ಇಂದಿನ ಆರ್ಥಿಕ ಸ್ಥಿತಿಗೆ ಡಿಮಾನಿಟೈಸೇಷನ್ ಕಾರಣವೇ?

ಇಲ್ಲದ ಹಣವನ್ನು ಸೃಷ್ಟಿಸಿದ್ದರ ಫಲ ಇಂದು ತೆರಬೇಕಾಗಿದೆ. ಇದು ಕರೆಕ್ಷನ್ ಟೈಮ್. ಇದಕ್ಕೆ ವೇಳೆಯೇ ಸರಿಯಾದ ಮದ್ದು. ಬದಲಾವಣೆ ಎನ್ನುವುದು ನೋವು ಕೊಟ್ಟೆ ಕೊಡುತ್ತದೆ.
ಇಂದಿನ ಆರ್ಥಿಕ ಸ್ಥಿತಿಗೆ ಡಿಮಾನಿಟೈಸೇಷನ್ ಕಾರಣವೇ ?
ಇಂದಿನ ಆರ್ಥಿಕ ಸ್ಥಿತಿಗೆ ಡಿಮಾನಿಟೈಸೇಷನ್ ಕಾರಣವೇ ?

ವ್ಯವಸ್ಥೆ ಶಿಸ್ತುಬದ್ಧವಾಗಿದ್ದರೆ ಬದುಕಿನ ಎಲ್ಲಾ ಮಜಲುಗಳ ಅಂಕಿ-ಅಂಶ ನಿಖರವಾಗಿ ಸಿಗುತ್ತದೆ. ವ್ಯವಸ್ಥೆಯ ಜಟಿಲತೆ ನಮ್ಮ ದೇಶದಲ್ಲಿ ಎಷ್ಟಿದೆಯೆಂದರೆ ಆ ಜಟಿಲತೆಯ ನಿಖರ ಲೆಕ್ಕವೂ ಸಿಗದೆ ಹೋಗುತ್ತದೆ.

ಒಂದು ಭಾರತ ದೇಶದಲ್ಲಿ ಹಲವು ದೇಶಗಳು ಮಿಳಿತವಾಗಿದೆ. ನಮ್ಮ ದೇಶವನ್ನ ಒಂದು ದೊಡ್ಡ ರೈಲು ಎಂದು ಕೊಂಡರೆ ಆ ರೈಲಿನ ಮೊದಲನೇ ಬೋಗಿ ಪಶ್ಚಿಮದ ದೇಶಗಳಿಗೆ ಸೆಡ್ಡು ಹೊಡೆಯುವಂತಿದ್ದರೆ ಕೊನೆಯ ಬೋಗಿ ಇನ್ನೂ ಶಿಲಾಯುಗದಲ್ಲಿದೆ. ಹೌದು ಇದು ನಮ್ಮ ದೇಶದ ಆರ್ಥಿಕ, ಸಾಮಾಜಿಕ ಜಟಿಲತೆ. ನಾವು ಹೋಗುತ್ತಿರುವ ದಾರಿ ಸರಿಯಿಲ್ಲ ಎಂದ ತಕ್ಷಣ ಬೇರೆ ದಾರಿ ಹಿಡಿಯುವ ಅವಕಾಶ ನಮಗಿಲ್ಲ ಏಕೆಂದರೆ ನಮ್ಮ ದೇಶ ಸಾಗುತ್ತಿರುವುದು ಹಳಿಯ ಮೇಲೆ! ರಸ್ತೆಯ ಮೇಲಲ್ಲ!!
 
ನವೆಂಬರ್ 8, 2016 ನಮ್ಮ ವ್ಯವಸ್ಥೆಯಲ್ಲಿನ 86 ಪ್ರತಿಶತ ಚಲಾವಣೆಯಲ್ಲಿದ್ದ ಹಣವನ್ನ ಹಿಂಪಡೆದಿದ್ದು ಹಳಿಯ ಮೇಲೆ ಹೋಗುತ್ತಿದ್ದ ರೈಲನ್ನ ವಿರುದ್ಧ ದಿಕ್ಕಿಗೆ ತಿರುಗಿಸಿದಂತೆಯೇ. ಭಾರತದಂತಹ ಅತಿ ದೊಡ್ಡ ದೇಶದ ಜಡ್ಡು ಗಟ್ಟಿದ ವ್ಯವಸ್ಥೆಯನ್ನ ಸ್ವಚ್ಛಗೊಳಿಸುವುದು ಸುಲುಭದ ಮಾತಲ್ಲ.  ಎಷ್ಟೋ ಜನರಿಗೆ ಹೀಗಾಗಿತ್ತು ಎನ್ನುವುದು ಮರೆತು ಹೋಗಿ ಜೀವನ ಮತ್ತೆ ಹಿಂದಿನಂತೆ ಸಾಗುತ್ತಿದೆ. ಎಷ್ಟೋ ಜನಕ್ಕೆ ಮರಳಿ ತಮ್ಮ ಹಿಂದಿನ ವೈಭವ ಪಡೆಯಲು ಆಗಿಲ್ಲ. ಇನ್ನೂ ಎಷ್ಟೋ ಜನ ಇಂತಹ ಜಟಿಲತೆಯನ್ನು ಜೀರ್ಣಿಸಿಕೊಳ್ಳಲು ಆಗದೆ ಬದುಕಿನ ಆಟಕ್ಕೆ ಗುಡ್ ಬೈ ಹೇಳಿ ಹೋಗಿರುವ ನಿದರ್ಶನಗಳನ್ನು ಕಂಡಿದ್ದೇನೆ.

ಡಿಮಾನಿಟೈಸೇಷನ್ ನಿಂದ ಇಂತಿತಹ ಲಾಭವಾಯ್ತು ಎಂದು ಬರೆದು ಸರಕಾರವನ್ನ ಹೊಗಳಿ ಅಟ್ಟಕ್ಕೆ ಏರಿಸುವರ ಸಂಖ್ಯೆ ಬಹಳವಿದೆ. ಹಾಗೆಯೇ ಮೋದಿ ಸರಕಾರವನ್ನ ಸುಖಾಸುಮ್ಮನೆ ದ್ವೇಷಿಸುವರ, ಡಿಮಾನಿಟೈಸೇಷನ್ ನಿಂದ ದೇಶದ ಆರ್ಥಿಕತೆ ಕೆಟ್ಟು ಹೋಗಿದೆ ಎನ್ನುವರ ಸಂಖ್ಯೆಯೂ ಕಡಿಮೆಯೇನಿಲ್ಲ. ಪರ-ವಿರೋಧಗಳ ಮೀರಿ ಸಾಧ್ಯವಾದಷ್ಟು ಸತ್ಯವಾದ ವಸ್ತುನಿಷ್ಠವಾದ ವಿಶ್ಲೇಷಣೆ ಮಾಡುವ ಪ್ರಯತ್ನವಿದು.

ಹಿಂದೆ ಸಮಾಜದಲ್ಲಿ ಹಣದ ಹರಿವು ಬಹಳವಿತ್ತು. ಇಂದು ಹಣದ ಹರಿವು ಇಲ್ಲ ಎನ್ನುವ ಕೂಗು ಹೆಚ್ಚಾಗಿದೆ. ಇದಕ್ಕೆಲ್ಲ ಡಿಮಾನಿಟೈಸೇಷನ್ ಕಾರಣ ಎನ್ನುವ ಮಾತು ಇಂದು ಹೆಚ್ಚಾಗಿ ಕೇಳಿ ಬರುತ್ತಿದೆ. ಇದೆಷ್ಟು ಸರಿ ಅನ್ನುವುದನ್ನ ಇಂದು ತಿಳಿದುಕೊಳ್ಳೋಣ.

ಡಿಮ್ಯಾನಿಟಿಸಷನ್ ಅಥವಾ ಹಳೆಯ ನೋಟನ್ನ ನಿರ್ಬಂಧಿಸುವ ಉದ್ದೇಶ ನಮ್ಮ ಸಮಾಜದಲ್ಲಿ ಇರುವ ಹಣದಿಂದ ಉಂಟಾದ ಕಪ್ಪು ಹಣವನ್ನ ನಿಯಂತ್ರಿಸುವುದು ಒಂದು ಕಾರಣ. ಅಂದು ನಮ್ಮ ಬ್ಯಾಂಕ್ಗಳಿಗೆ 99 ಪ್ರತಿಶತ ಹಣ ಮರಳಿ ಬಂದಾಗ ನಮ್ಮ ಸಮಾಜದಲ್ಲಿ ಕಪ್ಪು ಹಣ ಇರಲಿಲ್ಲವೇ? ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ದೊಡ್ಡ ದೊಡ್ಡ ರಾಜಕಾರಿಣಿಗಳ ಮನೆಗೆ ಹೊಸ ನೋಟು ತಲುಪಿಸಲಾಗಿದೆ ಅದು ಹೇಗೆ ಅಷ್ಟೊಂದು ಹಣ ವ್ಯವಸ್ಥೆಗೆ ಮರಳಿ ಬರಲು ಸಾಧ್ಯ? ಎನ್ನುವ ಪ್ರಶ್ನೆ ಜೊತೆಗೆ ಯಾರಾದರೂ ಒಬ್ಬ ದೊಡ್ಡ ರಾಜಕಾರಿಣಿಯನ್ನ ಬಂಧಿಸಲಾಯಿತಾ? ಎನ್ನುವ ಪ್ರಶ್ನೆ ಕೂಡ ಸಮಾಜದಲ್ಲಿ ಎದ್ದಿತ್ತು. ಇಂದಿಗೆ ಇವಕ್ಕೆಲ್ಲ ಉತ್ತರ ಸ್ಕಿಗುತ್ತಾ ಇದೆ ಅಲ್ವಾ?  

ಎಲ್ಲಕ್ಕೂ ಮುಖ್ಯ ಕಾರಣ ಒಂದೇ ನೋಟಿನ ಮೂರು ನೋಟಿದ್ದರೆ? ಅಂದರೆ ಗಮನಿಸಿ ನೋಟು ಮುದ್ರಣವಾದಾಗ ಪ್ರತಿ ನೋಟಿಗೂ ಒಂದು ಸಂಖ್ಯೆ ನೀಡುತ್ತಾರೆ. ಅಂತಹ ಸಂಖ್ಯೆಯುಳ್ಳ ಒಂದೇ ನೋಟು ಇರಬೇಕು. ಅದರ ಬದಲು ಅದೇ ಸಂಖ್ಯೆಯ ಮೂರು ಅಥವಾ ನಾಲ್ಕು ನೋಟಿದ್ದರೆ?  ನಕಲಿ ನೋಟುಗಳು ಅಸಲಿಯ ತಲೆ ಮೇಲೆ ಹೊಡೆದಂತೆ ಬಂದಿದ್ದವು ಅವು ಬ್ಯಾಂಕ್ಗಳಲ್ಲಿ ಡೆಪಾಸಿಟ್ ಕೂಡ ಆಗಿ ಸಮಾಜದಲ್ಲಿ ಸೇರಿ ಹೋಗಿದ್ದವು. ಇದು ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಗಿತ್ತು. ಇವತ್ತೇನಾಗಿದೆ ಇಂತಹ ಹಣ ಇಲ್ಲವಾಗಿದೆ. ಹೀಗಾಗಿ ಗಮನಿಸಿ ನಮ್ಮ ಸಮಾಜದಲ್ಲಿ ಹಣದುಬ್ಬರ ಅಥವಾ ಇನ್ಫ್ಲೇಶನ್ ಕೂಡ ಅತ್ಯಂತ ಕಡಿಮೆ ಅಂಕಿಯಲ್ಲಿದೆ. ಆದರೆ ಹಿಂದಿದ್ದ ನಕಲಿ ನೋಟುಗಳು ಇಲ್ಲ. ಹೀಗಾಗಿ ವ್ಯವಸ್ಥೆಯಲ್ಲಿ ನಗದು ಹೆಚ್ಚಾಗಿ ಓಡಾಡುತ್ತಿಲ್ಲ.

ಇಂತಹ ಹಣದ ಒಡೆಯರು ಅಥವಾ ಇಂತಹ ಹಣವನ್ನ ಹಂಚುತ್ತಿದ್ದವರು ಇಂದು ಕಂಗಾಲಾಗಿದ್ದಾರೆ. ತಾವು ಕಟ್ಟಿಕೊಂಡಿದ್ದ ಅರಮನೆ ಕರಗಿಹೋಗುವುದನ್ನ ಇವರು ಹೇಗೆ ತಾನೇ ಸಹಿಸಿಯಾರು? ಆದರೆ ಅಂಕಿ-ಅಂಶ ಎಂದೂ ಸುಳ್ಳು ಹೇಳುವುದಿಲ್ಲ. ಗಮನಿಸಿ ಹಿಂದೆ ಎಲ್ಲವೂ ಅಂದರೆ ಬಹುತೇಕ ನಗದಿನ ಮೂಲಕ ನೆಡೆದು ಹೋಗುತ್ತಿತ್ತು, ಹೀಗಾಗಿ ಸಮಾಜದಲ್ಲಿನ ಅಂಕಿ-ಅಂಶಗಳು ನಿಖರವಾಗಿ ಇರುತ್ತಿರಲಿಲ್ಲ. ಈಗ ಇವೆಲ್ಲವನ್ನ ದಾಖಲಿಸಲು ಶುರು ಮಾಡಿದ್ದೇವೆ. ಒಂದಂಶ ಕುಸಿದರೂ ಅದು ಎದ್ದು ಕಾಣುತ್ತದೆ.

ಮುಂಬರುವ ದಿನಗಳಲ್ಲಿ ಹೀಗೆ ಎಲ್ಲವನ್ನೂ ದಾಖಲಿಸುವುದರ ಫಲ ಜಿಡಿಪಿ ಹೆಚ್ಚಳದಲ್ಲಿ ಕಾಣಲಿದೆ. ಕೇಂದ್ರ ಸರಕಾರ ಹೆಚ್ಚು ಡಿಜಿಟಲ್ ಹಣಕ್ಕೆ ಒತ್ತು ನೀಡುತ್ತಿದೆ. ಗಮನಿಸಿ ಹತ್ತಾರು ವರ್ಷದಿಂದ ವ್ಯವಸ್ಥೆಯೊಳಗೆ ತಮ್ಮ ಅನುಕೂಲಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆಯನ್ನ ಕಟ್ಟಕೊಂಡಿದ್ದ ವ್ಯಾಪಾರಸ್ಥರು ಮತ್ತು ಇತರ ಅನುಕೂಲಸ್ಥ ಜನ ಒಮ್ಮೆಲೇ ಬದಲಾದ ವ್ಯವಸ್ಥೆಯಿಂದ ವಿಚಲಿತರಾಗಿರುವುದು ಸುಳ್ಳಲ್ಲ. ಅವರಿಗೆ ಮಾಡುವ ಕೆಲಸ ಕಾರ್ಯಗಳಲ್ಲಿ ಅಡಚಣೆಯಾಗುತ್ತಿದೆ ಎನ್ನುವ ಭಾವನೆ ಕೂಡ ಇದೆ. ಹೀಗಾಗಿ ಹೊಸ ಉದ್ದಿಮೆ ಅಥವಾ ಇರುವ ಉದ್ದಿಮೆಯನ್ನ ದೊಡ್ಡದು ಮಾಡುವ ಉಮೇದು ಕಡಿಮೆಯಾಗಿರುವುದು ಕೂಡ ನಿಜ. ಎಲ್ಲಕ್ಕೂ ಲೆಕ್ಕ ಕೇಳುತ್ತಾರೆ ಎನ್ನುವುದು ಸಾಮಾನ್ಯ ನಿಂದನೆ. ಇಷ್ಟು ವರ್ಷ ತಮಗೆ ಬೇಕಾದ ರೀತಿ ವ್ಯವಹಾರ ಮಾಡಿಕೊಂಡ ಬಂದ ಜನರಿಗೆ ಒಮ್ಮೆಲೇ ಮೂಗು ದಾರ ತೊಡಿಸಿರುವುದು ಕೂಡ ಒಂದಂಶದ ದೇಣಿಗೆ ನೀಡಿದೆ.

ನಿಮಗೆಲ್ಲ ನೆನಪಿದೆಯೂ ಇಲ್ಲವೋ ಗೊತ್ತಿಲ್ಲ. ಡಿಮಾನಿಟೈಸೇಷನ್ 45 ದಿನದ ನಂತರ ಆರ್ ಬಿಐ ತಿಂಗಳಿಗೂ ಹೆಚ್ಚು ಸಮಯವನ್ನ ತೆಗೆದುಕೊಂಡಿತು. ಎಷ್ಟು ಹಣ ಮರಳಿ ಬ್ಯಾಂಕಿನ ಖಾತೆಗೆ ಸೇರಿತು ಎನ್ನುವ ಅಂಕಿ ಅಂಶವನ್ನ ನೀಡುವುದಕ್ಕೆ, ಆಗ ಸರಕಾರವನ್ನ, ಆರ್ ಬಿ ಐ ಅನ್ನು ಟೀಕಿಸಿದವರಲ್ಲಿ ನಾನೂ ಒಬ್ಬ! ಆದರೆ ಗಮನಿಸಿ ತನ್ನ ವ್ಯವಸ್ಥೆಯಲ್ಲಿ ಲೆಕ್ಕದಲ್ಲಿ ಇರುವ ಹಣಕ್ಕಿಂತ ಹೆಚ್ಚಿನ ಹಣ ವ್ಯವಸ್ಥೆಯಲ್ಲಿದ್ದರೆ ಅದನ್ನ ಹೇಗೆ ಲೆಕ್ಕ ಒಪ್ಪಿಸುವುದು? ಅಂದರೆ ಗಮನಿಸಿ ನೋಡಿ ಆರ್ ಬಿ ಐ ಬಳಿ ಇರುವ ಲೆಕ್ಕಾಚಾರದ ಪ್ರಕಾರ ನಮ್ಮ ಸಮಾಜದಲ್ಲಿ 100 ರುಪಾಯಿ ಚಲಾವಣೆಯಲ್ಲಿದೆ ಎಂದುಕೊಳ್ಳಿ. ನಕಲಿ ನೋಟುಗಳ ಹಾವಳಿ ಎಷ್ಟಿತೆಂದರೆ ನಮ್ಮ ಸಮಾಜದಲ್ಲಿ ಚಲಾವಣೆಯಲ್ಲಿದ್ದ ಹಣದ ಮೌಲ್ಯ ಮುನ್ನರಕ್ಕೂ ಹೆಚ್ಚು! ನಮ್ಮ ದೇಶವನ್ನ ಅದೆಷ್ಟರ ಮಟ್ಟಿಗೆ ಒಳಗಿನಿಂದ ಶಿಥಿಲಗೊಳಿಸಲಾಗಿತ್ತು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಡ. ಇದನ್ನ ನಿಖರ ಅಂಕಿ-ಅಂಶ ದೊಂದಿಗೆ ಕೇಂದ್ರ ಸರಕಾರ, ಅಥವಾ ಆರ್ ಬಿ ಐ ಇದದ್ದಇದ್ದ ಹಾಗೆ ಜನರ ಮುಂದೆ ಹೇಳಿದ್ದರೆ ಇಂದಿಗೆ ಭಾರತ ವೆನಿಜುವೆಲಾ ಹಾದಿಯಲ್ಲಿರುತ್ತಿತ್ತು . ಬುದ್ದಿವಂತ ಓದುಗರಿಗೆ  ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಎಂದುಕೊಳ್ಳುವೆ.

ಕೊನೆ ಮಾತು:  ಸರಿ ಹೀಗೆ ಮಾಡುವುದರಿಂದ ತಪ್ಪು ಮಾಡಿದವರಿಗೆ ಶಾಸ್ತಿಯಾಯ್ತು ನಿಜ ಒಪ್ಪಿಕೊಳ್ಳೋಣ . ಇದರಿಂದ ನಮಗೆ ಸುಮ್ಮನೆ ತೊಂದರೆಯಾಯ್ತು. ಅಲ್ವಾ ಎನ್ನುವ ಜನರಿಗೆ: ನಿಮ್ಮ ಮನೆಯ ಮುಂದಿನ ಮೋರಿ ಕಟ್ಟಿ ವಾಸನೆ ಬರುತ್ತಿತ್ತು ಎಂದುಕೊಳ್ಳಿ. ಇದರ ಬಗ್ಗೆ ಯಾರಿಗೆ ದೂರು ಕೊಟ್ಟರೂ ಏನೂ ಮಾಡುತ್ತಿರಲಿಲ್ಲ . ಕೊನೆಗೆ ನಿಮ್ಮ ವಠಾರದ ಮುಖ್ಯಸ್ಥನಾಗಿ ಆಯ್ಕೆಯಾದ ವ್ಯಕ್ತಿ ಎಲ್ಲರಿಗಿಂತ ಭಿನ್ನ. ಸರಿ ಆದದ್ದಾಗಲಿ ಎಂದು ಮೋರಿಯನ್ನ ಕೆತ್ತಿಸುವ ಕೆಲಸಕ್ಕೆ ಶುರು ಮಾಡಿಯೇ ಬಿಡುತ್ತಾನೆ. ವಠಾರದಲ್ಲಿ ಹತ್ತು ಮನೆಯಿದ್ದರೆ ಅದರಲ್ಲಿ ನಾಲ್ಕಾರು ಮನೆಯವರಿಗೆ ನಡೆದಾಡಲು ಒಂದಷ್ಟು ದಿನ ತೊಂದರೆ ಆಗುತ್ತದೆ. ವಾಸನೆ ಕೂಡ ಮೊದಲಿಗಿಂತ ಹೆಚ್ಚಾಗಿ ಎಲ್ಲರನ್ನೂ ಕಾಡುತ್ತದೆ. ಆದರೆ ಮೋರಿ ಒಂದು ದಿನದಲ್ಲಿ ಕಟ್ಟಲಿಲ್ಲ. ಅದು ಹತ್ತಾರು ವರ್ಷದ ಫಲವದು. ಅದನ್ನ ಸ್ವಚ್ಛ ಮಾಡುವಾಗ ವಠಾರದ ಜನರಿಗೆ ತೊಂದರೆಯಾಗುವುದು ಸಹಜ. ಇಂದಿನ ಸ್ಥಿತಿಯೂ ಹೀಗೆ. ಇಲ್ಲದ ಹಣವನ್ನು ಸೃಷ್ಟಿಸಿದ್ದರ ಫಲ ಇಂದು ತೆರಬೇಕಾಗಿದೆ. ಇದು ಕರೆಕ್ಷನ್ ಟೈಮ್. ಇದಕ್ಕೆ ವೇಳೆಯೇ ಸರಿಯಾದ ಮದ್ದು. ಬದಲಾವಣೆ ಎನ್ನುವುದು ನೋವು ಕೊಟ್ಟೆ ಕೊಡುತ್ತದೆ. ಸಮಾಜದಲ್ಲಿ ಲೆಕ್ಕದಲ್ಲಿ ಇಲ್ಲದ ಹಣವನ್ನ ಸೃಷ್ಟಿಸಿ ಚಲಾವಣೆಗೆ ಬಿಡಲಾಗಿತ್ತು. ಅದಕ್ಕೆ ಮೂಗುದಾರ ಹಾಕಲಾಗಿದೆ. ಇದು ಇವೆಲ್ಲಾ ಕೂಗುಗಳಿಗೆ ಮೂಲ ಕಾರಣವಾಗಿದೆ.

- ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com