ಬೀಸುವ ದೊಣ್ಣೆಯಿಂದ ಜೆಟ್ ಏರ್ವೇಸ್ ಪಾರು! ಶಾಶ್ವತ ಪರಿಹಾರ ತರುವರಾರು?

ಹಾರಾಟ ಪ್ರಾರಂಭಿಸಿದ ಒಂದು ವಾರದಲ್ಲೇ ಏರ್ ಒಡಿಶಾ ಉಸ್ಸಪ್ಪಾ ಅಂತ ಕೊತದ್ದು ಸುದ್ದಿಯಾಗಲಿಲ್ಲ. ಭಾರತದಲ್ಲಿ ಇಂದು ವಿಮಾನಯಾನ ನೆಡೆಸುತ್ತಿರುವ ಸಂಸ್ಥೆಗಳಲ್ಲಿ ಒಂದೇ ಒಂದು ಸಂಸ್ಥೆ ಕೂಡ....
ಬೀಸುವ ದೊಣ್ಣೆಯಿಂದ ಜೆಟ್ ಏರ್ವೇಸ್ ಪಾರು! ಶಾಶ್ವತ ಪರಿಹಾರ ತರುವರಾರು?
ಬೀಸುವ ದೊಣ್ಣೆಯಿಂದ ಜೆಟ್ ಏರ್ವೇಸ್ ಪಾರು! ಶಾಶ್ವತ ಪರಿಹಾರ ತರುವರಾರು?
ಭಾರತ ದೇಶ ಬಹಳ ವೇಗದಿಂದ ಬದಲಾಗುತ್ತಿದೆ. ಇದು ಎಲ್ಲಾ ಕ್ಷೇತ್ರಕ್ಕೂ ಅನ್ವಯಿಸುವ ಮಾತು. ಅದಕ್ಕೆ ತಕ್ಕಂತೆ ವ್ಯಾಪಾರದಲ್ಲಿ ಕಠಿಣ ಸ್ಪರ್ಧೆಯೂ ಉಂಟು. ವಿಮಾನದಲ್ಲಿ ಪ್ರಯಾಣಿಸುವ ನಾಗರೀಕರ ಸಂಖ್ಯೆಯಲ್ಲಿ ಬಹಳ ಹೆಚ್ಚಳವಾಗಿದೆ. 2011/12 ರಲ್ಲಿ ಹತ್ತು ಕೋಟಿ ಇದ್ದ ಪ್ರಯಾಣಿಕರ ಸಂಖ್ಯೆ 2017/18 ರಲ್ಲಿ 19 ಕೋಟಿ ಎನ್ನುತ್ತಿದೆ ಅಂಕಿ-ಅಂಶ. ಅಂದರೆ ವಾರ್ಷಿಕ 20 ಪ್ರತಿಶತ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಎನ್ನುವ ಏರಿಕೆಯಾಗಿದೆ.
ಹೀಗಿದ್ದೂ ನಾವೆಲ್ಲಾ ಒಂದಲ್ಲಾ ಒಂದು ಬಾರಿ ಇಂಡಿಯನ್ ಏರ್ಲೈನ್ಸ್ ನಷ್ಟದಲ್ಲಿ ನೆಡೆಯುತ್ತಿದೆ ಎನ್ನುವ ಮಾತನ್ನ ಕೇಳಿಯೇ ಇರುತ್ತೇವೆ. ಇದರ ಜೊತೆ ಜೊತೆಗೆ ಕಿಂಗ್ ಫಿಷರ್ ಸಂಸ್ಥೆ ದಿವಾಳಿ ಎದ್ದು ಹೋಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಹಾರಾಟ ಪ್ರಾರಂಭಿಸಿದ  ಒಂದು ವಾರದಲ್ಲೇ ಏರ್ ಒಡಿಶಾ ಉಸ್ಸಪ್ಪಾ ಅಂತ ಕೊತದ್ದು ಸುದ್ದಿಯಾಗಲಿಲ್ಲ. ಭಾರತದಲ್ಲಿ ಇಂದು ವಿಮಾನಯಾನ ನೆಡೆಸುತ್ತಿರುವ ಸಂಸ್ಥೆಗಳಲ್ಲಿ ಒಂದೇ ಒಂದು ಸಂಸ್ಥೆ ಕೂಡ ಲಾಭದಾಯಕವಾಗಿಲ್ಲ ಎಂದರೆ ಉತ್ಪ್ರೇಕ್ಷೆ ಎನಿಸಬಹದು ಆದರೆ ಇದು ಸತ್ಯ. ಸ್ವಾತಂತ್ರ್ಯ ಬಂದು 70 ವರ್ಷಕ್ಕೂ ಹೆಚ್ಚಾದರೂ ಇಂದಿಗೂ ಜಗತ್ತು ನಿಂತು ನೋಡುವ 'ನಮ್ಮದು' ಎನ್ನುವ ಒಂದು ಏರ್ಲೈನ್ ಇಲ್ಲ ಎನ್ನುವುದು ಖೇದಕರ. ಗಮನಿಸಿ ನೋಡಿ ಗಾತ್ರದಲ್ಲಿ ಭಾರತಕ್ಕಿಂತ ಅತ್ಯಂತ ಸಣ್ಣ ದೇಶಗಳಾದ ಫ್ರಾನ್ಸ್, ಜರ್ಮನಿ, ಸಿಂಗಾಪುರ, ಮಲೇಶಿಯಾ, ಥೈಲ್ಯಾಂಡ್, ದುಬೈ, ಕತಾರ್ ಹೀಗೆ ಹತ್ತು ಹಲವು ದೇಶಗಳು ತಮ್ಮ ದೇಶವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ತಮ್ಮದೇ ಆದ ಏರ್ಲೈನ್ ಗಳನ್ನ ಹೊಂದಿವೆ. ಆದರೆ ಭಾರತ? ಆಶ್ಚರ್ಯದ ವಿಷಯವೆಂದರೆ ಮೇಲಿನ ಸಾಲಿನಲ್ಲಿ ಉಲ್ಲೇಖಿಸಿರುವ ದೇಶಗಳ ಜನಸಂಖ್ಯೆಗೂ ಮೀರಿದ ಪ್ರಯಾಣಿಕರ ಸಂಖ್ಯೆ ನಮ್ಮ ದೇಶದಲ್ಲಿದೆ ಆದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ್ದು ಎಂದು ಗುರುತಿಸಿಕೊಳ್ಳುವ ಒಂದು ವಿಮಾನಯಾನ ಸಂಸ್ಥೆಯಿಲ್ಲ!. ಅಲ್ಲದೆ ವಾರ್ಷಿಕ ವ್ಯಾಪಾರ ವೃದ್ಧಿಯ ಪ್ರಮಾಣ 20 ಪ್ರತಿಶತ ಮೀರುತ್ತಿದೆ. ವಸ್ತು ಸ್ಥಿತಿ ಹೀಗಿದ್ದೂ ನಮ್ಮೆಲ್ಲಾ ಏರ್ಲೈನ್ ಗಳು ನಷ್ಟದಲ್ಲಿವೆ. ಕಿಂಗ್ ಫಿಷರ್ ಮುಚ್ಚಿದಾಗ ವಿಜಯ್ ಮಲ್ಯನ ನೆಡವಳಿಕೆ ಸರಿಯಿಲ್ಲ ಆತ ಹಣವನ್ನ ಬೇರೆಯ ಕಾರ್ಯಗಳಿಗೆ ಉಡಾಯಿಸಿಬಿಟ್ಟ ಎನ್ನುವ ಮಾತುಗಳು ಕೇಳಿ ಬಂದವು. ಇಂಡಸ್ಟ್ರಿಯಲ್ಲಿರುವ ಜನರಿಗೆ ಹಣಕಾಸು ವಿದ್ಯಮಾನಗಳ ತಿಳಿದುಕೊಂಡವರಿಗೆ ಅದು ಪೂರ್ಣ ಸತ್ಯವಲ್ಲದ ಮಾತು ಎನ್ನುವುದು ತಿಳಿದಿತ್ತು. ಇನ್ನು ಇಂಡಿಯನ್ ಏರ್ಲೈನ್ ಗೆ ಸರಕಾರ ಸದಾ ಹಣವನ್ನ ಸುರಿಯುತ್ತಲೇ ಇದೆ. ಹೀಗಾಗಿ ಅದು ಬದುಕಿಕೊಂಡಿದೆ. ಕಳೆದ ಆರೆಂಟು ತಿಂಗಳಿಂದ ಮುಚ್ಚುವ ಸುದ್ದಿಯಲ್ಲಿರುವ ಇನ್ನೊಂದು ಭಾರತೀಯ ವಿಮಾನ ಸಂಸ್ಥೆ ಜೆಟ್ ಏರ್ವೇಸ್. ಈ ಸಂಸ್ಥೆ ಹನ್ನೊಂದು ವರ್ಷದ ಒಟ್ಟು ನಷ್ಟದ ಮೊತ್ತ 1600 ಕೋಟಿಗೂ ಮೀರಿದೆ ಎಂದು ತನ್ನ ಲೆಕ್ಕಪತ್ರದಲ್ಲಿ ಹೇಳಿಕೊಂಡಿದೆ. ಇದೀಗ ಈ ಸಂಸ್ಥೆಯನ್ನ ಉಳಿಸಲು ಹೆಣಗಾಟ ಶುರುವಾಗಿದೆ. ಏಕೆ? ಮತ್ತು ಹೇಗೆ? ಎನ್ನುವುದನ್ನ ತಿಳಿದುಕೊಳ್ಳುವ ಮುಂಚೆ ಭಾರತೀಯ ವಿಮಾನ ಸಂಸ್ಥೆಗಳು ನಷ್ಟದಲ್ಲೇಕಿವೆ ಎನ್ನುವುದನ್ನ ತಿಳಿದುಕೊಳ್ಳೋಣ. 
  1. ವಿಮಾನಯಾನ ಸಂಸ್ಥೆಗಳ ನಡುವೆ ಇರುವ ಕಚ್ಚಾಟ ನಷ್ಟಕ್ಕೆ ಮೊದಲ ಕಾರಣ. ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಲು ಈ ಸಂಸ್ಥೆಗಳು ವಿಮಾನಯಾನ ದರವನ್ನ ಅವೈಜ್ಞಾನಿಕವಾಗಿ ಕಡಿಮೆ ಮಾಡುತ್ತಾ ಹೋಗಿವೆ. ಇದರ ಹಿಂದಿನ ತರ್ಕ, ನಷ್ಟ ಭರಿಸಲಾಗದೆ ಒಂದೊಂದೇ ಸಂಸ್ಥೆ ಕುಸಿದಾಗ ಉಳಿದ ಸಂಸ್ಥೆ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಿ ನಂತರದ ದಿನಗಳಲ್ಲಿ ಹೆಚ್ಚಿನ ಲಾಭ ಮಾಡುವುದು. ಉದಾಹರಣೆ ನೋಡಿ ಬೆಂಗಳೂರಿನಿಂದ ಮುಂಬೈಗೆ ವಿಮಾನಯಾನ ದರ 100 ರೂಪಾಯಿ ಆಗಬೇಕು ಎಂದುಕೊಳ್ಳಿ, ಸ್ಪೈಸ್ ಜೆಟ್ ಮಾರುಕಟ್ಟೆಯ ಮೇಲೆ ಹಿಡಿತ ಹೊಂದಲು ಅದನ್ನ 80 ರುಪಾಯಿಗೆ ನೀಡುತ್ತದೆ. ವಿಧಿಯಿಲ್ಲದೇ ಇದೇ ನೀತಿಯನ್ನ ಉಳಿದ ಏರ್ಲೈನ್ ಗಳು ಅನುಸರಿಸುತ್ತವೆ. ಅಂದರೆ ಇಲ್ಲಿಯವರೆಗೆ ಯಾರೂ ಕೂಡ ತಮ್ಮ ಖರ್ಚು ಮತ್ತು ಲಾಭಂಶವನ್ನ ವಿಮಾನದರದಲ್ಲಿ ಸೇರಿಸಿಯೇ ಇಲ್ಲ. ಹೀಗಾದಾಗ ಸಂಸ್ಥೆ ಎಷ್ಟು ದಿನ ಉಳಿದೀತು? ಈ ಕ್ಷೇತ್ರ ಭವಿಷ್ಯದ ಮೇಲೆ ಅವಲಂಬಿತ ಉದ್ದಿಮೆಯಾಗಿ ಮಾರ್ಪಟ್ಟಿದೆ. ಅಂದರೆ ಹೆಚ್ಚು ನಷ್ಟ ಭರಿಸಿ ಹೆಚ್ಚು ವರ್ಷ ಮಾರುಕಟ್ಟೆಯಲ್ಲಿ ನಿಂತ ಸಂಸ್ಥೆ ಮಾತ್ರ ಗೆಲ್ಲಲಿದೆ. 
  2. ಭಾರತೀಯ ವಿಮಾನ ಪ್ರಯಾಣಿಕರು ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಪ್ರೀಮಿಯಂ ಸೇವೆಗಳನ್ನ ಅಂದರೆ ಇಂತಹುದೇ ಸೀಟು ಬೇಕು ಎನ್ನವುದಕ್ಕೆ ಹೆಚ್ಚಿನ ಹಣ, ವಿಮಾನದಲ್ಲಿ ಊಟ ತಿಂಡಿ, ಹೆಚ್ಚಿನ ತೂಕದ ಮೇಲೆ ಕೊಡುವ ಹಣ ಇವೆಲ್ಲವನ್ನ ಅವರು ತಪ್ಪಿಸಲು ಪ್ರಯತ್ನಪಡುತ್ತಾರೆ. ಅಂದರೆ ಇಂತಹ ಸೇವೆಯನ್ನ ಪಡೆಯುವುದಿಲ್ಲ. ಹೀಗಾಗಿ ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ಹಣ ಸಿಗುವುದಿಲ್ಲ. 
  3. ಈ ಕ್ಷೇತ್ರದಲ್ಲಿರುವ ಹುಚ್ಚಾಟದ ಸ್ಪರ್ಧೆ ಜೊತೆಗೆ, ಹೆಚ್ಚುತ್ತಿರುವ ತೈಲ ಬೆಲೆ, ಸರಕಾರ ವಿಧಿಸುವ ತೆರಿಗೆಗಳು ಕೂಡ ಅವುಗಳದೇ ಆದ ದೇಣಿಗೆ ನೀಡುತ್ತಿವೆ. 
  4. ವಾರ್ಷಿಕ ಹೆಚ್ಚುತ್ತಿರುವ ವೇತನ ಜೊತೆಗೆ ಏರ್ ಕ್ರಾಫ್ಟ್ ನಿರ್ವಹಣೆ ಖರ್ಚು ಇವೆಲ್ಲ ಲಾಭಂಶವನ್ನ ಕಬಳಿಸುತ್ತಿವೆ. 
ಹೀಗೆ ಇನ್ನು ಹಲವಾರು ಕಾರಣಗಳಿಂದ ಮುಚ್ಚುವ ಸ್ಥಿತಿಗೆ ಬಂದಿರುವ ಜೆಟ್ ಏರ್ವೇಸ್ ಸಂಸ್ಥೆಯನ್ನ ಉಳಿಸಿಕೊಳ್ಳುವ ಕೆಲಸ ಶುರುವಾಗಿದೆ. ಈ ಸಂಸ್ಥೆಯಲ್ಲಿ ಹತ್ತಿರ ಹತ್ತಿರ 26 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಚುನಾವಣೆ ಕೂಡ ಇನ್ನು ಕೆಲವು ತಿಂಗಳಲ್ಲಿ ಬರಲಿದೆ. ಹೀಗಾಗಿ 26 ಸಾವಿರ ಕೆಲಸವನ್ನ ಉಳಿಸುವ ದರ್ದು ಕೇಂದ್ರ ಸರಕಾರಕ್ಕೆ ಹೆಚ್ಚಾಗಿದೆ. 
ಕಳೆದ ವರ್ಷ ಅಂದರೆ 2018ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ Bank-led provisional resolution plan ಎನ್ನುವ ಒಂದು ಮಹತ್ವದ ನಿರ್ಧಾರವನ್ನ ಪ್ರಕಟಿಸಿದೆ. ಅದರ ಪ್ರಕಾರ ಯಾವುದೇ ಸಂಸ್ಥೆಯ ಒಟ್ಟು ಮೌಲ್ಯ ನೆಗಟಿವ್ ಇದ್ದರೆ ಆಗ ಸಾಲವನ್ನ (ಡೆಟ್) ಈಕ್ವಿಟಿಯಾಗಿ ಪರಿವರ್ತಿಸಲು ಅವಕಾಶ ನೀಡಲಾಗಿದೆ. ಒಂದು ಉದಾಹರಣೆಯ ಮೂಲಕ ಇದನ್ನ ತಿಳಿಯುವ ಪ್ರಯತ್ನ ಮಾಡೋಣ. 
ಜೆಟ್ ಏರ್ವೇಸ್ ನ ಒಟ್ಟು ಆಸ್ತಿಯ ಮೊತ್ತ 100 ರೂಪಾಯಿ ಎಂದುಕೊಳ್ಳಿ ಹಾಗೆಯೇ ಸಾಲ ಮತ್ತು ಇತರೆ ನೀಡಬೇಕಾದ ಖರ್ಚುಗಳ ಮೊತ್ತ 110 ರೂಪಾಯಿ ಎಂದುಕೊಳ್ಳಿ. ಈ ಪರಿಸ್ಥಿತಿಯಲ್ಲಿ ಜೆಟ್ ಏರ್ವೇಸ್ ನ ಒಟ್ಟು ಮೌಲ್ಯ -1೦... ಅಂದರೆ ಇದು ನೆಗಟಿವ್. ಇಂತಹ ಸಂದರ್ಭದಲ್ಲಿ ಸಾಲವನ್ನ ಈಕ್ವಿಟಿಯಾಗಿ ಪರಿವರ್ತಿಸಬಹದು. ಸಾಲ ವಾಪಸ್ಸು ನೀಡಲೇಬೇಕಾದ ಹಣವಾಗಿರುತ್ತದೆ. ಈಕ್ವಿಟಿ ಹಾಗಲ್ಲ. ಅದು ಸಂಸ್ಥೆಯ ಒಡೆತನದ ಪಾಲುದಾರರಿದ್ದಂತೆ. ಇಲ್ಲಿ ಸಂಸ್ಥೆ ಲಾಭಗಳಿಸಿದೆ ಲಾಭಾಂಶ ಸಿಗುತ್ತದೆ. ಆಕಸ್ಮಾತ್ ಸಂಸ್ಥೆ ಮುಳುಗಿ ಹೋದರೆ ಈಕ್ವಿಟಿಯಾಗಿ ಬದಲಾದ ಹಣವನ್ನ ವಾಪಸ್ಸು ಕೊಡಬೇಕಾದ ಪರಿಸ್ಥಿತಿ ಇರುವುದಿಲ್ಲ. ಡೆಟ್ ಅಂದರೆ ಸಾಲ. ಈಕ್ವಿಟಿ ಸಂಸ್ಥೆಯ ಪಾಲುದಾರತ್ವ. 
ಭಾರತೀಯ ರಿಸರ್ವ್ ಬ್ಯಾಂಕ್ ನ ಈ ನಿರ್ಧಾರದಿಂದ ಸಾಲಗಾರರನ್ನ ಸಂಸ್ಥೆಯ ಪಾಲುದಾರ ಅಥವಾ ಮಾಲೀಕರನ್ನಾಗಿ ಪರಿವರ್ತಿಸುವುದರಿಂದ ಅವರಿಗೆ ಹಣ ವಾಪಸ್ಸು ಕೊಡುವ ಪ್ರಮೇಯ ಬರುವುದಿಲ್ಲ ಮತ್ತು ಸಂಸ್ಥೆಗೆ ಲಾಭದ ಹಾದಿಯಲ್ಲಿ ನೆಡೆಯಲು ಇನ್ನಷ್ಟು ಕಾಲಾವಕಾಶ ಸಿಗುತ್ತದೆ. ಇದರಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 11.4 ಕೋಟಿ ಷೇರನ್ನ ಪಡೆಯಲಿದೆ. ಹೀಗಾಗಿ ಇನ್ನು ಮುಂದೆ ಜೆಟ್ ಏರ್ವೇಸ್ ನ ನಿರ್ದೇಶಕ ಮಂಡಳಿಯಲ್ಲಿ ಸ್ಟೇಟ್ ಬ್ಯಾಂಕ್ ನಿಂದ ನೇಮಕಗೊಂಡ ನಿರ್ದೇಶಕರು ಇರುತ್ತಾರೆ. ಜೆಟ್ ಏರ್ವೇಸ್ ನ ಆಡಳಿತ ನಿರ್ಧಾರಗಳ ಮೇಲಿನ ಹಿಡಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೆಕ್ಕೆಗೆ ಸೇರಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೆಟ್ ಏರ್ವೇಸ್ ನ 50.1 ಪ್ರತಿಶತ ಮಾಲೀಕತ್ವ ಹೊಂದಲಿದೆ. ಬ್ಯಾಂಕ್ ಲೆಡ್ ಪ್ರಾವಿಷನಲ್ ಪ್ಲಾನ್ ಅಡಿಯಲ್ಲಿ 8,500 ಕೋಟಿ ರೂಪಾಯಿಯನ್ನ ಪರಿವರ್ತಿಸಲಾಗಿದೆ. ಇದು ತಾತ್ಕಾಲಿಕ ಸೇವೆ. ಜೆಟ್ ಏರ್ವೇಸ್ ಹೊಸ ಹೂಡಿಕೆದಾರರನ್ನ ತರಬೇಕು. ಆಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಷೇರುಗಳನ್ನ ಹೊಸ ಹೂಡಿಕೆದಾರರಿಗೆ ಮಾರಿ ತನ್ನ ಹಣವನ್ನ ವಾಪಸ್ಸು ಪಡೆಯುತ್ತದೆ. 
ಇದು ಹೇಳಿ ಕೇಳಿ ಚುನಾವಣೆ ವರ್ಷ. 26 ಸಾವಿರ ಕೆಲಸವನ್ನ ಉಳಿಸುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೊಂದು ಭಾರತೀಯ ವಿಮಾನ ಸಂಸ್ಥೆ ಮುಚ್ಚಿ ಹೋಯಿತು ಎನ್ನುವ ಅವಮಾನ ತಪ್ಪಿಸುವುದು, ಕೇಂದ್ರ ಸರಕಾರ ವಾಣಿಜ್ಯ ವಹಿವಾಟು ಸ್ನೇಹಿ ಎಂದು ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸುವುದು ಇಷ್ಟೂ ಕೆಲಸವನ್ನ ಮಾಡಲಾಗಿದೆ. ಎಲ್ಲಕ್ಕೂ ಮುಖ್ಯವಾಗಿ ಸದ್ಯದ ಪರಿಸ್ಥಿತಿಯಲ್ಲಿ ಸಹಸ್ರಾರು ಉದ್ಯೋಗಗಳನ್ನು ಉಳಿಸುವುದು ಅತ್ಯಂತ ಮುಖ್ಯವಾಗಿತ್ತು. ಇವೆಲ್ಲಾ ಏನೇ ಇರಲಿ ನಮ್ಮ ವಿಮಾನಯಾನ ಸಂಸ್ಥೆಗಳು ಗ್ರಾಹಕರಿಗೆ ನೀಡುತ್ತಿರುವ ಡಿಸ್ಕೌಂಟ್ ನಿಲ್ಲಿಸದಿದ್ದರೆ ಇಷ್ಟೆಲ್ಲಾ ಮಾಡಿಯೂ ಇವುಗಳ ಮುಚ್ಚುವ ಪ್ರಕ್ರಿಯೆ ಮುಂದೂಡಿದಂತೆ ಅಷ್ಟೇ. ಮಾರುಕಟ್ಟೆಯ ಮೇಲೆ ಪಾರುಪತ್ಯ ಸಾಧಿಸಬೇಕೆನ್ನುವ ಹುಚ್ಚಾಟ ಬಿಡದೆ ಇದ್ದರೆ ಇವುಗಳ ಅಳಿವನ್ನ ತಡೆಯಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಹೂಡಿಕೆದಾರರ ಹಿತವನ್ನ ಕಾಯಲು ಒಂದು ಒಳ್ಳೆಯ ಕಾನೂನು ತರಬೇಕಿದೆ. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com