ಸ್ಥಿರ ಸರಕಾರ ಷೇರು ಮಾರುಕಟ್ಟೆ ಬೆಳೆಯಲು ನೀಡುವುದು ಸಹಕಾರ!

ಈ ಮಾರುಕಟ್ಟೆ ಸಂಪೂರ್ಣವಾಗಿ ಹೂಡಿಕೆದಾರನ ಮನಸ್ಥಿತಿಯನ್ನ ಅವಲಂಬಿಸಿದೆ. ಹೂಡಿಕೆದಾರನ ಮನಸ್ಸು ಕ್ಷಣ ಚಿತ್ತ ಕ್ಷಣ ಪಿತ್ತ ಎನ್ನುವಂತೆ ಇರುತ್ತದೆ.

Published: 23rd May 2019 12:00 PM  |   Last Updated: 23rd May 2019 07:35 AM   |  A+A-


Hanaclassu: How election results affect Indian stock market

ಸ್ಥಿರ ಸರಕಾರ ಷೇರು ಮಾರುಕಟ್ಟೆ ಬೆಳೆಯಲು ನೀಡುವುದು ಸಹಕಾರ!

Posted By : SBV
Source : Online Desk
ಷೇರು ಮಾರುಕಟ್ಟೆ ಎನ್ನುವುದು ಅತ್ಯಂತ ಸೂಕ್ಷ್ಮ ಸಂವೇದಿ ಮಾರುಕಟ್ಟೆ. ಇದು ಯಾವ ಸಮಯದಲ್ಲಿ ಕುಸಿಯುತ್ತದೆ ಮತ್ತು ಯಾವ ಸಮಯದಲ್ಲಿ ಏರುತ್ತದೆ ಎನ್ನುವುದನ್ನ ವರ್ಷಾನುಗಟ್ಟಲೆ ಇದರ ಕುರಿತು ಅಧ್ಯಯನ ಮಾಡಿದವರು ಕೂಡ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಕೂಡ  ಬಹಳ ಸರಳ. ಈ ಮಾರುಕಟ್ಟೆ ಸಂಪೂರ್ಣವಾಗಿ ಹೂಡಿಕೆದಾರನ ಮನಸ್ಥಿತಿಯನ್ನ ಅವಲಂಬಿಸಿದೆ. ಹೂಡಿಕೆದಾರನ ಮನಸ್ಸು ಕ್ಷಣ ಚಿತ್ತ ಕ್ಷಣ ಪಿತ್ತ ಎನ್ನುವಂತೆ ಇರುತ್ತದೆ. ಬಹಳಷ್ಟು ಹೂಡಿಕೆ ತಜ್ಞರು ಈ ಮಾತನ್ನ ಒಪ್ಪಲಿಕ್ಕಿಲ್ಲ ಏಕೆಂದರೆ ಅದು ನೇರವಾಗಿ ಅವರ ವ್ಯಾಪಾರದ ಬುಡಕ್ಕೆ ಬರುತ್ತದೆ. ಇದೊಂದು ವಿಜ್ಞಾನ, ಇದರ ಹಿಂದೆ ಹಲವಾರು ತಜ್ಞರ, ವರ್ಷಗಳ ಅನಾಲಿಸಿಸ್ ಇರುತ್ತದೆ ಎಂದಲ್ಲ ಹೇಳುತ್ತಾರೆ. ಅದು ಇದೆ. ಇಲ್ಲವೆನ್ನುವುದು ನನ್ನ ವಾದವಲ್ಲ. ಏನೆಲ್ಲಾ ಸಾಧ್ಯತೆಗಳನ್ನ ಎಷ್ಟೇ ವೈಜ್ಞಾನಿಕವಾಗಿ ಬಿಡಿಸಿದರೂ ಉತ್ತರ ಕೊರಿಯಾ ತನ್ನ ಪಕ್ಕದ ದಕ್ಷಿಣ ಕೊರಿಯಾ ಮೇಲೆ ಮಿಸೈಲ್ ಬಿಟ್ಟರೆ ಭಾರತದ ಷೇರು ಮಾರುಕಟ್ಟೆ ಕಣ್ಣೀರಧಾರೆ ಹರಿಸುವುದರ ಹಿಂದಿನ ಲಾಜಿಕ್ ಮಾತ್ರ ಯಾರೂ ಇನ್ನು ಕ್ರ್ಯಾಕ್ ಮಾಡಲು ಆಗಿಲ್ಲ. ಇರಲಿ. 

ಇಷ್ಟಲ್ಲಾ ಪೀಠಿಕೆ ಹಾಕುವ ಉದ್ದೇಶ ಚುನಾವಣೆಯ ಮುಂಚಿನ ಆರು ತಿಂಗಳು ಮತ್ತು ನಂತರದ ಆರು ತಿಂಗಳು ಷೇರು ಮಾರುಕಟ್ಟೆಗೆ ಯಾವ ರೀತಿಯಲ್ಲಿ ಬಹು ಮುಖ್ಯ ಎಂದು ತಿಳಿಸುವುದಕ್ಕೆ. ದೂರದ ದೇಶದಲ್ಲಿ ಜರಗುವ ಸಣ್ಣ ಪುಟ್ಟ ಘಟನೆಗಳು ನಮ್ಮ ದೇಶದ ಸ್ಟಾಕ್ ಮಾರ್ಕೆಟ್ನನ್ನ ಅಲ್ಲಾಡಿಸುವ ಶಕ್ತಿ ಹೊಂದಿದ್ದರೆ ನಮ್ಮ ದೇಶದಲ್ಲಿ ಆಗುವ ಮಹಾ ಚುನಾವಣೆ ಇನ್ನೆಷ್ಟು ಮಹತ್ವದದ್ದು ಎನ್ನುವುದರ ಅರಿವು ನಿಮಗಿರಲಿ. ಹಾಗೆಯೇ ಇಲ್ಲಿ ಅಚಾನಕ್ಕಾಗಿ ಆಗುವ ಬದಲಾವಣೆಗೆ ವೈಜ್ಞಾನಿಕ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ. ಒಂದು ಗುಂಪು ಅಥವಾ ಒಂದು ವರ್ಗದ ಕಲೆಕ್ಟಿವ್ ಸೆಂಟಿಮೆಂಟ್ ಅಷ್ಟೇ. 

1999 ರಿಂದ 2014 ರ ವರೆಗಿನ ಅಂಕಿಅಂಶಗಳನ್ನ ನೋಡುತ್ತಾ ಬಂದರೆ ಷೇರು ಮಾರುಕಟ್ಟೆ ಸ್ಥಿರ ಸರಕಾರ ಬರುತ್ತದೆ ಎನ್ನುವ ಸುಳಿವು ಸಿಕ್ಕಾಗೆಲ್ಲ ಚನ್ನಾಗಿ ಫಲಿತಾಂಶ ನೀಡಿದೆ. ಹೂಡಿಕೆದಾರನಿಗೆ ಸಾಕಷ್ಟು ಹಣವನ್ನ ಕೂಡ ಮರಳಿಸಿದೆ. ಪ್ರಸ್ತುತ ಯಾವ ಸರಕಾರವಿದೆಯೋ ಅದೇ ಸರಕಾರ ವಾಪಸ್ಸು ಬರುತ್ತದೆ ಎನ್ನುವ ಅಂಶ ಷೇರು ಮಾರುಕಟ್ಟೆಯಲ್ಲಿ ಗೂಳಿಯನ್ನ ತರುತ್ತದೆ. ಮರಳಿ ಅಧಿಕಾರಕ್ಕೆ ಬರುವ ಸರಕಾರದ ಬಹಳಷ್ಟು ನೀತಿ ನಿಯಮಗಳು ಮುಂದುವರಿಯುತ್ತವೆ ಎನ್ನುವುದು ಅದರಲ್ಲಿ ಪ್ರಮುಖ ಅಂಶ. ಹೊಸ ಸರಕಾರ ಬಂದರೆ ಅವರು ಯಾವ ಹೊಸ ಖಾಯಿದೆ ತರುವರೋ ಎನ್ನುವುದು ಆತಂಕ. ಒಟ್ಟಿನಲ್ಲಿ 1999 ರಿಂದ 2014 ರ ವರೆಗೆ ಷೇರು ಮಾರುಕಟ್ಟೆ ಚುನಾವಣೆಗೆ ಆರು ತಿಂಗಳು ಮುಂಚೆ ಮತ್ತು ಚುನಾವಣೆಯ ನಂತರದ ಆರು ತಿಂಗಳು ಹೂಡಿಕೆದಾರನಿಗೆ ಮೋಸವನ್ನ ಮಾಡಿಲ್ಲ. 

ನಾವೀಗ 2019 ರ ಮಹಾಚುನಾವಣೆಯ ಫಲಿತಾಂಶದ ಹೊಸ್ತಿಲಿನಲ್ಲಿದ್ದೇವೆ. ಈ ಲೇಖನವ ಓದುವ ವೇಳೆಗೆ ಎಕ್ಸಿಟ್ ಪೋಲ್ ಫಲಿತಾಂಶ ನೀವೆಲ್ಲ ಕಂಡಿದ್ದೀರಿ. ಅದನ್ನ ನಾಳೆ ಪ್ರತ್ಯಕ್ಷ ನೋಡುವ ಆತುರದಲ್ಲಿ ಕೂಡ ಇರುತ್ತೀರಿ. ಇಂದು 23 ಮೇ 2019 ಮೋದಿ ಮತ್ತೊಮ್ಮೆ ಆರಿಸಿ ಬರುವರೇ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕುವ ದಿನ. ಕಳೆದ ಆರು ತಿಂಗಳಿಂದ ಷೇರು ಮಾರುಕಟ್ಟೆಯಲ್ಲಿ ಒಂದು ರೀತಿಯ ಜೋಷ್ ಇದ್ದೆ ಇದೆ. ಎಕ್ಸಿಟ್ ಪೋಲ್ ಫಲಿತಾಂಶ ನೋಡಿದ ನಂತರ ನಮ್ಮ ಸ್ಟಾಕ್ ಮಾರ್ಕೆಟ್ನಲ್ಲಿ ಗೂಳಿಯ ಆರ್ಭಟ ಶುರುವಾಗಿದೆ. ಹಣಕ್ಲಾಸು ಅಂಕಣ ಬರಹದಲ್ಲಿ ಅಂಕಿ-ಅಂಶಗಳನ್ನ ಬೇಕೆಂದೇ ತುಂಬುವುದಿಲ್ಲ. ಏಕೆಂದರೆ ಅಂಕಿಅಂಶಗಳು ಒಂಥರಾ ಸ್ಟಿಲ್ ಫೋಟೋ ಇದ್ದಹಾಗೆ! ಅವುಗಳು ಆ ಕ್ಷಣಕ್ಕೆ ಮಾತ್ರ ಸತ್ಯ. ಅಲ್ಲದೆ ಅಂಕಿಅಂಶಗಳನ್ನ ತಮ್ಮ ಮೂಗಿನ ನೇರಕ್ಕೆ ತಿರುಚಿ ಕೂಡ ಬಳಸಬಹದು. ಇಲ್ಲಿನ ಉದ್ದೇಶವೇನಿದ್ದರೂ ವಸ್ತುಸ್ಥಿತಿಯನ್ನ ಬಿಡಿಸಿ ಹೇಳುವುದಷ್ಟೇ ಕಾಯಕ. ಹೀಗಿದ್ದೂ ಒಂದಷ್ಟು ಅಂಕಿ-ಅಂಶಗಳ ಸಾರವನ್ನ ನೋಡೋಣ ಬನ್ನಿ. 

ಕಳೆದ 14 ವರ್ಷದ ಅಂಕಿ-ಅಂಶಗಳನ್ನ ತಿರುವಿ ಹಾಕಿದರೆ ಸ್ಟಾಕ್ ಮಾರ್ಕೆಟ್ ಚುನಾವಣೆಗೆ ಆರು ತಿಂಗಳು ಮುಂಚೆ ಮತ್ತು ಫಲಿತಾಂಶದ ಆರು ತಿಂಗಳ ನಂತರ 40 ಪ್ರತಿಶತ ಹೆಚ್ಚಾಗುವುದನ್ನ ಕಾಣಬಹದು. ಆ ನಂತರದ ದಿನಗಳಲ್ಲಿ ಅವು ಇನ್ನಷ್ಟು ಏರಬಹದು ಅಥವಾ ಕುಸಿಯಬಹುದು ಆ ಮಾತು ಬೇರೆ. ಅಂದರೆ ಚುನಾವಣೆಯ ಸಮಯ ಮತ್ತು ನಂತರದ ಹಲವು ತಿಂಗಳುಗಳು ಹೂಡಿಕೆದಾರನಿಗೆ 1999ರಿಂದ ಲಾಭವನ್ನ ತಂದು ಕೊಡುತ್ತಲೇ ಬಂದಿವೆ. ಇದನ್ನ ಸೂಕ್ಷ್ಮವಾಗಿ ಅವಲೋಕಿಸಿದಾಗ ತಿಳಿಯುವುದು ಒಂದು ಅಂಶ. ಮಾರುಕಟ್ಟೆ ಸರಕಾರ ಯಾರು ಮಾಡುತ್ತಾರೆ ಎನ್ನುವುದನ್ನ ಅವಲಂಬಿಸಿಲ್ಲ. ಮಾರುಕಟ್ಟೆ ಅವಲಂಬಿಸಿವುದು ಸರಕಾರ ಎಷ್ಟು ಸ್ಥಿರವಾಗಿರುತ್ತದೆ ಎನ್ನುವುದನ್ನ ಹೆಚ್ಚು ಅವಲಂಬಿಸತ್ತದೆ. 543 ಸ್ಥಾನದಲ್ಲಿ ಪಕ್ಷ ಯಾವುದೇ ಇರಲಿ 272ಕ್ಕಿಂತ ಹೆಚ್ಚು ಗಳಿಸಿದರೆ ಅದು ಷೇರು ಮಾರುಕಟ್ಟೆಗೆ ಒಳ್ಳೆಯ ನ್ಯೂಸ್!. ಎಕ್ಸಿಟ್ ಪೋಲ್ ನಲ್ಲಿ ಪ್ರಸ್ತುತ ಸರಕಾರ ಮತ್ತೆ ಮರಳಿ ಅಧಿಕಾರ ಪಡೆಯಲಿದೆ ಎನ್ನುವುದನ್ನ ಹೇಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಕಲರವ ಶುರುವಾಗಿದೆ. 

ಷೇರು ಮಾರುಕಟ್ಟೆ ಇರಬಹದು ಅಥವಾ ನಮ್ಮ ಸಮಾಜವಿರಬಹದು ಎಲ್ಲೆಡೆಯೂ ಜನ ಹುಡುಕುವುದು ಮತ್ತು ಬೆಂಬಲಿಸುವುದು ಒಬ್ಬ ದಕ್ಷ ನಾಯಕನ್ನನ್ನ ಮಾತ್ರ ! ಉದಾಹರಣೆ ನೋಡಿ ಮೋದಿಯವರ ವರ್ಚಸ್ಸು ಎಷ್ಟೇ ಪ್ರಬಲವಿದ್ದರೂ ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರಿಂದರ್ ಎನ್ನುವ ವ್ಯಕ್ತಿಯಲ್ಲಿನ ಶಕ್ತಿಗೆ ಅಲ್ಲಿನ ಜನ ಬೆಂಬಲ ನೀಡಿದರು. ಜನ ಮತ್ತು ಹೂಡಿಕೆದಾರ ಬಯಸುವುದು ಕೇವಲ ಸ್ಥಿರತೆಯನ್ನ ಮಾತ್ರ. ಆ ಸ್ಥಿರತೆ ಅಥವಾ ಭರವಸೆ ಯಾರು ನೀಡುತ್ತಾರೆ ಅವರನ್ನ ಆತ ಬೆಂಬಲಿಸುತ್ತಾನೆ . ಈ ಸತ್ಯವನ್ನ ಅರಿತರೆ ಮೋದಿಯವರನ್ನ ಸೋಲಿಸುವುದು ಕಷ್ಟದ ಮಾತೇನು ಅಲ್ಲ.  ಇರಲಿ. 

ತಡವಿನ್ನೇನು ನಾಳೆ ಮೋದಿಯವರು ಜೈತಯಾತ್ರೆ ಮುನ್ನೆಡರೆ ಕೈಲಾದ ಹಣವನ್ನ ಕೆಳಗಿನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ . ನೆನಪಿಡಿ ಮುಂದಿನ ಆರು ತಿಂಗಳಲ್ಲಿ ಇವುಗಳ ಮೇಲಿನ ಹೂಡಿಕೆ ಖಂಡಿತ ಕುಸಿಯುವುದಿಲ್ಲ. 

  1. ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆಯನ್ನ ನೀಡಲಾಗುತ್ತದೆ. ಹೇಳಿಕೇಳಿ ಇಂದಿಗೂ ಭಾರತ ಕೃಷಿಕರ ರಾಷ್ಟ್ರ. ಹೀಗಾಗಿ ಕೃಷಿ ಭೂಮಿಯ ಮೇಲಿನ ಹೂಡಿಕೆ ಉತ್ತಮ. 
  2.  ಕೌಶಲ್ಯ ವೃದ್ಧಿಸಿಕೊಂಡು ತಮ್ಮದೇ ಅದ ಒಂದು ಸಣ್ಣ ಸಂಸ್ಥೆಯನ್ನ ತೆಗೆದು ಕಾರ್ಯ ನಿರ್ವಹಿಸುವ ಇಚ್ಛೆಯುಳ್ಳ ಯುವ ಜನತೆಗೆ ಬಹಳವೇ ಒಳ್ಳೆಯ ದಿನಗಳು ಕಾದಿವೆ. ಸ್ಕಿಲ್ ಡೆವಲಪ್ಮೆಂಟ್ , ಟ್ರೈನಿಂಗ್ ಇಂತಹ ಕಾರ್ಯ ಕ್ಷೇತ್ರಗಳಲ್ಲಿ ಕೂಡ ಹೂಡಿಕೆ ಮಾಡಬಹದು. 
  3. ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಮುಂದಿನ ಐದು ವರ್ಷ ಅತ್ಯಂತ ಮುಖ್ಯವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಲು ಸರಕಾರ ಸಕಲ ಪ್ರಯತ್ನ ಮಾಡುತ್ತದೆ. ಈ ನಿಟ್ಟಿನಲ್ಲಿ ಕಾರ್ಯ ಸೂಚಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳು ಇರುವುದು ತಿಳಿದ ವಿಷಯ. ಇವು ಅತ್ಯಂತ ವೇಗ ಪಡೆದುಕೊಂಡು ಕಾರ್ಯ ಸಾಧನೆಯತ್ತ ಹೆಜ್ಜೆ ಹಾಕಲಿವೆ. ಗುಜರಾತ್ ನಲ್ಲಿ ಗಿಫ್ಟ್ ಸಿಟಿ ಆಗಲೇ ಪೂರ್ಣ ಪ್ರಮಾಣದ ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆ ಪಡೆದಿದೆ. ಹೀಗಾಗಿ ಈ ಕಾರ್ಯ ಕ್ಷೇತ್ರದಲ್ಲಿ ಕೂಡ ಹೂಡಿಕೆ ಮಾಡಬಹದು. 
  4. ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ ಹೆಚ್ಚು ಹೆಚ್ಚಿನ ಕ್ರೋಡೀಕರಣ ನೋಡಬಹದು. ಹೀಗಾಗಿ ಈ ವಲಯದ ಷೇರುಗಳನ್ನ ಕೂಡ ಕೊಳ್ಳಬಹುದು. 
  5. ವಿಮಾನಯಾನ ಸಂಸ್ಥೆಗಳು ತೀವ್ರವಾಗಿ ನೆಲ ಕಚ್ಚಿವೆ. ಇವುಗಳ ಷೇರನ್ನ ಕೊಳ್ಳಲು ಕೂಡ ಇದು ಉತ್ತಮ ಸಮಯ. ನರೇಂದ್ರ ಮೋದಿಯವರು ಉಡಾನ್ ಯೋಜನೆಯನ್ನ ತ್ವರಿತವಾಗಿ ಜಾರಿಗೆ ತಂದರೆ ಇವುಗಳ ಮೇಲಿನ ಹೂಡಿಕೆ ಬಂಪರ್ ಬೆಳೆಯನ್ನ ತಂದುಕೊಡುತ್ತವೆ. 
ಕೊನೆಮಾತು: ಇಂದಿನ ಫಲಿತಾಂಶ ಮೋದಿಯವರ ಪರವಾಗಿದ್ದರೆ  ನೆಮ್ಮದಿಯಿಂದ ಹೂಡಿಕೆ ಮಾಡಿ ಮುಂದಿನ ಆರು ತಿಂಗಳಲ್ಲಿ ಒಂದಷ್ಟು ಹಣ ಗಳಿಸಬಹದು. ಮೋದಿಯವರಲ್ಲದೆ ಬೇರೆ ಯಾರಾದರೂ ಬರಲಿ ಅಡ್ಡಿಯಿಲ್ಲ ಆದರೆ ಆ ಪಕ್ಷ 272 ಸೀಟನ್ನ ಪಡೆದ ಪಕ್ಷವಾಗಿರಬೇಕು. ಹತ್ತಾರು ಪಕ್ಷಗಳು ಒಟ್ಟಾಗಿ ಆಡಳಿತದ ಚುಕ್ಕಾಣಿ ಹಿಡಿಯುವುದು ಅವರ ಉದ್ಧಾರಕ್ಕೆ ಹೊರತು ಸಮಾಜದ ಉದ್ದಾರಕ್ಕಂತೂ ಖಂಡಿತ ಅಲ್ಲ. ಷೇರು ಮಾರುಕಟ್ಟೆಯಲ್ಲಿ ಸಮಯವೆನ್ನುವುದು ಅತಿ ಮುಖ್ಯ. ಕೊಳ್ಳುವ ಸಮಯ ಮತ್ತು ಮಾರುವ ಸಮಯ ಬಹಳ ಮುಖ್ಯ. ನಿಮ್ಮ ಟೈಮಿಂಗ್ ಸರಿಯಾಗಿದ್ದರೆ ಎಂದಿಗೂ ಗೆಲುವು ನಿಮ್ಮದೆ. ಹೂಡಿಕೆಗೆ ಈ ಸಮಯ ಸರಿಯೇ? ಫಲಿತಾಂಶ ನೋಡಿ ನೀವೇ ನಿರ್ಧರಿಸಿ.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Stay up to date on all the latest ಅಂಕಣಗಳು news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp