ಹಣಕ್ಲಾಸು: ರಿಟೇಲ್ ಮಾರುಕಟ್ಟೆ ಕುಸಿತ ಒಂದು ಅವಲೋಕನ...

ರಿಟೇಲ್ ಮಾರುಕಟ್ಟೆ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅಮೆರಿಕಾ ದೇಶದಲ್ಲಿ 2019 ರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರಿಟೇಲ್ ಮಳಿಗೆಗಳು ಮುಚ್ಚಿವೆ. ಇದೆ ವಿಷಯ ಯೂರೋಪಿನಲ್ಲೂ ಕಂಡು ಬರುತ್ತದೆ. ಭಾರತದಲ್ಲಿ ಕೂಡ ಹೆಚ್ಚು ಕಡಿಮೆ ಇದೆ ಸ್ಥಿತಿ. 
ಹಣಕ್ಲಾಸು: ರಿಟೇಲ್ ಮಾರುಕಟ್ಟೆ ಕುಸಿತ ಒಂದು ಅವಲೋಕನ...
ಹಣಕ್ಲಾಸು: ರಿಟೇಲ್ ಮಾರುಕಟ್ಟೆ ಕುಸಿತ ಒಂದು ಅವಲೋಕನ...

ರಿಟೇಲ್ ಮಾರುಕಟ್ಟೆ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅಮೆರಿಕಾ ದೇಶದಲ್ಲಿ 2019 ರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರಿಟೇಲ್ ಮಳಿಗೆಗಳು ಮುಚ್ಚಿವೆ. ಇದೆ ವಿಷಯ ಯೂರೋಪಿನಲ್ಲೂ ಕಂಡು ಬರುತ್ತದೆ. ಭಾರತದಲ್ಲಿ ಕೂಡ ಹೆಚ್ಚು ಕಡಿಮೆ ಇದೆ ಸ್ಥಿತಿ. 

ಭಾರತದಲ್ಲಿ ಒಂದು ಸಣ್ಣ ಬದಲಾವಣೆ ಇದೆ. ಮುಚ್ಚಿದ ಮಳಿಗೆಯನ್ನ ಬೇರೊಬ್ಬರು ಬಾಡಿಗೆಗೆ ಪಡೆದು ಇನ್ನೊಂದು ಅದೇ ತರಹದ ರಿಟೇಲ್ ಮಳಿಗೆ ತೆರೆಯುತ್ತಾರೆ. ಹೀಗೆ ವರ್ಷದಲ್ಲಿ ಮಳಿಗೆ ನಾಲ್ಕಾರು ಕೈ ಬದಲಾಯಿಸಿರುತ್ತದೆ. ಮುಂದುವರೆದ ದೇಶಗಳಲ್ಲಿ ಕಂಡಷ್ಟು ಬದಲಾವಣೆ ಇಲ್ಲಿ ಎದ್ದು ಕಾಣುವುದಿಲ್ಲ ಎನ್ನುವ ಒಂದಂಶವನ್ನ ಬಿಟ್ಟರೆ ಚಿಲ್ಲರೆ(ರಿಟೇಲ್) ವ್ಯಾಪಾರ ಮಾಡುವ ರೀತಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಬದಲಾಗಿ ಹೋಗಿದೆ. ನನ್ನ ಹಲವಾರು ಲೇಖನಗಳಲ್ಲಿ ಬರೆದಿರುವ ಒಂದು ಮಾತನ್ನ ಮತ್ತೆ ಇಲ್ಲಿ ಹೇಳಲು ಬಯಸುತ್ತೇನೆ. ನಾವು ಒಂದು ಆಟದಲ್ಲಿ ಪಾಲ್ಗೊಂಡಾಗ ಆಟದ ನಿಯಮವನ್ನ ಸರಿಯಾಗಿ ಅರಿತುಕೊಳ್ಳಬೇಕು. ಆಟದ ಮಧ್ಯದಲ್ಲಿ ಆಗುವ ಬದಲಾವಣೆಗಳನ್ನ ಕೂಡ ಗಮನಿಸುತ್ತಿರಬೇಕು. ಇವೆರೆಡೂ ಸರಿಯಾಗಿ ಮಾಡದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ. ಭಾರತದಲ್ಲಿ ರೈತರ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಅವರ ಬದುಕು ಅವರೇ ಕಟ್ಟಿಕೊಂಡಿರುವವರು ಚಿಲ್ಲರೆ ವ್ಯಾಪಾರಿಗಳು. 

ಸಗಟು ವ್ಯಾಪಾರಿಗಳಿಂದ ಕೊಂಡು ಗ್ರಾಹಕರಿಗೆ ಮಾರುವರನ್ನ ರಿಟೇಲ್ ವ್ಯಾಪಾರಿಗಳು ಎನ್ನುತ್ತಾರೆ. ರಸ್ತೆ ಬದಿಯಲ್ಲಿ ಇರುವ ಸ್ಟೇಷನರಿ ಅಂಗಡಿಯಿಂದ ಮಾಲ್ ನಲ್ಲಿರುವ ಬಟ್ಟೆ ವ್ಯಾಪಾರಿಯವರೆಗೆ ಎಲ್ಲವೂ ರಿಟೇಲ್ ಬಿಸಿನೆಸ್ ಅಡಿಯಲ್ಲಿ ಬರುತ್ತದೆ. ಬ್ರಾಂಡೆಡ್ ವಾಚ್, ಬಟ್ಟೆ, ಶೂಸ್ ನಿಂದ ಹಿಡಿದು ತರಕಾರಿ ಅಂಗಡಿ ಕೂಡ ಇದರಲ್ಲಿ ಸೇರುತ್ತದೆ. ಜಗತ್ತಿನಾದ್ಯಂತ ರಿಟೇಲ್ ವ್ಯಾಪಾರ ಕುಸಿಯುತ್ತಿದೆ ಎನ್ನುವ ಕೂಗು ವ್ಯಾಪಕವಾಗಿದೆ.

ಇದಕ್ಕೆ ಕಾರಣಗಳು ಏನಿರಬಹುದು? ಎನ್ನುವುದನ್ನ ನೋಡೋಣ. ನಂತರ ಇದಕ್ಕೆ ಉತ್ತರಗಳನ್ನ ಹುಡುಕೋಣ. ರಿಟೇಲ್ ಜಗತ್ತು ಉತ್ತರಗಳಿಗೆ ಹಾತೊರೆಯುತ್ತಿದೆ.

ಎಲ್ಲಕ್ಕೂ ಮೊದಲು ಜಗತ್ತಿನಾದ್ಯಂತ ರಿಟೇಲ್ ಶಾಪ್ ಗಳಿಗೆ ನೀಡುತ್ತಿರುವ ಬಾಡಿಗೆ ಬಹಳಷ್ಟು ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರದ ಪ್ರಕಾರ ಇರಬೇಕಾದ ಬಾಡಿಗೆಯ 80 ಅಥವಾ 10೦ ಪ್ರತಿಶತ ಹೆಚ್ಚು ಬಾಡಿಗೆ ಇದೆ. ಇದಕ್ಕೆ ಪ್ರಮುಖ ಕಾರಣ ಜಗತ್ತಿನಾದ್ಯಂತ ಕಳೆದ ಎರಡು ದಶಕಗಳಲ್ಲಿ ರಿಯಲ್ ಎಸ್ಟೇಟ್ ನಲ್ಲಿ ಆಗಿರುವ ಬದಲಾವಣೆ. ರಿಟೇಲ್ ಜಗತ್ತು ಇಷ್ಟೊಂದು ಹೆಚ್ಚಿನ ಮೊತ್ತದ ಬಾಡಿಗೆಯನ್ನ ಕೊಡುವ ಶಕ್ತಿ ಹೊಂದಿಲ್ಲ. 

ಎರಡನೆಯದಾಗಿ ಆನ್ಲೈನ್ ವ್ಯಾಪಾರ ಹೆಚ್ಚಾಗಿದೆ ಎನ್ನುವುದು ರಿಟೇಲ್ ಜಗತ್ತಿನಲ್ಲಿ ಕೇಳಿ ಬರುತ್ತಿರುವ ಕೂಗು. ಗ್ರಾಹಕರು ಹೆಚ್ಚಾಗಿ ಆನ್ಲೈನ್ ಮೂಲಕ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಅವರು ಅಂಗಡಿಗಳಿಗೆ ಭೇಟಿ ಕೊಡುವುದು ಕಡಿಮೆಯಾಗಿದೆ. 

ಮೂರನೆಯದಾಗಿ ಮಾಲ್ ಗಳ ಮೇಲಿನ ಆಸಕ್ತಿ ಜನರಿಗೆ ಕಡಿಮೆಯಾಗುತ್ತಿದೆ. ಮಾಲ್ ಗೆ ಹೋಗುವವರು ಚಲನಚಿತ್ರ ವೀಕ್ಷಣೆ ಮತ್ತು ಆಹಾರಕ್ಕೆ ಹೆಚ್ಚು ಹೋಗುತ್ತಿದ್ದಾರೆ. ಅಲ್ಲಿ ಬೇರೆ ವಸ್ತುಗಳನ್ನ ಖರೀದಿಸುವರ ಸಂಖ್ಯೆ ಬಹಳ ಕಡಿಮೆಯಾಗಿದೆ. ನೆಟ್ ಫ್ಲಿಕ್ಸ್ ಅಮೆಜಾನ್ ಪ್ರೈಮ್ ಇವೆಲ್ಲವೂ ಚಲನಚಿತ್ರ ವೀಕ್ಷಣೆಯನ್ನೂ ಬದಲಾಯಿಸಲು ಶುರು ಮಾಡಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮಾಲ್ ಖಾಲಿ ಹೊಡೆಯುತ್ತದೆ. ಅಮೆರಿಕಾದಲ್ಲಿ 1956 ರಲ್ಲಿ ಮೊತ್ತ ಮೊದಲ ಮಾಲ್ ಪ್ರಾರಂಭವಾಗಿತ್ತು. ಇದೀಗ ಮಾಲ್ ಗಳು ರಿಟೈರ್ಮೆಂಟ್ ಹಂತವನ್ನ ಅಲ್ಲಿ ತಲುಪಿದೆ. ಭಾರತ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಎಲ್ಲಾ ಮಾಲ್ ಗಳನ್ನ ಲೆಕ್ಕ ಹಾಕಿದರೆ ಅದರ ಸಂಖ್ಯೆ 2೦೦ ದಾಟುತ್ತದೆ. ಅವುಗಳಲ್ಲಿ ಇಂದು ಚೆನ್ನಾಗಿ ನಡೆಯುತ್ತಿರುವುದು ಮಾತ್ರ ಬೆರಳೆಣಿಕೆಯಷ್ಟು. 

ನಾಲ್ಕನೆಯದಾಗಿ ಇಂದಿನ ಗ್ರಾಹಕ ಬದಲಾಗಿದ್ದಾನೆ. ಹಿಂದೆ ಹಣ ಕೊಟ್ಟು ತನಗೆ ಬೇಕಾದ ವಸ್ತು ಖರೀದಿಸಿ ಹೋಗುತ್ತಿದ್ದರು. ಇಂದೇನಾಗಿದೆ..., ಆತ ಖರೀದಿಯನ್ನ ಲೈಫ್ ಸ್ಟೈಲ್ ಎಕ್ಸ್ಪೀರಿಯೆನ್ಸ್ ಎನ್ನುವ ಮಟ್ಟದಲ್ಲಿ ನೋಡಲು ಶುರು ಮಾಡಿದ್ದಾನೆ. ಇದನ್ನ ಶಾಪಿಂಗ್ ಎಕ್ಸ್ಪೀರಿಯೆನ್ಸ್ ಎಂದು ಕೂಡ ಕರೆಯುತ್ತಾರೆ. ಅಂದರೆ ಹಿಂದೆ ಖರೀದಿ ಎನ್ನುವುದು ಬಹುಬೇಗ ಮುಗಿದು ಹೋಗುವ ಪ್ರಕ್ರಿಯೆಯಾಗಿತ್ತು. ಇಂದು ಗ್ರಾಹಕನಿಗೆ ಆಯ್ಕೆಗಳು ಬಹಳಷ್ಟಿವೆ. ಖರೀದಿಸುವ ವಸ್ತುವಿಗಿಂತ ಖರೀದಿ ಮಾಡುವಾಗ ಎಡಿಎ ಅನುಭವಕ್ಕೆ ಆತ ಹೆಚ್ಚು ಮಹತ್ವವನ್ನ ಕೊಡಲು ಶುರು ಮಾಡಿದ್ದಾನೆ. ಹೀಗಾಗಿ ಬದಲಾವಣೆಗೆ ಸಜ್ಜಾಗದ ರಿಟೇಲ್ ವ್ಯಾಪಾರ ಕುಸಿಯುವುದು ಸಹಜ. 

ಐದನೆಯದಾಗಿ ಮತ್ತು ಬಹು ಮುಖ್ಯವಾಗಿ ಜಗತ್ತು ಹಿಂದೆಂದೂ ಕಾಣದ ಸ್ಪರ್ಧೆಯನ್ನ ಇಂದು ಕಾಣುತ್ತಿದೆ. ಒಂದು ವ್ಯಾಪಾರ ಒಂದಷ್ಟು ಯಶಸ್ಸು ಕಂಡರೆ ಸಾಕು ಅದೇ ರೀತಿಯ ವ್ಯಾಪಾರವನ್ನ ಹತ್ತು ಜನ ಮಾಡಲು ಶುರು ಮಾಡುತ್ತಾರೆ. ಮುಂದಿನ ಪರಿಣಾಮಗಳನ್ನ ಲೆಕ್ಕ ಹಾಕದೆ ತೆಗೆದುಕೊಳ್ಳುವ ಇಂತಹ ನಿರ್ಧಾರಗಳು ವ್ಯಾಪಾರ ಕುಸಿತಕ್ಕೆ ಕಾರಣವಾಗುತ್ತದೆ. ಹಾಗೆ ನೋಡಿದರೆ ವ್ಯಾಪಾರ ಕುಸಿತ ಅನ್ನುವದಕ್ಕಿಂತ ವ್ಯಾಪಾರ ವಿಭಾಗಿಸಲ್ಪಟ್ಟಿದೆ. ಮೇಲ್ನೋಟಕ್ಕೆ ಅದು ಕುಸಿತ ಎನ್ನಿಸುತ್ತದೆ. 

ಇದಕ್ಕೆ ಉತ್ತರಗಳು ಇವೆಯೇ? 

ಖಂಡಿತ ಉತ್ತರವಿದೆ. ಉತ್ತರವಿಲ್ಲದ ಪ್ರಶ್ನೆ ಜಗತ್ತಿನಲ್ಲಿ ಇಲ್ಲಿಯವರೆಗೆ ಇಲ್ಲ. ಎಲ್ಲಕೂ ಪ್ರಮುಖವಾಗಿ ರಿಟೇಲ್ ಶಾಪ್ ಬಾಡಿಗೆ ಪಡೆಯುವ ಬದಲು ಕಟ್ಟಡದ ಮಾಲೀಕನನ್ನ ವ್ಯಾಪಾರದಲ್ಲಿ ಭಾಗಿಯಾಗುವಂತೆ ಮಾಡಬೇಕು. ಅಂದರೆ ವ್ಯಾಪಾರವಾಗಲಿ ಬಿಡಲಿ ತಿಂಗಳಿಗಿಷ್ಟು ಎಂದು ನೀಡುವ ಬದಲು ವ್ಯಾಪಾರದ ಆಧಾರದ ಮೇಲೆ ಹಣವನ್ನ ನೀಡುವ ಒಪ್ಪಂದಕ್ಕೆ ಬರಬೇಕು. ಕಟ್ಟಡದ ಮಾಲೀಕರು ತಿಂಗಳು ಗಟ್ಟಲೆ ಖಾಲಿ ಇರುವುದಕ್ಕಿಂತ ಇದಕ್ಕೆ ಒಪ್ಪುತ್ತಾರೆ. ಅಮೆರಿಕಾ ಮತ್ತು ಯೂರೋಪು ದೇಶಗಳಲ್ಲಿ ಇದು ಈಗಾಗಲೇ ಹೆಚ್ಚು ಜನಪ್ರಿಯವಾಗುತ್ತಿದೆ. ಭಾರತದಲ್ಲಿ ಕೂಡ ಇದನ್ನ ಅನುಸರಿಸಬೇಕು. ಇನ್ನು ಆನ್ಲೈನ್ ವ್ಯಾಪಾರ ರಿಟೇಲ್ ವ್ಯಾಪಾರಕ್ಕೆ ಪೂರಕವಾಗಿ ಮಾಡಿಕೊಳ್ಳಬೇಕು. ಬದಲಾದ ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕು. ವಾಕ್ ಇನ್ ಕಸ್ಟಮರ್ ಜೊತೆಗೆ ಆನ್ಲೈನ್ ಕಸ್ಟಮರ್ ಸಿಕ್ಕರೆ ಅದು ಉತ್ತಮವಲ್ಲವೇ? ಮನಸ್ಥಿತಿ ಬದಲಾವಣೆ ಮಾಡಿಕೊಂಡರೆ ಇದು ಸಮಸ್ಯೆಯೇ ಅಲ್ಲ. ಮಾಲ್ ಗಳು ಭಾರತದಲ್ಲಿ ಎಷ್ಟು ವೇಗವಾಗಿ ಬಂದವೂ ಅಷ್ಟೇ ವೇಗವಾಗಿ ಅಳಿವಿನ ಅಂಚಿಗೆ ಸರಿಯುತ್ತಿವೆ. ಭಾರತದ ಮಟ್ಟಿಗೆ ಮಾಲ್ ಗಳಲ್ಲಿ ಬೆಲೆ ಜಾಸ್ತಿ ಎನ್ನುವ ಗ್ರಾಹಕನ ಮನಸ್ಥಿತಿ ಇದಕ್ಕೆ ಕಾರಣ. ಮಾಲ್ ಗಳಲ್ಲಿ ಶಾಪ್ ರೆಂಟ್ ಮತ್ತು ಮೈಂಟೆನನ್ಸ್ ಖರ್ಚು ಬಹಳ ಹೆಚ್ಚು. ಮಾಲ್ ಎಂದೂ ನಮ್ಮ ರೀತಿಯ ವ್ಯಾಪಾರಕ್ಕೆ ಪೂರಕವಾಗಿರಲಿಲ್ಲ. ಗ್ರಾಹಕ ಬದಲಾಗಿದ್ದಾನೆ ನಿಜ. ಆತನಿಗೇನು ಬೇಕು ಎನ್ನುವುದನ್ನ ಅರಿತು ಅದರಂತೆ ನಡೆದರೆ ಇದು ಕೂಡ ಸಮಸ್ಯೆಯಲ್ಲ. ಸ್ಪರ್ಧೆ ಎನ್ನುವುದು ಎಲ್ಲಾ ಕಾಲದಲ್ಲೂ ಆ ಸಮಯಕ್ಕೆ ತಕ್ಕಂತೆ ಇತ್ತು. ಇಂದು ಇನ್ನೂ ಹೆಚ್ಚಾಗಿದೆ. ಒಂದೇ ರೀತಿಯ ವ್ಯಾಪಾರವನ್ನ ಕೇವಲ ಇಷ್ಟು ಜನ ಮಾತ್ರ ಮಾಡಬಹುದು ಎನ್ನುವ ಕಾನೂನು ಜಾರಿಗೆ ತರಬೇಕು. ಉದಾಹರಣೆಗೆ ಒಂದು ಲಕ್ಷ ಜನ ಇರುವ ಬಡಾವಣೆಯಲ್ಲಿ ಐದಕ್ಕಿಂತ ಹೆಚ್ಚು ಮೆಡಿಕಲ್ ಶಾಪ್ ಇರಬಾರದು.. ಹೀಗೆ... ಇಂತಹ ಸರಳ ಕಾನೂನು ವ್ಯಾಪಾರ ಹಂಚಿ ಹೋಗುವುದನ್ನ ತಡೆಯುತ್ತದೆ. 

ರಿಟೇಲ್ ಮಾರುಕಟ್ಟೆ ನಿಜವಾಗಿ ಕುಸಿಯುತ್ತಿದೆಯೆ? 

ಗ್ರಾಹಕ ಒಂದಲ್ಲ ಒಂದು ರೀತಿಯಲ್ಲಿ ಖರೀದಿ ಮಾಡುತ್ತಿದ್ದಾನೆ ಅಲ್ಲವೇ? ಅಂಗಡಿಗೆ ಬಂದು ಖರೀದಿ ಮಾಡುವುದರ ಬದಲು ಕೂತಲ್ಲಿಂದ ಆನ್ಲೈನ್ ಮೂಲಕ ಖರೀದಿಸುತ್ತಾನೆ. ನಾವು ರಿಟೇಲ್ ಮಾರುಕಟ್ಟೆಗೆ ಕೊಟ್ಟಿರುವ ಡೆಫಿನಿಷನ್ ಆತ ಬದಲು ಮಾಡಿದ್ದಾನೆ ಅಷ್ಟೇ. ಬದಲಾದ ಸನ್ನಿವೇಶದಲ್ಲಿ ಅದಕ್ಕೆ ಒಗ್ಗಿಕೊಂಡು ನಡೆದರೆ ಸಾಕು. ಅಲ್ಲದೆ ರಿಟೇಲ್ ಬಿಸಿನೆಸ್ ಗಾಗಿ ಅಮೆರಿಕಾ ಅಂತಹ ದೇಶದಲ್ಲಿ ಸಾಲದ ಮೂಲಕ ಬಹಳಷ್ಟು ಹಣವನ್ನ ಸುರಿದಿದ್ದಾರೆ. ಹೀಗಾಗಿ ಅಲ್ಲಿ ಇದರ ನೋವು ಹೆಚ್ಚಾಗಿದೆ. ಭಾರತದಲ್ಲಿ ಕೂಡ ಹಿಂದಿನ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಮಾತು ನೆನೆಗುದಿಗೆ ಬೀಳುತ್ತಿದೆ. ಹೀಗಾಗಿ ಇಲ್ಲಿಯ ರಿಟೇಲ್ ಮಾರುಕಟ್ಟೆ ಕೂಡ ಬಹಳಷ್ಟು ಸಾಲದ ಬಲದ ಮೇಲೆ ನಿಂತಿದೆ. ಹೀಗಾಗಿ ವ್ಯಾಪಾರದಲ್ಲಿ ಒಂದಷ್ಟು ಇಳಿತ ಕಂಡರೂ ಅದು ಬಹಳ ಎನ್ನುವ ಮಟ್ಟಕ್ಕೆ ಇದು ತಲುಪಿದೆ. 

ಕೊನೆ ಮಾತು: ಗ್ರಾಹಕ ಖರೀದಿಸುವ ತನ್ನ ರೀತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾನೆ. ಅದರ ಜೊತೆಗೆ ವ್ಯಾಪಾರ ಮಾಡುವ ರೀತಿ ಕೂಡ ಬದಲಾಗಬೇಕು. ಬದಲಾಗುತ್ತದೆ. ಈ ಮಧ್ಯದ ಬದಲಾವಣೆ ಹಂತದಲ್ಲಿ ನೋವು ಸಹಜ. ರಿಟೇಲ್ ಮಾರುಕಟ್ಟೆ ಜಗತ್ತಿನಾದ್ಯಂತ ಪರಿವರ್ತನೆಯ ಹಂತದಲ್ಲಿದೆ. ವ್ಯಾಪಾರ ಕುಸಿತ ಎನ್ನುವುದು ಈ ಪರಿವರ್ತನೆಯ ದಾರಿಯಲ್ಲಿ ಸಹಜವಾಗಿ ಸಿಕ್ಕಿರುವ ಉಪ ಉತ್ಪನ್ನ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com