ವಿನಿವಿಂಕ್, ವಿಕ್ರಂ ಇನ್ವೆಸ್ಟ್ಮೆಂಟ್, ಈಗ ಐಎಂಎ ಹಗರಣ! ನಾವು ಕಲಿಯುವುದ್ಯಾವಾಗಣ್ಣ?

ಇಂದು ಹೇಳ ಹೊರಟಿರುವ ವಿಷಯದಲ್ಲಿ ಎರಡು ವಿಷಯಗಳಿವೆ. ಮೊದಲಿಗೆ ಹೇಗೆ ವ್ಯವಸ್ಥಿತವಾಗಿ ಇಂತವರು ಮೋಸದ ಬಲೆಯನ್ನ ಹೆಣೆಯುತ್ತಾರೆ, ಮತ್ತು ಎರಡನೆಯದಾಗಿ ಜನ ಹೇಗೆ ಬಹಳ ಖುಷಿಯಿಂದ ಇಂತಹ....
ವಿನಿವಿಂಕ್, ವಿಕ್ರಂ ಇನ್ವೆಸ್ಟ್ಮೆಂಟ್, ಈಗ ಐಎಂಎ ಹಗರಣ! ನಾವು ಕಲಿಯುವುದ್ಯಾವಾಗಣ್ಣ?
ವಿನಿವಿಂಕ್, ವಿಕ್ರಂ ಇನ್ವೆಸ್ಟ್ಮೆಂಟ್, ಈಗ ಐಎಂಎ ಹಗರಣ! ನಾವು ಕಲಿಯುವುದ್ಯಾವಾಗಣ್ಣ?
ಐಎಂಎ ಹಗರಣ ನಿಮಗೆಲ್ಲ ಗೊತ್ತಿರುವ ವಿಷಯ. ಬೆಂಗಳೂರು, ಕರ್ನಾಟಕ ಅಷ್ಟೇ ಏಕೆ ದೇಶದ ಗಮನ ಸೆಳೆದ ಬಹು ಕೋಟಿ ಹಗರಣವಿದು. ಇಂದು ಹೇಳ ಹೊರಟಿರುವ ವಿಷಯದಲ್ಲಿ ಎರಡು ವಿಷಯಗಳಿವೆ. ಮೊದಲಿಗೆ ಹೇಗೆ ವ್ಯವಸ್ಥಿತವಾಗಿ ಇಂತವರು ಮೋಸದ ಬಲೆಯನ್ನ ಹೆಣೆಯುತ್ತಾರೆ, ಮತ್ತು ಎರಡನೆಯದಾಗಿ ಜನ ಹೇಗೆ ಬಹಳ ಖುಷಿಯಿಂದ ಇಂತಹ ಮೋಸದ ಬಲೆಗೆ ಬೀಳುತ್ತಾರೆ ಎನ್ನುವುದು.
ಹಣಕಾಸು ವಂಚನೆ ಇಂದು ನಿನ್ನೆಯದಲ್ಲ ಮನುಷ್ಯನ ಉಗಮ, ಹಣದ ಉಗಮವಾದ ದಿನದಿಂದ ನಡೆದು ಬಂದಿರುವ ಇತಿಹಾಸ ಇದಕ್ಕೂ ಇದೆ. ಎಲ್ಲಕ್ಕೂ ಹೆಚ್ಚಿನ ಅಘಾತಕಾರಿ ವಿಷಯವೆಂದರೆ ಜನ 'ಇರುಳು ಕಂಡ ಬಾವಿಗೆ ಹಗಲು ಬೀಳುವ' ಕೆಲಸ ಮಾಡುವುದು. ಅಂದರೆ ಇಂತಹ ಯೋಜನೆಗಳಲ್ಲಿ ಹಣ ತೊಡಗಿಸುವ ಮುನ್ನ ಜನ ಸಾಮಾನ್ಯನಿಗೆ ಕೂಡ ಒಂದಂಶದ ಸಂಶಯ ಬಂದಿರುತ್ತದೆ. ಆದರೆ ಹೆಚ್ಚಿನ ಹಣದ ಆಮಿಷ ಆ ಕ್ಷಣದಲ್ಲಿ ಅವರ ಬುದ್ದಿಗೆ ಮಂಕು ಕವಿಯುವಂತೆ ಮಾಡುತ್ತದೆ. 
ಐಎಂಎ ಈ ಲೇಖನದಲ್ಲಿ ಉದಾಹರಣೆಯಾಗಿ ನಮೂದಿತವಾಗಿದೆ. ಇಂದು ಅವರು ನಾಳೆ ಇನ್ನೊಂದು ಹೆಸರು. ಇಂತಹ ಯೋಜನೆಗಳು ಸಮಯ ಕಳೆದಂತೆ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಜನ ಸಾಮಾನ್ಯನ ನೆನಪು ಬಹಳ ಕಡಿಮೆ. ಹೀಗಾಗಿ ಇಂತಹ ಕೃತ್ಯಗಳು ಮತ್ತೆ ಮತ್ತೆ ಸುಲಭವಾಗಿ ಘಟಿಸುತ್ತವೆ. ಇಂದಿನ ಬರಹದಲ್ಲಿ ವಂಚನೆ ಮಾಡುವ ಉದ್ದೇಶದ ಯೋಜನೆಗಳು ಹೇಗಿರುತ್ತವೆ ಎನ್ನುವುದನ್ನ ತಿಳಿದುಕೊಳ್ಳೋಣ ಹಾಗೆಯೇ, ಇಂತಹವುಗಳಿಂದ ದೂರವಿರಲು ಏನು ಮಾಡಬೇಕು ಎನ್ನುವುದನ್ನು ಕೂಡ ನೋಡೋಣ. 
ವಂಚನೆ ಮಾಡುವ ಉದ್ದೇಶದ ಯೋಜನೆಗಳು ಹೇಗಿರುತ್ತವೆ ? 
ಗಮನಿಸಿ ಇಲ್ಲಿ ಹೇಳ ಹೊರಟಿರುವ ಯೋಜನೆ ಕೇವಲ ಐಎಂಎ ಗೆ ಸಂಬಂಧಪಟ್ಟದ್ದು ಮಾತ್ರವಲ್ಲ. ಇಂತಹ ಸಂಸ್ಥೆಗಳು ರೂಪಿಸುವ ಯೋಜನೆಗಳ ಉದಾಹರಣೆ ಮಾತ್ರ. 
  1. ಪ್ರತಿ ತಿಂಗಳು ಚಿನ್ನಾಭರಣದ ಚೀಟಿಯ ಕಂತು ಕಟ್ಟಲು ಹೇಳುವುದು, 11 ತಿಂಗಳು ಕಟ್ಟಿದರೆ ಸಾಕು 12ನೇ ಕಂತು ಉಚಿತ ಎನ್ನುವುದು. ಜೊತೆಗೆ ಚಿನ್ನಾಭರಣದ ಮೇಲಿನ ವೆಸ್ಟೇಜ್ ಹಾಕುವುದಿಲ್ಲ ಎನ್ನುವುದು. ಎಲ್ಲಕ್ಕೂ ಮಿಗಿಲಾಗಿ ಆರಂಭದ ಕಂತು ಕಟ್ಟಿದಾಗ ಇರುವ ಚಿನ್ನದ ಬೆಲೆಯನ್ನ ವರ್ಷ ಬಿಟ್ಟು ಚಿನ್ನ ಕೊಳ್ಳುವ ವೇಳೆಯಲ್ಲಿ ಕೂಡ ನೀಡುವ ಭರವಸೆ ನೀಡುವುದು. 
  2. ಐಎಂಎ ಜನ ಸಾಮಾನ್ಯರಿಂದ ಹಣವನ್ನ ಠೇವಣಿ ರೂಪದಲ್ಲಿ ಸಂಗ್ರಹಿಸುತ್ತಿತ್ತು. ಈ ಹಣಕ್ಕೆ ವಾರ್ಷಿಕ 30 ಪ್ರತಿಶತ ಬಡ್ಡಿಯನ್ನ ನೀಡುತ್ತಿತ್ತು ಎನ್ನುವುದು ಈಗ ತಿಳಿದುಬಂದಿರುವ ವಿಷಯ. ಅಂದರೆ ಗಮನಿಸಿ, ಪ್ರತಿ ಲಕ್ಷ ರುಪಾಯಿಗೆ ತಿಂಗಳಿಗೆ 2,500/- ರೂಪಾಯಿ ಹಣವನ್ನ ಬಡ್ಡಿಯ ರೂಪದಲ್ಲಿ ನೀಡಲಾಗುತ್ತಿತ್ತು. ಇದೆ ಹಣವನ್ನ ಬ್ಯಾಂಕಿನಲ್ಲಿ ನಿಗದಿತ ಠೇವಣಿಯಲ್ಲಿ ಇಟ್ಟಿದ್ದರೆ 6.5 ಪ್ರತಿಶತ ವಾರ್ಷಿಕ ಬಡ್ಡಿ ಪ್ರಕಾರ ಮಾಸಿಕ ಬಡ್ಡಿ 541ರೂಪಾಯಿ ಸಿಗುತ್ತಿತ್ತು. ಅಂದರೆ ಬ್ಯಾಂಕಿನ ಬಡ್ಡಿಗಿಂತ ಐದು ಪಟ್ಟು ಹಣದ ಹೆಚ್ಚಳದ ಆಮಿಷ ನೀಡಲಾಗಿದೆ. ನ್ಯಾಯಯುತ ವ್ಯವಹಾರ ಮಾಡಿ ಯಾರೊಬ್ಬರೂ ಇಷ್ಟು ದೊಡ್ಡ ಮೊತ್ತದ ಹಣವನ್ನ ಬಡ್ಡಿಯ ರೂಪದಲ್ಲಿ ನೀಡಲು ಸಾಧ್ಯವಿಲ್ಲ ಎನ್ನವುದನ್ನ ಜನ ಸಾಮಾನ್ಯ ಮರೆಯಬಾರದು. 
  3. ಇವರ ಕಾರ್ಯವೈಖರಿ ಹೇಗಿರುತ್ತದೆ ಎಂದರೆ ತಾವು ಠೇವಣಿ ಮೇಲೆ ನಿಗದಿ ಪಡಿಸಿದ ಬಡ್ಡಿಯನ್ನ ಮೊದಲು ಠೇವಣಿ ಇಟ್ಟ ಜನಕ್ಕೆ ಪ್ರತಿ ತಿಂಗಳು ಹೇಳಿದ ದಿನಾಂಕಕ್ಕೆ ವರ್ಗಾವಣೆ ಮಾಡುತ್ತಾರೆ. ಈ ಪ್ರಕ್ರಿಯೆ ಹಲವಾರು ತಿಂಗಳು ಕೆಲವೊಮ್ಮೆ ವರ್ಷಗಳು ಕೂಡ ನೆಡೆಯುತ್ತದೆ. ಜನ ಸಾಮಾನ್ಯನ ಮನಸ್ಸಿನಲ್ಲಿ ನಂಬಿಕೆಯನ್ನ ಸೃಷ್ಟಿಸಲಾಗುತ್ತದೆ. ಹೀಗೆ ಠೇವಣಿ ಇಟ್ಟ ಜನರನ್ನ ಒಮ್ಮೆ ಮಾತನಾಡಿಸಿ ಬನ್ನಿ, ಅವರೆಲ್ಲಾ ಒಂದಲ್ಲ ಒಂದು ರೀತಿ ಸಂಬಧಿಕರು, ಮಿತ್ರರು ಇಲ್ಲ ನೆರೆಹೊರೆಯವರು!! ಅರ್ಥ ಇಷ್ಟೇ... ಮೊದಲು ಠೇವಣಿ ಇಟ್ಟು ಉತ್ತಮ ಬಡ್ಡಿ ಹಣವನ್ನ ಹಲವಾರು ತಿಂಗಳು ಪಡೆದು ಖುಷಿಯಾದ ಗ್ರಾಹಕ ಹೋಗಿ ತನ್ನ ಸಂಬಂಧಿಕರನ್ನ ಅಥವಾ ಮಿತ್ರರನ್ನ ಕರೆದುತರುತ್ತಾನೆ. ಹೀಗೆ ಹೊಸದಾಗಿ ಠೇವಣಿಗೆ ಇಟ್ಟ ಹಣದಿಂದ ಅವರು ಬಡ್ಡಿಯನ್ನ ಕೊಡಲು ಶುರುಮಾಡುತ್ತಾರೆ. 
