ಹೈಪ್ ಅಂಡ್ ಡ್ರಾಪ್ ಮಾರುಕಟ್ಟೆಯಲ್ಲಿ ಸ್ಥಿತಪ್ರಜ್ಞತೆಯೊಂದೇ ಮದ್ದು...!

ಷೇರು ಮಾರುಕಟ್ಟೆಯಲ್ಲಿ ಹೈಪ್ ಅಂಡ್ ಡ್ರಾಪ್ ಎನ್ನುವ ಒಂದು ಮೋಸದಾಟವಿದೆ. ಬಹುತೇಕರಿಗೆ ಇದರ ಅರಿವಿರುವುದಿಲ್ಲ. ಇದೇನೆಂದರೆ ಹಲವು....

Published: 14th February 2019 12:00 PM  |   Last Updated: 14th February 2019 12:52 PM   |  A+A-


Hanaclassu: All You have to know about hype and drop in stock market investments

ಹೈಪ್ ಅಂಡ್ ಡ್ರಾಪ್ ಮಾರುಕಟ್ಟೆಯಲ್ಲಿ ಸ್ಥಿತಪ್ರಜ್ಞತೆಯೊಂದೇ ಮದ್ದು...!

Posted By : SBV SBV
Source : Online Desk
ಮೂರು ವಾರದ ಹಿಂದೆ ಫೇಸ್ಬುಕ್ ನಲ್ಲಿ ಒಬ್ಬರು ಸ್ಟಾಕ್ ಮಾರ್ಕೆಟ್ ಎನ್ನುವುದು ಜೂಜಾಟಕ್ಕಿಂತ ಕಡಿಮೆಯೇನಲ್ಲ ಎಂದು ಬರೆದುಕೊಂಡಿದ್ದರು. ಅವರು ಸ್ಟಾಕ್ ಮಾರ್ಕೆಟ್ ಕುರಿತು ಸೆಮಿನಾರ್ ಒಂದಕ್ಕೆ ಹೋಗಿದ್ದರು. ಸೆಮಿನಾರಿನಲ್ಲಿ ಹೇಗೆ ಇಪ್ಪತ್ತು ವರ್ಷದ ಹಿಂದೆ ಯಾವುದೋ ಒಂದು ಕಂಪನಿಯಲ್ಲಿ ಹೂಡಿದ್ದ ಹಣ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ ಎನ್ನುವುದನ್ನ ಹೇಳುತ್ತಿದ್ದರಂತೆ. ಒಟ್ಟಿನಲ್ಲಿ ಸಾರಂಶ ಇಷ್ಟೇ ನಮ್ಮ ಮೂಲಭೂತ ಹೂಡಿಕೆಗಳನ್ನ ಹೀಗಳೆಯುವುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಎಂದು ಹೇಳುವುದು ಸೆಮಿನಾರಿನ ಉದ್ದೇಶ. 

ಹೀಗೆ ಸ್ಟಾಕ್ ಮಾರ್ಕೆಟ್ನ ಬಗ್ಗೆ ಒಂದೆರೆಡು ದಿನದ ಅಥವಾ ಹಲವು ಗಂಟೆಗಳ ವಿವರಣೆ ಪಡೆದು ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿ ಅವರು ಹಣ ಕಳೆದುಕೊಂಡಿದ್ದರು. ಅವರ ಸ್ಥಿತಿ ತೆನಾಲಿ ರಾಮನ ಬೆಕ್ಕಿನಂತಾಗಿತ್ತು. ತಣ್ಣನೆಯ ಪಾತ್ರೆಯನ್ನ ಕೂಡ ಮುಟ್ಟಲು ಹೆದರುವಂತಾಗಿತ್ತು. ಅವರು ಆರ್ಥಿಕತೆಯ ಬಗ್ಗೆ ಬರೆಯುವ ಮತ್ತು ಮಾತನಾಡುವ ಎಲ್ಲರೂ ಖದೀಮರು ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಇದನ್ನ ಬರೆಯುವ ಉದ್ದೇಶ ಆ ವ್ಯಕ್ತಿಯ ಹೀಗಳೆಯಲು ಅಲ್ಲ. ಹಣ ಕಳೆದುಕೊಂಡ, ಮೋಸ ಹೋದ ವ್ಯಕ್ತಿ ಯಾರೇ ಆಗಿರಲಿ ಇಂತಹ ಪ್ರತಿಕ್ರಿಯೆ ಸಾಮಾನ್ಯ. ಇಂತಹ ಘಟನೆಗಳು ನಿತ್ಯವೂ ನಡೆಯುತ್ತಲೇ ಇರುತ್ತವೆ. ಆದರೂ ನಮ್ಮ ಜನ ಇದರಿಂದ ಬುದ್ಧಿ ಕಲಿಯುವುದಿಲ್ಲ. ಬೆಂಗಳೂರು, ಮುಂಬೈನಂತಹ ಮಹಾನಗರದಲ್ಲಿ ಸ್ಟಾಕ್ ಮಾರ್ಕೆಟ್ ಬಗ್ಗೆ ಬಣ್ಣ ಬಣ್ಣದ ಸೆಮಿನಾರುಗಳು ಸಾಮಾನ್ಯ. ನಿತ್ಯವೂ ಇಂತಹ ಆಮಿಷಗಳಿಗೆ ಬಲಿಯಾಗುವವರ ಸಂಖ್ಯೆಯೂ ವೃದ್ಧಿಸುತ್ತಲೇ ಇದೆ. ಇದು ಮಧ್ಯಮ ವರ್ಗದ ಜನರ ಕಥೆ. ಸ್ಟಾಕ್ ಮಾರ್ಕೆಟ್ನನ್ನ ಅಥವಾ ಬಣ್ಣದ ಕನಸು ಕಟ್ಟಿ ಕೊಡುವ ಜನರ ನಂಬುವ ಮುನ್ನ ನಿಮಗೆ ನೀವೇ ಕೆಲವು ಪ್ರಶ್ನೆಗಳನ್ನ ಮಾಡಿಕೊಳ್ಳಿ ಉತ್ತರ ತೃಪ್ತಿಕರವಾಗಿದ್ದರೆ ಹೂಡಿಕೆ ಮಾಡಿ. 
  1. ಸಾಮಾನ್ಯವಾಗಿ ಷೇರು ಮಾರುಕಟ್ಟೆ ಬ್ರೋಕರ್ಗಳು ಅಥವಾ ಸಂಸ್ಥೆಗಳು ಹೂಡಿಕೆ ಮೇಲಿನ ಲಾಭಂಶ ಅಥವಾ ವೃದ್ಧಿಯ ಪ್ರತಿಶತವನ್ನ ಹೆಚ್ಚಿಸಿ ಹೇಳುತ್ತವೆ. ಆಗೆಲ್ಲ ಹೂಡಿಕೆ ಮಾಡುವ ಮುನ್ನ ಮಾಡಬೇಕಾದ ಮೊದಲ ಕೆಲಸ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಎನ್ನುವ ಲಾಭಂಶದ ಪ್ರತಿಶತ ಎಷ್ಟು ಎನ್ನುವುದನ್ನ ತಿಳಿದುಕೊಳ್ಳುವುದು. ಬ್ರೋಕರ್ ಹೇಳುವ ಲಾಭಂಶ ಅದಕ್ಕಿಂತ ಹೆಚ್ಚಿದ್ದರೆ ಅದು ಎಚ್ಚರಿಕೆಯ ಕರೆಗಂಟೆ.!  ವಿಕ್ರಂ ಇನ್ವೆಸ್ಟ್ಮೆಂಟ್ ಎನ್ನುವ ಸಂಸ್ಥೆ ಲೋಹದ ಮೇಲಿನ ಹೂಡಿಕೆಯಲ್ಲಿ ಹತ್ತಿರತ್ತಿರ 60 ಪ್ರತಿಶತ ಲಾಭಂಶ ಸಿಗುತ್ತದೆ ಎಂದು ಹೇಳಿ ಕೋಟ್ಯಂತರ ರೂಪಾಯಿ ಹೂಡಿಕೆದಾರರ ಹಣವನ್ನ ತಿಂದು ತೇಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಗಮನಿಸಿ ಅಷ್ಟೊಂದು ಹೆಚ್ಚಿನ ಮಟ್ಟದ ಲಾಭ ನಿಜವಾಗಿ ಬರುವುದಾದರೆ ಆ ಸಂಸ್ಥೆಯವರೇ ಅದರ ಲಾಭ ಪಡೆಯಬಹುದಲ್ಲ? ಅವರೇಕೆ ಅದನ್ನ ನಿಮಗೆ ಕೊಡಲು ಬಯಸುತ್ತಾರೆ? 
  2. ಇನ್ನು ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಅನ್ನುವುದು ಕೂಡ ಅಷ್ಟೇ... ನಿಖರತೆಯಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆದ ಹಾಗೆ. ಹೂಡಿಕೆದಾರನಿಗೆ ಹೂಡಿಕೆಯ ಬಗ್ಗೆ ಕನಿಷ್ಠ ಜ್ಞಾನವಿಲ್ಲದೆ ಹೋದರೆ ಏನಾಗಬಹದು ಎನ್ನುವುದಕ್ಕೆ ಮಾರುಕಟ್ಟೆಯಲ್ಲಿ ನಾಯಿಕೊಡೆಯಂತೆ ಹೆಚ್ಚಿಕೊಂಡಿರುವ ಮ್ಯೂಚುಯಲ್ ಫಂಡ್ಗಳು ಮತ್ತು ಸಂಸ್ಥೆಗಳು ಸಾಕ್ಷಿ. ಮ್ಯೂಚುಯಲ್ ಫಂಡ್ ನಲ್ಲಿ ಹಲವು ಸಾವಿರ ವಿಧಗಳಿವೆ. ನಿಮ್ಮ ಹಣ ಎಲ್ಲಿ ಹೂಡಿಕೆಯಾಗುತ್ತಿದೆ? ಎನ್ನುವ ಅರಿವು ನಿಮಗಿದೆಯೇ? 
  3. ಷೇರು ಮಾರುಕಟ್ಟೆಯಲ್ಲಿ ಅಲ್ಪ ಸಮಯದ ಹೂಡಿಕೆ ಅಥವಾ ಅದೇ ದಿನ ಲಾಭ ತೆಗೆದುಕೊಂಡು ಹೊರಬರುವ ಕ್ರಿಯೆಗಳು ಹೂಡಿಕೆ ಎನ್ನಿಸಿಕೊಳ್ಳುವುದಿಲ್ಲ. ಅದು ಜೂಜಾಟ. ಧೀರ್ಘ ಕಾಲದ ಹೂಡಿಕೆಗಳು ಕೂಡ ಲಾಭ ತಂದುಕೊಡುತ್ತವೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಒಂದು ಸಂಸ್ಥೆ ಅತ್ಯಂತ ಯಶಸ್ವಿ ಎನ್ನಿಸಿಕೊಳ್ಳಲು ಹಲವಾರು ಕಾರಣಗಳಿರುತ್ತವೆ. ಯಾವುದೇ ಒಂದು ಕಾರಣ ಅಂದುಕೊಂಡಂತೆ ಕಾರ್ಯನಿರ್ವಹಿಸದೆ ಹೋದರೂ ಹೂಡಿಕೆ ಹಣ ಕರಗಿಹೋಗಬಹದು. 
  4. ಮೂಲಭೂತ ಹೂಡಿಕೆಗಳಾದ ಮನೆ, ನಿಶ್ಚಿತ ಠೇವಣಿ, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್, ಚಿನ್ನ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಇತ್ಯಾದಿಗಳ ಮೇಲೆ ಹಣ ಹೂಡಿಕೆ ಮಾಡಿ ಇನ್ನೂ ಹೆಚ್ಚಿನ ಹಣವಿದ್ದರೆ ಅದು ಐದಾರು ವರ್ಷ ಅವಶ್ಯಕತೆಯಿಲ್ಲ ಎನ್ನುವ ಹಾಗಿದ್ದರೆ ಮತ್ತು ಆಕಸ್ಮಿಕವಾಗಿ ಆ ಹಣ ಕರಗಿಹೋದರೂ ಪರವಾಗಿಲ್ಲ ಎನ್ನುವರು ಮಾತ್ರ ಷೇರು ಮಾರುಕಟ್ಟೆಯಲ್ಲಿ ಹಣವನ್ನ ಹೂಡಿಕೆ ಮಾಡಬೇಕು. ಇಂದಿನ ಐಟಿ ನೌಕರರು ಮನೆ ಸಾಲದಲ್ಲಿ ಇರುವುದು ಅಲ್ಲದೆ ಮ್ಯೂಚುಯಲ್ ಫಂಡ್, ಸಿಪ್ ಇತ್ಯಾದಿಗಳ ಕುಣಿಕೆಯಲ್ಲಿ ಯೋಚಿಸದೆ ಬೀಳುತ್ತಿದ್ದಾರೆ. 
  5. ಸ್ನೇಹಿತನೊಬ್ಬ ಷೇರು ಮಾರುಕಟ್ಟೆಯಲ್ಲಿ ಹಣ ಮಾಡಿದ ಕಥೆ ಸುಣ್ಣ ಬಣ್ಣ ಬಳಿದುಕೊಂಡು ಸ್ನೇಹಿತರ ವಲಯದಲ್ಲಿ ಗಿರಕಿ ಹೊಡೆಯುತ್ತದೆ. ಕೇಳುವುದಿನ್ನೇನು? ಸಾಲ ಮಾಡಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುತ್ತಾರೆ. ಗಮನಿಸಿ ಸಾಲ ಮಾಡಿ ತೊಡಗಿಸಿದ ಹಣವನ್ನ ಹೂಡಿಕೆ ಎನ್ನಲು ಬರುವುದಿಲ್ಲ. ಯಾವುದೇ ಕಾರಣಕ್ಕೂ ಸಾಲ ಮಾಡಿ ಷೇರು ಮಾರುಕಟ್ಟೆಯಲ್ಲಿ ಹಣವನ್ನ ತೊಡಗಿಸಬಾರದು. 
ಮೂಲಭೂತ ವಿಷಯಗಳನ್ನ ತಪ್ಪದೆ ಪಾಲಿಸಿದರೆ ಷೇರು ಮಾರುಕಟ್ಟೆಯನ್ನ, ದಲ್ಲಾಳಿಯನ್ನ, ಸೆಮಿನಾರು ಮಾಡಿದವರನ್ನ ನಿಂದಿಸುವ ಪ್ರಮೇಯ ಬರುವುದಿಲ್ಲ. ಕೊನೆಗೂ ನಿಮ್ಮ ಅನುಮತಿಯಿಲ್ಲದೆ ನಿಮ್ಮನ್ನ ಮೋಸಗೊಳಿಸುವುದು ಹೇಗೆ ಸಾಧ್ಯ? ಮಾಡುವ ಕೆಲಸದ ಪೂರ್ಣಜ್ಞಾನವಿಲ್ಲದೆ ಮಾಡುತ್ತೇವಲ್ಲ ಅದೇ ಅತ್ಯಂತ ದೊಡ್ಡ ಅಪಾಯ ಎನ್ನುತ್ತಾರೆ ವಾರ್ನರ್ ಬಫೆಟ್. ಅಂದರೆ ಗಮನಿಸಿ ನೋಡಿ ಹೂಡಿಕೆ ಮಾಡುತ್ತಿರುವ ಸಂಸ್ಥೆಯ ಪೂರ್ವಾಪರ, ಅಲ್ಲಿನ ಪ್ರೊಮೋಟರ್ಗಳ ವಿವರ, ಸಂಸ್ಥೆಯ ಉದ್ದೇಶ, ವಿಷನ್ ಇವುಗಳ ಅರಿಯದೆ ಇಂದಿಗೆ ಲಾಭಬರುತ್ತಿದೆ ಎನ್ನುವ ಕಾರಣಕ್ಕೆ ಹೂಡಿಕೆ ಮಾಡುವುದು ಕೂಡ ಜೂಜಾಟಕ್ಕಿಂತ ಕಡಿಮೆಯೇನಲ್ಲ. 

ಷೇರು ಮಾರುಕಟ್ಟೆಯಲ್ಲಿ ಹೈಪ್ ಅಂಡ್ ಡ್ರಾಪ್ ಎನ್ನುವ ಒಂದು ಮೋಸದಾಟವಿದೆ. ಬಹುತೇಕರಿಗೆ ಇದರ ಅರಿವಿರುವುದಿಲ್ಲ. ಇದೇನೆಂದರೆ ಹಲವು ಸಾವಿರ ಜನರನ್ನ ಡಿಮ್ಯಾಟ್ ಖಾತೆಯನ್ನು ತೆರೆಸಿ ಕೂರಿಸಿರುತ್ತಾರೆ. ಯಾವುದೋ ಒಂದು ಸಂಸ್ಥೆಯ ಷೇರು ಬೆಲೆಯನ್ನ ಹೆಚ್ಚಿಸುವಂತೆ ಹೇಳುತ್ತಾರೆ. ಇದೊಂದು ಸೃಷ್ಟಿತ (ಕೃತಕ) ಬೇಡಿಕೆ. ಅಂದರೆ ಗಮನಿಸಿ ರಾಮ ಕಂಪನಿಯ ಷೇರಿನ ಬೆಲೆ ಹತ್ತು ರೂಪಾಯಿ ಎಂದುಕೊಳ್ಳಿ ಅದನ್ನ ಹೈಪ್ ಮಾಡಲು ಆದರೆ ಅದಕ್ಕೆ ಬೇಡಿಕೆ ಸೃಷ್ಟಿಸಲು ಹೇಳಲಾಗುತ್ತದೆ. ಷೇರಿನ ಬೆಲೆ ನೂರು ರುಪಾಯಿಗೆ ತೆಗೆದುಕೊಂಡು ಹೋಗುತ್ತಾರೆ. ಇದು ನಿಜವಾದ ಹೂಡಿಕೆದಾರನ ಅರಿವಿಗೆ ಬರುವುದಿಲ್ಲ. ಆತ ರಾಮ ಕಂಪನಿಯ ಷೇರು ಚನ್ನಾಗಿದೆ ಎಂದು ಭಾವಿಸಿ ನೂರು ರೂಪಾಯಿ ಕೊಟ್ಟು ಕೊಳ್ಳುತ್ತಾನೆ. ಒಂದೆರೆಡು ದಿನದಲ್ಲಿ ಹೈಪ್ ಮಾಡಿದವರು ಅದನ್ನ ಡ್ರಾಪ್ ಮಾಡುತ್ತಾರೆ. ಅಂದರೆ ಬೆಲೆಯನ್ನ ಬೀಳಿಸಲು ಶುರು ಮಾಡುತ್ತಾರೆ. ಬೆಲೆ ಕುಸಿತ ಕಂಡು ಭಯದಿಂದ ನಿಜವಾದ ಹೂಡಿಕೆದಾರ ಅದನ್ನ ಮಾರುತ್ತಾನೆ. ಹಣ ಕಳೆದುಕೊಳ್ಳುತ್ತಾನೆ. ಹೈಪ್ ಅಂಡ್ ಡ್ರಾಪ್ ಮೋಸದಾಟ ಮಾಡಿದವರು ಮಾರಾಟದಲ್ಲಿ ಮತ್ತು ಮರು ಖರೀದಿಯಲ್ಲಿ ಎರಡೂ ವೇಳೆ ಹಣ ಗಳಿಸುತ್ತಾರೆ. 

ಹೀಗಾಗಿ ಷೇರು ಮಾರುಕಟ್ಟೆ ಎನ್ನುವುದು ಎಲ್ಲರಿಗೂ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕ ಭದ್ರತೆಯಿಲ್ಲದವರು ಇತ್ತ ಮುಖ ಮಾಡಿ ಕೂಡ ಮಲಗಬಾರದು. ಸುಲಭವಾಗಿ ಮತ್ತು ವೇಗವಾಗಿ ಹಣ ವೃದ್ಧಿಸಿಕೊಳ್ಳಬೇಕೆನ್ನುವ ಆಸೆ ಅಥವಾ ದುರಾಸೆ ಈ ಎಲ್ಲಾ ಅವಘಡಗಳಿಗೆ ಕಾರಣ. ಷೇರು ಮಾರುಕಟ್ಟೆಯ ಪ್ರವೇಶಿಸುವ ಮುನ್ನ ಒಂದು ವಿಷಯವನ್ನ ಚನ್ನಾಗಿ ನೆನಪಿಡಿ. ಯಾರು ತಾನೇ ಏಕೆ ನಿಮಗೆ ಹಣವನ್ನ ವೃದ್ಧಿಸಿ ಕೊಡುತ್ತಾರೆ? ಅದು ಕೇವಲ ಒಂದಷ್ಟು ಕಮಿಷನ್ ಪಡೆದು? ಅಷ್ಟೊಂದು ಜ್ಞಾನವಿರುವರು ಅವರ ಹಣವನ್ನ ವೃದ್ಧಿಸಿಕೊಳ್ಳಬಹದುದಲ್ಲವೇ?? ನಿಮಗೆ ಷೇರು ಮಾರುಕಟ್ಟೆಯ ಜ್ಞಾನವಿಲ್ಲದೆ ಹೋದರೆ ಅದರ ಬಗ್ಗೆ ಅರಿತು ಕೊಂಡು, ಜ್ಞಾನ ವೃದ್ಧಿಸಿಕೊಂಡು ನಂತರ ಹೂಡಿಕೆ ಮಾಡಬಹದು. ಅದು ಯಾರೇ ಆಗಿರಲಿ ವ್ಯಕ್ತಿ ಅಥವಾ ಸಂಸ್ಥೆಯ ನಂಬಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮೂರ್ಖತನ. ಹಣ ನಿಮ್ಮ ಕೈಯಿಂದ ಜಾರುವವರೆಗೆ ಮಾತ್ರ ನಿಮ್ಮದು ಜಾರಿದ ಮರುಕ್ಷಣ ಅದು ನಿಮ್ಮದಲ್ಲ. ಆ ಹಣವನ್ನ ಮರಳಿ ಪಡೆಯುವುದು ಸುಲಭವಲ್ಲ. ಸುಲಭ ಹಾಗೂ ವೇಗವಾಗಿ ಹಣ ವೃದ್ಧಿಸಿಕೊಳ್ಳಬೇಕೆನ್ನುವ ಜನ ಸಾಮಾನ್ಯನ ಭಾವನೆ ಅಥವಾ ನೂನ್ಯತೆ ಅವರ ಬಂಡವಾಳ. 

ಇನ್ನು ಹೈನೆಟ್ ವರ್ತ್ ಇಂಡಿವಿಜುಯಲ್ಗಳದು ಇನ್ನೊಂದು ಕಥೆ. ಅವರಿಗೆ ಷೇರು ಮಾರುಕಟ್ಟೆ ಎನ್ನುವುದು ಕಿಕ್ ಕೊಡುವುದಿಲ್ಲ. ಇವರ ಮನಸ್ಸು ಹೊಸತಿಗಾಗಿ ತುಡಿಯುತ್ತಿರುತ್ತದೆ. ಏನಾದರೂ ಹೊಸ ಆಟ, ಹೊಸ ಸೃಷ್ಟಿ ಇವರಿಗೆ ಬೇಕು. 

ಕ್ರಿಪ್ಟೋ ಕರೆನ್ಸಿ ಇವರ ಈ ದಾಹವನ್ನ ತಣಿಸುತ್ತಿದೆ. ಅಂದ ಮಾತ್ರಕ್ಕೆ ಇವರು ಬುದ್ದಿವಂತರು ಎಂದುಕೊಳ್ಳಬೇಕಿಲ್ಲ. ಬಿಟ್ ಕಾಯಿನ್ ಸೃಷ್ಟಿಯಾದ ದಿನದಿಂದ ಹಣ ಮಾಡಿಕೊಂಡವರಿಗಿಂತ ಕಳೆದುಕೊಂಡವರೇ ಜಾಸ್ತಿ. ತೀರಾ ಇತ್ತೀಚಿಗೆ ಅಂದರೆ ಜನವರಿ 9, 2019 ಜೆರಾಲ್ಡ್ ವಿಲಿಯಂ ಕೊಟ್ಟೆನ್ ಎನ್ನುವ ಕೆನಡಾ ಮೂಲದ ಕ್ವಾಡ್ರಿಗ ಫಿನ್ ಟೆಕ್ ಸೊಲ್ಯೂಷನ್ಸ್ ಎನ್ನುವ ಸಂಸ್ಥೆಯ ಮುಖ್ಯಾಧಿಕಾರಿ ಭಾರತದ ಜೈಪುರದಲ್ಲಿ 30 ನೇ ವಯಸ್ಸಿನಲ್ಲಿ ನಿಧನರಾದರು. ಕ್ವಾಡ್ರಿಗ ಫಿನ್ ಟೆಕ್ ಎನ್ನುವುದು ಕ್ರಿಪ್ಟೋ ಕರೆನ್ಸಿಯನ್ನ ಕೊಳ್ಳುವ/ಮಾರುವ ಹೂಡಿಕೆ ಸಂಸ್ಥೆಯಾಗಿದೆ. ಇದರಲ್ಲಿ 363,000 ಜನ ನೊಂದಾಯಿತ ಹೂಡಿಕೆದಾರರಿದ್ದಾರೆ. 147 ಮಿಲಿಯನ್ ಅಮೆರಿಕನ್ ಡಾಲರ್ ಹಣ ಇಲ್ಲಿ ಹೂಡಿಕೆಯಾಗಿದೆ. ಜೆರಾಲ್ಡ್ ಒಬ್ಬರಿಗೆ ಮಾತ್ರ ಈ ಲೆಡ್ಜರ್ ಗಳನ್ನ ಸಂಪರ್ಕಿಸುವ ಪಾಸ್ವರ್ಡ್ ತಿಳಿದಿತ್ತು ಹೀಗಾಗಿ ಆ ಹಣವನ್ನ ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ ಎನ್ನುವುದು ಕ್ವಾಡ್ರಿಗ ಫಿನ್ ಟೆಕ್ ಹೇಳುವ ಮಾತು. ಇದೀಗ ಈತನ ಸಾವಿನಿಂದ ಅಷ್ಟೋ ಹಣ ಗಾಳಿಯಲ್ಲಿ ಆವಿಯಾಗಿ ಹೋಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಸಾವಿರ ಕೋಟಿ ಸದ್ದಿಲ್ಲದೇ ಕರಗಿ ಹೋಗಿದೆ. ಇದು ಮೋಸದಾಟ ಎನ್ನುವ ಕೂಗು ಜೋರಾಗುವ ಮುನ್ನವೇ ಕಡಿಮೆಯಾಗಿ ಹೋಗುತ್ತದೆ. ಉಳ್ಳವರು ಕಳೆದುಕೊಂಡಾಗ ಅದರ ಪರಿಣಾಮವೇ ಬೇರೆ. ಕಳೆದುಕೊಂಡದ್ದ ಪಡೆದುಕೊಳ್ಳುವ ತಾಕತ್ತು, ಜಾಣ್ಮೆ ಅವರಿಗಿರುತ್ತದೆ. ಷೇರು ಮಾರುಕಟ್ಟೆಯ ನಂಬಿ ಹೂಡಿಕೆ ಮಾಡಿ ಕಳೆದುಕೊಳ್ಳುವ ಮಧ್ಯಮವರ್ಗದ ಗೋಳು ಕೇಳುವರಾರು? 

ಕೊನೆ ಮಾತು: ಷೇರು ಮಾರುಕಟ್ಟೆ ಬಗ್ಗೆ ಕನಿಷ್ಠ ಜ್ಞಾನವಿಲ್ಲದೆ, ಆರ್ಥಿಕವಾಗಿ ಸಬಲರಾಗಿಲ್ಲದೆ ಇದ್ದರೆ ಷೇರು ಮಾರುಕಟ್ಟೆಯಿಂದ ದೂರವಿರುವುದು ಒಳ್ಳೆಯದು. ಇಂದು ಮಾರುಕಟ್ಟೆಯಲ್ಲಿ ಷೇರು ಮಾರುಕಟ್ಟೆ ಬಗ್ಗೆ ತಿಳಿವಳಿಕೆ ನೀಡುವ ಅನೇಕ ಕ್ರ್ಯಾಶ್ ಕೋರ್ಸ್ ಗಳಿವೆ, ಸೆಮಿನಾರುಗಳಿವೆ. ಅವುಗಳಲ್ಲಿ ಮುಕ್ಕಾಲು ಹಣ ಪೀಕುವ ತಂತ್ರಗಳಷ್ಟೇ. ಎಲ್ಲಕ್ಕೂ ಮೊದಲು ಬದುಕಿಗೆ ಬೇಕಾದ ಮೂಲಭೂತ ಹೂಡಿಕೆಗಳ ನಂತರದ ಸ್ಥಾನ ಷೇರು ಮಾರುಕಟ್ಟೆಗೆ ನೀಡಿ. ಒಂದು ಯಶೋಗಾಥೆ ಸಾವಿರ ಜನರನ್ನ ಪ್ರೇರೇಪಿಸುತ್ತೆ ಆದರೆ ಮತ್ತೊಂದು ಯಶೋಗಾಥೆ ದಕ್ಕುವುದು ಸಾವಿರದಲ್ಲಿ ಒಬ್ಬರಿಗೆ ಮಾತ್ರ! 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Stay up to date on all the latest ಅಂಕಣಗಳು news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp