ಭಾರತದಲ್ಲಿ ರೈತರ ಪ್ರತಿಭಟನೆಗೂ ಕೆನಡಾ ಮತ್ತು ಇಂಗ್ಲೆಂಡಿಗೂ ಏನು ಸಂಬಂಧ?

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಪ್ರತಿಭಟನಾನಿರತ ರೈತರು
ಪ್ರತಿಭಟನಾನಿರತ ರೈತರು

ಜಗತ್ತು ಇವತ್ತು ಯಾವ ಮಟ್ಟಿಗೆ ಬದಲಾಗಿದೆ ಎನ್ನುವುದಕ್ಕೆ  ಭಾರತದಲ್ಲಿ ರೈತರ ಚಳುವಳಿಗೆ ದೂರದ ಕೆನಡಾ ಮತ್ತು ಇಂಗ್ಲೆಂಡ್ ದೇಶಗಳು ನೀಡುತ್ತಿರುವ ಬೆಂಬಲ ಸಾಕ್ಷಿಯಾಗಿದೆ. ಇಲ್ಲಿ ನಡೆಯುವ ಕೆಲಸಗಳಿಗೆ ಅಲ್ಲಿ ಕುಳಿತವರು ನೀಲನಕ್ಷೆ ತಯಾರಿಸುತ್ತಾರೆ, ಅದನ್ನ ಕಾರ್ಯಗತಗೊಳಿಸಲು ಬೇಕಾಗುವ ಹಣದ ವ್ಯವಸ್ಥೆಯನ್ನ ಕೂಡ ಅವರು ಮಾಡುತ್ತಾರೆ. ನೀವು ಭಾರತದ ಚರಿತ್ರೆಯನ್ನ ತೆಗೆದು ನೋಡಿ, ಯಾವಾಗ ಅನ್ಯ ದೇಶೀಯರು ನಮ್ಮ ಮೇಲೆ ದಂಡೆತ್ತಿ ಬಂದಿದ್ದಾರೆ, ಅವರಿಗೆ ಒಳಗಿನ, ನಮ್ಮ ಜನರೇ ಸಹಾಯ ಹಸ್ತ ಚಾಚಿದ್ದಾರೆ. ನಮ್ಮಲಿರುವ ಹುಳುಕುಗಳನ್ನ, ನೂನ್ಯತೆಯನ್ನ ಶತ್ರುವಿನ ಮುಂದೆ ಹರಡಿ ಕುಳಿತ್ತಿದ್ದಾರೆ. ಹೀಗಾಗಿ ಶತ್ರುಗಳಿಗೆ ಭಾರತದ ಮೇಲೆ ಆಕ್ರಮಣ ಮಾಡಲು ಮತ್ತು ಅದರ ಮೇಲೆ ಪ್ರಭುತ್ವ ಸಾಧಿಸಲು ಸುಲಭವಾಯ್ತು. ಅಂದಿಗೂ-ಇಂದಿಗೂ ಹೀಗೆ ಬೇರೆ ದೇಶದ ಮೇಲೆ ಪ್ರಭುತ್ವ ಸಾಧಿಸುವ ಉದ್ದೇಶ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ಎನ್ನುವುದು ವೇದ್ಯ.

ಒಳಗಿನ ವ್ಯಕ್ತಿ ಆಮಿಷಕ್ಕೆ ಒಳಗಾಗಿ ಹೊರಗಿನ ಶಕ್ತಿಯೊಂದಿಗೆ ಕೈ ಜೋಡಿಸುವುದು ಕೂಡ ಭಾರತದ ಮಟ್ಟಿಗೆ ಹಳೆಯ ವಿಷಯ. ಚರಿತ್ರೆಯಿಂದ ನಾವು ಕಲಿಯಲೇ ಇಲ್ಲ ಎಂದು ಧಾರಾಳವಾಗಿ ಹೇಳಬಹುದು. ಇದೀಗ ಇಂತಹ ಇನ್ನೊಂದು ಘಟನೆಗೆ ನಾವು ಸಾಕ್ಷಿಯಾಗುತ್ತಲಿದ್ದೇವೆ. ಭಾರತದಲ್ಲಿ ಕೃಷಿ ನೀತಿಯಲ್ಲಿ ಬದಲಾವಣೆ ತಂದಿರುವುದು ಒಂದಷ್ಟು ಜನ ರೈತರಿಗೆ ಸರಿ ಕಂಡಿಲ್ಲ. ಇಷ್ಟಕ್ಕೂ ಹೊಸ ನೀತಿಯಲ್ಲಿ ರೈತನಿಗೆ ತನ್ನ ಬೆಳೆಯನ್ನ ಮತ್ತಷ್ಟು ಮುಕ್ತವಾಗಿ ಮಾರಬಹುದಾದ ಒಂದು ಅವಕಾಶವನ್ನ ನೀಡಲಾಗಿದೆ. ಕೃಷಿ, ಜಗತ್ತಿನ ಬೇರೆ ಯಾವುದೇ ಕಾರ್ಯಕ್ಷೇತ್ರದಂತೆ ಬೆಳೆದು ನಿಲ್ಲುವ ಸಾಧ್ಯತೆಗಳನ್ನ ಈ ಮೂಲಕ ನೀಡಲಾಗಿದೆ. ವಸ್ತುಸ್ಥಿತಿ ಹೀಗಿದ್ದಾಗ ರೈತರು ಮತ್ತೇಕೆ ಇದನ್ನ ವಿರೋಧಿಸುತ್ತಿದ್ದಾರೆ? ಎನ್ನುವುದು ಎಲ್ಲರಲ್ಲೂ ಮೂಡುವ ಪ್ರಶ್ನೆ. ಗಮನಿಸಿ ಇಲ್ಲಿ ರೈತರಿಗೆ ಕನಿಷ್ಟ ಬೆಂಬಲ ಬೆಲೆಯನ್ನ ಸರಕಾರ ನಿಗದಿಪಡಿಸಿಲ್ಲ, ಹೀಗಾಗಿ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಚಿಕ್ಕ ರೈತರನ್ನ ತಮ್ಮಿಚ್ಚೆಗೆ ತಕ್ಕಂತೆ ಕುಣಿಸುವ ಮತ್ತು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಸಣ್ಣ ಪುಟ್ಟ ರೈತರು ಎಷ್ಟೇ ಕಷ್ಟಪಟ್ಟರೂ ದೊಡ್ಡ ಕಾರ್ಪೊರೇಟ್ ಮನೆಗಳ ಮುಂದೆ ಹೊಡೆದಾಡಲು ಸಾಧ್ಯವಿಲ್ಲ ಎನ್ನುವುದು ಈ ನೀತಿಯನ್ನ ವಿರೋಧಿಸುತ್ತಿರುವವರು ಹೇಳುತ್ತಿರುವ ಮಾತು. ಇದನ್ನ ಪೂರ್ಣವಾಗಿ ಇಲ್ಲವೆನ್ನಲಾಗುವುದಿಲ್ಲ. ಆದರೆ ಇದನ್ನ ಹೀಗೆ ಎಂದು ಎಂದು ವರ್ಗಿಕರಿಸುವುದಕ್ಕೆ ಮುಂಚೆ ಇವತ್ತಿನ ಸ್ಥಿತಿ ಏನಾಗಿದೆ? ಎನ್ನುವುದರ ಅವಲೋಕನ ಕೂಡ ಮಾಡಬೇಕಾಗುತ್ತದೆ.

ಗಮನಿಸಿ ಇಂದು ಕೃಷಿ ನೀತಿ ಬದಲಾಗುವುದರಿಂದ ಸಣ್ಣ ಮತ್ತು ಅತಿ ಸಣ್ಣ ಕೃಷಿಕನಿಗೆ ಯಾವುದೇ ಲಾಭವಿಲ್ಲ, ದೊಡ್ಡ ಮತ್ತು ಅತಿ ದೊಡ್ಡ ಕೃಷಿಕರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. ಈ ಕೃಷಿ ನೀತಿ ಬದಲಾಗದೆ ಇರುವುದರಿಂದ ಸಣ್ಣ ಕೃಷಿಕರಿಗೆ ಏನಾದರೂ ಪ್ರಯೋಜನವಾಗುತ್ತಿತ್ತಾ? ಎನ್ನುವ ಪ್ರಶ್ನೆಗೆ ಉತ್ತರ ಕೂಡ ಇಲ್ಲ ಎನ್ನುವುದಾಗಿದೆ. ಹೀಗಾಗಿ ಇಂದು ನಿಜವಾದ ರೈತ ಬೀದಿಗೆ ಇಳಿಯುತ್ತಿಲ್ಲ. ಏಕೆಂದರೆ ಅವನಿಗೆ ಚೆನ್ನಾಗಿ ಗೊತ್ತಿದೆ ರಾಜ್ಯಭಾರ ಯಾರೇ ಮಾಡಿದರೂ ರಾಗಿಕಲ್ಲು ಬೀಸುವುದು ಮಾತ್ರ ತಪ್ಪವುದಿಲ್ಲವೆಂದು.

ಹೊಸ ನಿಯಮದ ಪ್ರಕಾರ ಏನಾಗುತ್ತದೆ ಎನ್ನುವುದಕ್ಕೆ  ಒಂದು ಸಣ್ಣ ಉದಾಹರಣೆ ನೋಡೋಣ, ರಾಮಣ್ಣ ತನ್ನ 3 ಎಕರೆಯಲ್ಲಿ ತರಕಾರಿ ಬೆಳೆಯಬೇಕು ಎಂದು ನಿಶ್ಚಯಿಸುತ್ತಾನೆ ಎಂದುಕೊಳ್ಳಿ, ರಿಲಯನ್ಸ್ ಫ್ರೆಶ್ ನವರು ಇವರ ಬಳಿ ಬಂದು ಮುಂದಿನ ಒಂದು ವರ್ಷ ಬೆಳೆಯುವ ಎಲ್ಲಾ ತರಕಾರಿಗಳನ್ನ ಕೊಳ್ಳುವ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದುಕೊಳ್ಳಿ. ಇಲ್ಲಿ ಬೆಲೆಯನ್ನ ರೈತ ರಾಮಣ್ಣ ಒಪ್ಪಿಕೊಂಡ ಮೇಲೆ ಮಾತ್ರ ಒಪ್ಪಂದವಾಗಿದೆ. ವಸ್ತುಸ್ಥಿತಿ ಹೀಗಿದ್ದೂ ರಾಮಣ್ಣ ತನ್ನ ತರಕಾರಿಯನ್ನ ಕೊಡದೆ ಇದ್ದರೆ ರಿಲಯನ್ಸ್ ಫ್ರೆಶ್ ನವರು ಆತನ ತೋಟದ ಒಳಗೆ ನುಗ್ಗಲು ಸಾಧ್ಯವಿಲ್ಲ. ಆತ ತನ್ನ ತೋಟದದಿಂದ ಪದಾರ್ಥವನ್ನ ಹೊರಗಡೆ ತಂದು ಬೇರೆಡೆಗೆ ಮಾರಾಟ ಮಾಡಲು ಪ್ರಯತ್ನಿಸಿದಾಗ ಮಾತ್ರ  ರಿಲಯನ್ಸ್ ತಡೆ ತರಬಹುದು. ಅಂದರೆ ಸಣ್ಣ ರೈತನ ಹಿತಾಸಕ್ತಿಯನ್ನ ಬಿಟ್ಟುಕೊಟ್ಟಂತೆ ಆಗುವುದಿಲ್ಲ. ಆದರೆ ಪ್ರಾಕ್ಟಿಕಲ್ ಆಗಿ ಏನಾಗುತ್ತದೆ? ರಾಮಣ್ಣ ನಂತಹ ಮೂರು ಎಕರೆ ಭೂಮಿ ಹೊಂದಿರುವ ರೈತ ದೊಡ್ಡ ಕಾರ್ಪೊರೇಟ್ ಸಂಸ್ಥೆಯ ವಿರುದ್ಧ ನಿಲ್ಲಲು ಸಾಧ್ಯವೇ? ಎನ್ನುವುದು ಕೂಗು.

ಹೌದು ವಿರೋಧ ವ್ಯಕ್ತಪಡಿಸುವ ಮಾತು ಸರಿಯಿದೆ ಎನ್ನೋಣ. ಈ ನೀತಿ ಬದಲಾಗದೆ ಇದ್ದಾಗ ಸಣ್ಣ ರೈತನಿಗೆ ಏನಾಗಿದೆ? ಅವನ ಜೀವನದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೃಷಿ  ಮಾರುಕಟ್ಟೆಗಳು ದಲ್ಲಾಳಿಗಳ ಗೂಡಾಗಿದೆ. ದೊಡ್ಡ ರೈತರು ಹೇಗೋ ತಮಗೆ ಬೇಕಾದ ಬೆಲೆಯನ್ನ ಗಳಿಸಿಕೊಳ್ಳುತ್ತಾರೆ. ಸಣ್ಣ ಹಿಡುವಳಿದಾರನ ಗೋಳು ಕೇಳುವರಾರು?

ಭಾರತದ ಜನಸಂಖ್ಯೆಯ 50 ರಿಂದ 6೦ ಪ್ರತಿಶತ ಜನ ತಮ್ಮ ದೈನಂದಿನ ಜೀವನಕ್ಕೆ ಕೃಷಿಯನ್ನ ಅವಲಂಬಿಸಿದ್ದಾರೆ. ಇದರಲ್ಲಿ ಸಣ್ಣ ರೈತರ ಸಂಖ್ಯೆ ಹೆಚ್ಚು ಎಂದು ಹೇಳಬೇಕಾಗಿಲ್ಲ ಅಲ್ಲವೇ? ಇವರಾರೂ ಕೃಷಿ ನೀತಿಯನ್ನ ವಿರೋಧಿಸಿ ಬೀದಿಗೆ ಇಳಿಯುತ್ತಿಲ್ಲ. ಕೃಷಿ ನೀತಿಯ ವಿರೋಧ ರಾಜಕೀಯವಾಗಿ ಬದಲಾಗಿ ಹೋಗಿದೆ. ಇದು ಎಷ್ಟರ ಮಟ್ಟಿಗೆ ರಾಜಕೀಯ ಬಣ್ಣವನ್ನ ಪಡೆದುಕೊಂಡಿದೆ ಎಂದರೆ ಕೆನಡಾ ಮತ್ತು ಇಂಗ್ಲೆಂಡ್ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಾವು ರೈತರ ಪರ ಎನ್ನುವ ಮಾತುಗಳನ್ನ ಆಡುತ್ತವೆ. ಇದರ ಹಿಂದಿನ ರಹಸ್ಯವೇನು? ಎನ್ನುವುದನ್ನ ಸ್ವಲ್ಪ ತಿಳಿದುಕೊಳ್ಳೋಣ.

ಕೆನಡಾ ದೇಶದಲ್ಲಿ ಸಿಖ್ಖರ ಸಂಖ್ಯೆ ಆ ದೇಶದ ಒಟ್ಟು ಜನಸಂಖ್ಯೆಯ 2 ಪ್ರತಿಶತದಷ್ಟಿದೆ. ಸಂಖ್ಯೆಯ ದೃಷ್ಟಿಯಿಂದ ಇದು ಅತ್ಯಲ್ಪ ಎನ್ನಿಸುತ್ತದೆ. ಈ ದೇಶದಲ್ಲಿ ಸಿಖ್ಖರ ಲಾಭಿ ಎಷ್ಟ ಮಟ್ಟಿಗಿದೆ ಎಂದರೆ ಇಂಗ್ಲಿಷ್ ಮತ್ತು ಫ್ರೆಂಚ್ ನಂತರ ಪಂಜಾಬಿ ಮೂರನೇ ಸ್ಥಾನವನ್ನ ಪಡೆದಿದೆ. ಈ ದೇಶಕ್ಕೆ ಬಂದಿರುವ ಇತರೆ ವಲಸಿಗರನ್ನ ಹಿಂದೆ ಹಾಕಿ ಪಂಜಾಬಿ ಲಾಬಿ ಬಹಳ ಶಕ್ತಿಶಾಲಿಯಾಗಿ ಬೆಳೆಯಲು ಪ್ರಮುಖ ಕಾರಣ ಕೆನಡಾ ದೇಶದ ಚುನಾವಣೆ ನೀತಿ. ಯಾವುದೇ ಪಕ್ಷದಿಂದ ನಾಮಿನೇಟ್ ಆಗಬೇಕಿದ್ದರೆ ಅಭ್ಯರ್ಥಿಯಾದವನು ಕನಿಷ್ಟ ಸಂಖ್ಯೆಯ ಸಹಿಯನ್ನ ಪಡೆದು ಬರಬೇಕು. ಸಹಜವಾಗೇ ವಲಸಿ ಪಂಜಾಬಿಗರಲ್ಲಿ ಇರುವ ಒಗ್ಗಟ್ಟು ಅವರನ್ನ ರಾಜಕೀಯ ಕ್ಷೇತ್ರದಲ್ಲಿ ಪ್ರಬಲರನ್ನಾಗಿಸಿದೆ. ಟೊರೊಂಟೊ ನಗರದಿಂದ 1೦೦ ಕಿಲೋಮೀಟರ್ ದೂರದಲ್ಲಿರುವ ವುಡ್ಸ್ ಸ್ಟಾಕ್ ಎನ್ನುವ ನಗರದಲ್ಲಿ 8೦ ಪ್ರತಿಶತ ಸಿಖ್ಖರು ವಾಸವಿದ್ದಾರೆ ಎಂದರೆ ಅವರ ಪ್ರಾಬಲ್ಯದ ಅರಿವಾದೀತು. ಹೀಗಾಗಿ ಕೆನಡಾ ದೇಶದ ಪಾರ್ಲಿಮೆಂಟ್ ನಲ್ಲಿ ಒಟ್ಟು 18 ಸಿಖ್ ಸದಸ್ಯರು ಇದ್ದಾರೆ. ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಗೆ ಪೂರ್ಣ ಪ್ರಮಾಣದ ಬಹುಮತ ಸಿಗಲಿಲ್ಲ. ಆಗ ನ್ಯೂ ಡೆಮಾಕ್ರೆಟಿಕ್ ಪಾರ್ಟಿ ನಾಯಕ ಜಮೀತ್ ಸಿಂಗ್  ತಮ್ಮ 18 ಎಂಪಿಗಳ ಬೆಂಬಲವನ್ನ ಜಸ್ಟಿನ್ ಅವರಿಗೆ ನೀಡಿದ್ದಾರೆ. ಆ ಮೂಲಕ 1979 ರಲ್ಲಿ ಒಂಟಾರಿಯದಲ್ಲಿ ಪಂಜಾಬಿ ವಲಸಿಗ ಕುಟುಂಬದಲ್ಲಿ ಜನಿಸಿದ ಜಮೀತ್ ಕಿಂಗ್ ಮೇಕರ್ ಎನ್ನುವ ಪಟ್ಟವನ್ನ ಪಡೆದುಕೊಂಡಿದ್ದಾರೆ.

ಹೀಗೆ 4೦/5೦ ವರ್ಷದ ಹಿಂದೆಯೇ ವಲಸೆ ಹೋದವರಲ್ಲಿ ಬಹುತೇಕರು ಇಂದು ಬಹಳಷ್ಟು ಸ್ಥಿತಿವಂತರಾಗಿದ್ದರೆ. ಕೆನಡಾದಂತಹ ದೇಶದಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿರುವ ಇಂತಹವರಲ್ಲಿ ಸಹಜವಾಗೇ ತಮ್ಮ ನೆಲದಲ್ಲಿ ಕೂಡ ಅಧಿಕಾರ ಹಿಡಿಯಬೇಕು ಎನ್ನುವ ಬಯಕೆ ಸಹಜ. ಭಾರತದಲ್ಲಿ ಅದು ಸುಲಭ ಸಾಧ್ಯವಲ್ಲ. ಆದರೆ ಪಂಜಾಬ್ ಅನ್ನು ಭಾರತದಿಂದ ಬೇರ್ಪಡಿಸಿ ಬಿಟ್ಟರೆ? ನಮ್ಮದೇ ಖಲೀಸ್ತಾನ್ ನಿರ್ಮಿಸಿಕೊಂಡರೆ? ಕೆನಡಾ ದೇಶದ ಪ್ರಧಾನಿ ಸಿಖ್ ಲಾಬಿಯ ಎದುರು ಮಾತನಾಡುವ ಸ್ಥಿತಿಯಲಿಲ್ಲ. ಅಧಿಕಾರ ಉಳಿಸಿಕೊಳ್ಳಬೇಕೆಂದರೆ ಅವರು ಹೇಳಿದಂತೆ ನುಡಿಯಬೇಕು, ನಡೆಯಬೇಕು.

ಇನ್ನು ಇಂಗ್ಲೆಂಡ್ ದೇಶದ ದುರ್ದೆಸೆಯನ್ನ ವಿವರಿಸಲು ಸಾಧ್ಯವಿಲ್ಲ. ಇಲ್ಲಿನ ಹಲವಾರು ನಗರಗಳಲ್ಲಿ ಸ್ಥಳೀಯ ಬ್ರಿಟಿಷರಿಗಿಂತ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಪಾಕಿಸ್ತಾನಿ ಮುಸ್ಲಿಮರು ಮತ್ತು ಪಂಜಾಬಿಗಳ ಸಂಖ್ಯೆ ಬಹಳಷ್ಟಿದೆ. ಇದರಲ್ಲಿ ಇವರನ್ನ ಮುಖ್ಯವಾಗಿ ಬೆಸೆಯುವ ಒಂದಂಶ ಭಾಷೆ. ಬ್ರಿಟನ್ ಮತ್ತು ಯೂರೋಪಿನಲ್ಲಿರುವ ಬಹುತೇಕ ಪಾಕಿಸ್ತಾನಿಗಳ ಮಾತೃ ಭಾಷೆ ಪಂಜಾಬಿ. ಬ್ರಿಟಿಷ್ ಸಿಖ್ ಎಂಪಿ ಟಾನ್ ದೇಸಿ ಎನ್ನುವವರು ಭಾರತದಲ್ಲಿ ಅದರಲ್ಲೂ ಪಂಜಾಬಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವನ್ನ ಘೋಷಿಸಿ ಇತರೆ 35 ಜನ ಎಂಪಿಗಳ ಸಹಿಯನ್ನ ಪಡೆದು ಅದನ್ನ ಪಾರ್ಲಿಮೆಂಟಿನಲ್ಲಿ ಮಂಡಿಸಿದ್ದಾರೆ.

ಕೆನಡಾ ಇರಬಹುದು ಅಥವಾ ಇಂಗ್ಲೆಂಡ್, ಈ ದೇಶಗಳಲ್ಲಿ ವ್ಯಕ್ತವಾಗಿರುವ ಬೆಂಬಲ ಆ ದೇಶದ ಎಂಪಿಗಳ ಐದು ಪ್ರತಿಶತಕ್ಕೂ ಕಡಿಮೆ. ಅಲ್ಲದೆ WTO (ವರ್ಲ್ಡ್ ಟ್ರೇಡ್ ಆರ್ಗನೈಸಷನ್) ನಲ್ಲಿ ಕೃಷಿಯ ಮೇಲಿರುವ ಸಬ್ಸಿಡಿಗಳನ್ನ ತೆಗೆದು ಹಾಕಬೇಕೇನ್ನುವ ನಿಯಮಕ್ಕೆ ಇವುಗಳು ತಲೆದೂಗಿವೆ, ಭಾರತ ಕೂಡ ಕೃಷಿಯನ್ನ ಇತರೆ ಕಾರ್ಯ ಕ್ಷೇತ್ರದಂತೆ ಪರಿಗಣಿಸಲು ಸಿದ್ಧ ಎನ್ನುವ ಮಾತನ್ನ ಕಾಮರ್ಸ್ ಮಿನಿಸ್ಟರ್ ಆಡಿದ್ದಾರೆ. ಕೆನಡಾ ದೇಶದ್ದು ಅಕ್ಕಿಯ ಮೇಲೆ ಪ್ರೀತಿ ನೆಂಟರ ಮೇಲೂ ಇಷ್ಟ ಎನ್ನುವ ಸ್ಥಿತಿಯಾಗಿದೆ. ಕೆನಡಾ ದೇಶದ ಈ ಇಬ್ಬಗೆ ತನವನ್ನ ಭಾರತ ಎತ್ತಿ ತೋರಿಸುವಲ್ಲಿ ಸಫಲವಾಗಿದೆ.

ಉಳಿದಂತೆ ನಮ್ಮ ದೇಶದಲ್ಲಿ ಸಂಚು ಮಾಡುವ, ಸಂಚುಕೋರರಿಗೆ ಸಹಾಯ ಮಾಡುವ ಒಳಗಿನ ಶಕ್ತಿಗಳು ಅಧಿಕಾರ ಮತ್ತು ಹಣ ಎರಡನ್ನೂ ಕಳೆದುಕೊಂಡಿವೆ. ಅವುಗಳಿಗೆ ತಮ್ಮ ಇರುವಿಕೆಯನ್ನ ಮತ್ತೆ ಗುರುತಿಸಿಕೊಳ್ಳುವ ದರ್ದು ಬಹಳವೇ ಹೆಚ್ಚಾಗಿದೆ. 2014ರಿಂದ ಇಲ್ಲಿಯವರೆಗೆ ಬಹಳಷ್ಟು ನೀತಿಗಳನ್ನ ಬದಲಾಯಿಸಲಾಗಿದೆ. ಅವೆಲ್ಲವೂ ವ್ಯವಸ್ಥೆಯ ಆಯಕಟ್ಟಿನ ಜಾಗದಲ್ಲಿ ಪೊಗದಸ್ತಾಗಿ ಕುಳಿತ್ತಿದ್ದ ಪಟ್ಟಭಧ್ರ ಹಿತಾಸಕ್ತಿಗಳಿಗೆ ತೊಂದರೆ ಉಂಟು ಮಾಡಿದೆ. ಆರೇಳು ದಶಕದಿಂದ ನೆಮ್ಮದಿಯಾಗಿ ಸಾಮ್ರಾಜ್ಯ ಕಟ್ಟಿಕೊಂಡಿದ್ದವರಿಗೆ ಆಘಾತವಾಗುವುದು ಸಹಜ. ಆಗ ಪ್ರತಿಭಟಿಸುವುದು ಕೂಡ ಅಷ್ಟೇ ಸಹಜ.

ಕೊನೆಮಾತು: ಕೇಂದ್ರ ಸರಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೆಂಬಲ ಬೆಲೆಯನ್ನ ಸೂಚಿಸುವುದು ಮತ್ತು ಸಣ್ಣ ರೈತರನ್ನ ಶೋಷಣೆ ಮಾಡದಿರುವಂತೆ ಸರಳವಾದ ಮತ್ತು ಎಲ್ಲರಿಗೂ ಅರ್ಥವಾಗುವ ರೀತಿಯ ಬದಲಾವಣೆಯನ್ನ ತರಬೇಕಿದೆ. ಹೌದು ಇವತ್ತಿನ ಪ್ರತಿಭಟನೆ ರಾಜಕೀಯ ರೂಪ ಪಡೆದುಕೊಂಡಿದೆ. ಸಮಯ ಸಿಕ್ಕಾಗ ಎಲ್ಲರೂ ಅವರ ಬೇಳೆಯನ್ನ ಬೇಯಿಸಿಕೊಳ್ಳಲು ಬಯಸುವುದು ಸಹಜ. ಇಂತಹ ವಿರೋಧಿಗಳಿಗೆ ವಿರೋಧಿಸಲು ಅವಕಾಶವನ್ನ ನೀಡದಿದ್ದರೆ? ಅವರ ಪ್ರತಿಭಟನೆ ಎರಡು ತಾಸು ಕೂಡ ನಿಲ್ಲುವುದಿಲ್ಲ. ಪೇಪರ್ ನಲ್ಲಿ ಚೆನ್ನಾಗಿ ಕಾಣುವ ಈ ನೀತಿಯನ್ನ ಅಷ್ಟೇ ಚನ್ನಾಗಿ ಕಾರ್ಯರೂಪಕ್ಕೆ ತರಬೇಕಿದೆ. ಬೆಂಬಲ ಬೆಲೆ, ಸಣ್ಣ ಹಿಡುವಳಿದಾರರ ಭದ್ರತೆ ಬಗ್ಗೆ ಒಂದೆರೆಡು ಸಾಲು ನಿಖರತೆ ನೀಡಿ ನೀತಿಯನ್ನ ತಂದರೆ ಯಾವ ಪ್ರತಿಭಟನೆಯೂ ಹೆಚ್ಚು ಕಾಲ ನಿಲ್ಲುವುದಿಲ್ಲ.
 

ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com