'ಮಾಲಾಮಾಲ್' ಆಗಿದ್ದ ಮಾಲ್ ಗಳು ಇದೀಗ ಬೀದಿಪಾಲು!

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 13th August 2020 12:57 AM  |   Last Updated: 13th August 2020 12:59 AM   |  A+A-


Hanaclasu: The Fall Of The Mall Culture: here is how it happened

'ಮಾಲಾಮಾಲ್' ಆಗಿದ್ದ ಮಾಲ್ ಗಳು ಇದೀಗ ಬೀದಿಪಾಲು!

Posted By : Srinivas Rao BV
Source : Online Desk

ಬದುಕು ಎಂದರೆ ಬದಲಾವಣೆ. ಹೌದು ಈ ಜಗತ್ತಿನಲ್ಲಿ ಬದಲಾವಣೆಯೊಂದೇ ಅತ್ಯಂತ ಸ್ಥಿರವಾಗಿ ಆಗುತ್ತಿರುವ ಕಾರ್ಯ. ಮನುಷ್ಯ ಹುಟ್ಟಿದ ದಿನದಿಂದ ತನ್ನ ಸಾವಿನಡೆಗೆ ಹೆಜ್ಜೆ ಇಡಲು ಶುರುಮಾಡುತ್ತಾನೆ. ಅಂದರೆ ಗಮನಿಸಿ ಹುಟ್ಟು-ಸಾವು ಅಂತಲ್ಲ, ಬದುಕಿನಲ್ಲಿ ಎಲ್ಲವೂ ಒಂದು ಅಂತಿಮ ದಿನಾಂಕ ಅಥವಾ ಎಕ್ಸ್ಪೈರಿ ಡೇಟ್ ಇಟ್ಟು ಕೊಂಡೆ ಬಂದಿರುತ್ತವೆ. ಉದಾಹರೆಣೆಗೆ ಹಾಲನ್ನ ಪ್ಯಾಕ್ ಮಾಡಿದ ಮೂರು ದಿನದಲ್ಲಿ ಬಳಸಬೇಕು ಅಂತ ಪ್ಯಾಕೆಟ್ ಮೇಲೆ ಹಾಕಿರುತ್ತಾರೆ ಅಲ್ಲವೇ? ಹಾಗೆ ಎಲ್ಲಾ ಪದಾರ್ಥಗಳ ಉಳಿವು ಅಥವಾ ಅವು ಮನುಷ್ಯ ಬಳಕೆಗೆ ಇಷ್ಟು ದಿನದಲ್ಲಿ ಬಳಸಿದರೆ ಮಾತ್ರ ಯೋಗ್ಯ ಎನ್ನುವ ಒಂದು ದಿನಾಂಕವನ್ನ ಹೊತ್ತು ಬರುತ್ತವೆ. ಇದು ಕೇವಲ ಗ್ರಾಹಕರು ಬಳಸುವ ದಿನ ನಿತ್ಯದ ವಸ್ತುಗಳಿಗೆ ಮಾತ್ರ ಸೀಮಿತವಲ್ಲ. ಈ ಮಾತು ಎಲ್ಲಕ್ಕೂ ಅನ್ವಯವಾಗುತ್ತದೆ. 

ಇದಕ್ಕೊಂದು ಉತ್ತಮ ಉದಾಹರಣೆ ಬಿನ್ನಿ ಮಿಲ್ ಮತ್ತೊಂದು ಉದಾಹರಣೆ ಬಿನ್ನಿ ಮಿಲ್ ಮೇಲೆ ಹಾದು ಮೆಜೆಸ್ಟಿಕ್ ಕಡೆಗೆ ಪ್ರಯಾಣ ಮಾಡಿದರೆ ಸಿಗುವ ಆರ್ ಆರ್ ಆರ್ ಕಲ್ಯಾಣ ಮಂಟಪ. ಒಂದು ಕಾಲದಲ್ಲಿ ಅದೆಷ್ಟು ಅದ್ಧೂರಿ ಮದುವೆಗಳಿಗೆ ಸಾಕ್ಷಿಯಾದ ಈ ಮಂಟಪ ಇಂದು ಹಾಳು ಬಿದ್ದಿದೆ. ಇಷ್ಟಲ್ಲಾ ಪೀಠಿಕೆ ಹಾಕುವ ಉದ್ದೇಶವೇನು ಗೊತ್ತಾ? ಮಾಲ್ ಗಳು! 

ಹೌದು ನಮ್ಮ ಬೆಂಗಳೂರಿನ ಶಾಪಿಂಗ್ ಮಾಲ್ಗಳು ಇಂದಿಗೆ ಭಣಗುಡುತ್ತಿವೆ. ಬೆಂಗಳೂರು ಮಾತ್ರ ಅಂತಲ್ಲ ಇದು ಕೂಡ ಕೊರೋನ ವೈರಸ್ ನಂತೆ ಜಗತ್ತಿನ ಎಲ್ಲೆಡೆ ವ್ಯಾಪಿಸಿದೆ. ಅಮೇರಿಕಾದಲ್ಲಿ ಇಂದಿಗೆ ಮಾಲ್ ಗಳು ಖಾಲಿ ಖಾಲಿ! ಸೂತಕದ ಮನೆಯ ಛಾಯೆಯನ್ನ ಹೊತ್ತು ಕುಳಿತಿವೆ. ಸ್ಪೇನ್, ಇಟಲಿ, ಫ್ರಾನ್ಸ್ ಮಾಲ್ ಗಳ ಕಥೆ ವಿಭಿನ್ನವೇನೂ ಇಲ್ಲ. ಇದಕ್ಕೆಲ್ಲಾ ಕೊರೋನಾ ಕಾರಣವೇ? ಹಾಗೇನಿಲ್ಲ. ಎಲ್ಲಕ್ಕೂ ಕೊರೋನಾ ಖಂಡಿತ ಕಾರಣವಲ್ಲ ಆದರೆ ಶವ ಪೆಟ್ಟಿಗೆಗೆ ಕೊನೆಯ ಮೊಳೆಯನ್ನ ಹೊಡೆದದ್ದು ಮಾತ್ರ ಕೊರೋನಾ.

ಮಾಲ್ ಸಂಸ್ಕೃತಿಯ ಉಗಮ:

1950 ರಲ್ಲಿ ಅಮೆರಿಕಾ ಅತ್ಯಂತ ವೇಗವಾಗಿ ಆರ್ಥಿಕವಾಗಿ ಬೆಳೆಯತೊಡಗಿತು. ಜನರಲ್ಲಿ ಹೆಚ್ಚು ಹೆಚ್ಚು ಹಣ ಸಂಗ್ರಹವಾಗ ತೊಡಗಿತು. ಜನರಲ್ಲಿ ಹೆಚ್ಚಿನ ಖರ್ಚು ಮಾಡುವ ಶಕ್ತಿ ಯಾವಾಗ ಬಂದಿತು ಆಗ ಅಲ್ಲಿನ ಆಡಳಿತ ಚುಕ್ಕಾಣಿ ಹಿಡಿದ ಬಂಡವಾಳಶಾಹಿಗಳಲ್ಲಿ ಈ ಖರ್ಚಿಗೆ ಸರಿಯಾದ ದಾರಿಯನ್ನ ಹುಡುಕಬೇಕಾದ ದರ್ದು ಹೆಚ್ಚಾಯ್ತು. ಹೀಗೆ 1956ರಲ್ಲಿ ಅಮೆರಿಕಾದ ಪ್ರಥಮ ಮಾಲ್ ಎದಿನಾ ಎನ್ನುವ ನಗರದಲ್ಲಿ ಸೌತ್ ಡೇಲ್ ಸೆಂಟರ್ ಅಥವಾ ಸೌತ್ ಲ್ಯಾಂಡ್ ಮಾಲ್ ಎನ್ನುವ ಹೆಸರಿನಲ್ಲಿ ಗ್ರಾಹಕರಿಗೆ ತೆರೆದುಕೊಳ್ಳುತ್ತದೆ. ಇದು ಗ್ರಾಹಕರ ಮನಸ್ಸನ್ನ ಬಹಳವಾಗಿ ಆಕರ್ಷಿಸುತ್ತದೆ! ನಿಮಗೆಲ್ಲಾ ಆಶ್ಚರ್ಯ ಎನ್ನಿಸಬಹುದು ಇಂತಹ ಒಂದು ಮಾಲ್ ನ ಪರಿಕಲ್ಪನೆ ಮಾಡಿಕೊಂಡದ್ದು ಮತ್ತು ಅದನ್ನ ವಿನ್ಯಾಸ ಮಾಡಿ ಗ್ರಾಹಕರಿಗೆ ನೀಡಿದ್ದು ವಿಕ್ಟರ್ ಗ್ರೂಯೆನ್ ಎನ್ನುವ ಸಮಾಜವಾದ ಸಿದ್ದಾಂತದ ಆರಾಧಕ!!. ಯಾವ ಸಮಾಜವಾದ ಸಮಾಜದಲ್ಲಿ ಮೇಲು ಕೀಳು ಬೇಡ ಎನ್ನುವ ಸಿದ್ಧಾಂತವನ್ನ ಸಾರುತ್ತದೋ ಅಂತಹ ಸಿದ್ಧಾಂತದ ಅಭಿಮಾನಿ 20ನೇ ಶತಮಾನದಲ್ಲಿ ಮುಂದೆ ಬಹಳಷ್ಟು ಮೇಲು-ಕೀಳುಗಳ ಸೃಷ್ಟಿಸಲಿರುವ ಮಾಲ್ ಸಂಸ್ಕೃತಿಗೆ ಅಡಿಪಾಯ ಹಾಕುತ್ತಾನೆ. ಡಿಸ್ನಿ ಲ್ಯಾಂಡ್ 1955 ರಲ್ಲಿ ಅಮೇರಿಕಾದಲ್ಲಿ ಪ್ರಾರಂಭವಾಗಿರುತ್ತದೆ. ಅಂದಿನ ದಿನದಲ್ಲಿ ಈ ಮಾಲ್ ಡಿಸ್ನಿ ಲ್ಯಾಂಡ್ ಗೆ ಸೆಡ್ಡು ಹೊಡೆಯುವ ಮಟ್ಟದಲ್ಲಿ ಪ್ರಸಿದ್ಧಿಯನ್ನ ಪಡೆಯುತ್ತದೆ.

ಈ ಮಾಲ್ ಗಳಲ್ಲಿ ಮುಖ್ಯವಾಗಿ ಎರಡು ಮುಖ್ಯವಾದ ಅಥವಾ ಮಾಲ್ ಗೆ ಆಧಾರದಂತೆ ಅಂಗಡಿಗಳು ಇರುತ್ತವೆ. ಇವುಗಳಲ್ಲಿ ಒಂದು ಸೂಪರ್ ಮಾರ್ಕೆಟ್. ಇನ್ನೊಂದು ರೆಸ್ಟೋರೆಂಟ್. ಉದಾಹರೆಣೆಗೆ ಅಲ್ದಿ ಎನ್ನುವ ಸೂಪರ್ ಮಾರ್ಕೆಟ್ ಮತ್ತು ಮ್ಯಾಕ್ ಡೊನಾಲ್ಡ್. ಇವುಗಳ ಕೆಲಸ ಜನರನ್ನ ಸೆಳೆಯುವುದು. ಹೀಗೆ ಇವುಗಳ ಪ್ರಖ್ಯಾತಿಯಿಂದ ಮಾಲ್ ಗೆ ಬಂದ ಜನ ಬೇರೆ ಅಂಗಡಿಯಲ್ಲಿ ಕೂಡ ಕೊಳ್ಳಲು ಶುರು ಮಾಡುತ್ತಾರೆ. ಅಂದರೆ ಒಂದೇ ಸೂರಿನಡಿಯಲ್ಲಿ ಬಹಳಷ್ಟು ಸೇವೆ ಮತ್ತು ಸೌಲಭ್ಯವನ್ನ ಕಲ್ಪಿಸುವುದು ಮಾಲ್ ಗಳ ಉದ್ದೇಶ. ಅದು ಜನರಿಗೆ ಇಷ್ಟವಾಗುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಇದು ಬಹಳಷ್ಟು ಪ್ರಸಿದ್ಧಿ ಪಡೆಯುತ್ತದೆ. ಎಷ್ಟರ ಮಟ್ಟಿಗೆ ಎಂದರೆ 1956ರ ಅಕ್ಟೋಬರ್ ನಲ್ಲಿ ಒಂದು ಮಾಲ್ ಇದದ್ದು 1960 ರ ವೇಳೆಗೆ ಅಂದರೆ ಕೇವಲ ನಾಲ್ಕು ವರ್ಷದಲ್ಲಿ 4,500 ಮಾಲ್ ಗಿಂತ ಹೆಚ್ಚಿನ ಮಾಲ್ಗಳು ಅಮೇರಿಕಾದಲ್ಲಿ ಇರುತ್ತವೆ. ಅಂದರೆ ಪ್ರತಿ ದಿನ ಅಮೇರಿಕಾದಲ್ಲಿ ಮೂರು ಮಾಲ್ಗಳು ತೆರೆಯಲ್ಪಡುತ್ತವೆ!!

ಮಾಲ್ಗಳ ಉನ್ನತಿ:

1975ರ ವೇಳೆಗೆ ಅಮೆರಿಕಾದ ಒಟ್ಟು ಖರೀದಿಯಲ್ಲಿ 33 ಪ್ರತಿಶತ ಖರೀದಿ ಮಾಲ್ ಗಳಲ್ಲಿ ಆಗುತ್ತಿತ್ತು ಎಂದರೆ ಮಾಲ್ ಸಂಸ್ಕೃತಿ ಅಮೆರಿಕನ್ ರಲ್ಲಿ ಯಾವ ಮಟ್ಟದ ಛಾಪು ಬೀರಿರಬಹುದು ಎನ್ನುವುದರ ಅರಿವು ನಿಮ್ಮದಾಗಬಹುದು. 1980ರಲ್ಲಿ ಮಾಲ್ ಗಳಲ್ಲಿ ಸಿನಿಮಾ ಥಿಯೇಟರ್ ಕೂಡ ಶುರು ಮಾಡುತ್ತಾರೆ. ಹೀಗಾಗಿ ಮಾಲ್ ಗಳು ಇನ್ನಷ್ಟು ಹೆಚ್ಚಿನ ಆಕರ್ಷಣೆ ಹೊಂದಿ ಜನರನ್ನ ತನ್ನತ್ತ ಸೆಳೆಯುವಲ್ಲಿ ಜಯಗಳಿಸುತ್ತವೆ. 1992ರ ಅಮೇರಿಕಾದಲ್ಲಿ ಮೆಗಾ ಮಾಲ್ ಗಳನ್ನ ಪರಿಚಯಿಸಲಾಗುತ್ತದೆ. ಇಲ್ಲಿ ಖರೀದಿ ಜೋತೆಗೆ ಗ್ರಾಹಕನ ಮನರಂಜನೆಗೆ ಹೆಚ್ಚಿನ ಮಹತ್ವವನ್ನ ನೀಡಲಾಗುತ್ತದೆ. ಥೀಮ್ ಪಾರ್ಕುಗಳಿಂದ ಹಿಡಿದು ಭೂಮಿಯ ಮೇಲೆ ಲಭ್ಯವಿರುವ ಎಲ್ಲಾ ರೀತಿಯ ಸೌಲಭ್ಯವನ್ನ ಒಂದು ಸೂರಿನಲ್ಲಿ ನೀಡುತ್ತಾರೆ. ಕೆಲವೊಂದು ಮೆಗಾ ಮಾಲ್ ಗಳು ಸಣ್ಣ-ಪುಟ್ಟ ಊರುಗಳಷ್ಟು ದೊಡ್ಡವಾಗಿದ್ದವು ಎಂದರೆ ಅವೆಷ್ಟು ದೊಡ್ಡವು ಎನ್ನುವ ಕಲ್ಪನೆ ನಿಮ್ಮದಾಗಬಹುದು. ಹೀಗೆ ಕೇವಲ ಮನರಂಜನೆಗೆ ಎಂದು ಬಂದವರಲ್ಲಿ ಕೂಡ ಐವತ್ತು ಭಾಗ ಜನ ಖರೀದಿಯಲ್ಲಿ ತೊಡಗುತ್ತಾರೆ ಎನ್ನುವುದನ್ನ ಮನಶಾಸ್ತ್ರಜ್ಞರು ಕಂಡು ಹಿಡಿಯುತ್ತಾರೆ. ಕೇಳುವುದಿನ್ನೇನು ಅಮೇರಿಕಾದಲ್ಲಿ ಮೆಗಾ ಮಾಲ್ಗಳ ಭರಾಟೆ ಶುರುವಾಗುತ್ತದೆ.

ಮಾಲ್ಗಳ ಕುಸಿತ:

ಮೊದಲ ಸಾಲುಗಳಲ್ಲಿ ಹೇಳಿದಂತೆ ಪ್ರತಿಯೊಂದು ವಿಷಯ ಕೂಡ ತನ್ನದೇ ಆದ ಎಕ್ಸ್ಪೈರಿ ಡೇಟ್ ಹೊಂದಿರುತ್ತದೆ. 1956 ರಿಂದ ಮೆರೆದ ಮಾಲ್ ಗಳು 2000 ಇಸವಿಯ ವೇಳೆಗೆ ತನ್ನ ಹೊಳಪನ್ನ ಕಳೆದುಕೊಳ್ಳುತ್ತವೆ. ಇದಕ್ಕೆ ಪ್ರಮುಖ ಕಾರಣಗಳು ಹೀಗಿವೆ :

  1. ಅಗತ್ಯಕ್ಕಿಂತ ಹೆಚ್ಚಿನ ಮಾಲ್ಗಳನ್ನ ತೆರೆದದ್ದು.
  2. ಅಂತರವಿಲ್ಲದೆ ಒಂದರ ಪಕ್ಕ ಒಂದು ಮಾಲ್ ತೆಗೆಯಲು ಅನುಮತಿ ನೀಡಿದ್ದು.
  3. ಪ್ರಮುಖ ಅಥವಾ ಆಧಾರ ಅಂಗಡಿಗಳು ಹಳೆ ಮಾಲ್ ಬಿಟ್ಟು ಹೊಸ ಮಾಲ್ ಕಡೆಗೆ ಮುಖ ಮಾಡಿದ್ದು.
  4. 2000 ಇಸವಿಯಿಂದ ಬದಲಾದ ಗ್ರಾಹಕನ ಮನಸ್ಥಿತಿಯನ್ನ ಅರಿಯಲು ವಿಫಲವಾದದ್ದು.

2005 ರಿಂದ ಶುರುವಾದ ಕುಸಿತ ನಿರಂತರವಾಗಿ ಸಾಗುತ್ತಿದೆ. ಬಹಳಷ್ಟು ಪ್ರಸಿದ್ಧ ಚೈನ್ ಸ್ಟೋರ್ ಗಳು ನಿತ್ಯವೂ ತಮ್ಮ ಅಂಗಡಿಯನ್ನ ಮುಚ್ಚುವ ಕಾರ್ಯದಲ್ಲಿ ತೊಡಗಿವೆ. ಒಂದು ಅಂಕಿ-ಅಂಶದ ಪ್ರಕಾರ 2022ರ ವೇಳೆಗೆ ಅಮೆರಿಕಾದ 25 ಪ್ರತಿಶತ ಮಾಲ್ ಗಳು ಮುಚ್ಚಲ್ಪಡುತ್ತವೆ. ಅಮೆರಿಕಾದ ಪ್ರಸಿದ್ಧ ಮಾಲ್ ಆಫ್ ಅಮೇರಿಕಾ ತನ್ನ ಬಿಲಿಯನ್ ಸಾಲವನ್ನ ಮರು ಪಾವತಿ ಮಾಡಲಾಗದೆ 2020ರಲ್ಲಿ ಕುಸಿದಿದೆ, ನೂರಾರು ನೌಕರರನ್ನ ಮನೆಗೆ ಕಳಿಸಿದೆ.

ಭಾರತದ ಕಥೆಯೇನು?

ಭಾರತದಲ್ಲಿ ಪ್ರಥಮ ಮಾಲ್ ಶುರುವಾದದ್ದು ಅಂದಿನ ಮದ್ರಾಸ್, ಇಂದಿನ ಚನ್ನೈ ನಲ್ಲಿ 1985ರಲ್ಲಿ. ಅಮೇರಿಕಾದಲ್ಲಿ ಮಾಲ್ ಸಂಸ್ಕೃತಿ ಉತ್ತುಂಗದಲ್ಲಿದ್ದಾಗ ಭಾರತ ತನ್ನ ಮೊದಲನೆಯ ಮಾಲ್ ಪಡೆಯುತ್ತದೆ. ಗಮನಿಸಿ ಶುರು ಅಮೇರಿಕಾ ದೇಶಕ್ಕಿಂತ 3೦ ವರ್ಷ ನಿಧಾನವಾಗಿ ಆಗುತ್ತದೆ. ಆದರೆ ಅಂತ್ಯ ಮಾತ್ರ ಒಂದೇ ವೇಳೆಯಲ್ಲಿ ಆಗುತ್ತಿದೆ. ಹಾಗೆ ನೋಡಲು ಹೋದರೆ ಭಾರತೀಯರು ಪೂರ್ಣವಾಗಿ ಮಾಲ್ ಸಂಸ್ಕೃತಿಯನ್ನ ಅನುಭವಿಸಲೇ ಇಲ್ಲ ಎಂದು ಧಾರಾಳವಾಗಿ ಹೇಳಬಹುದು. ಕೋರಮಂಗಲ ಬಳಿಯಿರುವ ಫೋರಂ ಮಾಲ್ ಬೆಂಗಳೂರಿನ ಪ್ರಥಮ ಮಾಲ್. ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಮಾಲ್ ಗಳ ಸಂಖ್ಯೆ 25 ದಾಟುತ್ತದೆ. ಸಣ್ಣ ಪುಟ್ಟ ಶಾಪಿಂಗ್ ಮಾಲ್ ಗಳನ್ನ ಲೆಕ್ಕ ಹಾಕಿದರೆ ಈ ಸಂಖ್ಯೆ ಐವತ್ತನ್ನ ಮೀರುತ್ತದೆ. ದೆಹಲಿ ನೂರಕ್ಕೂ ಹೆಚ್ಚು ಮಾಲ್ ಗಳನ್ನ ಹೊಂದಿ ಪ್ರಥಮ ಸ್ಥಾನದಲ್ಲಿದೆ.

ಭಾರತೀಯರು ಮೊದಲಿನಿಂದಲೂ ಉಳಿತಾಯ ಪ್ರಿಯರು. ಒಂದು ವಸ್ತು ಅವರ ಮನೆಯ ಮುಂದಿನ ಅಂಗಡಿಯಲ್ಲಿ ನೂರು ರುಪಾಯಿಗೆ ಸಿಕ್ಕಿದ್ದು, ಮನೆಯಿಂದ ಚೂರು ದೂರದಲ್ಲಿರುವ ಮಾಲ್ ನಲ್ಲಿ ಐನೂರು ಅಂದರೆ ಅವನೇಕೆ ಮಾಲ್ ನಲ್ಲಿ ಕೊಳ್ಳುತ್ತಾನೆ? ಹೀಗಾಗಿ ಭಾರತದಲ್ಲಿ ಮಾಲ್ ಗಳ ಜೀವಿತಾವಧಿ, ಯಶಸ್ಸಿನ ಅವಧಿ ಬಹಳ ಕಡಿಮೆ ಎಂದು ನಿಸ್ಸಂಕೋಚವಾಗಿ ಹೇಳಬಹುದು. ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಮಾಲ್ ಗಳು ಮಾತ್ರ ಒಂದಷ್ಟು ಪ್ರಸಿದ್ಧಿ, ಯಶಸ್ಸು ಕಂಡಿವೆ. ಉಳಿದಂತೆ ಬಹುತೇಕ ಮಾಲ್ ಗಳು ಖಾಲಿ ಬಿದ್ದಿವೆ.

ಕೊರೋನಾ ಕಾರಣವೇ? ಮಾಲ್ಗಳ ಮುಂದಿನ ಭವಿಷ್ಯವೇನು?

ಮಾಲ್ ಗಳ ಕುಸಿತಕ್ಕೆ ಕೊರೋನಾ ಒಂದೇ ಕಾರಣವಲ್ಲ. ಕೊರೋನಾ ಕೂಡ ಒಂದು ಕಾರಣ. ಮಾಲ್ ಗಳಲ್ಲಿ, ಬಟ್ಟೆ ಅಂಗಡಿಯಲ್ಲಿ ವಾತಾವರಣದ ಕಾರಣ ಬಟ್ಟೆಗೆಳು ಮುಗ್ಗು ಹಿಡಿದಿವೆ. ಸಿನಿಮಾ ಹಾಲ್ ಗಳಲ್ಲಿ ಕೂಡ ವಿಚಿತ್ರ ರೀತಿಯ ವಾಸನೆ ಆವರಿಸಿಕೊಂಡಿದೆ. ಯಾವುದೇ ಅಂಗಡಿಯನ್ನ ದೀರ್ಘ ಕಾಲ ಮುಚ್ಚಿದರೆ ಅಲ್ಲಿನ ವಾತಾವರಣ ಬದಲಾಗುತ್ತದೆ. ಹೀಗಾಗಿ ಭಾರತದಲ್ಲಿ ಮಾಲ್ ಗಳು ಮತ್ತೆ ಮುಂಚೂಣಿಗೆ ಬರಲು ಕಷ್ಟಸಾಧ್ಯ. ಪಾಶ್ಚಾತ್ಯ ದೇಶಗಳಲ್ಲಿ ಕೂಡ ಹೊಸ ರೀತಿಯ ಮಾರುಕಟ್ಟೆಗೆ ಗ್ರಾಹಕ ಹೊಂದಿಕೊಂಡಿದ್ದಾನೆ. ಮನೆಯಲ್ಲಿ ಕುಳಿತು ಸಿನಿಮಾ ವೀಕ್ಷಿಸುವ, ಮನೆಯಲ್ಲಿ ಕುಳಿತು ತನಗೆ ಬೇಕಾದ ತಿಂಡಿ-ತೀರ್ಥವನ್ನ ತರಿಸಿಕೊಳ್ಳುವ ಹೊಸ ಸೌಲಭ್ಯ ಅವನಿಗೆ ಬಹಳ ಇಷ್ಟವಾಗಿದೆ. ಟ್ರಾಫಿಕ್ ನಲ್ಲಿ ಡ್ರೈವ್ ಮಾಡುತ್ತಾ ಸಮಯ ವ್ಯಯಿಸುವುದರ ಬದಲು ಮನೆಯಲ್ಲಿ ಕುಳಿತು ಎಲ್ಲವನ್ನೂ ಮಾಡುವ ಅವಕಾಶ ಅವನಿಗೆ ಖುಷಿ ನೀಡಿದೆ. ಕೊರೋನಾ ವೈರಸ್ ಮನಷ್ಯನ ಜಡತ್ವಕ್ಕೆ ಹೊಸ ಭಾಷ್ಯ ಬರೆಯಲು ಸಿದ್ಧವಾಗಿದೆ.!


 


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com
 

Stay up to date on all the latest ಅಂಕಣಗಳು news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp