ಮೋದಿ ಆಡಳಿತಾವಧಿಯಲ್ಲಿ ಸಾಲ ಹೆಚ್ಚಾಗಿದೆಯೇ?

ಅವರು ಸಾಲದ ಮೊತ್ತ ಹೆಚ್ಚಿತು ಎಂದರು ಅದು ನಿಜ ಆದರೆ ಅವರು ನೀಡಿದ ಮಾಹಿತಿ ಕೇವಲ ಒಮ್ಮುಖ. ಆ ಸಾಲ ಏಕೆ ಮಾಡಲಾಯಿತು ಮತ್ತು ಅದನ್ನ ಏಕೆ ವಿನಿಯೋಗಿಸಲಾಯಿತು ಎನ್ನುವ ಬಗ್ಗೆ ಮಾಹಿತಿಯಿಲ್ಲ.
ಮೋದಿ
ಮೋದಿ
ಈ ವಾರದ ಅಂಕಣದಲ್ಲಿ ಕಳೆದ ಇತ್ತೀಚಿನ ದಿನಗಳಲ್ಲಿ ವಿತ್ತ ಪ್ರಪಂಚದಲ್ಲಿ ಜಗತ್ತಿನಾದ್ಯಂತ ಆಗುತ್ತಿರುವ ಬದಲಾವಣೆಗಳ ಬಗ್ಗೆ ಒಂದಷ್ಟು ಗಮನ ಹರಿಸೋಣ. ಅವುಗಳ ವಿಶ್ಲೇಷಣೆ ಮಾಡೋಣ. ಅದು ಭಾರತಕ್ಕೆ ಮುಂದಿನ ದಿನಗಳಲ್ಲಿ ಹೇಗೆ ಮಾರಕ ಅಥವಾ ಪೂರಕವಾಗಲಿದೆ ಎನ್ನುವುದನ್ನ ಕೂಡ ಗಮನಿಸೋಣ. 
ಮೊದಲಿಗೆ ಮೂರ್ನಾಲ್ಕು ದಿನದ ಹಿಂದೆ ಎಕಾನಮಿ ಬಗ್ಗೆ ಬರೆಯುವ ಆಂಗ್ಲ ದಿನಪತ್ರಿಕೆಯೊಂದು ಮೋದಿಯವರ ಆಡಳಿತಾವಧಿಯಲ್ಲಿ ಸಾಲದ ಮೊತ್ತ ಹೆಚ್ಚಿದೆ ಎನ್ನುವ ತಲೆಬರಹ ನೀಡಿ ಒಂದು ಲೇಖನವನ್ನ ಪ್ರಕಟಿಸಿತ್ತು. ಅದರ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ. ಅಲ್ಲಿನ ಮಾಹಿತಿಯ ಪ್ರಕಾರ ಸಾಲದ ಮೊತ್ತ 2014 ಕ್ಕೆ ಹೋಲಿಸಿದರೆ ಐವತ್ತು ಪ್ರತಿಶತ ಹೆಚ್ಚಿ 82 ಲಕ್ಷ ಕೋಟಿ ರೂಪಾಯಿ ಮುಟ್ಟಿದೆ. ಈ ಅಂಕಿ ಅಂಶವನ್ನ ಅವರು ಹಣಕಾಸು ಮಂತ್ರಾಲಯದಿಂದ ಹೆಕ್ಕಿರುವುದಾಗಿ ಹೇಳಿದ್ದಾರೆ. ಇದನ್ನ ಪರಿಶೀಲಿಸಿದಾಗ ಆ ಪತ್ರಿಕೆ ನೀಡಿರುವ ಅಂಕಿ ಅಂಶ ಸರಿಯಾಗಿದೆ ಎನ್ನುವುದು ತಿಳಿಯಿತು. 
ಅವರು ಸಾಲದ ಮೊತ್ತ ಹೆಚ್ಚಿತು ಎಂದರು ಅದು ನಿಜ ಆದರೆ ಅವರು ನೀಡಿದ ಮಾಹಿತಿ ಕೇವಲ ಒಮ್ಮುಖ. ಆ ಸಾಲ ಏಕೆ ಮಾಡಲಾಯಿತು ಮತ್ತು ಅದನ್ನ ಏಕೆ ವಿನಿಯೋಗಿಸಲಾಯಿತು ಎನ್ನುವ ಬಗ್ಗೆ ಮಾಹಿತಿಯಿಲ್ಲ. ಒಂದು ಸರಕಾರ ಅಥವಾ ಒಂದು ಸಂಸ್ಥೆ ಅಥವಾ ವ್ಯಕ್ತಿಯ ಹಣಕಾಸು ಸ್ಥಿತಿ ಅಳೆಯಲು ಆಸ್ತಿ ಮತ್ತು ಬಾಧ್ಯತೆ (ಅಸೆಟ್ ಅಂಡ್ ಲಯಬಲಿಟಿ) ಎರಡನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಅಪೂರ್ಣ ಮಾಹಿತಿಯಾಗುತ್ತದೆ ಮತ್ತು ಅಂತಹ ಮಾಹಿತಿಯಿಂದ ಅಂತಹ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಸರಕಾರದ ಮೇಲೆ ಋಣಾತ್ಮಕ ಅಭಿಪ್ರಾಯ ಮೂಡುತ್ತದೆ. ಹೆಚ್ಚಿನ ಅಂಕಿ-ಅಂಶವನ್ನ ನಾನು ಇಲ್ಲಿ ತುಂಬಲು ಹೋಗುವುದಿಲ್ಲ ಎಲ್ಲರಿಗೂ ಅರ್ಥವಾಗಲಿ ಎನ್ನುವ ಉದ್ದೇಶದಿಂದ ಈ ಉದಾಹರಣೆಯನ್ನ ನೀಡುತ್ತಿದ್ದೇನೆ. ಇದನ್ನ ನೀವು ಸರಕಾರದ ಮಟ್ಟಕ್ಕೆ ಹೋಲಿಸಿಕೊಳ್ಳಬಹು. 
ರಾಮ ಎನ್ನುವ ವ್ಯಕ್ತಿಯ ಸಾಲ 2014 ರಲ್ಲಿ 100 ರೂಪಾಯಿ ಎಂದುಕೊಳ್ಳಿ ಅದು 2018ರ ಕೊನೆಯ ವೇಳೆಗೆ ಐವತ್ತು ಪ್ರತಿಶತ ಏರಿ 150 ರೂಪಾಯಿ ಆಗಿದೆ. ಕಳೆದ ನಾಲ್ಕು ವರ್ಷದಲ್ಲಿ ಸಾಲದ ಮೊತ್ತ ಹೆಚ್ಚಿದೆ ಎನ್ನುವ ತಲೆಬರಹದಲ್ಲಿ ಇದು ಪ್ರಕಟವಾದರೆ ನಿಮಗೆ ರಾಮನ ಬಗ್ಗೆ ಆತನ ಹಣಕಾಸು ಸ್ಥಿತಿ ಬಗ್ಗೆ ನಿಜಕ್ಕೂ ಬೇಸರ ಬರುತ್ತದೆ. 
ಸಾಲ ಲಯಬಲಿಟಿ, ಈ ಸಾಲದ ಮುಂದೆ ಏನಾದರೂ ಆಸ್ತಿ ಇದೆಯೇ? ಎನ್ನುವುದನ್ನ ನೋಡಬೇಕು. ಬ್ಯಾಲೆನ್ಸ್ ಶೀಟ್ ಅಂದರೆ ಅಸೆಟ್ ಮತ್ತು ಲಯಬಲಿಟಿ ಎರಡನ್ನೂ ನೀಡುವ ಲೆಕ್ಕಪತ್ರ. ರಾಮ ಸಾಲ ಪಡೆದದ್ದು ಮಗ/ಮಗಳ ವಿದ್ಯಾಭ್ಯಾಸಕ್ಕೆ ಅಥವಾ ಮನೆ ರಿಪೇರಿಗೆ ಅಥವಾ ವಾಹನ ಖರೀದಿಗೆ ಆಗಿದ್ದರೆ? ಅಲ್ಲದೆ ಸಾಲ ಮರುಪಾವತಿಯ ಖಾತ್ರಿ ಅಥವಾ ನಂಬಿಕೆ ಇಲ್ಲದೆ ಸಾಲ ಯಾರು ಕೊಡುತ್ತಾರೆ? ಸುದ್ದಿಯಲ್ಲಿ ರಾಮನ 2014ರ ಸಾಲ 2018ರ ಸಾಲದ  ಬಗ್ಗೆ ಮಾತನಾಡಿ ಸುಮ್ಮನಾಗಿದ್ದಾರೆ. ಆದರೆ 2014 ರ ರಾಮನ ಆದಾಯ 2018 ರ ರಾಮನ ಆದಾಯದ ಬಗ್ಗೆ ಮಾತನಾಡಿಯೇ ಇಲ್ಲ. ಅಲ್ಲದೆ ಸಾಲ ಹಲವಾರು ರೀತಿಯಲ್ಲಿದೆ ಅವುಗಳ ಬಗ್ಗೆ ಕೂಡ ಇಲ್ಲಿ ಜಾಣ ಮೌನ ಕಾಣುತ್ತದೆ. ಉದಾಹರಣೆಗೆ ಕೇಂದ್ರ ಸರಕಾರ ಗೋಲ್ಡ್ ಬಾಂಡ್ ವಿತರಣೆಯಿಂದ ಸಾಮಾನ್ಯ ಜನರಿಂದ 9 ಸಾವಿರ ಕೋಟಿ ರೂಪಾಯಿ ಹಣವನ್ನ ಸಾಲದ ರೂಪದಲ್ಲಿ ಸಂಗ್ರಹಿಸಿದೆ. ಇದು ಕೂಡ ಸಾಲವೇ ಆದರೆ ಇದರಿಂದ ಅಷ್ಟು ಪ್ರಮಾಣದ ಗೋಲ್ಡ್ ಆಮದು ನಿಂತು ಆದರ ಮೇಲೆ ವ್ಯಯವಾಗುತ್ತಿದ್ದ ವಿದೇಶಿ ವಿನಿಮಯ ಉಳಿತಾಯವಾಯಿತು.! 
ಅಂಕಿ ಅಂಶಗಳನ್ನ ಹೇಗೆ ತೋರಿಸುತ್ತೇವೆ ಮತ್ತು ಅದನ್ನ ಹೇಗೆ ವಿಶ್ಲೇಷಿಸುತ್ತೇವೆ ಎನ್ನುವುದು ಬಹಳ ಮಹತ್ತರ ಪಾತ್ರವಹಿಸುತ್ತದೆ. ಭಾರತ ಸರಕಾರದ ಬ್ಯಾಲೆನ್ಸ್ ಶೀಟ್ ಯೂರೋಪಿನ ಹತ್ತಾರು ದೇಶಗಳ ಬ್ಯಾಲೆನ್ಸ್ ಶೀಟಿಗಿಂತ ಚನ್ನಾಗಿದೆ. ಜಗತ್ತು 2019/20 ರಲ್ಲಿ ಮತ್ತೊಂದು ತಿರುವು ಪಡೆದುಕೊಳ್ಳಲಿದೆ. ವಿತ್ತ ಜಗತ್ತಿನಲ್ಲಿ ಉಂಟಾಗಲಿರುವ ಅಸ್ಥಿರತೆ ಇನ್ನಷ್ಟು ಸಂಕಷ್ಟ ತರಲಿದೆ. ಅಂತಹ ಸಮಯದಲ್ಲಿ 'ಕಸ' ಹಂಚುವಿಕೆಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಜನ ಸಾಮಾನ್ಯನಿಗೆ ಯಾವ ಮಾಹಿತಿ ಮೊದಲು ತಲುಪುತ್ತದೆ ಅದು ಆತನ ತಲೆಯಲ್ಲಿ ರಿಜಿಸ್ಟರ್ ಆಗುತ್ತದೆ. ಅದು ಕಸ ಎನ್ನುವ ಸಾಮಾನ್ಯ ಜ್ಞಾನ ಆತನಲ್ಲಿರುವುದಿಲ್ಲ. 
ಇಲ್ಲಿ ಇನ್ನೊಂದು ಅಂಶವನ್ನ ಕೂಡ ಗಮನಿಸಬೇಕು ವರ್ಲ್ಡ್ ಬ್ಯಾಂಕ್ ಇರಲಿ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಇರಲಿ ಎರಡೂ ಸಂಸ್ಥೆಗಳು ಭಾರತದ ಆರ್ಥಿಕತೆಯ ಬಗ್ಗೆ ಧನಾತ್ಮಕ ಮಾತುಗಳನ್ನ ಆಡುತ್ತಿವೆ. ಉಳಿದಂತೆ ಅನೇಕ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಕೂಡ ಭಾರತದ ಅಭಿವೃದ್ಧಿ ಪಥ ಸರಿಯಾಗಿದೆ ಎನ್ನುವ ಸರ್ಟಿಫಿಕೇಟ್ ಕೇಳದೆಯೇ ನೀಡುತ್ತಿವೆ. 
ಕೆಲವರು ಕಾಂಗ್ರೆಸ್ ಸರಕಾರ ಸಾಲ ಮಾಡಿದಾಗ ಸಾಲ ಹೆಚ್ಚಾಯಿತು ಎನ್ನುತ್ತೀರಿ, ಬಿಜೆಪಿ ಮಾಡಿದಾಗ ವಹಿಸಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಯನ್ನ ಕೂಡ ಎತ್ತಿದ್ದಾರೆ. ಗಮನಿಸಿ ಪಕ್ಷ ಯಾವುದೇ ಇರಲಿ ಅದು ಇಲ್ಲಿ ಮುಖ್ಯವಲ್ಲ ಇಲ್ಲಿ ಮುಖ್ಯವಾಗುವುದು ಆದಾಯ-ವ್ಯಯ ಜೊತೆಗೆ ಅಸೆಟ್ ಅಂಡ್ ಲಯಬಲಿಟಿ ತೋರಿಸುವ ಲೆಕ್ಕಪತ್ರ ಮಾತ್ರ. 
ಗಮನಿಸಿ ಇವತ್ತು ಸಾಲವಿಲ್ಲದ ದೇಶವಿಲ್ಲ. ಡೆಟ್ ಈಸ್ ಮನಿ ಎನ್ನುವ ಮಟ್ಟಕ್ಕೆ ಸಾಲ ಬೆಳೆದು ಕೂತಿದೆ. ಮೋದಿ ಸರಕಾರ ವರ್ಲ್ಡ್ ಬ್ಯಾಂಕ್ ನಿಂದ ಕೂಡ ಸಾಲ ಪಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಮೋದಿ ಸರಕಾರ ವಿದೇಶಿ ಸಾಲ ಮಾಡಿಲ್ಲ ಎನ್ನುವುದು ಕೂಡ ತಪ್ಪು ಮಾಹಿತಿ. ಸಾಲ ಏಕೆ ಮಾಡಲಾಗಿದೆ ಮತ್ತು ಅದನ್ನ ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ ಎನ್ನುವುದು ಮತ್ತು ಅದರ ಮರು ಪಾವತಿಗೆ ಸಾಕಷ್ಟು ಆದಾಯ ಉತ್ಪತ್ತಿ ಮಾಡುವಂತೆ ಆ ಹಣವನ್ನ ಬಳಸಲಾಗಿದೆಯೇ? ಎನ್ನುವುದಷ್ಟೆ ಮುಖ್ಯ. ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಸರಿಯಾದ ದಾರಿಯಲ್ಲಿದೆ. ಆದರೆ ಅದರಿಂದ ಸಾಲದ ಮರುಪಾವತಿಗೆ ಬೇಕಾಗುವ ಆದಾಯ ಉತ್ಪನ್ನವಾಗುವುದೇ? ಎನ್ನುವುದು ಮಾತ್ರ ಕಾದು ನೋಡಬೇಕು. 
ಇದರ ಜೊತೆಗೆ ಇತ್ತೀಚಿಗೆ ಇನ್ನೊಂದು ಗಾಳಿಸುದ್ದಿ ಹರಿದಾಡುತ್ತಿದೆ. ಇನ್ಕಮ್ ಟ್ಯಾಕ್ಸ್ ವಿನಾಯತಿ ವೇತನಕ್ಕೆ ಕೆಲಸ ಮಾಡುವರಿಗೆ ಎರಡೂವರೆ ಲಕ್ಷದಿಂದ ಐದು ಲಕ್ಷಕ್ಕೆ ಏರಿಸಲಾಗುತ್ತದೆ ಎನ್ನುವುದು ಆ ಸುದ್ದಿ. ಇದಕ್ಕೆ ಯಾವುದೇ ಪುರಾವೆ ಇಲ್ಲ. 
ಇನ್ನು ಅಂತರರಾಷ್ಟ್ರೀಯ ಮಟ್ಟದ ಬದಲಾವಣೆ ನೋಡಿದರೆ ಇಂಗ್ಲೆಂಡ್ ಬ್ರೆಕ್ಸಿಟ್ ಗೆ ಥೇರೆಸಾ ಮೇ ಹಾಕಿದ್ದ ರೂಪುರೇಷೆಗೆ ಮುಖಭಂಗವಾಗಿದೆ. ಈಗ ಅವರ ಮುಂದೆ ಎರಡು ದಾರಿಯಿದೆ ಯೂರೋಪಿಯನ್ ಯೂನಿಯನ್ ನಲ್ಲಿ ಉಳಿದುಕೊಳ್ಳುವುದು ಇಲ್ಲವೇ ನೋಡೀಲ್ ಅಂದರೆ ಯಾವುದೇ ಒಪ್ಪಂದವಿಲ್ಲದೆ ಯುರೋ ಜೋನ್ ನಿಂದ ನಿರ್ಗಮಿಸುವುದು. ಬ್ರೆಕ್ಸಿಟ್ ಆದರೆ ಇಂಗ್ಲೆಂಡ್ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಹವಣಿಸುತ್ತದೆ. ಇದು ಭಾರತಕ್ಕೆ ವರದಾನವಾಗಲಿದೆ. 
ಇತ್ತ ಅಮೇರಿಕಾದಲ್ಲಿ ಮನೆಗಳ ಮಾರಾಟ ತೀವ್ರ ಕುಸಿತ ಕಾಣುತ್ತಿದೆ. ಫೆಡರಲ್ ಬಡ್ಡಿ ದರ ಏರಿಸಿ ಹೂಡಿಕೆದಾರರನ್ನ ಅಮೇರಿಕಾ ತನ್ನ ಕಡೆ ಎಳೆಯುವಲ್ಲಿ ಸಫಲವಾಗಿದೆ ಆದರೆ ಐವತ್ತಕ್ಕೂ ಹೆಚ್ಚು ಪ್ರತಿಶತ ಹೂಡಿಕೆದಾರರಲ್ಲಿ ಮುಂಬರುವ ದಿನಗಳ ಕುರಿತು ನಂಬಿಕೆಯಿಲ್ಲ. ಚೀನಾ ದೇಶದ ಜೊತೆಯ ಟ್ರೇಡ್ ವಾರ್ ನಿಂದ ಬಳಲಿರುವ ಅಮೇರಿಕಾ 2019 ರ ಅಂತ್ಯದಲ್ಲಿ ಅಥವಾ 2020ರಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಲಿದೆ ಎನ್ನುವ ಭವಿಷ್ಯವಾಣಿಯನ್ನ ಆರ್ಥಿಕ ಪಂಡಿತರು ನುಡಿಯಲು ಶುರುಮಾಡಿಯಾಗಿದೆ. ಇದು ಭಾರತಕ್ಕೆ ಪೂರಕವೂ ಹೌದು ಮಾರಕವೂ ಹೌದು. ಅಂದಿನ ದಿನದ ಪರಿಸ್ಥಿತಿಯನ್ನ ನಮ್ಮ ಲಾಭಕ್ಕೆ ಬಳಸಿಕೊಳ್ಳುವ ನಾಯಕತ್ವ ಅಂದು ಭಾರತದಲ್ಲಿರಬೇಕು ಅಷ್ಟೇ. 
ಏಷ್ಯಾದ ಬಹುತೇಕ ಷೇರು ಮಾರುಕಟ್ಟೆಗಳು ಅಮೇರಿಕಾ ಮತ್ತು ಚೀನಾದ ನಡುವಿನ ಅಸ್ಥಿರ ಸಂಬಂಧದಿಂದ ಕುಸಿದಿವೆ. ಅಮೇರಿಕಾ ಪ್ರೆಸಿಡೆಂಟ್ ಚೀನಾದ ಮುಖ್ಯಸ್ಥನೊಂದಿಗೆ ನಡೆಯಬೇಕಿದ್ದ ಮಾತುಕತೆ ಮುಂದಕ್ಕೆ ಹಾಕಲಾಗಿದ್ದು ಮಾರುಕಟ್ಟೆ ಕುಸಿಯಲು ಪ್ರಮುಖ ಕಾರಣ. 
ಬ್ರೆಜಿಲ್ ಪ್ರೆಸಿಡೆಂಟ್ ದಾವೋಸ್ ನಲ್ಲಿ ಮಾತನಾಡುತ್ತ ಮುಂಬರುವ ದಿನಗಳಲ್ಲಿ ಬ್ರೆಜಿಲ್ ದೇಶವನ್ನ ಇನ್ನಷ್ಟು ವ್ಯಾಪಾರ ಸ್ನೇಹಿ ದೇಶವನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ಭಾರತ ವ್ಯಾಪಾರ ಸ್ನೇಹಿ ಮಟ್ಟ ಹಿಂದಿಗಿಂತ ಇಂದು ಚನ್ನಾಗಿದೆ. ಅದನ್ನ ಕಾಯ್ದು ಕೊಳ್ಳುವ ಅವಶ್ಯಕತೆ ಇನ್ನಷ್ಟು ಹೆಚ್ಚಾಗಲಿದೆ. 
ಕೊನೆಮಾತು: ಜಗತ್ತು 2018/2020 ರಲ್ಲಿ ಮಹತ್ತರ ಬದಲಾವಣೆ ಕಾಣಲಿದೆ. ಭಾರತದ ಆಡಳಿತ ಸುಭದ್ರವಾಗಿದ್ದರೆ ಚೀನಾ ದೇಶದ ಮತ್ತು ಭಾರತದ ನಡುವಿನ ಅಭಿವೃದ್ಧಿಯ ಅಂತರವನ್ನ ಕಡಿಮೆ ಮಾಡಿಕೊಳ್ಳಬಹದು. ಇತಿಹಾಸ ನೋಡಿದರೆ ಏಷ್ಯಾ ಖಂಡದ ರಾಜ ಭಾರತ. ಆದರೆ ಇತ್ತೀಚಿನ ದಿನಗಳಲ್ಲಿ ಚೀನಾ ಯಾವ ವೇಗದಲ್ಲಿ ಬೆಳವಣಿಗೆ ಹೊಂದಿತೆಂದರೆ ಅಚ್ಚರಿ ತರಿಸುವಷ್ಟು. ಚೀನಾ ದೇಶ ಅಮೇರಿಕಾ ದೇಶದೊಂದಿಗೆ ಕಚ್ಚಾಟದಲ್ಲಿ ಸೊರಗಿದೆ. ಆದರೆ ಅಭಿವೃದ್ಧಿಯ ವೇಗದ ಪ್ರಮಾಣ ಕುಸಿತವಾಗಿದೆ. ಭಾರತದ ವೇಗ ಹೆಚ್ಚು ಕಡಿಮೆ ಅಷ್ಟೇ ಇದೆ. ಇದು ಹೀಗೆಯೇ ಮುಂದುವರಿದರೆ ಭಾರತ ಮತ್ತೆ ಏಷ್ಯಾದ ರಾಜನಾಗುವುದು ಕಷ್ಟವೇನಲ್ಲ ಆದರೆ ಅದನ್ನ ಅರಿತು ನೆಡೆಯುವ ನಾಯಕತ್ವದ ಅವಶ್ಯಕತೆ ಬಹಳವಿದೆ  ಜೊತೆಗೆ ವೇಗ ಕಾಯ್ದು ಕೊಳ್ಳಲು ಮತ್ತಷ್ಟು ಹಣ (ಸಾಲ)ದ ಅವಶ್ಯಕೆತೆ ಕೂಡ ಹೆಚ್ಚಾಗಬಹದು. ಆದರೆ ಮರುಪಾವತಿಗೆ ದಾರಿ/ಹೂಡಿಕೆ ಸರಿಯಾಗಿರಬೇಕು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com