ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ನೀಡಲಿದೆ ಹೊಸ ಆಯಾಮ! 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ನೀಡಲಿದೆ ಹೊಸ ಆಯಾಮ!
ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ನೀಡಲಿದೆ ಹೊಸ ಆಯಾಮ!

ನಮ್ಮ ದೇಶದ ಜನಸಂಖ್ಯೆ ಎಷ್ಟು ಎನ್ನುವುದು ಯಕ್ಷ ಪ್ರಶ್ನೆ. ಒಂದು ಜನಗಣತಿ ಪ್ರಾರಂಭವಾಗಿ ಮುಗಿಯುವ ವೇಳೆಗೆ ಅಲ್ಲಿ ಲೆಕ್ಕಕ್ಕೆ ಸಿಗದ ಕೋಟಿ ಜನರಿದ್ದಾರು! ಆದರೂ ಲೆಕ್ಕಕ್ಕೆ 130 ಕೋಟಿ ಅಂದುಕೊಳ್ಳೋಣ. ಇದರಲ್ಲಿ ಡಿಮ್ಯಾಟ್ ಅಕೌಂಟ್ ಹೊಂದಿರುವವರ ಸಂಖ್ಯೆ ಎಷ್ಟು? 2018ರ ಡಿಸೆಂಬರ್ ಅಂತ್ಯದಲ್ಲಿ ಡಿಮ್ಯಾಟ್ ಅಕೌಂಟ್ ಹೊಂದಿದವರ ಸಂಖ್ಯೆ 3 ಕೋಟಿ 50 ಲಕ್ಷ ಎನ್ನುತ್ತದೆ ಅಂಕಿ-ಅಂಶ. ಅಂದರೆ ನಮ್ಮ ದೇಶದ ಒಟ್ಟು ಜನಸಂಖ್ಯೆಯ 2.6 ಪ್ರತಿಶತ ಜನ ಮಾತ್ರ ಷೇರು ಮಾರುಕಟ್ಟೆಯಲ್ಲಿ ಒಂದಷ್ಟು ಆಸಕ್ತಿ ಹೊಂದಿದ್ದಾರೆ ಎಂದಾಯ್ತು. ಇವರಲ್ಲೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವವರ ಸಂಖ್ಯೆ ಎಷ್ಟಿರಬಹದು? ಎನ್ನುವುದು ಕೂಡ ಚರ್ಚಾಸ್ಪದ ವಿಷಯ. 2018ರಲ್ಲಿ ಡಿಮ್ಯಾಟ್ ಅಕೌಂಟ್ ತೆರೆದವರ ಸಂಖ್ಯೆ 40ಲಕ್ಷ. ಅಂದರೆ 2017ಕ್ಕೆ ಹೋಲಿಸಿದರೆ 13 ಪ್ರತಿಶತ ಹೆಚ್ಚಳ. 2019 ರಲ್ಲಿ ಕೂಡ ಇದರಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಖ್ಯೆ 2019ರ ವರ್ಷದ ಅಂತ್ಯಕ್ಕೆ 4 ಕೋಟಿ ತಲುಪುವ ಸಾಧ್ಯತೆಗಳು ಹೆಚ್ಚಾಗಿದೆ. ಹೀಗೆ ದೇಶದ ಜನಸಂಖ್ಯೆಯ ಎರಡೂವರೆ ಅಥವಾ ಮೂರು ಪ್ರತಿಶತ ಮೀರಿದ ಜನಸಂಖ್ಯೆಯ ಜ್ಞಾನ ಹೆಚ್ಚಿಸಲು ಅಂದರೆ ಸ್ಟಾಕ್ ಮಾರ್ಕೆಟ್ ಬಗ್ಗೆ ವಿಶ್ಲೇಷಿಸಲು ಹತ್ತಾರು ಟಿವಿ ಚಾನಲ್ಗಳಿವೆ. ಹತ್ತಾರು ಪ್ರಸಿದ್ಧ ಯೂಟ್ಯೂಬ್ ಚಾನಲ್ಗಳಿವೆ. ಅವುಗಳು ವರ್ಷ ಪೂರ್ತಿ 24*7 ಬಿತ್ತರಿಸುತ್ತವೆ. ಅದು ಕೂಡ ಹತ್ತಾರು ವರ್ಷದಿಂದ... ಇರಲಿ,  

ಡಿಮ್ಯಾಟ್ ಅಕೌಂಟ್ ಎಂದರೇನು?: ಡಿಮ್ಯಾಟ್ ಅಕೌಂಟ್ ಅಥವಾ ಡಿಮೆಟೀರಿಯಲೈಸ್ಡ್ (Dematerialised) ಅಕೌಂಟ್ ಎನ್ನುವುದು ಬ್ಯಾಂಕ್ ಖಾತೆ ಇದ್ದ ಹಾಗೆ. ಬ್ಯಾಂಕ್ ಖಾತೆಯಲ್ಲಿ ನಿಮ್ಮ ಎಲ್ಲಾ ಹಣದ ವ್ಯವಹಾರವನ್ನ ದಾಖಲಿಸಲಾಗುತ್ತದೆ. ಡಿಮ್ಯಾಟ್ ಅಕೌಂಟ್ ನಲ್ಲಿ ಷೇರು, ಬಾಂಡ್ ಅಥವಾ ಮ್ಯೂಚುಯಲ್ ಫಂಡ್ ಹೀಗೆ ಯಾವುದೇ ಷೇರು ಮಾರುಕಟ್ಟೆಯಲ್ಲಿ ನಡೆಸಿದ ವ್ಯವಹಾರವನ್ನು ದಾಖಲಿಸಿ ಇಡಲಾಗುತ್ತದೆ. ಇಲ್ಲಿ ಷೇರು, ಬಾಂಡ್ ಮತ್ತಿತರ ಯಾವುದೇ ಸೆಕ್ಯುರಿಟೀಸ್ ಅಥವಾ ಸರ್ಟಿಫಿಕೇಟ್ಸ್ ಎಲ್ಲವೂ ಡಿಜಿಟಲ್ ಅಥವಾ ಇಲೆಕ್ಟ್ರಾನಿಕ್ ಫಾರ್ಮ್ಯಾಟ್ ನಲ್ಲಿ ಇಡಲಾಗುತ್ತದೆ. ಆನ್ಲೈನ್ ಟ್ರೇಡಿಂಗ್ ಮಾಡುವಾಗ ಇದರಿಂದ ಬಹಳ ಉಪಯೋಗವಾಗುತ್ತದೆ. 

ಭಾರತ ಇಂದಿಗೂ ಕೃಷಿ ಪ್ರಧಾನ ದೇಶ: ಗ್ರಾಮೀಣ ಭಾರತದ ಬಹುತೇಕ ಜನ ಕೃಷಿ ಮತ್ತು ಕೃಷಿ ಆಧಾರಿತ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಹಿಂದೆ ಇಂತಹ ಕೃಷಿಕರ ಸಂಖ್ಯೆಯನ್ನ ಸರಾಗವಾಗಿ 80 ಪ್ರತಿಶತ ಎನ್ನಬಹುದಿತ್ತು. ಇಂದಿಗೆ ಕೃಷಿ ಮಾಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಆದರೂ ಇಂದಿಗೂ 50 ರಿಂದ 60 ಕೋಟಿ ಜನ ಕೃಷಿ ಅಥವಾ ಅದಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂದರೆ ಗಮನಿಸಿ ನಮ್ಮ ದೇಶದ ಒಟ್ಟು ಜನಸಂಖ್ಯೆಯ 45 ರಿಂದ 50 ಪ್ರತಿಶತ ಜನ ಕೃಷಿಕರು. ಆದರೆ ವಿಪರ್ಯಾಸ ನೋಡಿ ಕೃಷಿಗೆ ಸಂಬಂಧಿಸಿದ ವಿಷಯಗಳನ್ನ ಕೃಷಿಕರ ಜ್ಞಾನ ಅಭಿವೃದ್ಧಿ ಮಾಡುವ ಚಾನಲ್ಗಳು ಎಷ್ಟಿವೆ? ನಿಮಗೆ ಆಶ್ಚರ್ಯ ಆಗಬಹದು 2015 ರ ಮೇ ತಿಂಗಳಲ್ಲಿ ಡಿಡಿ-ಕಿಸಾನ್ ಎನ್ನುವ ಚಾನಲ್ ಆರಂಭವಾಗಿದೆ. ಅದನ್ನ ಬಿಟ್ಟರೆ 5-6 ಯೂಟ್ಯೂಬ್ ಚಾನಲ್ ಗಳಿವೆ. ರೈತನಿಗೆ ಯಾವ ವೇಳೆಯಲ್ಲಿ ಯಾವ ಬೆಳೆ ಬೆಳೆಯಬೇಕು? ಯಾವ ಬೆಳೆಗೆ ಹೆಚ್ಚು ಬೇಡಿಕೆಯಿದೆ. ಮಣ್ಣಿನ ಫಲವತ್ತತೆ ಕಾಪಾಡುವುದು ಹೇಗೆ? ಎನ್ನುವುದರ ಜೊತೆಗೆ ಸಾವಯವ ಆಹಾರ ಬೆಳೆಯುವ ಪದ್ಧತಿಯನ್ನ ತಿಳಿಸಿ ಹೇಳುವ ಚಾನಲ್ಗಳು ಇಲ್ಲ. 

ಬದಲಾವಣೆಯ ಗಾಳಿ ಬಿಸಲು ಶುರುವಾಗಿದೆ: ಯಾವುದೇ ಕ್ಷೇತ್ರ ಎಷ್ಟು ದಿನ ತಾನೇ ಬೇಕಾಬಿಟ್ಟಿ ಇದ್ದಹಾಗೆಯೇ ಇರಲು ಸಾಧ್ಯ? ಅಲ್ಲದೆ ಈಗಿನ ಕೇಂದ್ರ ಸರಕಾರ ರೈತರ ಆದಾಯವನ್ನ 2022-23ರ ವೇಳೆಗೆ ದುಪ್ಪಟ್ಟು ಮಾಡಲು ಸಹಾಯ ಮಾಡುವುದಾಗಿ ಘೋಷಣೆ ಕೂಡ ಮಾಡಿದೆ. ಇದೀಗ ಅಂದರೆ 2015ರಿಂದ ಈಚೆಗೆ ಕೃಷಿ ಕ್ಷೇತ್ರಕ್ಕೆ ಬರುತ್ತಿರುವ ಯುವ ಜನತೆ ಅದರಲ್ಲೂ ವಿದ್ಯಾವಂತ ಜನರ ಸಂಖ್ಯೆ ಒಂದಷ್ಟು ಸದ್ದು ಮಾಡುತ್ತಿದೆ. ನಮ್ಮಲ್ಲಿರುವ ಅವಕಾಶಗಳು ವಿದೇಶಿಯರಿಗೆ ಬೇಗ ಕಾಣುತ್ತದೆ. ನಮಗೇಕೆ ಕಾಣುವುದಿಲ್ಲ? ನಮ್ಮ ಜನರೇಕೆ ಇಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಾರೆ? ಹೀಗೆ ಹೇಳಲು ಕಾರಣ ಈ ಕ್ಷೇತ್ರದಲ್ಲಿ ಆಗಲೇ ಜರ್ಮನ್ನರು ಮತ್ತು ಅಮೆರಿಕನ್ನರು ಬಂದಿದ್ದಾರೆ.

ಡಿಜಿಟಲ್ ಗ್ರೀನ್ ಎನ್ನುವ ಸೋಶಿಯಲ್ ಎಂಟರ್ಪ್ರೈಸ್ ಮೈಕ್ರೋಸಾಫ್ಟ್ ನಿಂದ ಅನುದಾನ ಪಡೆದು ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡುತ್ತಿದೆ. ಇದು ಕೃಷಿಕರನ್ನ ತಮ್ಮ ಬೆಳೆಯ ಬಗ್ಗೆ, ಸಮಸ್ಯೆ ಬಗ್ಗೆ ಹೀಗೆ ಉತ್ಪನ್ನ ನೆಟ್ಟ ಸಮಯದಿಂದ ಕೊಯಿಲಿಗೆ ಬರುವವರೆಗೆ ಎಲ್ಲವನ್ನೂ ವಿಡಿಯೋ ಮಾಡಲು ಸಹಾಯ ಮಾಡುತ್ತದೆ. ಇಂತಹ ವಿಡಿಯೋಗಳನ್ನ ಸಮುದಾಯದ ಎಲ್ಲರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅದು ಯಶೋಗಾಥೆಯಿರಬಹದು ಅಥವಾ ಫಸಲು ವಿಫಲವಾದ ಕಥೆಯಿರಬಹದು ಅವುಗಳಿಂದ ಕಲಿಯಲು ಬಹಳಷ್ಟು ಇರುತ್ತದೆ ಎನ್ನುವುದು ಇದರ ಹಿಂದಿನ ಉದ್ದೇಶ. ಡಿಜಿಟಲ್ ಗ್ರೀನ್ ಸಂಸ್ಥೆ ಕಿಸಾನ್ ಡೈರಿ ಎನ್ನುವ ಒಂದು ಆಪ್ ಡೆವೆಲಪ್ ಮಾಡಿದೆ . ಇದರ ಮೂಲಕ ರೈತರು ತಮ್ಮ ಬೆಳೆಯ ಪ್ರಾರಂಭಿಕ ಹಂತದಿಂದ ಮಾರುಕಟ್ಟೆಯಲ್ಲಿ ಅದನ್ನ ಮಾರುವವರೆಗೆ ಎಲ್ಲವನ್ನೂ ಟ್ರ್ಯಾಕ್ ಮಾಡಬಹದು. ಇಲ್ಲಿ ದಲ್ಲಾಳಿಗಳಿಗೆ ಖೋಕ್ ಕೊಡಲಾಗಿದೆ. ಆಪ್ ಮೂಲಕ ಹತ್ತಿರದ ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಎಷ್ಟು ದರವಿದೆ, ಎಷ್ಟು ಬೇಡಿಕೆಯಿದೆ ಎಲ್ಲವನ್ನೂ ತಿಳಿದುಕೊಳ್ಳಬಹುದು. ಮತ್ತು ಕುಳಿತ ಜಾಗದಿಂದ ಅದನ್ನ ಮಾರಿಬಿಡಬಹದು. 

ಜರ್ಮನ್ ಸಂಸ್ಥೆ ಪೇಟಾ 2015 ರಲ್ಲಿ ಪ್ಲಾಂಟಿಕ್ಸ್ ಎನ್ನುವ ಒಂದು ಆಪ್ ಅನ್ನು ಸಿದ್ಧಪಡಿಸಿದೆ. ಹತ್ತಿರ ಹತ್ತಿರ 8 ಲಕ್ಷ ರೈತರು ಈ ಆಪ್ ಅನ್ನು ಬಳಸುತ್ತಿದ್ದಾರೆ. ಡಿಜಿಟಲ್ ಗ್ರೀನ್ ರೈತರ ಉತ್ಪನ್ನ ಮಾರಾಟ ಮತ್ತಿತರ ಸಮಸ್ಯೆಗಳಿಗೆ ಉತ್ತರ ಹುಡಕುತ್ತಿದ್ದರೆ, ಪ್ಲಾಂಟಿಕ್ಸ್ ಬೆಳೆಗಳಿಗೆ ತಗುಲುವ ರೋಗವನ್ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಉಪಯೋಗಿಸಿ ಪತ್ತೆ ಹಚ್ಚುವುದು ಮತ್ತು ಅದಕ್ಕೆ ಬೇಕಾದ ಕ್ರಮಗಳನ್ನ ತೆಗೆದುಕೊಳ್ಳಲು ಸಹಾಯ ಮಾಡುತ್ತಿದೆ. ಈ ಆಪ್ ಇಂದಿಗೆ 50 ವಿವಿಧ ತಳಿಗಳಲ್ಲಿ 450ಕ್ಕೂ ಹೆಚ್ಚು ರೋಗಗಳನ್ನ ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ಹೆಚ್ಚು ಹೆಚ್ಚು ರೈತರು ಇದನ್ನ ಉಪಯೋಗಿಸಲು ಶುರುಮಾಡಿದರೆ ಅಂದರೆ ಹೆಚ್ಚು ಹೆಚ್ಚು ಚಿತ್ರಗಳನ್ನ ಈ ಆಪ್ ಗೆ ಅಪ್ಲೋಡ್ ಮಾಡಿದರೆ ಅಷ್ಟು ಬೇಗ ಅವುಗಳಲ್ಲಿ ರೋಗವಿದೆಯೇ ಇಲ್ಲವೇ ಎಲ್ಲವನ್ನೂ ತಿಳಿಸಲು ಸಾಧ್ಯ ಎನ್ನುವುದು ಆಪ್ ತಯಾರಿಸಿದವರ ಮಾತು. 

ಮೊಬೈಲ್ ನಲ್ಲಿ ಕೃಷಿ:  ಟಿವಿ ಚಾನಲ್ಗಳು ಇಲ್ಲ, ಯೂಟ್ಯೂಬ್ ಚಾನಲ್ಗಳು ಕಡಿಮೆ. ಈಗ ಅವೆಲ್ಲವನ್ನೂ ಹಿಂದಿಕ್ಕಿ ಮೊಬೈಲ್ ಆಪ್ ಗಳು ಕೃಷಿಯ ರೂಪವನ್ನ ಬದಲಿಸಲು ಹೊರಟಿವೆ. 2011ರಲ್ಲಿ 50 ಲಕ್ಷವಿದ್ದ ಸ್ಮಾರ್ಟ್ ಫೋನ್ ಸಂಖ್ಯೆ ಇಂದಿಗೆ 40 ಕೋಟಿ ದಾಟಿದೆ ಎನ್ನುತ್ತದೆ ಅಂಕಿ-ಅಂಶ. ಈ ಸಂಖ್ಯೆ ಬರುವ ದಿನಗಳಲ್ಲಿ ಇನ್ನಷ್ಟು ವೇಗವಾಗಿ ಹೆಚ್ಚಾಗಲಿದೆ. ಅಲ್ಲದೆ ಜಗತ್ತಿನಲ್ಲಿ ಭಾರತದಲ್ಲಿ ಅತ್ಯಂತ ಅಗ್ಗವಾಗಿ ಮೊಬೈಲ್ ಡೇಟಾ ಸಿಗುತ್ತಿದೆ. ಇವೆರಡನ್ನೂ ಭಾರತ ಅದರಲ್ಲೂ ರೂರಲ್ ಇಂಡಿಯಾದ ಅಭಿವೃದ್ಧಿಗೆ ಸರಿಯಾಗಿ ಬಳಸಿದ್ದೇ ಆದರೆ ಭಾರತದ ರೈತರ ಆದಾಯ 2022-23 ರ ವೇಳೆಗೆ ದುಪ್ಪಟ್ಟು ಆಗುವುದರಲ್ಲಿ ಯಾವ ಸಂಶಯವೂ ಇಲ್ಲ. ಡಿಜಿಟಲ್ ಗ್ರೀನ್ ಕೃಷಿಗೆ ಸಂಬಂಧಪಟ್ಟ ವಿಡಿಯೋಗಳು ಕೋಟ್ಯಂತರ ವೀಕ್ಷಣೆಗಳನ್ನ ಕಾಣುತ್ತಿರುವುದು ಅಚ್ಚರಿ ಮತ್ತು ಸಂತೋಷದ ಸಂಗತಿ. 

ಮುಂದೇನು? ಇದರಲ್ಲಿ ಭವಿಷ್ಯವಿದೆಯೇ? ಇಲ್ಲಿ ಹೂಡಿಕೆ ಮಾಡಬಹುದೇ?: ಭಾರತದ ಉನ್ನತ ಟೆಕ್ ಅಸೋಸಿಯೇಷನ್ NASSCOM ಪ್ರಕಾರ ಈಗಾಗಲೇ 450 ಅಗ್ರಿಟೆಕ್ ನವೋದ್ದಿಮೆಗಳು ನೋಂದಾವಣಿಯಾಗಿದೆ. ಫೇಸ್ಬುಕ್ ಮತ್ತು ಗೂಗೆಲ್ ಸಂಸ್ಥೆಗಳು ತಮ್ಮ ಸೇವೆಯಲ್ಲಿ ಇಂಡಿಯಾ ಫಸ್ಟ್, ಭಾರತ ಮೊದಲು ಎಂದವು.. ಏಕೆಂದರೆ ಇಲ್ಲಿನ ರೀತಿ ನೀತಿ ರಿವಾಜು ಅರಿತುಕೊಂಡರೆ ಜಗತ್ತಿನ ಇತರ ದೇಶಗಳಲ್ಲಿ ಆಧಿಪತ್ಯ ಸಾಧಿಸುವುದು ಸುಲಭ. ಕೃಷಿ ಕ್ಷೇತ್ರದಲ್ಲೂ ಇದಾಗುವ ಸಾಧ್ಯತೆಯನ್ನ ಅಲ್ಲಗಳೆಯಲು ಬರುವುದಿಲ್ಲ. ವಿದೇಶಿ ಸಂಸ್ಥೆಗಳು ಬಂದು ಇಲ್ಲಿ ಠಿಕಾಣಿ ಹೂಡುವ ಮುನ್ನ ಭಾರತೀಯ ಉದ್ದಿಮೆದಾರರು, ಹೂಡಿಕೆದಾರರು ಕೃಷಿಯನ್ನ ಉದ್ದಿಮೆಯನ್ನಾಗಿ, ಆರ್ಗನೈಸ್ಡ್ ಸೆಕ್ಟಾರ್ ಅನ್ನಾಗಿ ಮಾಡಬಹದು. ಸದ್ಯಕ್ಕಂತೂ ಇಲ್ಲಿ ಅವಕಾಶ ಹೇರಳವಾಗಿದೆ. ಯಾರು ಮುಂಚೆ ಇಲ್ಲಿಗೆ ಪ್ರವೇಶ ಪಡೆಯುತ್ತಾರೋ ಅವರಿಗೆ ಹೆಚ್ಚಿನ ಲಾಭವಂತೂ ಇದ್ದೇ ಇದೆ. ಸಣ್ಣ ಮತ್ತು ಮಧ್ಯಮ ಹೂಡಿಕೆದಾರರು ಕೂಡ ಈ ಕ್ಷೇತ್ರವನ್ನ ಗಂಭೀರವಾಗಿ ಪರಿಗಣಿಸಿದರೆ ಲಾಭದ ಜೊತೆಗೆ 130 ಕೋಟಿಗೂ ಮೀರಿದ ಜನರ ಹೊಟ್ಟೆ ತುಂಬಿಸುವ ಕಾರ್ಯದಲ್ಲೂ ಕೈ ಜೋಡಿಸಿದ ತೃಪ್ತಿ ಕೂಡ ಸಿಗುತ್ತದೆ. 

ಕೊನೆ ಮಾತು: ಇಷ್ಟು ದಿನ ಕೃಷಿ ಕ್ಷೇತ್ರ ಅತ್ಯಂತ ಸಂಘಟಿತವಲ್ಲದ ಕಾರ್ಯ ಕ್ಷೇತ್ರವಾಗಿತ್ತು. ಇದೀಗ ಇದಕ್ಕೆ ಒಂದು ಸಂಘಟಿತ ರೂಪಕೊಡುವ ಸಮಯ ಬಂದಿದೆ. ಭಾರತೀಯ ಉದ್ದಿಮೆದಾರರು ಮತ್ತು ಹೂಡಿಕೆದಾರರು ತಂತ್ರಜ್ಞಾನ ಮತ್ತು ಹೆಚ್ಚಿರುವ ಸ್ಮಾರ್ಟ್ ಫೋನ್ ಬಳಕೆಯನ್ನ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹದು. ಭಾರತದ ಹೆಚ್ಚಿನ ಜನಸಂಖ್ಯೆ ಮಾರಕ ಎಂದು ರೋದಿಸುವುದರ ಬದಲು ಅದೇ ಜನಸಂಖ್ಯೆಯನ್ನ ಪೂರಕವಾಗಿ ಬದಲಿಸಿಕೊಂಡು ಹೆಚ್ಚಿನ ಸಂಪತ್ತು ಸೃಷ್ಟಿಸುವ ಅವಕಾಶವಿದೆ. ಇದು ನಮಗೆ ಕಾಣುತ್ತಿದೆಯೆ? 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com