ನಾಯಕತ್ವದ ಕೊರತೆಯಲ್ಲಿ ಕುಸಿದ ವೆನಿಜುಯೆಲಾ ಆರ್ಥಿಕತೆ! 

ಜಗತ್ತಿನ ತೈಲ ದಾಹವನ್ನ ತೀರಿಸುತ್ತಾ ಬಂದ ವೆನಿಜುಯೆಲಾ ತನ್ನ ಜನರ ಆಹಾರ-ಬಟ್ಟೆ-ನೀರಿನಂತ ಅತ್ಯಂತ ಮೂಲಭೂತ ಬೇಡಿಕೆಗಳನ್ನ ಕೂಡ ತೀರಿಸಲಾಗದ ದೈನೇಸಿ ಸ್ಥಿತಿಗೆ ಬಂದದ್ದು ಬಾಹ್ಯ ಕಾರಣಗಳಿಗಿಂತ ತನ್ನ ನಾಯಕರಲ್ಲಿ ಇದ್ದ  ದೂರದೃಷ್ಟಿಯ ಕೊರತೆಯಿಂದ ಎಂದು ಧಾರಾಳವಾಗಿ ಹೇಳಬಹದು.

Published: 19th September 2019 12:00 AM  |   Last Updated: 19th September 2019 09:16 AM   |  A+A-


hanaclasu-what-are-the-causes-of-venezuelas-economic-crisis-here-is-all-you-need-to-know

ನಾಯಕತ್ವದ ಕೊರತೆಯಲ್ಲಿ ಕುಸಿದ ವೆನಿಜುಯೆಲಾ ಆರ್ಥಿಕತೆ! 

Posted By : Srinivas Rao BV
Source : Online Desk

ವೆನೆಜುವೆಲಾ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಅಮೇರಿಕಾ ಮತ್ತು ಸ್ಪೇನ್ ದೇಶಗಳಿಗೆ ಸದಾ ಸೆಟೆದು ನಿಂತ ಆ ದೇಶದ ದಿವಂಗತ ನಾಯಕ ಹುಗೊ ಚಾವೇಸ್. ಬಹುತೇಕ ದಕ್ಷಿಣ ಅಮೆರಿಕದ ಅಧ್ಯಕ್ಷರು ನಿಗೂಢ ಸಾವನ್ನಪ್ಪಿದವರೇ. ಗಟ್ಟಿಮುಟ್ಟಾಗಿದ್ದ ಚಾವೇಸ್ ಕೂಡ ಅದೇ ದಾರಿಯಲ್ಲಿ ಸವೆದು ಹೋದ ನಾಯಕ. ಆತನ ಸಾವಿನ ನಂತರ ಸೋಷಿಯಲಿಸ್ಟ್ ಪಾರ್ಟಿಯ ಮೇಲೆ ಹಿಡಿತ ಹೊಂದಿದ್ದ ಆತನ ಪರಮಾಪ್ತ ನಿಕೋಲಸ್ ಮದುರೋ ವೆನೆಜುವೆಲಾದ ಆಡಳಿತ ಚುಕ್ಕಾಣಿ ಹಿಡಿದ. ಅಂದಿನಿಂದ ವೆನೆಜುವೆಲಾದ ಜನರ ಬದುಕು ಅತ್ಯಂತ ದುರ್ಭರವಾಗಿ ಹೋಗಿದೆ. ಚಾವೇಸ್ ಇದ್ದಾಗ ಎಲ್ಲವೂ ತುಂಬಾ ಚೆನ್ನಾಗಿತ್ತು ಎನ್ನುವ ಹಾಗೇನು ಇರಲಿಲ್ಲ. ಅಂದರೆ ಇಂದಿನ ಸ್ಥಿತಿಗಿಂತ ಚೆನ್ನಾಗಿತ್ತು. ಇವತ್ತು ವೆನೆಜುವೆಲಾ ಆರ್ಥಿಕವಾಗಿ ದಿವಾಳಿ ಎದ್ದು ಹೋಗಿದೆ. ಅದರ ರಿಸರ್ವ್ ಕೇವಲ 10 ಬಿಲಿಯನ್ ಡಾಲರ್ ಗೆ ಕುಸಿದಿದೆ. ತನ್ನ ಪ್ರಜೆಗಳಿಗೆ ಬೇಕಾದ ಅತಿ ಅವಶ್ಯಕ ಆಹಾರ ಪದಾರ್ಥ, ಔಷದಿ ಕೊಂಡು ಅದಕ್ಕೆ ಹಣ ಪಾವತಿಸಲು ಆಗದ ಸ್ಥಿತಿ ಅದು ತಲುಪಿದೆ. ಹತ್ತು ಬಿಲಿಯನ್ ಡಾಲರ್ ಕಡಿಮೆ ಮೊತ್ತವೇ? ಎಂದು ನೀವು ಕೇಳಬಹದು. ಹತ್ತರಲ್ಲಿ ಏಳು ಬಿಲಿಯನ್ ಗೋಲ್ಡ್ ನಲ್ಲಿದೆ. ಇವತ್ತಿನ ಪರಿಸ್ಥಿತಿ ಹೇಗಿದೆ ಎಂದರೆ ಔಷದ ಅಥವಾ ಆಹಾರಕ್ಕೆ ತನ್ನ ಬಂಗಾರವನ್ನು ಹಣಕ್ಕೆ ಮಾರಬೇಕಾದ ಅಥವಾ ಒತ್ತೆ ಇಡಬೇಕಾದ ಸಂಕಷ್ಟದಲ್ಲಿದೆ. ವೆನೆಜುವೆಲಾ ಹಣ ತನ್ನ ಮೌಲ್ಯ ಕಳೆದುಕೊಂಡು ಪೇಪರ್ ಅನ್ನುವ ಸ್ಥಿತಿ ತಲುಪಿದೆ. ಅರಾಜಕತೆ ಎಂದರೆ ಏನು? ಕಾನೂನು ಮತ್ತು ವ್ಯವಸ್ಥೆ ಕುಸಿದರೆ ಏನಾಗಬಹುದು? ಎನ್ನುವುದನ್ನು ಇಂದು ನಾವು ವೆನೆಜುವೆಲಾದಲ್ಲಿ ನೇರವಾಗಿ ಕಾಣುತ್ತಿದ್ದೇವೆ. ಇವತ್ತಿಗೆ ವೆನಿಜುಯೆಲಾ ದಲ್ಲಿ ಪ್ರೆಸಿಡೆಂಟ್ ಅಥವಾ ದೇಶದ ಮುಖ್ಯಸ್ಥ ಯಾರು? ಎನ್ನುವ ಪ್ರಶ್ನೆ ನೀವು ಕೇಳಿದರೆ ಉತ್ತರ ಯಾರೂ ಕೂಡ ನಿಖರವಾಗಿ ಹೇಳಲಾಗದ ಅಸ್ಥಿರತೆ ಅಲ್ಲಿದೆ. 

ಹಣದುಬ್ಬರ ಅಥವಾ ಜನ ಸಾಮಾನ್ಯ ಭಾಷೆಯಲ್ಲಿ ಇನ್ಫ್ಲೇಶನ್ ಎಂದು ನಾವು ಏನನ್ನು ಕರೆಯುತ್ತೇವೆಯೋ ಅದು ಇಂದು ವೆನೆಜುವೆಲಾ ದಲ್ಲಿ 720 ಪ್ರತಿಶತ ಎಂದರೆ ನಂಬುವಿರಾ? ಭಾರತದಲ್ಲಿ ಹಣದುಬ್ಬರ ಈ ವರ್ಷ 3.8 ಪ್ರತಿಶತದಲ್ಲಿದೆ. ಯುರೋ ವಲಯದಲ್ಲಿ ಡೆಫ್ಲೇಷನ್ ಅಥವಾ ನೆಗೆಟಿವ್ ಇನ್ಫ್ಲೇಶನ್ ೦.2 ಪ್ರತಿಶತ. ಹಣದುಬ್ಬರ ಎಂದರೇನು? ಹಣದುಬ್ಬರ ಏಕೆ ಉಂಟಾಗುತ್ತದೆ? ಹಣದುಬ್ಬರದಲ್ಲಿ ಎಷ್ಟು ವಿಧ ಎನ್ನುವುದು ತಿಳಿದುಕೊಂಡರೆ ವೆನೆಜುವೆಲಾ ದಲ್ಲಿ ಏನಾಗುತ್ತಿದೆ. ಹಣದುಬ್ಬರ 720 ಪ್ರತಿಶತ ಎಂದರೆ ಅದೆಷ್ಟು ಮಾರಕ ಎನ್ನುವ ಅರಿವು ನಿಮಗಾಗುತ್ತದೆ.

ಹಣದುಬ್ಬರ ಎಂದರೇನು?

ಸಮಾಜದಲ್ಲಿ ಲಭ್ಯವಿರುವ ಒಟ್ಟು ಸೇವೆ ಮತ್ತು ಸರಕಿಗಿಂತ (ಗೂಡ್ಸ್ ಅಂಡ್ ಸರ್ವಿಸ್) ಹಣದ ಹರಿವು ಬಹಳ ಹೆಚ್ಚಿದ್ದರೆ ಅಂತಹ ಪರಿಸ್ಥಿತಿಗೆ ಹಣದುಬ್ಬರ ಎನ್ನಬಹುದು. ಇನ್ನೂ ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಸರುಕು ಮತ್ತು ಸೇವೆಯ ಬೆಲೆ ಹೆಚ್ಚುತ್ತಲೇ ಹೋಗುತ್ತಿದ್ದರೆ ಅದನ್ನು ಹಣದುಬ್ಬರ ಎನ್ನುತ್ತೇವೆ. ಒಟ್ಟಿನಲ್ಲಿ ವಸ್ತುವಿನ ಬೆಲೆ ಏರುಗತಿಯಲ್ಲಿದ್ದು ತನ್ನ ನೈಜ ಸಹಜ ಬೆಲೆಗಿಂತ ಅಧಿಕವಾಗಿ ಮಾರಾಟಗೊಳ್ಳುತ್ತಿದ್ದರೆ ಅದು ಹಣದುಬ್ಬರ ಎನಿಸಿಕೊಳ್ಳುತ್ತದೆ. ಉದಾಹರಣೆ ನೋಡೋಣ ಬನ್ನಿ.

ಸಾಮಾನ್ಯ ಪರಿಸ್ಥಿತಿಯಲ್ಲಿ ಒಂದು ಕಾಫೀ ಬೆಲೆ ಎಷ್ಟಿರಬಹುದು? ಹತ್ತು ರೂಪಾಯಿ ... ಇಪ್ಪತ್ತು... ಬೇಡ ಕೆಫೆ ಕಾಫೀ ಡೇ ಅಂತ ಸ್ವಲ್ಪ ಅಂಗಡಿಯಲ್ಲಿ, ಮಾಲ್ನಲ್ಲಿ 100 ರೂಪಾಯಿ ಇದ್ದಿತು ಅಲ್ಲವೇ? ಇಂದು ಹತ್ತು ರೂಪಾಯಿ ಇದದ್ದು ವರ್ಷದ ನಂತರ 11 ಅಥವಾ 12 ರೂಪಾಯಿ ಆದರೆ ಅದು ಹಣದುಬ್ಬರ ಆದರೆ ಹತ್ತು ರೂಪಾಯಿ ಬೆಲೆ ಕಾಫೀ ಸಾಯಂಕಾಲಕ್ಕೆ 11 ನಾಳೆ 12 ಅಥವಾ 13 ಅಂದರೆ? ಅದು ಓಡುವ ಹಣದುಬ್ಬರ (ಗಾಲ್ಲೊಪಿಂಗ್).

ಹಣದುಬ್ಬರ ಒಂದಕಿಯಲ್ಲಿ ಇದ್ದರೆ ಅದು ಸಮಾಜಕ್ಕೆ ಹಿತ. ಹಣದುಬ್ಬರ ಸಮಾಜದ ಬೆಳವಣಿಗೆಗೆ ಅವಶ್ಯಕ. ಹಣದುಬ್ಬರ ಬೇಕು. ಹಣದುಬ್ಬರ ಎರಡಂಕಿ ತಲುಪಿದರೆ ಅದು ಸಮಾಜಕ್ಕೆ ಮಾರಕ. ವಸ್ತು ಮತ್ತು ಸೇವೆಯ ಬೆಲೆ ದಿನಕ್ಕೋ ವಾರಕ್ಕೂ ಬದಲಾದರೆ ಅದು ಉತ್ತಮ ಬೆಳವಣಿಗೆಯಲ್ಲ. ಇವತ್ತು ಹೋಟೆಲ್ ನಲ್ಲಿ ಇಡ್ಲಿ ಬೆಲೆ ಹತ್ತು ರೂಪಾಯಿ ನಾಳೆ ಎಷ್ಟು? ಎನ್ನುವ ಅನಿಶ್ಚಿತತೆ ಸಮಾಜದ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ. ಹೇಳಿಕೇಳಿ ವೆನೆಜುವೆಲಾದಲ್ಲಿ ಈಗಿರುವುದು ಗಾಲ್ಲೊಪಿಂಗ್ ಅಂದರೆ ನಾಗಾಲೋಟಾದಲ್ಲಿ ಓಡುತ್ತಿರುವ ಹಣದುಬ್ಬರ… ಮೂರಂಕಿಯ ಹಣದುಬ್ಬರ.

ಹಣದುಬ್ಬರ ಏಕೆ ಉಂಟಾಗುತ್ತದೆ?
ಬಜೆಟ್ ಡೆಫಿಸಿಟ್ ಅಂದರೆ ಸರಕಾರದ ಆದಾಯ ಮತ್ತು ಖರ್ಚಿನ ನಡುವಿನ ಅಂತರ. ಖರ್ಚು ಹೆಚ್ಚು ಆದಾಯ ಕಡಿಮೆ. ಇದನ್ನು ಸರಿದೂಗಿಸಲು ಹೆಚ್ಚು ಹಣ ಮುದ್ರಿಸುವುದರಿಂದ ಹಣದುಬ್ಬರ ಉಂಟಾಗುತ್ತದೆ. ಸರುಕು ಮತ್ತು ಸೇವೆ ಕಡಿಮೆಯಿದ್ದು ಅದಕ್ಕೆ ಬೇಡಿಕೆ ಹೆಚ್ಚಿದ್ದರೆ ಕೂಡ ಹಣದುಬ್ಬರ ಹೆಚ್ಚಾಗುತ್ತೆ. ಸಮಾಜಕ್ಕೆ ಅಥವಾ ಜನರಿಗೆ ಅವಶ್ಯಕತೆಗೂ ಮೀರಿದ ಹಣವನ್ನು ಬ್ಯಾಂಕುಗಳು ಸಾಲದ ರೂಪದಲ್ಲಿ ನೀಡುವುದರಿಂದಲೂ ಹಣದುಬ್ಬರ ಹೆಚ್ಚಾಗುತ್ತೆ. ವಸ್ತು ಒಂದನ್ನು ತಯಾರಿಸಲು ಹೆಚ್ಚು ವ್ಯಯ (ಉದಾಹರಣೆ ಪೆಟ್ರೋಲ್ ) ಆಗುವುದರಿಂದ ಕೂಡ ಹಣದುಬ್ಬರ ಉಂಟಾಗುತ್ತದೆ. ಹೀಗೆ ಸಾಮಾನ್ಯ ಪರಿಸ್ಥಿತಿಯಿಂದ ಭಿನ್ನ ಸ್ಥಿತಿ ಹಣದುಬ್ಬರ ಉಂಟುಮಾಡುತ್ತದೆ ಎಂದು ಹೇಳಬಹುದು.

1950 ರಲ್ಲಿ ವೆನೆಜುವೆಲಾ ಜಗತ್ತಿನ 4 ನೇ ಶ್ರೀಮಂತ ರಾಷ್ಟ್ರವಾಗಿತ್ತು.

ನಿಮಗೆ ಗೊತ್ತೇ? ವೆನೆಜುವೆಲಾ 1950 ರಿಂದ 1980ರ ವರೆಗೆ ಅತ್ಯಂತ ಶ್ರೀಮಂತ ದೇಶವಾಗಿತ್ತು. ಅದರ ಆರ್ಥಿಕ ಅಭಿವೃದ್ಧಿಯ ದರ ಕೂಡ ಅತ್ಯಂತ ಚೆನ್ನಾಗೇ ಇತ್ತು. ಲ್ಯಾಟಿನ್ ಅಮೇರಿಕಾ ದೇಶಗಳ ಆರ್ಥಿಕತೆಯಲ್ಲಿ ವೆನಿಜುವೆಲಾ ಪ್ರಥಮ ಸ್ಥಾನದಲ್ಲಿತ್ತು. 1950ರ ತಲಾದಾಯ ವಾರ್ಷಿಕ 7500 ಅಮೆರಿಕನ್ ಡಾಲರ್ ಇತ್ತು. ಅಮೇರಿಕಾ ವಿಶ್ವದ ಹಿರಿಯಣ್ಣನ ಪ್ರಜೆಗಳ ಅಂದಿನ ತಲಾದಾಯ ವಾರ್ಷಿಕ 9,500 ಡಾಲರ್. 2019 ರ ಮಾರ್ಚ್ ನಲ್ಲಿ ಅಮೆರಿಕಾದ ಜನರ ತಲಾದಾಯ ವಾರ್ಷಿಕ 65ಸಾವಿರ ಡಾಲರ್! ಅದೇ ವೆನಿಜುಯೆಲಾ ಪ್ರಜೆಗಳ ವಾರ್ಷಿಕ ತಲಾದಾಯ 5,000 ಡಾಲರ್ ಗೆ ಕುಸಿದಿದೆ. ಅಂದರೆ ಗಮನಿಸಿ 1950ರಲ್ಲಿ ಜನ ಎಷ್ಟು ಹಣ ಗಳಿಸುತ್ತಿದ್ದರೋ ಅದಕ್ಕಿಂತ 4೦/5೦ ಪ್ರತಿಶತ ಕಡಿಮೆ ಹಣವನ್ನ ಗಳಿಸುತ್ತಿದ್ದಾರೆ. 1950ರಲ್ಲಿ ವೆನಿಜುಯೆಲಾ ಜಪಾನಿಗಿಂತ 4 ಪಟ್ಟು, ಚೀನಾಗಿಂತ 12 ಪಟ್ಟು ಹೆಚ್ಚು ಶ್ರೀಮಂತ ರಾಷ್ಟ್ರವಾಗಿತ್ತು. ಇಂತಹ ಶ್ರೀಮಂತ ರಾಷ್ಟ್ರ ಇಂದು ಬಡತನದ ಕರಾಳ ಹಿಡಿತಕ್ಕೆ ಸಿಕ್ಕಿ ನಲುಗಿ ಹೋಗುತ್ತಿದೆ. ನಡು ಬೀದಿಯಲ್ಲಿ ಜನ ಹಸಿವಿನಿಂದ ಸಾಯುತ್ತಿದ್ದಾರೆ. 70ವರ್ಷದ ಅಂತರದಲ್ಲಿ ಇಷ್ಟೊಂದು ಬದಲಾವಣೆ ಆಗಲು ಕಾರಣವೇನು ಗೊತ್ತೇ? 

ಎಲ್ಲಕ್ಕೂ ಪ್ರಥಮವಾಗಿ ಲೂಯಿಸ್ ಹೆರ್ರೇರಾ ಕಾಲದಲ್ಲಿ ಅಂದರೆ 1950ರಲ್ಲಿ ಕೂಡ ಹಣದುಬ್ಬರ 13ಪ್ರತಿಶತವಿತ್ತು. ಅಂದಿನಿಂದ 2007-2013ರ ವರೆಗೆ ಹುಗೊ ಚಾವೆಸ್ ಅವಧಿಯಲ್ಲಿ ಕೂಡ ಹಣದುಬ್ಬರ 23ಪ್ರತಿಶತವಿತ್ತು. 2013ರ ನಂತರ ಅಧಿಕಾರ ವಹಿಸಿಕೊಂಡ ನಿಕೋಲಸ್ ಮದುರೋ ಕಾಲದಲ್ಲಿ ಅದು ಮೂರಂಕಿ ತಲುಪಿತು. ಇಂದು ಇಲ್ಲಿ ಹಣಕ್ಕೆ ಬೆಲೆಯೇ ಇಲ್ಲದಂತಾಗಿದೆ. 

ಸಮರ್ಥ ನಾಯಕತ್ವ ಇಲ್ಲದಿದ್ದರೆ, ನಾಯಕನಾದವನಿಗೆ ನನ್ನ ದೇಶ ಅಥವಾ ನನ್ನ ಜನ ಅನ್ನುವ ಭಾವನೆ ಇಲ್ಲದಿದ್ದರೆ, ನಾಳಿನ ಬದುಕಿನ ಬಗ್ಗೆ ಒಂದು ಕನಸು ಇಲ್ಲದಿದ್ದರೆ ಏನಾಗಬಹದು? ಎನ್ನುವುದಕ್ಕೆ ಇಂದು ವೆನಿಜುಯೆಲಾ ಉದಾಹರಣೆಯಾಗಿ ನಿಂತಿದೆ. ಬಹುತೇಕ ದಕ್ಷಿಣ ಅಮೇರಿಕಾ ದೇಶಗಳಲ್ಲಿ ಭಾರತದಂತೆ ಲಂಚಗುಳಿತನ ಇದ್ದೆ ಇದೆ. ಇದರ ಜೊತೆಗೆ ರಾಜಕೀಯ ನಾಯಕರು ಕೇವಲ ತಮ್ಮ ಒಳಿತನ್ನ ಬಯಸಿದರೆ ಅಂತಹ ದೇಶ ಯಾವ ಮಟ್ಟಕ್ಕೆ ಕುಸಿಯಬಹದು ಎನ್ನವುದಕ್ಕೆ ವೆನಿಜುಯೆಲಾ ಕಡೆಗೆ ಒಮ್ಮೆ ನೋಡಿದರೆ ಸಾಕು. 

ಗಮನಿಸಿ ವೆನಿಜುಯೆಲಾ ಆರ್ಥಿಕತೆ ಅಂದು ಮತ್ತು ಇಂದಿಗೂ ಹೆಚ್ಚಾಗಿ ಅವಲಂಬಿಸಿರುವುದು ತೈಲದ ಮೇಲೆ. ಜಗತ್ತು ಇಂದು ಪರ್ಯಾಯ ಇಂಧನ ಬಳಕೆಯ ಕಡೆ ಮುಖ ಮಾಡುತ್ತಿದೆ. ಇನ್ನೊಂದು ದಶಕದಲ್ಲಿ ತೈಲಕ್ಕೆ ಗುಡ್ ಬೈ ಹೇಳಿದರೂ ಆಶ್ಚರ್ಯವಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ವೆನಿಜುಯೆಲಾ ಕೂಡ ಪರ್ಯಾಯ ಆರ್ಥಿಕ ಮೂಲವನ್ನ ಹುಡುಕಿಕೊಳ್ಳ ಬೇಕಾಗಿತ್ತು. ಆದರೆ ವೆನಿಜುಯೆಲಾ ಅದರಲ್ಲಿ ಎಡವಿದೆ. 

ಅಮೇರಿಕಾ ಮತ್ತು ಸ್ಪೇನ್ ದೇಶಗಳು ಈ ದೇಶದ ನೈಸರ್ಗಿಕ ಸಂಪತ್ತನ್ನ ಅಲ್ಲಿನ ಭ್ರಷ್ಟ ರಾಜಕಾರಿಣಿಗಳ ಜೊತೆ ಸೇರಿ ಲೂಟಿ ಹೊಡೆದಿವೆ. ಅಮೆರಿಕಾ ದೇಶವಂತೂ ತೈಲ ಸಂಪತ್ತಿನ ಕಾರಣದಿಂದ ವೆನಿಜುಯೆಲಾ ಮೇಲೆ ಕತ್ತಿ ಮಸೆಯುತ್ತಲೆ ಬಂದಿದೆ. 

ಜಗತ್ತಿನ ತೈಲ ದಾಹವನ್ನ ತೀರಿಸುತ್ತಾ ಬಂದ ವೆನಿಜುಯೆಲಾ ತನ್ನ ಜನರ ಆಹಾರ-ಬಟ್ಟೆ-ನೀರಿನಂತ ಅತ್ಯಂತ ಮೂಲಭೂತ ಬೇಡಿಕೆಗಳನ್ನ ಕೂಡ ತೀರಿಸಲಾಗದ ದೈನೇಸಿ ಸ್ಥಿತಿಗೆ ಬಂದದ್ದು ಬಾಹ್ಯ ಕಾರಣಗಳಿಗಿಂತ ತನ್ನ ನಾಯಕರಲ್ಲಿ ಇದ್ದ  ದೂರದೃಷ್ಟಿಯ ಕೊರತೆಯಿಂದ ಎಂದು ಧಾರಾಳವಾಗಿ ಹೇಳಬಹದು. ಅಮೇರಿಕಾ ಮತ್ತು ಸ್ಪೇನ್ ದೇಶಗಳು ಅಲ್ಲಿದ್ದ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನ ಬಂಡವಾಳ ಮಾಡಿಕೊಂಡು ತಮ್ಮ ಬೇಳೆ  ಬೇಯಿಸಿಕೊಂಡದ್ದು ಇನ್ನೊಂದು ಕಥೆ. 2015ರಲ್ಲಿ ವರ್ಲ್ಡ್ ಬ್ಯಾಂಕ್ ಬಿಡುಗಡೆ ಮಾಡುವ ಬಡತನದ ಪಟ್ಟಿಯಲ್ಲಿ ವೆನಿಜುಯೆಲಾ 180ನೇ ಸ್ಥಾನದಲ್ಲಿದೆ ಎನ್ನುವುದು ಪರಿಸ್ಥಿತಿಯ ಕರಾಳತೆಯನ್ನ ಎತ್ತಿ ತೋರಿಸುತ್ತದೆ. 

ಕೊನೆ ಮಾತು: ವೆನೆಜುವೆಲಾ ಬಳಿ ಸಾಲ ಕೊಟ್ಟವರಿಗೆ ವಾಪಸ್ಸು ಕೊಡಲು ಹಣವಿಲ್ಲ. ಹೊಸ ಸಾಲ ಹುಟ್ಟುವುದಿಲ್ಲ. ಆಹಾರ ಔಷದಿ ಸಂಗ್ರಹ ಇಲ್ಲವೆನ್ನುವಷ್ಟು. ಜನ ನಾಳಿನ ಬದುಕು ಬಿಡಿ ಇಂದಿನ ಬದುಕು ಹೇಗೆ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಸಾಮಾಜದ ಅರ್ಧ ಸತ್ತು ಬದುಕಿದರೆ ಉಳಿದರ್ಧ ಚನ್ನಾಗಿ ಬದುಕಬಹದು ಎನ್ನುವ ವಾಕ್ಯ ಆರ್ಥಿಕತೆಯ ಹುಚ್ಚಾಟದಲ್ಲಿ ಹೆಚ್ಚು ಅರ್ಥ ಪಡೆದುಕೊಳ್ಳುತ್ತಿದೆ. ಮಟ್ಟಿಗೆ ರಾಜಕೀಯ ಸ್ಥಿರತೆ ಮತ್ತು ಹಿಡಿತದಲ್ಲಿರುವ ಹಣದುಬ್ಬರ ಸದ್ಯದ ಮಟ್ಟಿಗೆ ವರದಾನವಾಗಿದೆ.

- ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp