ರಾಮ ಮಂದಿರದ ಕನಸು ನನಸಾಯ್ತು, ಗುರಿ ಇನ್ನೇನಿದ್ದರೂ ರಾಮರಾಜ್ಯದ ಕಡೆಗೆ!

ರಾಜತಂತ್ರ-ಮನೀಷ್ ಮೋಕ್ಷಗುಂಡಂ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಈ ಜೀವಿತಾವಧಿಯಲ್ಲಿ ರಾಮ ಮಂದಿರ ನೋಡುತ್ತೇವೋ ಇಲ್ಲವೋ ಎಂಬುದು ಹಲವರ ಮನದಲ್ಲಿದ್ದ ಪ್ರಶ್ನೆ. ಈ ದಿನ ರಾಮಲಲ್ಲಾನಿಗೆ ನೆಲೆ ಸಿಕ್ಕಿ, ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯುತ್ತಿರುವುದು ಸಂತಸದ ವಿಷಯ.

ಆದರೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ಕೇವಲ ಭವ್ಯ ರಾಮ ಮಂದಿರವಷ್ಟೇಯೇ? ಅಲ್ಲ. ಅದಕ್ಕೂ ಮಿಗಿಲಾಗಿ ನಿರ್ಮಾಣವಾಗುತ್ತಿರುವುದು/ ನಿರ್ಮಾಣವಾಗಬೇಕಾಗಿರುವುದು ಒಂದು ಧಾರ್ಮಿಕ ರಾಷ್ಟ್ರ ಕಲ್ಪನೆಯ, ಭಾರತದ ಉತ್ಕೃಷ್ಟವಾದ ರಾಜತಂತ್ರದ ಪ್ರತೀಕ.

ಬಹಳಷ್ಟು ಬಾರಿ ನಾವು, ರಾಮ ಇದ್ದನಾ? ಎಂಬ ಬಗ್ಗೆ ವೈಜ್ಞಾನಿಕವಾಗಿ ಚರ್ಚಿಸುತ್ತೇವೆ. ವಾಸ್ತವದಲ್ಲಿ ಈ ರೀತಿಯ ಚರ್ಚೆಗಳೆಲ್ಲಾ ಅಸಂಗತ. ವ್ಯಕ್ತಿಯಾಗಿಯೂ ಅಥವಾ ಪರಿಕಲ್ಪನೆಯಾಗಿಯೂ ರಾಮ ಎಂಬ ಓರ್ವ ರಾಜ, ವ್ಯಕ್ತಿ ನಮಗೆ ಭಾರತ ತತ್ವದ, ಧರ್ಮದ, ಶ್ರೇಷ್ಠ, ಉತ್ಕೃಷ್ಟವಾದ ಮೂರ್ತರೂಪ!

ಇದಕ್ಕೆ ಒಂದು ಉದಾಹರಣೆಯಾಗಿ ರಾಮಾಯಣದಲ್ಲಿ ವಿವರಿಸಿರುವ ಘಟನೆಯನ್ನೇ ನೋಡಬಹುದು " ರಾಮನ Sworn enemy ಬದ್ಧ ವೈರಿಯಾಗಿದ್ದ ಮಾರೀಚ. ಆತ ರಾವಣನಿಗೆ ಸಲಹೆಯನ್ನು ನೀಡುತ್ತಾ, "ರಾಮೋ ವಿಗ್ರಹವಾನ್ ಧರ್ಮಃ" ಅಂದರೆ ಧರ್ಮದ ಮೂರ್ತ ರೂಪ, ಧರ್ಮದ ವಿಗ್ರಹವೇ ರಾಮನಾಗಿದ್ದಾನೆ, ಆತನೊಂದಿಗೆ ವಿರೋಧ ಬೇಡ ಎಂದಿದ್ದ.

ರಾಜತಂತ್ರ, ರಾಜಕಾರಣದ ನೆಲೆಗಟ್ಟಿನಿಂದ ಯೋಚಿಸಿದರೆ, ರಾಮನ ಹಾಗಿರುವ ವಾತಾವರಣವಿದೆಯೇ? ಪ್ರಸ್ತುತ ರಾಜಕಾರಣದಲ್ಲಿ ಒಂದೇ ಪಕ್ಷದಲ್ಲಿದ್ದವರೂ ಪರಸ್ಪರ ನಂಬಿಕೆಗೆ ಮೆಚ್ಚುಗೆಗೆ ಪಾತ್ರರಾಗಿರುವುದು ಕಷ್ಟ ಸಾಧ್ಯ! ಆದರೆ ರಾಮನಂತಹ ನಾಯಕ ತನ್ನ ಬದ್ಧವೈರಿಯಿಂದಲೂ ಪ್ರಶಂಸೆ ಪಡೆಯುತ್ತಿದ್ದ. ಇಂತಹ ವ್ಯಕ್ತಿತ್ವ ಭಾರತಕ್ಕೆ ಇಂದಿಗೂ ಪ್ರಸ್ತುತ ಆಗುತ್ತದೆ ಎಂದರೆ ಇಷ್ಟು ಶತಮಾನ, ದಶಕಗಳಿಂದ ಭಾರತೀಯರ ಈ ಹೋರಾಟ ನಡೆಸಿದ್ದು ಕೇವಲ ರಾಮನ ಭೌತಿಕ ಅಸ್ಥಿತ್ವಕ್ಕಾಗಿ ಅಲ್ಲ! ನಮ್ಮ ಸಮಾಜದಲ್ಲಿ ರಾಮನಿಗೆ ಇರುವ ಸ್ಥಾನದ ಗೌರವವನ್ನು ಉಳಿಸಿಕೊಳ್ಳುವುದು ಈ ಹೋರಾಟದ ಗೆಲುವಾಗಿದೆ. ಈ ನೆಲೆಗಟ್ಟಿನಲ್ಲಿ ರಾಮನ ಪರಿಕಲ್ಪನೆ ಬಹಳ ಮುಖ್ಯವಾದದ್ದು.

ಇಂದಿಗೂ ಓರ್ವ ಭಾರತೀಯ ಹೇಗಿರಬೇಕು ಎಂದರೆ ರಾಮ ರೀತಿ, ಭಾರತೀಯ ನಾರಿ ಹೇಗಿರಬೇಕೆಂದರೆ ಸೀತೆಯ ತರಹ ಇರಬೇಕೆನ್ನುತ್ತೇವೆ. ಅದು ಕಾರಣ ನಾವು ಈಗ ಸ್ಥಾಪಿಸ ಹೊರಟಿರುವುದು ಕೇವಲ ರಾಮ ಮಂದಿರವಷ್ಟೇ ಅಲ್ಲದೇ ಭಾರತದ ಪುರುಷೋತ್ತಮನನ್ನು ಗೌರವಿಸಿ, ಮತ್ತೆ ನಮ್ಮ ಸಮಾಜದಲ್ಲಿ ಆತನನ್ನು ಆದರ್ಶವನ್ನಾಗಿ ಪ್ರತಿಷ್ಠಾಪಿಸುತ್ತಿದ್ದೇವೆ.

ಇಷ್ಟು ದೀರ್ಘಾವಧಿಯ, ತಾಳ್ಮೆಯ ಹೋರಾಟ ಇದ್ದದ್ದು ಈ ತತ್ವ, ಆದರ್ಶಗಳಿಗಾಗಿಯೇ ಹೊರತು, ದ್ವೇಷ ಸಾಧನೆಗೋ, ಭೌತಿಕ ವಿಷಯದ ಮಹತ್ವಾಕಾಂಕ್ಷೆಗೋ ಅಲ್ಲವೇ ಅಲ್ಲ. ಹಾಗೆ ನೋಡಿದರೆ, ಮಂದಿರ ನಿರ್ಮಾಣವಾಗುತ್ತಿರುವುದು ಮೊದಲ ಹಂತದ ಗೆಲುವು! ಈವರೆಗಿನದ್ದು ಒಂದು ಹಂತದ ಸವಾಲಾದರೆ ಮುಂದಿರುವುದು ಮತ್ತಷ್ಟು ಸವಾಲಿನ ಸಂಗತಿಯಾಗಿದ್ದು ನಿತ್ಯ ಸತ್ಯದ ಆಧಾರದಲ್ಲಿ ನಿಂತಿರುವ ಧರ್ಮದ ಪ್ರತಿಷ್ಠಾಪನೆಗಾಗಿ ನಾಳೆ ಭೂಮಿ ಪೂಜೆ ನಡೆಯುತ್ತಿದೆ.

ಈ ವರೆಗೂ ಭಗವಾನ್ ರಾಮನ ಆದರ್ಶಗಳು, ನೀತಿಪಾಠಗಳನ್ನು reactionary ಯಾಗಿಯೇ ಬೋಧಿಸಲಾಗುತ್ತಿತ್ತು. ಈ ರೀತಿಯಾಗದೇ ಮುಂದಿನ ದಿನಗಳಲ್ಲಿ ಧಾರ್ಮಿಕ ರಾಜ್ಯ, ಧಾರ್ಮಿಕ ರಾಷ್ಟ್ರ, ಧಾರ್ಮಿಕ ನಾಯಕತ್ವ ಬರಬೇಕು, ಅದು ಮುಂದಿನ ದಿನಗಳಲ್ಲಿ ನಮ್ಮ ಮುಂದಿರುವ ಸವಾಲು! ಆದರೆ ಈಗಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ಈ ಪರಿಕಲ್ಪನೆ ಕಷ್ಟಸಾಧ್ಯವಾದುದ್ದೆ.

ಹಾಗಾದರೆ ಈ ಆಡಳಿತ, ರಾಜ ಇವೆಲ್ಲಾ ಏಕೆ ಬೇಕು ಎಂಬ ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ.
ಇಂದಿನ ಪರಿಭಾಷೆಯಲ್ಲಿ ಸರ್ಕಾರ, ಆಡಳಿತಗಳೆಂದರೆ ಬಿಜಲಿ, ಪಾನಿ, ಸಡಕ್ ಇಂತಹ ಮೂಲಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಇರುವ ವ್ಯವಸ್ಥೆಯಷ್ಟೇ. ಖಂಡಿತವಾಗಿಯೂ ಮನುಷ್ಯನಿಗೆ ಇವೆಲ್ಲವೂ ಅತ್ಯಗತ್ಯ, ಆದರೆ ಸರ್ಕಾರ, ಆಡಳಿತವಿರುವುದು ಇವಿಷ್ಟನ್ನು ಪೂರೈಸುವುದಕ್ಕೆ ಮಾತ್ರವೇ? ಇವಿಷ್ಟನ್ನು ನೀಡುವುದಕ್ಕಷ್ಟೇ ಸರ್ಕಾರ, ಆಡಳಿತಗಳಿರಬೇಕೆ?

ಈ ಪ್ರಾಪಂಚಿಕವಾಗಿ (materialistic) ಅಭಿವೃದ್ಧಿ, ಅಭಿವೃದ್ಧಿಶೀಲ ರಾಷ್ಟ್ರಗಳೆಂಬುದು ವಿದೇಶಿ ಪರಿಕಲ್ಪನೆ, ಅಭಿವೃದ್ಧಿಯೆಂದರೆ ಇದೇ ಎಂಬ ಭಾವನೆಯಲ್ಲಿ ನಾವು ಇಂದು ಸಿಲುಕಿದ್ದೇವೆ, ಆದರೆ ಇದ್ಯಾವುದೂ ಶಾಶ್ವತವಲ್ಲ!

ಒಂದು ಸಮಾಜ ನಿರ್ಮಾಣವಾಗಿರುದೇ ಆಧ್ಯಾತ್ಮದ ಸಾಧನೆಗಾಗಿ, ಹಾಗಂತ ಬಡತನದಲ್ಲಿ, ಮೂಲಸೌಕರ್ಯವಿಲ್ಲದೇ ಆಧ್ಯಾತ್ಮ ಸಾಧನೆ ಮಾಡುವುದಕ್ಕೆ ಆಗೊದಿಲ್ಲ. ರಾಮ ರಾಜ್ಯ ಸುಭಿಕ್ಷ-ಶ್ರೀಮಂತವಾಗಿದ್ದುಕೊಂಡೇ ಆಧ್ಯಾತ್ಮದ ಸಾಧನೆಯಲ್ಲಿ ಉನ್ನತಿಯಲ್ಲಿರಲಿಲ್ಲವೇ ಅದುವೇ ಆದರ್ಶ ಸಮಾಜ! ಸುಭಿಕ್ಷ-ಶ್ರೀಮಂತ ಸಮಾಜ ಮೂಲ ಆಧ್ಯಾತ್ಮದ ಕಡೆಗೆ ದಿಕ್ಸೂಚಿಯಾಗಿರುತ್ತದೆ. ಸಮಾಜಕ್ಕೆ ಅಭಿವೃದ್ಧಿ, ಧರ್ಮ ಮತ್ತು ಆಧ್ಯಾತ್ಮ ಹರಿಯುವಂತಾಗಬೇಕು ಹಾಗೂ ಇದು ಯಾವುದೇ ಏಜೆಂಟರ ಕೈಲಿ ಸಿಲುಕಿಕೊಳ್ಳದಂತಿರಬೇಕು. ಇತ್ತೀಚೆಗೆ ಜಾರಿಗೆ ತಂದ ಶಿಕ್ಷಣ ನೀತಿ ಬದಲಾವಣೆಯಿಂದಾಗಿ ಈ ಕೆಲಸ ಆಗಿದೆ.

ರಾಮ ರಾಜನಾದರೂ ಸಹ ಸಾಮಾನ್ಯ ವ್ಯಕ್ತಿಯ ತರಹ ಕಷ್ಟ ನೋಡಿದವನು ಮುಂದೆ ಬರುವ ನಾಯಕರು ರಾಷ್ಟ್ರ ನೀತಿಯಲ್ಲಿ ಅಷ್ಟೇ ಸಹಜವಾಗಿ ಸಮಾಜವವನ್ನು 100 ಕ್ಕೆ 100ರಷ್ಟು ಭೌತಿಕ, ಪ್ರಾಪಂಚಿಕ ಅಭಿವೃದ್ಧಿ, ಜೊತೆ ಜೊತೆಗೇ 100ಕ್ಕೆ 100 ರಷ್ಟು  ಅಭಿವೃದ್ಧಿಯ ಕಡೆಗೆ ಮುನ್ನಡೆಸಬೇಕು, ಆಗ ರಾಮ ಮಂದಿರದ ನಿಜವಾದ ಸ್ವರೂಪ, ಮಂದಿರದಿಂದ ರಾಮರಾಜ್ಯದ ಕಡೆಗೆ ನಮ್ಮ ಪಯಣ ಶುರುವಾಗುತ್ತದೆ.

-ಮನೀಷ್ ಮೋಕ್ಷಗುಂಡಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com