ಕೊರೋನಾ ಕರಾಮತ್ತು; ಚೀನಾಗೆ ದಕ್ಕಿದೆ ವಿಶ್ವದ ಹುಕುಮತ್ತು! 

ಹಣಕ್ಲಾಸು

- ರಂಗಸ್ವಾಮಿ ಮೂಕನಹಳ್ಳಿ

Published: 02nd April 2020 01:15 AM  |   Last Updated: 02nd April 2020 01:19 AM   |  A+A-


Posted By : Srinivas Rao BV
Source : Online Desk

ಕಳೆದ ಒಂದು ದಶಕದಿಂದ ಚೀನಾ ಜಗತ್ತಿನ ಮೇಲೆ ಹಿಡಿತ ಹೊಂದಬೇಕೆನ್ನುವ ಅಭಿಲಾಷೆಗೆ ಸಹಕರಿಸಿದ್ದು ಅಮೆರಿಕಾ ಅಂದರೆ ಆಶ್ಚರ್ಯ ಆಗಬಹುದು. ಆದರೆ ಇದು ನಿಜ. ಎರಡು ಬಾರಿ (ಟರ್ಮ್) ಅಮೆರಿಕವನ್ನ ಆಳಿದ, ತನಗೆ ತಾನೇ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟುಕೊಂಡ ಬರಾಕ್ ಒಬಾಮ ಎನ್ನುವ ನಾಲಾಯಕ್ ನಾಯಕ ಜಗತ್ತಿನ ಇಂದಿನ ಸ್ಥಿತಿಗೆ ಅಪರೋಕ್ಷವಾಗಿ ಕಾರಣ. ಚೀನಾ ತನಗೆ ಬೇಕಾದಾಗೆಲ್ಲ ತನ್ನ ಕರೆನ್ಸಿ ಅಪಮೌಲ್ಯ ಮಾಡಿಕೊಂಡು ಮಾರುಕಟ್ಟೆಯನ್ನ ತನ್ನ ಇಚ್ಛೆಯಂತೆ ಕುಣಿಸುತ್ತಿತ್ತು. ಒಬಾಮ ಇದನ್ನ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. 

ನಂತರ ಬಂದ ಟ್ರಂಪ್ ಚೀನಾ ವಿರುದ್ಧ ಬುಸುಗುಡಲು ಶುರು ಮಾಡಿದರು. ಚೀನಾ ಕರೆನ್ಸಿ ಮ್ಯಾನಿಪುಲೇಟರ್ ಎಂದು ಟ್ರಂಪ್ ಚೀನಾವನ್ನ ಜರಿದದ್ದು ಆತನನ್ನ ಟ್ವಿಟ್ಟರ್ ನಲ್ಲಿ ಫಾಲೋ ಮಾಡುವ ಯಾರೂ ಮರೆತಿರಲಾರರು. ಯಾವಾಗ ಟ್ರಂಪ್ ಕರೆನ್ಸಿ ಏರುಪೇರು ಗಮನಿಸಲು ಒಂದು ಸಮಿತಿ ತಯಾರು ಮಾಡಿ, ಚೀನಾ ಒಂದೇ ಅಲ್ಲ ಚೀನಾದ ತಾಳಕ್ಕೆ ಕುಣಿಯುವ ಇತರ ದೇಶಗಳ ಹಣದ ಮೇಲೂ ನಿಗಾ ಇಡಲು ಶುರು ಮಾಡಿದರೋ, ಆಗ ನೋಡಿ ಚೀನಾಕ್ಕೆ ನಿಜವಾದ ಇರಿಸು ಮುರಿಸು ಉಂಟಾಯಿತು. ಇಷ್ಟು ದಿನ ತಾನು ಮಾಡುತಿದ್ದ ’ಕರೆನ್ಸಿ ವಾರ್' ಅನ್ನು ಕೇಳುವವರಿಲ್ಲದೆ ಕೊಬ್ಬಿದ್ದ ಚೀನಾ ಸರಿ ನೋಡೇಬಿಡೋಣ ಬಾ ಎನ್ನುವಂತೆ 'ಟ್ರೇಡ್ ವಾರ್' ಗೆ ಇಳಿಯಿತು. 

ಕಳೆದ ಎರಡೂವರೆ-ಮೂರು ವರ್ಷಗಳಿಂದ ಈ ಜಟಾಪಟಿ ನಡೆಯುತ್ತಿರುವುದು ಕೂಡ ನಾನು ಇಲ್ಲಿ ಹೊಸದಾಗಿ ಬರೆಯುವ ಅವಶ್ಯಕತೆಯಿಲ್ಲ. ಅದು ಕೂಡ ಜಾಗತಿಕ ರಾಜಕೀಯ ಮತ್ತು ವಾಣಿಜ್ಯ ರಾಜಕೀಯ ವಿಷಯವನ್ನ ಗಮನಿಸುವ ಎಲ್ಲರಿಗೂ ತಿಳಿದೇ ಇರುತ್ತದೆ. ಚೀನಾದ ಟ್ರೇಡ್ ವಾರ್ ಗೆ ಉತ್ತರ ಕೊಡುತ್ತಾ ಅಮೇರಿಕಾ ಅದರಲ್ಲಿ 'ಪ್ರೈಸ್ ವಾರ್' ಎನ್ನುವ ಹೊಸ ವರಸೆಯನ್ನ ಕೂಡ ಸೇರಿಸಿತು. ಚೀನಾ ಅದಕ್ಕೆ ತಕ್ಕ ಉತ್ತರ ಕೂಡ ಕೊಟ್ಟಿತು. ಚೀನಾ ಮನಸ್ಸು ಮಾಡಿದ್ದರೆ ಅಂದೇ ಅಮೆರಿಕವನ್ನ ಕಟ್ಟಿ ಹಾಕಬಹುದಿತ್ತು. 2020ರ ವರೆಗೆ ಕಾಯುವ ಅವಶ್ಯಕತೆ ಏನಿತ್ತು? ಗಮನಿಸಿ ಅಂದು ಚೀನಾ ಉತ್ತರ ಕೊಡಲು ಹೋಗಿದ್ದರೆ ಅಮೇರಿಕಾ ಕೂಡ ಹೋರಾಡುತ್ತಿತ್ತು. ಈಗ ಅದಕ್ಕೆ ಸಮಯವಿಲ್ಲ. ಅಮೆರಿಕಾದ ಅಧ್ಯಕ್ಷರ ಮುಂದೆ ಪ್ರೆಸಿಡೆನ್ಷಿಯಲ್ ಎಲೆಕ್ಷನ್ ಬಂದು ನಿಂತಿದೆ. 03/11/2020 ಎಲೆಕ್ಷನ್ ದಿನಾಂಕ ನಿಗದಿಯಾಗಿದೆ. ಚೂರು ಹೆಚ್ಚು ಕಡಿಮೆಯಾದರೆ ಕುಳಿತ ಪಟ್ಟ ಕಳೆದುಕೊಳ್ಳುವ ಭಯದಲ್ಲಿ ಟ್ರಂಪ್ ಸಿಲುಕಿದ್ದಾರೆ.

ಕಳೆದ ಮೂರ್ನಾಲ್ಕು ದಿನದ ಅವರ ಪ್ರೆಸ್ ಮೀಟ್ ನೋಡಿ ಅದರಲ್ಲಿ ಒಂದು ಸಭೆಯಲ್ಲಿ 'ಐ ವಾಂಟ್ ದಿಸ್ ವೈರಸ್ ಔಟ್ ಬೈ ಈಸ್ಟರ್' ಎನ್ನುತ್ತಾರೆ. ಅಂದರೇನರ್ಥ? ಈಸ್ಟರ್ ಹಬ್ಬದ ವೇಳೆಗೆ ಒಂದಲ್ಲ ಒಂದು ರೀತಿಯ ಸಂಧಾನ ಮಾಡಿಕೊಳ್ಳುವ ಇರಾದೆಯನ್ನ ಮೂರು ದಿನದ ಮುಂದೆಯೇ ಸೂಕ್ಷ್ಮವಾಗಿ ಹೇಳಿದ್ದರು. ನಿನ್ನೆಯ ಮಾತುಕತೆಯಲ್ಲಿ ಒಪ್ಪಂದ ಆಗಿರುವುದು ಅವರ ಟ್ವೀಟ್ ಸ್ಪಷ್ಟಪಡಿಸುತ್ತಿದೆ.

ಹೇಗೋ ಅಂತೂ ಈ ವೈರಸ್ ಪ್ರಕರಣ ಏಪ್ರಿಲ್ 15 ರ ವೇಳೆಗೆ ಮುಗಿದರೆ ಸಾಕು. ಈಸ್ಟರ್ ಏಪ್ರಿಲ್ 10 ರಿಂದ ಶುರು, ಆ ಲೆಕ್ಕಾಚಾರದ ಮೇಲೆ ಹೇಳುವುದಾದರೆ ಈ ಸಮಯಕ್ಕೆ ಈ ವೈರಸ್ ಕಾಟ ನಿಲ್ಲಬೇಕು.

ಚೀನಾ ಜಗತ್ತಿನ ಹೊಸ ಸೂಪರ್ ಪವರ್ ಆಗಿ ಉದಯಿಸಿದೆ. ಎರಡಲ್ಲ ಇನ್ನು ಹತ್ತಾರು ವರ್ಷ ಅವರನ್ನ ಅಲುಗಾಡಿಸಲೂ ಯಾರಿಂದಲೂ ಸಾಧ್ಯವಿಲ್ಲ. ಅಮೇರಿಕಾ ಹಲ್ಲು ಕಿತ್ತ ಹಾವಿನ ಸ್ಥಿತಿಯಲ್ಲಿದೆ. ಜಗತ್ತು ಇನ್ನೂ ಡಾಲರ್ ಅನ್ನು ವಿನಿಮಯವಾಗಿ ಬಳಸುತ್ತಿದೆ, ಮತ್ತು ವಿಶ್ವ ಶ್ರೇಷ್ಠ ಮಿಲಿಟರಿ ಅದರ ಬಳಿ ಇದೆ. ಇವೆರಡರಲ್ಲಿ ಒಂದು ಅಲುಗಾಡಿದರೂ ಅಮೇರಿಕಾ ಸೋವಿಯತ್ ಯೂನಿಯನ್ ನಂತೆ ಛಿದ್ರವಾಗಿ ಹೋಗುತ್ತದೆ.

ಕಳೆದ 5-6 ವರ್ಷಗಳಿಂದ ಚೀನಾ ಮತ್ತು ಅಮೇರಿಕಾ ನಡುವಿನ ವಾಣಿಜ್ಯ ಕಾದಾಟ, ಕರೆನ್ಸಿ ಕಾದಾಟಗಳನ್ನ ಗಮನಿಸುತ್ತಾ ಬಂದಿದ್ದೇನೆ. ಇವುಗಳ ಕುರಿತು ಹತ್ತಾರು ಲೇಖನ ಕೂಡ ಬರೆದಿದ್ದೇನೆ. ಒಂದು ಕಾಲದಲ್ಲಿ ಚೀನಾ ರಷ್ಯಾದಂತೆ ಒಡೆದು ಚೂರಾಗುತ್ತದೆ. ಆಗ ನಮ್ಮ ಮನೆಯಲ್ಲಿ ಮುಸುರೆ ತಿಕ್ಕಲು, ಗಂಗಮ್ಮ, ಇಂದ್ರಮ್ಮರ ಜಾಗದಲ್ಲಿ, ಲೀ, ಚು, ಮಿಮಿ ಬಂದಿರುತ್ತಾರೆ ಎಂದು ನಾನು ಬರೆದಿದ್ದು ಇನ್ನೂ ಹಸಿರಾಗಿದೆ. ನನ್ನ ಊಹೆ ಸಂಪೂರ್ಣ ಹಳ್ಳ ಹಿಡಿದಿದೆ. 8 ವರ್ಷಗಳ ಕಾಲ ಅಮೆರಿಕವನ್ನ ಆಳಿದ ಒಬಾಮ ಇದಕ್ಕೆ ಕಾರಣ. ಟ್ರಂಪ್ ಮರು ಆಯ್ಕೆಯಾಗಿ ಬಂದರೂ ತನ್ನ ಎಕಾನಾಮಿಯನ್ನ ಮತ್ತೆ ಹಳಿಗೆ ತರುವುದರಲ್ಲಿ ಸಮಯ ಕಳೆಯಬೇಕಾಗುತ್ತೆ. ಚೀನಾದ ವಿರುದ್ಧ ಗುಟುರು ಹಾಕಲು ಆತನಿಗೆ ಸಾಧ್ಯವಿಲ್ಲ.

ಕೇವಲ ಇಪ್ಪತ್ತು ವರ್ಷದಲ್ಲಿ ವಿಶ್ವ ವ್ಯವಸ್ಥೆಯ ಬುಡಮೇಲು ಮಾಡುವ ರೀತಿ ಚೀನಾ ಬೆಳೆದದ್ದು ಹೇಗೆ?

ಚೀನಾ ದೇಶ ತನ್ನ ಪಕ್ಕದ ಪುಟಾಣಿ ಜಪಾನ್ ದೇಶವನ್ನ ನೋಡಿ ಬಹಳ ಕಲಿತುಬಿಟ್ಟಿತು. ಗಾತ್ರದಲ್ಲಿ ಪುಟ್ಟದಾದ ಜಪಾನ್ ಇವತ್ತಿಗೂ ವಿಶ್ವ ಆರ್ಥಿಕತೆಯಲ್ಲಿ ದೊಡ್ಡ ಸ್ಥಾನ ಪಡೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಎರಡನೇ ಮಹಾಯುದ್ಧದಲ್ಲಿ ಸಾಕಷ್ಟು ನೋವು ಅನುಭವಿಸಿದ ಜಪಾನ್ ಬೆಳೆದ ರೀತಿ ವಿಶ್ವಕ್ಕೆ ಅಚ್ಚರಿ. ಚೀನಾ, ಜಪಾನ್ ನೊಂದಿಗೆ ಯಾವತ್ತೂ ಸ್ನೇಹದಿಂದ ಇರಲಿಲ್ಲ. ಅದಕ್ಕೆ ಜಪಾನ್ ಸುಪಿರಿಯಾರಿಟಿ ಕಾರಣವಿರಬಹುದೇನೋ ತಿಳಿಯದು. ಒಟ್ಟಿನಲ್ಲಿ ಚೀನಾ ಜಪಾನಿನ ಬಡ ತಮ್ಮನ ರೂಪದಲ್ಲಿ ಬಹಳ ದಶಕಗಳನ್ನ ಕಳೆಯುತ್ತೆ. ತನ್ನ ಅಣ್ಣನ ನೋಡಿ ಬಹಳಷ್ಟು ಕಲಿಯುತ್ತೆ. ಜಪಾನ್ ತನ್ನ ಶಕ್ತಿಯನ್ನ ತನ್ನ ಉದ್ಧಾರಕ್ಕೆ ಉಪಯೋಗಿಸಿದರೆ, ಅವರನ್ನ ನೋಡಿ ಕಲಿತ ಚೀನಾ ವಿಶ್ವದ ದೊಡ್ಡಣ್ಣ ಆಗುವ ಕನಸು ಕಾಣುತ್ತೆ. ಎರಡು ದಶಕದಲ್ಲಿ ತನ್ನ ಕನಸನ್ನ ನನಸಾಗಿಸಿಕೊಳ್ಳುತ್ತದೆ. ಏನದು ಚೀನಾ, ಜಪಾನ್ ದೇಶದಿಂದ ಕಲಿತದ್ದು?
ಅದು ಕಲಿತದ್ದು ಪ್ರಮುಖವಾಗಿ ಎರಡು ವಿಷಯ. ಒಂದು; ಶ್ರಮ, ಕಷ್ಟಪಟ್ಟು ದುಡಿಯುವುದು. ಎರಡು-ರಾಷ್ಟ್ರೀಯತೆ ಎನ್ನುವ ಮಹಾಮಂತ್ರವ ತನ್ನ ಜನತೆಯ ತಲೆಗೆ ತುಂಬಿದ್ದು. ಇದನ್ನ ವಿವರವಾಗಿ ನೋಡೋಣ. 

ಚೀನಾ ನಂತರ ಇಟ್ಟ ಹೆಜ್ಜೆ ಹೇಗೆ ಅದನ್ನ ವಿಶ್ವದ ದೊಡ್ಡಣ್ಣನ ಪಟ್ಟಕ್ಕೇರಿಸಿತು ಎನ್ನುವುದನ್ನ ಕೂಡ ತಿಳಿಯೋಣ.
ಜಪಾನಿನ ಜನರಲ್ಲಿ ತಮ್ಮ ದೇಶದ ಬಗ್ಗೆ ಅದಮ್ಯ ಪ್ರೀತಿ. ಹಗಲು ರಾತ್ರಿ ಎನ್ನದೆ ದುಡಿದು ತಮ್ಮ ದೇಶವನ್ನ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಜಪಾನ್ ಜಗತ್ತಿನಲ್ಲಿ ಹೆಚ್ಚು ಉಳಿತಾಯ ಮಾಡುವ ದೇಶಗಳಲ್ಲಿ ಒಂದು. ಇವರು ತಾವು ಉದ್ಧಾರ ಆಗುವ ಬಗ್ಗೆ ಯೋಚಿಸಿದರೆ ಹೊರತು ಜಗತ್ತಿನಲ್ಲಿ ನಂಬರ್ ಒನ್ ಆಗಬೇಕು ಎನ್ನುವ ತವಕಕ್ಕೆ ಬೀಳಲಿಲ್ಲ. ಅಮೆರಿಕಕ್ಕೆ ಬೇಕಾದಾಗ ಅವರಿಗೆ ಹೇರಳವಾಗಿ ಸಾಲ ಕೊಟ್ಟರು, ಅಲ್ಲಿ ಹೂಡಿಕೆ ಮಾಡಿದರು ಆದರೆ ಅವರನ್ನ ಬೀಳಿಸಿ ಮತ್ತಷ್ಟು ಬೆಳೆಯುವ ಹುನ್ನಾರಕ್ಕೆ ಹೋಗಲಿಲ್ಲ.

ಚೀನಾ ದೇಶದಕ್ಕೆ ತನ್ನ ದೇಶದ ಜನರನ್ನ ಜಪಾನ್ ನಂತೆ ದೇಶ ಪ್ರೀತಿಸುವ, ಅವರಂತೆ ಅಷ್ಟು ಕಷ್ಟ ಪಟ್ಟು ದುಡಿಮೆಗೆ ಹಚ್ಚುವ ವ್ಯವಧಾನ ಇರಲಿಲ್ಲ. ಅದಕ್ಕೆ ಎಲ್ಲವೂ ಬೇಗ ಮತ್ತು ವೇಗವಾಗಿ ಆಗಬೇಕು ಎನ್ನುವ ತವಕ. ಹೀಗಾಗಿ ಅದು ತನ್ನ ಜನತೆಯನ್ನ ಭಯದಿಂದ ಕಂಟ್ರೋಲ್ ಮಾಡಲು ಶುರು ಮಾಡಿತು. ಲಕ್ಷಾಂತರ ಮಕ್ಕಳನ್ನ ಅವರ ಪೋಷಕರಿಂದ ಕಿತ್ತುಕೊಂಡು ಅತ್ಯಂತ ಗೌಪ್ಯವಾಗಿ ತಾನೇ ಕಟ್ಟಿದ ಶಾಲೆಯಲ್ಲಿ ಅವರನ್ನ ಬೆಳೆಸ ತೊಡಗಿತು. ಮಕ್ಕಳಿಗೆ ಅಲ್ಲೇ ಊಟ, ವಸತಿ ಎಲ್ಲ ನೋಡಿಕೊಳ್ಳುತ್ತದೆ. ಇಂತಹ ಶಾಲೆಗಳಲ್ಲಿ ಮಕ್ಕಳಿಗೆ, ಧರ್ಮ, ಜಾತಿ, ಭಕ್ತಿ ಯಾವುದನ್ನೂ ಕಲಿಸುವುದಿಲ್ಲ, ಅಲ್ಲೇನಿದ್ದರೂ ಅವರಿಗೆ ಕಮ್ಯುನಿಸಂ ಮತ್ತು ಸರಕಾರಕ್ಕೆ ಹೇಗೆ ನಿಷ್ಠರಾಗಿರಬೇಕು ಎನ್ನುವುದನ್ನ ಮಾತ್ರ ಹೇಳಿಕೊಡುತ್ತಾರೆ. ನಿತ್ಯವೂ ಬೆಳಗಿನ ಪ್ರಾಥನೆಗೆ ಚೀನಾ ದೇಶವನ್ನ ಹೇಗೆ ಜಗತ್ತಿನ ಬಲಿಷ್ಠ ದೇಶವನ್ನಾಗಿಸಬೇಕು ಎನ್ನುವುದರ ಹಾಡಿನ ಮೂಲಕ ಶುರು ಮಾಡುತ್ತಾರೆ. ಮೂರುಹೊತ್ತು ಚೀನಾ, ಚೀನಾ, ಚೀನಾ... ರಾಷ್ಟ್ರೀಯತೆ..., ರಾಷ್ಟ್ರೀಯತೆ ಮತ್ತು ರಾಷ್ಟ್ರೀಯತೆ ಇದನ್ನ ಬಿಟ್ಟು ಅವರಿಗೆ ಏನನ್ನೂ ಹೇಳಿಕೊಡುವುದಿಲ್ಲ. ಹೀಗೆ ಹತ್ತಾರು ವರ್ಷ ಇಂತಹ ವಾತಾವರಣದಲ್ಲಿ ಬೆಳೆಯುವ ಲಕ್ಷಾಂತರ ಮಕ್ಕಳು ಚೀನಾದ ಸಿವಿಲಿಯನ್ ಸೈನಿಕರು!! ಇವರಲ್ಲಿ ಲಕ್ಷಾಂತರ ಜನರನ್ನ ಅಮೇರಿಕಾ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸಹಿತ ಜಗತ್ತಿನ ಹತ್ತಾರು ದೇಶಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಎಂದು ಕಳಿಸುತ್ತೆ. ಹತ್ತು ಜನ ವಿದ್ಯಾರ್ಥಿಗಳು ಹೀಗೆ ವಿದೇಶ ಸೇರಿದರೆ ಅದರಲ್ಲಿ ಆರರಿಂದ ಏಳು ಇಂತವರು, ಅವರು ಚೈನೀ ಏಜೆಂಟರು. ತಮ್ಮ ಹತ್ತಾರು ವರ್ಷದ ತಾಲೀಮು ಪ್ರದರ್ಶನಕ್ಕೆ ಅವರಿಗೆ ವೇದಿಕೆ ಹೀಗೆ ಸಿದ್ಧ ಮಾಡಿಕೊಡುತ್ತಾರೆ. ಕೆಲವರು ಬಿಸಿನೆಸ್, ಕೆಲವರು ಕೆಲಸ ಹಿಡಿಯುತ್ತಾರೆ. ಹೀಗೆ ತನ್ನ ಸರಕಾರದ ಆಜ್ಞೆಗೆ ಕಾಯುತ್ತಾ ಸಮಯ ಕಳೆಯುತ್ತಾರೆ.

ಬಡ ಚೀನಿಯರದು ದುರ್ಗತಿ. ಬಡ ಚೀನಿ ಗಂಡು ಮಕ್ಕಳನ್ನ ಕೂಲಿಗೆ ದೇಶ ವಿದೇಶಗಳಿಗೆ (ಆಫ್ರಿಕಾ, ಶ್ರೀಲಂಕಾ ಯೂರೋಪ್ ಇತ್ಯಾದಿ) ತಾನೇ ಸಾಗಿಸುತ್ತದೆ. ಇವರಿಗೆ ಯಾವುದೇ ಭವಿಷ್ಯವಿಲ್ಲ. ಸರಕಾರದ ವಿರುದ್ಧ, ಕಮ್ಯುನಿಸಂ ವಿರುದ್ಧ ಮಾತನಾಡಿದವರು ನಾಪತ್ತೆಯಾಗುತ್ತಾರೆ. ಏನಾದರು? ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಇನ್ನು ಬಡ ಚೀನಿ ಹೆಣ್ಣು ಮಕ್ಕಳು ಜಗತ್ತಿನಾದ್ಯಂತ (ನಾನು ನೋಡಿದ ಅರವತ್ತು ದೇಶಗಳಲ್ಲಿ 17 ಮುಸ್ಲಿಂ ದೇಶಗಳು! ಅಲ್ಲಿಯೂ ಇದೆ ಕಥೆ) ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ವೇಶ್ಯವಾಟಿಕೆ ವಯಸ್ಸು ಮೀರಿದವರನ್ನ ತರಕಾರಿ ಅಂಗಡಿ, ಗಿಫ್ಟ್ ಶಾಪ್, ಬಾರ್ ಗಳಲ್ಲಿ ಕೆಲಸ ಮಾಡಲು ದೂಡುತ್ತಾರೆ. ಹೀಗೆ ಚೀನಾ ತನ್ನ ಸಾಮಾನ್ಯ ಜನರನ್ನ ದುಡಿಸಿಕೊಂಡು ಇಂದು ಈ ಮಟ್ಟ ಮುಟ್ಟಿದೆ. ಕಮ್ಯುನಿಸ್ಟ್ ಸರಕಾರದ ಆಡಳಿತ ವರ್ಗ ಮಾತ್ರ ಅಮೆರಿಕಾದ ಬಂಡವಾಳಶಾಹಿಗಳು ಕೂಡ ನಾಚಬೇಕು ಅಂತಹ ಐಷಾರಾಮಿ ಜೀವನ ನಡೆಸುತ್ತಾರೆ.

ಹೀಗೆ ಜಗತ್ತಿನೆಲ್ಲೆಡೆ ಚೀನಾ ವೈದ್ಯರಲ್ಲಿ, ಶಿಕ್ಷಕರಲ್ಲಿ, ಡ್ರೈವರ್, ಸ್ಟೂಡೆಂಟ್ ಹೀಗೆ ಎಲ್ಲಾ ರೂಪದಲ್ಲಿ ತನಗೆ ನಿಷ್ಠರಾದ ಬೇಹುಗಾರರನ್ನ ಹೊಂದಿದೆ. ಇಂತಹವರನ್ನ ಸಮಾಜದ ಹಿಂಡಿನಲ್ಲಿ ಹೆಕ್ಕಿ ತೆಗೆಯುವುದು ಸುಲಭದ ಮಾತಲ್ಲ. ಹೀಗಾಗಿ ಚೀನಾದ ಆಡಳಿತಶಾಹಿ ನಿರಾತಂಕವಾಗಿ ಮುನ್ನುಗುತ್ತದೆ.


100%

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Stay up to date on all the latest ಅಂಕಣಗಳು news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp