೆ ನೆಡೆದದ್ದೇ ಹಾದಿ ಎನ್ನುವಂತೆ ಮುಂಬರುವ ದಿನಗಳಲ್ಲಿ ಅವರು ವಿಧಿಸುವ ಶುಲ್ಕವನ್ನ ಗ್ರಾಹಕ ವಿಧಿಯಿಲ್ಲದೇ ನೀಡಲೇ ಬೇಕಾಗುತ್ತದೆ. ಇದೆ ಸೇವೆ ನೀಡುವ ಬೇರೆ ಎಲ್ಲಾ ನೆಟ್ವರ್ಕ್ ಸಂಸ್ಥೆಗಳು ದೈತ್ಯ ಜಿಯೋ ಮುಂದೆ ನಿಲ್ಲಲಾಗದೆ ನಷ್ಟ ಅನುಭವಿಸುತ್ತವೆ ಕಾಲಾಂತರದಲ್ಲಿ ಮುಚ್ಚಿ ಹೋಗುತ್ತವೆ. 

3.ಭಾರತದ ಜನ ಸಾಮಾನ್ಯನ ಬೇಕು-ಬೇಡ, ಅವನು ವ್ಯವಹರಿಸುವ ರೀತಿ ಎಲ್ಲವೂ ಡೇಟಾ ಕಲೆಕ್ಷನ್ ಹೆಸರಲ್ಲಿ ರಿಲಯನ್ಸ್ ಹಿಡಿತದಲ್ಲಿ ಸಿಲುಕುತ್ತದೆ. ಇಂತಹ ಮಾಹಿತಿಯನ್ನ ಅವರು ತಮ್ಮ ಅನುಕೊಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಇಂತಹ ಮಾಹಿತಿಯನ್ನ ಆಧಾರಿಸಿ ಚುನಾವಣೆಯ ಫಲಿತಾಂಶ ಕೂಡ ಬದಲಾಯಿಸಬಹದು. 

4. ವ್ಯವಹಾರಿಕ ಕಾರಣವನ್ನ ಬದಿಗಿಟ್ಟು ನೋಡಿದರೂ ಇದು ಸಮಸ್ಯೆಯನ್ನ ಸೃಷ್ಟಿಸಬಲ್ಲದು. ಇಂದಿನ ದಿನ ಇರುವ ನೆಟ್ವರ್ಕ್ ನಲ್ಲೆ ಆಗಲೇ ಯುವ ಜನತೆ ಇಂಟರ್ನೆಟ್ ದಾಸರಾಗಿದ್ದಾರೆ. ಇದೀಗ ಆಪ್ಟಿಕ್ ಫೈಬರ್ ಉಪಯೋಗಿಸಿ ನೀಡುವ ಈ ಸೇವೆ ಇಂಟರ್ನೆಟ್ ಸ್ಟ್ರೀಮಿಂಗ್ ವೇಗವನ್ನ ಹೆಚ್ಚು ಮಾಡುತ್ತದೆ. ಮಕ್ಕಳು ಮತ್ತು ಯುವ ಜನತೆಯನ್ನ ಈ ಪಿಡುಗಿನಿಂದ ಉಳಿಸಿಕೊಳ್ಳುವುದು ಮುಂದಿನ ದಿನಗಳಲ್ಲಿ ಕಷ್ಟಸಾಧ್ಯ. 

5. ಮಾಲ್ ಗಳು ತಮ್ಮ ಮಹತ್ವ ಕಳೆದುಕೊಂಡು ಅಲ್ಲಿನ ವ್ಯಾಪಾರ ಮತ್ತು ವಹಿವಾಟು ಕಡಿಮೆಯಾಗುತ್ತದೆ. ಈಗಾಗಲೇ ಬೆಂಗಳೂರಿನ ಮುಕ್ಕಾಲು ಪಾಲು ಮಾಲುಗಳು ಭಣಗುಡುತ್ತಿವೆ. ಮುಂಬರುವ ದಿನಗಳಲ್ಲಿ ಮನೆಯಲ್ಲೇ ಕುಳಿತು ಮಿಕ್ಸೆಡ್ ರಿಯಾಲಿಟಿ ಅನುಭವ ಪಡೆಯುವ ಶಾಪಿಂಗ್ ಮತ್ತು ಮನೆಯಲ್ಲೇ ಕುಳಿತು ಪ್ರಥಮ ದಿನ ಪ್ರಥಮ ಷೋ ನೋಡುವ ಸವಲತ್ತು ಖಂಡಿತ ಮಾಲ್ ಗಳ ಭವಿಷ್ಯವನ್ನ ಮಂಕಾಗಿಸಲಿವೆ. 

6. ಮನುಷ್ಯ-ಮನುಷ್ಯನ ನಡುವಿನ ಮಾತುಕತೆ ಕಡಿಮೆಯಾಗುತ್ತದೆ. ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಮನುಷ್ಯ ನೊಂದಿಗೆ ಸಂವಹನ ನೆಡೆಸದೆ ನಮಗೆ ಬೇಕಾದ ವಸ್ತು ಕೊಂಡು ಮುಗಿಸಬಹದು. ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಲ್ಲ ಅಲ್ಲೆಗೆಳೆಯಲಾಗುವುದಿಲ್ಲ. 

ತೀರ್ಮಾನ: ಮೇಲಿನ ಸಾಲುಗಳಲ್ಲಿ ಹೇಳಿದಂತೆ ವಸ್ತು ಅಥವಾ ವಿಷಯ ಯಾವುದೇ ಇರಲಿ ಅದರಲ್ಲಿ ಎರಡಕ್ಕೂ ಹೆಚ್ಚು ಆಯಾಮವಂತೂ ಖಂಡಿತ ಇದ್ದೆ ಇರುತ್ತದೆ. ಒಳಿತು ಮತ್ತು ಕೆಡುಕು. ಇದರಲ್ಲಿ ನಮಗೆ ಬೇಕಾದ ಆಯ್ಕೆ ನಾವೇ ಮಾಡಿಕೊಳ್ಳುವ ಸಾತಂತ್ರ್ಯವಿರುತ್ತದೆ. ತಂತ್ರಜ್ಞಾನದ ಉತ್ತಮ ಬಳಕೆ ಮಾಡಿಕೊಳ್ಳುವುದು ನಮ್ಮ ಕೈಲಿದೆ. ಒಳಿತು ಕೇಡು ಎರಡನ್ನೂ ಮೀರಿದ ಮೂರನೇ ಆಯಾಮ ಈ ಸೇವೆಯನ್ನ ನೀಡುವ ಜಿಯೋ ಸಂಸ್ಥೆಗೆ ಎದುರಾಳಿ ಇಲ್ಲದೆ ಹೋಗುವ ಸಂಭಾವ್ಯತೆ. ಇದು ಗ್ರಾಹಕರಿಗೆ, ಸಮಾಜಕ್ಕೆ ಖಂಡಿತಾ ಒಳ್ಳೆಯದಲ್ಲ. ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಹೇಗೆ ಮತ್ತು ಯಾವ ಆಧಾರದ ಮೇಲೆ ರಿಲಯನ್ಸ್ ನಡೆಯುವ ಹಾದಿ ಸುಗಮ ಮಾಡಿದೆ? ಎನ್ನುವುದು ಚರ್ಚಾಸ್ಪದ ವಿಷಯ. 

- ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news with The Kannadaprabha App. Download now
facebook twitter whatsapp