  4. ಮನೆಯಲ್ಲಿ ಉಪಯೋಗಿಸುವ ಇಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಬೆಲೆಯನ್ನ ನಿಗದಿತ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಮಾರಲು ಶುರು ಮಾಡುವುದು. ಜನ ಜಾತ್ರೆಯಂತೆ ನಿಂತು ಖರೀದಿಸುತ್ತಾರೆ. ಮೊದಲು ಕೊಂಡವರು ಜಾಣರು. ನಂತರ ಶುರುವಾಗುವುದು ನಿಜವಾದ ಮೋಸದ ಜಾಲ. ಜನರಿಗೆ ಹಣವನ್ನ ಮುಂಗಡ ನೀಡಲು ಹೇಳಲಾಗುತ್ತದೆ. ಹತ್ತಾರು ಲಕ್ಷದ ವಸ್ತುವನ್ನ ಅವರ ಕಣ್ಣ ಮುಂದೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಿ ವಿಶ್ವಾಸಗಳಿಸುರುತ್ತಾರೆ. ನೇರವಾಗಿ ಕಾರ್ಖಾನೆ ಜೊತೆಗೆ ಒಪ್ಪಂದವಿದೆ. ಮುಂಗಡ ಹಣ ನೀಡಿ ತಿಂಗಳು ಕಾಯಬೇಕು ಎಂದು ಹೇಳುತ್ತಾರೆ. ತಿಂಗಳು ಪೂರ್ತಿ ಕೋಟ್ಯಂತರ ಹಣವನ್ನ ಮುಂಗಡ ಪಡೆದು ಪರಾರಿಯಾಗುತ್ತಾರೆ. 
  5. ವಿಕ್ರಂ ಇನ್ವೆಸ್ಟ್ಮೆಂಟ್ ಕಂಪನಿಯ ಹೆಸರು, ವಿನಿವಿಂಕ್ ಹೆಸರು ಜನರ ಮನದಲ್ಲಿ ಇನ್ನೂ ನೆನೆಪಿದೆ ಎನ್ನುವ ನಂಬಿಕೆಯಿಂದ ಈ ಉದಾಹರಣೆಯನ್ನ ಸೇರಿಸುತ್ತಿದ್ದೇನೆ. ಇವರದು ತಂತ್ರಜ್ಞಾನ ಬಳಸಿ ಸಮಾಜದಲ್ಲಿ ಬುದ್ದಿವಂತರು, ವಿದ್ಯಾವಂತರು ಎಂದು ಕರೆಸಿಕೊಳ್ಳುವ ಜನರನ್ನ ಮೋಸದ ಬಲೆಗೆ ಕೆಡುವುವ ಜಾಲ. ಒಮ್ಮೆ ನೀವು ಇವರ ಪರಿಧಿಯಲ್ಲಿ ಬಂದರೆ ನಿತ್ಯ ಇಷ್ಟು ಹಣ ಹೂಡಿಕೆ ಮಾಡಿದರೆ ಇಷ್ಟು ಹಣ ಬರುತ್ತದೆ ಎನ್ನುವ ಸಂದೇಶವನ್ನ ರವಾನಿಸುತ್ತಾರೆ. ನಿತ್ಯ ಇಂತಹ ಲಾಭದಾಯಕ ಅವಕಾಶಗಳಿಂದ ವಂಚಿತನಾಗುತ್ತಿದ್ದೇನೆ ಎನ್ನುವ ಭಾವನೆ ಆರು ತಿಂಗಳು ಅಥವಾ ವರ್ಷದಲ್ಲಿ ನಿಮ್ಮ ಮನಸ್ಸಿನಲ್ಲಿ ಬಂದು ಬಿಡುತ್ತದೆ. ಸಾಲ ಮಾಡಿಯಾದರೂ ಸರಿಯೇ ನಮ್ಮ ಬುದ್ದಿವಂತರು ಅಲ್ಲಿ ಹೂಡಿಕೆ ಮಾಡಿಬಿಡುತ್ತಾರೆ. 
  6. ಎಲ್ಲಾ ಬಗೆಯ ಚೀಟಿಗಳು ಕೂಡ ಅವುಗಳ ಮಟ್ಟದಲ್ಲಿ ಕುಸಿಯುವ ಅಥವಾ ವಂಚನೆಯಾಗಿ ತಿರುವು ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. 
  7. ಕೋ-ಆಪರೇಟಿವ್ ಸೊಸೈಟಿ ಗಳು ಕೂಡ ಮುಖ್ಯ ಸ್ಥರದ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ದರವನ್ನ ನೀಡುತ್ತವೆ. ಇಲ್ಲಿ ಹೂಡಿಕೆ ಮಾಡುವಾಗ ಕೂಡ ಎಚ್ಚರಿಕೆಯ ಅಗತ್ಯವಿದೆ. ಎಲ್ಲಾ ಕೋ-ಆಪರೇಟಿವ್ ಬ್ಯಾಂಕುಗಳು ಸುರಕ್ಷಿತವಲ್ಲ. ಹಾಗೆಂದು ಎಲ್ಲವೂ ಕೆಟ್ಟವು ಕೂಡ ಅಲ್ಲ. ಇಲ್ಲಿ ವಿವೇಚನೆ ಅತಿ ಮುಖ್ಯ. 
ಜನ ಸಾಮಾನ್ಯ ವಂಚನೆಗೊಳಗಾಗದೆ ಇರಲು ಏನು ಮಾಡಬೇಕು? 
ಮೇಲಿನ ಉದಾಹರಣೆಗಳನ್ನ ಗಮನಿಸಿ ನೋಡಿ. ಅವುಗಳಲ್ಲಿ ಮುಖ್ಯವಾಗಿ ಎರಡು ಅಂಶಗಳಿವೆ. 1.ಮುಖ್ಯಸ್ಥರದ ಹಣಕಾಸು ಸಂಸ್ಥೆಗಳು ನೀಡುವ ಬಡ್ಡಿಯ ದರಕ್ಕಿಂತ ಹೆಚ್ಚಿನ ಬಡ್ಡಿ ಅಥವಾ ಹಣವನ್ನ ವಾಪಸ್ಸು ನೀಡುತ್ತೇವೆ ಎನ್ನುತ್ತಾರೆ.  2. ಇಲ್ಲವೇ ಯಾವುದಾರೊಂದು ವಸ್ತು ಅಥವಾ ಸೇವೆಯನ್ನ ಮುಖ್ಯ ಸ್ಥರದಲ್ಲಿ ಖರೀದಿಸಲು ಬೇಕಾಗುವ ಹಣಕ್ಕಿಂತ ಕಡಿಮೆ ಹಣದಲ್ಲಿ ನೀಡುತ್ತೇವೆ ಎನ್ನುವುದಾಗಿದೆ. 
 ಹೀಗಾಗಿ...:
  1. ಪ್ರತಿಯೊಬ್ಬ ನಾಗರೀಕನೂ ಸಾಧ್ಯವಾದಷ್ಟು ಮುಖ್ಯವಾಹಿನಿಯ ಹಣಕಾಸು ಸಂಸ್ಥೆಗಳ ಜೊತೆಯಲ್ಲಿ ವ್ಯವಹಸರಿಸುವುದನ್ನ ರೂಢಿ ಮಾಡಿಕೊಳ್ಳಬೇಕು. 
  2. ಸಮಾಜದಲ್ಲಿ ಚಾಲ್ತಿ ಇರುವ ಬಡ್ಡಿ ದರ, ಸೇವೆ ಮತ್ತು ಸರುಕಿನ ಬೆಲೆಗಳ ಮಾಹಿತಿ ತಿಳಿದುಕೊಂಡು ತಾವು ಹೂಡಿಕೆ ಮಾಡಲಿರುವ ಸಂಸ್ಥೆಯ ಜೊತೆಗೆ ತುಲನೆ ಮಾಡಬೇಕು. ಇದರ ಅಂತರ ಹೆಚ್ಚಿದಷ್ಟು ಅದು ಎಚ್ಚರಿಕೆಯ ಕರೆ ಘಂಟೆ. ಯೋಚಿಸಿ ನೋಡಿ ಯಾರೋ ಒಬ್ಬ ವ್ಯಾಪಾರಿ ನಿಮಗೇಕೆ ಅಷ್ಟೊಂದು ಲಾಭ ಮಾಡಿಕೊಡುತ್ತಾನೆ. ಅವನು ಲಾಭ ಮಾಡಿಕೊಳ್ಳಲು ಹಳ್ಳ ತೊಡುತ್ತಿರುತ್ತಾನೆ ಅಷ್ಟೇ. 
  3. ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವ ಮುನ್ನ ಅದರ ನಿರ್ದೇಶಕರ ಪಟ್ಟಿಯನ್ನ ಪರಿಶೀಲಸುವುದು ಉತ್ತಮ. 
  4. ಬಂಧು-ಮಿತ್ರರ ನಡುವಿನ ಹಣದ ವ್ಯವಹಾರ, ಚೀಟಿ ವ್ಯವಹಾರ ಇಟ್ಟುಕೊಳ್ಳಬಾರದು. 
  5. ಸಾಧ್ಯವಾದಷ್ಟೂ ಹಣಕಾಸಿನ ಬಗ್ಗೆ ತಿಳುವಳಿಕೆ ಉಳ್ಳವರ ಜೊತೆ ಸಮಾಲೋಚನೆ ನೆಡೆಸಿ ಹೂಡಿಕೆ ಮಾಡುವುದು ಎಲ್ಲಾ ವಿಧದಲ್ಲೂ ಉತ್ತಮ. 
ಕೊನೆ ಮಾತು: ಮನುಷ್ಯನ ದುರಾಸೆ ಎಲ್ಲಿಯವರೆಗೆ ಇರುತ್ತದೆಯೂ ಅಲ್ಲಿಯವರೆಗೆ ಇಂತಹ ವಂಚನೆ ಪ್ರಕರಣಗಳು ಆಗುತ್ತಲೆ ಇರುತ್ತದೆ. ಇದಕ್ಕೆ ನೇರವಾಗಿ ಇಂತಹ ಸಂಸ್ಥೆಗಳನ್ನೇ ಹೊಣೆ ಮಾಡುವುದರ ಬದಲು, ಹೆಚ್ಚಿನ ಹಣದ ಆಮಿಷಕ್ಕೆ ಬಲಿ ಬಿದ್ದ ಜನ ಸಾಮಾನ್ಯನ ಕೊಡುಗೆಯನ್ನ ಕೂಡ ಸದಾ ನೆನೆಪಿಸಿಕೊಳ್ಳೋಣ. ಎರಡೂ ಕೈ ಸೇರಿದರೆ ಚಪ್ಪಾಳೆ. ಇಂತಹ ವಂಚನೆ ಯೋಜಗಳಿಗೆ ಕೈ ಜೋಡಿಸದಿರೋಣ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com