ಹಣ ಸೃಷ್ಟಿಸಲು ಕೂಡ ಹಣ ಬೇಕು! ಇದಕ್ಕಾಗುವ ಖರ್ಚೆಷ್ಟು? 

ದಿನ ನಿತ್ಯ ನಾವೆಲ್ಲಾ ನಗದನ್ನ ವ್ಯವಹಾರಕ್ಕೆ ಬಳಸುತ್ತೇವೆ. ಡಿಜಿಟಲೈಸಷನ್ ಆಗಬೇಕು ಎಲ್ಲವೂ, ಎಲ್ಲರೂ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಗೆ ಒಗ್ಗಿಕೊಳ್ಳಬೇಕು ಎನ್ನುವ ಕೂಗು ಎಷ್ಟೇ ಪ್ರಬಲವಾಗಿದ್ದರೂ ಭಾರತದ ಮಟ್ಟಿಗೆ ಇಂದಿಗೂ 'ನಗದು' ಅಥವಾ 'ಕ್ಯಾಶ್'  ರಾಜ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದಿನ ನಿತ್ಯ ನಾವೆಲ್ಲಾ ನಗದನ್ನ ವ್ಯವಹಾರಕ್ಕೆ ಬಳಸುತ್ತೇವೆ. ಡಿಜಿಟಲೈಸಷನ್ ಆಗಬೇಕು ಎಲ್ಲವೂ, ಎಲ್ಲರೂ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಗೆ ಒಗ್ಗಿಕೊಳ್ಳಬೇಕು ಎನ್ನುವ ಕೂಗು ಎಷ್ಟೇ ಪ್ರಬಲವಾಗಿದ್ದರೂ ಭಾರತದ ಮಟ್ಟಿಗೆ ಇಂದಿಗೂ 'ನಗದು' ಅಥವಾ 'ಕ್ಯಾಶ್'  ರಾಜ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. 

ನಿತ್ಯ ಬಳಕೆಯ ಈ ಬ್ಯಾಂಕ್ ನೋಟುಗಳು ಎಲ್ಲಿ ವಿನ್ಯಾಸಗೊಳ್ಳುತ್ತವೆ ? ಎಲ್ಲಿ ಪ್ರಿಂಟ್ ಆಗುತ್ತವೆ ? ಎಷ್ಟು ಪ್ರಿಂಟ್ ಆಗುತ್ತವೆ ? ಎನ್ನುವ ಬಗ್ಗೆ ಹೆಚ್ಚಿನ ಜನ ಯೋಚಿಸಲು ಕೂಡ ಹೋಗುವುದಿಲ್ಲ . ಅವರಿಗೇನಿದ್ದರೂ ಅಂದಿನ ಚಿಂತೆ . ಐನೂರು , ಸಾವಿರ ಅಥವಾ ಯಾವುದೇ ಮೌಲ್ಯದ ನೋಟಿನ ಬೆಲೆ ನಿಜಕ್ಕೂ ಅಷ್ಟು ಮೌಲ್ಯ ಹೊಂದಿದೆಯಾ ? ಎನ್ನುವ ಪ್ರಶ್ನೆ ಕೂಡ ನಾವ್ಯಾರು ಮಾಡಿಕೊಳ್ಳುವುದಿಲ್ಲ . ಅಸಲಿಗೆ ಐನೂರರ ಮೌಲ್ಯದ ನೋಟು ಮುದ್ರಿಸಲು ಒಂದಷ್ಟು ಖರ್ಚು ಮಾಡಿರಬೇಕು ಅಲ್ವಾ ? ಅದರ ಖರ್ಚು ಹೊರುವರು ಯಾರು ?  ಮಜಾ ನೋಡಿ ಹಣ ಸೃಷ್ಟಿಸಲು ಕೂಡ ಹಣ ಬೇಕು !! ಇಂತಹ ಬ್ಯಾಂಕ್ ನೋಟ್ಗಳನ್ನ ಮುದ್ರಿಸಲು ಪೇಪರ್ ಬೇಕು , ವಿನ್ಯಾಸ ಮಾಡಬೇಕು , ಇಂಕ್ ಬೇಕು . ಇವುಗಳ ತಯಾರಿಸಲು ಪೇಪರ್ ಮಿಲ್ ಬೇಕು , ಇಂಕ್ ಫ್ಯಾಕ್ಟರಿ ಬೇಕು, ವಿನ್ಯಾಸಗಾರರ ತಂಡ ಬೇಕು, ಸೆಕ್ಯೂರಿಟಿ ತಜ್ಞರು ಬೇಕು ., ಮುದ್ರಣಗೊಂಡ ಸ್ಥಳದಿಂದ ದೇಶದೆಲ್ಲೆಡೆ ಇದನ್ನ ವಿತರಿಸಲು ಕೂಡ ಖರ್ಚು ಮಾಡಲೇಬೇಕು . ಅಂದರೆ ಹಣದ ಮೇಲಿನ ಮುದ್ರಣ ಮೌಲ್ಯ ಏನೇ ಇರಲಿ ಅದು ಅಷ್ಟಂತೂ ಇರಲು ಸಾಧ್ಯವಿಲ್ಲ. ಅದಕ್ಕಿಂತ ಕಡಿಮೆಯೇ ಇರಬೇಕು ಅಲ್ಲವೇ ? ಅದೇನು ? ಹೇಗೆ ? ಇವುಗಳ ಸುತ್ತ ಒಂದು ನೋಟ ಹರಿಸೋಣ . 

೧೯೩೪ ಕ್ಕೂ ಮುಂಚೆ ಭಾರತೀಯ ಸರಕಾರ ಹಣವನ್ನ ಮುದ್ರಿಸುವ ಎಲ್ಲಾ ಹಕ್ಕುಗಳನ್ನ ತನ್ನ ಬಳಿ ಇಟ್ಟುಕೊಂಡಿತ್ತು. ೧ ನೇ ಏಪ್ರಿಲ್ ೧೯೩೫ ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಲ್ಕತ್ತ ದಲ್ಲಿ ಉಗಮವಾಗುತ್ತದೆ. ೧೯೩೪ ರಲ್ಲಿ ರಿಸರ್ವ್ ಬ್ಯಾಂಕ್ ಆಕ್ಟ್ ಜಾರಿಗೆ ಬರುತ್ತದೆ . ಅದರ ಪ್ರಕಾರ ೧೯೩೫ ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವನ್ನ ಸೃಷ್ಟಿಸಲಾಗುತ್ತದೆ. ಇದೊಂದು ಪೂರ್ಣ ಸ್ವಾಯಸತ್ತತೆ ಇಲ್ಲದ ಸಂಸ್ಥೆ. ಅಂದರೆ ನೋಟುಗಳ ಮುದ್ರಣ ಇದರ ಹಿಡಿತದಲ್ಲಿದೆ , ಆದರೆ ಎಷ್ಟು ಮೌಲ್ಯ , ಎಷ್ಟು ಸಂಖ್ಯೆ ಮುದ್ರಿಸಬೇಕು ಎನ್ನುವುದನ್ನ ಇಂದಿಗೂ ಭಾರತೀಯ ಸರಕಾರ ನಿರ್ಧರಿಸುತ್ತದೆ. 

ಭಾರತೀಯ ಬ್ಯಾಂಕ್ ನೋಟುಗಳು ಕಾಟನ್ ಮತ್ತು ಲಿನನ್ ಬಳಸಿ ತಯಾರಿಸಲಾದ ಕಾಗದದ ಮೇಲೆ ಮುದ್ರಣ ಮಾಡಲಾಗುತ್ತದೆ. ಸ್ವಂತಂತ್ರ್ಯಕ್ಕೂ ಮುಂಚೆ ಇಂತಹ ನೋಟುಗಳನ್ನ ಮುದ್ರಣ ಮಾಡಲು ಇಂಗ್ಲೆಂಡ್ ಕಾಗದವನ್ನ ತನ್ನ ದೇಶದಿಂದ ತರಿಸಿಕೊಳ್ಳುತ್ತಿತ್ತು . ಇದರ ಹಿಂದಿನ ಉದ್ದೇಶ ಇಲ್ಲಿ ಸುಲಭವಾಗಿ ಸಿಗುವ ಕಾಗದದ ಮೇಲೆ ಮುದ್ರಣ ಮಾಡಿದರೆ ಇತರರು ಅದನ್ನ ನಕಲಿ ಮಾಡಬಹುದು ಎನ್ನುವುದಾಗಿತ್ತು . ೧೯೪೭ ರಲ್ಲಿ ನಮಗೆ ಸ್ವಂತಂತ್ರ ಬಂತು ಆದರೂ ಇಂದಿಗೂ ನಾವು ನಮ್ಮ ಬ್ಯಾಂಕ್ ನೋಟು ಮುದ್ರಣಕ್ಕೆ ಬೇಕಾಗುವ ಕಾಗದ ಮತ್ತು ಇಂಕ್ (ಶಾಯಿ) ಅನ್ನು ಇಂಗ್ಲೆಂಡ್, ಜರ್ಮನಿ , ಜಪಾನ್ ಮತ್ತು ಸ್ವಿಸ್ಜೆರ್ಲ್ಯಾಂಡ್ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ . ಕಾಗದಕ್ಕೆ ಇಂಗ್ಲೆಂಡ್ ಮತ್ತು ಜರ್ಮನಿಯನ್ನ ಅವಲಂಬಿಸಿದರೆ ಮುದ್ರಣಕ್ಕೆ ಬೇಕಾಗುವ ಶಾಯಿಯನ್ನ ಸ್ವಿಸ್ಜರ್ಲ್ಯಾಂಡ್ ಪೂರೈಸುತ್ತಿದ್ದೆ. ಮುದ್ರಣದ ಮಷೀನ್ ಜಪಾನ್ ಮತ್ತು ಜರ್ಮನಿ ನೀಡುತ್ತಿವೆ . ಆದರೆ ಗಮನಿಸಿ ನಮ್ಮ ಭಾರತೀಯ ನೋಟುಗಳು ವಿದೇಶಿ ಸಹಾಯವಿಲ್ಲದೆ ಮುದ್ರಣವಾಗುವ ಸಾಧ್ಯತೆಗಳು ಇಲ್ಲ ಎನ್ನುವ ಸ್ಥಿತಿ ಇಂದಿಗೂ ಇದೆ . 

೧೯೪೭ ಕ್ಕೂ ಮುಂಚೆ ನಮ್ಮಲ್ಲಿ ಬ್ರಿಟಿಷ್ ರಾಜ್ಯವಿತ್ತು. ಅವರ ಅನುಕೂಲಕ್ಕೆ ತಕ್ಕ ಹಾಗೆ ಅವರು ವ್ಯವಸ್ಥೆಯನ್ನ ಕಟ್ಟಿಕೊಂಡಿದ್ದರು. ಸ್ವಂತಂತ್ರ ಬಂದು ಏಳು ದಶಕದ ಮೇಲಾದರೂ ನಾವಿನ್ನೂ ಅವಲಂಬನೆಯ ದಾಸ್ಯದಲ್ಲಿದ್ದೇವೆ ಎನ್ನುವುದು ಅರಗಿಸಿಕೊಳ್ಳಲು ಕಷ್ಟವಾಗುವ ಸತ್ಯ . 

ಹಣ ಮುದ್ರಣ ಆಗುವುದು ಎಲ್ಲಿ ? 
ಹಣದ ಮುದ್ರಣ ಸರಕಾರ ಅಣತಿಯಂತೆ ಮುದ್ರಿಸುವ ಹಕ್ಕು ನಮ್ಮ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಂದಿದೆ . ಭಾರತೀಯ ರಿಸರ್ವ್ ಬ್ಯಾಂಕ್ ಹತ್ತು ಸಾವಿರ ರೂಪಾಯಿ ಮೌಲ್ಯದ ನೋಟನ್ನ ಕೂಡ ಮುದ್ರಿಸುವ ಅವಕಾಶ ಮತ್ತು ಅನುಮತಿ ಪಡೆದಿದೆ . ಆದರೆ ಇಂದಿಗೆ ನಮ್ಮಲ್ಲಿರುವ ಅತಿ ಹೆಚ್ಚಿನ ಮೌಲ್ಯದ ನೋಟು ಎರಡು ಸಾವಿರ ರೂಪಾಯಿಯಾಗಿದೆ . 

ಈ ನೋಟುಗಳನ್ನ ಮಹಾರಾಷ್ಟ್ರದ ನಾಶಿಕ್ , ಮಧ್ಯಪ್ರದೇಶದ ಹೌಷಂಗಬಾದ್ ಮತ್ತು ದೇವಾನ್ , ಕರ್ನಾಟಕದ ಮೈಸೂರು ಮತ್ತು ವೆಸ್ಟ್ ಬೆಂಗಾಲ್ ನ ಸಾಲ್ಬೋನಿ ಎನ್ನುವ ಪ್ರದೇಶಗಳಲ್ಲಿ ಮುದ್ರಿಸಲಾಗುತ್ತದೆ . ನೋಟುಗಳ ಮುಂದಿರಿಸುವುದು ಆರ್ ಬಿಐ ನ ಕೆಲಸವಾದರೆ ನಾಣ್ಯಗಳನ್ನ ಟಂಕಿಸುವುದು ಸರಕಾರದ ಕೆಲಸ ಇಂತಹ ನಾಣ್ಯಗಳನ್ನ ಕಲ್ಕತ್ತಾದ ಅಲಿಪುರ್ , ಹೈದರಾಬಾದಿನ ಸೈಫಾಬಾದ್ ಮತ್ತು ಚೆರ್ರಿಪಲ್ಲಿ ಯಲ್ಲಿ ಮತ್ತು ಉತ್ತರಪ್ರದೇಶದ ನೋಯಿಡದಲ್ಲಿ ಟಂಕಿಸಲಾಗುತ್ತದೆ . ಗಮನಿಸಿ ನೋಟುಗಳನ್ನ ಆರ್ ಬಿಐ ಮುದ್ರಿಸಿ ವಿತರಿಸುತ್ತದೆ .  ನಾಣ್ಯಗಳನ್ನ ಟಂಕಿಸುವುದು ಸರಕಾರವಾದರೂ ಅದನ್ನ ವಿತರಿಸುವುದು ಕೂಡ ಆರ್ಬಿಐ ಕೆಲಸವಾಗಿದೆ .  

ಮುದ್ರಣಕ್ಕೆ ತಗಲುವು ಖರ್ಚೆಷ್ಟು? 
ಡಿಮ್ಯಾನಿಟಿಸಷನ್ ನಂತರ ಡಿಸೆಂಬರ್ ೧೮, ೨೦೧೭ ರಲ್ಲಿ ಕೇಂದ್ರ ಸರಕಾರ ಲೋಕಸಭೆಯಲ್ಲಿ ಬರಹದಲ್ಲಿ ನೀಡಿದ ಮಾಹಿತಿಯ ಆಧಾರದ ಮೇಲೆ ಕೆಳಗಿನ ಸಂಖ್ಯೆಗಳನ್ನ ನಮೂದಿಸುತ್ತಿದ್ದೇನೆ . ಹಳೆಯ ಹಣವನ್ನ ಪೂರ್ಣವಾಗಿ ತೆಗೆದುಹಾಕಿದ ನಂತರ ವ್ಯವಸ್ಥೆಗೆ :- 

೨೦೦ ರೂಪಾಯಿ ಮೌಲ್ಯದ ೧೭೮ ಕೋಟಿ ನೋಟುಗಳನ್ನ ಬಿಡಲಾಗಿದೆ . ಇದಕ್ಕೆ ಆದ ಒಟ್ಟು ಖರ್ಚು ೫೨೨. ೮ ಕೋಟಿ ರೂಪಾಯಿ . ಅಂದರೆ ೨೦೦ ರೂಪಾಯಿಯ ಒಂದು ನೋಟು ತಯಾರಿಸಲು ತಗುಲಿದ ಖರ್ಚು  (೫೨೨ ೮/೧೭೮ = ೨. ೯೩ ) ಎರಡು ರೂಪಾಯಿ ತೊಂಬತ್ತಮೂರು ಪೈಸೆ . 

೫೦೦ ರೂಪಾಯಿ ಮೌಲ್ಯದ ೧೬೯೫. ೭ ಕೋಟಿ ನೋಟುಗಳನ್ನ ಬಿಡಲಾಗಿದೆ . ಇದಕ್ಕೆ ತಗುಲಿದ ಒಟ್ಟು ಖರ್ಚು ೪೯೬೮. ೮೪ ಕೋಟಿ ರೂಪಾಯಿ . ಅಂದರೆ ೫೦೦ ರುಪಾಯಿಯ ಒಂದು ನೋಟು ತಯಾರಿಸಲು ಆದ ಒಟ್ಟು ಖರ್ಚು ೨. ೯೪ . ( ಎರಡು ರೂಪಾಯಿ ತೊಂಬತ್ತನಾಲ್ಕು ಪೈಸೆ )

೨೦೦೦ ರೂಪಾಯಿಯ ೩೬೫. ೪ ಕೋಟಿ ನೋಟುಗಳನ್ನ ವಿತರಿಸಲಾಗಿದೆ . ಇದಕ್ಕಾಗಿ ಒಟ್ಟು ೧೨೯೩. ೬ ಕೋಟಿ ರೂಪಾಯಿ ವೆಚ್ಚನವನ್ನ ಮಾಡಲಾಗಿದೆ . ಅಂದರೆ ಎರಡು ಸಾವಿರ ರೂಪಾಯಿಯ ಒಂದು ನೋಟು ಚಾಲನೆಗೆ ಬರುವವರೆಗೆ ತಗುಲಿದ ಒಟ್ಟು ಖರ್ಚು ಮೂರು ರೂಪಾಯಿ ಐವತ್ತನಾಲ್ಕು ಪೈಸೆ . ಅಂದರೆ ಸರಕಾರ ಎರಡು ಸಾವಿರ ರೂಪಾಯಿ ಪ್ರತಿ ನೋಟಿನ ಮೇಲೆ ಖರ್ಚು ಕಳೆದು ೧೯೯೬. ೪೬ ರೂಪಾಯಿ ಸೃಷ್ಟಿಸಿದ ಹಾಗಾಯಿತು . 

ನಮ್ಮ ಸಮಾಜದಲ್ಲಿ ಅತ್ಯಂತ ವಿದ್ಯಾವಂತ , ಸುಶಿಕ್ಷಿತ ವರ್ಗ ಕೂಡ ಇಂತಹ ಮಾಹಿತಿಗಳ ಬಗ್ಗೆ ಗಮನವನ್ನ ಹರಿಸುವುದಿಲ್ಲ . ಬಾಯಿಂದ ಬಾಯಿಗೆ ಹರಡಿದ ಮಾಹಿತಿಯನ್ನ ನಂಬಿಕೊಂಡು ಅದನ್ನ ಇನ್ನೊಬ್ಬರಿಗೆ ಹೇಳುತ್ತಾ ಹೋಗುತ್ತಾರೆ . ಕೆಲವರಂತೂ ಭಾರತೀಯ ರೂಪಾಯಿಯ ಚಾಲನೆಯ ವೆಚ್ಚ ಅಂದರೆ ಪೇಪರ್ ತರಿಸಿಕೊಳ್ಳುವುದರಿಂದ ಹಿಡಿದು ಅದನ್ನ ಮುದ್ರಿಸಿ ಚಲಾವಣೆಗೆ ತರುವವರೆಗೆ ತಗಲುವ ವೆಚ್ಚ ಅದರ ಮೌಲ್ಯದ ಎಂಟು ಪಟ್ಟು ಹೆಚ್ಚು ಎನ್ನುತ್ತಾರೆ . ಹೀಗೆ ಹೇಳುವರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುತ್ತಾರೆ . ಅವರ ಸುತ್ತ ಮುತ್ತಲಿನ ವ್ಯಕ್ತಿಗಳು ಇದನ್ನ ಪ್ರಶ್ನಿಸದೆ ನಿಜವೆಂದು ನಂಬಿಬಿಡುತ್ತಾರೆ ಕೂಡ . ಗಮನಿಸಿ ಮುದ್ರಿತ ಮೌಲ್ಯಕ್ಕಿಂತ ಖರ್ಚು ಹೆಚ್ಚಾಗಿದ್ದರೆ ಆ ದೇಶದ ಅರ್ಥ ವ್ಯವಸ್ಥೆ ಹೇಗೆ ತಾನೇ ಉಳಿದೀತು ?  ಆದರೆ ಹೌದು ಸ್ವಂತಂತ್ರ ಬರುವ ಮುಂಚಿನಿಂದ ನಾವು ಮುದ್ರಣಕ್ಕೆ ಬೇಕಾಗುವ ಕಾಗದ , ಶಾಯಿ , ಮುದ್ರಣ ಯಂತ್ರ ಎಲ್ಲಕ್ಕೂ ವಿದೇಶಿಯರ ಮೇಲೆ ಅವಲಂಬಿತರಾಗಿದ್ದೇವೆ .

ನಮಗೆ ಅವನ್ನೆಲ್ಲ ಮಾರುವ ಅವರು ನಮ್ಮ ಪಕ್ಕದ ಪಾಕಿಸ್ತಾನಕ್ಕೂ ಮಾರುತ್ತಾರೆ . ಪಾಕಿಸ್ತಾನಕ್ಕೆ ತನ್ನ ರೂಪಾಯಿ ಮುದ್ರಿಸುವುದಕ್ಕಿಂತ ಭಾರತೀಯ ರೂಪಾಯಿ ಮುದ್ರಿಸುವುದು ಲಾಭದಾಯಕ . ಹೀಗಾಗಿ ಎಷ್ಟೇ ಕಷ್ಟಪಟ್ಟರೂ ನಕಲಿ ನೋಟುಗಳ ಹಾವಳಿ ತಡೆಯುವು ಕಷ್ಟ . 

ಭಾರತೀಯ ಸಮಾಜದಲ್ಲಿ ಬ್ರಿಟಿಷರು ತಮ್ಮ ಅನುಕೂಲಕ್ಕೆ ಮಾಡಿಕೊಂಡಿದ್ದ ಎಷ್ಟೋ ಕಾನೂನುಗಳು ಬದಲಾಗದೆ ಹಾಗೆ ಇದ್ದವು ಎಂದರೆ ನಿಮಗೆ ಆಶ್ಚರ್ಯವಾದೀತು ಆದರೆ ಇದು ನಿಜ . ೨೦೧೪ ರಿಂದ ಈಚೆಗೆ ಅಂತಹ ಹಲವಾರು ಕಾನೂನುಗಳು ಬದಲಾಗಿವೆ , ಇಲ್ಲವೇ ಅವನ್ನ ಪೂರ್ಣವಾಗಿ ತೆಗೆದುಹಾಕಿ ಅಲ್ಲಿನ ಜಾಗಕ್ಕೆ ಇಂದಿಗೆ ಬೇಕಾದ ಹೊಸ ಕಾನೂನು ಬಂದು ಕೂತಿದೆ . ಶ್ರೀ ವಾಜಪೇಯಿಯವರು ನಮ್ಮ ದೇಶದ ಕಾಗದ ಮೇಲೆ ಹಣವನ್ನ ಏಕೆ ಮುದ್ರಣ ಮಾಡಬಾರದು ಎಂದು ಪ್ರಶ್ನಿಸಿದ ಮೊದಲ ಪ್ರಧಾನ ಮಂತ್ರಿ . ಅದಕ್ಕಿಂತ ಹಿಂದಿನವರ ಸಂಕಷವೇನಿತ್ತು ? ಗೊತ್ತಿಲ್ಲ . ವಾಜಪೇಯಿಯವರು ಕೂಡ ಎತ್ತಿದ ಪ್ರಶ್ನೆಗೆ ಉತ್ತರ ಹುಡುಕಲಾಗಲಿಲ್ಲ . ೨೦೧೫ ರಲ್ಲಿ ಶ್ರೀ ನರೇಂದ್ರ ಮೋದಿಯವರು ಕೂಡ ಇದೆ ಪ್ರಶ್ನೆಯನ್ನ ಎತ್ತಿದರು . ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಾವು ಇನ್ನು ನಮ್ಮ ಬ್ಯಾಂಕ್ ನೋಟುಗಳನ್ನ ಮುದ್ರಿಸಲು ವಿದೇಶಿಯರ ಮೇಲೆ ಅವಲಂಬಿತರಾಗಿರುವುದಕ್ಕೆ ಅತ್ಯಂತ ಖೇದ ವ್ಯಕ್ತಪಡಿಸಿದರು . ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಮ್ಮ ಬ್ಯಾಂಕ್ ನೋಟುಗಳನ್ನ ನಾವೇ ಏಕೆ ಪೂರ್ಣ ಪ್ರಮಾಣದಲ್ಲಿ ತಯಾರಿಸಲಾಗದು ? ಎಂದು ಪ್ರಶ್ನಿಸಿದರು . ಇದನ್ನ ಕಾರ್ಯರೂಪಕ್ಕೆ ತರಲು ಸಮಯಾವಧಿಯನ್ನ ಹಾಕಿಕೊಂಡು ಕೆಲಸ ಮಾಡಲು ಕೂಡ ಕರೆಕೊಟ್ಟರು . ಆಮೇಲೆ ಏನಾಯ್ತು ? ಅದೇಕೆ ಕಾರ್ಯರೂಪಕ್ಕೆ ಬರಲಿಲ್ಲ . ಇದರ ಬಗ್ಗೆ ಮಾಹಿತಿ ನನಗಂತೂ ಸಿಗಲಿಲ್ಲ . 

ಚೀನಿಯರು ಹಲವಾರು ದೇಶಗಳಿಗೆ ಅವರ ಹಣವನ್ನ ಕಡಿಮೆ ಖರ್ಚಿನಲ್ಲಿ ಮುದ್ರಿಸಿ ಕೊಡುತ್ತಿದ್ದಾರೆ ಭಾರತೀಯ ರೂಪಾಯಿ ಕೂಡ ಮುದ್ರಿಸುವರು ಚೀನಿಯರು ಎನ್ನುವ ಸುದ್ದಿ ಕೂಡ ಓಡಾಡುತ್ತಿದೆ . ಇದು ಶುದ್ಧ ಸುಳ್ಳು ಸುದ್ದಿ . ಮೊದಲೇ ಹೇಳಿದಂತೆ ಸಮಾಜದಲ್ಲಿ ವಿದ್ಯಾವಂತ ಎನಿಸಿಕೊಂಡ ವರ್ಗವೇ ಹಣಕಾಸು ಅನಕ್ಷರತೆಯಿಂದ ಬಳಲುತ್ತಿದೆ . ಇನ್ನು ಉಳಿದವರ ಪಾಡೇನು ? ಹೀಗಾಗಿ ತಪ್ಪು ಮಾಹಿತಿಗಳು ಬೇಗ ಅವರ ಮನಸ್ಸಿನಲ್ಲಿ ಜಾಗ ಪಡೆದುಬಿಡುತ್ತವೆ . 

ಕೊನೆ ಮಾತು: ಪಾಲಿಮರ್ ನೋಟುಗಳ ಮುದ್ರಿಸುವುದು ನಕಲಿ ನೋಟು ತಡೆಯಲು ಇರುವ ಒಂದು ಪರ್ಯಾಯ . ಜೊತೆಗೆ ಡಿಜಿಟಲ್ ಮನಿ ಕೂಡ ಅತ್ಯುತ್ತಮ ಉಪಾಯ . ಆದರೆ ಇಂದು ಬ್ಯಾಂಕ್ಗಳು ಡಿಜಿಟಲ್ ಹೆಸರಿನಲ್ಲಿ ಹಗಲು ದರೋಡೆಗೆ ಇಳಿದಿವೆ . ನಾವು ಹೆಚ್ಚೆಚ್ಚು ಡಿಜಿಟಲ್ ಹಣವನ್ನ ಉಪಯೋಗಿಸಿದರೆ ಸರಕಾರಕ್ಕೆ ಅಷ್ಟು ಪ್ರಮಾಣದ ಮುದ್ರಣ ಮತ್ತು ಇತರ ಖರ್ಚು ಉಳಿತಲ್ಲವೇ ? ಹೀಗಾಗಿ ಡಿಜಿಟಲ್ ಟ್ರಾನ್ಸಾಕ್ಷನ್ ಮೇಲೆ ಶುಲ್ಕ ವಿಧಿಸುವ ಹಾಗೆ ಇಲ್ಲ . ಆದರೆ ನಮ್ಮ ಬ್ಯಾಂಕ್ಗಳನ್ನ ಇಂದು ಕೇಳುವರಿಲ್ಲ . ಗ್ರಾಹಕರನ್ನ ಬ್ಯಾಂಕ್ಗಳು ಲೂಟಿ ಮಾಡುವ ಸಂಸ್ಥೆಗಳಾಗಿ ಬದಲಾಗಿರುವುದು ಮಾತ್ರ ಕಟುಸತ್ಯ.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com