ಆರ್ ಬಿ ಐ ನಿಂದ ಹೆಚ್ಚಿನ ಮೀಸಲು ನಿಧಿಯ ವರ್ಗಾವಣೆ; ಕೇಂದ್ರ ಸರಕಾರಕ್ಕೆ ಹೆಚ್ಚಿದ ಹೊಣೆ! 

ಭಾರತದ ಸೆಂಟ್ರಲ್ ಬ್ಯಾಂಕ್ ಆರ್ ಬಿಐ ಕೇಂದ್ರ ಸರಕಾರಕ್ಕೆ 1,76,051 ಕೋಟಿ ರೂಪಾಯಿಯನ್ನ ಹೆಚ್ಚಾಗಿ ತೆಗೆದಿಟ್ಟ ಮೀಸಲು ನಿಧಿಯಿಂದ ವರ್ಗಾವಣೆ ಮಾಡುವುದಕ್ಕೆ ಅನುಮತಿ ನೀಡಿದೆ. 

Published: 29th August 2019 01:28 AM  |   Last Updated: 29th August 2019 08:57 AM   |  A+A-


economy

ಸಂಗ್ರಹ ಚಿತ್ರ

Posted By : srinivasamurthy
Source : Online Desk

ಭಾರತದ ಸೆಂಟ್ರಲ್ ಬ್ಯಾಂಕ್ ಆರ್ ಬಿಐ ಕೇಂದ್ರ ಸರಕಾರಕ್ಕೆ 1,76,051 ಕೋಟಿ ರೂಪಾಯಿಯನ್ನ ಹೆಚ್ಚಾಗಿ ತೆಗೆದಿಟ್ಟ ಮೀಸಲು ನಿಧಿಯಿಂದ ವರ್ಗಾವಣೆ ಮಾಡುವುದಕ್ಕೆ ಅನುಮತಿ ನೀಡಿದೆ. ವಿತ್ತ ಜಗತ್ತಿನ ಆಗು ಹೋಗುಗಳ ಮೇಲೆ ಗಮನವಿರಿಸಿರುವ ಓದುಗರಿಗೆ ಉರ್ಜಿತ್ ಪಟೇಲ್ ಅವರು ತಮ್ಮ ಸ್ಥಾನಕ್ಕೆ ಅಚಾನಕ್ಕಾಗಿ ರಾಜೀನಾಮೆ ನೀಡಿ ಹೊರನೆಡೆದದ್ದು ಇದೆ ವಿಷಯದಲ್ಲಿ ಸಹಮತ ಇಲ್ಲದೆ ಇದ್ದುದರಿಂದ ಎನ್ನುವುದು ತಿಳಿದ ವಿಷಯವಾಗಿದೆ.

ಗಮನಿಸಿ ಆರ್ ಬಿ ಐ ಸ್ವಾಯಸತ್ತೆ ಹೊಂದಿರುವ ಸಂಸ್ಥೆಯಲ್ಲ. ಇಲ್ಲಿನ ಮುಖ್ಯಸ್ಥನ್ನ ನೇಮಕ ಮಾಡುವುದು ಕೇಂದ್ರ ಸರಕಾರ. ಹಾಗೆಂದ ಮಾತ್ರಕ್ಕೆ ಆರ್ ಬಿ ಐ ಪೂರ್ಣವಾಗಿ ಸರಕಾರದ ಅಣತಿಯಂತೆ ಕೆಲಸ ಮಾಡುವುದಿಲ್ಲ. ಹಣ ಮುದ್ರಣ #ಬ್ಯಾಂಕುಗಳ ಮೇಲಿನ ಹಿಡಿತ, ವಿದೇಶಿ ವಿನಿಮಯ ನಿರ್ಧಾರಗಳು ಹೀಗೆ ಹಲವು ಹತ್ತು ಕಾರ್ಯವನ್ನ ಆರ್ ಬಿ ಐ ತನ್ನ ಬಳಿಯಿರುವ ನುರಿತ ಕಸುಬುದಾರರಿಂದ ನೆಡೆಸುತ್ತದೆ. ಹೀಗೆ ನೆಡೆಸುವ ಕೆಲಸದಿಂದ ಅದು ಖರ್ಚು ಕಳೆದು ಉಳಿವ ಬಹಳಷ್ಟು ಹಣವನ್ನ ತನ್ನ ಮಾಲೀಕ ಕೇಂದ್ರ ಸರಕಾರಕ್ಕೆ ವರ್ಗಾವಣೆ ಮಾಡುತ್ತದೆ.

ಅಲ್ಲದೆ ಒಂದಷ್ಟು ಹಣವನ್ನ ಮೊದಲೇ ಊಹಿಸಲಾಗದ ಅನಿಶ್ಚಿತತೆಯನ್ನ ಎದುರಿಸಲು ಮೀಸಲು ಹಣ (ರಿಸರ್ವ್ ಮನಿ /ಫಂಡ್) ಎಂದು ತೆಗೆದಿರಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನ ಲೆಂಡರ್ ಆಫ್ ಲಾಸ್ಟ್ ರೆಸಾರ್ಟ್ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ತನ್ನ ಲಾಭದಲ್ಲಿ ಒಂದಷ್ಟು ಹಣವನ್ನ ಆಪತ್ಕಾಲ್ಲಕ್ಕೆ ಎಂದು ತೆಗೆದಿರಿಸುತ್ತದೆ. ಹೀಗೆ ವರ್ಷದಿಂದ ವರ್ಷಕ್ಕೆ ತೆಗೆದಿರಿಸಿದ ಹಣದ ಮೊತ್ತ ಆರ್ ಬಿ ಐ ನಲ್ಲಿ ಶೇಖರಣೆಯಾಗಿರುತ್ತದೆ. ಇದನ್ನ ಅತ್ಯಂತ ಕಠಿಣ ಸಮಯದಲ್ಲಿ ಹೊರತು ಇತರ ಸಾಮಾನ್ಯ ದಿನಗಳಲ್ಲಿ ಬಳಸುವಂತಿಲ್ಲ . ಇದೀಗ ಆರ್ ಬಿ ಐ 176051 ಕೋಟಿ ರೂಪಾಯಿ ಹಣವನ್ನ ಕೇಂದ್ರ ಸರಕಾರಕ್ಕೆ ಡಿವಿಡೆಂಡ್ ರೂಪದಲ್ಲಿ ವರ್ಗಾವಣೆ ಮಾಡಲು ಸಿದ್ಧವಿದೆ. ಇದರ ಸಾಧಕ ಬಾಧಕವೇನು ಎನ್ನುವುದನ್ನ ತಿಳಿದುಕೊಳ್ಳೋಣ. 

