ಜಾಗತಿಕ ಕಚ್ಚಾ ತೈಲದ ಟ್ರೇಡಿಂಗ್ ಪುರಾಣ ! 

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ಜಾಗತಿಕ ಕಚ್ಚಾ ತೈಲದ ಟ್ರೇಡಿಂಗ್ ಪುರಾಣ !
ಜಾಗತಿಕ ಕಚ್ಚಾ ತೈಲದ ಟ್ರೇಡಿಂಗ್ ಪುರಾಣ !

ಜಗತ್ತಿನಲ್ಲಿ ಕಚ್ಚಾ ತೈಲವನ್ನ ಉತ್ಪಾದಿಸುವ ಪ್ರಮುಖ ದೇಶಗಳಲ್ಲಿ ಅಮೆರಿಕಾ ಮೊದಲು. ನಂತರ ಸೌದಿ ಅರೇಬಿಯಾ, ರಷ್ಯಾ, ಕೆನಡಾ, ಚೀನಾ ಹೀಗೆ ಪಟ್ಟಿ ಸಾಗುತ್ತದೆ. ತೈಲ ಬೆಲೆಯನ್ನ ಅಮೆರಿಕನ್ ಡಾಲರ್ ನಲ್ಲಿ ಅಳೆಯುತ್ತಾರೆ. ತೈಲದ ಮೇಲಿನ ಹಿಡಿತಕ್ಕಾಗಿ ಬಹಳಷ್ಟು ಕೋಲ್ಡ್ ವಾರ್ ಗಳು ನಡೆದಿವೆ, ಜೊತೆ ಜೊತೆಗೆ ಜಗತ್ತಿಗೆ ಕಾಣುವ ಮಟ್ಟದಲ್ಲಿ ಘರ್ಷಣೆಗಳು ಕೂಡ ಆಗಿವೆ. ತೈಲ ಬೆಲೆ ನಿರ್ಧಾರ ಡಾಲರ್ ನಲ್ಲಿ ಆಗುವುದರಿಂದ ಮತ್ತು ಇಲ್ಲಿಯ ತನಕ ದೊಡ್ಡಣ್ಣನ ಜಾಗದಲ್ಲಿ ಅಮೆರಿಕ ಕುಳಿತ ಕಾರಣ ಮತ್ತು ತಮ್ಮ ಹಿತಾಸಕ್ತಿಗಳ ಕಾಪಾಡಿಕೊಳ್ಳಲು ಒಪೆಕ್ ಎನ್ನುವ ಒಕ್ಕೊಟವನ್ನ ಕೂಡ ಕಟ್ಟಿಕೊಳ್ಳುತ್ತಾರೆ. 
 
ಒಪೆಕ್ ಅಂದರೆ ಆರ್ಗನೈಸಷನ್ ಆಫ್ ಪೆಟ್ರೋಲಿಯಂ ಎಕ್ಸ್ಪೋರ್ಟ್ಟಿಂಗ್ ಕಂಟ್ರೀಸ್ ಎಂದರ್ಥ. ಇದು ಹದಿನೈದು ದೇಶಗಳ ಒಕ್ಕೊಟ. ಇರಾನ್, ಇರಾಕ್, ಕುವೈಟ್, ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಮತ್ತು ವೆನಿಜುವೆಲಾ ಪ್ರಮುಖ ಸದಸ್ಯ ದೇಶಗಳು. ಈ ಎಲ್ಲಾ ದೇಶಗಳ ಒಟ್ಟು ಉತ್ಪಾದನೆ ಜಗತ್ತಿನ ಉತ್ಪಾದನೆಯ 45 ಪ್ರತಿಶತವಿದೆ. ಉಳಿದಂತೆ ಜಗತ್ತಿನ ಒಟ್ಟು ಉತ್ಪಾದನೆಯಲ್ಲಿ 19 ಪ್ರತಿಶತ ಉತ್ಪಾದನೆ ಅಮೆರಿಕದೇಶದಲ್ಲಿ ಆಗುತ್ತದೆ. ಸೌದಿ ಅರೇಬಿಯಾ ಒಂದೇ 12 ಪ್ರತಿಶತ ಉತ್ಪಾದಿಸುತ್ತದೆ. ಹೀಗೆ ಚೀನಾ ಮತ್ತು ಕೆನಡಾ ತಲಾ ಜಗತ್ತಿನ ಒಟ್ಟು ತೈಲ ಉತ್ಪಾದನೆಯ 5 ಪ್ರತಿಶತ ಉತ್ಪಾದಿಸುತ್ತವೆ. 

ಹೀಗಾಗಿ ಜಗತ್ತಿನ ತೈಲ ಮಾರುಕಟ್ಟೆಯನ್ನ ಹೀಗೆ ವಿಭಾಗಿಸಬಹುದು. ಅಮೆರಿಕ 19 ಪ್ರತಿಶತ. ರಷ್ಯಾ 11, ಒಪೆಕ್ 45 ಪ್ರತಿಶತ, ಕೆನಡಾ 5, ಚೀನಾ 5, ಬ್ರೆಜಿಲ್ 4, ಇತರೆ 15. ಇದು ಉತ್ಪಾದನೆ ಆಧಾರದ ಮೇಲೆ ಆದ ವಿಂಗಡಣೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ತೈಲ ನಿಕ್ಷೇಪ ಇರುವ ಆಧಾರದ ಮೇಲೆ ವಿಂಗಡಣೆ ಮಾಡುವುದಾದರೆ, ಮೊದಲ ಸ್ಥಾನ ವೆನಿಜುಯೆಲಾ ದೇಶಕ್ಕೆ ಸೇರುತ್ತದೆ. ನಂತರ ಸೌದಿ ಅರೇಬಿಯಾ, ಕೆನಡಾ ಮತ್ತು ಇರಾನ್ ಗಳು ಸ್ಥಾನ ಪಡೆಯುತ್ತದೆ. 

ತೈಲ ಬೆಲೆಯನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಟ್ರೋಲ್ ಮಾಡುವುದರಲ್ಲಿ ಬಹಳಷ್ಟು ರಾಜಕೀಯಗಳು ನಡೆಯುತ್ತದೆ. ಒಪೆಕ್ ಒಕ್ಕೊಟದೊಂದಿಗೆ ರಷ್ಯಾದ ಬಾಂಧ್ಯವ ಚೆನ್ನಾಗಿರುವುದರಿಂದ ತೈಲ ಬೆಲೆಯ ಮೇಲೆ ಇವರು ಹೆಚ್ಚು ನಿಯಂತ್ರಣ ಹೊಂದಿದ್ದಾರೆ. ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಲ್ಲದೆ ರಷ್ಯಾ ವೆನಿಜುಯೆಲಾ ದೇಶದ ಪ್ರಮುಖ ತೈಲ ಉತ್ಪನ್ನ ಮಾಡುವ ಸಂಸ್ಥೆಯನ್ನ ಸದ್ದಿಲ್ಲದೇ ಖರೀದಿಸಿ ಬಿಟ್ಟಿದೆ. ಇಷ್ಟೆಲ್ಲಾ ಇದ್ದು ಭೌಗೋಳಿಕ ರಾಜಕೀಯ ಕೂಡ ಬಹಳಷ್ಟು ಪ್ರಭಾವ ತೈಲ ಬೆಲೆಯ ಮೇಲಾಗುತ್ತದೆ. ಇರಲಿ. ಸದ್ಯದ ಮಟ್ಟಿಗೆ ತೈಲ ಬೆಲೆಯಲ್ಲಿ ಕುಸಿತ ಕಂಡಿರುವುದಕ್ಕೆ ಪ್ರಮುಖ ಕಾರಣ ಹೆಚ್ಚು ತಯಾರಿಕೆ ಮತ್ತು ಕಡಿಮೆ ಬಳಕೆ ಎನ್ನುವುದು ಯಾರು ಬೇಕಾದರೂ ಊಹಿಸಬಹುದಾದ ಸನ್ನಿವೇಶ. ಕಳೆದ 6/8 ತಿಂಗಳಿಗೆ ಹೋಲಿಸಿದರೆ ತೈಲ ಬೆಲೆ ಹತ್ತಿರಹತ್ತಿರ 50 ಡಾಲರ್ ಬ್ಯಾರಲ್ ಗೆ ಕುಸಿತ ಕಂಡಿದೆ. ಆದರೆ ಅದು ಋಣಾತ್ಮಕ ಆದ ಉದಾಹರೆಣೆ ಇಲ್ಲವೇ ಇಲ್ಲ ಎನ್ನಬಹುದು. 

ಕ್ರೂಡ್ ಆಯಿಲ್ ಅಥವಾ ಕಚ್ಚಾ ತೈಲದ ಬೆಲೆ ಕುಸಿದು ಮೈನಸ್ ಗೆ ಹೋಯ್ತಾ? 

ಗಮನಿಸಿ ನಾವು ಷೇರು ಮಾರುಕಟ್ಟೆಯಲ್ಲಿ ಹೇಗೆ ಮಾರಾಟ ಮತ್ತು ಕೊಳ್ಳುವಿಕೆಯನ್ನ ಮಾಡುತ್ತೇವೆ ಹಾಗೆಯೇ ಕಮಾಡಿಟಿ ಮಾರ್ಕೆಟ್ ಎನ್ನುವುದು ಕೂಡ ಒಂದಿದೆ. ಅಂದರೆ ಇಲ್ಲಿ ಉತ್ಪನ್ನಗಳನ್ನ ಕೊಳ್ಳುವ ಮತ್ತು ಮಾರುವ ಪ್ರಕ್ರಿಯೆ ನಡೆಯುತ್ತದೆ. ಇಲ್ಲಿ ಕೂಡ ಭೌತಿಕವಾಗಿ ಇವುಗಳ ಅಲುಗುವಿಕೆ ಇಲ್ಲದೆ ಎಲ್ಲವೂ ಕಂಪ್ಯೂಟರ್ ಪದರೆಯ ಮೇಲೆ ನಡೆದು ಹೋಗುತ್ತದೆ. ಕ್ರೂಡ್ ಆಯಿಲ್ ನಿಂದ ಗ್ಯಾಸೋಲಿನ್, ಹೀಟಿಂಗ್ ಗ್ಯಾಸ್, ಡೀಸೆಲ್, ಜೆಟ್ ಫ್ಯುಯೆಲ್ ಹೀಗೆ ಹಲವಾರು ಉತ್ಪನ್ನಗಳನ್ನ ಉತ್ಪಾದಿಸಲಾಗುತ್ತದೆ. ಈ ಮಾರುಕಟ್ಟೆ ಬಹಳವೇ ಚಲನೆ ಉಳ್ಳದ್ದು ಹೀಗಾಗಿ ಇದನ್ನ ಫ್ಯೂಚರ್ ಅಂದರ ಭವಿಷ್ಯದಲ್ಲಿ ಇಷ್ಟು ಬೆಲೆ ಬಾಳಬಹುದು ಎಂದು ಟ್ರೇಡ್ ಮಾಡಲಾಗುತ್ತದೆ. ಇವನ್ನ ಫ್ಯೂಚರ್ ಕಾಂಟ್ರಾಕ್ಟ್ ಎನ್ನಬಹುದು. 

ಸಾಮಾನ್ಯವಾಗಿ ತೈಲವನ್ನ ನ್ಯೂಯೋರ್ಕ್ ಮರ್ಕ್ಯಾನ್ಟೈಲ್ ಎಕ್ಸ್ಚೇಂಜ್ ನಲ್ಲಿ ಟ್ರೇಡ್ ಮಾಡಲಾಗುತ್ತದೆ. ಚಿಕಾಗೊ ಮರ್ಕ್ಯಾನ್ಟೈಲ್ ಎಕ್ಸ್ಚೇಂಜ್, ದುಬೈ ಮರ್ಕ್ಯಾನ್ಟೈಲ್ ಎಕ್ಸ್ಚೇಂಜ್ ಹೀಗೆ ಇತರೆ ಕಮಾಡಿಟಿ ಮಾರ್ಕೆಟ್ ನಲ್ಲಿ ಕೂಡ ಇವುಗಳ ಕೂಡುಕೊಳ್ಳುವಿಕೆ ನಡೆಯುತ್ತದೆ. 

ಈ ತೈಲವನ್ನ ಪ್ರಮುಖವಾಗಿ  1. ವೆಸ್ಟ್ ಟೆಕ್ಸಸ್ ಇಂಟರ್ಮಿಡಿಯೇಟ್  ಮತ್ತು 2. ಬ್ರೆಂಟ್ ಕ್ರೂಡ್ ಎಂದು ವಿಭಾಗಿಸಿ ಇದನ್ನ ಟ್ರೇಡ್ ಮಾಡುತ್ತಾರೆ. ನಂತರ ನ್ಯಾಚುರಲ್ ಗ್ಯಾಸ್, ಗ್ಯಾಸೋಲಿನ್ ಇತ್ಯಾದಿ ಹೆಸರುಗಳ ಉತ್ಪನ್ನಗಳು ಕೂಡ ಟ್ರೇಡ್ ಮಾಡಲ್ಪಡುತ್ತವೆ. 

ಏನಿದು ವೆಸ್ಟ್ ಟೆಕ್ಸಸ್ ಇಂಟರ್ಮಿಡಿಯೇಟ್? 

ಇದು ಬ್ರೆಂಟ್ ಕ್ರೂಡ್ ಆಯಿಲ್ ಗಿಂತ ಸ್ವಲ್ಪ ತೆಳುವಾಗಿರುತ್ತದೆ. ಇದು ಪ್ರಮುಖವಾಗಿ ಯುಎಸ್ ಆಯಿಲ್ ವೆಲ್ ಗಳಿಂದ ಉತ್ಪನ್ನವಾದ ಪದಾರ್ಥ. ಪ್ರಮುಖವಾಗಿ ಟೆಕ್ಸಾಸ್, ಲೂಸಿಯಾನಾ, ನಾರ್ತ್ ಡಕೋಟಾ ಪ್ರದೇಶದಲ್ಲಿರುವ ತೈಲ ಬಾವಿಗಳಿಂದ ತೆಗೆದ ತೈಲವಾಗಿದೆ. ಇದರ ಬೆಲೆ ಸಾಮಾನ್ಯವಾಗಿ ಬ್ರೆಂಟ್ ಕಚ್ಚಾ ತೈಲಕ್ಕಿಂತ ಜಾಸ್ತಿ. ಇದಕ್ಕೆ ಪ್ರಮುಖ ಕಾರಣ ಇದನ್ನ ಮುಖ್ಯವಾಗಿ ಉತ್ಪಾದಿಸುವುದು ಲ್ಯಾಂಡ್ ಲಾಕ್ಡ್ ಪ್ರದೇಶದಲ್ಲಿ, ಹೀಗಾಗಿ ಇದರ ಸಾಗಾಣಿಕೆ ವೆಚ್ಚ ಹೆಚ್ಚಾಗಿರುತ್ತದೆ. ಜಗತ್ತಿನ ಕಚ್ಚಾ ತೈಲ ಮಾರಾಟದ ಮೂರನೇ ಒಂದು ಭಾಗವನ್ನ ಇದರ ಲೆಕ್ಕಕ್ಕೆ ಬರೆಯಬಹುದು. 

ಬ್ರೆಂಟ್ ಕ್ರೂಡ್ ಅಂದರೇನು? 

ಇದು ಕೂಡ ತೆಳುವಾದ ಕಚ್ಚಾ ತೈಲ. ಇದನ್ನ ಪ್ರಮುಖವಾಗಿ ಸಮುದ್ರದ ದಂಡೆಯಲ್ಲಿ ಉತ್ಪಾದಿಸಲಾಗತ್ತದೆ. ಹೀಗಾಗಿ ಇದರ ಬೆಲೆ   ವೆಸ್ಟ್ ಟೆಕ್ಸಸ್ ಇಂಟರ್ಮಿಡಿಯೇಟ್ ಗಿಂತ ಸ್ವಲ್ಪ ಕಡಿಮೆ ಇರುತ್ತದೆ. ಜಗತ್ತಿನ ಮೂರನೇ ಎರಡು ಭಾಗದ ಪೂರೈಕೆ ಆಗುವುದು ಇಲ್ಲಿಂದ. 

ಸರಿ ಹಾಗಾದರೆ ಕಚ್ಚಾ ತೈಲದ ಬೆಲೆ ನೆಗಟಿವ್ ಏಕಾಯ್ತು? 

ಮೊದಲೇ ಹೇಳಿದಂತೆ ಸಾಮಾನ್ಯ ಮಾರುಕಟ್ಟೆ ಸಮಯದಲ್ಲಿ ಎಲ್ಲವೂ ಕಂಪ್ಯೂಟರ್ ಪರದೆಯ ಮೇಲೆ ನಿರ್ಧಾರವಾಗಿ ಬಿಡುತ್ತಿತ್ತು. ಇದೀಗ ಕೊರೋನ ವೈರಸ್ ಕಾರಣ ಇದರ ಮೇಲಿನ ಬೇಡಿಕೆ ಇನ್ನಿಲ್ಲದಂತೆ ಕುಸಿದಿದೆ. ಇದರ ಬೆಲೆಯನ್ನ ಫ್ಯೂಚರ್ ಮಾರುಕಟ್ಟೆಯಲ್ಲಿ ನಿರ್ಧಾರ ಮಾಡಲಾಗಿರುತ್ತದೆ. ಅಂದರೆ ಜನವರಿಯಲ್ಲೂ ಅಥವಾ ಫೆಬ್ರವರಿಯಲ್ಲೂ ಅಥವಾ ಅದಕ್ಕಿಂತ ಹಿಂದೆ ಏಪ್ರಿಲ್ ನಲ್ಲಿ ಇದರ ಬೆಲೆ ಇಷ್ಟಾಗಬಹುದು ಎನ್ನುವ ಒಂದು ಲೆಕ್ಕಾಚಾರದ ಮೇಲೆ ಇದನ್ನ ಟ್ರೇಡ್ ಮಾಡಲಾಗುತ್ತದೆ. ಹೀಗೆ ವೆಸ್ಟ್ ಟೆಕ್ಸಸ್ ಇಂಟರ್ಮಿಡಿಯೇಟ್ ನಲ್ಲಿ ಟ್ರೇಡ್ ಆಗಿದ್ದ ತೈಲವನ್ನ ಮೂವ್ ಮಾಡಲು ಮಂಗಳವಾರ ಅಂದರೆ 21/೦4/2020 ಕೊನೆಯ ದಿನವಾಗಿತ್ತು. ಸಾಮಾನ್ಯ ದಿನಗಳಲ್ಲಿ ಇವೆಲ್ಲಾ ಪರಿಚಲೆಯಲ್ಲಿರುತ್ತವೆ ಹಾಗಾಗಿ ಇವುಗಳ ಉಲ್ಲೇಖ ಕೂಡ ಪತ್ರಿಕೆಯಲ್ಲಿ ಸುದ್ದಿಯಾಗುವುದಿಲ್ಲ. ಇದೀಗ ಮಾರುಕಟ್ಟೆ ಕುಸಿದಿರುವುದರಿಂದ ಇದನ್ನ ಕದಲಿಸಲು ಸಾಧ್ಯವಿಲ್ಲ. ಸಾಮಾನ್ಯ ದಿನದಲ್ಲಿ ಇದು ಕೊಂಡವರು ಬೇರೆ ಬೇರೆ ದೇಶಕ್ಕೆ ಸಾಗಿಸುತ್ತಿದ್ದರು. ಈಗ? ಬೇಡಿಕೆಯಿಲ್ಲದ ಈ ವಸ್ತುವನ್ನ ಎಲ್ಲಿ ಸಂಗ್ರಹಿಸಿ ಇಡುವುದು? ಈ ಸಮಸ್ಯೆಯ ಸುಳಿವು ಸಿಕ್ಕ ಕೂಡಲೇ ಮಾರುಕಟ್ಟೆಯಲ್ಲಿ ಸಂಗ್ರಹಣೆ ಜಾಗಗಳ ಮೇಲೆ ಹಿಡಿತ ಹೊಂದಿರುವರು ಲಾಬಿ ಶುರುವಿಟ್ಟುಕೊಂಡರು. ಇದನ್ನ ನಾವಿಲ್ಲಿಡಲು ಸಾಧ್ಯವಿಲ್ಲ ತೆಗೆದುಕೊಂಡು ಹೋಗಿ ಎಂದರು. ಈ ತೈಲವನ್ನ ಎಲ್ಲಿಗೆ ತೆಗೆದುಕೊಂಡು ಹೋಗಲು ಸಾಧ್ಯ? ಹೀಗಾಗಿ ಈ ತೈಲವನ್ನ ಸಂಗ್ರಹಿಸಿಡಲು ಅವರು ಶೇಖರಣೆ ಸಂಸ್ಥೆಗಳಿಗೆ ದುಂಬಾಲು ಬಿದ್ದರು. ಅವರು ಸರಿ ಇದನ್ನ ಶೇಖರಿಸಿ ಇಡಲು ಒಂದು ಬ್ಯಾರಲ್ ಗೆ 37 ಅಮೆರಿಕನ್ ಡಾಲರ್ ನೀಡಬೇಕು ಎಂದರು. ಇವರು ಅದಕ್ಕೆ ಒಪ್ಪಿದರು. ಇದನ್ನ ಮೀಡಿಯಾ ತೈಲ ಬೆಲೆ ನೆಗಟಿವ್ ಗೆ ಹೋಯ್ತು ಎಂದು ಹುಯಿಲೆಬ್ಬಿಸಿದರು. ಗಮನಿಸಿ ಇದು ಶೇಖರಣೆಗೆ ಕೊಟ್ಟ ದುಡ್ಡು. ಸದ್ಯದ ಮಟ್ಟಿಗೆ ಈ ತೈಲ ಯಾರಿಗೂ ಬೇಡ ಹೀಗಾಗಿ ಕಂಪ್ಯೂಟರ್ ಪರದೆಯ ಮೇಲೆ ಅದನ್ನ ಮೈನಸ್ 37ಡಾಲರ್ ಎಂದು ತೋರಿಸಿದರು. ಅಂದರೆ ಇದನ್ನ ನೋಷನಲ್ ಲಾಸ್ ಎನ್ನುತ್ತೇವೆ. ಇದು ನಿಜವಾದ ಕುಸಿತ ಅಥವಾ ನಷ್ಟವಲ್ಲ. ಇದನ್ನ ಮಾರುವ ಸಮಯದಲ್ಲಿ ಮತ್ತೆ ಮರಳಿ ಪಡೆದುಕೊಳ್ಳುತ್ತಾರೆ. ಇದು ಸಮಯದ ಮೇಲೆ ನಿರ್ಧಾರಿತ ಅಷ್ಟೇ. 

ಇದರಿಂದ ಸ್ಪಷ್ಟವಾಗುವ ಅಂಶಗಳು: 

  1. ತೈಲವನ್ನ ಭಾರತಕ್ಕೆ ಅಥವಾ ಇತರ ದೇಶಗಳಿಗೆ ಮೈನಸ್ 37 ಡಾಲರ್ ಬ್ಯಾರಲ್ಲಿಗೆ ಮಾರಿಲ್ಲ. ಅಂದರೆ ಒಂದು ಬ್ಯಾರಲ್ ತೈಲವನ್ನ ನಿಮಗೆ ಪುಕ್ಕಟೆ ಕೊಟ್ಟು ಜೊತೆಗೆ ಅವರೇ ನಿಮಗೆ 37 ಡಾಲರ್ ಕೈಗೆ ಕೂಡ ಕೊಟ್ಟರು ಎಂದು ಭಾವನೆ ಬರುವ ಹಾಗೆ ಪತ್ರಿಕೆಗಳು ವರದಿ ಮಾಡಿವೆ!!. ಇದನ್ನ ನಂಬಿದ ಎಷ್ಟೋ ಜನ ಭಾರತದ ಕೇಂದ್ರ ಸರಕಾರ ಹೀಗೆ ಸಿಕ್ಕಿದ ಲಾಭವನ್ನ ಜನತೆಗೆ ಏಕೆ ವರ್ಗಾವಣೆ ಮಾಡಿಲ್ಲ ಎನ್ನುವ ಪ್ರಶ್ನೆ ಕೇಳಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ವಿಷಯ ಜ್ಞಾನದ ಕೊರತೆ ಕಾರಣವಾಗಿದೆ. 
  2. ಎಲ್ಲಕ್ಕೂ ಮುಖ್ಯವಾಗಿ  ಭಾರತ ಕೊಳ್ಳುವುದು ಬ್ರೆಂಟ್ ಕಚ್ಚಾ ತೈಲವನ್ನ. ಬ್ರೆಂಟ್ ಕಚ್ಚಾ ತೈಲದ ಬೆಲೆ ಮಾರುಕಟ್ಟೆಯಲ್ಲಿ ಕುಸಿತ ಕಂಡಿಲ್ಲ. ಅದು ಇಂದಿಗೂ 25 ಡಾಲರ್ ಬ್ಯಾರೆಲ್ಗೆ ಮಾರಾಟವಾಗುತ್ತಿದೆ. ಹೀಗಾಗಿ ಭಾರತಕ್ಕೆ ಹೆಚ್ಚಿನ ಲಾಭವಾಗಿದೆ ಎಂದು ಹೇಳುವುದರಲ್ಲಿ ಕೂಡ ಅರ್ಥವಿಲ್ಲ. ಲಾಭವಿಲ್ಲದ ಮೇಲೆ ಅದರ ವರ್ಗಾವಣೆ ಪ್ರಶ್ನೆ ಬರುವುದೇ ಇಲ್ಲ. 
  3. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಇಳಿಕೆಯಾಗಿರುವು ಬಹಳ ಸತ್ಯ. ಹಾಗೆಂದ ಮಾತ್ರಕ್ಕೆ ಜಗತ್ತಿನ ಎಲ್ಲಾ ಕಚ್ಚಾ ತೈಲದ ಬೆಲೆ ಮೈನಸ್ 37 ಎನ್ನುವಂತೆ ಎಲ್ಲೆಡೆ ಬಿಂಬಿಸಲಾಯಿತು. ಇದು ತಪ್ಪು. ಕೇವಲ ಅಮೆರಿಕನ್ ಆಯಿಲ್ ವೆಲ್ ನಿಂದ ಉತ್ಪನ್ನವಾದ ಕಚ್ಚಾ ತೈಲದ ಬೆಲೆ ಮಾತ್ರ ಕುಸಿದಿದೆ. ಅಂದರೆ ನೂರು ಲೀಟರ್ ಕಚ್ಚಾ ತೈಲದಲ್ಲಿ 19 ರಿಂದ 20 ಲೀಟರ್ ಕಚ್ಚಾ ತೈಲದ ಬೆಲೆ ಕುಸಿದಿದೆ ಅಷ್ಟೇ. ಉಳಿದ 80 ಪ್ರತಿಶತ ಇಂದಿಗೂ 25 ಡಾಲರ್ ಬ್ಯಾರಲ್ಗೆ ಮಾರಾಟವಾಗುತ್ತಿದೆ. 
  4. ಜಾಗತಿಕ ತೈಲ ಮಾರುಕಟ್ಟೆಯ ಹೆಚ್ಚು ಕಡಿಮೆ ಅರ್ಧದಷ್ಟು ಹಿಡಿತವಿರುವುದು ಒಪೆಕ್ ಒಕ್ಕೊಟದಲ್ಲಿ ಇಲ್ಲಿ ಯಾವುದೇ ಕುಸಿತ ಕಂಡಿಲ್ಲ. 
  5. ಮೊದಲೇ ಹೇಳಿದಂತೆ ಈ ಕುಸಿತ ನಿಜವಾದ ತೈಲ ಉತ್ಪಾದಕರಿಗೆ ತಟ್ಟುವುದೇ ಇಲ್ಲ. ಇದನ್ನ ಟ್ರೇಡ್ ಮಾಡಿದ ಮಧ್ಯವರ್ತಿಗಳು ಈ ಒಂದು ಖರ್ಚನ್ನ ಭರಿಸಬೇಕಾಗಿದೆ. ಮುಂದೆ ಇದಕ್ಕೆ ಹೆಚ್ಚು ಬೇಡಿಕೆ ಬಂದಾಗ ಅವರು ಇದನ್ನ ಮರಳಿ ಗಳಿಸಬಹುದು. ಅಥವಾ ನಷ್ಟವನ್ನ ಕೂಡ ಅನುಭವಿಸಬಹುದು. ಅಲ್ಲಿಯವರೆಗೆ ಇದನ್ನ ನಷ್ಟ ಅಥವಾ ಕುಸಿತ ಎನ್ನಲು ಬರುವುದಿಲ್ಲ. ಇದನ್ನ ನೋಷನಲ್ ಲಾಸ್ ಎಂದಷ್ಟೇ ಹೇಳಬಹುದು. 
  6. ಎಲ್ಲಕ್ಕೂ ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಅಂಶವೆಂದರೆ ಇದೊಂದು ತಾತ್ಕಾಲಿಕ ಸನ್ನಿವೇಶ. ಜಗತ್ತಿನಲ್ಲಿ ಲಾಕ್ ಡೌನ್ ತೆರವಾದ ನಂತರ ತೈಲ ಬಳಕೆ ಹೆಚ್ಚಾಗುತ್ತದೆ. ಸಾಧಾರಣವಾಗಿ ಬೇಡಿಕೆ ಹೆಚ್ಚಾಗುತ್ತದೆ. 

ಕೊನೆಯ ಮಾತು: ಇದನ್ನ ತೈಲ ಬೆಲೆಯ ಕುಸಿತ ಎನ್ನುವಂತೆ ಬಿಂಬಿಸಲಾಗಿದೆ ಇದು ತಪ್ಪು. ಹಾಗೊಮ್ಮೆ ಇದು ಕುಸಿತವೆಂದು ಒಪ್ಪುವುದಾದರೂ ಅದು ಕೇವಲ 20 ಪ್ರತಿಶತ ತೈಲ ಉತ್ಪಾದನೆಯ ಸಂಗ್ರಹದ ಮೇಲೆ ಮಾತ್ರ ಆಗಿದೆ. ಇದನ್ನ ಜಾಗತಿಕ ತೈಲ ಬೆಲೆಯ ಕುಸಿತ ಎಂದು ಹೇಳಲು ಬರುವುದಿಲ್ಲ. ಭಾರತ ಬ್ರೆಂಟ್ ತೈಲವನ್ನ ಖರೀದಿಸುತ್ತದೆ ಹೀಗಾಗಿ ನಮಗೆ ಯಾವುದೇ ಲಾಭ ಅಥವಾ ನಷ್ಟ ಇಲ್ಲ. ಒಟ್ಟಾರೆ ಕುಸಿದಿರುವ ತೈಲ ಬೆಲೆ ಭಾರತಕ್ಕೆ ವರದಾನ ಅದು ಬೇರೆಯ ಕಥೆ. ಉಳಿದಂತೆ ಭಾರತದಲ್ಲಿ ಕೂಡ ಬಹಳಷ್ಟು ಕಮಾಡಿಟಿ ಟ್ರೇಡರ್ಸ್ ವೆಸ್ಟ್ ಟೆಕ್ಸಸ್ ಇಂಟರ್ಮಿಡಿಯೇಟ್ ನಲ್ಲಿ ಫ್ಯೂಚರ್ ಕಾಂಟ್ರಾಕ್ಟ್ ಕೊಂಡಿದ್ದಾರೆ. ಅವರೆಲ್ಲರಿಗೆ ಇದು ನಿಜವಾದ ನಷ್ಟ. ಏಕೆಂದರೆ ಅವರು ಅದನ್ನ ಕಡೆಯ ದಿನಾಂಕದಂದು ಇತ್ಯರ್ಥ (ಸೆಟ್ಲ್) ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಹೀಗಾಗಿ ಅವರು ಬ್ಯಾರಲ್ ಗೆ ಮೈನಸ್ 37 ಡಾಲರ್ ಹಣ ಕಳೆದುಕೊಂಡಿರುವು ನಿಜ. ಜಗತ್ತಿನ ಒಂದು ವರ್ಗ ಲಾಭ ಮಾಡಿದರೆ ಇನ್ನೊಂದು ವರ್ಗ ಕಳೆದುಕೊಳ್ಳುತ್ತದೆ. ಅದು ವ್ಯಾಪಾರ. ಇದನ್ನ ವಿಶ್ವ ತೈಲ ಮಾರುಕಟ್ಟೆ ಕುಸಿತ ಎನ್ನುವುದು ಮಾತ್ರ ವಿಷಯ ಜ್ಞಾನದ ಕೊರತೆ ಬಿಟ್ಟು ಮತ್ತೇನಲ್ಲ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com