ಹಣಕ್ಲಾಸು: ವಿತ್ತ ಪ್ರಪಂಚದಲ್ಲಿ ಸ್ಥಿರವಾಗಿದೆ ಅಸ್ಥಿರತೆ! ಹೂಡಿಕೆಗೆ ಮುನ್ನ ಜಾಗ್ರತೆ!!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಹಣಕ್ಲಾಸು: ವಿತ್ತ ಪ್ರಪಂಚದಲ್ಲಿ ಸ್ಥಿರವಾಗಿದೆ ಅಸ್ಥಿರತೆ! ಹೂಡಿಕೆಗೆ ಮುನ್ನ ಜಾಗ್ರತೆ!!
ಹಣಕ್ಲಾಸು: ವಿತ್ತ ಪ್ರಪಂಚದಲ್ಲಿ ಸ್ಥಿರವಾಗಿದೆ ಅಸ್ಥಿರತೆ! ಹೂಡಿಕೆಗೆ ಮುನ್ನ ಜಾಗ್ರತೆ!!

ಜಗತ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಅನಿಶ್ಚಿತತೆಯಿಂದ ತುಂಬಿದೆ. ಅದರಲ್ಲೂ ವಿತ್ತ ಜಗತ್ತಿನಲ್ಲಿ ತಲ್ಲಣಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ವಿತ್ತ ಜಗತ್ತಿನ ಎರಡು ಪ್ರಮುಖ ರಾಷ್ಟ್ರಗಳ ನಡುವಿನ ಜಟಾಪಟಿ. ಅಮೆರಿಕಾ ಮತ್ತು ಚೀನಾ ನಡುವಿನ ಟ್ರೇಡ್ ವಾರ್ ನಿಲ್ಲುವ ಯಾವ ಸೂಚನೆಯಿಲ್ಲ. ಚೀನಾ ದೇಶ ನಮ್ಮೊಂದಿಗೆ ಟ್ರೇಡ್ ಡೀಲ್ ಅಥವಾ ವ್ಯಾಪಾರ ಒಪ್ಪಂದ ಮಾಡಿಕೊಳ್ಳದಿದ್ದರೆ ಇನ್ನಷ್ಟು ಸುಂಕವನ್ನ ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆನ್ನೆ (19/11/2019) ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಂದ ಕೆಲವೇ ಹೊತ್ತಿನಲ್ಲಿ ಪೂರ್ಣ ಏಷ್ಯಾದ ಷೇರು ಮಾರುಕಟ್ಟೆ ಕುಸಿತ ಕಂಡಿದೆ.

ಕಳೆದ ಆರು ತಿಂಗಳಿಂದ ಹಾಂಗ್ ಕಾಂಗ್ ನಲ್ಲಿ ಜನ ತಮ್ಮ ಪ್ರದೇಶದಲ್ಲಿ ಚೀನಾದ ಹಸ್ತಕ್ಷೇಪ ಹೆಚ್ಚಾಗದಂತೆ ತಡೆಯಲು ಧರಣಿ ಮಾಡುತ್ತಿದ್ದಾರೆ. ಬ್ರಿಟಿನ್ ನಿಂದ ಚೀನಾಗೆ ಹಾಂಗ್ ಕಾಂಗ್ ಹಸ್ತಾಂತರ ಆದ ದಿನದಿಂದ ಹಾಂಗ್ ಕಾಂಗ್ ಜನ ಹಾಂಗ್ ಕಾಂಗ್ ಆಡಳಿತವನ್ನ ನಡೆಸುತ್ತಾರೆ ಎನ್ನುವ ನೀತಿಯನ್ನ ಪಾಲಿಸಿಕೊಂಡು ಬಂದಿದೆ. ಒಂದು ದೇಶ ಎರಡು ವ್ಯವಸ್ಥೆಯನ್ನ ಚೀನಾ ಹೆಚ್ಚು ದಿನ ಸಹಿಸಿಕೊಂಡು ಬರುವುದು ಸಾಧ್ಯವಿಲ್ಲದ ಮಾತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. 

ಅಮೆರಿಕ ತನ್ನ ಸೆನೆಟ್ ನಲ್ಲಿ ಚೀನಾದ ವಿರುದ್ಧ ಪ್ರತಿಭಟಿಸುತ್ತಿರುವ ಹಾಂಗ್ ಕಾಂಗ್ ಪ್ರತಿಭಟನಾಕಾರರಿಗೆ ಬೆಂಬಲ ನೀಡುವ ನಿಲುವನ್ನ ಅಂಗೀಕರಿಸಿದೆ. ಸೆನಟ್ ನಲ್ಲಿ ಇದಕ್ಕೆ ಯಾರೊಬ್ಬರೂ ಚಕಾರವೆತ್ತದೆ ಒಮ್ಮತದ ನಿರ್ಣಯ ಕೈ ಕೊಂಡಿದ್ದಾರೆ. ಇದು ಚೀನಾಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. 

ಚೀನಾದ ವಿದೇಶಾಂಗ ಮಂತ್ರಿ ಅಮೆರಿಕಾದ ಈ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಮತ್ತು ಏಷ್ಯಾ ಖಂಡದಲ್ಲಿ ಅಮೆರಿಕ ತನ್ನ ಬಾಹುಬಲವನ್ನ ಪ್ರದರ್ಶಿಸುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಚೀನಾದ ಸೈನಿಕರು ಹಾಂಗ್ ಕಾಂಗ್ ನಲ್ಲಿ ಆಗಲೇ ಜಮಾಯಿಸ ತೊಡಗಿದ್ದಾರೆ. 

ಗಂಡ ಹೆಂಡತಿ ನಡುವೆ ಕೂಸು ಬಡವಾಯ್ತು ಎನ್ನುವ ನಾಣ್ನುಡಿಯಂತೆ ಚೀನಾ ಮತ್ತು ಅಮೆರಿಕ ನಡುವಿನ ಕಾದಾಟದಲ್ಲಿ ವಿತ್ತ ಜಗತ್ತು ಬಡವಾಗುತ್ತಿದೆ. ಜಪಾನ್ ದೇಶದ ರಫ್ತು ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಎನ್ನುವ ಮಟ್ಟವನ್ನ ಮುಟ್ಟಿದೆ. ಇದೆ ವರ್ಷದ ಅಕ್ಟೋಬರ್ ತಿಂಗಳಲ್ಲಿ ಒಟ್ಟು 9.2 ಪ್ರತಿಶತ ಕುಸಿತ ಕಂಡಿದೆ. ಕಾರು ಮತ್ತು ಏರ್ ಕ್ರಾಫ್ಟ್ ಎಂಜಿನ್ ಗಳ ಮೇಲಿನ ಕುಸಿದ ಬೇಡಿಕೆ ಇಂತಹ ಒಂದು ಸನ್ನಿವೇಶವನ್ನ ಸೃಷ್ಟಿಸಿದೆ. ಜಪಾನ್ ದೇಶದಲ್ಲಿ ಈಗಾಗಲೇ ಬ್ಯಾಂಕ್ಗಳ ಸ್ಥಿತಿ ಚಿಂತಾಜನಕವಾಗಿದೆ. ನೆಗಟೀವ್ ಬಡ್ಡಿ ದರ ಎನ್ನುವ ಭೂತ ಅವರನ್ನ ಕಾಡಲು ಶುರುವಾಗಿದೆ. ಹೀಗಾಗಿ ಜಪಾನ್ ಈ ವರ್ಷಾಂತ್ಯ ಅಥವಾ ಹೆಚ್ಚೆಂದರೆ ಮುಂದಿನ ವರ್ಷದ ಮೊದಲ ಮೂರು ಮಾಸಗಳಲ್ಲಿ ರಿಸೆಶನ್ ಗೆ ಪ್ರವೇಶಿಸುವ ಸಾಧ್ಯತೆಗಳು ಬಹಳ ಹೆಚ್ಚಾಗಿದೆ. ಸರಕಾರ ಈಗಾಗಲೇ 10 ಟ್ರಿಲಿಯನ್ ಯೆನ್ ಅಂದರೆ 92 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಸಮಾಜದಲ್ಲಿನ ಸಮತೋಲನ ಕಾಪಾಡಲು ವ್ಯಯಿಸಿದೆ ಎನ್ನುತ್ತದೆ ಅಂಕಿ-ಅಂಶ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ನೀಡುವ ಸ್ಥಿತಿಯಲ್ಲಿ ಸರಕಾರವಿಲ್ಲ ಎಂದು ಅಲ್ಲಿನ ಕಾನೂನು ಮತ್ತು ಆರ್ಥಿಕ ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಅಮೆರಿಕದ ಸ್ಥಿತಿಯೂ ಕೂಡ ಹೆಚ್ಚೇನೂ ಉತ್ತಮವಾಗಿಲ್ಲ. ಅಮೆರಿಕದಲ್ಲಿ ನಡೆಯುತ್ತಿರುವ ಮಂದಗತಿಗೆ ಫೆಡರಲ್ ಬಡ್ಡಿ ದರವೇ ಕಾರಣ ಎಂದು ಡೊನಾಲ್ಡ್ ಟ್ರಂಪ್ ದೂರಿದ್ದಾರೆ. ಬಡ್ಡಿ ದರವನ್ನ ಇಳಿಸುವುದಷ್ಟೇ ಅಲ್ಲ ಅದನ್ನ ನೆಗಟಿವ್ ದರಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದು ಅವರ ಉದ್ದೇಶ. ಫೆಡರಲ್ ಬ್ಯಾಂಕಿನ ನಿಲುವುಗಳು ಮತ್ತು ಅದರ ಕಾರ್ಯವೈಖರಿಯ ಬಗ್ಗೆ ಎಲ್ಲರ ಮುಂದೆ ತಮ್ಮ ಅಸಮಾಧಾನವನ್ನ ಹೊರಹಾಕುತ್ತಿದ್ದಾರೆ. ಬ್ಯಾಂಕಗಳ ಬಡ್ಡಿ ದರವನ್ನ ಋಣಾತ್ಮಕ ಮಾಡಿ, ಏಕಿಷ್ಟು ಪುಕ್ಕಲು ತನದಿಂದ ವರ್ತಿಸುತ್ತೀರಿ ಎನ್ನುವ ಮಾತನ್ನ ಕೂಡ ಟ್ರಂಪ್ ಆಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸವಾಲು ಟ್ರಂಪ್ ಅವರ ಮುಂದಿದೆ. ಹೀಗಾಗಿ ಅವರು ಜಯಗಳಿಸಲು ಇರುವ ಯಾವ ಅವಕಾಶವನ್ನೂ ಕೈ ಚೆಲ್ಲಲು ಸಿದ್ಧರಾಗಿಲ್ಲ. ಭಾರತದ ಜೊತೆಗೆ ಉತ್ತಮ ಬಾಂಧವ್ಯದ ಜೊತೆಗೆ ಅಮೆರಿಕದಲ್ಲಿನ ಇನ್ನೊಂದು ಅತ್ಯಂತ ಪ್ರಬಲ ಜನಾಂಗ ಯಹೂದಿಗಳನ್ನ ಓಲೈಸುವ ದೃಷ್ಟಿಯಿಂದ ಜೆರುಸೆಲಂ ಅನ್ನು ಇಸ್ರೇಲಿನ ರಾಜಧಾನಿ ಎಂದು ಒಪ್ಪಿಕೊಂಡಿದೆ. ಇಷ್ಟು ದಿನ ಜೆರುಸೆಲಂ ಅನ್ನು ಇಸ್ರೇಲ್ ನ ರಾಜಧಾನಿ ಎಂದು ಅಧಿಕೃತವಾಗಿ ಅಮೆರಿಕ ಕೂಡ ಒಪ್ಪಿಕೊಂಡಿರಲಿಲ್ಲ. ಅದೇನಿದ್ದರೂ ಹಿಂದಿನಿಂದ ಬೆಂಬಲ ನೀಡುತ್ತಾ ಬಂದಿತ್ತು. ಇದೀಗ ಬಾಹ್ಯ ಬೆಂಬಲ ನೀಡಿದೆ. 

ಚೀನಾ ಮತ್ತು ಭಾರತದಿಂದ ಅಮೆರಿಕ ದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಬಹಳ. ಇತ್ತೀಚಿಗೆ ಈ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಅಮೆರಿಕ ವರ್ಷವೊಂದಕ್ಕೆ ಒಂದು ಮಿಲಿಯನ್ ನೋಂದಣಿ ಮಾಡಿಕೊಳ್ಳುತ್ತದೆ. ಹತ್ತಿರ ಹತ್ತಿರ 41 ಬಿಲಿಯನ್ ಮಾರುಕಟ್ಟೆ ಇದರಿಂದ ಸೃಷ್ಟಿಯಾಗಿದೆ. 2018/19ನೇ ಸಾಲಿನಲ್ಲಿ ಇದರಲ್ಲಿ 6.6 ಪ್ರತಿಶತ ಕುಸಿತ ಕಂಡಿದೆ. ಇದರಿಂದ ಅಮೆರಿಕ ಬಿಲಿಯನ್ ಲೆಕ್ಕದಲ್ಲಿ ಹಣವನ್ನ ಕಳೆದುಕೊಳ್ಳಲಿದೆ. ಅಮೆರಿಕ ಮಾರುಕಟ್ಟೆ ಕೂಡ ರಿಸೆಶನ್ ನಲ್ಲಿದೆ ಆದರೆ ಅದನ್ನ ಅಧಿಕೃತವಾಗಿ ಒಪ್ಪಿಕೊಳ್ಳುವ ದಾಷ್ಟಿಕತೆ ಮಾತ್ರ ಯಾರೂ ತೋರುತ್ತಿಲ್ಲ. 2020 ರ ಚುನಾವಣೆಯ ನಂತರ ಈ ಅಂಶವನ್ನ ಅಧಿಕೃತವಾಗಿ ಒಪ್ಪಿಕೊಳ್ಳುವ ಸಾಧ್ಯತೆಯಿದೆ. 

ಹೀಗೆ ಜಗತ್ತಿನ ಪ್ರಮುಖ ಮನಿ ಸ್ಪಿನ್ನರ್ ದೇಶಗಳು ಆರ್ಥಿಕ ಮಂದಗತಿಯಿಂದ ಬಳಲುತ್ತಿರುವುದು ಹೆಚ್ಚು ಕಡಿಮೆ ಗೊತ್ತಿದ್ದೂ ಗೊತ್ತಿಲ್ಲದೇ ಇರುವ ವಿಷಯವಾಗಿದೆ. ಇವೆಲ್ಲವುಗಳ ನಡುವೆ 'ಭಾರತ ಆರ್ಥಿಕತೆಗೆ ವೇಗವಾಗಿ ಚೇತರಿಸಿಕೊಳ್ಳುವ ಮತ್ತು ವೇಗವಾಗಿ ಬೆಳೆಯುವ ತಾಕತ್ತಿದೆ' ಎನ್ನುವ ಹೇಳಿಕೆ ನೀಡಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯಲಿದೆ ಇದರಿಂದ ಭಾರತದ ಲಕ್ಷಾಂತರ ಬಡವರು ಬಡತನದ ರೇಖೆಯಿಂದ ಹೊರಬಂದು ಉತ್ತಮ ಜೀವನ ನಡೆಸಲಿದ್ದಾರೆ ಎನ್ನುವುದು ಬಿಲ್ ಗೇಟ್ಸ್ ಮಾತು. 

ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳಲ್ಲಿ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿವೆ. ಹೂಡಿಕೆದಾರರು ಈ ಕ್ಷೇತ್ರದ ಕಡೆ ಹೆಚ್ಚಿನ ಗಮನ ನೀಡಬಹದು. 

ಇನ್ನು ನಮ್ಮ ನೆರೆಯ ಪಾಕಿಸ್ತಾನ ದಿವಾಳಿಯ ಅಂಚಿನಲ್ಲಿದೆ. ಯಾವ ಕ್ಷಣದಲ್ಲಿ ಬೇಕಾದರೂ ಅಲ್ಲಿನ ಪ್ರಧಾನಿ ಇಮ್ರಾನ್ ಖಾನರ ವಿರುದ್ದು ಸೈನ್ಯ ದಂಗೆ ಏಳುವ ಸಾಧ್ಯತೆಗಳಿವೆ. ವಸ್ತು ಸ್ಥಿತಿ ಹೀಗಿದ್ದೂ ಆ ದೇಶ ಆರ್ಥಿಕತೆಯ ಪಾಠ ಕಲಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ . ಸರ್ಫೇಸ್ ಟು ಸರ್ಫೇಸ್ ಬ್ಯಾಲಿಸ್ಟಿಕ್ ಮಿಸೈಲ್ ಅನ್ನು 18/11/2019 ರ ಸೋಮವಾರದಂದು ಟೆಸ್ಟ್ ಮಾಡಿದೆ. ಆರೋಗ್ಯ, ಶಿಕ್ಷಣಕ್ಕೆ ತುರ್ತಾಗಿ ಬೇಕಾಗಿದ್ದ ಹಣವನ್ನ ಹೀಗೆ ಮಿಸೈಲ್ ಉಡಾಯಿಸುವುದರಲ್ಲಿ ಅದು ಪೋಲು ಮಾಡುತ್ತಿದೆ. 

ಕೊನೆ ಮಾತು: ವಿತ್ತ ಜಗತ್ತು ಹೆಚ್ಚು ತಲ್ಲಣದ ಸಂಕ್ರಮಣ ಸ್ಥಿತಿಯಲ್ಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಅನಿಶ್ಚಿತತೆ ಇರುತ್ತದೆ. ಯಾವುದೇ ಹೂಡಿಕೆ ಮಾಡುವ ಮುನ್ನ ಅದರ ಆಳ ಅಗಲವನ್ನ ಅರಿತು ಹೂಡಿಕೆ ಮಾಡುವುದು ಉತ್ತಮ. 2020ರ ಅಂತ್ಯದ ವರೆಗೆ ಈ ಅನಿಶ್ಚಿತತೆ ಮುಂದುವರಿಯಲಿದೆ. ಅಮೆರಿಕ ದೇಶದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ವಿತ್ತ ಜಗತ್ತಿನಲ್ಲಿ ಒಂದಷ್ಟು ಚೈತನ್ಯ ಮತ್ತು ಹುರುಪು ತರಬಹದು ಎನ್ನುವುದು ಸದ್ಯದ ಆಶಾವಾದ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com