ಹವಾಲ=ಪರ್ಯಾಯ ಹಣ ವರ್ಗಾವಣೆ? ದೇಶಕ್ಕೆ ಬವಣೆ...!
ಹವಾಲ=ಪರ್ಯಾಯ ಹಣ ವರ್ಗಾವಣೆ? ದೇಶಕ್ಕೆ ಬವಣೆ...!

ಹವಾಲ=ಪರ್ಯಾಯ ಹಣ ವರ್ಗಾವಣೆ? ದೇಶಕ್ಕೆ ಬವಣೆ...!

ಹವಾಲ ಎನ್ನುವ ಪದ ಕೆಲಸ ಅರಸಿ ದೇಶ ಬಿಟ್ಟು ಹೋದ ಎಲ್ಲರೂ ಕೇಳಿಯೇ ಇರುತ್ತಾರೆ. ಹಾಗೆಯೇ ಅವರು ಕಳಿಸುವ ಹಣವನ್ನ ನಂಬಿ ಬದುಕುವ ಎಲ್ಲಾ ಕುಟುಂಬಗಳು ಕೂಡ ಈ ಪದದೊಂದಿಗೆ ಪರಿಚಯ....
ಹವಾಲ ಎನ್ನುವ ಪದ ಕೆಲಸ ಅರಸಿ ದೇಶ ಬಿಟ್ಟು ಹೋದ ಎಲ್ಲರೂ ಕೇಳಿಯೇ ಇರುತ್ತಾರೆ. ಹಾಗೆಯೇ ಅವರು ಕಳಿಸುವ ಹಣವನ್ನ ನಂಬಿ ಬದುಕುವ ಎಲ್ಲಾ ಕುಟುಂಬಗಳು ಕೂಡ ಈ ಪದದೊಂದಿಗೆ ಪರಿಚಯ ಹೊಂದಿರುತ್ತಾರೆ. ಹುಟ್ಟಿದ ಊರಲ್ಲೇ ಕೆಲಸ ಬದುಕು ಕಂಡುಕೊಂಡ ಜನರಿಗೆ ಈ ಪದ ಹೊಸತು ಅನ್ನಿಸಬಹದು. ಉಳಿದಂತೆ ಸಮಾಜದಲ್ಲಿನ ಆಗು ಹೋಗುಗಳ ಮೇಲೆ ಒಂದಷ್ಟು ನಿಗಾ ಇಟ್ಟ ನಾಗರೀಕರಿಗೆ, ಅರ್ಥ ವ್ಯವಸ್ಥೆಯ ಬಗ್ಗೆ ಒಂದಷ್ಟು ವ್ಯಾಮೋಹವುಳ್ಳ ಜನರಿಗೆ ಕೂಡ ಈ ಪದ ಹೊಸತೇನಲ್ಲ. 
ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎನ್ನುವ ಒಂದು ಪ್ರಸಿದ್ಧ ಮಾತಿದೆ. ಆದರೆ ಬದುಕು ಆ ಅರ್ಥವನ್ನು ಮೀರಿ ಬೆಳೆದುಬಿಟ್ಟಿದೆ. ಹೊಟ್ಟೆ, ಬಟ್ಟೆ ಮೀರಿದ ಅಸೆ ಆಕಾಂಕ್ಷೆ ಇಂದು ಜನರನ್ನ ತಮ್ಮ ಹುಟ್ಟೂರು, ಹೆತ್ತವರು, ಬಂಧು ಮಿತ್ರರ ಬಿಟ್ಟು ಬೇರೆಲ್ಲೋ ಬದುಕು ಕಂಡುಕೊಳ್ಳುವ ಧಾವಂತಕ್ಕೆ ದೂಡಿದೆ. ಮೊದಮೊದಲು ಉತ್ತಮ ಮಟ್ಟದ ಬದುಕಿಗಾಗಿ ಶುರುವಾದದ್ದು ಇದೀಗ ಅನಿವಾರ್ಯವಾಗಿದೆ. ಬೇಕಿರಲಿ ಬೇಡವಿರಲಿ ಅದೇ ಬದುಕಾಗಿದೆ. ಭಾರತ ದೇಶದಲ್ಲಿ ಒಂದು ನಗರದಿಂದ ಇನ್ನೊಂದು ನಗರದಲ್ಲಿ ಬದುಕುವ ಜನರ ಬದುಕು ಒಂದು ರೀತಿಯದ್ದು, ಅಷ್ಟೇ ಹಣಕ್ಕೆ ಅಥವಾ ಅದಕ್ಕಿಂತ ಕಡಿಮೆ ಹಣಕ್ಕೆ ವಿದೇಶ ಸೇರುವ ಜನರ ಬಾಳು ಇನ್ನೂ ನಿಕೃಷ್ಟವಾಗಿ ಹೋಗಿದೆ. ಕೇರಳ ಮತ್ತು ಪಂಜಾಬ್ ರಾಜ್ಯಗಳಿಂದ ಹೆಚ್ಚಿನ ಜನ ಬದುಕು ಅರಸಿ ಹೊರ ದೇಶಕ್ಕೆ ಹೋಗುತ್ತಾರೆ. ಕೇರಳ ರಾಜ್ಯದ ಮುಕ್ಕಾಲು ಪಾಲು ಹೀಗೆ ಹೋದ ಜನ ಸೇರುವುದು ಗಲ್ಫ್ ದೇಶವನ್ನ. 
ಎರಡು ಮೂರು ದಶಕಗಳನ್ನ ತಮ್ಮವರ ಬಿಟ್ಟು ಬದುಕನ್ನ ಸವೆಸಿದ ಜನರನ್ನ ಕಂಡ ಅನುಭವ ನನ್ನದು. ಹೀಗೆ ಇಲ್ಲಿ ಕೆಲಸ ಮಾಡುವ ಜನರಲ್ಲಿ ಮುಕ್ಕಾಲು ಪಾಲು ಜನ ಕೂಲಿಗಳು. ಹೆಚ್ಚಿನ ವಿದ್ಯಾಭ್ಯಾಸ ಇಲ್ಲದವರು. ತಾವು ಕಷ್ಟಪಟ್ಟು ದುಡಿದ ಹಣದ ಮುಕ್ಕಾಲು ಪಾಲು ಭಾರತದಲ್ಲಿ ತಮ್ಮನ್ನ ನಂಬಿ ಬದುಕುವ ತಮ್ಮ ಕುಟುಂಬಕ್ಕೆ ಕಳಿಸುತ್ತಾರೆ. ಬ್ಯಾಂಕ್ಗಳು ಎಂದರೆ ಇವರಿಗೆ ಅಲರ್ಜಿ! ಇದಕ್ಕೆ ಮೂರು ಕಾರಣ ಒಂದು ಫಾರಂ ಭರ್ತಿ ಮಾಡಬೇಕಾದ ಕೆಲಸ, ಎರಡು ಬ್ಯಾಂಕ್ಗಳು ವಿಧಿಸುವ ಸೇವಾಶುಲ್ಕ ಮತ್ತು ಮೂರು ಅವು ಕೊಡುವ ವಿನಿಮಯ ದರ. ಹೀಗಾಗಿ ಬಾಯಿ ಮಾತಿನಲ್ಲಿ ಮುಗಿದು ಹೋಗುವ ಹವಾಲ ಅವರಿಗೆ ಅಚ್ಚುಮೆಚ್ಚು. 
ಏನಿದು ಹವಾಲ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? 
ಹವಾಲ ಎನ್ನುವುದು ಅತ್ಯಂತ ಪುರಾತನವಾದ ಹಣ ವರ್ಗಾವಣೆ ಮಾಡುವ ವ್ಯವಸ್ಥೆ. ಇದರಲ್ಲಿ ನಂಬಿಕೆಯೇ ಮುಖ್ಯ. ಇಲ್ಲಿನ ವ್ಯವಹಾರದ ಪ್ರಾರಂಭ ಮತ್ತು ಅಂತ್ಯ ಎರಡೂ ನಂಬಿಕೆಯ ಆಧಾರದ ಮೇಲೆ ನಡೆಯುತ್ತದೆ. 
ಸತೀಶ ಎನ್ನುವ ವ್ಯಕ್ತಿ ದುಬೈನಲ್ಲಿ ಕೆಲಸ ಮಾಡುತ್ತಿರುತ್ತಾನೆ ಎಂದುಕೊಳ್ಳಿ ಆತ ಕೇರಳದ ಮಲಪುರಂ ನಲ್ಲಿರುವ ತನ್ನ ತಾಯಿಗೆ ಹಣವನ್ನ ಕಳಿಸಬೇಕು. ಆಗ ಆತ... 
  1. ದುಬೈನಲ್ಲಿರುವ ಹವಾಲ ನಡೆಸುವ ವ್ಯಕ್ತಿಯನ್ನು ಭೇಟಿಮಾಡಿ ದುಬೈ ಹಣ ದಿರಾಮ್ ಅನ್ನು ನೀಡುತ್ತಾನೆ. 
  2. ಬ್ಯಾಂಕ್ನಲ್ಲಿ ಸಿಗುವ ವಿನಿಮಯ ದರಕ್ಕಿಂತ ಉತ್ತಮ ದರವನ್ನ ಹವಾಲ ವ್ಯಕ್ತಿ ನೀಡುತ್ತಾನೆ.  
  3. ಇಂತಿಷ್ಟೇ ಹಣವನ್ನ ಭಾರತದಲ್ಲಿರುವ ಮನೆಯ ಬಾಗಿಲಿಗೆ ತಲುಪಿಸುತ್ತೇವೆ ಎಂದು ಹೇಳುತ್ತಾರೆ. ಕೋಡ್ ವರ್ಡ್ ಅಥವಾ ನಿಖರ ಸಂಖ್ಯೆಯನ್ನ ಸತೀಶನಿಗೆ ನೀಡುತ್ತಾರೆ. 
  4. ಸತೀಶ ತನ್ನ ತಾಯಿಗೆ ಭಾರತದಲ್ಲಿರುವ ಹವಾಲ ವ್ಯಕ್ತಿಯ ಸಂಪರ್ಕಿಸಿ ಕೋಡ್ ವರ್ಡ್ ಅಥವಾ ಸಂಖ್ಯೆಯನ್ನ ಹೇಳಿದರೆ ಸಾಕು ಎನ್ನುತ್ತಾನೆ. ಹಲವು ಗಂಟೆಗಳಲ್ಲಿ ಹಣ ಸತೀಶನ ಮನೆಯನ್ನ ಸೇರಿರುತ್ತದೆ.  
ಗಮನಿಸಿ ಇದು ಬ್ಯಾಂಕ್ ಅಥವಾ ಇಂದು ಜಗತ್ತಿನಾದ್ಯಂತ ಹರಡಿಕೊಂಡಿರುವ ವೆಸ್ಟ್ರೇನ್ ಯೂನಿಯನ್ ಎನ್ನುವ ಸಂಸ್ಥೆ ಕೆಲಸ ನಿರ್ವಹಿಸಿದ ರೀತಿಯಲ್ಲೇ ಇದೆ. ಹವಾಲ ಮಾರ್ಗದಲ್ಲಿ ಹಣ ಮನೆಯ ಬಾಗಿಲಿಗೆ ತಲುಪುತ್ತದೆ. ವೆಸ್ಟ್ರೇನ್ ಯೂನಿಯನ್ ಬಾಗಿಲಿಗೆ ಗ್ರಾಹಕ ಹೋಗಬೇಕು. ಅಲ್ಲದೆ ವೆಸ್ಟ್ರೇನ್ ಯೂನಿಯನ್ ಅಥವಾ ಬ್ಯಾಂಕ್ಗಳು ಕಮಿಷನ್ ಎಂದು ಬಹಳಷ್ಟು ಹಣವನ್ನ ಸುಲಿಯುತ್ತವೆ. ಇಲ್ಲಿಯವರೆಗೆ ಎಲ್ಲವೂ ಚನ್ನಾಗಿದೆ. ತನ್ನವರ ಬಿಟ್ಟು ದೂರದೇಶಕ್ಕೆ ದುಡಿಯಲು ಹೋದ ವ್ಯಕ್ತಿಗೆ ಬ್ಯಾಂಕಿಗಿಂತ ಹತ್ತು ಅಥವಾ ಕೆಲವೊಮ್ಮೆ ಇಪ್ಪತ್ತು ಪ್ರತಿಶತ ಉಳಿತಾಯವಾದರೆ ಈ ವ್ಯವಸ್ಥೆಯನ್ನ ಏಕೆ ಬೇಡವೆಂದಾರು? ಇದರಿಂದಾಗಿಯೇ ಈ ವ್ಯವಸ್ಥೆಯನ್ನ ನಿರ್ಮೂಲನೆಗೊಳಿಸಲು ಸಾಧ್ಯವಾಗಿಲ್ಲ. 
ಹವಾಲ ಜನ ಸಾಮಾನ್ಯನಿಗೆ ಉಪಯೋಗಿಯಾಗಿದೆ ಹಾಗಿದ್ದ ಮೇಲೆ ಇದನ್ನ ಏಕೆ ಕಾನೂನು ವಿರೋಧಿ ಎನ್ನುತ್ತಾರೆ? 
ಹವಾಲ ಹಣ ವರ್ಗಾವಣೆ ವ್ಯವಸ್ಥೆಯಲ್ಲಿ ಹಣ ಮೂಲ ದೇಶದಿಂದ ಹೊರ ಹೋಗುವುದೇ ಇಲ್ಲ. ಮೇಲಿನ ಸಾಲುಗಳಲ್ಲಿ ಗ್ರಾಹಕನ ಪಾಯಿಂಟ್ ಆಫ್ ವ್ಯೂ ಇಂದ ಹೇಗೆ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ. ಈಗ ಇದು ಹವಾಲ ನೆಡೆಸುವರ ವತಿಯಿಂದ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನ ನೋಡೋಣ. 
ಗ್ರಾಹಕ ಇಂತಿಷ್ಟು ಹಣವನ್ನ ವರ್ಗಾವಣೆ ಮಾಡಬೇಕು ಎಂದ ತಕ್ಷಣ 
  1. ಭಾರತದಲ್ಲಿರುವ ತನ್ನ ಏಜೆಂಟ್ ಗೆ ಇಂತಿಷ್ಟು ಹಣವನ್ನ ಇಂತವರಿಗೆ ತಲುಪಿಸಿ ಎನ್ನುವ ಸಂದೇಶ ಹೋಗುತ್ತದೆ. 
  2. ಭಾರತದಲ್ಲಿರುವ ವ್ಯಕ್ತಿ ಹಣವನ್ನ ಗ್ರಾಹಕ ಹೇಳಿದ ವ್ಯಕ್ತಿಗೆ ಸಂದಾಯ ಮಾಡುತ್ತಾನೆ. 
ಗಮನಿಸಿ ನೋಡಿ ಇಲ್ಲಿ ದಿರಾಮ್ ದುಬೈ ಬಿಟ್ಟು ಹೊರಬರಲಿಲ್ಲ. ಹಣವನ್ನ ವರ್ಗಾಯಿಸಲು ಬ್ಯಾಂಕ್ಗಳಿಗೆ ತಗಲುವ ಯಾವ ವೆಚ್ಚವೂ ಇಲ್ಲಿ ಆಗುವುದಿಲ್ಲ. ಹೀಗಾಗಿ ಇವರು ಉತ್ತಮ ವಿನಿಮಯ ದರ ನೀಡುತ್ತಾರೆ. ಹೀಗೆ ಆಯಾ ದೇಶದಲ್ಲಿ ಉಳಿದುಕೊಳ್ಳುವ ಹಣವನ್ನ ಯಾವ ಕಾರ್ಯಕ್ಕೆ ಬೇಕಾದರೂ ಬಳಸಿಕೊಳ್ಳಬಹದು. ಹೀಗೆ ಹವಾಲಾ ಮಾರ್ಗವನ್ನ ಅನುಸರಿಸಿ ಟೆರರಿಸಂ ನಡೆಸಲು ಹಣವನ್ನ ಬಳಸಿಕೊಳ್ಳಲಾಗಿದೆ. ಅಮೇರಿಕಾ ಇಂದ ಹವಾಲ ಮೂಲಕ ವರ್ಗಾವಣೆಯಾದ ಹಣ ಅಮೇರಿಕಾ ಬಿಟ್ಟು ಹೊರಬರುವುದಿಲ್ಲ. ಸೌದಿಯಲ್ಲಿ ಕೂತ ಯಾವನೋ ಒಬ್ಬ ವ್ಯಕ್ತಿ ಅಮೆರಿಕಾದಲ್ಲಿರುವ ಹವಾಲ ನೆಡೆಸುವ ವ್ಯಕ್ತಿಗೆ ಆ ಹಣವನ್ನ ಯಾರಿಗೆ ಕೊಡಲು ಹೇಳುತ್ತಾನೋ ಅವನಿಗೆ ಕೊಡುತ್ತಾನೆ. ಆತ ಅದನ್ನ ವಿಧ್ವಂಸಕ ಕೃತಕ್ಕೆ ಕೂಡ ಬಳಸಬಹದು. ಅಮೇರಿಕಾ ಅವಳಿ ಕಟ್ಟಡಗಳ ಮೇಲೆ ನೆಡೆದ ದಾಳಿಗೆ ಬೇಕಾದ ಹಣ ಸಹಾಯ ಆದದ್ದು ಈ ಮಾರ್ಗದಿಂದ ಎಂದು ಸಾಬೀತಾಗಿದೆ. ಇನ್ನು ನಮ್ಮ ದೇಶದ ಕೇರಳ ರಾಜ್ಯದಲ್ಲಿ ಮಲ್ಲಪುರಂ ಎನ್ನುವ ಊರಿದೆ ಇಲ್ಲಿ ಹವಾಲ ಎನ್ನುವುದು ಮುಖ್ಯ ವ್ಯಾಪಾರವಾಗಿ ಬಿಟ್ಟಿದೆ. ಡಿಮಾನಿಟೈಸೇಷನ್ ನಂತರ ಕೇರಳ ರಾಜ್ಯದಲ್ಲಿ ತಿಂಗಳಿಗೆ ಹತ್ತಿರಹತ್ತಿರ 40 ಸಾವಿರ ಕೋಟಿ ರೂಪಾಯಿ ವಹಿವಾಟು ಕಡಿಮೆಯಾಯಿತು ಎಂದರೆ ಇದು ಬ್ಯಾಂಕಿಗೆ ಪರ್ಯಾಯವಾಗಿ ಹೇಗೆ ಬೆಳೆದಿದೆ ಎನ್ನುವ ಅರಿವಾದೀತು. ಚೆನ್ನೈ ಮತ್ತು ಕೇರಳದ ಬಂದರುಗಳಿಗೆ ದುಬೈ ಮೂಲಕ ಶಿಪ್ಪಿಂಗ್ ಕಂಟೈನರ್ ನಲ್ಲಿ ಭಾರತದ ನಕಲಿ ನೋಟುಗಳು ಬಂದಿಳಿಯುತ್ತವೆ. ಹೀಗೆ ಬಂದ ನೋಟುಗಳನ್ನ ಹವಾಲ ಮೂಲಕ ಹಣ ತಲುಪಿಸುವ ವ್ಯಕ್ತಿಯ ಮನೆಗೆ ತಲುಪಿಸಲಾಗುತ್ತದೆ. ಮುಕ್ಕಾಲು ಪಾಲು ಜನಕ್ಕೆ ಅದು ನಕಲಿ ನೋಟು ಎನ್ನುವುದು ಕೂಡ ಗೊತ್ತಾಗುವುದಿಲ್ಲ. ಏಕೆಂದರೆ 18 ರಿಂದ 19 ಸೆಕ್ಯುರಿಟಿ ನಿಬಂಧನೆಗಳಲ್ಲಿ ಈ ನಕಲಿ ನೋಟುಗಳಲ್ಲಿ ಹನ್ನೊಂದರಿಂದ ಹನ್ನೆರಡು ನಿಬಂಧನೆಗಳನ್ನ ಅಚ್ಚುಕಟ್ಟಾಗಿ ಕಾಪಿ ಮಾಡಿರುತ್ತಾರೆ. 
ಹವಾಲ ಮೂಲಕ ಹಣ ವರ್ಗಾವಣೆ ಮಾಡುವುದು ಅತ್ಯಂತ ಸುಲಭವಾಗಿ ಆಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಇದನ್ನ ಬಳಸಿದರೆ ಇದರಿಂದ ದೇಶದ ಭದ್ರತೆಗೆ ತೊಂದರೆಯಾಗುತ್ತದೆ. ಹೀಗಾಗಿ ಇದನ್ನ ಅಮೇರಿಕಾ, ಭಾರತ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಕಾನೂನು ಬಾಹಿರ ಎಂದು ಘೋಷಿಸಲಾಗಿದೆ. ಆದರೇನು ಇದು ರಾಜಾರೋಷವಾಗಿ ನಡೆಯುತ್ತಲೇ ಇದೆ. ಇದು ಕೇವಲ ದಕ್ಷಿಣ ಏಷ್ಯಾ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಕೂಡ ಜಗತ್ ವ್ಯಾಪಿ ಪೀಡೆ...! 
ಇವು ಅಳಿಯಲು ಬಿಡದೆ ಉಳಿಸುವುದು ಜಗತ್ತಿನ ಅತ್ಯಂತ ಶ್ರೀಮಂತರ ಹಿತವನ್ನ ಕಾಪಾಡಲು ಸೃಷ್ಟಿಸಿರುವ ' ಟ್ಯಾಕ್ಸ್ ಹೆವನ್ ದೇಶಗಳು'. ಭಾರತದಲ್ಲಿನ ಭ್ರಷ್ಟ 1೦೦ ಕೋಟಿಯನ್ನ ದುಬೈ ನ ಜೆಬೆಲ್ ಅಲಿಯಲ್ಲಿ ಒಂದು ಕಂಪನಿ ತೆಗೆದು ಸುರಿದು ಬಿಡಬಹದು. ಹೇಗೆ ಬಂತು? ಎಲ್ಲಿಂದ ಬಂತು? ಎನ್ನುವ ಸಣ್ಣ ಪ್ರಶ್ನೆ ಕೂಡ ಇವರು ಕೇಳುವುದಿಲ್ಲ. ಹವಾಲ ಹ್ಯಾಂಡ್ಲರ್ ಇದಕ್ಕೆ 2೦ ರಿಂದ 3೦ ಪ್ರತಿಶತ ಕಮಿಷನ್ ಪಡೆಯುತ್ತಾರೆ. 
ಜನ ಸಾಮಾನ್ಯನೊಬ್ಬ ಮಾಡುವ ಸಣ್ಣ ಪುಟ್ಟ ಹಣ ವರ್ಗಾವಣೆ ಲಕ್ಷಾಂತರ ಕೋಟಿ ವ್ಯಾಪಾರ ಸೃಷ್ಟಿಸುತ್ತದೆ. ಬ್ಯಾಂಕಿಂಗ್ ವ್ಯವಸ್ಥೆಗೆ ಪರ್ಯಾಯ ಸೃಷ್ಟಿಸುತ್ತದೆ. ಯೂರೋಪಿನಲ್ಲಿ ಕೂಡ ವ್ಯಾಟ್ ತೆರಿಗೆಯನ್ನ ಉಳಿಸಲು ವ್ಯಾಪಾರವನ್ನ ವಿಭಜಿಸಿದ್ದಾರೆ. 1೦೦ ಯುರೋ ಮೌಲ್ಯದ ವಸ್ತು ಕೊಂಡರೆ 6೦ ಯೂರೋಗೆ ಬಿಲ್ ಕೊಟ್ಟು ಉಳಿದ ನಲವತ್ತು ಹಣದ ರೂಪದಲ್ಲಿ ಪಡೆಯಲಾಗುತ್ತದೆ. ಹೀಗೆ ಸಂಗ್ರಹವಾದ ಕಪ್ಪು ಹಣ ಸೇರುವುದು ಹವಾಲ ಎನ್ನುವ ಸಮುದ್ರವನ್ನೇ! 
ಇದಕ್ಕೇನು ಪರಿಹಾರ? 
ಡಿಮಾನಿಟೈಸೇಷನ್ ನಂತರ ಹವಾಲ ಎನ್ನುವ ದಂಧೆ ಪ್ಯಾರಾಲಿಸಿಸ್ ಆಗಿತ್ತು. ಇದೀಗ ಮತ್ತೆ ಹೊಸ ಹುರುಪಿನೊಂದಿಗೆ ಗರಿಗೆದರಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಜುಬ್ಬಿ ಮತ್ತು ಕೇರಳದಲ್ಲಿ ನಾಯಿಕೊಡೆಯಂತೆ ತಲೆಯೆತ್ತಿರುವ ಆಭರಣ ಮಳಿಗೆಗಳು ಇದರ ಹಿಂದಿನ ಕಪ್ಪು ಮುಖಗಳು. ಟೆರರಿಸಂ, ಚಿನ್ನ, ಹಣ ವರ್ಗಾವಣೆ ಇವು ಮೂರು ಒಂದಕ್ಕೊಂದು ಬೆಸೆದುಕೊಂಡಿವೆ. ಇವೆಲ್ಲಕ್ಕೂ ಮುಖ್ಯವಾಗಿ ಬಲ ಬರುವುದು ಲಕ್ಷಾಂತರ ಸಂಖ್ಯೆಯಲ್ಲಿ ಇವರ ಮೂಲಕ ಹಣ ವರ್ಗಾವಣೆ ಮಾಡುವ ಜನರಿಂದ, ಇವರಲ್ಲಿ ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ವ್ಯಾಪಾರ ಮಾಡುವ ಜನರಿಂದ. ಹವಾಲಕ್ಕೆ ಕಡಿವಾಣ ಹಾಕುವುದಕ್ಕೆ ಮುಖ್ಯವಾಗಿ 
  1. ಜನರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು. 
  2. ಬ್ಯಾಂಕ್ ಉತ್ತಮ ವಿನಿಮಯ ದರ ನೀಡಬೇಕು. 
  3. ಬ್ಯಾಂಕ್ಗಳು ಸೇವಾಶುಲ್ಕ ಕಡಿಮೆ ಮಾಡಬೇಕು. 
  4. ಸರಕಾರ ಎಲ್ಲಕ್ಕೂ ತೆರಿಗೆ ಜಡಿಯುವುದು ಬಿಡಬೇಕು. 
  5. ಡಿಜಿಟಲ್ ಹಣದ ಮೊರೆ ಹೋಗುವುದು. 
ಕೇರಳ ಮೂಲದ ಹವಾಲ ಹ್ಯಾಂಡ್ಲರ್ ಒಬ್ಬ 'ಕೇರಳದ ಜನ ಎಲ್ಲಿಯವರೆಗೆ ಗಲ್ಫ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ ಅಲ್ಲಿಯವರೆಗೆ ಹವಾಲ ನಿಲ್ಲಿಸಲು ಸಾಧ್ಯವಿಲ್ಲ' ಎನ್ನುವ ಆತ್ಮವಿಶ್ವಾಸದ ಮಾತಾಡುತ್ತಾನೆಂದರೆ ಇದರ ಆಳ ಎಷ್ಟಿರಬಹದು ಎನ್ನುವುದ ಊಹಿಸಿಕೊಳ್ಳುವುದು ಕಷ್ಟವೆನ್ನಲ್ಲ.1970 ರ ದಶಕದಲ್ಲಿ ಭಾರತದಲ್ಲಿ 1೦೦ ರೂಪಾಯಿ ಹವಾಲ ವಹಿವಾಟು ನೆಡೆದರೆ ಅದರಲ್ಲಿ 7೦ ರೂಪಾಯಿ ಕೇರಳ ಒಂದರಲ್ಲಿ ಆಗುತ್ತಿತ್ತು. ಇದೀಗ ಅದು 30 ರಿಂದ 35 ರುಪಾಯಿಗೆ ಇಳಿದಿದೆ ಎಂದ ಮಾತ್ರಕ್ಕೆ ಕೇರಳದಲ್ಲಿ ವಹಿವಾಟು ಕಡಿಮೆಯಾಯಿತು ಅಂದಲ್ಲ , ಭಾರತದ ಬೇರೆ ರಾಜ್ಯಗಳಲ್ಲೂ ಈ ಪಿಡುಗು ಹಬ್ಬಿತು ಎಂದರ್ಥ. 
8 ನೇ ಶತಮಾನದಲ್ಲಿ ವ್ಯಾಪಾರ ವಹಿವಾಟು ಸುಲಭವಾಗಲಿ ಎನ್ನುವ ಉದ್ದೇಶದಿಂದ ಶುರುವಾದ ಹವಾಲ ಅಥವಾ ಹುಂಡಿ ಎನ್ನುವ ಈ ವರ್ಗಾವಣೆ ವಿಧಾನ ಇಂತಹ ವಿರಾಟ್ ರೂಪ ಪಡೆದುಕೊಂಡು ಜಗತ್ತನ್ನ ಆತಂಕದ ಕೂಪಕ್ಕೆ ದೂಡುತ್ತದೆ ಎಂದು ಯಾರು ತಿಳಿದಿದ್ದರು? ವ್ಯವಸ್ಥೆ ಅಥವಾ ವಿಧಾನಗಳು ಒಳಿತಿಗಾಗಿ ಬಳಸುವ ಬದಲು ಲೋಭ ಮತ್ತು ಸ್ವಾರ್ಥಕ್ಕೆ ಬಳಸಲು ಶುರು ಮಾಡಿದರೆ ಏನಾಗಬಹದು ಎನ್ನುವುದಕ್ಕೆ 'ಹವಾಲ' ಉದಾಹರಣೆ. ಅಂದಹಾಗೆ ಹವಾಲ ಎಂದರೆ ಅರೇಬಿಕ್ ನಲ್ಲಿ ನಂಬಿಕೆ ಎನ್ನುವ ಅರ್ಥವಿದೆ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Related Stories

No stories found.

Advertisement

X
Kannada Prabha
www.kannadaprabha.com