ಒಬಾಮ-ಟ್ರಂಪ್ ಇಬ್ಬರಿಗೂ ಸಮ್ಮತ ಪಿ-ಟೆಕ್ ಶಿಕ್ಷಣ; ಭಾರತದ ಕತೆ ಏನಣ್ಣ? 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಒಬಾಮ-ಟ್ರಂಪ್ ಇಬ್ಬರಿಗೂ ಸಮ್ಮತ ಪಿ- ಟೆಕ್ ಶಿಕ್ಷಣ ಭಾರತದ ಕತೆ ಏನಣ್ಣ ?
ಒಬಾಮ-ಟ್ರಂಪ್ ಇಬ್ಬರಿಗೂ ಸಮ್ಮತ ಪಿ- ಟೆಕ್ ಶಿಕ್ಷಣ ಭಾರತದ ಕತೆ ಏನಣ್ಣ ?

ನಾವು ಭಾರತೀಯರು ವಿದ್ಯಾಭ್ಯಾಸಕ್ಕೆ ಬಹಳ ಹಿಂದಿನಿಂದಲೂ ಅತ್ಯಂತ ಮಹತ್ವ ನೀಡುತ್ತಾ ಬಂದವರು. ನಹಿ ಜ್ಞಾನೇನ ಸದೃಶಂ ಎನ್ನುವುದನ್ನು ನಂಬಿದವರು ನಾವು. ಅಂದರೆ ಜ್ಞಾನಕ್ಕಿಂತ ಮಿಗಿಲಾದದು (ಜ್ಞಾನಕ್ಕೆ ಸಮಾನವಾದದ್ದು) ಯಾವುದೂ ಇಲ್ಲ ಎನ್ನುವ ಅರ್ಥ. ದೂರ ದೂರದ ದೇಶಗಳಿಂದ ನಮ್ಮ ತಕ್ಷಶಿಲೆಗೆ ಜ್ಞಾನ ಅರಸಿ ಬರುತ್ತಿದ್ದರು ಅನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಇವತ್ತು ಯೂನಿವರ್ಸಿಟಿ ಎಂದು ನಾವು ಏನು ಹೇಳುತ್ತೇವೆ ಅದು ಅಂದಿನ ದಿನಗಳಲ್ಲೇ ನಮ್ಮಲ್ಲಿ ಇತ್ತು. ಹಲವಾರು ವಿಷಯಗಳಲ್ಲಿ ನೈಪುಣ್ಯತೆ ಹೊಂದಲು ಅಲ್ಲಿ ಸಹಾಯ ಮಾಡುತ್ತಿದ್ದರು. ಎಲ್ಲಕ್ಕೂ ಮುಖ್ಯ ಕಲಿತ ವಿದ್ಯೆ ಜೀವನದಲ್ಲಿ ಕೆಲಸಕ್ಕೆ ಬರುತ್ತಿತ್ತು. ಕಳೆದ ಮೂರು ದಶಕಗಳಲ್ಲಿ ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣವಾಗಿದೆ.

ಇಂದು ಹಣವಿಲ್ಲದೆ ಯಾವ ಸಂಸ್ಥೆ ತಾನೇ ನಡೆದೀತು? ಅಲ್ಲವೇ? ಆದರೆ ಅವರು ಕಲಿಸುತ್ತಿರುವ ವಿಷಯದ ಗುಣಮಟ್ಟ ಅಂದರೆ ಶಿಕ್ಷಣದ ಗುಣಮಟ್ಟ ಯಾವ ಮಟ್ಟಕ್ಕೆ ಇಳಿದಿದೆ ಎಂದರೆ ಪದವಿ ಪಡೆದು ಹೊರಬಂದ ವಿದ್ಯಾರ್ಥಿಗಳು ಯಾವ ಕೆಲಸ ಮಾಡಲೂ ನಾಲಾಯಕ್ಕು ಎನ್ನುವ ಮಟ್ಟಕ್ಕೆ...! ಈ ಮಾತನ್ನು ಉತ್ಪ್ರೇಕ್ಷೆ ಎಂದುಕೊಳ್ಳಬಹದು ಆದರೆ ಇಂದು ಶಿಕ್ಷಣದ ಗುಣಮಟ್ಟ ಕುಸಿದಿದೆ ಎನ್ನವುದಕ್ಕೆ ಕಾರ್ಪೊರೇಟ್ ವಲಯದಲ್ಲಿ ಕೆಲಸಗಳು ಬಹಳಷ್ಟು ಖಾಲಿ ಇದ್ದರೂ ಅಲ್ಲಿಗೆ ಸೂಕ್ತ ವ್ಯಕ್ತಿ ಸಿಗದೇ ಇರುವುದನ್ನ ಉದಾಹರಿಸಬಹದು. ಕಾರ್ಪೊರೇಟ್ ವಲಯದಲ್ಲಿ 'ಸ್ಕಿಲ್ ಗ್ಯಾಪ್'  (ಕೌಶಲ್ಯದ ಕೊರತೆ) ಎನ್ನುವುದು ಅತ್ಯಂತ ಸಾಮಾನ್ಯವಾಗಿ ಕೇಳಿಬರುವ ಮಾತಾಗಿದೆ. ಸಮಾಜದಲ್ಲಿ ಮೇಲೆ ಹೇಳಿದ ಬದಲಾವಣೆ ಸದ್ದಿಲ್ಲದೇ ಆಗಿ ಹೋಗಿದೆ. ಇದಕ್ಕೆ ಜನರ ಸಹಕಾರ ಬಹಳ ದೊಡ್ಡ ಮಟ್ಟದಲ್ಲಿದೆ. ಇತ್ತೀಚಿಗೆ ತಮ್ಮ ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎನ್ನುವುದು ಸ್ವಲ್ಪ ಕಡಿಮೆಯಾಗಿದೆ. ಆದರೂ ಇಂದಿಗೂ ಈ ಎರಡು ಕ್ಷೇತ್ರಗಳ ಹೊಳಪು ಸಾಮಾನ್ಯ ಜನರಲ್ಲಿ ಮಾಸಿಲ್ಲ ಎನ್ನಬಹದು. 

ಭಾರತೀಯ ಶಿಕ್ಷಣ ಸಂಸ್ಥೆಗಳು ಪದವೀಧರರನ್ನ ಉತ್ಪಾದಿಸುವ ಕಾರ್ಖಾನೆಗಳಾಗಿವೆ. ಹತ್ತಾರು ವರ್ಷದ ಪ್ರಶ್ನೆ ಪತ್ರಿಕೆಯನ್ನ ಅಭ್ಯಾಸ ಮಾಡಿದರೆ ಮುಗಿದು ಹೋಯಿತು ಪರೀಕ್ಷೆ ಪಾಸು ಮಾಡಲು ಎನ್ನುವ ಮಟ್ಟಕ್ಕೆ ಅವು ಸ್ಟೀರಿಯೊಟೈಪ್ ಆಗಿಬಿಟ್ಟಿವೆ. ಇಂದು ಒಂದು ಮಗುವನ್ನ ಶಾಲೆಗೆ ಸೇರಿಸಲು ಕನಿಷ್ಟ 1 ಲಕ್ಷ ರೂಪಾಯಿ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಪ್ರಸಿದ್ಧ ಶಾಲೆಗಳಲ್ಲಿ ಈ ಹಣದ ಮೊತ್ತ ಇನ್ನೂ ಹೆಚ್ಚು. ಭಾರತದಲ್ಲಿ ಜನ ಸಾಮಾನ್ಯನ ಮಾಸಿಕ ಆದಾಯ ಹತ್ತರಿಂದ ಹನ್ನೆರಡು ಸಾವಿರ ರೂಪಾಯಿ ಎನ್ನುತ್ತದೆ ಅಂಕಿಅಂಶ. ಇಷ್ಟು ಹಣ ಮಾಸಿಕ ಮಗುವಿನ ಶಿಕ್ಷಣದ ಖರ್ಚು ಎಂದರೆ ಉಳಿದ ಬದುಕಿಗೆ ಹಣವೆಲ್ಲಿ? ಸರಕಾರಿ ಶಾಲೆಗೆ ಸೇರಿಸುತ್ತಾರೆ. ಉಳ್ಳವರು ಖಾಸಗಿ ಶಾಲೆಗೆ ಸೇರಿಸುತ್ತಾರೆ ಎನ್ನುವುದು ಬಹಳ ಸುಲಭದ ಉತ್ತರ. ಆದರೆ ಸರಾಸರಿ ಆದಾಯ ಮತ್ತು ಖರ್ಚಿನ ಲೆಕ್ಕಾಚಾರದಲ್ಲಿ ಲಯ ಮಾತ್ರ ಕಾಣಸಿಗುವುದಿಲ್ಲ ಎನ್ನುವುದು ಅತ್ಯಂತ ಆಘಾತಕಾರಿ ವಿಷಯ. ಇರಲಿ. 

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಹೇಗೋ ಭಾರತೀಯ ಮಕ್ಕಳು ವಿದೇಶಿ ನೆಲದಲ್ಲಿ ವಿಜಯ ಪತಾಕೆ ಹಾರಿಸುತ್ತ ಬಂದಿದ್ದಾರೆ. ಒಬ್ಬ ಸುಂದರ್ ಪಿಚ್ಚೈ, ಸತ್ಯ ನಾದೆಳ್ಲಾ ಸಾಧನೆ ನಮ್ಮ ದೇಶದಲ್ಲಿ ಲಕ್ಷಾಂತರ ಪೋಷಕರ ಕಣ್ಣಲ್ಲಿ ಕನಸನ್ನ ಸೃಷ್ಟಿಸುತ್ತದೆ. ಪೋಷಕರ ಈ ಕನಸನ್ನ ಬಂಡವಾಳ ಮಾಡಿಕೊಂಡ ಶಿಕ್ಷಣ ಕ್ಷೇತ್ರ ಉದ್ದಿಮೆಯಾಗಿ ಹುಲುಸಾಗಿ ಬೆಳೆದಿದೆ. ಇಂದು ಬೆಂಗಳೂರಿನಲ್ಲಿ ಮಾತ್ರವಲ್ಲ ದೇಶದ ಎಲ್ಲೆಡೆ ಶಿಕ್ಷಣ ಕ್ಷೇತ್ರವನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡವರು ರಿಯಲ್ ಎಸ್ಟೇಟ್ ಉದ್ದಿಮೆದಾರರು, ಮತ್ತು ರಾಜಕಾರಿಣಿಗಳು. ಶಾಲೆ ಮತ್ತು ಕಾಲೇಜು ಚಿನ್ನದ ಮೊಟ್ಟೆ ಇಡುವ ಕೋಳಿಗಳಾಗಿವೆ ಅವರ ಪಾಲಿಗೆ. ಇದರಲ್ಲಿ ಪೋಷಕರದು ಸಮಾನ ಅಥವಾ ಹೆಚ್ಚಿನ ತಪ್ಪು ಎಂದು ನನ್ನ ಭಾವನೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ? ಮುಂಬರುವ ದಿನಗಳಲ್ಲಿ ಆಗುವ ಬದಲಾವಣೆ ಏನು? ಶಾಲೆಯಲ್ಲಿ ಕಲಿಸುತ್ತಿರುವ ಪಠ್ಯ ಅದರ ಬೋಧನಾ ಕ್ರಮ ಮತ್ತು ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಯುತ್ತಿದೆಯೆ? ಎನ್ನುವ ಒಂದಷ್ಟು ಮೂಲಭೂತ ಪ್ರಶ್ನೆಗಳನ್ನ ಸಹ ಅವರು ಇಂದು ಕೇಳುತ್ತಿಲ್ಲ. ಕೇಳುವರ ಸಂಖ್ಯೆ ಬಹಳ ಕಡಿಮೆ ಅಂತಹವರು 'ಏಲಿಯನ್' ಆಗಿ ಹೋಗಿದ್ದಾರೆ. 

ಸಾಫ್ಟ್ವೇರ್ ಕ್ಷೇತ್ರದಲ್ಲಿ ಭಾರತೀಯರು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಂಡಿರುವುದು ತಿಳಿದಿರುವ ವಿಷಯ. ಅಮೆರಿಕಾ ಮತ್ತು ಯೂರೋಪಿನಲ್ಲಿ ಬದುಕು ಕಂಡುಕೊಂಡ ಬಹುತೇಕ ಭಾರತೀಯರು ಸಾಫ್ಟ್ವೇರ್ ಮೂಲದವರು ಎಂದು ಹೇಳಬಹದು. ಹೀಗೆ ಅಲ್ಲಿಗೆ ವಲಸೆ ಹೋದ ಭಾರತೀಯರು ಅಲ್ಲಿ ಚೆನ್ನಾಗಿಯೇ ಹಣ ಸಂಪಾದಿಸುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಹೆಸರು ಕೂಡ ಮಾಡುತ್ತಿದ್ದಾರೆ. ಮೂಲ ಅಮೆರಿಕನ್ನರಿಗೆ ಸೆಡ್ಡು ಹೊಡೆಯುವ ಮಟ್ಟದಲ್ಲಿ ಸಂಪತ್ತು ಸೃಷ್ಟಿಯಲ್ಲಿ ಮುಂದಿದ್ದಾರೆ. ಆದರೆ ಇದೆಲ್ಲ ಮುಂದಿನ ಹತ್ತು ವರ್ಷದಲ್ಲಿ ಕೊನೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಏಕೆ? ಏನು? ಒಂದಷ್ಟು ನೋಡೋಣ ಬನ್ನಿ. 

ಐಬಿಎಂ ಸಂಸ್ಥೆ ತನಗೆ ಎದುರಾಗಿರುವ 'ಸ್ಕಿಲ್ ಗ್ಯಾಪ್ ಅನ್ನು ಸರಿ ಹೊಂದಿಸಲು ಒಂದು ಯೋಜನೆಯನ್ನ ಹೆಣೆದಿದೆ. ಅಮೆರಿಕಾದ Brooklyn ಎನ್ನುವ ಜಾಗದಲ್ಲಿ 2011 ರಲ್ಲಿ ಒಂದು ಶಾಲೆಯನ್ನ ತೆರೆಯುತ್ತದೆ. 9ನೇ ತರಗತಿಯಲ್ಲಿ ಓದುವ ಮಕ್ಕಳು ಇಲ್ಲಿಗೆ ಸೇರಲು ಅರ್ಹರು. ಇಂತಹ ಶಾಲೆಗೆ ಅವರಿತ್ತ ಹೆಸರು ಪಿ-ಟೆಕ್. 

ಏನಿದು ಪಿ-ಟೆಕ್ ಇದು ಹೇಗೆ ಕೆಲಸ ಮಾಡುತ್ತದೆ?: P-TECH  ಎಂದರೆ ಪಾತ್ ವೇ ಇನ್ ಟೆಕ್ನಾಲಜಿ ಅರ್ಲಿ ಕಾಲೇಜ್ ಹೈಸ್ಕೂಲ್. ಎಂದರ್ಥ. ಐಬಿಎಂ ಸಂಸ್ಥೆ ಕಾರ್ಪೊರೇಟ್ ವಲಯದಲ್ಲಿ ಇರುವ ಕೌಶಲ್ಯದ ಕೊರತೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಒಂದು ಹೊಸ ಶಿಕ್ಷಣ ಮಾದರಿಯನ್ನ ಸಿದ್ಧಪಡಿಸಿದೆ. ಇದರ ಪ್ರಕಾರ 9ನೇ ತರಗತಿಯ ವಿದ್ಯಾರ್ಥಿಗಳನ್ನ ಇಲ್ಲಿಗೆ ಸೇರಿಸಿಕೊಳ್ಳಲಾಗುತ್ತದೆ. ಇದು 6 ವರ್ಷದ ತರಬೇತಿ ಶಿಕ್ಷಣ. ವಿಧ್ಯಾರ್ಥಿಗಳ ಇಚ್ಛೆಗನುಗುಣವಾಗಿ ಅವರನ್ನ ತಯಾರು ಮಾಡಲಾಗುತ್ತದೆ. 6 ವರ್ಷದ ನಂತರ ಅವರಿಗೆ ಪಿ-ಟೆಕ್ ಪದವಿ ಪತ್ರವನ್ನ ನೀಡಲಾಗುತ್ತದೆ. ಇಂತಹ ಪದವಿ ಹೊಂದಿದವರು ಇಂಡಸ್ಟ್ರಿ ಬಯಸುವ ಮಟ್ಟದ ಕೌಶಲ್ಯವನ್ನ ಹೊಂದಿರುತ್ತಾರೆ. ಏಕೆಂದರೆ 6 ವರ್ಷದಲ್ಲಿ ಮುಂದಿನ ಕೆಲಸಕ್ಕೆ ಏನು ಬೇಕು ಅದನ್ನೇ ಕಲಿಸಿರುತ್ತಾರೆ. ಹೀಗಾಗಿ ಅವರಿಗೆ ಶಿಕ್ಷಣದ ನಂತರದ ಕೆಲಸದ ಬದುಕಿಗೆ ಹೊಂದಿಕೊಳ್ಳುವುದು ಕಷ್ಟವಾಗುವುದಿಲ್ಲ. ಇಲ್ಲಿ ಪ್ರಾಯೋಗಿಕ ಶಿಕ್ಷಣ ಪದ್ದತಿಯನ್ನ ಅನುಸರಿಸುತ್ತಾರೆ. ಅಂದರೆ ಕೇವಲ ಭೋದನೆಯಷ್ಟೇ ಅಲ್ಲ ಅದನ್ನ ನಿಜ ಜೀವನದಲ್ಲಿ ಹೇಗೆ ಮಾಡುವುದು ಎನ್ನುವುದನ್ನ ಕೂಡ ಕಲಿಸುತ್ತಾರೆ. ಸ್ಟೆಮ್ (ಸೈನ್ಸ್, ಟೆಕ್ನಾಲಜಿ,ಇಂಜಿನಿಯರಿಂಗ್ ಮತ್ತು ಮ್ಯಾಥಮೆಟಿಕ್ಸ್)ಶಿಕ್ಷಣ ಇಲ್ಲಿಯ ಜೀವಾಳ. 

ಈಗಾಗಲೇ ಇಂತಹ 200ಕ್ಕೂ ಹೆಚ್ಚು ಶಾಲೆಗಳಿವೆ. 1 ಲಕ್ಷಕ್ಕೂ ಮೀರಿದ ವಿದ್ಯಾರ್ಥಿಗಳು ಇಲ್ಲಿ ಸಿದ್ಧವಾಗುತ್ತಿದ್ದಾರೆ. ಈ ಶಾಲೆ ಅಮೆರಿಕಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಶಾಲೆಗಳು ಆಗಲೇ 18 ದೇಶಗಳಲ್ಲಿ ಹರಡಿವೆ. ಈಗಾಗಲೇ ಈ ಶಾಲೆಯಿಂದ 30 ಪದವೀಧರರು ಹೊರಬಂದಿದ್ದಾರೆ. 2019ರ ಅಂತ್ಯದ ವೇಳೆಗೆ ಇಂತಹ ಪದವೀಧರರ ಸಂಖ್ಯೆ ಮೂರಂಕಿ ಮುಟ್ಟಲಿದೆ. ಇಂದಿನ ಮಟ್ಟಿಗೆ ಈ ಸಂಖ್ಯೆ ಅತ್ಯಂತ ಕಡಿಮೆ ಮತ್ತು ಯಾವುದೇ ಸವಾಲಿನ ಸಂಖ್ಯೆಯಲ್ಲ. ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಸಾಫ್ಟ್ವೇರ್ ಕ್ಷೇತ್ರಕ್ಕೆ ಭಾರತೀಯರನ್ನ ಯಾರು? ಮತ್ತು ಏಕೆ? ನೇಮಿಸಿಕೊಳ್ಳುತ್ತಾರೆ? ವೀಸಾ, ವಲಸೆ ನೀತಿಗಳು ಇವೆಲ್ಲದರ ಜೊತೆಗೆ 'ಹೊರಗಿನವರನ್ನ' ಅವರೇಕೆ ಕೆಲಸಕ್ಕೆ ಕರೆದಾರು?  

2012 ರಲ್ಲಿ ಅಂದಿನ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಐಬಿಎಂ ನ Brooklyn ಶಾಲೆಗೆ ಭೇಟಿ ಇತ್ತಿದ್ದರು. ಅಮೇರಿಕಾದ ಮಕ್ಕಳಿಗೆ ಕಷ್ಟ ಪಟ್ಟು ಓದಿ ಇಲ್ಲದಿದ್ದರೆ ಭಾರತೀಯರು ಮತ್ತು ಚೀನಿಯರ ಮುಂದೆ ಮಂಡಿಯೂರಬೇಕಾದೀತು ಎಂದು ಹಲವಾರು ಬಾರಿ ಹೇಳಿದ್ದಾರೆ. ಒಬಾಮರ ಯಾವುದೇ ಪಾಲಿಸಿಯನ್ನ ಒಪ್ಪದ ಈಗಿನ ಅಮೇರಿಕಾ ಅಧ್ಯಕ್ಷ ಟ್ರಂಪ್ ಈ ವಿಷಯದಲ್ಲಿ ಮಾತ್ರ ಒಬಾಮಾರ ಹಾದಿಯನ್ನು ಸರಿ ಎಂದಿದ್ದಾರೆ. ಅವರ ಹಾದಿಯಲ್ಲಿ ಸಾಗಿದ್ದಾರೆ. ಐಬಿಎಂಗೆ ಈ ವಿಷಯದಲ್ಲಿ ಬೇಕಾದ ಎಲ್ಲಾ ಸವಲತ್ತುಗಳನ್ನ ನೀಡುತ್ತಿದ್ದಾರೆ. ಹೀಗಾಗಿ ಒಬಾಮ ಮತ್ತು ಟ್ರಂಪ್ ಇಬ್ಬರೂ ಒಪ್ಪಿದ ಏಕೈಕ ವಿಷಯ ಎನ್ನುವ ಹೆಗ್ಗಳಿಕೆ ಇದಕ್ಕೆ ಸಂದಿದೆ. ಮುಂದಿನ ಹತ್ತು ವರ್ಷದಲ್ಲಿ ಇಂದು ನಾವು ಮಾಡುತ್ತಿರುವ ಅನೇಕ ಕೆಲಸಗಳು ಮಾನ್ಯತೆ ಕಳೆದುಕೊಂಡಿರುತ್ತವೆ. ಪಿ-ಟೆಕ್ ಅಂತಹ ಶಾಲೆಗಳು ಮಷೀನ್ ಮಾಡಲಾಗದ ಮತ್ತು ಮನುಷ್ಯನ ಕೌಶಲ್ಯ ಬಯಸುವ ಕೆಲಸಗಳಿಗೆ ಬೇಕಾದ ತರಬೇತಿ ಕೊಡಲು ಶುರುಮಾಡಿವೆ. ಕೃಷಿ ಕ್ಷೇತ್ರದಲ್ಲೂ ಟೆಕ್ನಾಲಜಿ ವೇಗವಾಗಿ ಹರಡಲಿದೆ. ಆ ಮೂಲಕ ಜಗತ್ತಿನಲ್ಲಿ ಆಹಾರದ ಕೊರತೆ ಇರಲಾರದು. ಎಲ್ಲರಿಗೂ ಮೂಲಭೂತವಾಗಿ ಬೇಕಾಗುವ ಆಹಾರ ಬಟ್ಟೆಯನ್ನ ಒದಗಿಸಬಹದು. ಆದರೆ ನಾವೇನೋ ಕಾರ್ಯದಲ್ಲಿ ಭಾಗಿಯಾಗಿದ್ದೆವು, ಅಲ್ಲಿ ನಮ್ಮ ಯೋಗದನವೂ ಇದೆ ಎನ್ನುವ ಸಂತೃಪ್ತಿ ಅದನ್ನ ಎಲ್ಲರಿಗೂ ನೀಡುವುದು ಹೇಗೆ? ಅದಕ್ಕೆ ಉತ್ತರವನ್ನ ನಾವೇ ಕಂಡುಕೊಳ್ಳಬೇಕಿದೆ. 

ಕೊನೆ ಮಾತು: ಭಾರತೀಯ ಉದ್ಯಮಿಗಳು ಅಥವಾ ನಮ್ಮ ಸಮಾಜ ಅದಕ್ಕೆ ಸುಲಭವಾದದನ್ನ ಬಹಳ ಬೇಗೆ ವಿದೇಶಿಯರಿಂದ ನಕಲು ಮಾಡಿಬಿಡುತ್ತದೆ. ಅವುಗಳು ಇಲ್ಲಿನ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗಲು ಕೂಡ ಶುರುವಾಗಿ ಬಿಡುತ್ತದೆ. ಅಲ್ಲದೆ ಇಂತಹ ಪರ್ಯಾಯ ಶಿಕ್ಷಣ ಕ್ಷೇತ್ರ ನಮ್ಮ ಟ್ರಡಿಷನಲ್ ಶಿಕ್ಷಣ ಕ್ಷೇತ್ರಕ್ಕೆ ಹೊಡೆತ ನೀಡುತ್ತದೆ. ಅವರಿಗೆ ಹಚ್ಚಿನ ಲಾಭವಿಲ್ಲದೆ ಅವರೇಕೆ ಈ ಕೆಲಸ ಮಾಡುತ್ತಾರೆ? ಎಲ್ಲಕ್ಕೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರ ಅದರ ಗಂಧಗಾಳಿಯಿಲ್ಲದ ಧನವಂತರ ಕೈಲಿದೆ. ಭಾರತದ ಶಿಕ್ಷಣ ಕ್ಷೇತ್ರವನ್ನ ಇಂತವರ ಕಬಂದ ಬಾಹುಗಳಿಂದ ಬಿಡಿಸಿ ನಮ್ಮ ಮಕ್ಕಳ ಮುಂದಿನ ಸಮಯಕ್ಕೆ ಸಜ್ಜು ಮಾಡುವ ಹೊಣೆ ಪ್ರಜ್ಞಾವಂತ ನಾಗರಿಕರಾದ ನಮ್ಮ ಮೇಲಿದೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಭಾರತ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳುವುದು ಶತಃಸಿದ್ಧ.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com