ಹಣಕ್ಲಾಸು: ನಿಮ್ಮ ಹಣದ ನಿಜವಾದ ಮೌಲ್ಯವೆಷ್ಟು? 

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 28th November 2019 07:20 AM  |   Last Updated: 28th November 2019 07:22 AM   |  A+A-


ನಿಮ್ಮ ಹಣದ ನಿಜವಾದ ಮೌಲ್ಯವೆಷ್ಟು?

Posted By : Srinivas Rao BV
Source : Online Desk

ಹಣವನ್ನ ಎಲ್ಲಿಯೂ ಹೂಡಿಕೆ ಮಾಡದೆ ಮನೆಯ ಕಪಾಟಿನಲ್ಲಿ ಇಟ್ಟರೆ ಅದು ಸಮಯಕ್ಕೆ ತಕ್ಕಂತೆ ತನ್ನ ಮೌಲ್ಯವನ್ನ ಕಳೆದುಕೊಳ್ಳುತ್ತದೆ. ಅಂದರೆ ನಿಮ್ಮ ಬಳಿ 2000 ಇಸವಿಯಲ್ಲಿ 5 ಲಕ್ಷ ರೂಪಾಯಿ ಇದ್ದು ಅದನ್ನ ನೀವು ಹೂಡಿಕೆ ಮಾಡದೆ ಕಪಾಟಿನಲ್ಲಿ ಇಟ್ಟಿದ್ದರೆ ಅದರ ಮೌಲ್ಯ ಬಹಳ ಕಡಿಮೆಯಾಗಿರುತ್ತಿತ್ತು. ಅದೇ ಹಣವನ್ನ ಬೆಂಗಳೂರಿನಲ್ಲಿ ಒಂದು ನಿವೇಶನದ ಮೇಲೆ ಹೂಡಿಕೆ ಮಾಡಿದ್ದರೆ ಅದರ ಮೌಲ್ಯ ಬಹಳ ಹೆಚ್ಚಾಗುತ್ತಿತ್ತು. ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಹಣದ ಮೌಲ್ಯ 20 ವರ್ಷಗಳಲ್ಲಿ ಬಹಳ ವೃದ್ಧಿ ಕಂಡಿದೆ. ಹೀಗಾಗಿ ಅಲ್ಲಿನ ಉದಾಹರಣೆಯನ್ನ ನಿಖರವೆನ್ನಲು ಒಪ್ಪದಿದ್ದರೆ ನಿತ್ಯ ಉಪಯೋಗಿಸುವ ಹಲವಾರು ಪದಾರ್ಥಗಳಾದ ಅಕ್ಕಿ, ಸಕ್ಕರೆ, ಹಾಲು ಮತ್ತು ತರಕಾರಿ ಇವುಗಳ ಬೆಲೆಯನ್ನ ಹೋಲಿಕೆ ಮಾಡಿ ನೋಡಿದರೂ ಸಾಕು. 2 ದಶಕಗಳಲ್ಲಿ ವಸ್ತುಗಳ ಬೆಲೆ ಬದಲಾಗಿರುತ್ತದೆ. ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ ಎಂದು ಹೇಳಬಹುದು. ವೇಳೆ ಮತ್ತು ಹಣದುಬ್ಬರ ಇಂತಹ ಬದಲಾವಣೆಗೆ ಕಾರಣ. ಇಂದಿನ ಹಣಕ್ಲಾಸು ಬರಹದಲ್ಲಿ ಅದರ ಬಗ್ಗೆ ತಿಳಿದುಕೊಳ್ಳೋಣ. 

ಹಣದ ಮುದ್ರಿತ ಮೌಲ್ಯ ಎಷ್ಟೇ ವರ್ಷವಾದರೂ ಹಾಗೆ ಇರುತ್ತದೆ ಆದರೆ ನಿಜವಾದ ಮೌಲ್ಯವನ್ನ ನಾವು ಅದಕ್ಕೆ ಇರುವ ಖರೀದಿ ಶಕ್ತಿಯನ್ನ ಅವಲಂಬಿಸಿ ನಿರ್ಧರಿಸಬೇಕಾಗುತ್ತದೆ. ಇದರಲ್ಲಿ ಕೂಡ ಎರಡು ಆಯಾಮಗಳಿವೆ ಒಂದು ದೇಶಿಯ ಹಣದ ಮೌಲ್ಯವನ್ನ ಖರೀದಿಸುವ ಶಕ್ತಿಯ ಮೇಲೆ ಅಳೆಯುವುದು  ಹಾಗೆಯೇ ಎರಡನೆಯದಾಗಿ ವಿದೇಶಿ ಹಣವನ್ನ ಕೂಡ ಖರೀದಿ ಶಕ್ತಿ ಅಂದರೆ ಪರ್ಚೇಸಿಂಗ್ ಪವರ್ ಅನ್ನು ಅಳತೆಗೋಲಾಗಿ ಇಟ್ಟುಕೊಂಡು ನಿರ್ಧರಿಸುವುದು.  

ದೇಶಿಯ ಹಣದ ಮೌಲ್ಯವನ್ನ ಕಂಡು ಹಿಡಿಯುವುದು ಹೇಗೆ? 

ನಮ್ಮ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸಿದ ಹಣ ಅದು ನೋಟು ಇರಬಹುದು ಅಥವಾ ನಾಣ್ಯವಿರಬಹುದು ಅದರ ಮೇಲೆ ಮುದ್ರಣವಾದ ಸಂಖ್ಯೆ ಆ ನೋಟಿನ ಅಥವಾ ನಾಣ್ಯದ ಮೌಲ್ಯ ಅಥವಾ ಬೆಲೆಯನ್ನ ಸೂಚಿಸುತ್ತದೆ. ಉದಾಹರಣೆಗೆ ನೋಟಿನ ಮೇಲೆ ಹತ್ತು ರೂಪಾಯಿ ಎಂದು ಬರೆದಿದ್ದರೆ ಅದು ಆ ನೋಟಿನ ಬೆಲೆ ಸೂಚಿಸುತ್ತದೆ. ಇದನ್ನ ಜನಸಾಮಾನ್ಯ ನಾಮಿನಲ್ ಹಣ ಅಥವಾ ಮನಿ ಎಂದು ವ್ಯಾಖ್ಯಾನಿಸುತ್ತಾನೆ. ಅದೇ ಹತ್ತು ರೂಪಾಯಿ ನೋಟು ಯಾವ ವಸ್ತುವನ್ನು ಕೊಳ್ಳುವ ಶಕ್ತಿ ಹೊಂದಿದೆ ಅದನ್ನ ಅವಲಂಬಿಸಿ ಅದನ್ನ ರಿಯಲ್ ಮನಿ ಎನ್ನುತ್ತಾರೆ. ಒಂದು ಸಣ್ಣ ಉದಾಹರಣೆ ನಾಮಿನಲ್ ಮನಿ ಮತ್ತು ರಿಯಲ್ ಮನಿ ಎಂದರೇನು ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. 

2೦೦೦ ಇಸವಿಯಲ್ಲಿ ಮುದ್ರಿತವಾದ ಹತ್ತು ರೂಪಾಯಿ ನೋಟಿನ ಮುಖ ಬೆಲೆ 2019 ರಲ್ಲಿ ಕೂಡ ಹತ್ತು ರೂಪಾಯಿಯೇ ಆಗಿರುತ್ತದೆ. ಇದರಲ್ಲಿ ಯಾವ ಸಂಶಯವೂ ಇಲ್ಲ ಇದು ನಾಮಿನಲ್ ಮನಿ. 2000 ಇಸವಿಯಲ್ಲಿ ಹತ್ತು ರುಪಾಯಿಗೆ ಒಂದು ಕೆಜಿ ಅಕ್ಕಿ ಸಿಗುತ್ತಿತ್ತು ಎಂದುಕೊಳ್ಳಿ... ಅದೇ ಅಕ್ಕಿಯ ಕೊಳ್ಳಲು 2019ರಲ್ಲಿ ಇಪ್ಪತ್ತು ರೂಪಾಯಿ ತೆರಬೇಕು. ಅಂದರೆ ಹತ್ತು ರುಪಾಯಿಗೆ ಇಂದು ಸಿಗುವುದು ಅರ್ಧ ಕೆಜಿ ಅಕ್ಕಿ ಮಾತ್ರ ಇದು ರಿಯಲ್ ಮನಿ. ಇದನ್ನ ಹೀಗೆ ಸಮೀಕರಿಸಬಹುದು, 2000ದ ಹತ್ತು ರೂಪಾಯಿಯ ರಿಯಲ್ ಮನಿ ಪವರ್ 5 ರೂಪಾಯಿ. ಇನ್ನೂ ಸರಳವಾಗಿ ಹೇಳಬೇಕಾದರೆ ಹಣದ ಕೊಳ್ಳುವ ಶಕ್ತಿ ರಿಯಲ್ ಮನಿ ಎನ್ನಿಸಿಕೊಳ್ಳುತ್ತದೆ. ಮುದ್ರಿದ ಮೌಲ್ಯ ನಾಮಿನಲ್ ಮನಿ ಎನ್ನಿಸಿಕೊಳ್ಳುತ್ತದೆ. 

ಸರಿ, ಹಾಗಾದರೆ ಇದು ವೇಳೆ ಆಧಾರಿತ ಎನ್ನುವ ನಿರ್ಧಾರಕ್ಕೆ ನೀವು ಬರುವುದಕ್ಕೆ ಮುಂಚೆ ಸ್ವಲ್ಪ ನಿಧಾನಿಸಿ. ಭಾರತದಂತಹ ದೇಶದಲ್ಲಿ ಇದು ವೇಳೆ ಆಧಾರಿತ ಆಗ ಬೇಕಿಲ್ಲ ಸ್ಥಳ ಆಧಾರಿತ ಕೂಡ ಆಗಬಹದು. ಹೇಗೆ ಎನ್ನುವುದನ್ನ ಒಂದು ಉದಾಹರಣೆ ಸ್ಪಷ್ಟವಾಗಿಸುತ್ತೆ. ಬೆಂಗಳೂರು ನಗರದಲ್ಲಿ ವಾಸಿಸುವ ಜನ ಒಂದು ಎಳನೀರು ಬೇಕೆಂದರೆ 30 ರೂಪಾಯಿ ತೆರಬೇಕು. ನೀವು ತಿಪಟೂರಿನ ರಸ್ತೆಯಲ್ಲಿ ಅದೇ ಎಳನೀರನ್ನ 20 ರುಪಾಯಿಗೆ ಪಡೆಯಬಹದು. ಹೀಗೆ ಒಂದಲ್ಲ ಹಲವು ವಸ್ತುಗಳ ಬೆಲೆ ಬದಲಾಗುತ್ತದೆ. ನಮ್ಮ ಬಳಿ ಇರುವ ನೋಟಿನ ಖರೀದಿ ಮೌಲ್ಯ ರಿಯಲ್ ಮನಿಯನ್ನು ಸೂಚಿಸುತ್ತದೆ. 

ವಿದೇಶಿ ವಿನಿಮಯದ ಲೆಕ್ಕಾಚಾರವೇನು? 

ಗಮನಿಸಿ ನಾವೆಲ್ಲಾ ವಿದೇಶಿ ವಿನಿಮಯದ ಬಗ್ಗೆ ಕೇಳುತ್ತಾ ಮತ್ತು ನೋಡುತ್ತಾ ಬಂದಿದ್ದೇವೆ. ಸಾಮಾನ್ಯವಾಗಿ ಎಲ್ಲರಲ್ಲೂ ಒಂದು ಗ್ರಹಿಕೆಯಿದೆ ಅದೇನೆಂದರೆ ಭಾರತದ ಒಂದು ರೂಪಾಯಿ ಕೊಟ್ಟರೆ ಇಂಡೋನೇಶಿಯಾದ 197 ರುಪ್ಪಯ್ಯ ಸಿಗುತ್ತದೆ ಹೀಗಾಗಿ ಭಾರತ ಇಂಡೋನೇಶಿಯಾಗಿಂತ ಬಲಿಷ್ಠ ಎನ್ನುವುದು. ಹಾಗೆಯೇ ಭಾರತದ 70 ರೂಪಾಯಿ ಕೊಟ್ಟರೆ ಅಮೆರಿಕಾದ 1 ಡಾಲರ್ ಸಿಗುತ್ತದೆ ಹೀಗಾಗಿ ಅಮೇರಿಕಾ ಭಾರತಕ್ಕಿಂತ ಹೆಚ್ಚು ಬಲಿಷ್ಠ ಎನ್ನುವುದು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ದೇಶದ ಹಣವನ್ನ ಇನ್ನೊಂದು ದೇಶದ ಹಣಕ್ಕೆ ನಿಗದಿಪಡಿಸಲಾಗಿರುವ ಮೌಲ್ಯ. ಕೇವಲ ಸಂಖ್ಯೆಗಳ ಆಧಾರದಲ್ಲಿ ನೋಡುವುದರಿಂದ ಸಾಮಾನ್ಯರ ಗ್ರಹಿಕೆ ಸರಿಯಾಗಿದೆ. ಆದರೆ ಇದೊಂದು ತಪ್ಪು  ಗ್ರಹಿಕೆ. ವಿದೇಶಿ ವಿನಿಮಯ ಎನ್ನುವುದು ಹಲವಾರು ಕಾರಣಗಳಿಂದ ನಿಗದಿಪಡಿಸಲಾಗುತ್ತದೆ. ಇದರಲ್ಲಿ ಕೆಲವೊಮ್ಮೆ ಅಲ್ಲಿನ ಸರಕಾರ ಹೆಚ್ಚು ಅಥವಾ ಕಡಿಮೆ ಮಾಡಬಹದು. ಹೀಗಾಗಿ ಇದನ್ನ ನಿಖರವಾದ ಮೌಲ್ಯ ಎನ್ನಲು ಬಾರದು. ಹೀಗಾಗಿ ಇದರ ನಿಜವಾದ ಮೌಲ್ಯ ಅಳೆಯಲು ಪೆರ್ಚಸಿಂಗ್ ಪವರ್ ಪ್ಯಾರಿಟಿ ಯನ್ನ (ಪಿಪಿಪಿ) ಬಳಸುತ್ತೇವೆ. 

ಏನಿದು ಪೆರ್ಚಸಿಂಗ್ ಪವರ್ ಪ್ಯಾರಿಟಿ (ppp )? 

ನಿತ್ಯ ಬದುಕಿಗೆ ಬೇಕಾಗುವ ಹಲವಾರು ಉತ್ಪನ್ನಗಳನ್ನ ಪಟ್ಟಿ ಮಾಡಿ ಅದಕ್ಕೆ  ಬೇರೆ ಬೇರೆ ದೇಶಗಳಲ್ಲಿ ಬೆಲೆಯನ್ನ ಪಟ್ಟಿಮಾಡಿ ಅದರ ಆಧಾರದ ಮೇಲೆ ಹಣದ ಮೌಲ್ಯವನ್ನ ಅಳೆಯುವ ಪ್ರಕ್ರಿಯೆಗೆ ಪೆರ್ಚಸಿಂಗ್ ಪವರ್ ಪ್ಯಾರಿಟಿ ಎನ್ನುತ್ತೇವೆ. ಜಗತ್ತಿನ ಹಲವಾರು ದೇಶಗಳಿ ತಮ್ಮ ಜಿಡಿಪಿಯನ್ನ ನಿಖರವಾಗಿ ತಿಳಿಸಲು ಇದನ್ನ ಬಳಸುತ್ತವೆ ಕೂಡ. ಉದಾಹರಣೆ ನೋಡೋಣ. 

ಇಂಡೋನೇಷಿಯಾದಲ್ಲಿ ಒಂದು ಊಟದ ಬೆಲೆ, ನಮ್ಮ ದರ್ಶಿನಿ ಮಟ್ಟದ ಹೋಟೆಲ್ ನಲ್ಲಿ 25 ಸಾವಿರ ಇಂಡೋನೇಶಿಯನ್ ರುಪ್ಪಯ್ಯ! ಅಬ್ಬಾ...!! ಎನ್ನಿಸುತ್ತೆ ಅಲ್ವಾ? ಇದನ್ನ 197ರಿಂದ ಭಾಗಿಸಿ ನೀವು ಊಟಕ್ಕೆ ಕೊಟ್ಟ ಹಣ 127 ಭಾರತೀಯ ರೂಪಾಯಿ. ನಮ್ಮ ದರ್ಶಿನಿ ಹೋಟೆಲ್ ನಲ್ಲಿ 75 ರಿಂದ 1೦೦ ರೂಪಾಯಿಯಲ್ಲಿ ಒಂದೊಳ್ಳೆ ಊಟ ಸಿಗುತ್ತದೆ. ಆ ಲೆಕ್ಕಾಚಾರದಲ್ಲಿ ಇಂಡೋನೇಶಿಯಾ ಭಾರತಕ್ಕಿಂತ 5೦ ಪ್ರತಿಶತ ದುಬಾರಿ ಎನ್ನಲು ಅಡ್ಡಿಯಿಲ್ಲ.  ಹಾಲು, ನೀರು, ಸಕ್ಕರೆ, ಮನೆ ಬಾಡಿಗೆ ಹೀಗೆ ಭಾರತದಲ್ಲಿ ನಾವು ಬದುಕಲು ಎಷ್ಟು ಬೇಕು ಅದನ್ನೆಲ್ಲಾ ಲೆಕ್ಕ ಹಾಕಿ ನೋಡಿದರೆ ಇಂಡೋನೇಶಿಯಾ ಭಾರತಕ್ಕಿಂತ ದುಬಾರಿ ಎನ್ನುವುದು ವೇದ್ಯವಾಗುತ್ತದೆ. ಗಮನಿಸಿ ಸ್ನೇಹಿತರೆ ಮೊದಲ ನೋಟದಲ್ಲಿ ಇಂಡೋನೇಶಿಯಾ ಬಹಳ ಸಸ್ತಾ ಅನ್ನಿಸಿತ್ತು ಅಲ್ವಾ? ಏಕೆಂದರೆ ಒಂದು ಭಾರತೀಯ ರೂಪಾಯಿ ಕೊಟ್ಟರೆ ನಿಮಗೆ ಹತ್ತಿರಹತ್ತಿರ 2೦೦ ಇಂಡೋನೇಶಿಯನ್ ರುಪ್ಪಯ್ಯ ಸಿಗುತ್ತಿತ್ತು. ಆದರೆ ನಿಜವಾದ ಅರ್ಥದಲ್ಲಿ  ಒಂದೂವರೆ ಭಾರತೀಯ ರೂಪಾಯಿ ಕೊಟ್ಟರೆ ನಿಮಗೆ ಸಿಕ್ಕಿದ್ದು ಕೇವಲ ಒಂದು ಇಂಡೋನೇಶಿಯನ್ ರುಪ್ಪಯ್ಯ ಮಾತ್ರ!! 

ಇದೆ ಲೆಕ್ಕಾಚಾರವನ್ನ ನಾವು ಅಮೆರಿಕಾದ ವಾಷಿಂಗ್ಟನ್ ನಗರಕ್ಕೆ ಕೂಡ ಮಾಡಬಹುದು. ಸಾಮಾನ್ಯವಾಗಿ ಬೆಂಗಳೂರಿನ ನಾಲ್ಕು ಜನರಿರುವ ಒಂದು ಮಧ್ಯಮವರ್ಗ ಉತ್ತಮವಾಗಿ ಬದುಕಲು 1 ಲಕ್ಷ ರೂಪಾಯಿ ಮಾಸಿಕ ಬೇಕಾಗುತ್ತದೆ ಎಂದುಕೊಳ್ಳಿ. ಇದೆ ರೀತಿಯ ಜೀವನ ಶೈಲಿಯನ್ನ ವಾಷಿಂಗ್ಟನ್ ನಲ್ಲಿ ನೆಡೆಸಲು 5 ಲಕ್ಷ ರೂಪಾಯಿ ಬೇಕಾಗುತ್ತದೆ. ಅಂದರೆ ಗಮನಿಸಿ ನೋಡಿ ನೀವು ವಿದೇಶಿ ವಿನಿಮಯದಲ್ಲಿ 7೦ ರೂಪಾಯಿ ಕೊಟ್ಟು ಒಂದು ಡಾಲರ್ ಪಡೆದಿರಿ. ಆದರೆ ನಿಜಾರ್ಥದಲ್ಲಿ ಒಂದು ಡಾಲರ್ ಕೊಳ್ಳಲು ನೀವು ವ್ಯಯಿಸಿದ್ದು ಕೇವಲ ಐದು ರೂಪಾಯಿ!!. 

ಇದನ್ನ ಹೀಗೆ ಸಮೀಕರಿಸಬಹದು. 

ನಾವು ಯಾವ ದೇಶವನ್ನ ಹೋಲಿಕೆಗೆ ತೆಗೆದುಕೊಳ್ಳುತ್ತೇವೆ ಆ ದೇಶದಲ್ಲಿ ನಮ್ಮ ಮೂಲ ದೇಶದಲ್ಲಿ ಹೇಗೆ ಬದುಕುತ್ತಿದ್ದೇವೆ ಹಾಗೆ ಬದುಕಲು ಎಷ್ಟು ಖರ್ಚಾಗುತ್ತದೆ ಎನ್ನುವುದರ ಆಧಾರದ ಮೇಲೆ ಹಣದ ಮೌಲ್ಯವನ್ನ ಅಳೆಯುವುದು ಪೆರ್ಚಸಿಂಗ್ ಪವರ್ ಪ್ಯಾರಿಟಿ. ಅಂದರೆ ಅಮೇರಿಕಾದಲ್ಲಿ ಐದು ಲಕ್ಷ ಬೇಕು ಭಾರತದಲ್ಲಿ ಒಂದು ಲಕ್ಷ ಸಾಕು ಐದು ಲಕ್ಷವನ್ನ ಒಂದು ಲಕ್ಷದಿಂದ ಭಾಗಿಸಿದರೆ ಸಿಗುವ ಉತ್ತರ ಐದು. ಹೀಗಾಗಿ ಐದು ಭಾರತೀಯ ರುಪಾಯಿಗೆ ಒಂದು ಡಾಲರ್ ಸಿಕ್ಕಿದ ಲೆಕ್ಕ. ಮೇಲ್ನೋಟಕ್ಕೆ ಇದು ತಿಳಿಯುವುದಿಲ್ಲ. 

ಇನ್ನೊಂದು ಮುಖ್ಯ ವಿಚಾರ ಕೆಲವೊಮ್ಮೆ ಕೆಲವು ಪದಾರ್ಥಗಳ ಬೆಲೆ ಬಹಳ ಹೆಚ್ಚು ಅಥವಾ ಕಡಿಮೆಯಾಗುತ್ತದೆ ಅದು ಸಮಯಾಧಾರಿತ. ಉದಾಹರಣೆ ಭಾರತದಲ್ಲಿ ಈಗ ಈರುಳ್ಳಿ ಬೆಲೆ 1೦೦ ರೂಪಾಯಿ!! ಇದು ಸದಾ ಇರುವ ಬೆಲೆಯಲ್ಲ. ಹೀಗಾಗಿ ಸಾಮನ್ಯವಾಗಿ ಇರುವ ಬೆಲೆಯನ್ನ ಲೆಕ್ಕಾಚಾರಕ್ಕೆ ಬಳಸಬೇಕು. 

ಕೊನೆ ಮಾತು: ಹಣದ ಮೌಲ್ಯ ಅದರ ಖರೀದಿಸುವ ಶಕ್ತಿಯನ್ನ ಅವಲಂಬಿಸಿದೆ. ಹೀಗಾಗಿ ಮುದ್ರಿತ ಮೌಲ್ಯ ಏನೇ ಇರಲಿ ಅವು ನಿಜವಾದ ಮೌಲ್ಯವನ್ನ ನಿರ್ಧರಿಸುವುದಿಲ್ಲ. ಬೆಂಗಳೂರಿನಲ್ಲಿ 1 ಲಕ್ಷ ಮೈಸೂರು ಅಥವಾ ತುಮಕೂರಿನಲ್ಲಿ ಒಂದೂವರೆ ಅಥವಾ ಎರಡು ಲಕ್ಷ ಬೆಲೆ ಬಾಳಬಹುದು. ನಿಮ್ಮ ಹಣದ ನಿಜವಾದ ಮೌಲ್ಯ ತಿಳಿದರೆ ಅಷ್ಟರಮಟ್ಟಿಗೆ ಬದುಕು ಒಂದಷ್ಟು ಹಸನಾಗುತ್ತದೆ.


- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Stay up to date on all the latest ಅಂಕಣಗಳು news with The Kannadaprabha App. Download now
facebook twitter whatsapp