ಎಷ್ಟು ಹಣವನ್ನ ಮೀಸಲು ನಿಧಿ ಅಥವಾ ರಿಸರ್ವ್ ಫಂಡ್ ಎಂದು ತೆಗೆದಿಡಬಹದು? 
ಆರ್ ಬಿ ಐ ಕಾನೂನಿನಲ್ಲಿ ಇಷ್ಟೇ ಪ್ರತಿಶತ ತೆಗೆದಿಡಬೇಕು ಅಥವಾ ಇಷ್ಟೇ ಹಣವನ್ನ ತೆಗೆದಿಡಬೇಕು ಎನ್ನುವ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಆರ್ ಬಿ ಐ ನಲ್ಲಿರುವ ನುರಿತ ತಜ್ಞರು ಇದನ್ನ ತೀರ್ಮಾನಿಸುತ್ತಾರೆ . ಎಕನಾಮಿಕ್ ಕ್ಯಾಪಿಟಲ್ ಫ್ರೇಮ್ವರ್ಕ್ (ECM ) ಎಷ್ಟಿರಬೇಕು ಎನ್ನುವುದನ್ನ ಲೆಕ್ಕ ಹಾಕಿ ಈ ಮೀಸಲು ನಿಧಿಯನ್ನ ಇಷ್ಟಿದ್ದರೆ ಸರಿ ಎನ್ನುವ ತೀರ್ಮಾನಕ್ಕೆ ಬರಲಾಗುತ್ತದೆ . ಸಾಮನ್ಯವಾಗಿ ವರ್ಷದಿಂದ ವರ್ಷಕ್ಕೆ ಆರ್ ಬಿ ಐ ನ ಬ್ಯಾಲೆನ್ಸ್ ಶೀಟ್ ನ ಒಟ್ಟು ಮೊತ್ತದ ೬. ೮ ಪ್ರತಿಶತ ಹಣ ಮೀಸಲು ನಿಧಿಯ ರೂಪದಲ್ಲಿರುತ್ತದೆ . ಹೀಗೆ ಆರ್ ಬಿ ಬಳಿ ಸಂಗ್ರಹವಾಗಿರುವ ಹಣದ ಮೊತ್ತ ಅತ್ಯಂತ ಹೆಚ್ಚಾಗಿದೆ ಹಾಗೊಮ್ಮೆ ಹಣಕಾಸಿನ ತೀವ್ರ ತೊಂದರೆ ಎದುರಾದರೂ ಅದನ್ನ ಬಗೆಹರಿಸಿ ಉಳಿಯುವಷ್ಟು ಹೀಗಾಗಿ ಮೀಸಲು ಹಣದಲ್ಲಿ ಒಂದಷ್ಟು ಲಕ್ಷ ಕೋಟಿಗಳನ್ನ ನಮಗೆ ವರ್ಗಾಯಿಸಿ ಎನ್ನುವುದು ಕೇಂದ್ರ ಸರಕಾರದ ನಿಲುವಾಗಿತ್ತು .

ಉರ್ಜಿತ್ ಪಟೇಲರು ಇದಕ್ಕೆ ಒಪ್ಪದ ಕಾರಣ ತಮ್ಮ ಅಧಿಕಾರಕ್ಕೆ ರಾಜೀನಾಮೆ ನೀಡಿ ಹೊರನೆಡೆದರು . ಸರಕಾರ ನಿವೃತ್ತ ಆರ್ ಬಿ ಗವರ್ನರ್ ಬಿಮಲ್ ಜಲಾಲ್ ನೇತೃತ್ವದಲ್ಲಿ ಒಂದು ಸಮಿತಿಯನ್ನ ರಚಿಸಿ ಮೀಸಲು ನಿಧಿಯ ಹೆಚ್ಚಿನ ಸಂಗ್ರಹದ ಬಗ್ಗೆ ಒಂದು ತುಲನೆ ಮಾಡಲು ಹೇಳಲಾಯಿತು . ಅದರಂತೆ ಬಿಮಲ್ ಜಲಾಲ್ ನೇತೃತ್ವದ ಸಮಿತಿ ಹೆಚ್ಚಿನ ಹಣವನ್ನ ಕೇಂದ್ರ ಸರಕಾರಕ್ಕೆ ನೀಡಲು ಶಿಫಾರಸ್ಸು ಮಾಡಿತು . ಇದೀಗ ಆರ್ ಬಿ ಕೂಡ ಆ ಹಣವನ್ನ ನೀಡಲು ಅನುಮತಿ ನೀಡಿದೆ . 

ಆರ್ ಬಿ ಐ ಈ ರೀತಿ ಹಣವನ್ನ ರಿಸರ್ವ್ ಕ್ಯಾಪಿಟಲ್ ಅಥವಾ ಫಂಡ್ ಮೂಲಕ ತನ್ನ ಬಳಿ ಇಟ್ಟು ಕೊಳ್ಳಲು ಕಾರಣಗಳೇನು? 
ಇದಕ್ಕೆ ಕಾರಣಗಳನ್ನ ಹೇಳುವ ಮೊದಲು ಇದೆ ವ್ಯವಸ್ಥೆಯನ್ನ ನಿಮ್ಮ ಮನೆಗೆ ಹೋಲಿಸಿಕೊಂಡು ನೋಡಿ . ಕಾಣದ ನಾಳೆಗಾಗಿ ನಿಮ್ಮ ವೇತನದ ೧೦ ಪ್ರತಶತ ಹಣವನ್ನ ಮೀಸಲು ನಿಧಿಯನ್ನಾಗಿ ತೆಗೆದಿರಿಸಿದ್ದೀರಿ ಎಂದುಕೊಳ್ಳಿ . ಬಹಳ ವರ್ಷಗಳ ನಿಮ್ಮ ಈ ನಿಯಮದಿಂದ ೧೦ ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದುಕೊಳ್ಳಿ . ಅಷ್ಟೊಂದು ಹಣ ಸುಮ್ಮನೆ ಏಕೆ ಮೀಸಲಾಗಿ ಇಟ್ಟಿರಬೇಕು ? ಎನ್ನುವ ಭಾವನೆ ನಿಮಗೆ ಬಂದರೆ ? ಅದೇ ಹಣದಲ್ಲಿ ಒಂದಷ್ಟು ಹಣ ಉದಾಹರಣೆಗೆ ೨ ಲಕ್ಷ ರೂಪಾಯಿ ತೆಗೆದು ಅದನ್ನ ಮನೆಯ ಅಭಿವೃದ್ಧಿಗೆ ಬಳಸೋಣ ಎನ್ನುವ ನಿಲುವು ನಿಮ್ಮದಾದರೆ ? ಜೊತೆಗೆ ಇಷ್ಟೊಂದು ಹಣ ಸಂಗ್ರಹವಾಗಿದೆ ಹೀಗಾಗಿ ಪ್ರತಿ ವರ್ಷ ೧೦ ಪ್ರತಿಶತದ ಬದಲು ೮ ಅಥವಾ ೫ ಪ್ರತಿಶತವನ್ನ ಇನ್ನು ಮುಂದೆ ಮೀಸಲಿಡೋಣ ಎನ್ನುವ ನಿರ್ಧಾರಕ್ಕೆ ನೀವು ಬಂದರೆ ? ಅದನ್ನ ತಪ್ಪು ಅಥವಾ ಸರಿ ಎನ್ನುವ ಬ್ರಾಕೆಟ್ ನಲ್ಲಿ ಹಾಕಿ ನೋಡಲು ಸಾಧ್ಯವಾಗುವುದಿಲ್ಲ . ಈಗ ಇಲ್ಲಿ ಆಗಿರುವುದು ಕೂಡ ಇದೆ . 

ಗಮನಿಸಿ ಈ ರೀತಿಯ ರಿಸರ್ವ್ ಕ್ಯಾಪಿಟಲ್  ಹೊಂದುವ ಉದ್ದೇಶ : 

  • ಮೊದಲನೆಯದಾಗಿ ಫಾರಿನ್ ಎಕ್ಸ್ಚೇಂಜ್ ಏರಿಳಿತಗಳನ್ನ ತಡೆದುಕೊಳ್ಳಲು ಸಹಕಾರಿಯಾಗುತ್ತದೆ . 
  • ಎರಡನೆಯದಾಗಿ ದೇಶ ಹಣಕಾಸಿನ ಮುಗ್ಗಟ್ಟು ಎದುರಿಸುವ ಪರಿಸ್ಥಿತಿ ಬಂದರೆ ಆಗ ಈ ಹಣವನ್ನ ಉಪಯೋಗಿಸಬಹದು . 
  • ಮೂರನೆಯದಾಗಿ ಅಸ್ಥಿರ ಸರಕಾರವಿದ್ದರೆ ಆಗ ಕೂಡ ಬ್ಯಾಂಕಿಂಗ್ ವ್ಯವಸ್ಥೆಯನ್ನ ಬಿಗಿಯಾಗಿ ಹಿಡಿದಿಡಲು ಹೆಚ್ಚಿನ ಕ್ಯಾಪಿಟಲ್ ಅವಶ್ಯಕತೆ ಇರುತ್ತದೆ . 
  • ನಾಲ್ಕನೆಯದಾಗಿ ಸಮಾಜದಲ್ಲಿ ಹಣದುಬ್ಬರವನ್ನ ಸುಸ್ಥಿಯಲ್ಲಿ ಇಡಲು ಕೂಡ ಈ ರೀತಿಯ ಹಣದ ಅವಶ್ಯಕತೆ ಇರುತ್ತದೆ . ಬೆಲ್ಗಳ ಮೇಲಿನ ನಿಯಂತ್ರಣಕ್ಕೆ ಸಮಯಕ್ಕೆ ತಕ್ಕಂತೆ ಈ ಹಣವನ್ನ ಉಪಯೋಗಿಸಿ ಇಳಿಕೆ ಅಥವಾ ಏರಿಕೆ ಮಾಡುವ ಶಕ್ತಿ ಇರುತ್ತದೆ . 

ಕೊನೆಯದಾಗಿ ಆರ್ ಬಿ ಐ ತನ್ನ ಸ್ವಂತಂತ್ರ್ಯ ಕಾಪಾಡಿಕೊಳ್ಳಲು ಕೂಡ ಇದು ಅವಶ್ಯಕವಾಗಿದೆ . ಹೇಗೆಂದರೆ ಇರುವ ಮೀಸಲು ನಿಧಿಯನ್ನ ಸರಕಾರಕ್ಕೆ ಡಿವಿಡೆಂಡ್ ರೂಪದಲ್ಲಿ ನೀಡಿದರೆ ಕಷ್ಟದ ಸಮಯದಲ್ಲಿ ಅಥವಾ ಬ್ಯಾಂಕ್ ಗಳಿಗೆ ಮರು ಬಂಡವಾಳ ಹೂಡಿಕೆಯಂತಹ ಸಮಯದಲ್ಲಿ ಅದು ಸರಕಾರದ ಬಳಿ ಕೈಚಾಚಿ ನಿಲ್ಲಬೇಕಾದ ಪರಿಸ್ಥಿತಿ ಬರುತ್ತದೆ . 

ಕೇಂದ್ರ ಸರಕಾರವೇಕೆ ಮೀಸಲು ನಿಧಿಗೆ ಕೈ ಹಾಕುತ್ತಿದೆ ?  ಇದಕ್ಕೆ ಕಾರಣಗಳನ್ನ ಹೀಗೆ ಪಟ್ಟಿ ಮಾಡಬಹದು  

  • ಮೊದಲಿಗೆ ಇಂತಿಷ್ಟೇ ಹಣವನ್ನ ತೆಗೆದಿರಿಸಬೇಕು ಎನ್ನುವುದಕ್ಕೆ ನಿಖರವಾದ ಕಾನೂನು ಅಥವಾ ಮಾನದಂಡ ಇಲ್ಲದೆ ಇರುವುದು . ಜಗತ್ತಿನ ಹಲವಾರು ದೇಶಗಳು ಇಂತಹ ಮೀಸಲು ನಿಧಿ ಇಲ್ಲದೆ  ದಶಕಗಳಿಂದ ಸಾಗುತ್ತ ಬಂದಿವೆ.
  • ಎರಡನೆಯದಾಗಿ ನಮ್ಮ ಬಳಿ ಸಂಗ್ರಹವಾಗಿರುವ ಹಣದ ಮೊತ್ತ ಅತ್ಯಂತ ಹೆಚ್ಚು ಎನ್ನುವ ಭಾವನೆ ಬಂದಿರುವುದರಿಂದ ಮತ್ತು ಹೆಚ್ಚಾಗಿರುವ ಫಿಸ್ಕಲ್ ಡೆಫಿಸಿಟ್ ಅನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶವೂ ಇರಬಹದು . 
  • ಮೂರನೆಯದಾಗಿ ಈ ಹಣವನ್ನ ಬಳಕೆ ಮಾಡಿಕೊಂಡು ನಿರ್ಜೀವವಾಗಿರುವ ಬ್ಯಾಂಕಿಂಗ್ ವ್ಯವಸ್ಥೆಗೆ ಮರು ಜೀವ ನೀಡುವುದು. ಹೇಗೆಂದರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮರು ಬಂಡವಾಳ ಹೂಡುವುದರ ಮೂಲಕ. 
  • ನಾಲ್ಕನೆಯದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ತಿಯ 16ಪ್ರತಿಶತ ಮೀಸಲು ನಿಧಿ ಇದ್ದರೆ ಅದನ್ನ ಉತ್ತಮ ಮೀಸಲು ನಿಧಿ ಎಂದು ಭಾವಿಸಲಾಗುತ್ತದೆ. ನಮ್ಮ ಬಳಿ ಅದು 26 .5 ಪ್ರತಿಶತಕ್ಕೂ ಹೆಚ್ಚಾಗಿದೆ. ಅಂತರಾಷ್ಟ್ರಿಯ ಮಾನದಂಡಕ್ಕಿಂತ ಹೆಚ್ಚಿನ ರಿಸರ್ವ್ ಇಟ್ಟುಕೊಂಡು ಕೊಂಡು ಕುಳಿತರೆ ನಮಗೇನು ಮೆಡಲ್ ಸಿಗುವುದಿಲ್ಲ. ಅದೇ ಹಣವನ್ನ ತೆಗೆದುಕೊಂಡು ದೇಶದ ಅಭಿವೃದ್ಧಿಗೆ ಬಳಸುವ ಉದ್ದೇಶ. 

ಕೊನೆ ಮಾತು: ಅನಿಶ್ಚಿತತೆ ಎನ್ನುವುದು ಇಂದು ಜಗತ್ತಿನ ಎಲ್ಲಾ ದೇಶಗಳಲ್ಲೂ ಇದೆ . ಅದು ಅಲ್ಲಿನ ನಾಗರೀಕರನ್ನು ಕೂಡ ಕಾಡುತ್ತಿರುವ ಸಮಸ್ಯೆ . ಭವಿಷ್ಯ ಎನ್ನುವುದು ತೂಗುಯ್ಯಾಲೆ !. ಏನಾಬಹದು ? ಅಥವಾ ಏನಾಗುತ್ತೆ ? ಎನ್ನುವ ನಿಖರತೆ ಯಾರಿಗೂ ಇಲ್ಲ . ಇಲ್ಲೇನಿದ್ದರೂ ಸಂಭಾವ್ಯತೆಯನ್ನ ಪಟ್ಟಿ ಮಾಡುವುದಷ್ಟೇ ಕೆಲಸ . ಕೇಂದ್ರದಲ್ಲಿ ಸ್ಥಿತ ಸರಕಾರವಿರುವುದರಿಂದ ಆ ಮಟ್ಟಿಗೆ ಒಂದಷ್ಟು ಸ್ಥಿರತೆ ನಮ್ಮದಾಗಿದೆ . ಉಳಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗುವ ಬದಲಾವಣೆಗಳಿಗೆ ಮತ್ತು ಅದರಿಂದ ನಮ್ಮ ಮೇಲೆ ಆಗುವ ಪರಿಣಾಮಗಳಿಗೆ ಪೂರ್ಣ ಸಿದ್ದರಾರುವುದು ಅಸಾಧ್ಯ . ಹೀಗಾಗಿ ಕಾಣದ ನಾಳೆಗಾಗಿ ಇಂದು ಬಲಿ ಕೊಡುವುದು ಎಷ್ಟು ಒಳ್ಳೆಯದು ? ಅಲ್ಲದೆ ಮೀಸಲು ನಿಧಿಯ ಪೂರ್ಣ ಹಣವನ್ನ ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿಲ್ಲ . ಇದು ಸಕಾರಾತ್ಮಕ ಅಂಶ . ಮೀಸಲು ನಿಧಿ ಎಂದರೆ ಅದು ಆಪತ್ಕಾಲಕ್ಕೆ ಉಪಯೋಗಿಸಲು ಇಟ್ಟ ಹಣ ಯಾವುದೇ ಅಪಾಯವಿಲ್ಲದ ಸಮಯದಲ್ಲಿ ಇದಕ್ಕೆ ಕೈ ಹಾಕಿದ್ದಾರೆ ಎನ್ನುವ ದೃಷ್ಟಿಯಿಂದ ನೋಡಿದರೆ ಇದು ನಕಾರಾತ್ಮಕ ಅಂಶ.

- ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp