ಮೋದಿ 2.೦ ಸರಕಾರದ ಮುಂದಿನ ನೂರು ದಿನದ ನೀಲನಕ್ಷೆಯಲ್ಲೇನಿರಬಹದು?

2014ರಲ್ಲಿ ಸಿಕ್ಕ ಬಹುಮತವನ್ನ ಸರಿಯಾಗಿ ಬಳಕೆ ಮಾಡಿಕೊಂಡು, ಕೇಂದ್ರ ಸರಕಾರ ರಚಿಸಿ ಉತ್ತಮ ಆಡಳಿತ ನೀಡಿದ್ದು ವರವಾಗಿ ಪರಿಣಮಿಸಿ ಪ್ರಧಾನಿ ನರೇಂದ್ರ ಮೋದಿಗೆ 2019 ರಲ್ಲಿ ಕೂಡ ಅದ್ವಿತೀಯ ಜಯವನ್ನ

Published: 30th May 2019 12:00 PM  |   Last Updated: 30th May 2019 12:57 PM   |  A+A-


Modi-2.0 government

ಪ್ರಧಾನಿ ನರೇಂದ್ರ ಮೋದಿ

Posted By : SBV
Source : Online Desk
2014ರಲ್ಲಿ ಸಿಕ್ಕ ಬಹುಮತವನ್ನ ಸರಿಯಾಗಿ ಬಳಕೆ ಮಾಡಿಕೊಂಡು, ಕೇಂದ್ರ ಸರಕಾರ ರಚಿಸಿ ಉತ್ತಮ ಆಡಳಿತ ನೀಡಿದ್ದು ವರವಾಗಿ ಪರಿಣಮಿಸಿ ಪ್ರಧಾನಿ ನರೇಂದ್ರ ಮೋದಿಗೆ 2019 ರಲ್ಲಿ ಕೂಡ ಅದ್ವಿತೀಯ ಜಯವನ್ನ ನೀಡಿದೆ. ಒಬ್ಬ ವ್ಯಕ್ತಿ ಹೇಗೆ ವ್ಯವಸ್ಥೆಯನ್ನ ಬದಲಾಯಿಸಬಲ್ಲ ಎನ್ನುವುದಕ್ಕೆ ಭಾರತದ ಪ್ರಧಾನ ಮಂತ್ರಿ ಉದಾಹರಣೆಯಾಗಿ ನಿಲ್ಲುತ್ತಾರೆ. ಚುನಾವಣೆ ಫಲಿತಾಂಶ ಪೂರ್ಣವಾಗಿ ಘೋಷಣೆಯಾಗುವ ಮುನ್ನವೇ ಮುಂದಿನ ನೂರು ದಿನಗಳಲ್ಲಿ ಏನು ಮಾಡಬೇಕು ಎನ್ನುವ ನೀಲನಕ್ಷೆ ತಯಾರಿಸಲು ತಮ್ಮ ಟೀಮ್ ಗೆ ಆದೇಶ ನೀಡುತ್ತಾರೆ ಎಂದರೆ., ಕೆಲಸ ಮಾಡಿ ಮುಗಿಸಬೇಕೆನ್ನುವ ತುಡಿತ ಎಷ್ಟಿರಬಹದು ಎನ್ನುವುದರ ಅರಿವು ನಿಮ್ಮದಾಗಬಹದು. ಇರಲಿ. ಇಂದಿನ ಲೇಖನದ ಉದ್ದೇಶ ಮುಂದಿನ ನೂರು ದಿನಗಳಲ್ಲಿ ಯಾವ ಕಾರ್ಯಕ್ಷೇತ್ರದಲ್ಲಿ ಅತ್ಯಂತ ತ್ವರಿತಗತಿಯಲ್ಲಿ ಕೆಲಸವಾಗುತ್ತದೆ ಎನ್ನುವುದನ್ನ ಅವಲೋಕಿಸೋಣ. 

ಮಧ್ಯಮವರ್ಗದ ಜನರಿಗೆ: ಸರಕಾರ ಯಾವುದೇ ಬರಲಿ ಮಧ್ಯಮ ವರ್ಗದ ನೋವು ಮಾತ್ರ ತಪ್ಪಿದ್ದಲ್ಲ. ಅತ್ಯಂತ ಬಡ ಜನತೆಗೆ ನೀಡುವ ಯಾವುದೇ ರೀತಿಯ ಸವಲತ್ತು ಇವರಿಗೆ ಸಿಗುವುದಿಲ್ಲ. ದೊಡ್ಡ ಉದ್ದಿಮೆದಾರರಿಗೆ ಸಿಗುವಷ್ಟು ಸರಳವಾಗಿ ಸಾಲ, ತೆರಿಗೆ ವಿನಾಯ್ತಿ ಕೂಡ ಸಿಗುವುದಿಲ್ಲ. ತಿಂಗಳ ಕೊನೆಯಲ್ಲಿ ಸಿಗುವ ಭತ್ಯೆಯನ್ನ ನಂಬಿ ಬದುಕುವ ಮಧ್ಯಮವರ್ಗದ ಜೀವನ ಜಗತ್ತಿನಾದ್ಯಂತ ಕಷ್ಟಮಯ. ಮೋದಿ 2.0 ಸರಕಾರ ಇಂಟಿರಿಮ್ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ತೆರಿಗೆ ವಿನಾಯ್ತಿಯನ್ನ ಪೂರ್ಣ ಪ್ರಮಾಣದ ಬಜೆಟ್ ಅನುಮೋದನೆ ಮಾಡುವ ಸಾಧ್ಯತೆಗಳು ನಿಚ್ಚಳವಾಗಿದೆ. ಮಧ್ಯಮವರ್ಗದ ಕೈಯಲ್ಲಿ ತಿಂಗಳ ಕೊನೆಯಲ್ಲಿ ನಾಲ್ಕು ಕಾಸು ಉಳಿಸುವ ಪ್ರಯತ್ನ ಮಾಡಲಾಗುತ್ತದೆ. 

ಜಿಎಸ್ಟಿ ಕಥೆಯೇನು: ಜಿಎಸ್ಟಿ ದರವನ್ನ ಸಾಧ್ಯವಾದಷ್ಟು ಕಡಿಮೆ ಮಾಡುವ ಸಾಧ್ಯತೆಗಳು ಕೂಡ ಹೆಚ್ಚಾಗಿದೆ. ಈಗಿರುವ ಅತಿ ಹೆಚ್ಚು 28 ಪ್ರತಿಶತ ತೆರಿಗೆಯನ್ನ ಬಹುಪಾಲು ತೆಗೆದುಹಾಕುವ ಸಾಧ್ಯತೆಗಳಿವೆ. ಜೊತೆಗೆ ಸಾಮಾನ್ಯ ಮತ್ತು ಸಣ್ಣ ಪುಟ್ಟ ವರ್ತಕರಿಗೆ ಜಿಎಸ್ಟಿ ಮತ್ತಷ್ಟು ಸರಳಗೊಳಿಸಿ ತಿಂಗಳಲ್ಲಿ ಒಂದು ಬಾರಿ ಒಂದು ಗಂಟೆ ವ್ಯಯಿಸಿ ಎಲ್ಲಾ ಜಿಎಸ್ಟಿ ಸಂಬಂಧಿಸಿದ ಕಾಗದ ಪತ್ರವನ್ನ ಮುಗಿಸಿಕೊಳ್ಳಲು ಸಾಧ್ಯವಾಗುವ ಹಾಗೆ ಮಾಡುವ ಸಂಭಾವ್ಯತೆಗಳಿವೆ. ನೆನೆಪಿರಲಿ ಜಿಎಸ್ಟಿ ಲಾಗೊ ಮಾಡಿದ್ದರಿಂದ ಮಾಹಿತಿ ಕೊರತೆ ಮತ್ತು ಹೆಚ್ಚು ನಿಬಂಧನೆಗಳಿಂದ ಸಣ್ಣ ಪುಟ್ಟ ವರ್ತಕರು ಇಂದಿಗೂ ಕಿರಿ-ಕಿರಿ ಅನುಭವಿಸುತ್ತಿದ್ದಾರೆ. 

ಏವಿಯೇಷನ್ ಕಾರ್ಯಕ್ಷೇತ್ರ: ಭಾರತದಲ್ಲಿ ವಿಮಾನಯಾನ ಸಂಸ್ಥೆಗಳು ಅನುಭವಿಸುತ್ತಿರುವ ನಷ್ಟ ಇಂದು ಮನೆಮಾತು. ಈ ಕ್ಷೇತ್ರದಲ್ಲಿ ಹೊಸ ಕಾರ್ಯಸೂಚಿ ತರುವ ಸಾಧ್ಯತೆಗಳು ಕೂಡ ಹೆಚ್ಚಾಗಿದೆ. 

ಬ್ಯಾಂಕಿಂಗ್: ದಿವಾಳಿ ಕಾನೂನಿಗೆ ತಿದ್ದುಪಡಿ ಜೊತೆಗೆ ಹೆಚ್ಚಿನ ನಿಬಂಧನೆಗಳನ್ನ ಅಳವಡಿಸುವ ಮೂಲಕ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನ ಸ್ವಚ್ಛಗೊಳಿಸಲು ಖಂಡಿತ ಮೊದಲ ನೂರು ದಿನದಲ್ಲಿ ಪ್ರಯತ್ನಗಳಾಗುವ  ಸಾಧ್ಯತೆಯಿದೆ. ಏಕೆಂದರೆ ಇನ್ನು ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಹೇಳಿಕೊಳ್ಳುವಷ್ಟು ಸುಭದ್ರವಾಗಿಲ್ಲ. ಹಲವು ಹತ್ತು ಬ್ಯಾಂಕ್ಗಳು ಆಗಲೇ ವಿಲೀನಗೊಂಡಿರುವುದು ತಿಳಿದ ವಿಷಯವೇ ಆಗಿದೆ. 

ಖಾಸಗೀಕರಣ: ನಮ್ಮ ಏರ್ಪೋರ್ಟ್ ಗಳಿರಬಹದು, ಬಂದರು ಅಥವಾ ಬ್ಯಾಂಕ್... ಇವೆಲ್ಲವನ್ನ ಖಾಸಗೀಕರಣ ಮಾಡುವ ಸಾಧ್ಯತೆಯನ್ನ ಕೂಡ ಅಲ್ಲೆಗೆಳೆಯಲು ಬರುವುದಿಲ್ಲ. ಮುಂದಿನ ನೂರು ದಿನದಲ್ಲಿ ಮೇಲೆ ಹೇಳಿದ ಒಂದೆರೆಡು ಕಾರ್ಯಕ್ಷೇತ್ರ ಬದಲಾಗಬಹದು ಆದರೆ ಮುಂದಿನ ಐದು ವರ್ಷದಲ್ಲಿ ಬಹಳಷ್ಟು ಕಾರ್ಯಕ್ಷೇತ್ರಗಳು ಖಾಸಗೀಕರಣಗೊಳ್ಳಲಿವೆ.  

ಮೂಲಭೂತ ಸೌಕರ್ಯ: ಮೆಟ್ರೋ ರೈಲು ಯೋಜನೆಗಳು, ರೈಲು, ರಸ್ತೆ ಹೀಗೆ ಯಾವುದೇ ಅಪೂರ್ಣ ಕಾರ್ಯಗಳು ಮುಂದಿನ ನೂರು ದಿನದಲ್ಲಿ ರಾಜ್ಯ ಯಾವುದೇ ಇರಲಿ ಬೇಗ ಮುಗಿಸಲು ಒತ್ತಡ ಮತ್ತು ಹಣಕಾಸು ಸರಬರಾಜು ಆಗಲಿದೆ. 

ಆರೋಗ್ಯ: ಮುಂದಿನ ನೂರು ದಿನಗಳಲ್ಲಿ ಐದು ಸಾವಿರ ಜನೌಷಧಿ ಕೇಂದ್ರಗಳನ್ನ ಭಾರತದಾತ್ಯಂತ ತೆಗೆಯಲು ಕಾರ್ಯಸೂಚಿ ಹೊರಡಿಸುವಂತೆ ಹೇಳಲಾಗಿದೆ ಎನ್ನುವುದು ಕೂಡ ಆರೋಗ್ಯಕರ ವಿಷಯವಾಗಿದೆ. 

ಕೆಲಸದ ಸೃಷ್ಟಿ: ಮುಂಬರುವ ದಿನಗಲ್ಲಿ ಹೊಸ ಕೆಲಸದ ಸೃಷ್ಟಿಯ ಬಗ್ಗೆ ಕೂಡ ಹೆಚ್ಚಿನ ಆದ್ಯತೆಯನ್ನ ನೀಡಲಾಗುತ್ತದೆ. ಮೋದಿ 1.0 ಸರಕಾರಕ್ಕೆ ಹೆಚ್ಚಿನ ಕೆಲಸ ಸೃಷ್ಟಿ ಮಾಡಿಲ್ಲ ಎನ್ನುವ ಕಳಂಕವಿದೆ. ಹೀಗಾಗಿ ಮೊದಲ ನೂರು ದಿನದಲ್ಲಿ ಈ ಕಳಂಕವನ್ನ ತೋಡಿಕೊಳ್ಳಲು ಪ್ರಯತ್ನಗಳಾಗುತ್ತವೆ. 

ವ್ಯಾಪಾರ,ಅಭಿವೃದ್ಧಿ: ಭಾರತದ ಜಿಡಿಪಿ ಕುಸಿಯದಂತೆ ಜೊತೆಗೆ ಗ್ರೋಥ್ ರೇಟ್ ಹೆಚ್ಚಾಗುವಂತೆ ಮಾಡಲು ಸ್ಟ್ರಾಟರ್ಜಿ ರೂಪಿಸಲಾಗುತ್ತದೆ. ಗಮನಿಸಿ ಚೀನಾ ಅಮೇರಿಕಾ ಟ್ರೇಡ್ ವಾರ್ನಿಂದ ನೋಡಿರುವ ಔಷದ ತಯಾರಕ ಸಂಸ್ಥೆಗಳು, 200 ಕ್ಕೂ ಹೆಚ್ಚು ಉತ್ಪಾದನಾ ಘಟಕಗಳು ಚೀನಾದಿಂದ ಹೊರಬಂದು ಭಾರತದಲ್ಲಿ ನೆಲೆ ಕಂಡುಕೊಳ್ಳಲು ಹವಣಿಸುತ್ತಿವೆ. ಇದೀಗ ಭಾರತದಲ್ಲಿ ಬಂದಿರುವ ಸುಭದ್ರ ಸರಕಾರ ಈ ಸಂಸ್ಥೆಗಳ ಹುಮ್ಮಸ್ಸು ಮತ್ತಷ್ಟು ಹೆಚ್ಚಿಸಿದೆ. ಮೊದಲ ನೂರು ದಿನದ ಕಾರ್ಯಸೂಚಿಯಲ್ಲಿ ಚೀನಾದಿಂದ ಇಂತಹ ಬಹಳ ಸಂಸ್ಥೆಗಳನ್ನ ಭಾರತಕ್ಕೆ ಕರೆತರುವ ಪ್ರಯತ್ನಗಳಾಗುತ್ತವೆ. ಹೀಗಾಗಿ ಚೀನಾದೊಂದಿಗೆ ಟ್ರೇಡ್ ಡೆಫಿಸಿಟ್ ಕೂಡ ಕಡಿಮೆಯಾಗುತ್ತದೆ. ಅಮೆರಿಕಾ ಕೂಡ ಫಾರ್ಮಾ ಕಂಪನಿಗಳಿಗೆ ಚೀನಾ ಬಿಟ್ಟು ಭಾರತಕ್ಕೆ ಹೋಗುವಂತೆ ಕುಮ್ಮುಕ್ಕು ಕೊಡುವ ಸಾಧ್ಯತೆಗಳಿವೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾ ಕುಸಿಯುವುದು ಅಮೆರಿಕಾದ ಪ್ರಮುಖ ಆದ್ಯತೆ. 

ಸಾಫ್ಟ್ವೇರ್ ಸಂಸ್ಥೆಗಳಿಗೆ ಸಿಹಿ ಸುದ್ದಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಫ್ಟ್ವೇರ್ ಮಾರುಕಟ್ಟೆ ಈಗ ಇರುವುದಕ್ಕಿಂತ ಹತ್ತು ಪಟ್ಟು ಹೆಚ್ಚಿಸುವ ಗುರಿಯನ್ನ ಕೇಂದ್ರ ಸರಕಾರ ಹಾಕಿಕೊಂಡಿದೆ. 2025ರ ಒಳಗೆ ಇದನ್ನ ಸಾಧಿಸಿ ತೋರಿಸಬೇಕು ಎನ್ನುವುದು ಗುರಿ. ಈ ನಿಟ್ಟಿನಲ್ಲಿ ಸಾಫ್ಟ್ವೇರ್ ನವೋದ್ದಿಮೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮುಂದಿನ ನೂರು ದಿನದಲ್ಲಿ ಕೇಂದ್ರ ಸರಕಾರ ಹೊರಡಿಸುವ ಪ್ರತಿಯೊಂದು ಆದೇಶವನ್ನ ಕಾಡು ನೋಡುವುದು ಒಳ್ಳೆಯದು. ಸಾಫ್ಟ್ವೇರ್ ಸ್ಟಾರ್ಟ್ ಅಪ್ ಗಳಿಗೆ ಶುಭ ಸುದ್ದಿ ಬಂದೆ ಬರುತ್ತದೆ. 

ಕನ್ಸ್ಟ್ರಕ್ಷನ್, ಟೆಕ್ಸ್ ಟೈಲ್ಸ್ ಮತ್ತು ಟೂರಿಸಂ: ಈ ಕ್ಷೇತ್ರದಲ್ಲಿ ಕೂಡ ಅಮೂಲಾಗ್ರ ಬದಲಾವಣೆಗಳನ್ನ ನಿರೀಕ್ಷಿಸಬಹದು. 

ಮೇಲೆ ಹೇಳಿದ ಮತ್ತು ಹೇಳದೆ ಉಳಿದ ಹೆಚ್ಚು ಕಡಿಮೆ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಕೆಲಸದ ಕಿಡಿ ಖಂಡಿತ ಹಚ್ಚಲಾಗುತ್ತದೆ. ಮೋದಿ 2.0 ಸರಕಾರ ಮೋದಿ 1.0 ಸರಕಾರಕ್ಕಿಂತ ಹೆಚ್ಚು ಬಲಿಷ್ಠವಾಗಿದೆ. ಮೊದಲ ಸರಕಾರದಲ್ಲಿ ಮೋದಿಯವರಿಗಿದ್ದ ಆಂತರಿಕ ಅಡೆತಡೆಗಳು ಕೂಡ ಈಗಿಲ್ಲ. ಹೀಗಾಗಿ ಮೊದಲ ನೂರು ದಿನದಲ್ಲಿ ಧಮಾಕ ಎನ್ನುವ ಮಟ್ಟಿಗಿನ ಬದಲಾವಣೆಯನ್ನ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. 

ಕೊನೆ ಮಾತು: ಚುನಾವಣೆಯ ಭಾಷಣಗಳಲ್ಲಿ ಅಭಿವೃದ್ಧಿಯ ಮಾತುಗಳು 2014 ಕ್ಕೆ ಹೋಲಿಸಿ ನೋಡಿದರೆ ಈ ಬಾರಿ ಬಹಳ ಕಡಿಮೆಯಿತ್ತು. ಆದರೆ ಈ ಪ್ರಾಕ್ಟಿಕಲ್ ಆಗಿ ಅಭಿವೃದ್ಧಿಯೇ ಜಪವಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಮುಂದಿನ ಐದು ವರ್ಷ ನಿರೀಕ್ಷೆ , ನಂಬಿಕೆ , ವಿಶ್ವಾಸದ ವರ್ಷಗಳಾಗಲಿವೆ . ಅಚ್ಚೇದಿನ್ ಸ್ಪಷ್ಟವಾಗಿ ಸಾಮಾನ್ಯ ಜನರ ಕಣ್ಣಿಗೂ ಕಾಣುವ ಮಟ್ಟಿನ ಬದಲಾವಣೆಯಾಗಲಿದೆ. ನೆನಪಿರಲಿ ಜಗತ್ತಿನ ಯಾವ ದೇಶದಲ್ಲೂ ಜಿಎಸ್ಟಿ ಮತ್ತು ಡಿಮೋನಿಟೈಸಷನ್ ಮಾಡಿದ ಸರಕಾರ ಗೆದ್ದು ಮತ್ತು ಅಧಿಕಾರ ಹಿಡಿದ ಉಲ್ಲೇಖವಿಲ್ಲ. ಅದು ಭಾರತದಲ್ಲಿ ಆಗಿದೆ. ಇನ್ನೇನಿದ್ದರೂ ನಿರೀಕ್ಷೆ. ಕೆಲಸ ಮತ್ತು ಬದಲಾವಣೆಯಾಗುತ್ತದೆ ಎನ್ನುವುದು ನಂಬಿಕೆ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Stay up to date on all the latest ಅಂಕಣಗಳು news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp