ಹಣಕಾಸು ಸ್ವಾತಂತ್ರ್ಯಕ್ಕೆ ಸಪ್ತ ಸೂತ್ರಗಳು!

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 06th August 2020 03:10 AM  |   Last Updated: 06th August 2020 03:14 AM   |  A+A-


Hanaclasu: How to achieve Finincial Freedom: here are 7 formulas to follow

ಹಣಕಾಸು ಸ್ವಾತಂತ್ರ್ಯಕ್ಕೆ ಸಪ್ತ ಸೂತ್ರಗಳು!

Posted By : Srinivas Rao BV
Source : Online Desk

ಹಿಂದೊಂದು ಕಾಲವಿತ್ತು ಆಗ ಸಮಾಜದಲ್ಲಿ ಸಾಮರಸ್ಯವಿತ್ತು. ವೃತ್ತಿಗನುಗುಣವಾಗಿ ಸಮಾಜವನ್ನ ವಿಭಾಗಿಸಲಾಗಿತ್ತು. ಕಮ್ಮಾರ, ಚಮ್ಮಾರ, ಅಕ್ಕಸಾಲಿ, ಪುರೋಹಿತ ಹೀಗೆ ಪಟ್ಟಿ ಸಾಗುತ್ತದೆ. ಬಿಪಿ ಶುಗರ್ ಇರಲಿಲ್ಲ. ಅವರವರ ವೃತ್ತಿಯಲ್ಲಿ ನಿಪುಣತೆಯಿತ್ತು. 

ತಲೆತಲಾಂತರದಿಂದ ಮಾಡಿಕೊಂಡು ಬಂದದ್ದರ ಫಲವೋ ಏನೋ ತಿಳಿಯದು ವಂಶವಾಹಿಗಳಲ್ಲಿ ಕೂಡ ನಿಪುಣತೆ ಹರಿದು ಬರುತಿತ್ತು. ಆಗ ಎಲ್ಲವೂ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ನಡೆಯುತ್ತಿತ್ತು. ಅದ್ಯಾವ ಮಹಾನುಭಾವ ಇಂತಹ ಕೆಲಸವನ್ನ ಇಂತವರೇ ಏಕೆ ಮಾಡಬೇಕು? ಎನ್ನುವ ಧ್ವನಿ ಎತ್ತಿದನೋ ತಿಳಿಯದು. ಚೆನ್ನಾಗಿ ಲಾಗ ಹಾಕಿ ಮರದಿಂದ ಮರಕ್ಕೆ ನೆಗೆಯುವ ಕೋತಿಯನ್ನ ನೋಡಿ ಕೊತಿಯೇ ಏಕೆ ಮರದಿಂದ ಮರಕ್ಕೆ ನೆಗೆಯಬೇಕು?? ಅದೇನು ಪೇಟೆಂಟ್ ಪಡೆದಿದೆಯೇ?? ಎಂದು ಕರಡಿಯನ್ನ ಕೋತಿಯ ವಿರುದ್ಧ ಎತ್ತಿ ಕಟ್ಟಲಾಯಿತು. ಸಹಜವಾಗೇ ಹುಟ್ಟಿನಿಂದ ಕೋತಿ ಮರದಿಂದ ಮರಕ್ಕೆ ಹಾರಬಲ್ಲದು. ಆದರೆ ಕರಡಿ?? ಏನು ಮಾಡುವುದು ಜೋರಾಗಿ ಕಿರುಚಾಡಿ ರಾಡಿ ಎಬ್ಬಿಸಿದ್ದಾಗಿದೆ ಇನ್ನೇನು?? ಕರಡಿ ಕೂಡ ಮರದಿಂದ ಮರಕ್ಕೆ ನೆಗೆಯಲು ಅಭ್ಯಾಸ ಶುರು ಹಚ್ಚಿಕೊಂಡಿತು. ಆದರೇನು ಅದು ಕೋತಿಯನ್ನ ಮೀರಿಸಬಲ್ಲದೇ? ಇವತ್ತು ವಿಜ್ಞಾನ ವಂಶವಾಹಿಸಿ ಸಿದ್ಧಾಂತ ಒಪ್ಪಿಕೊಂಡಿದೆ. ಅಂದರೆ ಯಾವುದನ್ನ ಯಾರು ಮಾಡಿದರೆ ಚೆಂದವೂ ಅವರು ಮಾಡಿದರೆ ಚೆಂದ, ಉಳಿದಂತೆ ವೃಥಾ ಶ್ರಮ!.

ನಮ್ಮ ಬಲ ಏನು? ಎನ್ನುವ ಅರಿವಿಲ್ಲದ ಜನ ಸುಮ್ಮನೆ ಟೈಮ್ ಪಾಸ್ ಮಾಡಿಕೊಂಡು ಜೀವನ ಸವೆಸುತ್ತಾರೆ. ನನಗೇನು ಬೇಕು?ಎನ್ನುವುದನ್ನ ನಿಖರವಾಗಿ ತಿಳಿದುಕೊಳ್ಳದೆ ಬದುಕು ಸಾಗುವುದಾದರೂ ಎಲ್ಲಿಗೆ? ಜೀವನ ಪೂರ್ತಿ ಇತರರಿಗಾಗಿ ದುಡಿಯುತ್ತ ಬದುಕು ಸವೆದು ಹೋಗುತ್ತದೆ. ಫೈನಾನ್ಸಿಯಲ್ ಫ್ರೀಡಂ ಹೀಗೆ ಪಡೆಯಲು ಸಾಧ್ಯವಿಲ್ಲ.

ಅದೇಕೆ ಎಲ್ಲಾ ಮಕ್ಕಳು ಎಲ್ಲವನ್ನೂ ಮಾಡಬೇಕು? ಅಥವಾ ಎಲ್ಲದರಲ್ಲೂ ಸೈ ಎನ್ನಿಸಿಕೊಳ್ಳಬೇಕು?. ಅವುಗಳ ಬೇಕು ಬೇಡ ಅರಿಯದೆ ಸುಮ್ಮನೆ ಶಾಲೆಗೆ ಕಳಿಸುತ್ತಾರೆ. ತಿಂಗಳು ಪೂರ್ತಿ ದುಡಿದರೂ ಆದಾಯ ಇಪ್ಪತ್ತು ಸಾವಿರ ಮುಟ್ಟದ ಜನ ಹತ್ತು ಸಾವಿರ ಶಾಲೆಗೇ ಸುರಿಯುತ್ತಾರೆ. ಆ ಹಣ ದುಡಿಯಲು ಸಮಯ ಬೇಕು. ಮತ್ತೆ ಮಕ್ಕಳಿಗೆ ಪೋಷಕರ ಸಮಯವೆಲ್ಲಿ?? ಹೀಗೆ ಸುಮ್ಮನೆ ಹಣವನ್ನ ಶಾಲೆಗೆ ವ್ಯಯಿಸಿದಷ್ಟೇ ಲಾಭ. ಮುಕ್ಕಾಲು ಪಾಲು ಮಕ್ಕಳು ಪ್ರೌಢಾವಸ್ಥೆಗೆ ಬರುವಷ್ಟರಲ್ಲಿ ಓದಿನಲ್ಲಿ ಆಸಕ್ತಿ ಕಳೆದುಕೊಂಡಿರುತ್ತವೆ. ಈ ಮಧ್ಯೆ ಕಿಸೆ ಉಬ್ಬಸಿಕೊಳ್ಳುವುದು ಮಾತ್ರ ಶಾಲೆಯವರು. ಇವತ್ತು ಬೆಂಗಳೂರಿನ ತುಂಬಾ ನಾಯಿಕೊಡೆಯಂತೆ ತಲೆಯೆತ್ತಿರುವ ಶಿಕ್ಷಣ ಮಾಫಿಯಾ ಹೌಸ್ ಗಳನ್ನ ಕಂಡಾಗೆಲ್ಲ.. ತಿಂಗಳು ಪೂರ್ತಿ ಆಟೋ ಓಡಿಸುತ್ತಾ ಅಥವಾ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಾ ನಮ್ಮ ಮಕ್ಕಳು ನಮಗಿಂತ ಉನ್ನತ ಬದುಕು ಬಾಳಲಿ ಎನ್ನುವ ಆಸೆಯಿಂದ ದುಡಿದದ್ದೆಲ್ಲ ತಂದು ಶಿಕ್ಷಣ ಮಾಫಿಯಾ ಹೌಸ್ ಗಳಿಗೆ ತೆರುವುದನ್ನ ಕಂಡಾಗೆಲ್ಲ ಮನಸ್ಸು ಮುದುಡಿಹೋಗುತ್ತೆ. ಮಕ್ಕಳು ಕಲಿಯುತ್ತಿರುವ ವಿಧಾನ ತಪ್ಪೇ? ಸರಿಯೇ? ಎಂದು ವಿಶ್ಲೇಷಿಸಲು ಬಾರದ ಪೋಷಕರು ಲಕ್ಷಗಟ್ಟಲೆ ಹಣ ಸುರಿಯುತ್ತಾರೆ ಮಕ್ಕಳ ಬದುಕು ಹಸನಾಗಲಿ ಎಂದು. ಶಾಲೆಯಲ್ಲಿನ ಶಿಕ್ಷಕ/ಶಿಕ್ಷಕಿಯರ ಬೋಧನಾ ರೀತಿ ಅವರ ಜ್ಞಾನ ಮಟ್ಟ ದೇವರಿಗೇ ಪ್ರೀತಿ. ಆದರೇನು ಅವರ ಬುದ್ಧಿಮತ್ತೆಯ ಅಳೆಯುವ ಶಕ್ತಿ ಪೋಷಕರಿಗೆ ಇಲ್ಲವಲ್ಲ!!.

ಯಾರಿಗೇನು ಬೇಕು? ಬದುಕಿಗೇನು ಬೇಕು? ಎನ್ನುವುದರ ಆಧಾರದ ಮೇಲೆ ಶಿಕ್ಷಣ ಬೇಕು. ಶಿಕ್ಷಣ ಬೇಕು ಎನ್ನುವ ಜಿದ್ದಿನಿಂದ ಶಿಕ್ಷಣ ಕೊಡಿಸಲು ಹೋಗಬಾರದು. ಅಂದರೆ ಬದುಕಿಗೆ ಬಹು ಮುಖ್ಯವಾಗಿ ಬೇಕಾಗುವ ವಿಷಯಗಳನ್ನ ಹೇಳಿಕೊಡಬೇಕು. ಬದುಕುವ ಕಲೆ ಅವರಿಗೆ ಕಲಿಸಬೇಕು. ಆಗ ಫೈನಾನ್ಸಿಯಲ್ ಫ್ರೀಡಂ ಗಳಿಸಲು ಸಾಧ್ಯ.

ಐದು ವರ್ಷ ತುಂಬುವ ಹೊತ್ತಿಗೆ ಮಕ್ಕಳಲ್ಲಿ ಹಣವನ್ನ ಕುರಿತು ಒಂದು ವಿಚಿತ್ರ ಸಳೆತ ಉಂಟಾಗುತ್ತದೆ ಎನ್ನುತ್ತದೆ ಒಂದು ಸಂಶೋಧನೆ. ಇದು ಯಾಕಾಗ್ತಾ ಇತ್ತು ಅಂದರೆ ಹಿಂದೆಲ್ಲ ಎಲ್ಲಾ ವ್ಯವಹಾರವೂ ನಗದಿನ ಮೂಲಕ ನಡೆಯುತ್ತಿತ್ತು. ಅರರೆ ಇದೇನಿದು ಒಂದು ಪೇಪರ್ ತುಂಡು ಕೊಟ್ಟರೆ ಅಂಗಡಿಯವನು ಕೇಳಿದ್ದೆಲ್ಲಾ ಕೊಡುತ್ತಾನಲ್ಲ ಎನ್ನುವ ಸಹಜ ಕುತೂಹಲ. ಇಂದು ಭಾರತದಲ್ಲಿ ಇನ್ನೂ ನಗದು ನಡೆಯುತ್ತಿದೆ. ಆದರೆ ಬಹಳಷ್ಟು ಪಾಶ್ಚಾತ್ಯ ದೇಶಗಳಲ್ಲಿ ಎಲ್ಲವೂ ಡಿಜಿಟಲ್. ಹೀಗಾಗಿ ಮಗುವಿನ ಹಣದ ಕಲ್ಪನೆ ಬೇರೆ. ಅದೇನಿದ್ದರೂ ಪ್ಲಾಸ್ಟಿಕ್ ಕಾರ್ಡ್ ಉಜ್ಜುವುದಕಷ್ಟೇ ಸೀಮಿತ.

ಅಪ್ಪ ಅಮ್ಮನ ನೋಡಿಕೊಂಡು ಬೆಳೆಯುವ ಮಕ್ಕಳು ಅಪ್ಪ ಅಮ್ಮನ ಹಣಕಾಸು ಪರಿಪಾಠವನ್ನ ಕೂಡ ಅಳವಡಿಸಿಕೊಳ್ಳುತ್ತಾರೆ. ಕೆಲವರು ಉಳಿಕೆಗೆ ಮಹತ್ವ ಕೊಟ್ಟರೆ ಇನ್ನು ಕೆಲವರು ದುಡಿದದ್ದೆಲ್ಲ ಖರ್ಚು ಮಾಡುವುದರಲ್ಲಿ ಖುಷಿಯ ಕಾಣುತ್ತಾರೆ. ಮಕ್ಕಳ್ಳಿಗೂ ಇದು ವರ್ಗಾವಣೆಯಾಗುತ್ತದೆ.

ಅಮೆರಿಕಾದ ಇಲಿನಾಯ್ಸ್ ಯೂನಿವೆರ್ಸಿಟಿಯಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ಅಲ್ಲಿನ 36 ಪ್ರತಿಶತ ಯುವ ಜನತೆ ಫೈನಾನ್ಸಿಯಲ್ ರಿಸ್ಕ್ ನಲ್ಲಿದ್ದಾರೆ. ಅಂದರೆ ನೂರಕ್ಕೆ 36 ಜನರಿಗೆ ಹಣವನ್ನ ಹೇಗೆ ಗಳಿಸಬೇಕು ಅದನ್ನ ದುಡಿಸಿಕೊಳ್ಳಬೇಕು ಎನ್ನುವ ಮತ್ತು ಹಣದುಬ್ಬರ, ಬಡ್ಡಿ, ಬಡ್ಡಿ ದರ, ಬ್ಯಾಂಕಿಂಗ್ ವ್ಯವಹಾರ ಹೇಗೆ ನಡೆಯುತ್ತದೆ ಎನ್ನುವ ಮೂಲಭೂತ ವಿಷಯ ಕೂಡ ಗೊತ್ತಿಲ್ಲ ಎನ್ನುತ್ತದೆ ಅಧ್ಯಯನ. ಇವರ ಹತ್ತಿರ ಸೇವಿಂಗ್ ಅಕೌಂಟ್, ಸೇವಿಂಗ್ ಅನ್ನುವ ಮಾತು ಕೂಡ ಇಲ್ಲ. ಗಮನಿಸಿ ಈ 36ಪ್ರತಿಶತ ಯುವ ಜನತೆ 18 ದಾಟಿದವರು. ಸ್ವಂತಂತ್ರವಾಗಿ ಬದುಕಲು ಶುರು ಮಾಡಿದವರು. ಅವರಿಗೆ ಅಚಾನಕ್ಕಾಗಿ ಹೆಚ್ಚಿನ ಹಣ ಬೇಕಾದರೆ ಅದನ್ನ ಹೊಂದಿಸಲು ಸಾಧ್ಯವಾಗದವರು ಎಂದರೆ ಅವರಲ್ಲಿನ ಫೈನಾನ್ಸಿಯಲ್ ಇಲ್ಲಿಟ್ರೇಸಿ, ಹಣಕಾಸು ಅಜ್ಞಾನ ಎಷ್ಟಿರಬಹುದು ಎನ್ನುವುದರ ಅಂದಾಜು ನಿಮ್ಮದಾಗುತ್ತದೆ.

ಸರಿ 36 ಪ್ರತಿಶತ ಇಂತಹವರಿದ್ದಾರೆ ಉಳಿದವರು ಪರವಾಗಿಲ್ಲ ಎಂದು ನೆಮ್ಮದಿಯಾಗಿರುವಂತಿಲ್ಲ. ಏಕೆಂದರೆ ಉಳಿದವರ ಪಾಡು ಕೂಡ ಅಷ್ಟಕಷ್ಟೇ. ಒಟ್ಟು ಯುವಜನತೆಯ 22 ಪ್ರತಿಶತ ಮಾತ್ರ ಪರವಾಗಿಲ್ಲ ಎನ್ನುವ ಜ್ಞಾನ ಹೊಂದಿದ್ದಾರೆ. ಉಳಿದ 78 ಪ್ರತಿಶತ ಅಜ್ಞಾದದಲ್ಲಿ ಬಾಳುತ್ತಿದ್ದಾರೆ. ಅದರಲ್ಲೂ 36 ಪ್ರತಿಶತ ಅಪಾಯದ ಅಂಚಿನಲ್ಲಿದ್ದಾರೆ.

ಇದು ಇಲಿನಾಯ್ಸ್ ಅಥವಾ ಅಮೆರಿಕಾದ ಕಥೆ ಎಂದು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ. ಇದು ಜಗತ್ತಿನ ಕಥೆ. ಮನೆ ಮನೆಯ ಕಥೆ. ಪೋಷಕರಾದವರು ಮಕ್ಕಳಿಗೆ ಹಣಕಾಸು ಜ್ಞಾನ ನೀಡಬೇಕು. ಅದಕ್ಕೆ ಮೊದಲು ಅವರು ತಮ್ಮ ಹಣಕಾಸು ಅಜ್ಞಾನವನ್ನ ತಿದ್ದಿಕೊಳ್ಳೋಬೇಕು. ಇಂದೇನಾಗಿದೆ ಜಗತ್ತಿನ 90 ಪ್ರತಿಶತ ಜನ ದುಡಿಯಬೇಕು ಅದಕ್ಕೆ ಒಂದಷ್ಟು ಹಣ ಕೊಡುತ್ತಾರೆ. ಆ ಹಣವನ್ನ ಮರು ಬಳಸಿ ಬೇಕಾದ್ದ ಕೊಳ್ಳುವುದು, ಉಪಯೋಗಿಸುವುದು ಬದುಕುವುದು ಇದನ್ನ ಜೀವನ ಎಂದುಕೊಂಡಿದ್ದಾರೆ.

ಪೋಷಕರು ಮಕ್ಕಳ ಬೇಕು-ಬೇಡಗಳನ್ನು ಅರಿಯಬೇಕು. ಅವರ ಇಚ್ಛೆಯ ಕಾರ್ಯ ಕ್ಷೇತ್ರ ಗುರುತಿಸಿ ಅದರಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಬೇಕು. ಕೆಲವು ಮಕ್ಕಳಿಗೆ ಶಾಲೆಗೆ ಹೋಗಿ ಕಲಿಯುವುದರಲ್ಲಿ ಆಸಕ್ತಿ ಇರುವುದಿಲ್ಲ. ಅಂತವರನ್ನ ಶಾಲೆಗೆ ಬಲವಂತವಾಗಿ ಕಳಿಸುವುದರಿಂದ ಹಣ ಮತ್ತು ವೇಳೆ ಎರಡೂ ಪೋಲಾಗುತ್ತದೆ/ ಶಾಲೆಗೆ ಕಟ್ಟುವ ಹಣವನ್ನ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಬಂದರೆ 15/20 ವರ್ಷಗಳಲ್ಲಿ ಅದು ಲಕ್ಷಾಂತರ ರೂಪಾಯಿಯಾಗಿ ಅವರು ಇಚ್ಛಿಸುವ ಕೆಲಸ ಮಾಡಲು ಬಂಡವಾಳವಾಗುತ್ತದೆ. ಪಕ್ಕದ ಮನೆಯ ಹುಡುಗ ಇಂಜಿನಿಯರ್ ಅಥವಾ ಡಾಕ್ಟಾರ್ ಆದ ಅಂತ ನಮ್ಮ ಮಗ/ಮಗಳು ಹಾಗೆ ಆಗಲಿ ಅನ್ನುವ ಮನಸ್ಥಿತಿಯಿಂದ ಸಮಾಜ /ಪೋಷಕರು ಹೊರಬರಬೇಕಿದೆ. ಇವೆಲ್ಲವುದರ ಜೊತೆಗೆ ಹಣಕಾಸು ಸ್ವಂತಂತ್ರ್ಯ ಜೀವನದಲ್ಲಿ ಬಹಳ ಮುಖ್ಯ. ಹಣಕಾಸು ಸ್ವಾತಂತ್ರ್ಯ ಎಂದರೆ ನಮ್ಮ ವೇಳೆಯನ್ನ ಇತರಿರಿಗೆ ಹಣಕ್ಕಾಗಿ ಮಾರದೆ ನಮ್ಮಿಚ್ಛೆಯಂತೆ ಬದುಕುವ ಸ್ವಾತಂತ್ರ್ಯ.

ಹಣಕಾಸು ಸ್ವಾತಂತ್ರ್ಯವನ್ನ (ಫೈನಾನ್ಸಿಯಲ್ ಫ್ರೀಡಂ) ಬಯಸುವ ಜನರು ಸಪ್ತ ಸೂತ್ರಗಳನ್ನ ಪಾಲಿಸಬೇಕಾಗುತ್ತದೆ:

  1. ವೆಲ್ತ್ ಅಕ್ಯುಮಿಲೇಷನ್ ಸ್ಟೇಜ್- ಇದನ್ನ ಕೆಲಸಕ್ಕೆ ಸೇರಿದ ದಿನದಿಂದ ಐವತ್ತು ವಯಸ್ಸಿನವರೆಗೆ ಎಂದು ವರ್ಗಿಕರಿಸಬಹುದು.
  2. ವೆಲ್ತ್ ಪ್ರಿಸರ್ವೇಶನ್ ಸ್ಟೇಜ್- ಗಳಿಸಿದ್ದನ್ನ ಉಳಿಸಿಕೊಂಡು ಹೋಗುವ ಸಮಯ. ನಿವೃತ್ತಿ ಅಥವಾ ಐವತ್ತರ ನಂತರ ಎನ್ನಬಹುದು.
  3. ವೈಯಕ್ತಿಕ ಹಣಕಾಸಿನ ಬಗ್ಗೆ ಅರಿವಿರಲಿ.- ಮೊದಲೇ ಹೇಳಿದಂತೆ ನಮ್ಮ ಬೇಕು ಬೇಡಗಳ ಅರಿವು ನಮಗಿರಬೇಕು.
  4. ಸರಳ ಜೀವನ-ಸರಿಯಾದ ಜೀವನ-ಸರಳ ಜೀವನವೆಂದರೆ, ನಮ್ಮ ಜೀವಿತಾವಧಿಯಲ್ಲಿ ಅದಕ್ಕಿಂತ ಕೆಳಗಿನ ಮಟ್ಟಕ್ಕೆ ಹೋಗದೆ ಇರುವ ಹಾಗೆ ಜೀವಿಸುವ ವಿಧಾನ.
  5. ಷೇರು ಮಾರುಕಟ್ಟೆಯ ಬಗ್ಗೆ ಅರಿವಿರಲಿ-  ಇದರ ಬಗ್ಗೆ ಅರಿವಿಲ್ಲದೆ ಇದರಲ್ಲಿ ಪ್ರವೇಶ ಮಾಡಬಾರದು ಎನ್ನುವುದು ಉದ್ದೇಶ.
  6. ವೇಳೆ ಎನ್ನುವುದು ಬಹಳ ಮುಖ್ಯ.- ಷೇರು ಮಾರುಕಟ್ಟೆ ಒಂದೇ ಅಲ್ಲ ಎಲ್ಲಾ ವಿಷಯದಲ್ಲೂ ಪ್ರವೇಶದ ಸಮಯ ಮತ್ತು ನಿರ್ಗಮನದ ಸಮಯ ಬಹಳ ಮುಖ್ಯ.
  7. ನಮ್ಮ ಪೋರ್ಟ್ಫೋಲಿಯೋ ನಾವೇ ನಿಭಾಯಿಸಯಬೇಕು-ಯಾರೋ ಫಂಡ್ ಮ್ಯಾನೇಜರ್ ನಿಮ್ಮ ಹಣವನ್ನ ವೃದ್ಧಿಸಿಕೊಡುತ್ತಾನೆ ಎನ್ನುವುದು ಭ್ರಮೆ. ನಮಗೆ ನಾವೇ ದಾರಿದೀಪ.

ಕೊನೆಯ ಮಾತು: ನೆಮ್ಮದಿಯಾಗಿದ್ದ ಸಮಾಜವನ್ನ ಕದಡಿ ರಾಡಿ ಎಬ್ಬಿಸಿಯಾಗಿದೆ. ಇಷ್ಟೆಲ್ಲಾ ಗದ್ದಲಗಳ ನಡುವೆ ನಾವು ನಮ್ಮದೇ ಆದ ರೂಪುರೇಷೆಗಳನ್ನ ಹಾಕಿಕೊಂಡು ಆ ದಾರಿಯಲ್ಲಿ ನಡೆದರೆ ಹಣಕಾಸು ಸ್ವಾತಂತ್ರ್ಯವನ್ನ ನಿವೃತ್ತಿಗೆ ಹತ್ತು ವರ್ಷ ಮುಂಚೆ ಸಾಧಿಸಬಹುದು. ಹಾಗೆ ಗಳಿಸಿದ ಸಮಯ ನಿಮ್ಮದು. ನಿಮ್ಮಿಷ್ಟದ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp