ಪಾಕಿಸ್ತಾನದ ಮೇಲೆ ಸೈನಿಕರ ಸಹಾಯವಿಲ್ಲದೆ ಭಾರತ ಸಾರಿದೆ ಯುದ್ಧ!

ಹಣವಿದ್ದರೆ ಬದುಕು ಇಲ್ಲದಿದ್ದರೆ ಏನಿಲ್ಲ ಎನ್ನುವ ಮಟ್ಟಕ್ಕೆ ಜಗತ್ತಿನ ಎಲ್ಲಾ ಜನರ ಜೀವನ ಬದಲಾಗಿ ಹೋಗಿದೆ.
ಪಾಕಿಸ್ತಾನದ ಮೇಲೆ ಸೈನಿಕರ ಸಹಾಯವಿಲ್ಲದೆ ಭಾರತ ಸಾರಿದೆ ಯುದ್ಧ!
ಪಾಕಿಸ್ತಾನದ ಮೇಲೆ ಸೈನಿಕರ ಸಹಾಯವಿಲ್ಲದೆ ಭಾರತ ಸಾರಿದೆ ಯುದ್ಧ!
ಹಣವಿದ್ದರೆ ಬದುಕು ಇಲ್ಲದಿದ್ದರೆ ಏನಿಲ್ಲ ಎನ್ನುವ ಮಟ್ಟಕ್ಕೆ ಜಗತ್ತಿನ ಎಲ್ಲಾ ಜನರ ಜೀವನ ಬದಲಾಗಿ ಹೋಗಿದೆ. ಹಣದ ಹರಿವಿದ್ದರೆ ಮಾತ್ರ ಕೆಲಸ ಕಾರ್ಯಗಳು , ಸಂಸ್ಥೆಗಳು ನೆಡೆಯಲು ಸಾಧ್ಯ. ಹಣವಿಲ್ಲದಿದ್ದರೆ ಮರುದಿನ ಇವೆಲ್ಲವೂ ಸ್ಥಬ್ದ ಎನ್ನುವ ಮಟ್ಟಕ್ಕೆ ಎಲ್ಲವೂ ನೇರವಾಗಿ ಹಣವನ್ನ ಅವಲಂಬಿಸಿದೆ. ಒಂದು ದೇಶದ ಆರ್ಥಿಕತೆ ಕೂಡ ಹಣದ ಹರಿವಿನ ಮೇಲೆ ಅವಲಂಬಿತ. ಒಂದು ದೇಶ ಎಷ್ಟೇ ಸ್ಥಿತಿವಂತ ದೇಶವಾಗಿರಲಿ ಹಣದ ಹರಿವಿನಲ್ಲಿ ಕಡಿತವಾದರೆ ಅದರ ಕುಸಿತ ತಡೆಯಲು ಸಾಧ್ಯವಿಲ್ಲ. ಅಂದರೆ ಅರ್ಥ ಬಹಳ ಸರಳ. ಹಣ ಸದಾ ಚಲನೆಯಲ್ಲಿರಬೇಕು. ಹಣದ ಓಡಾಟ ಕಡಿಮೆಯಾದರೆ ಮಿಕ್ಕೆಲ್ಲವೂ ತಾನಾಗೇ ನಿಧಾನವಾಗುತ್ತದೆ. ಗಮನಿಸಿ ನೋಡಿ ಒಂದು ದೇಶ ವಿರೋಧಿ ಸಂಸ್ಥೆ ಇರಬಹದು, ನಕ್ಸಲ್ ಇರಬಹದು ಅಥವಾ ಭಯೋತ್ಪಾದಕ ಸಂಘಟನೆಗಳಿರಬಹದು ಇವನ್ನ ಪ್ರತಿ ಬಾರಿ ಹುಡುಕಿ ಕೊಂಡು ಹೋಗಿ ಹೊಡೆಯುವುದು ಸುಲಭದ ಮಾತಲ್ಲ. ಅಲ್ಲದೆ ಯಾವಾಗಲು ದೈಹಿಕ ಹಿಂಸೆ ಎಲ್ಲದಕ್ಕೂ ಉತ್ತರವೂ ಅಲ್ಲ. ಇಂತಹ ಸಂಸ್ಥೆಗಳಿಗೆ ಸರಬರಾಜು ಆಗುವ ಹಣದ ಮೂಲವನ್ನ ಮುಚ್ಚಿ ಬಿಟ್ಟರೆ?? ಕೆಲವೇ ತಿಂಗಳಲ್ಲಿ ಆ ಸಂಸ್ಥೆಗಳು ಸೊರಗಿ ಹೋಗುತ್ತವೆ. ಇಂತಹ ವ್ಯಕ್ತಿ ಅಥವಾ ಸಂಘಟನೆಗಳ ಹಣಕಾಸು ವ್ಯವಹಾರದ ಮೇಲೆ ಹಿಡಿತ ಸಾಧಿಸಿ ಬಿಟ್ಟರೆ ಮುಗಿಯಿತು ಅವುಗಳ ಅವನತಿ ಶತಸಿದ್ಧ. 
ಪುಲ್ವಾಮಾ ಮೇಲೆ ಪಾಕಿಸ್ತಾನಿಯರು ದಾಳಿ ಮಾಡಿದ್ದು ತಿಳಿದ ವಿಷಯ ಅದಕ್ಕೆ ಉತ್ತರವಾಗಿ ಭಾರತೀಯ ವಾಯುಪಡೆ ಬಾಲಕೋಟ್ ಮೇಲೆ ದಾಳಿ ಮಾಡಿ ಉಗ್ರರ ನೆಲೆಯನ್ನ ಧ್ವಂಸ ಮಾಡಿದ್ದು ಕೂಡ ಇಂದು ಪ್ರತಿಯೊಬ್ಬ ಭಾರತೀಯನಿಗೆ ತಿಳಿದ ವಿಷಯ. ಭಾರತ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಮೇಲೆ ನಿರ್ಬಂಧ ಹೇರಿದೆ ಎನ್ನುವುದು ಕೂಡ ಒಂದಷ್ಟು ಜನರಿಗೆ ತಿಳಿದಿರುತ್ತದೆ. ಭಾರತ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದ ಯಾವೇಲ್ಲ ವಸ್ತುಗಳ ಮೇಲೆ ನಿರ್ಬಂಧ ಹೇರಿದೆ? ಇದರಿಂದ ಪಾಕಿಸ್ತಾನಕ್ಕೆ ಆಗುವ ನಷ್ಟವೇನು? ಎನ್ನುವುದರ ಬಗ್ಗೆ ಒಂದಷ್ಟು ತಿಳಿದುಕೊಳ್ಳಣ. ಹಾಗೆಯೇ ಅಮೆರಿಕಾ ಮತ್ತು ಭಾರತದ ನಡುವೆ ಕೂಡ ವಸ್ತುಗಳ ಮೇಲಿನ ಬೆಲೆಯನ್ನ ಕುರಿತು ಮತ್ತು ಅವುಗಳ ಮೇಲೆ ವಿಧಿಸುವ ತೆರಿಗೆಯ ಕುರಿತು ಒಂದಷ್ಟು ಹಣಾಹಣಿ ಶುರುವಾಗಿದೆ ಅದೇನು? ಎನ್ನುವುದನ್ನ ಕೂಡ ಅವಲೋಕಿಸೋಣ. 
ಜರ್ಜರಿತ ಪಾಕಿಸ್ತಾನದ ಆರ್ಥಿಕತೆಗೆ ಬೇಕಿದೆ ಕಾಯಕಲ್ಪ : 
ಗಮನಿಸಿ ಪುಲ್ವಾಮಾ ದಾಳಿಗೆ ಮುಂಚೆ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿತ್ತು. ಅದರ ಬಳಿಯಿರುವ ವಿದೇಶಿ ವಿನಿಮಯದ ಮೌಲ್ಯ ಆ ದೇಶವನ್ನ ನಾಲ್ಕೈದು ದಿನ ನೆಡೆಸಲು ಕೂಡ ಸಾಧ್ಯವಾಗದಷ್ಟು ಕಡಿಮೆ. ಹಣದುಬ್ಬರ ಹಾಳೆಯ ಮೇಲೆ ಐದೂವರೆ ಅಥವಾ ಆರು ಎಂದರೂ ರಸ್ತೆಯಲ್ಲಿ ಅದರ ಬಿಸಿ ಎಂಟು ಅಥವಾ ಒಂಭತ್ತರಷ್ಟು. ಜನ ಸಾಮಾನ್ಯನಿಗೆ ದಿನ ನಿತ್ಯ ಬೇಕಾಗುವ ಆಲೂಗೆಡ್ಡೆ, ಈರುಳ್ಳಿ, ಟೊಮೊಟೊ ಅಂತಹ ವಸ್ತುಗಳ ಬೆಲೆ ಗಗನ ಮುಟ್ಟಿವೆ. ಕೆಲವೊಂದು ಪ್ರದೇಶದಲ್ಲಿ ಹಣ ಕೊಟ್ಟರೂ ವಸ್ತು ಸಿಗದ ಹೀನಾಯ ಸ್ಥಿತಿ ಅಲ್ಲಿದೆ. ಜನ ಸಾಮಾನ್ಯರ ಬ್ಯಾಂಕ್ ಖಾತೆಯನ್ನ ವಿದೇಶಗಳಿಗೆ ಹಣ ಕಳಿಸಲು ಬಳಸಿಕೊಳ್ಳಲಾಗಿದೆ. ಪಾಕಿಸ್ತಾನ ದಿವಾಳಿ ಅಂಚಿಗೆ ಬಂದು ನಿಲ್ಲಲು ಕಾರಣ ಅಲ್ಲಿನ ಅಧಿಕಾರಿ ವರ್ಗ ಮತ್ತು ರಾಜಕೀಯ ವ್ಯಕ್ತಿಗಳ ಲೋಭ. ಜನ ಸಾಮಾನ್ಯನಿಗೆ ತನ್ನದೊಂದು ಬ್ಯಾಂಕ್ ಖಾತೆಯಿದೆ ಎನ್ನುವುದು ಕೂಡ ತಿಳಿದಿರುವುದಿಲ್ಲ. ಆದರೆ ಆತನ ಹೆಸರಲ್ಲಿ ಖಾತೆ ತೆಗೆದು ಆ ಖಾತೆಯ ಮೂಲಕ ವಿದೇಶದಲ್ಲಿರುವ ತಮ್ಮ ಖಾತೆಗಳಿಗೆ ಹಣವನ್ನ ವರ್ಗಾವಣೆ ಮಾಡಿಕೊಂಡಿದ್ದಾರೆ. ಹೀಗೆ ಸಾವಿರಾರು ಖಾತೆಗಳನ್ನ ತಮ್ಮ ಅನುಕೊಲಕ್ಕೆ ಉಪಯೋಗಿಸಿಕೊಂಡಿದ್ದಾರೆ. ಬದಲಿಸಲು ಸಾಧ್ಯವಿಲ್ಲ ಎನ್ನುವಷ್ಟು ಹದೆಗೆಟ್ಟಿರುವ ಅಲ್ಲಿನ ವ್ಯವಸ್ಥೆಗೆ ಬೇಕಿದೆ ಕಾಯಕಲ್ಪ. ಆದರೆ ಅದನ್ನ ಮಾಡುವರಾರು? 
ಪಾಕಿಸ್ತಾನಕ್ಕೆ ಮೋದಿ ಸರಕಾರ ನೀಡಿದೆ ಮರ್ಮಾಘಾತ: 
ಬಾಲಕೋಟ್ ಮೇಲೆ ನಮ್ಮ ವಾಯುಪಡೆ ದಾಳಿ ನೆಡೆಸಿ ಅಲ್ಲಿನ ಉಗ್ರರ ನೆಲೆಯನ್ನ ನಾಶ ಪಡಿಸಿದ್ದು ಭಾರತೀಯ ನಾಗರಿಕರಿಗೆ ಸರಕಾರದ ಮೇಲೆ ಇನ್ನಿಲ್ಲದ ವಿಶ್ವಾಸ ನೀಡಿದೆ. ಆದರೆ ಮೋದಿ ಸರಕಾರಕ್ಕೆ ಗೊತ್ತು ಇಂತಹ ದಾಳಿಗಳ ಫಲಿತಾಂಶ ಹೆಚ್ಚು ಹೊತ್ತು ನಮಗೆ ಖುಷಿ ನೀಡುವುದಿಲ್ಲವೆಂದು ಹಾಗಾಗಿ ಪಾಕಿಸ್ತಾನದ ಜೊತೆಗಿನ ವ್ಯಾಪಾರ ವಹಿವಾಟಿಗೆ ಕಡಿವಾಣ ಹಾಕಿದರೆ ಸಾಕು ಮೊದಲೇ ಆರ್ಥಿಕವಾಗಿ ಜರ್ಜರಿತವಾಗಿರುವ ಪಾಕಿಸ್ತಾನ ಮತ್ತಷ್ಟು ಕುಸಿಯುತ್ತದೆ. ಈ ನಿಟ್ಟಿನಲ್ಲಿ 1996 ರಲ್ಲಿ ಮೋಸ್ಟ ಫೆವರ್ಡ್ ನೇಶನ್ ಎನ್ನುವ ಪಟ್ಟವನ್ನ ಭಾರತ ಪಾಕಿಸ್ತಾನಕ್ಕೆ ನೀಡಿತ್ತು ಅದನ್ನ ಪುಲ್ವಾಮಾ ಘಟನೆ ನಂತರ ವಾಪಸ್ಸು ಪಡೆಯಲಾಗಿದೆ. ಪಾಕಿಸ್ತಾನದಿಂದ ಭಾರತಕ್ಕೆ ಆಮದಾಗುವ ಹಣ್ಣು, ಸಿಮೆಂಟ್, ಪೆಟ್ರೋಲಿಯಂ ಪದಾರ್ಥಗಳು, ಮಿನರಲ್ಸ್, ಲೆದರ್, ಹತ್ತಿ, ಮಸಾಲಾ ಪದಾರ್ಥಗಳು, ರಬ್ಬರ್ ಪದಾರ್ಥಗಳು ಹೀಗೆ ಹಲವಾರು ಉತ್ಪನ್ನಗಳ ಮೇಲೆ ಸುಂಕವನ್ನ 200 ಪ್ರತಿಶತ ಹೆಚ್ಚಿಸಲಾಗಿದೆ. ಅಂದರೆ ಗಮನಿಸಿ ನೋಡಿ ಈ ಪದಾರ್ಥಗಳನ್ನ ನಾವು ನಿಮ್ಮಿಂದ ಕೊಳ್ಳುವುದಿಲ್ಲ ಎನ್ನಲಿಲ್ಲ ಆದರೆ ಆ ಪದಾರ್ಥಗಳ ಮೇಲೆ ಹಾಕುತ್ತಿದ್ದ ಸುಂಕವನ್ನ 2೦೦ ಪ್ರತಿಶತ ಹೆಚ್ಚಿಸಿದರೆ ಅದರರ್ಥ ಪಾಕಿಸ್ತಾನದ ರಫ್ತು ನಿಂತ ಹಾಗೆಯೇ! ಉದಾಹರಣೆ ನೋಡೋಣ. ಹತ್ತಿಯ ಬೆಲೆ ಕೇಜಿಗೆ 10 ರೂಪಾಯಿ ಇತ್ತು ಎಂದುಕೊಳ್ಳಿ ಪುಲ್ವಾಮಗೆ ಮುಂಚೆ ಇದನ್ನ ಭಾರತಕ್ಕೆ ರಫ್ತು ಮಾಡಲು ಪಾಕಿಸ್ತಾನ 3.5 ರೂಪಾಯಿ ಸುಂಕ ನೀಡಬೇಕಿತ್ತು ಅಂದರೆ 35 ಪ್ರತಿಶತ ಸುಂಕವಿತ್ತು. ಹೀಗೆ ಸುಂಕದ ಮೊತ್ತ 7.5 ಇಂದ 50 ಪ್ರತಿಶತದವರೆಗೆ ವಸ್ತುವಿನ ಮೇಲೆ ಬದಲಾಗುತ್ತಿತ್ತು. ಇದೀಗ ಇದು 2೦೦ ಪ್ರತಿಶತವಾಗಿದೆ. ಅಂದರೆ 10 ರೂಪಾಯಿ ಹತ್ತಿಯ ಮೇಲಿನ ಸುಂಕ 20 ರೂಪಾಯಿ!! ಇದರಿಂದ ಪಾಕಿಸ್ತಾನಕ್ಕೆ ಆಗಬಹದುದಾದ ಅಂದಾಜು ನಷ್ಟ 3480 ಕೋಟಿ ರೂಪಾಯಿ. ಪುಲ್ವಾಮಾ ದಾಳಿಯ ನಂತರ ಸರಹದ್ದಿನಲ್ಲಿ ಹಣ್ಣು ಹೊತ್ತು ಬಂದಿದ್ದ ಸಾವಿರಾರು ಲಾರಿಗಳನ್ನ ವಾಪಸ್ಸು ಕಳಿಸಲಾಗಿದೆ. ಪಾಕಿಸ್ತಾನಕ್ಕೆ ಪರೋಕ್ಷವಾಗಿ ಭಾರಿ ಹೊಡೆತವನ್ನ ನೀಡಲಾಗಿದೆ. ಬಾಲಕೋಟ್ ನಲ್ಲಿ ನೀಡಿದ ಹೊಡೆತವನ್ನ ಪಾಕಿಸ್ತಾನ ಬಹುಬೇಗ ಮರೆಯುತ್ತದೆ. ಆರ್ಥಿಕವಾಗಿ ನೀಡಿರುವ ಹೊಡೆತ ಸಾಮಾನ್ಯ ಭಾರತೀಯ ಪ್ರಜೆಯ ಕಣ್ಣಿಗೆ ಕಾಣದೆ ಹೋಗಬಹದು ಆದರೆ ಅದರ ಪರಿಣಾಮ ಮಾತ್ರ ಬಹು ದೊಡ್ಡದು. ಪಾಕಿಸ್ತಾನಕ್ಕೆ ಚನ್ನಾಗಿ ಗೊತ್ತಿದೆ ಅದು ಯುದ್ಧ ಮಾಡುವ ಸ್ಥಿತಿಯಿರಲಿ ಸುಮ್ಮನಿದ್ದರೂ ಕೂಡ ತಿಂಗಳೊಪ್ಪತ್ತಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಹಾಯ ಸಿಗದೇ ಹೋದರೆ ಬಿಕಾರಿ ದೇಶವಾಗಿ ಹೋಗಲಿದ್ದೇನೆ ಎನ್ನವುದು ಅಂದ ಮೇಲೆ ಯುದ್ಧದ ಮಾತೆಲ್ಲಿ? ಅಮನ್.. ಅಮನ್ ಅಥವಾ ಶಾಂತಿ ಶಾಂತಿ ಎನ್ನವುದರ ನಿಜವಾದ ಕಾರಣ 'ಹಣ'. 
ಪಾಕಿಸ್ತಾನ ಮರಳಿ ಅಭಿವೃದ್ಧಿಯ ಪಥಕ್ಕೆ ಬರಲು ಬಹಳಷ್ಟು ಸಮಯ ಹಿಡಿಯುತ್ತದೆ. 
ಚೀನಾದ ಜೊತೆಯ ಟ್ರೇಡ್ ವಾರ್ ನಿಂದ ಭಾರತದತ್ತ ಮುಖ ಮಾಡಿದ ಅಮೆರಿಕಾ: 
ಅಮೆರಿಕಾ ದೇಶದಿಂದ ಭಾರತಕ್ಕೆ ಆಮದಾಗುತ್ತಿದ್ದ ಬಹಳಷ್ಟು ಸರಕುಗಳ ಮೇಲೆ ಭಾರತ ವಿಧಿಸುತ್ತಿರುವ ಸುಂಕ ಬಹಳ ಹೆಚ್ಚು ಹಾಗೆಯೇ ಭಾರತ ಅಮೇರಿಕಾ ದೇಶಕ್ಕೆ ಕಳಿಸುವ ವಸ್ತುಗಳ ಬೆಲೆ ಕೂಡ ಹೆಚ್ಚು ಎಂದು ಟ್ರಂಪ್ ಶ್ವೇತಭವನದಲ್ಲಿ ಹೇಳಿಕೆಯನ್ನ ನೀಡಿದ್ದಾರೆ. ಭಾರತದ ಸರಕುಗಳ ಮೇಲೆ ಸುಂಕವನ್ನ ಹೆಚ್ಚಿಸಿದ್ದಾರೆ. ಮುಲಾಜಿಲ್ಲದೆ ಭಾರತ ಕೂಡ ಹಲವಾರು ಉತ್ಪನ್ನಗಳ ಮೇಲೆ ಮತ್ತಷ್ಟು ಸುಂಕವನ್ನ ಹೆಚ್ಚಿಸಿದೆ. ಭಾರತ ಹಿಂದಿನಂತಿಲ್ಲ! ಪ್ರತ್ಯುತ್ತರ ನೀಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿಲ್ಲ. ಎಲ್ಲವೂ ವೇಗದಲ್ಲಿ ಆಗಿ ಹೋಗುತ್ತಿದೆ. ಇದು ಅಮೆರಿಕಾಗೆ ಅರಗಿಸಿಕೊಳ್ಳಲು ಆಗದ ವಿಷಯ. ಇನ್ನೊಂದು ಅಮೆರಿಕಾ ಅರಗಿಸಿಕೊಳ್ಳಲಾಗದ ವಿಷಯವೆಂದರೆ ಅವರಿಂದ ನಾವು ಕೊಳ್ಳುವುದು 30 ರೂಪಾಯಿ ಮೌಲ್ಯದ ವಸ್ತುವನ್ನ ಆದರೆ ನಾವು ಅವರಿಗೆ ಮಾರುವುದು 50 ರೂಪಾಯಿ ಮೌಲ್ಯದ ವಸ್ತುವನ್ನ. ಅಂದರೆ ನಮ್ಮ ನಡುವೆ ಇರುವ 2೦ ರೂಪಾಯಿ ಅಂತರವಿದೆ. ಈ 2೦ ರೂಪಾಯಿ ಅಮೆರಿಕಾ ಪಾಲಿಗೆ ಟ್ರೇಡ್ ಡೆಫಿಸಿಟ್ ಎಂದಾಗುತ್ತದೆ. ಭಾರತದ ಪಾಲಿಗೆ 2೦ ರೂಪಾಯಿ ಟ್ರೇಡ್ ಸರ್ಪ್ಲಸ್ ಎಂದಾಗುತ್ತದೆ. ಅಮೆರಿಕಾ ಪಾಲಿಗೆ ಇದನ್ನ ಸರಿದೂಗಿಸಿಕೊಳ್ಳುವ ಅವಶ್ಯಕತೆಯಿದೆ. ಅಂದರೆ ಅದು ಕೂಡ ನಮಗೆ 5೦ ರೂಪಾಯಿ ಮೌಲ್ಯದ ವಸ್ತುವನ್ನ ಮಾರಬೇಕಿದೆ. ಇಂತಹ ಸನ್ನಿವೇಶವನ್ನ ಬ್ಯಾಲೆನ್ಸ್ ಆಫ್ ಟ್ರೇಡ್ ಎನ್ನುತ್ತಾರೆ. ಹಾಗಾಗಿ ಇಲ್ಲಿಯೂ ಸದ್ಯದ ಸಂಧರ್ಭದಲ್ಲಿ ಭಾರತದ್ದೇ ಮೇಲುಗೈ. ಭಾರತಕ್ಕೆ ಮತ್ತೆ ಸುಭದ್ರ ಮತ್ತು ಅಂಜದ ಸರಕಾರ ಸಿಕ್ಕರೆ ಅಮೆರಿಕಾ ನಮ್ಮೊಂದಿಗೆ ಟ್ರೇಡ್ ವಾರ್ ಮಾಡುವ ಬದಲು ಪಾಕಿಸ್ತಾನದಂತೆ ಶಾಂತಿ ಮಂತ್ರ ಜಪಿಸುತ್ತದೆ ಇದರಲ್ಲಿ ಸಂಶಯವಿಲ್ಲ. ಅಮೇರಿಕಾ ಫಸ್ಟ್ ಎನ್ನುವ ಟ್ರಂಪ್ ಮೇಕ್ ಇನ್ ಇಂಡಿಯಾ ಎನ್ನುವ ಮೋದಿಯ ಮುಂದೆ ಸಂಧಿಗೆ ಬರದೇ ಬೇರೆ ದಾರಿ ಇರುವುದಿಲ್ಲ. 
ಇದರಲ್ಲಿ ಜನ ಸಾಮಾನ್ಯರಾದ ನಮ್ಮ ಪಾಲೇನು ? 
ಒಬ್ಬ ನಾಯಕನಿಗೆ ಅಂತಹ ಶಕ್ತಿ ನೀಡುವುದು ಜನ ಸಾಮಾನ್ಯ. ಹಿಂದಿಗಿಂತಲೂ ಇಂದು ಹೆಚ್ಚಾಗಿ ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಹೆಚ್ಚಾಗಿದೆ. ದೇಶ ಮೊದಲು ಎನ್ನುವ ವ್ಯಕ್ತಿಯ ಮರು ಆಯ್ಕೆ ಮಾಡಿದರೆ ಅಲ್ಲಿಗೆ ಪ್ರಥಮ ಕೆಲಸ ಮುಗಿದಂತೆ. ವಿದೇಶಿ ವಸ್ತುಗಳನ್ನ ಆದಷ್ಟೂ ಕಡಿಮೆ ಬಳಸುವುದು, ಪೆಟ್ರೋಲಿಯಂ ಪದಾರ್ಥಗಳ ಹಿತಮಿತ ಬಳಕೆ, ಕಡಿಮೆ ಚಿನ್ನದ ಖರೀದಿ ಇವೆಲ್ಲಾ ಅಪೊರೋಕ್ಷವಾಗಿ ನಾವು ಕುಳಿತಲ್ಲಿಂದ ದೇಶಕ್ಕೆ ಸಲ್ಲಿಸಬಹುದಾದ ಸೇವೆ. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com