2019 ರಲ್ಲಿ ಹೇಗಿರಬಹದು ವಿತ್ತ ಜಗತ್ತು? ಇಲ್ಲಿದೆ ಸಣ್ಣ ಮುನ್ನೋಟ

ಹಣಕ್ಲಾಸು ಅಂಕಣ ಬರಹದಲ್ಲಿ 2017ರ ಮುನ್ನೋಟ ಮತ್ತು 2018 ರ ಮುನ್ನೋಟವನ್ನ ಬರೆಯಲಾಗಿತ್ತು. 2019 ರಲ್ಲಿ ಏನಾಗಬಹದು? ಎನ್ನುವುದರ ಪ್ರಿಡಿಕ್ಷನ್ ಇಂದಿನ ಅಂಕಣದಲ್ಲಿ ಅನಾವರಣವಾಗಲಿದೆ.
2019 ರಲ್ಲಿ ಹೇಗಿರಬಹದು ವಿತ್ತ ಜಗತ್ತು? ಇಲ್ಲಿದೆ ಸಣ್ಣ ಮುನ್ನೋಟ
2019 ರಲ್ಲಿ ಹೇಗಿರಬಹದು ವಿತ್ತ ಜಗತ್ತು? ಇಲ್ಲಿದೆ ಸಣ್ಣ ಮುನ್ನೋಟ
ಹಣಕ್ಲಾಸು ಅಂಕಣ ಬರಹದಲ್ಲಿ 2017ರ ಮುನ್ನೋಟ ಮತ್ತು 2018 ರ ಮುನ್ನೋಟವನ್ನ ಬರೆಯಲಾಗಿತ್ತು. 2019 ರಲ್ಲಿ ಏನಾಗಬಹದು? ಎನ್ನುವುದರ ಪ್ರಿಡಿಕ್ಷನ್ ಇಂದಿನ ಅಂಕಣದಲ್ಲಿ ಅನಾವರಣವಾಗಲಿದೆ.
ಅದಕ್ಕೆ ಮುಂಚೆ ಇಲ್ಲಿ ಒಂದು ಮಾತು ಹೇಳಬೇಕಿದೆ. ಬರುವ ನಾಳೆಯನ್ನ ನೋಡಲು ಎಷ್ಟೇ ಇಣುಕಿದರೂ, ಇಣುಕಿ ಕತ್ತು ನೋವು ಬರುತ್ತದೆಯೇ ವಿನಃ ನಾಳೆ ಕಾಣುವುದಿಲ್ಲ. ಅಲ್ಲದೇ ವಿತ್ತ ಪ್ರಪಂಚ ಘಳಿಗೆ ಘಳಿಗೆಗೂ ಬದಲಾಗುವ ಎಷ್ಟೇ ಪರಿಣಿತಿಯಿದ್ದರೂ ಸಾಲದು ಎನ್ನುವ ಕ್ಷೇತ್ರ. ಅಂಕಿ-ಅಂಶಗಳನ್ನ ಅಳೆದು ತೂಗಿ ಜೊತೆಗೆ ಯಾವ ಕ್ಷೇತ್ರ ಈಗಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿದೆ ಎನ್ನುವುದರ ಆಧಾರದ ಮೇಲೆ ಹೀಗಾಗಬಹದು ಎನ್ನುವ ಅಂದಾಜು ಚಿತ್ರಣ ನೀಡಬಹುದೇ ಹೊರತು ನಿಖರವಾಗಿ ಹೀಗೇ ಆಗುತ್ತದೆ ಎಂದಲ್ಲ. ಇರಲಿ.... 
ನಮ್ಮ ಜಗತ್ತಿನಲ್ಲಿ 196 ದೇಶಗಳಿವೆ. ಜಗತ್ತಿನ ಒಟ್ಟು ತಲಾಯದ ಆಧಾರದ ಮೇಲೆ ಅವುಗಳ ವಿಂಗಡಣೆ ಮಾಡುತ್ತಾ ಹೋದರೆ ಹತ್ತು ದೇಶಗಳು ಜಗತ್ತಿನ ಆದಾಯದ ಅಥವಾ ಸಂಪತ್ತಿನ 61 ಪ್ರತಿಶತ ಅನುದಾನ ನೀಡುತ್ತವೆ. ಈ ಪಟ್ಟಿಗೆ ಇನ್ನೊಂದು ಹತ್ತು ದೇಶಗಳನ್ನ ಸೇರಿಸಿದರೆ ಅಂದರೆ ಜಗತ್ತಿನ ಇಪ್ಪತ್ತು ದೇಶಗಳ ಜಗತ್ತಿನ ಆದಾಯದ, ವಹಿವಾಟು 80ಕ್ಕೂ ಹೆಚ್ಚು ಪ್ರತಿಶತವಾಗುತ್ತದೆ. ಅಂದರೆ ಉಳಿದ 176 ದೇಶಗಳು ಉಳಿದ 20 ಪ್ರತಿಶತ ಸಂಪನ್ಮೂಲಕ್ಕೆ ಬಡಿದಾಡುತ್ತವೆ. 
ಜಗತ್ತಿನ ಪ್ರಥಮ ಇಪ್ಪತ್ತು ದೇಶಗಳ ಪಟ್ಟಿಯಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದ ಹೆಚ್ಚಿನ ಬದಲಾವಣೆ ಏನೂ ಆಗಿಲ್ಲ!. ಮೂರು ಅಥವಾ ನಾಲ್ಕು ಹೊಸ ದೇಶಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಹಳೆಯ ಮೂರು ದೇಶಗಳು ಮೊದಲ ಇಪ್ಪತ್ತು ದೇಶಗಳ ಪಟ್ಟಿಯಿಂದ ಹೊರಬಿದ್ದಿವೆ. ಮೊದಲ ಐದು ಸ್ಥಾನಗಳು ಅಭಾದಿತ. 2019ರಲ್ಲಿ ವಿತ್ತ ಜಗತ್ತು ಹೇಗಿರಬಹದು? ಎನ್ನುವ ಉತ್ತರಕ್ಕೆ ಮೊದಲ 5-6 ದೇಶಗಳು ಹೇಗೆ ಕಾರ್ಯ ನಿರ್ವಹಿಸಲಿವೆ ಎನ್ನುವುದನ್ನ ತಿಳಿದುಕೊಂಡರೆ ಸಾಕು. ಏಕೆಂದರೆ ಇವುಗಳು ವಿತ್ತ ಜಗತ್ತಿನ ಇಂಜಿನ್ ಎನ್ನಬಹದು. ಇವುಗಳು ಎತ್ತ ಸಾಗುತ್ತವೆ ಎನ್ನುವುದು ಉಳಿದ ದೇಶಗಳ ಆರ್ಥಿಕ ಸ್ಥಿತಿಯ ದಿಕ್ಸೂಚಿ.  ಬನ್ನಿ ಇವುಗಳ ಬಗ್ಗೆ ಒಂದಷ್ಟು ತಿಳಿಯುವ ಪ್ರಯತ್ನ ಮಾಡೋಣ. 
ಅಮೇರಿಕಾ: ಗೋಲ್ಡ್ ಮನ್ ಸಾಚ್ಸ್. ಇದು ಹಣಕಾಸು ಸೇವೆಗಳನ್ನ ನೀಡುವ ಅಮೇರಿಕಾ ಮೂಲದ ಬಹುರಾಷ್ಟ್ರೀಯ ಸಂಸ್ಥೆ. 2019 ರಲ್ಲಿ ಅಮೆರಿಕಾದ ವಹಿವಾಟು ಮತ್ತು ಅಭಿವೃದ್ಧಿ ಪ್ರಮಾಣದಲ್ಲಿ ಕುಂಠಿತವಾಗಲಿದೆ. 2020 ರ ವೇಳೆಗೆ ಅಮೇರಿಕಾ ದೇಶ ಹಣಕಾಸು ಮುಗ್ಗಟ್ಟು ಎದುರಿಸುವ ಸಮಯವೂ ಬರುತ್ತದೆ ಎನ್ನುವುದು ಈ ಸಂಸ್ಥೆಯ ಅಂದಾಜು. 
ಇದನ್ನ ಟ್ರಂಪ್ ಸರಕಾರ ಸಾರಾಸಗಟಾಗಿ ತಿರಸ್ಕರಿಸಿದೆ. ಈ ಸಂಸ್ಥೆಯ ಹೊರತು ಪಡಿಸಿ ಇತರ ಸಂಸ್ಥೆಗಳು 2020 ಬಹಳ ದೂರದ ಮಾತು ಅಮೇರಿಕಾ, 2019 ರಲ್ಲೇ ಹಣಕಾಸು ಮುಗ್ಗಟ್ಟಿನಲ್ಲಿ ಸಿಲುಕಲಿದೆ ಎನ್ನುತ್ತವೆ. ಏರುತ್ತಿರುವ ಬಡ್ಡಿ ದರ ಮತ್ತು ಏರುತ್ತಿರುವ ವಸ್ತುವಿನ ಮೇಲಿನ ತೆರಿಗೆ ಅಮೇರಿಕಾ ಕುಸಿಯಲು ಪ್ರಮುಖ ಕಾರಣಗಳಾಗಿವೆ. ಚೀನಾ ದೇಶದೊಂದಿಗೆ ಟ್ರೇಡ್ ವಾರ್ ಗೆ ಇಳಿದಿರುವ ಟ್ರಂಪ್ ಸರಕಾರ ಚೀನಾ ದೇಶವನ್ನ ಬಗ್ಗುಬಡಿಯುವ ಹುರುಪಿನಲ್ಲಿ ಚೀನಾ ವಸ್ತುಗಳ ಮೇಲಿನ ತೆರಿಗೆಯನ್ನ ಏರಿಸುತ್ತಾ ಹೋಗುತ್ತಿರುವುದು ಅವರಿಗೆ ಮುಳುವಾಗಲಿದೆ. ಹಾರಿಹೋಗಿದ್ದ ಹೂಡಿಕೆದಾರರನ್ನ ಸೆಳೆಯಲು ಫೆಡರಲ್ ಬಡ್ಡಿ ದರವನ್ನ ಹೆಚ್ಚಿಸಿರುವುದು ಹೂಡಿಕೆದಾರರನ್ನ ಮರಳಿ ತರುವಲ್ಲಿ ಯಶಸ್ವಿಯಾಯಿತು. ಆದರೆ ಜನ ಸಾಮಾನ್ಯ ಹೆಚ್ಚಾದ ಬಡ್ಡಿ ದರದಿಂದ ಹಣವನ್ನ ಸಾಲದ ರೂಪದಲ್ಲಿ ಪಡೆಯಲು ಹಿಂಜರಿಯುತ್ತಿದ್ದಾನೆ. ಒಟ್ಟಿನಲ್ಲಿ ಅಮೇರಿಕಾ ಯಾವಾಗ ಫೈನಾನ್ಸಿಯಲ್ ಕ್ರೈಸಿಸ್ ನಲ್ಲಿ ಸಿಲುಕಬಹದು ಎನ್ನುವುದರ ಬಗ್ಗೆಯಷ್ಟೇ ಆರ್ಥಿಕ ತಜ್ಞರಲ್ಲಿ ಮಾತುಕತೆಯಿರುವುದು. ಆದರೆ ಅಮೇರಿಕಾ ರಿಸೆಶನ್ ನಲ್ಲಿ ಸಿಲುಕುವುದರ ಬಗ್ಗೆ ಯಾವ ತಜ್ಞರಲ್ಲೂ ಬೇಧವಿಲ್ಲ. ಬೇಧವಿರುವುದು ಟೈಮ್ ಅಂದರೆ 2019 ರಲ್ಲೋ ಅಥವಾ 2020ರಲ್ಲೂ ಅನ್ನುವುದಷ್ಟೇ. 
ಚೀನಾ: ಚೀನಾ ಜಗತ್ತಿಗೆ ವಸ್ತುಗಳನ್ನ ತಯಾರಿಸಿ ಮಾರುವ ಕಾರ್ಖಾನೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಮೇರಿಕಾ ಮತ್ತು ಯೂರೋಪಿಯನ್ ಯೂನಿಯನ್ ಗೆ ಚೀನಾದ ಬಹುಪಾಲು ಉತ್ಪನ್ನ ರಫ್ತಾಗುತ್ತದೆ. ಅದರಲ್ಲೂ ಅಮೇರಿಕಾ ದೇಶ, ಚೀನಾ ಉತ್ಪಾದಿಸವುದು ನಿಲ್ಲಿಸಿದರೆ ಕುಸಿಯುತ್ತದೆ ಎನ್ನುವ ಮಟ್ಟಿಗೆ ಚೀನಿ ಉತ್ಪನ್ನಗಳ ದಾಸನಾಗಿದೆ. 2018 ರ ಜೂನ್ ಮತ್ತು ಜುಲೈ ನಲ್ಲಿ ಶುರುವಾದ ಟ್ರೇಡ್ ವಾರ್ ನಿಲ್ಲುವ ಸೂಚನೆ ನೀಡುತ್ತಿಲ್ಲ. ಡಿಸೆಂಬರ್ ತಿಂಗಳಲ್ಲಿ ಇನ್ನೊಂದು ಮೂರು ತಿಂಗಳು ಯಾವುದೇ ತೆರಿಗೆ ಹೆಚ್ಚು ಮಾಡದಂತೆ ಎರಡೂ ದೇಶಗಳು 'ಸೀಸ್ ಫೈರ್' ಅಂದರೆ ಯುದ್ಧ ವಿರಾಮ ಘೋಷಿಸಿಕೊಂಡಿವೆ. ಅದರ ಅರ್ಥ ಯುದ್ಧಕ್ಕೆ ಪೂರ್ಣ ವಿರಾಮ ಬಿದ್ದಿಲ್ಲ. ಇಲ್ಲಿಯವರೆಗೆ ಚೀನಾ ದೇಶದ ರಫ್ತಿನ ಪ್ರಮಾಣದಲ್ಲಿ 11 ಪ್ರತಿಶತ ಕುಸಿತ ಕಂಡಿದೆ. ಒಂದು ದೇಶ ಕುಸಿಯಲು ಇದು ದೊಡ್ಡ ಮಟ್ಟದ ಕಾರಣವಾಗಿದೆ. 2019 ರಲ್ಲಿ ಟ್ರೇಡ್ ವಾರ್ ನಿಲ್ಲದಿದ್ದರೆ ಅಮೇರಿಕಾ ಕುಸಿತದ ಜೊತೆಗೆ ಚೀನಾದ ಮಹಾ ಕುಸಿತವನ್ನೂ ಕೂಡ ತಪ್ಪಿಸುವುದು ಅಸಾಧ್ಯ.  (ವಿತ್ತ ಪ್ರಪಂಚದ ನರಳಾಟ; ಯಾರಿಗೂ ಸುಖವಿಲ್ಲದ ವಾಣಿಜ್ಯ ಕಾದಾಟ!)
ಜಪಾನ್: ಜಪಾನ್ ಹಲವು ಹತ್ತು ಆಂತರಿಕ ಸಮಸ್ಯೆಗಳಿಂದ ನರಳುತ್ತಿರುವ ದೇಶ. ಚೀನಾದೊಂದಿಗೆ ಇದರ ವಹಿವಾಟು ನಗಣ್ಯ. ಆದರೆ ಅಮೆರಿಕಾದೊಂದಿಗೆ ಇದರ ವಹಿವಾಟು ಸಾಕಷ್ಟಿದೆ. ಅಮೇರಿಕಾ ಕುಸಿತ ಜಪಾನಿಗೂ ಒಂದಷ್ಟು ಹೊಡೆತ ಕೊಡುತ್ತದೆ. ಆದರೆ ಜಪಾನ್ ದೇಶದಲ್ಲಿ 2020 ರಲ್ಲಿ ಒಲಂಪಿಕ್ ಕ್ರೀಡೆಗಳು ನೆಡೆಯಲಿವೆ ಹೀಗಾಗಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಜೊತೆಗೆ, ಈಗಾಗಲೇ ಇರುವ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಏರಿಸುವ ಕಾರ್ಯಗಳಾಗುತ್ತಿವೆ. ಎಲ್ಲಿ ಕೆಲಸವಿರುತ್ತದೆ ಅಲ್ಲಿ ಹಣವಿರುತ್ತದೆ, ಎಲ್ಲಿ ಹಣವಿರುತ್ತದೆ ಅಲ್ಲಿ ಹೂಡಿಕೆದಾರರ ದಂಡು ನೆಲೆಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಜಪಾನ್ ದೇಶದಲ್ಲಿ ಹೂಡಿಕೆಯಾಗುತ್ತಿದೆ. ಚೀನಾ ಮತ್ತು ಅಮೇರಿಕಾ ದೇಶಗಳಷ್ಟು ಆರ್ಥಿಕ ಸಂಕಷ್ಟಕ್ಕೆ ಜಪಾನ್ ಸಿಲುಕುವುದಿಲ್ಲ. ಇದನ್ನೂ ಓದಿ ಹಣದುಬ್ಬರ ಮಾರಕವೇ? ಪೂರಕವೇ? ಜಪಾನ್ ಕೊಡುತ್ತಿದೆ ಜಗತ್ತಿಗೆ ಉತ್ತರ!
ಜರ್ಮನಿ/ ಯೂರೋಪಿಯನ್ ಯೂನಿಯನ್:  ಜರ್ಮನಿ ತನ್ನ ಹಳೆಯ ಗ್ರೋಥ್ ರೇಟ್ ಅಂದಾಜು 2.3 ಪ್ರತಿಶತದಿಂದ 1.8ಕ್ಕೆ ಇಳಿಸಿದೆ. ಕುಸಿಯುತ್ತಿರುವ ಜಾಗತಿಕ ಮಾರುಕಟ್ಟೆ ಜೊತೆಗೆ ಬ್ರೆಕ್ಸಿಟ್ ಇದಕ್ಕೆ ಕಾರಣ ಎಂದು ಅದು ಹೇಳಿಕೊಂಡಿದೆ. ಇದರ ಆಂತರಿಕ ಕೊಳ್ಳುವ ಶಕ್ತಿ ಮತ್ತು ಬೇಡಿಕೆ ಎರಡೂ ಭದ್ರವಾಗಿದೆ. ಹೀಗಾಗಿ ಜರ್ಮನಿ ದೇಶವಾಗಿ ಹೆಚ್ಚಿನ ಆರ್ಥಿಕ ಮುಗ್ಗಟ್ಟಿಗೆ ಸಿಲುಕುವುದಿಲ್ಲ. ಟರ್ಕಿ ದೇಶದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಅರ್ಜೆಂಟಿನಾ ದೇಶದ ಸಮಸ್ಯೆಗಳು ಜರ್ಮನ್ ದೇಶದ ರಫ್ತು ಕುಸಿಯಲು ಕಾರಣವಾಗಿದೆ. ಜರ್ಮನ್ ದೇಶವೂ ಕೂಡ ಮೂಲತಃ ರಫ್ತನ್ನ ನಂಬಿ ಬದುಕುವ ದೇಶವಾಗಿದೆ.  ಉಳಿದಂತೆ ಯುರೋ ಜೋನ್ ನಲ್ಲಿ ಗ್ರಾಹಕನ ಖರೀದಿ ಶಕ್ತಿ ನೆಲ ಕಚ್ಚಿದ್ದು ಎಲ್ಲರಿಗೂ ತಿಳಿದಿರುವ ವಿಷಯ. 2018ರಲ್ಲಿ ಇದರಲ್ಲಿ ಒಂದಷ್ಟು ಬದಲಾವಣೆ ಆದರೂ ಅದು ಹೇಳಿಕೊಳ್ಳುವ ಮಟ್ಟಕ್ಕೆ ಇರಲಿಲ್ಲ. 2019 ರಲ್ಲಿ ಕೂಡ ಆಂತರಿಕ ಕಾರಣಕ್ಕಿಂತ ಬಾಹ್ಯ ಕಾರಣಗಳು ಯುರೋ ವಲಯವನ್ನ ಯಥಾಸ್ಥಿತಯಲ್ಲಿ ಇಡುತ್ತವೆ. ಇದರ ಅರ್ಥ 2019ರಲ್ಲಿ ಕೂಡ ಹೇಳಿಕೊಳ್ಳುವ ಬದಲಾವಣೆ ಈ ವಲಯದಲ್ಲಿ ಕಾಣುವ ಲಕ್ಷಣಗಳಿಲ್ಲ. 
ಯುನೈಟೆಡ್ ಕಿಂಗ್ಡಮ್:  ಬ್ರಿಟನ್ ಯುರೋ ವಲಯದಿಂದ ಹೊರ ಹೋಗುವ ಕಾರಣದಿಂದ ಅದಾಗಲೇ ಅದರ ಕರೆನ್ಸಿ ಪೌಂಡ್ ಹದಿನೈದು ಪ್ರತಿಶತ ಕುಸಿತ ಕಂಡಿದೆ. ಬ್ರೆಕ್ಸಿಟ್ ಪೂರ್ಣಗೊಂಡು 29 ಮಾರ್ಚ್ 2019 ರಂದು ಬ್ರಿಟನ್ ಯುರೋ ವಲಯದಿಂದ ಸಂಪೂರ್ಣವಾಗಿ ಹೊರ ಹೋಗಲಿದೆ. ಆಗ ಈ ದೇಶದ ಹಣ ಇನ್ನಷ್ಟು ಅಪಮೌಲ್ಯವಾಗಲಿದೆ. ಇದರ ಜೊತೆಗೆ ಯುರೋ ವಲಯದೊಂದಿಗೆ ಇಷ್ಟು ವರ್ಷ ಸುಲಭವಾಗಿದ್ದ ವಾಣಿಜ್ಯ ವಹಿವಾಟು ಕಷ್ಟವಾಗಲಿದ್ದು ಖಂಡಿತ ವ್ಯಾಪಾರ ಕುಸಿಯಲಿದೆ. ಬ್ರೆಕ್ಸಿಟ್ ನಿಂದ ಯುನೈಟೆಡ್ ಕಿಂಗ್ಡಮ್ ನ ಆರ್ಥಿಕ ಸ್ಥಿತಿ ಕುಸಿಯಲಿದೆ ಎನ್ನುವುದು ಪಂಡಿತರ ಲೆಕ್ಕಾಚಾರ, ಹೀಗಾಗಿ ಹೂಡಿಕೆದಾರರು ಕಾಡು ನೋಡುವ ತಂತ್ರವನ್ನ ಅನುಸರಿಸುತ್ತಿದ್ದಾರೆ. ಸದ್ಯದ ಮಟ್ಟಿಗಂತೂ ಇಲ್ಲಿನ ಪರಿಸ್ಥಿತಿ ಆಶಾದಾಯಕವಾಗಿಲ್ಲ. 2019 ಮಾರ್ಚ್ ನಂತರ ಯುಕೆಯ ನಿಜವಾದ ಭವಿಷ್ಯ ಜಗತ್ತಿನ ಮುಂದೆ ಅನಾವರಣವಾಗಲಿದೆ. 
ಭಾರತ: 2018ರಲ್ಲಿ 7.4 ಪ್ರತಿಶತ ವೇಗದಲ್ಲಿ ಅಭಿವೃದ್ಧಿ ಕಂಡ ಭಾರತ ದೇಶ 2019ರಲ್ಲಿ 7.3 ಪ್ರತಿಶತ ಅಭಿವೃದ್ಧಿ ಕಾಣಲಿದೆ ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ತನ್ನ ಅಂದಾಜಿನಲ್ಲಿ ತಿಳಿಸಿದೆ. ಇದನ್ನ ಬಿಟ್ಟು ನೋಡಲು ಹೋದರೂ ಕೂಡ, ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೇ ರಾಜ ಎನ್ನುವಂತೆ ಸದ್ಯದ ಮಟ್ಟಿಗೆ ಭಾರತದ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿದೆ. 2019 ರಲ್ಲಿ ಭಾರತದಲ್ಲಿ ಚುನಾವಣೆಯಿದ್ದು ಯಾವ ಪಕ್ಷ ಸರಕಾರ ರಚಿಸಲಿದೆ ಎನ್ನುವುದು ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸೆಂಟ್ರಲ್ ಬ್ಯಾಂಕ್ ಸರಕಾರದ ಅಧೀನದಲ್ಲಿ ಇರುವ ಸಂಸ್ಥೆಯಲ್ಲ ಎನ್ನವುದನ್ನ ಹೇಳಬೇಕಿದೆ. ಹೂಡಿಕೆದಾರರು ಒಮ್ಮೆ ನಂಬಿಕೆ ಕಳೆದುಕೊಂಡರೆ ಮತ್ತೆ ಅವರ ನಂಬಿಕೆಯನ್ನ ಗಳಿಸುವುದು ಸುಲಭದ ಮಾತಲ್ಲ. ಭಾರತ ಕೂಡ ಹಲವಾರು ಆಂತರಿಕ ಸಮಸ್ಯೆಯಿಂದ ಬಳಲುತ್ತಿದೆ. ಆದರೆ 2019 ರ ಚುನಾವಣೆ ಫಲಿತಾಂಶ ಇವೆಲ್ಲವನ್ನ ನೆನೆಗುದಿಗೆ ತಳ್ಳಿ ಅಭಿವೃದ್ಧಿ ಪಥದಲ್ಲಿ ಸ್ಥಿರವಾಗಿ ನೆಡೆಸಬಲ್ಲದು. ಈಗಿನ ಸರಕಾರ ಒಂದು ಮಟ್ಟದ ಓಘವನ್ನ ಪಡೆಯುವಲ್ಲಿ ಯಶಸ್ವಿಯಾಗಿದೆ. ಅದು ಮುಂದುವರೆಯಬೇಕಂದರೆ ಚುನಾವಣೆ ಫಲಿತಾಂಶ ಸಕಾರಾತ್ಮಕವಾಗಿರಬೇಕು. 
ಕೊನೆ ಮಾತು: ಜಗತ್ತಿನ ಎಲ್ಲಾ ದೇಶಗಳ ಹಣಕಾಸು ತಜ್ಞರನ್ನ 2019 ರ ಬಗ್ಗೆ ತಮ್ಮ ನಿಲುವನ್ನ ಕೇಳಲಾಗಿದೆ ಅಂದರೆ 196 ತಜ್ಞರನ್ನ ಅವರ ನಿಲುವು ನೀಡಲು ಕೇಳಲಾಗಿತ್ತು ಅದರಲ್ಲಿ 150ಕ್ಕೂ ಹೆಚ್ಚು ಜನ ಅಮೇರಿಕಾ ಮತ್ತು ಚೀನಾ ಟ್ರೇಡ್ ವಾರ್ ಗೆ ಕೊನೆ ಹಾಡದಿದ್ದರೆ ಅವೆರಡೂ ತೀವ್ರ ಹಣಕಾಸು ಮುಗ್ಗಟ್ಟಿನಲ್ಲಿ ಸಿಲುಕಲಿವೆ ಎಂದಿದ್ದಾರೆ. ಇದರ ಜೊತೆಗೆ ಜಗತ್ತು ಕೂಡ ರಿಸೆಶನ್ ಎನ್ನುವ ಕರಿ ಮೋಡದ ನೆರಳಿನಲ್ಲಿ ಬಾಳುವಂತಾಗುತ್ತದೆ ಎಂದಿದ್ದಾರೆ. ಗಮನಿಸಿ ಅಮೇರಿಕಾ ಮತ್ತು ಚೀನಾ ಜಗತ್ತೆಂಬ ಕಾರಿನ ಇಂಜಿನ್ ಇದ್ದಂತೆ, ಇಂಜಿನ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಕಾರು ಚಲಿಸುವ ಮಾತೆಲ್ಲಿ? ಇಂದು ಜಗತ್ತಿನ ಯಾವುದೋ ಒಂದು ದೇಶದಲ್ಲಿ ಏನಾದರು ಆದರೆ ನನಗೇನು? ಎಂದು ಕೂರುವ ಸಮಯವಲ್ಲ ಅಲ್ಲಿನ ವ್ಯತ್ಯಯಗಳು ನಮ್ಮವೂ ಕೂಡ. ಅಮೇರಿಕಾ ಅಧ್ಯಕ್ಷ ಹಾಗೂ ಚೀನಾ ಅಧ್ಯಕ್ಷರ ಮನಸ್ಥಿತಿ ಹೇಗಿದೆಯೆಂದರೆ ನಿನೋ-ನಾನೋ ಎಂದು ಜಿದ್ದಿಗೆ ಬಿದ್ದಂತಿದೆ. ಇಬ್ಬರೂ ನಾಯಕರು ಈ ವಿಷಯವನ್ನ ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದಾರೆ. ಇದು ಜಗತ್ತಿನ ಆರ್ಥಿಕತೆಗೆ ಒಳ್ಳೆಯದಲ್ಲ. ಇವರ ಜಗಳ ಮುಗಿದರೆ ಜಗತ್ತಿಗೆ ಒಳಿತು. ಇಲ್ಲದಿದ್ದರೆ 2019/2020 ಜಗತ್ತು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವುದು ಶತಸಿದ್ಧ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com