ಪ್ರಸಿದ್ಧಿಯಲ್ಲಿ, ವ್ಯಾಪಾರದಲ್ಲಿ ಸೂಪರ್, ಲಾಭದ ಲೆಕ್ಕದಲ್ಲಿ ಮಾತ್ರ ಪಾಪರ್! ಇದು ಹೊಸ ವ್ಯಾಪಾರ ಶಖೆ!! 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಅಮೆಜಾನ್-ಪೆಟಿಎಂ
ಅಮೆಜಾನ್-ಪೆಟಿಎಂ

ಭಾರತದಲ್ಲಿ ವ್ಯಾಪಾರ ಮಾಡುವುದು ಸುಲಭದ ಮಾತಲ್ಲ. ವ್ಯಾಪಾರ ಅಂದರೆ ಅದು ಯಾವುದೇ ಇರಲಿ ಉದಾಹರಣೆಗೆ ಸಣ್ಣ ಹೋಟೆಲ್ ನಿಂದ ಶಾಪಿಂಗ್ ಮಾಲ್, ಕೊನೆಗೆ ಅಮೆಜಾನ್, ಪೇಟಿಎಂ ನಂತಹ ದೈತ್ಯ ಸಂಸ್ಥೆಗಳವರೆಗೆ ಇದು ಎಲ್ಲರಿಗೂ ಅನ್ವಯಿಸುವ ಮಾತು. ಸರಳವಾಗಿ ಹೇಳಬೇಕೆಂದರೆ ಇಲ್ಲಿ ಅವಕಾಶಗಳು ಹೇರಳವಾಗಿವೆ. ಆದರೆ ಮಾರುಕಟ್ಟೆಯ ಮೇಲೆ ಪಾರುಪತ್ಯ ಸಾಧಿಸಲು ಇಲ್ಲಿ ಮಾಡುವಷ್ಟು ಸರ್ಕಸ್ ಬೇರೆ ಯಾವ ದೇಶದಲ್ಲೂ ಮಾಡುವುದಿಲ್ಲ. 

ಇದಕ್ಕೆ ಬಹು ಮುಖ್ಯ ಕಾರಣ ಯಾವುದೇ ಒಂದು ವ್ಯಾಪಾರ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಬೆಳೆಯಿತು ಎಂದುಕೊಳ್ಳಿ ಅದರ ಸುತ್ತಮುತ್ತ ಅದೇ ಮಾದರಿಯ ಹತ್ತಾರು ಅಂಗಡಿಗಳು ತೆರೆಯುತ್ತವೆ. ಅದು ಯಾವ ಮಟ್ಟಕ್ಕೆ ಎಂದರೆ ಪ್ರಥಮವಾಗಿ ತೆರೆದ ಅಂಗಡಿಯನ್ನ ನಾಚಿಸುವ ಮಟ್ಟಕ್ಕೆ. ಇಲ್ಲಿರುವಷ್ಟು ಸ್ಪರ್ಧೆ ಬೇರೆಲ್ಲೂ ಕಾಣ ಸಿಗುವುದಿಲ್ಲ. ಇದಕ್ಕೆ ಇನ್ನೊಂದು ಮುಖ್ಯ ಕಾರಣ ಇಲ್ಲಿ ಕಸ ಗುಡಿಸುವ ವ್ಯಕ್ತಿ ಕೂಡ ಹೇಗಾದರೂ ಮಾಡಿ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವ ಕನಸು ಕಾಣುವುದು. ಕೈಲಿರುವ ಕೆಲಸ ಕಸ ಗುಡಿಸುವುದರ ಮೇಲೆ ಮಾತ್ರ ಪ್ರೀತಿ ಇರುವುದಿಲ್ಲ. ಇರಲಿ... 

ಇಂತಹ ಸ್ಪರ್ಧೆ ಕೇವಲ ಅಂಗಡಿ ಅಥವಾ ಸಣ್ಣ ಮಟ್ಟದ ವ್ಯಾಪಾರದಲ್ಲಿ ಇರುತ್ತದೆ ಎಂದು ಭಾವಿಸಿದರೆ ಅದು ತಪ್ಪು. ಇಂದು ಪೇಟಿಎಂ ಹೆಸರು ಕೇಳದವರು ಯಾರು? ಎನ್ನುವ ಮಟ್ಟಕ್ಕೆ ಭಾರತದಲ್ಲಿ ಅದು ಹರಡಿದೆ. ಇಂತಹ ಪೇಟಿಎಂ ಹುಟ್ಟು, ನಡೆದು ಬಂದ ಹಾದಿ ಮತ್ತು ಅದರ ಆರ್ಥಿಕ ಸ್ಥಿತಿಗತಿ ಜೊತೆಗೆ ಭಾರತದಲ್ಲಿ ಪೇಟಿಎಂ ಗೆ ತೀವ್ರ ಸ್ಪರ್ಧೆ ನೀಡಲು ಯಾವ ಸಂಸ್ಥೆಗಳು ಸಿದ್ಧವಾಗುತ್ತಿವೆ ಎನ್ನುವುದರ ವಿವರಗಳನ್ನ ತಿಳಿದುಕೊಳ್ಳೋಣ. ಇಲ್ಲಿ ಸಿಗುವ ವ್ಯಾಪಾರದ ಒಳಸುಳಿ ಕೇವಲ ಪೇಮೆಂಟ್ ಬ್ಯಾಂಕ್ ಗಳಿಗೆ ಅಥವಾ ಟೆಕ್ನಾಲಜಿ ಕಂಪನಿಗಳಿಗೆ ಮಾತ್ರ ಅನ್ವಯಿಸುತ್ತದೆ ಎನ್ನುವ ಭಾವನೆ ಬೇಡ. ಇದು ಸಮಾಜದ ಎಲ್ಲಾ ಸ್ತರಗಳಲ್ಲಿ ಯಾವುದೇ ರೀತಿಯ ವ್ಯಾಪಾರವಿರಲಿ ಒಂದಲ್ಲ ಒಂದು ಹಂತದಲ್ಲಿ ನಡೆದು ಹೋಗಬೇಕಾದ ದಾರಿ. ಅದೇನು? ಅದರತ್ತ ಚಿತ್ತ ಹರಿಸೋಣ. 

ಪೇಟಿಎಂ ಹುಟ್ಟು:

ವಿಜಯ್ ಶೇಖರ್ ಶರ್ಮ ಎನ್ನುವ 41 ವಯೋಮಾನದ ವ್ಯಕ್ತಿ, 2000ನೇ ಇಸವಿಯಲ್ಲಿ ಅಂದರೆ ಅಂದಿಗೆ 23 ವರ್ಷದ ಯುವಕ ಒನ್ 97 ಕಮ್ಯುನಿಕೇಷನ್ ಎನ್ನುವ ಸಂಸ್ಥೆಯನ್ನ ಸ್ಥಾಪಿಸುತ್ತಾರೆ. ಮೊಬೈಲ್ ನಲ್ಲಿ ಭವಿಷ್ಯ ನೀಡುವ ಒಂದು ಸೇವೆ ನೀಡುವ ಸಣ್ಣ ಸಂಸ್ಥೆಯಾಗಿ ಇದು ಕಾರ್ಯ ನಿರ್ವಹಿಸಲು ಶುರು ಮಾಡುತ್ತದೆ. ನಂತರ ಗೇಮಿಂಗ್ ಮತ್ತು ರಿಂಗ್ಟೋನ್ ಇತರ ಸೇವೆಗಳನ್ನ ಸೇರಿಸಿಕೊಳ್ಳುತ್ತದೆ. 2010 ರಲ್ಲಿ ಪೇಟಿಎಂ ಎನ್ನುವ ಇನ್ನೊಂದು ಸಂಸ್ಥೆಯನ್ನ ತೆರೆಯುತ್ತಾರೆ. ಆಗ ಇದು ಕೇವಲ ಮೊಬೈಲ್ ಬಿಲ್ ಪಾವತಿಸಲು ಮತ್ತು ಕೇಬಲ್ ಬಿಲ್ ಪಾವತಿಸಲು ಮಾತ್ರ ಬಳಕೆಯಾಗುತ್ತಿರುತ್ತದೆ. ಪೇಟಿಎಂ ತೆರೆಯುವ ಸಮಯದಲ್ಲಿ ಹಣಕ್ಕಾಗಿ ಒನ್ 97 ಕಮ್ಯುನಿಕೇಷನ್ ಸಂಸ್ಥೆಯ ಬೋರ್ಡ್ ಮುಂದೆ ನಿಲ್ಲುತ್ತಾರೆ. ಚೆನ್ನಾಗಿ ನಡೆಯುತ್ತಿರುವ ವ್ಯಾಪಾರ ಇರುವಾಗ ಹೊಸ ವ್ಯಾಪಾರ ಏಕೆ ಮಾಡಬೇಕು? ಅಲ್ಲದೆ ಅಂದಿನ ದಿನದಲ್ಲಿ ಇಂಟರ್ನೆಟ್ ಬಳಸುವರ ಸಂಖ್ಯೆ ಕೇವಲ 14 ಕೋಟಿ. ಸ್ಮಾರ್ಟ್ ಫೋನ್ ಬಳಕೆ ಇಂದಿನ ಸ್ಫೋಟಕ ಹಂತವನ್ನ ತಲುಪಿರಲಿಲ್ಲ. ಲೆಕ್ಕಾಚಾರ ಮಾಡಿದ ಬೋರ್ಡ್ ಪ್ರಯತ್ನ ಮಾಡಿ ಎಂದು ಒಂದು ಸಣ್ಣ ಮೊತ್ತದ ಹಣವನ್ನ ನೀಡುತ್ತದೆ. ಶರ್ಮ ತಮ್ಮ ಹಣವಾಗಿದ್ದ 20 ಲಕ್ಷ ಅಮೆರಿಕನ್ ಡಾಲರ್ ಅನ್ನು ಪೇಟಿಎಂ ಕನಸಿಗೆ ಸುರಿಯುತ್ತಾರೆ. ಪೇಟಿಎಂ ಧನಾತ್ಮಕ ಫಲಿತಾಂಶ ನೀಡಲು ಶುರು ಮಾಡುತ್ತದೆ. ಆಗ 97 ಕಮ್ಯುನಿಕೇಷನ್ ಸಂಸ್ಥೆ 'ಗೋ ಬಿಗ್ ಆರ್ ಗೋ ಹೋಂ' ಎನ್ನುವ ಒಂದು ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿರುತ್ತದೆ. ಅಂದರೆ ಗೆದ್ದರೆ ಎಲ್ಲವೂ ಸಿಗುತ್ತದೆ. ಸೋತರೆ? ಇದ್ದದೆಲ್ಲ ಕಳೆದುಕೊಂಡು ಬರಿ ಕೈಯಲ್ಲಿ ಮನೆಗೆ ಹೋಗುವ ಸ್ಥಿತಿ. ಗೋ ಬಿಗ್ ಎನ್ನುವುದಕ್ಕೆ ಆಡಳಿತ ಮಂಡಳಿ ಜೈ ಅನ್ನುತ್ತದೆ. 

ಪೇಟಿಎಂ ಇಲ್ಲಿಯವರೆಗೆ ನೆಡೆದು ಬಂದ ಹಾದಿ:  

2012 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಮೊಬೈಲ್ ವಾಲೆಟ್ ತೆರೆಯಲು ಅನುಮತಿ ಸಿಗುತ್ತದೆ. ಇದು ಪೇಟಿಎಂಗೆ ಸಿಕ್ಕ ಅತ್ಯಂತ ದೊಡ್ಡ ಗೆಲುವು. ನಂತರ 2014ರಲ್ಲಿ ಉಬರ್ ಸಂಸ್ಥೆಯ ಜೊತೆ ಅವರ ಎಲ್ಲಾ ಕ್ಯಾಬ್ ಗಳಲ್ಲಿ ಪೇಟಿಎಂ ಮೂಲಕ ಹಣ ಸಂದಾಯ ಮಾಡುವ ಅವಕಾಶ ಗ್ರಾಹಕರಿಗೆ ನೀಡಲು ಆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. 2015 ರಲ್ಲಿ ಇಂಡಿಯನ್ ರೈಲ್ವೇಸ್ ಜೊತೆಗೆ ಪೇಟಿಎಂ ಮೂಲಕ ಪಾವತಿ ಮಾಡಬಹುದುದಾದ ಆಯ್ಕೆಯನ್ನ ಗ್ರಾಹಕರಿಗೆ ನೀಡುವ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಗಮನಿಸಿ ಇಂಡಿಯನ್ ರೈಲ್ವೇಸ್ ವರ್ಷಕ್ಕೆ ಎರಡೂವರೆ ಕೋಟಿಗೂ ಹೆಚ್ಚು ಟಿಕೆಟ್ ಮಾರುತ್ತದೆ. ಇದು ಪೇಟಿಎಂ ಗೆ ಸಿಕ್ಕ ಇನ್ನೊಂದು ಮಹತ್ತರ ಜಯ. ಆದರೇನು ಇವೆಲ್ಲವ ಮೀರಿದ ಜಯ ಅಥವಾ ಪೇಟಿಎಂ ಗೆ ಸಿಕ್ಕ ಮಹಾತಿರುವು ನವೆಂಬರ್ 2016! ಕೇಂದ್ರ ಸರಕಾರ ನೋಟು ಅಮಾನ್ಯ ಮಾಡುತ್ತದೆ. ಡಿಜಿಟಲ್ ಹಣ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ಒಂದು ತಿಂಗಳಲ್ಲಿ ಒಂದು ಕೋಟಿ ಹೊಸ ಗ್ರಾಹಕರನ್ನ ಪೇಟಿಎಂ ಪಡೆದುಕೊಳ್ಳುತ್ತದೆ. 2016ರ ನಂತರ ಪೇಟಿಎಂ ಭಾರತದ ಮನೆ ಮನೆಯ ಮಾತಾಗುತ್ತದೆ. ಇಂದಿಗೆ 40 ಕೋಟಿ ಗ್ರಾಹಕರನ್ನ ಹೊಂದಿದೆ. ಭಾರತದ ಅತಿ ದೊಡ್ಡ ಪೇಮೆಂಟ್ ವಾಲೆಟ್ ಎನ್ನುವ ಹೆಗ್ಗಳಿಕೆ ಹೊಂದಿದೆ. 

ಒಂದು ಉದ್ಯಮ ಯಶಸ್ಸು ಕಂಡರೆ ಅಲ್ಲಿ ನೂರು ಜನ ಸ್ಪರ್ಧಿಗಳು:

ಗಮನಿಸಿ ಇಂದಿಗೆ ಮೊಬೈಲ್ ಇಂಟರ್ನೆಟ್ ಬಳಸುವರ ಸಂಖ್ಯೆಯೇ 60 ಕೋಟಿ ಮೀರಿದೆ. ಅಂದರೆ ಭಾರತದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಜನಸಂಖ್ಯೆ ಮುಂಬರುವ ದಿನಗಳಲ್ಲಿ ಮೊಬೈಲ್ ಖರೀದಿ ಮತ್ತು ಇಂಟರ್ನೆಟ್ ಬಳಕೆ ಶುರು ಮಾಡುತ್ತಾರೆ. ಅರ್ಥ ಇನ್ನು 80 ಕೋಟಿ ಜನ ಗ್ರಾಹಕರು!! ಇದು ಎಂತಹವರನ್ನೂ ಆಸೆಯ ಕೂಪಕ್ಕೆ ದೂಡುತ್ತದೆ. ಹೀಗಾಗಿ ಕೆಲವರು ಹೊಸ ಸಂಸ್ಥೆ ತೆರೆಯುತ್ತಾರೆ. ಕೆಲವರು ಯಶಸ್ವಿ ಸಂಸ್ಥೆಯೊಂದಿಗೆ ಕೈ ಜೋಡಿಸುತ್ತಾರೆ. ಚೀನಾದ ಅಲಿಬಾಬಾ ಪೇಟಿಎಂ ನೊಂದಿಗೆ ಕೈಜೋಡಿಸಿದೆ. ಜಪಾನ್ ದೇಶದ ಸಾಫ್ಟ್ ಬ್ಯಾಂಕ್ ಕೂಡ ಪೇಟಿಎಂ ಅನ್ನು ಅಪ್ಪಿಕೊಂಡಿದೆ. ಜಪಾನ್ ನಲ್ಲಿ ಇದು 'ಪೆ ಪೆ' ಎನ್ನುವ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. 2020 ರ ಟೊಕಿಯೋ ಒಲಂಪಿಕ್ಸ್ ನಲ್ಲಿ ಬಂಪರ್ ಬೆಳೆ ತೆಗೆಯುವ ಕನಸು ಕಾಣುತ್ತಿದ್ದಾರೆ. ಇನ್ನು ಜಗದ್ವಿಖ್ಯಾತ ಹೂಡಿಕೆದಾರ ವಾರ್ನರ್ ಬಫೆಟ್ ಕೂಡ ಪ್ರಥಮ ಭಾರಿಗೆ ಭಾರತದಲ್ಲಿ ಹೂಡಿಕೆ ಮಾಡಿದ್ದು ಅದಕ್ಕೆ ಅವರ ಆಯ್ಕೆ ಪೇಟಿಎಂ. 

ಗೂಗೆಲ್ ಪೇ ಕೂಡ ಎರಡು ವರ್ಷದಿಂದ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹತ್ತಿರಹತ್ತಿರ 7 ಕೋಟಿ ಗ್ರಾಹಕರನ್ನ ಗೂಗೆಲ್ ಪೇ ಹೊಂದಿದೆ. ಭಾರತದಲ್ಲಿ ಈ ಕ್ಷೇತ್ರದಲ್ಲಿರುವ ದೊಡ್ಡ ಮಟ್ಟದ ಅವಕಾಶದ ಅರಿವು ಅದಕ್ಕಿದೆ. ಅಂತೆಯೇ ವಾಲ್ ಮಾರ್ಟ್ ನ ಫೋನ್ ಪೇ ಕೂಡ 15 ಕೋಟಿ ಗ್ರಾಹಕರನ್ನ ಹೊಂದಿದೆ. ಇನ್ನಷ್ಟು ಮಾರುಕಟ್ಟೆಯ ಷೇರು ಪಡೆಯಲು ಹವಣಿಸುತ್ತಿದೆ. ಅಮೆಜಾನ್ ಕೂಡ ತನ್ನದೇ ಆಪ್ ಹೊಂದಿದೆ. ಹೀಗೆ ಇನ್ನು ಲೆಕ್ಕಕ್ಕೆ ಇಲ್ಲದಷ್ಟು ಸಂಸ್ಥೆಗಳು ಸ್ಪರ್ಧೆಯಲ್ಲಿವೆ. ಎಲ್ಲಕ್ಕೂ ಮುಖ್ಯವಾಗಿ ವಾಟ್ಸಪ್ ಫೇಸ್ಬುಕ್ ನೊಂದಿಗೆ ಬೆರೆತು ಹೋಗಿದೆ. ಫೇಸ್ಬುಕ್ ವಾಟ್ಸಪ್ ಮೂಲಕ ಪೇಮೆಂಟ್ ಬ್ಯಾಂಕ್ ಕ್ಷೇತ್ರಕ್ಕೆ ಲಗ್ಗೆ ಇಡುವ ಹವಣಿಕೆಯಲ್ಲಿದೆ. ಗಮನಿಸಿ ವಾಟ್ಸಪ್ ಬಳಕೆದಾರರ ಸಂಖ್ಯೆ ಅತಿ ಹೆಚ್ಚು. ಹೀಗಾಗಿ ಇದು ಈ ಕ್ಷೇತ್ರದಲ್ಲಿ ಕಾಲಿಟ್ಟರೆ ಪೇಟಿಎಂ ತನ್ನ ಗ್ರಾಹಕರನ್ನ ಉಳಿಸಿಕೊಳ್ಳುತ್ತದೆಯೇ? ಎನ್ನುವುದು ಸದ್ಯದ ಪ್ರಶ್ನೆ. 

ಇಷ್ಟೆಲ್ಲ ಸಾಧನೆ ಮಾಡಿದ್ದರೂ ಕೂಡ ಲೆಕ್ಕ ಪತ್ರ ಹೇಳುವ ಕಥೆ ಮಾತ್ರ ವಿಚಿತ್ರ! 

2019ರ ಲೆಕ್ಕಪತ್ರದ ಪ್ರಕಾರ ಒನ್ 97, ಪೇಟಿಎಂನ ಮಾತೃ ಸಂಸ್ಥೆಯ ಒಟ್ಟು ನಷ್ಟ ನಾಲ್ಕು ಸಾವಿರ ಕೋಟಿ ರೂಪಾಯಿ! ಕಳೆದ ವರ್ಷದ (2018)ನಷ್ಟಕ್ಕಿಂತ 165 ಪ್ರತಿಶತ ನಷ್ಟದಲ್ಲಿ ಏರಿಕೆ ಕಂಡಿದೆ. ಹತ್ತಿರಹತ್ತಿರ 7೦೦ ಕೋಟಿ ರೂಪಾಯಿ ಸಾಲ ಕೂಡ ತಲೆಯ ಮೇಲಿದೆ. ಇದು ಗ್ರಾಹಕನ್ನ ಉಳಿಸಿಕೊಳ್ಳಲು ಆತನಿಗೆ ನೀಡುವ ಕ್ಯಾಶ್ ಬ್ಯಾಕ್ ನಲ್ಲಿ ಕಳೆದು ಕೊಂಡ ಹಣ. ಇದೆಲ್ಲ ಮುಂದೊಂದು ದಿನ ಆ ಹಣವನ್ನ ವಸೂಲಿ ಮಾಡುತ್ತೇವೆ ಎನ್ನುವ ನಂಬಿಕೆಯಿಂದ ಕಳೆದುಕೊಳ್ಳುತ್ತಿರುವ ಹಣ. ವಸ್ತುಸ್ಥಿತಿ ಹೀಗಿದ್ದೂ ಶರ್ಮ ಹೇಳುವುದು 'ಭಗವಂತ ನಮಗೆ ಖಂಡಿತ ದಾರಿ ತೋರಿಸುತ್ತಾನೆ' ಎನ್ನುವುದು. 

ಪೇಟಿಎಂ ಬೋರ್ಡ್ ರೂಮ್ನಲ್ಲಿ ಮಾತ್ರ ಜಪಾನ್ ಆಯ್ತು, ಮುಂದೆ ನ್ಯೂಯೋರ್ಕ್, ದುಬೈ, ಸಿಯೋಲ್, ಬಾರ್ಸಿಲೋನಾ ಎನ್ನುವ ಮಾತುಗಳು ಮಾತ್ರ ಕೇಳಿ ಬರುತ್ತಿದೆ. 

ಕೊನೆ ಮಾತು: ಮೇಲಿನ ಕಥೆ ಪೇಟಿಎಂ ಗೆ ಸಂಬಂಧಿಸಿದ್ದು ಅದರಲ್ಲಿ ಸಂಶಯವಿಲ್ಲ. ಆದರೆ ಗಮನಿಸಿ ಇಂದು ಭಾರತದ ಬಹುತೇಕ ದೊಡ್ಡ ವ್ಯಾಪಾರದ ಕಥೆಯಿದು. ಮಾರುಕಟ್ಟೆಯ ಮೇಲಿನ ಹಿಡಿತ, ಗ್ರಾಹಕನ್ನ ಹಿಡಿದಿಡುವ ಸ್ಪರ್ಧಯೆಯಲ್ಲಿ ಭಾರತೀಯ ವಿಮಾನ ಸಂಸ್ಥೆಗಳು ಮುಗ್ಗರಿಸಿದ್ದು ತಿಳಿದ ವಿಷಯವಾಗಿದೆ. ಪೇಮೆಂಟ್ ಬ್ಯಾಂಕ್ಗಳ ಕಥೆಯೂ ಹೀಗೆ ಆಗದಿರಲಿ. ವಾಟ್ಸಪ್ ಕೂಡ ಅಖಾಡಕ್ಕೆ ಇಳಿದರೆ ಇಲ್ಲಿನ ಸ್ಥಿತಿ ಬದಲಾಗುತ್ತದೆ. ನಾಲ್ಕು ಸಾವಿರ ಕೋಟಿ ನಷ್ಟದ ಕಂಪನಿ ಹೊಸ ಹುಮ್ಮಸ್ಸಿನಿಂದ ಸಾಲ ನಷ್ಟವಿಲ್ಲದ ಸಂಸ್ಥೆಯೊಂದಿಗೆ ಎಷ್ಟು ದಿನ ಸೆಣಸಾಡಲು ಸಾಧ್ಯ? ವಾರ್ನರ್ ಬಫೆಟ್ ಅಂತವರು ಸುಮ್ಮನೆ ಪೇಟಿಎಂ ನಲ್ಲಿ ಹೂಡಿಕೆ ಮಾಡಿರಲಾರರು ಅಲ್ಲವೇ? ಮುಂಬರುವ ದಿನಗಳು ಪೇಮೆಂಟ್ ಬ್ಯಾಂಕಿಂಗ್ ವಲಯದಲ್ಲಿ ಸಾಕಷ್ಟು ತಲ್ಲಣ ಮತ್ತು ಕಾದಾಟಗಳಿಗೆ ಅಣಿಯಾಗಲಿದೆ.   

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com