ಕುಂಭಮೇಳದ ಆರ್ಥಿಕತೆ ಬಗ್ಗೆ ನಿಮಗೆಷ್ಟು ಗೊತ್ತು?

ಹಿಂದಿನ ಕುಂಭಮೇಳ ನೆಡದದ್ದು 2013ರಲ್ಲಿ. ನನಗೆ ಚನ್ನಾಗಿ ನೆನಪಿದೆ ಕಾಲ್ತುಳಿತದಲ್ಲಿ ಒಂದಷ್ಟು ಮಂದಿ ಸತ್ತು ಹೋದರು. ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ನನ್ನ ಸ್ಪ್ಯಾನಿಷ್ ಗೆಳೆಯರು, ಆದರೆ...
ಕುಂಭಮೇಳ-2019
ಕುಂಭಮೇಳ-2019
ಕುಂಭಮೇಳ ಮಾರ್ಚ್ 4, 2019ಕ್ಕೆ ಮುಗಿದಿದೆ. ಇಂತಹ ದಿನ ಶುರುವಾಗಬೇಕು ಮತ್ತು ಇಂತಹ ದಿನವೇ ಮುಗಿಯಬೇಕು ಎನ್ನುವುದನ್ನ ಗ್ರಹಗಳ ಚಲನೆಯನ್ನ ಆಧರಿಸಿ ಲೆಕ್ಕಾಚಾರ ಮಾಡುತ್ತಾರೆ. ಅದೊಂದು ಕ್ಲಿಷ್ಟ ಲೆಕ್ಕಾಚಾರ. ಅಲ್ಲಿನ ಲೆಕ್ಕಾಚಾರ ಮಾಡಲು ಬೇರೆಯ ಜನರಿದ್ದಾರೆ. ಇಲ್ಲೇನಿದ್ದರೂ ಬೇರೆಯದೇ ಲೆಕ್ಕಾಚಾರ! 
ಹಿಂದಿನ ಕುಂಭಮೇಳ ನೆಡದದ್ದು 2013ರಲ್ಲಿ. ನನಗೆ ಚನ್ನಾಗಿ ನೆನಪಿದೆ ಕಾಲ್ತುಳಿತದಲ್ಲಿ ಒಂದಷ್ಟು ಮಂದಿ ಸತ್ತು ಹೋದರು. ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ನನ್ನ ಸ್ಪ್ಯಾನಿಷ್ ಗೆಳೆಯರು, ಸಹೋದ್ಯೋಗಿಗಳು ನೀವೇಕೆ ಹೀಗೆ? ಇಂತಹ ಕಾರ್ಯಕ್ರಮವನ್ನ ಅದೇಕೆ ಇನ್ನಷ್ಟು ಚನ್ನಾಗಿ ಆಯೋಜಿಸಬಾರದು? ಹೀಗೆ ಅನೇಕ ಪ್ರಶ್ನೆಗಳನ್ನ ಕೇಳಿದ್ದರು. ಈ ಘಟನೆ ನೆಡೆದು ಕೇವಲ ಒಂದೆರೆಡು ದಿನದಲ್ಲಿ ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನ ಡಿಸ್ಕೋ ಒಂದರಲ್ಲಿ ಕಾಲ್ತುಳಿತ ಉಂಟಾಗಿ ಹತ್ತಾರು ಜನ ಸತ್ತು ಹೋದರು. ಆಗ ನನ್ನ ಸ್ಪ್ಯಾನಿಷ್ ಮಿತ್ರರಿಗೆ ಹೇಳಿದ್ದೆ, ಕುಂಭಮೇಳ ಎನ್ನುವುದು ಜಗತ್ತಿನ ಅತಿ ಹೆಚ್ಚು ಜನ ಸೇರುವ ಒಂದು ಧಾರ್ಮಿಕ ಕಾರ್ಯಕ್ರಮ. ಇಷ್ಟು ಸಂಖ್ಯೆಯ ಜನ ಹಿಂದೂಗಳಲ್ಲದೆ ಬೇರಾವ ಜನಾಂಗವಾಗಿದ್ದರೂ ಇಷ್ಟೊಂದು ಶಾಂತಿಯಿಂದ ಕೊನೆಯಾಗುವುದೇ ಇಲ್ಲ. ಕೇವಲ ಸಾವಿರ ಸಂಖ್ಯೆಯಲ್ಲಿ ಸೇರುವ ಡಿಸ್ಕೋದಲ್ಲಿ ಕಾಲ್ತುಳಿತಕ್ಕೆ ಹತ್ತಾರು ಮಂದಿ ಸಾಯುತ್ತಾರೆ ಏಕೆ? ಅದನ್ನ ಇನ್ನಷ್ಟು ಚನ್ನಾಗಿ ಆಯೋಜಿಸಬಾರದಿತ್ತೇ? ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಸತ್ತರೆ ಅದು ತೃತೀಯ ದೇಶ, ಡಿಸ್ಕೋದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಸತ್ತರೆ ಅದು ಮುಂದುವರಿದ ದೇಶವೇ? ಎನ್ನುವ ಪ್ರಶ್ನೆ ನನ್ನ ಬಹುತೇಕ ಸ್ಪ್ಯಾನಿಷ್ ಮಿತ್ರರನ್ನು ತಣ್ಣಗಾಗಿಸಿತ್ತು. ಇರಲಿ... 
2013 ರಲ್ಲಿ ಕುಂಭಮೇಳದಲ್ಲಿ ಭಾಗವಹಿಸಿದ ಜನರ ಸಂಖ್ಯೆ 12 ಕೋಟಿ! ಇದಕ್ಕೆಂದು ಉತ್ತರ ಪ್ರದೇಶದ ಸರಕಾರ ಮಾಡಿದ ಖರ್ಚು 1,300 ಕೋಟಿ ರೂಪಾಯಿ. ಇದರಿಂದ ಉತ್ತರ ಪ್ರದೇಶ ಸರಕಾರಕ್ಕೆ ಸಿಕ್ಕಿರಬಹುದಾದ ಅಂದಾಜು ಲಾಭ 22 ಸಾವಿರ ಕೋಟಿ!!
1,600 ಎಕರೆಯಲ್ಲಿ ಟೆಂಟ್ ವ್ಯವಸ್ಥೆಯನ್ನ ಮಾಡಲಾಗಿತ್ತು. 2013 ರಲ್ಲಿ ಇದ್ದ ವ್ಯವಸ್ಥೆಯಲ್ಲಿ ಅಷ್ಟೊಂದು ಜನ ಭಕ್ತರು ಬಂದಿದ್ದರು.  2019 ರಲ್ಲಿ ಉತ್ತರ ಪ್ರದೇಶ ಸರಕಾರ ಕುಂಭಮೇಳವನ್ನ ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸಬೇಕು ಎನ್ನುವ ಉದ್ದೇಶದಿಂದ 4,300 ಕೋಟಿ ರೂಪಾಯಿಯನ್ನ ಮೀಸಲಿಟ್ಟಿತು. ಈ ವರ್ಷ 15 ಕೋಟಿ ಜನ ಕುಂಭಮೇಳದಲ್ಲಿ ಭಾಗವಹಿಸಬಹದು ಎನ್ನುವ ಅಂದಾಜು ಮಾಡಲಾಗಿತ್ತು. ಐವತ್ತು ದಿನಗಳ ಈ ಮಹಾ ಮೇಳದಲ್ಲಿ ಭಾಗಿಯಾದವರ ಸಂಖ್ಯೆ ಬರೋಬ್ಬರಿ 24 ಕೋಟಿ ಎಂದರೆ ನಂಬಲು ಅಸಾಧ್ಯ! 4,300 ಕೋಟಿ ಇದ್ದ ವೆಚ್ಚ 7,೦೦೦ ಕೋಟಿ ರೂಪಾಯಿಯಾಗಿದೆ. ಈ ವರ್ಷ 3,200 ಎಕರೆ ಪ್ರದೇಶದಲ್ಲಿ ಟೆಂಟ್ ವ್ಯವಸ್ಥೆ ಮಾಡಲಾಗಿತ್ತು.  ಉತ್ತರ ಪ್ರದೇಶ ಸರಕಾರಕ್ಕೆ ಇದರಿಂದ 1 ಲಕ್ಷ 20 ಸಾವಿರ ಕೋಟಿ ರೂಪಾಯಿ ಆದಾಯ ಬಂದಿದೆ. ಈ ಸಂಖ್ಯೆಗಳನ್ನು ಒಂದಷ್ಟು ಗಮನಿಸಿ ನೋಡಿ, ಭಾರತದ ಜನಸಂಖ್ಯೆಯ ಅಗಾಧ ಶಕ್ತಿಯ ಅರಿವಾಗುತ್ತದೆ.  ಜೊತೆಗೆ ವ್ಯವಸ್ಥೆ ಸರಿಯಾಗಿದ್ದರೆ ಹೆಚ್ಚೆಚ್ಚು ಜನ ಇದರಲ್ಲಿ ಭಾಗವಹಿಸಲು ಇಚ್ಛಿಸುತ್ತಾರೆ ಎನ್ನುವುದು ಕೂಡ ಸಾಬೀತು ಮಾಡಿದೆ. 
2013 ರ ಕುಂಭಮೇಳಕ್ಕೆ ಹೋಲಿಸಿದರೆ 2019 ರ ಕುಂಭಮೇಳ ಎಲ್ಲಾ ರೀತಿಯಲ್ಲೂ ದಾಖಲೆ ಬರೆದಿದೆ. ಕಾಲ್ತುಳಿತ ಅಥವಾ ಇನ್ನಿತರ ಅಹಿತಕರ ಘಟನೆ ನೆಡೆದ ಸುದ್ದಿ ಬರಲಿಲ್ಲ. ಸರಕಾರ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹದು ಎನ್ನುವುದಕ್ಕೆ ಸ್ವಚ್ಛ ರಸ್ತೆಗಳು, ಉತ್ತಮ ಸೆಕ್ಯುರಿಟಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆಗಳು ಉದಾಹರಣೆಯಂತಿದ್ದವು. ಹೆಚ್ಚಿನ ಹಣ ಕೊಡುತ್ತೇವೆ ಎಂದವರಿಗೆ ಐಷರಾಮಿ ಅಥವಾ ಹೆಚ್ಚಿನ ಸವಲತ್ತಿರುವ ಟೆಂಟ್ಗಳು ಕೂಡ ಲಭ್ಯವಿದ್ದದ್ದು ಈ ಬಾರಿಯ ವಿಶೇಷ. ಟೆಂಟ್ಗಳಲ್ಲಿ ರಾತ್ರಿ ಕಳೆಯಲು 650 ರೂಪಾಯಿಯಿಂದ 32 ಸಾವಿರ ರೂಪಾಯಿವರೆಗೂ ಹಣವನ್ನ ನಿಗದಿಪಡಿಸಲಾಗಿತ್ತು. ಅವರವರ ಜೇಬಿನ ಶಕ್ತಿಗೆ ತಕ್ಕಂತೆ ಅನುಕೂಲವನ್ನ ಒದಗಿಸಲಾಗಿತ್ತು.  ಸಾಮಾನ್ಯ ಸಮಯದಲ್ಲಿ ದಿನಕ್ಕೆ  ಎರಡರಿಂದ ಮೂರು ಸಾವಿರ ರೂಪಾಯಿ ಇದ್ದ ಹೋಟೆಲ್ ದರ 6 ಸಾವಿರದಿಂದ 8 ಸಾವಿರಕ್ಕೆ ಜಿಗಿದಿತ್ತು. ಹಾಗೆಯೇ ಪ್ರಯಾಗರಾಜ್ ನ ಸಾಮಾನ್ಯ ಹೂವು ಮಾರುವ ವ್ಯಕ್ತಿ ದಿನಕ್ಕೆ 300-500 ದುಡಿಯುತ್ತಿದ್ದವನು ಈ 50 ದಿನದಲ್ಲಿ ಪ್ರತಿದಿನ 1,500ಕ್ಕಿಂತಲೂ ಹೆಚ್ಚು ಹಣವನ್ನ ಗಳಿಸಿದ್ದಾನೆ. ಅಂತೆಯೇ ನಾಯಿಂದ, ಬೋಟ್ ಹುಟ್ಟುಹಾಕುವರು, ಪೂಜಾ ಸಾಮಗ್ರಿ ಮಾರುವರು ಇತರೆ ಸಣ್ಣ ಪುಟ್ಟ ವ್ಯಾಪಾರಿಗಳ ಆದಾಯ ಮೂರುಪಟ್ಟು ಹೆಚ್ಚಳ ಕಂಡಿದೆ. ಪುರೋಹಿತರು ದಿನಕ್ಕೆ 8 ರಿಂದ 10 ಸಾವಿರ ರೂಪಾಯಿ ಗಳಿಸಿದ್ದಾರೆ. 
ಕುಂಭಮೇಳದಿಂದ ಉತ್ತರ ಪ್ರದೇಶ ಸರಕಾರಕ್ಕೆ ಅಷ್ಟೊಂದು ಹಣ ಬಂದದ್ದು ಮಾತ್ರ ಲೆಕ್ಕವಲ್ಲ ಅದರ ಜೊತೆಗೆ ಹೋಟೆಲ್ ಇಂಡಸ್ಟ್ರಿ, ಟ್ರಾವೆಲ್ ಇಂಡಸ್ಟ್ರಿ ಕೂಡ ಸಾಕಷ್ಟು ಆದಾಯವನ್ನ ಕಂಡಿವೆ. ಜೋತೆಗೆ ಕುಂಭಮೇಳದಲ್ಲಿ ಗೈಡ್ ಆಗಿ ದುಡಿದವರ ಸಂಖ್ಯೆಯೂ ಬಹಳಷ್ಟಿದೆ. ಸ್ಥಳೀಯ ವ್ಯಾಪಾರಿಗಳಿಗಂತೂ ಹಬ್ಬ! ವರ್ಷದ ಆದಾಯವನ್ನ ಕೇವಲ ಐವತ್ತು ದಿನದಲ್ಲಿ ಗಳಿಸಿರುವ ಅವರ ಮುಖದಲ್ಲಿ ನಗುವಿದೆ. ಐವತ್ತು ದಿನದ ಈ ಕಾರ್ಯಕ್ರಮಕ್ಕೆ ತಿಂಗಳುಗಳ ಮುಂಚೆಯೇ ಸಿದ್ಧತೆ ಶುರು ಮಾಡಲೇಬೇಕು. ಉತ್ತರಪ್ರದೇಶ ಸರಕಾರ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಲು ಬಹಳಷ್ಟು ಸಮಯ ಮತ್ತು ಹಣವನ್ನ ವ್ಯಯಿಸಿದೆ. ಇದರಿಂದ ಲಕ್ಷಾಂತರ ಕೆಲಸ ಕೂಡ ಸೃಷ್ಟಿಯಾಗಿದೆ. ಸೇವೆಗಳನ್ನ ಒದಗಿಸುವ ವಲಯದಲ್ಲೆ ಎರಡೂವರೆ ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ ಎನ್ನುತ್ತದೆ ಅಂಕಿಅಂಶ. 
ಕುಂಭ ಮೇಳ ಕೇವಲ ಭಾರತದ ಮೇಳವಾಗಿ ಉಳಿದಿಲ್ಲ. ಇದಕ್ಕೆ ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಸಿಂಗಪೂರ್, ಮಲೇಶಿಯಾ, ನ್ಯೂಜಿಲ್ಯಾಂಡ್, ಮಾರಿಷಸ್, ಶ್ರೀಲಂಕಾ, ಸೌತ್ ಆಫ್ರಿಕಾ ಮತ್ತು ಜಿಂಬಾಬ್ವೆ ದೇಶಗಳಿಂದ ಕೂಡ ಜನ ಬರುತ್ತಾರೆ. ಹೀಗೆ 2013 ರಲ್ಲಿ ಬಂದ ವಿದೇಶಿಯರ ಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚು! 2019ರಲ್ಲಿ ಈ ಸಂಖ್ಯೆ 35ಪ್ರತಿಶತಕ್ಕೂ ಮೀರಿ  ಹೆಚ್ಚಾಗಿದೆ. ಕಾಂಬೋಡಿಯಾ, ಇಂಡೋನೇಶಿಯಾ, ಈಜಿಪ್ಟ್ ಮತ್ತು ಕೆನಡಾ ದೇಶ ಹೊಸದಾಗಿ ಬಾರಿಯ ಮೇಳಕ್ಕೆ ಸೇರ್ಪಡೆಯಾಗಿವೆ. 
ಇಂತಹ ಕುಂಭಮೇಳಕ್ಕೆ 2000 ಸಾವಿರ ವರ್ಷದ ಇತಿಹಾಸವಿದೆ. ರಾಜ ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಿ ಯಾತ್ರಿಕ ಹೂನೆಸ್ ತ್ಸಂಗ್ ಮಹಾಕುಂಭ ಮೇಳವನ್ನ ಉಲ್ಲೇಖಿಸಿದ್ದಾನೆ. ಅಂದರೆ ಇದಕ್ಕೆ ಕನಿಷ್ಠ ಎರಡು ಸಾವಿರ ವರ್ಷಗಳ ಹಿಂದಿನ ಇತಿಹಾಸವಿದೆ. ಇದಕ್ಕೂ ಮುಂಚೆ ಅದೆಷ್ಟು ವರ್ಷಗಳಿಂದ ನೆಡೆದು ಬರುತ್ತಿದೆಯೂ ಅದರ ನಿಖರ ಲೆಕ್ಕವಿಲ್ಲ. 
ಭಾರತವೆಂದರೆ ಹೀಗೆ ನೋಡಿ ಯಾವುದೂ ನಿಖರ ಲೆಕ್ಕ ಸಿಕ್ಕುವುದಿಲ್ಲ. ಮೇಲೆ ಹೇಳಿರುವ ಎಲ್ಲಾ ಸಂಖ್ಯೆಗಳೂ ಅಷ್ಟೇ... ಅವೆಲ್ಲ ಅಂದಾಜಿನ ಲೆಕ್ಕಾಚಾರದಲ್ಲಿ ಕೊಟ್ಟಂತವು. ಅಂದ ಮಾತ್ರಕ್ಕೆ ಅವು ನಂಬಲರ್ಹವಲ್ಲ ಎಂದೇನಲ್ಲ ಅವು ನಿಖರವಲ್ಲ ಅಷ್ಟೇ. 
ಕೊನೆ ಮಾತು: ಗಮನಿಸಿ ನೋಡಿ ಜಗತ್ತಿನ ಯಾವುದೇ ಭಾಗದಲ್ಲಿ ಆಗಲಿ 24 ಕೋಟಿಗೂ ಮೀರಿದ ಜನ ಸೇರುತ್ತಾರೆ ಮತ್ತು ಆ ಕಾರ್ಯಕ್ರಮ ಶಾಂತಿಯಿಂದ ಮುಗಿಯುತ್ತದೆ ಎಂದರೆ ಆ ದೇಶ ಮತ್ತು ಅಲ್ಲಿನ ಜನ ಎಷ್ಟೊಂದು ಶಾಂತಿ ಪ್ರಿಯರಿರಬಹುದೆಂದು! 
ಕೆಲಸ ಮತ್ತು ಹವ್ಯಾಸದ ಸಲುವಾಗಿ ನಾನು ನೋಡಿದ ದೇಶಗಳ ಸಂಖ್ಯೆ ನಿಖರವಾಗಿ 59. ಬ್ರೆಜಿಲ್, ಮೆಕ್ಸಿಕೋ, ವೆನಿಜುಲಾ, ಗ್ವಾಟೆಮಾಲಾ ಮತ್ತು ಕೊಲಂಬಿಯಾ ದೇಶಗಳಲ್ಲಿ ಮತ್ತು ಇತರ ಮಧ್ಯ ಮತ್ತು ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಮಾನವೀಯತೆ ಸತ್ತು ಅದೆಷ್ಟು ವರ್ಷವಾಯಿತು ಎನ್ನುವುದನ್ನ ಲೆಕ್ಕ ಮಾಡಿ ಹೇಳಬೇಕಿದೆ.
ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕ್ರೈಂ ರೇಟ್ ಕಡಿಮೆ ಎಂದು ಹೆಚ್ಚಿನ ಅಧ್ಯಯನವಿಲ್ಲದೆ ಹೇಳಬಹದು. ಇಷ್ಟೊಂದು ಸಂಖ್ಯೆಯ ಜನ ಒಂದೇ ಸಾಮಾನ್ಯ ಕಾರಣಕ್ಕೆ ಸೇರುವುದು ವಿಶ್ವದ ಇನ್ನ್ಯಾವ ಭಾಗದಲ್ಲೂ ಆಗುತ್ತಿಲ್ಲ. ಆ ಮಟ್ಟಿಗೆ ಕುಂಭ ಮೇಳ ಜಗತ್ತಿನ ಗಮನ ಸೆಳೆಯುವ ಕಾರ್ಯಕ್ರಮ. ಇಲ್ಲಿ ಕೇವಲ ಹಣದ ಲೆಕ್ಕಾಚಾರ ಬಿಟ್ಟು ನೋಡಿದರೂ ಇದು ಲಾಭದಾಯಕ. ನೂರಾರು ಜನ ಸಂಶೋಧಕರು, ಮನಃಶಾಸ್ತ್ರಜ್ಞರು, ಇತಿಹಾಸ ತಜ್ಞರು ಹೀಗೆ ಸಾವಿರಾರು ಸಂಖ್ಯೆಯಲ್ಲಿ ಜನ ಇದನ್ನ ಅಧ್ಯಯನ ಮಾಡಲು ಬರುತ್ತಾರೆ. 
ಲಕ್ಷಾಂತರ ಸಂಖ್ಯೆಯಲ್ಲಿ ಬರುವ ವಿದೇಶಿಯರು ಮತ್ತೊಮ್ಮೆ ತಮ್ಮವರನ್ನು ತಪ್ಪದೆ ಭಾರತಕ್ಕೆ ಕರೆತರುತ್ತಾರೆ. ಯಾವ ಕೋನದಿಂದ ನೋಡಿದರೂ ಕುಂಭಮೇಳ ಲಾಭದಾಯಕ. ನಾವು ನಮ್ಮದು ಎನ್ನುವ ಕಿಚ್ಚನ್ನ ಇದು ಯುವ ಜನರಲ್ಲಿ ಹೆಚ್ಚಿಸಿದರೆ ಆಗ ಇದರ ಲಾಭ ಅಗಣಿತ. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com