ಜಗತ್ತನ್ನ ಆಳಲು ಸಿದ್ದವಾಗಿವೆ ಟೆಕ್ನಾಲಜಿ ಕಂಪನಿಗಳು!

ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ
ಜಗತ್ತನ್ನ ಆಳಲು ಸಿದ್ದವಾಗಿವೆ ಟೆಕ್ನಾಲಜಿ ಕಂಪನಿಗಳು!
ಜಗತ್ತನ್ನ ಆಳಲು ಸಿದ್ದವಾಗಿವೆ ಟೆಕ್ನಾಲಜಿ ಕಂಪನಿಗಳು!
ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ ಕಪ್ಪು ಪರದೆ ಕಂಡರೆ ..? ಫೇಸ್ ಬುಕ್, ಟ್ವಿಟ್ಟರ್, ಅಮೆಜಾನ್ ಮತ್ತು ಮೈಕ್ರೋ ಸಾಫ್ಟ್ ಯಾವುದೂ ಇಲ್ಲದ ಜಗತ್ತನ್ನ ಊಹಿಸಿಕೊಳ್ಳಿ.... ಇದು ನಿಜ ಜೀವನದಲ್ಲಿ ಆಗಿಬಿಟ್ಟರೆ? ಜಗತ್ತು ಎಂತಹ ಪ್ಯಾನಿಕ್ ಗೆ ಒಳಗಾಗಬಹದು?
2007 ರ ತನಕ ವಿತ್ತ ಜಗತ್ತಿನಲ್ಲಿ ಬ್ಯಾಂಕ್ ಬಗ್ಗೆಯೂ ಇಂತಹದ್ದೇ ನಂಬಿಕೆ ಮತ್ತು ಅವಲಂಬನೆ ಇತ್ತು. 2007 ರಿಂದ ಈಚೆಗೆ ಜಗತ್ತು ತೀವ್ರ ಗತಿಯಲ್ಲಿ ಬದಲಾಗಿದೆ. ಬ್ಯಾಂಕಿಂಗ್ ಕ್ಷೇತ್ರ ನಿಧಾನವಾಗಿ ತನ್ನ ಹಿಡಿತವನ್ನ ಕಳೆದುಕೊಳ್ಳುತ್ತಿದೆ. ನೀವೀಗ ಅಚ್ಚರಿಯಿಂದ  ಅರರೇ ಇದೇನಿದು ನೀವು ಹೇಳುತ್ತಿರುವುದು? ವಿತ್ತ ಜಗತ್ತು ಅಂದ ಮೇಲೆ ಅದನ್ನ ಹಿಡಿತದಲ್ಲಿಡುವುದು ಅದನ್ನ ಮುನ್ನೆಡೆಸುವುದು ಬ್ಯಾಂಕ್ಗಳಲ್ಲವೇ? ಬ್ಯಾಂಕ್ಗಳು ಹಣಕಾಸಿನ ಮೇಲೆ ಹಿಡಿತ ಕಳೆದು ಕೊಂಡರೆ ವಿತ್ತ ಜಗತ್ತು ನಿಲ್ಲುವುದಾದರೂ ಹೇಗೆ? ಇದಕ್ಕೆ ಪರ್ಯಾಯವೇನು? ಹೀಗೆ ಒಂದಲ್ಲ ಹಲವು ಪ್ರಶ್ನೆಗಳನ್ನ  ಕೇಳುತ್ತೀರಿ. ಇಂತಹ ಪ್ರಶೆಗಳು ಸಂಶಯಗಳು ಸಹಜ. 
ಗಮನಿಸಿ ನೋಡಿ ಇಂದು ಜಗತ್ತನ್ನ ಆಳುತ್ತಿರುವುದು ಟೆಕ್ನಾಲಜಿ ಕಂಪನಿಗಳು. ಮೊದಲೇ ಹೇಳಿದಂತೆ 2007 ರ ವರೆಗೆ ಜಗತ್ತನ್ನ ಆಳುತ್ತಿದ್ದದ್ದು ಬ್ಯಾಂಕಿಂಗ್ ವ್ಯವಸ್ಥೆ . ಇದೀಗ ಇದು ಟೆಕ್ನಾಲಜಿ ಕಂಪನಿಗಳ ಕೈ ಸೇರಿದೆ . ಜಗತ್ತು ಹೆಚ್ಚೆಚ್ಚು ನಗದನ್ನ ತೊರೆದು ಡಿಜಿಟಲ್ ಹಣವನ್ನ ಅಪ್ಪುವುದಕ್ಕೆ ಶುರು ಮಾಡಿದೆ. ಹಾಗಾಗಿ ಟೆಕ್ನಾಲಜಿ ಕಂಪನಿಗಳು ಹಣಕಾಸು ವಹಿವಾಟಿನ ಮೇಲೆ ತಮ್ಮ ಪ್ರಭಾವವನ್ನ ಹೆಚ್ಚು ಮಾಡಿಕೊಂಡಿವೆ. ಇಂದು ಜಗತ್ತನ್ನ ಆಳುತ್ತಿರುವ ಪ್ರಮುಖ ಟೆಕ್ನಾಲಜಿ ಕಂಪೆನಿಗಳಲ್ಲಿ ಐದು ಅತ್ಯಂತ ಪ್ರಮುಖವಾದವು. ಅವೆಂದರೆ  1.ಗೂಗಲ್  2.ಆಪಲ್  3.ಮೈಕ್ರೋಸಾಫ್ಟ್ 4. ಅಮೆಜಾನ್ 5.ಫೇಸ್ಬುಕ್.
ಈ ಕಂಪನಿಗಳು ಇಂದು ಜಗತ್ತು ಚಿಂತಿಸುವ ವಿಧಾನವನ್ನ ಬದಲಿಸಬಲ್ಲ ತಾಕತ್ತು ಹೊಂದಿವೆ. ನಮಗೆ ಗೊತ್ತಿಲ್ಲದೆ ನಮ್ಮ ಚಿಂತನೆಯನ್ನ ಬದಲಿಸುವ , ಪ್ರಚೋದಿಸುವ ಶಕ್ತಿ ಇವುಗಳಿಗಿವೆ . ಜಗತ್ತಿನ ವ್ಯವಸ್ಥೆ ಇದರಿಂದ ಬಿಗಡಾಯಿಸುವುದಿಲ್ಲವೇ ?ಎನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಬಂದರೆ ಅದಕ್ಕೆ ಉತ್ತರ ಇಲ್ಲ . ಏಕೆಂದರೆ ಈ ಐದು ಸಂಸ್ಥೆಗಳೇ ಇಂದಿನ ವ್ಯವಸ್ಥೆ . ಇವುಗಳೇ ವ್ಯವಸ್ಥೆಯಾದಾಗ ವ್ಯವಸ್ಥೆ ಹೇಗೆ ತಾನೇ ಬಿಗಡಾಯಿಸುತ್ತೆ ? ಇದು ನ್ಯೂ ವರ್ಲ್ಡ್ ಆರ್ಡರ್ . ನಿಮ್ಮ ನಿರ್ಧಾರಕ್ಕೆ ನಿಮ್ಮ ಒಪ್ಪಿಗೆ ಬೇಡದ ಹೊಸ ವ್ಯವಸ್ಥೆಗೆ ನಿಮಗೆ ಸ್ವಾಗತ . ವಸ್ತು ಸ್ಥಿತಿ ಹೀಗಿರುವಾಗ ನಮ್ಮ ದೇಶದಲ್ಲಿ ಇನ್ನು ನಾವು ಬ್ಯಾಂಕ್ಗಳು ವಿಲೀನವಾದರೆ ದಕ್ಷಿಣ ಭಾರತದ ಹಳೆಯ ಬ್ಯಾಂಕ್ ವಿಲೀನವಾಗೋಯ್ತು ಅಂದ ಹುಯಿಲೆಬ್ಬಿಸುತ್ತೇವೆ . ಮುಂದಿನ ಹತ್ತು ವರ್ಷದಲ್ಲಿ ಬ್ಯಾಂಕಿಂಗ್ ಉಳಿದುಕೊಂಡು ಬ್ಯಾಂಕ್ಗಳು ನೇಪಥ್ಯ ಸೇರಲಿವೆ . ಬ್ಯಾಂಕ್ಗಳು ಮಾಡುತ್ತಿದ್ದ ಬಹುತೇಕ ಕೆಲಸವನ್ನ ಆಗಲೇ ಟೆಕ್ನಾಲಜಿ ಕಂಪನಿಗಳು ಮಾಡಲು ಶುರು ಹಚ್ಚಿಕೊಂಡಿವೆ . 
ಇಷ್ಟಕ್ಕೂ ನಮಗೇಕೆ ಬ್ಯಾಂಕ್ಗಳ ಮೇಲೆ ಅಷ್ಟೊಂದು ವ್ಯಾಮೋಹ ? ಬ್ಯಾಂಕ್ ಏನು ಬದಲಿಸಲಾಗದ ಶಾಶ್ವತ ವ್ಯವಸ್ಥೆಯೇನು ಅಲ್ಲ . ಬ್ಯಾಂಕ್ ಅಂದರೇನು ? ಬೇರೊಬ್ಬರ ಹಣವನ್ನ ಪಡೆದು ಇನ್ನೊಬ್ಬರಿಗೆ ಸಾಲ ಕೊಡುವ ದಲ್ಲಾಳಿ ಸಂಸ್ಥೆಯಷ್ಟೇ . ತಾನು ಹಣ ಪಡೆದವರಿಗೆ ಒಂದಷ್ಟು ಕೊಟ್ಟು ತಾನು ಕೊಟ್ಟವರಿಂದ ಒಂದಷ್ಟು ವಸೂಲಿ ಮಾಡಿ ಮಧ್ಯದಲ್ಲಿ ಒಂದಷ್ಟು ಹಣವನ್ನ ಲಾಭವನ್ನಾಗಿ ಮಾಡಿಕೊಳ್ಳುವ ಒಂದು ದಲ್ಲಾಳಿ ಮನಸ್ಥಿತಿಯ ಸಂಸ್ಥೆ ಇಷ್ಟು ಬಿಟ್ಟು ಬೇರೇನೂ ಅಲ್ಲ . ಇದೆ ಕಾರಣಕ್ಕೆ ಬ್ಯಾಂಕ್ಗಳು ನೇಪಥ್ಯಕ್ಕೆ ಸೇರುತ್ತದೆ ಅಂದದ್ದು . ಗಮನಿಸಿ ನೋಡಿ ಈ ಕೆಲಸವನ್ನ ಬ್ಯಾಂಕಿನ ಸಹಾಯವಿಲ್ಲದೆ ಟೆಕ್ನಾಲಜಿ ಕಂಪನಿಗಳು ಮಾಡಬಲ್ಲವು . ಆದರೆ ಇಂದಿನ ಕಾಲಘಟ್ಟದಲ್ಲಿ ಬ್ಯಾಂಕ್ ಇದೆ ಕಾರ್ಯವನ್ನ ಟೆಕ್ನಾಲಜಿ ಸಂಸ್ಥೆಗಳ ಸಹಾಯವಿಲ್ಲದೆ ಮಾಡಲಾರವು . ಅಂದರೆ ಸರಳವಾಗಿ ಬ್ಯಾಂಕಿಗೆ ಟೆಕ್ನಾಲಜಿ ಕಂಪನಿ ಬೇಕು ಟೆಕ್ನಾಲಜಿ ಕಂಪನಿಗೆ ಬ್ಯಾಂಕಿನ ಅವಶ್ಯಕತೆ ಇಲ್ಲ . ಇಂತಹ ಸಂದರ್ಭದಲ್ಲಿ ಬ್ಯಾಂಕ್ಗಳು ಹೇಗೆ ತಾನೇ ಉಳಿದಾವು ? ಬ್ಯಾಂಕ್ ಎನ್ನುವುದು ಇಂದಲ್ಲ ನಾಳೆ ತೆರೆಮರೆಗೆ ಸರಿಯಲಿರುವ ಹಳೆಯ ಪಾತ್ರಧಾರಿ ಅಷ್ಟೇ . ಹಾಗಾದರೆ ಟೆಕ್ನಾಲಜಿ ಕಂಪನಿಗಳು ಮುಳುಗುವುದಿಲ್ಲವೇ ? ಎನ್ನುವ ಪ್ರಶ್ನೆ ಕೂಡ ಸಹಜವಾಗಿ ಓದುಗರಲ್ಲಿ ಹುಟ್ಟುತ್ತದೆ . ಇದಕ್ಕೆ ಉತ್ತರ ಬಹಳ ಸರಳ . ಗಮನಿಸಿ ನೋಡಿ 2007 ಕ್ಕೂ ಮುಂಚೆ ಬ್ಯಾಂಕಿನ ಬಗ್ಗೆ ಮೇಲಿನ ಸಾಲಿನಲ್ಲಿ ಹೇಳಿದ ಹಾಗೆ ಹೇಳಿದ್ದರೆ ಜನ ಹಾಗೆ ಹೇಳಿದವನ ಮಾತನ್ನ ಸಂಶಯದಿಂದ ನೋಡುತ್ತಿದ್ದರು . ಏಕೆಂದರೆ ಅಂದಿನ ಕಾಲಘಟ್ಟದಲ್ಲಿ ಅದೇ ವ್ಯವಸ್ಥೆಯಾಗಿತ್ತು . ಅರ್ಥ ಇಷ್ಟೇ ಟೆಕ್ನಾಲಜಿ ಕಂಪನಿಗಳು ಸದ್ಯದ ನಮ್ಮ ಜಗತ್ತಿನ ಹೊಸ ವ್ಯವಸ್ಥೆ . ಅವು ತಮ್ಮ ಆಟದ ಅತ್ಯುನ್ನತ ಸ್ಥಿತಿಯನ್ನ ತಲುಪುವ ಹಂತದಲ್ಲಿದೆ . ಪರಿಸ್ಥಿತಿ ಹೀಗಿರುವಾಗ ಅವುಗಳ ಕುಸಿತದ ಬಗ್ಗೆ ಈಗಲೇ ಮಾತಾಡುವುದಕ್ಕೆ ಇದು ಸರಿಯಾದ ಸಮಯವಲ್ಲ . 
ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆ ಬ್ಯಾಂಕ್ಗಳು ವಿಲೀನವಾಗುತ್ತಿವೆ . ಸಣ್ಣ ಪುಟ್ಟ ಬ್ಯಾಂಕ್ಗಳು ಉತ್ತಮ ವ್ಯಾಪಾರ ಮತ್ತು ಲಾಭ ಮಾಡುತ್ತಿದ್ದರೂ ಅವುಗಳನ್ನ ದೊಡ್ಡ ಬ್ಯಾಂಕ್ಗಳ ಹೆಸರಲ್ಲಿ ವಿಲೀನ ಮಾಡಲಾಗುತ್ತಿದೆ . ತಮ್ಮ ಅಳಿವನ್ನ ಇನ್ನಷ್ಟು ದಿನ ಮುಂದೂಡುವ ಕ್ರಿಯೆಯಿದು . ವ್ಯವಸ್ಥೆಯಿಂದ ಬ್ಯಾಂಕ್ ಎನ್ನುವುದು ಹೊರಟು ಹೋದರೆ ವ್ಯವಸ್ಥೆಗೆ ನಷ್ಟವಂತೂ ಇಲ್ಲ . ಅದಕ್ಕೆ ಬೇಕಾದ ಪರ್ಯಾಯ ನಮ್ಮಲ್ಲಿ ಆಗಲೇ ಇದೆ . ಮತ್ತೊಮ್ಮೆ ಗಮನಿಸಿ ಬ್ಯಾಂಕಿಂಗ್ ಅನ್ನುವುದು ಸೇವೆ . ಬ್ಯಾಂಕ್ ಎನ್ನುವುದು ಆ ಸೇವೆಯನ್ನ ನೀಡುವ ದಲ್ಲಾಳಿ ಸಂಸ್ಥೆ . ಹೀಗೆ ಸೇವೆಯನ್ನ ಉಳಿಸ್ಕೊಂಡು ದಲ್ಲಾಳಿ ಸಂಸ್ಥೆಯನ್ನ ತೆಗೆಯುವುದರಿಂದ ಗ್ರಾಹಕನಿಗೆ ಲಾಭವೇ ಹೊರತು ನಷ್ಟವಂತೂ ಖಂಡಿತ ಇಲ್ಲ . ಭಾರತದ ಮಟ್ಟಿಗೆ ನಾಲ್ಕೈದು ದೊಡ್ಡ ಬ್ಯಾಂಕ್ಗಳು ಉಳಿದುಕೊಳ್ಳಲಿದೆ . ಉಳಿದ ಬ್ಯಾಂಕ್ಗಳು ವಿಲೀನವಾಗದೆ ಬೇರೆ ದಾರಿಯಿಲ್ಲ . 
ಹೀಗೆ ಬ್ಯಾಂಕ್ಗಳು ವಿಲೀನವಾಗಲು ಪ್ರಮುಖ ಕಾರಣವೆಂದರೆ ಬ್ಯಾಂಕ್ಗಳ ಬಂಡವಾಳದಲ್ಲಿ ಕುಸಿತ ಉಂಟಾಗುವುದು . ಬ್ಯಾಂಕ್ಗಳ ಬಳಿ ಹೇರಳವಾಗಿ ಹಣವಿದ್ದರೂ ಅವರು ಸಾಲ ನೀಡಲಾಗದ ವಿಚಿತ್ರ ಪರಿಸ್ಥಿತಿಗೆ ತಲುಪುತ್ತಾರೆ ಹೀಗಾಗಿ ವಿಲೀನ ಮಾಡುವುದು ಅವಶ್ಯಕವಾಗುತ್ತದೆ. ಒಂದು ಸಣ್ಣ ಉದಾಹರಣೆ ಇದನ್ನ ಇನ್ನಷ್ಟು ಸರಳವಾಗಿ ತಿಳಿಸಿಕೊಡುತ್ತದೆ . 
ಒಂದು ಬ್ಯಾಂಕು ಸಾವಿರ ರೂಪಾಯಿ ಸಾಲ ನೀಡಬೇಕೆಂದರೆ ಅದರ ಹತ್ತು ಪ್ರತಿಶತ ಅಂದರೆ ನೂರು ರೂಪಾಯಿ ಬಂಡವಾಳ ಬ್ಯಾಂಕಿನ ಬಳಿ ಇರಬೇಕು . ಹೀಗೆ ಸಾಲ ಕೊಟ್ಟ ಸಾವಿರ ರೂಪಾಯಿಯಲ್ಲಿ ಕೇವಲ ಐದು ಪ್ರತಿಶತ ಹಣ ವಾಪಸ್ಸು ಬರದೆ ಹೋದರೆ ಅಂದರೆ ಐವತ್ತು ರೂಪಾಯಿ ಅದು ಬಂಡವಾಳದ ಅರ್ಧ ಹಣ ಮುಳುಗಿಸುತ್ತದೆ . ಅಂದರೆ ಬ್ಯಾಂಕಿನ ಮೂಲ ಬಂಡವಾಳ ನೂರರಿಂದ ಐವತ್ತಕ್ಕೆ ಇಳಿಕೆಯಾಯಿತು . ಗಮನಿಸಿ ನೂರು ರೂಪಾಯಿ ಇದ್ದಾಗ ಸಾವಿರ ರೂಪಾಯಿ ಸಾಲ ನೀಡಬಹುದಿತ್ತು ಇದೀಗ ಬಂಡವಾಳದ ಮೊತ್ತ ಐವತ್ತು  ಈಗ ಬ್ಯಾಂಕು ಕೇವಲ ಐನೂರು ಮಾತ್ರ ನಿಯಮದ ಪ್ರಕಾರ ಸಾಲ ಕೊಡಬಹದು . ಬ್ಯಾಂಕಿನ ಬಂಡವಾಳದಲ್ಲಿ ಕುಸಿತವಾಗಿದೆ ನಿಜ ಆದರೆ ಗ್ರಾಹಕರು ಇತ್ತ ಠೇವಣಿಯಲ್ಲಿ ಕುಸಿತವೇನು ಆಗಿಲ್ಲ ಬ್ಯಾಂಕಿನ ಬಳಿ ಹೇರಳ ಹಣವಿದೆ ಆದರೇನು ನಿಯಮದ ಪ್ರಕಾರ ಅದು ಸಾಲ ನೀಡುವ ಆಗಿಲ್ಲ . ಸಾಲ ನೀಡದೆ ಹಣ ಸಂಪಾದಿಸದೆ ಗ್ರಾಹಕರಿಗೆ ಬಡ್ಡಿ ಕೊಡುವುದು ಹೇಗೆ ? ಈ ಸ್ಥಿತಿ ಮುಂದುವರಿದರೆ ಬ್ಯಾಂಕು ಮತ್ತು ಇಡೀ ವ್ಯವಸ್ಥೆ ಕುಸಿಯುತ್ತದೆ . 
ಗಮನಿಸಿ ನೋಡಿ ಇಂತಹ ಸಂದರ್ಭದಲ್ಲಿ ಸರಕಾರ ಬ್ಯಾಂಕ್ಗಳಿಗೆ ಮರು ಬಂಡವಾಳ ಕೂಡ ಹೂಡುತ್ತದೆ . ಇದು ಸರಕಾರಕ್ಕೆ ಹೊರೆ . ಆದರೆ ಇದೆ ಕೆಲಸವನ್ನ ಟೆಕ್ನಾಲಜಿ ಕಂಪನಿಗಳು ಮಾಡಿದರೆ ಇಲ್ಲಿ ವ್ಯವಸ್ಥೆಯ ಕುಸಿತದ ಮಾತು ಬರುವುದಿಲ್ಲ , ಮರು ಬಂಡವಾಳ ಹೂಡಿಕೆಯ ಪ್ರಮೇಯ ಕೂಡ ಉದ್ಭವಿಸುವುದಿಲ್ಲ . 
ಅಲ್ಲದೆ ಟೆಕ್ನಾಲಜಿ ಕಂಪನಿಗಳು ತಮ್ಮ ಲಾಭದ ಬಹು ದೊಡ್ಡ ಮೊತ್ತವನ್ನ ರಿಸೆರ್ಚ್ ಅಂಡ್ ಡೆವಲಪ್ಮೆಂಟ್ ಗಾಗಿ ವಿನಿಯೋಗಿಸುತ್ತವೆ . ಮುಂದಿನ ಹತ್ತು ವರ್ಷದಲ್ಲಿ ಜಗತ್ತಿನಲ್ಲಿ ಆಗಬಹದುದಾದ ಬದಲಾವಣೆಗಳ ಊಹೆ ಮಾಡಿಕೊಂಡು ಅದಕ್ಕೆ ಬೇಕಾದ ಸಿದ್ಧತೆಗಳನ್ನ ನೆಡೆಸುತ್ತದೆ . ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಮುದೊಂದು ದಿನ ಹೀಗಾಗಬಹದು ಎನ್ನುವ ಪರಿಕಲ್ಪನೆ ಕೂಡ ಇಟ್ಟುಕೊಂಡಿರಲಿಲ್ಲ . ಹೀಗಾಗಿ ಅವು ಸೋತು ಟೆಕ್ನಾಲಜಿ ಕಂಪನಿಗಳಿಗೆ ಅಧಿಕಾರದ ಚುಕ್ಕಾಣಿ ಬಿಟ್ಟು ಕೊಡಲಿವೆ . 
ಕೊನೆ  ಮಾತು : ಮೈಕ್ರೋಸಾಫ್ಟ್ ಸಂಸ್ಥೆಯ ಸ್ಥಾಪಕ ಬಿಲ್ ಗೇಟ್ಸ್ ಹೇಳುತ್ತಾರೆ ' ನಾವು ಮುಂದಿನ ಎರಡು ವರ್ಷದಲ್ಲಿ ಸಾಧಿಸಬಹುದಾದ ವಿಷಯಗಳನ್ನ ಅತಿಯಾಗಿ ವರ್ಣಿಸಿ ಹೇಳುತ್ತೇವೆ . ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಸಾಧಿಸಬಹದುದಾದ ವಿಷಯಗಳ ಬಗ್ಗೆ ನಮಗೆ ನಿಖರತೆಯಿಲ್ಲ ಹೀಗಾಗಿ ಅವುಗಳನ್ನ ನಾವು ಕಡೆಗಾಣಿಸುತ್ತೇವೆ ' . ಟೆಕ್ನಾಲಜಿ ಕಂಪನಿಗಳು ನಮ್ಮನ್ನಾಳುವ ಸಂಸ್ಥೆಗಳು ಇದರಲ್ಲಿ ಸಂಶಯ ಬೇಡ . ನಾಯಕನಾದವನಲ್ಲಿ ಮುಂದಿನ ಹತ್ತು ವರ್ಷದ ಬಗ್ಗೆ ಇರಬೇಕಾದ ಕಕ್ಕುಲಾತಿ ಟೆಕ್ ಕಂಪೆನಿಗಳನ್ನ ಹುಟ್ಟುಹಾಕಿದ ವ್ಯಕ್ತಿಗಳಲ್ಲಿ ಕಾಣಬಹದು . ಈಗ ಲೇಖನದ ಮೊದಲ ಸಾಲು ಓದಿ.., ಅಂತಹ ದಿನ ಬರುವುದಿಲ್ಲ ಎನ್ನುವ ವಿಶ್ವಾಸ ಇಷ್ಟು ಹೊತ್ತಿಗೆ ನಿಮ್ಮದಾಗಿರುತ್ತದೆ.
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com