ವ್ಯಾಪಾರದ ವ್ಯಾಖ್ಯೆಯನ್ನ ಬದಲಿಸಲಿದೆ ಕೋವಿಡ್-19!

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ವ್ಯಾಪಾರದ ವ್ಯಾಖ್ಯೆಯನ್ನ ಬದಲಿಸಲಿದೆ ಕೋವಿಡ್ 19!
ವ್ಯಾಪಾರದ ವ್ಯಾಖ್ಯೆಯನ್ನ ಬದಲಿಸಲಿದೆ ಕೋವಿಡ್ 19!

ಇಂದು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನರ ಮನದಲ್ಲಿ ಇರುವ ಪದ ಕೋವಿಡ್ 19 ಅಥವಾ ಕೊರೋನ ವೈರಸ್. ನಾಳಿನ ಬಗ್ಗೆ, ಭವಿಷ್ಯದ ಬಗ್ಗೆ ಈಗ ಹೆಚ್ಚು ಚಿಂತೆ ಮಾಡಿ ಪ್ರಯೋಜನವಿಲ್ಲ. ಏಕೆಂದರೆ ಎಷ್ಟೇ ಯೋಚಿಸಿದರೂ ಏನೂ ಮಾಡುವ ಸ್ಥಿತಿಯಲ್ಲಿ ನಾವಿಲ್ಲ. ಅಲ್ಲದೆ ನೀವೆಷ್ಟೇ ಲೆಕ್ಕಾಚಾರ ಮಾಡಿದರೂ ಅದು ಇವತ್ತಿಗೆ ಸರಿಯಾದ ಲೆಕ್ಕವಲ್ಲ. ಲಾಕ್ ಡೌನ್ ಪೂರ್ಣ ತೆರವಾದ ಮೇಲಷ್ಟೇ ನಷ್ಟದ ಲೆಕ್ಕಾಚಾರ ಸಾಧ್ಯ. ಅಂದರೆ ನಮಗಾದ ಒಟ್ಟು ನಷ್ಟವೆಷ್ಟು ಎನ್ನುವುದು ನಮಗೆ ತಿಳಿಯುವುದು ಇದೆಲ್ಲಾ ಮುಗಿದು ನಾವು ಸಹಜತೆಯತ್ತ ನಡೆದಾಗಲೆ! 

ಜಗತ್ತಿನ ಬಹುತೇಕ ದೇಶಗಳು ಸಾಲದಲ್ಲಿ ಮುಳುಗಿವೆ. ಜಗತ್ತನ್ನ ಪೂರ್ತಿ ಒಂದು ಮನೆಯನ್ನಾಗಿ ನೋಡಿದರೆ ಒಂದು ರೂಪಾಯಿ ಆಸ್ತಿಯ ಮುಂದೆ ಎರಡೂವರೆ ರೂಪಾಯಿ ಸಾಲವಿದೆ. ದೇಶಗಳನ್ನ ಒಂದು ಮನೆಯಂತೆ ನೋಡಲು ಪ್ರಾರಂಭಿಸಿದರೆ ಅಮೆರಿಕಾ ಎಕಾನಮಿ ನಿಂತಿರುವುದೇ ಸಾಲದ ಮೇಲೆ. ಅಲ್ಲಿ ಎಲ್ಲದಕ್ಕೂ ಕ್ರೆಡಿಟ್ ಹಿಸ್ಟ್ರಿ ಬೇಕೇ ಬೇಕು. ಅಂದರೆ ನಿಮಗೆ ಇಂದು ಸಾಲದ ಅವಶ್ಯಕತೆ ಇಲ್ಲದಿದ್ದರೂ, ಮುಂದೊಂದು ದಿನ ಬೇಕಾದರೆ? ಆಗೇನು ಮಾಡುವುದು? ಅದಕ್ಕಾಗಿ ಸಾಲ ಮಾಡಿ ಕ್ರೆಡಿಟ್ ಹಿಸ್ಟ್ರಿ ಸೃಷ್ಟಿಸಿಕೊಳ್ಳಿ ಅಂತ ಅಲ್ಲಿನ ಫೈನಾನ್ಸಿಯಲ್ ಅಡ್ವೈಸರ್ಸ್ ಹೇಳುತ್ತಾರೆ. ಹೀಗೆ ಅಮೆರಿಕಾ, ಯೂರೋಪಿನಿಂದ ಜಗತ್ತಿನ ಬಹಳಷ್ಟು ದೇಶಗಳಲ್ಲಿ ಲೋನ್ ಡಿಫಾಲ್ಟರ್ಸ್ ಸಂಖ್ಯೆ ಹೆಚ್ಚುತ್ತದೆ. ಇದು ಸಣ್ಣ ಐಸ್ ಬಾಲ್ ರೂಪದಲ್ಲಿ ಶುರುವಾಗಿ ಅದ್ಯಾವ ಗಾತ್ರವನ್ನ ಪಡೆಯುತ್ತದೋ ದೇವರೇ ಬಲ್ಲ.

ಭಾರತದಲ್ಲಿ ಕೂಡ ಇದು ಆಗಲಿದೆ. ಆದರೆ ಇಲ್ಲಿ ಸಣ್ಣದೊಂದು ಆಶಾಭಾವ ನಮ್ಮ ಪಾಲಿಗಿದೆ. ಅಮೆರಿಕಾ, ಯೂರೋಪ್ ಗಳಲ್ಲಿ ಬಡ್ಡಿಯ ದರ ಸೊನ್ನೆ ಅಥವಾ ನೆಗಟಿವ್, ಜಪಾನ್ ಕಥೆ ಕೂಡ ಸೇಮ್. ಇತರ ಎಮರ್ಜಿಂಗ್ ಮಾರುಕಟ್ಟೆಗಳಲ್ಲಿ ಕೂಡ ಹೂಡಿಕೆಯ ಮೇಲಿನ ಲಾಭಂಶ ಅಷ್ಟಕಷ್ಟೇ! ಭಾರತದಲ್ಲಿ ಕೂಡ ಇದು ಕುಸಿದಿದೆ. ಆದರೆ ಬೇರೆಲ್ಲಾ ದೇಶಗಳಿಗೆ ಹೋಲಿಕೆ ಮಾಡಿ ನೋಡಿದರೆ ಭಾರತದಲ್ಲಿ ಹೂಡಿಕೆ ಲಾಭದಾಯಕ. ಹೀಗಾಗಿ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಕೊರೋನೋತ್ತರ ಅಳೆದು-ತೂಗಿ ಭಾರತದಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಳಿವೆ.

ಅಂದ ಮಾತ್ರಕ್ಕೆ ಎಲ್ಲವೂ ಮೊದಲಿನಂತೆ ನಡೆಯುತ್ತದೆ ಎನ್ನುವ ಹಾಗಿಲ್ಲ. ಗಮನಿಸಿ ನೋಡಿ ಮನುಷ್ಯನ ಚರಿತ್ರೆಯಲ್ಲಿ ಯಾವಾಗ ಇಂತಹ ಪಿಡುಗುಗಳು ಉಂಟಾಗಿವೆ ಆಗೆಲ್ಲಾ ಮನುಷ್ಯ ಬದುಕುವ ರೀತಿ ಬದಲಾಗಿದೆ. ಅದು ಸಹಜ ಕೂಡ. ಇಂದು ಹಲವಾರು ಕಾರ್ಯ ಕ್ಷೇತ್ರಗಳಲ್ಲಿ ಎಂತಹ ಬದಲಾವಣೆಗಳು ಆಗಬಹುದು ಎನ್ನುವುದನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. 

ಹೋಟೆಲ್ ಉದ್ಯಮ: ಈ ಉದ್ಯಮವನ್ನ ಸ್ಥೂಲವಾಗಿ ಮೂರು ವಿಭಾಗಗಳನ್ನಾಗಿ ನೋಡಬಹುದು. ಮೊದಲನೆಯದು ರಸ್ತೆ ಬದಿಯ ವ್ಯಾಪಾರಿಗಳು. ಎರಡನೆಯದು ಮಧ್ಯಮ ಕ್ರಮಾಂಕದ ದರ್ಶಿನಿ, ಸಾಗರ್ ಮತ್ತು ಇತ್ತೀಚಿನ ಗ್ರಾಂಡ್ ಸಂಸ್ಕೃತಿಯ ಹೋಟೆಲ್ಗಳು, ಮತ್ತು ಮೂರನೆಯದನ್ನ ಹೈ-ಎಂಡ್ ಅಥವಾ ಫೈನ್ ಡೈನ್ ಹೋಟೆಲ್ಗಳು ಮತ್ತು ಪಂಚತಾರಾ ಹೋಟೆಲ್ಗಳು.  ಗಮನಿಸಿ ಇದರಲ್ಲಿ ರಸ್ತೆ ಬದಿಯಲ್ಲಿ ತಿನ್ನುವರು ಹೆಚ್ಚು ಕಡಿಮೆ ಎಂದರೆ ಮೂರು ತಿಂಗಳಲ್ಲಿ ಮರಳಿ ತಮ್ಮ ಹಳೆ ಚಾಳಿಯನ್ನ ಮುಂದುವರಿಸುತ್ತಾರೆ. ಅವರ ಮುಂದೆ ಅವರ ಬಜೆಟ್ ಗೆ ಹೊಂದುವ ಆಯ್ಕೆಗಳು ಕೂಡ ಕಡಿಮೆ ಇರುವುದರಿಂದ ಅವರು ಮತ್ತೆ ಅಲ್ಲೇ ತಿನ್ನಲು ಹೋಗುತ್ತಾರೆ. ಹೀಗಾಗಿ ರಸ್ತೆ ಬದಿಯ ವ್ಯಾಪಾರಿಗಳಿಗೆ ಹೆಚ್ಚಿನ ವ್ಯತ್ಯಾಸ ಉಂಟಾಗುವುದಿಲ್ಲ. ಹೆಚ್ಚೆಂದರೆ ನಗರಪಾಲಿಕೆ ಇನ್ನಷ್ಟು ಶುಚಿತ್ವದ ಬಗ್ಗೆ ಗಮನ ಹರಿಸಲು ಹೇಳಬಹುದು. ಇನ್ನು ಮಧ್ಯಮ ಕ್ರಮಾಂಕದ ಹೋಟೆಲ್ ಗಳು ಅಂದರೆ ಸಾಗರ್, ದರ್ಶಿನಿ ತರಹದ ಹೋಟೆಲ್ ಗಳಿಗೆ ಖಂಡಿತ ಹೊಡೆತ ಬೀಳುತ್ತದೆ. ಮುಕ್ಕಾಲು ಪಾಲು ಇದರ ಗ್ರಾಹಕ ಮಧ್ಯಮ ವರ್ಗಕ್ಕೆ ಸೇರಿದವನು. ನಗರ ಪ್ರದೇಶದಲ್ಲಿ ಇಂತಹ ಹೋಟೆಲ್ಗಳ ವಹಿವಾಟು ಆಗಲೇ ಕಡಿಮೆಯಾಗಿದೆ. ಏಕೆಂದರೆ ಇಂದು ಬಹಳಷ್ಟು ಜನ ಮನೆಗೆ ಪಾರ್ಸೆಲ್ ತರಿಸಿಕೊಳ್ಳುತ್ತಾರೆ. ಹೀಗಾಗಿ ಹತ್ತಾರು ಹುಡುಗರನ್ನ ಹಾಕಿಕೊಂಡು ಇಂತಹ ಹೋಟೆಲ್ ನಡೆಸುವುದು ಕಷ್ಟವಾಗುತ್ತದೆ. ಇದರ ಬದಲು ಇವರು ಕೂಡ ಕ್ಲೌಡ್ ಕಿಚನ್ ಮಾದರಿಯನ್ನ ಬಳಸುವುದು ಹೆಚ್ಚು ಸೂಕ್ತ. ಇನ್ನು ಫೈನ್ ಡೈನ್ ಗಳಲ್ಲೂ ಹಲವು ವಿಧಗಳಿವೆ. higher middle class ಜನ ಹೋಗುತ್ತಿದ್ದ ಹೋಟೆಲ್ ಮತ್ತು ರೆಸ್ಟೊರೆಂಟ್ ಗಳು ಒಂದಷ್ಟು ಹೊಡೆತೆ ತನ್ನಲಿವೆ. ಉಳಿದಂತೆ ಪಂಚತಾರಾ ಹೋಟೆಲ್ ಗಳಲ್ಲಿ ಅಂತಹ ಬದಲಾವಣೆ ಕಂಡು ಬರುವುದಿಲ್ಲ. 

ಶಿಕ್ಷಣ ಕ್ಷೇತ್ರ: ಇಲ್ಲಿ ಇನ್ನು ಮುಂದೆ ಆನ್ ಲೈನ್ ಸಾಮ್ರಾಜ್ಯ ತಲೆ ಎತ್ತಲಿದೆ. ಮುಂಬರುವ ದಿನಗಳಲ್ಲಿ ಬದುಕಿನಲ್ಲಿ ಸ್ಥಿರತೆಯ ಕೊರತೆಯನ್ನ ಎಲ್ಲರೂ ಬಲ್ಲರು. ಹೀಗಾಗಿ ಶಿಕ್ಷಣ ಕ್ಷೇತ್ರ ಖಂಡಿತ ಮಗ್ಗುಲು ಬದಲಾಯಿಸಲಿದೆ. ಮಕ್ಕಳು ಮನೆಯಲ್ಲಿ ಕೂತು ಶಾಲೆಯ ವಾತಾವರಣವನ್ನ ಪಡೆಯಬಹುದಾದ ವರ್ಚುಯಲ್ ಸ್ಕೂಲಿಂಗ್ ಭವಿಷ್ಯದ ಶಿಕ್ಷಣದ ಮಾದರಿಯಾಗಲಿದೆ. ಉನ್ನತ ಶಿಕ್ಷಣ ಮತ್ತು ಪ್ರಾಯೋಗಿಕ ಶಿಕ್ಷಣದ ಅವಶ್ಯಕತೆ ಇರದ ಹೊರತು ಉಳಿದಂತೆ ಎಲ್ಲವನ್ನೂ ಆನ್ ಲೈನ್ ಮಾಡಬಹುದು. 

ಪ್ರವಾಸೋದ್ಯಮ: ಈ ಕ್ಷೇತ್ರ 2021ರ ವರೆಗೆ ಮೇಲೇಳುವ ಸಾಧ್ಯತೆ ಬಹಳ ಕಡಿಮೆ. ಅಂತಾರಾಷ್ಟ್ರೀಯ ಪ್ರವಾಸ ಇನ್ನೊಂದೆರೆಡು ವರ್ಷ ಮಕಾಡೆ ಮಲಗಿದಂತೆಯೇ... ಇದರಲ್ಲಿ ಯಾವ ಸಂಶಯವಿಲ್ಲ. ಉಳಿದಂತೆ ದೇಶೀಯ ಪ್ರವಾಸಗಳು ಕೂಡ ಬಹಳಷ್ಟು ಕಡಿಮೆಯಾಗಲಿವೆ. ಈಗ ಮಾರುಕಟ್ಟೆಯಲ್ಲಿ ಹತ್ತಾರು ಟೂರ್ ಆಪರೇಟರ್ಸ್ ಇದ್ದಾರೆ. ಅತ್ಯಂತ ದೊಡ್ಡ ಸಂಸ್ಥೆಗಳು ಉಳಿಯುವುದು ಕಷ್ಟ. ಸಣ್ಣ, ಪುಟ್ಟ ಇಂತಹ ಉದ್ದಿಮೆದಾದರು ಇನ್ನೊಂದೆರೆಡು ವರ್ಷ ನೆಲೆ ನಿಂತರೆ ಮತ್ತೆ ಇಲ್ಲಿ ಭವಿಷ್ಯವಿದೆ. ಸದ್ಯದ ಮಟ್ಟಿಗೆ ಇದೊಂದು ಪೂರ್ಣ ಮೇಲೆ ಕಚ್ಚಿದ ವಲಯವಾಗಿದೆ. 

ಕಾರ್ಪೊರೇಟ್ ಸಂಸ್ಥೆಗಳು: ಇಲ್ಲಿ ಯಾವ ಸಂಸ್ಥೆಗಳು ಕ್ಲೌಡ್ ಬಿಸಿನೆಸ್ ನಲ್ಲಿ ಇದ್ದಾವೆ ಅವುಗಳು ಬಹಳ ಉನ್ನತಿಯನ್ನ ಕಾಣುತ್ತವೆ. ಉದಾಹರಣೆಗೆ ಅಮೆಜಾನ್ ಇಂತಹ ಒಂದು ವಲಯದಲ್ಲಿ ಕೆಲಸ ಮಾಡುತ್ತಿದೆ. ಜಗತ್ತಿನ ಬಹುಪಾಲು ಸಂಸ್ಥೆಗಳು ಉದ್ಯೋಗ ಕಡಿತ ಎನ್ನುವ ಮಾತನ್ನ ಆಡುತ್ತಿದ್ದರೆ, ಅಮೆಜಾನ್ ಅಮೇರಿಕಾದಲ್ಲಿ 75 ಸಾವಿರದಿಂದ ಒಂದು ಲಕ್ಷ ಜನರನ್ನ ಹೊಸದಾಗಿ ನೇಮಕ ಮಾಡಿಕೊಳ್ಳುವುದಾಗಿ ಹೇಳಿಕೆಯನ್ನ ನೀಡಿದೆ. ಹೀಗಾಗಿ ಅಮೆಜಾನ್ ಒಂದೇ ಅಂತಲ್ಲ ಯಾವುದೇ ಟೆಕ್ನಾಲಜಿ ಕಂಪನಿ ಅದರಲ್ಲೂ ಕ್ಲೌಡ್ ಗೆ ಸಂಬಂಧಿಸಿದ ಟೆಕ್ನಾಲಜಿ ಕಂಪನಿಗಳು ಖಂಡಿತ ಹೆಚ್ಚು-ಹೆಚ್ಚು ಉನ್ನತಿಯತ್ತ ಸಾಗುತ್ತವೆ. 

ಅಮೆರಿಕಾದಿಂದ ಬಂದ ಹೊರಗುತ್ತಿಗೆಯ ಕೆಲಸವನ್ನ ಮಾತ್ರ ಮಾಡಿಕೊಂಡು ಹೊಸ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರದ ಟೆಕ್ನಾಲಜಿ ಕಂಪನಿಗಳು ಕುಸಿತ ಕಾಣುತ್ತವೆ. ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಅವರು ಯಾವ ರೀತಿಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನ ಅವಲಂಬಿಸಿ ಉದ್ಯೋಗ ಭದ್ರತೆ ವಿಷಯ ಪಾತ್ರ ವಹಿಸುತ್ತದೆ. ಮುಂದಿನ ಒಂದೆರೆಡು ವರ್ಷ ಅನಿಶ್ಚಿತತೆಯಂತೂ ಇವರ ಜೊತೆ-ಜೊತೆಗೆ ನೆರಳಿನಂತೆ ಹಿಂಬಾಲಿಸಲಿದೆ ಎನ್ನುವುದು ಮಾತ್ರ ಎಲ್ಲರಿಗೂ ತಿಳಿದಿರುವ ಸತ್ಯ. ಇದರ ಜೊತೆಗೆ ಸಂಸ್ಥೆಗಳು ತನ್ನ ಖರ್ಚನ್ನ ಕಡಿಮೆ ಮಾಡಿಕೊಳ್ಳಲು ಬಯಸುವುದರಿಂದ ಹೆಚ್ಚು-ಹೆಚ್ಚು ತನ್ನ ನೌಕರರನ್ನ ಮನೆಯಿಂದ ಕೆಲಸ ಮಾಡಲು ಸೂಚಿಸುತ್ತದೆ. ಇದರಿಂದ ಕಾರ್ಪೊರೇಟ್ ಕೇಟರಿಂಗ್ ನಂಬಿಕೊಂಡಿದ್ದ ಚಿಕ್ಕ,ಪುಟ್ಟ ಉದ್ಯಮಿಗಳ ಹೊಟ್ಟೆಯ ಮೇಲೂ ಹೊಡೆತ ಬೀಳಲಿದೆ. 

ಟ್ರಾನ್ಸ್ಪೋರ್ಟ್ ಉದ್ಯಮ: ವಾಣಿಜ್ಯ ಉದ್ದೇಶಗಳಿಗೆ ಎಂದು ತೆರೆಯಲಾದ ಸಂಸ್ಥೆಗಳು ಹೆಚ್ಚು ಕಡಿಮೆ ಕುಂಟುತ್ತಾ ತೆವಳುತ್ತ ಸಾಗುತ್ತವೆ. ಆದರೆ ನಗರ ಪ್ರದೇಶದಲ್ಲಿ ನಾಗರೀಕ ಸೇವೆಗೆ ತೆರೆದುಕೊಂಡಿದ್ದ ಓಲಾ, ಉಬರ್, ಆಟೋ ಚಾಲಕರ ಬದುಕು ಮುಂದಿನ ಕೆಲವು ತಿಂಗಳ ಮಟ್ಟಿಗಂತೂ ಬಹಳ ಕಷ್ಟ. ಇಲ್ಲೆಲ್ಲಾ ಖರ್ಚು ಮಾಡುವುದು ಮಧ್ಯಮ ವರ್ಗ! ಇವರ ಖರ್ಚು ಮಾಡುವ ಕ್ಷಮತೆ ಕಡಿಮೆಯಾಗಿರುವುದರಿಂದ ಈ ಕ್ಷೇತ್ರಗಳಲ್ಲಿ ಬಹಳಷ್ಟು ಬದಲಾವಣೆ ನಾವು ಕಾಣಬಹುದು. 

ಈ -ಕಾಮರ್ಸ್ ವಲಯ: ನಗರ ಪ್ರದೇಶದಲ್ಲಿ ಈ ಕಾಮರ್ಸ್ ಕೋವಿಡ್ ಗೆ ಮುಂಚಿನಿಂದಲೂ ಚೆನ್ನಾಗೇ ಕೆಲಸ ಮಾಡುತ್ತಿತ್ತು. ಮುಂದಿನ ದಿನಗಳಲ್ಲಿ ಈ ವಲಯ ಮತ್ತಷ್ಟು ಹುಲುಸಾಗಿ ಬೆಳೆಯುವ ಎಲ್ಲಾ ಅವಕಾಶಗಳೂ ಇವುಗಳ ಮುಂದಿದೆ. 

ಕೊನೆ ಮಾತು: ಹೀಗೆ ನೀವು ಯಾವುದೇ ಕಾರ್ಯ ಕ್ಷೇತ್ರವನ್ನ ತೆಗೆದುಕೊಂಡರೂ ಅಲ್ಲೆಲ್ಲ ಒಂದಷ್ಟು ಬದಲಾವಣೆ ಸಾಮಾನ್ಯ. ಕೆಲವೊಂದು ಬಿಸಿನೆಸ್ ಗಳನ್ನ ಸದ್ಯದ ಮಟ್ಟಿಗೆ ಮುಚ್ಚಿ ನಂತರ ತೆರೆಯುವುದು ಕೂಡ ಒಳ್ಳೆಯದು. ಎಲ್ಲಕ್ಕೂ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ಸಮಾಜದ ಇಂಜಿನ್ ಮಧ್ಯಮ ವರ್ಗ! ಎಲ್ಲಿಯವರೆಗೆ ಈ ಇಂಜಿನ್ ಮೈಚಳಿ ಬಿಟ್ಟು ಮೊದಲಿನಂತೆ ಖರ್ಚು ಮಾಡಲು ಶುರು ಮಾಡುವುದಿಲ್ಲ ಅಲ್ಲಿಯವರೆಗೆ ಎಲ್ಲಾ ವಲಯದಲ್ಲೂ ತೊಂದರೆ ಇದ್ದದ್ದೇ. ಸದ್ಯದ ಮಟ್ಟಿಗೆ ಕೊರೋನ ಎನ್ನುವ ಗ್ರಹಣ ನಮ್ಮ ಖರೀದಿಸುವ ಶಕ್ತಿಯ ಕ್ಷಮತೆಯನ್ನ ಕಸಿದುಕೊಂಡಿದೆ. ಗ್ರಹಣ ಬಿಡುವವರೆಗೆ ಇಂತಹ ಕಷ್ಟಗಳು ಕೂಡ ಸಹಜ. ಗ್ರಹಣದ ನಂತರವೂ ಬದುಕಿನಲ್ಲಿ ಹಲವಾರು ಮಾರ್ಪಾಡುಗಳು ಅಗತ್ಯ. ಅದೂ ಕೂಡ ಸಮಯಕ್ಕೆ ತಕ್ಕಂತೆ ಆಗುತ್ತದೆ. ಅದಕ್ಕೆ ಒಗ್ಗಿಕೊಳ್ಳುವ ಮನೋಭಾವ ಮಾತ್ರ ನಮಗೆ ಮುಂದಿನ ದಾರಿಯನ್ನ ಸುಗಮ ಮಾಡುತ್ತದೆ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com