ನಿಮ್ಮ ಮಕ್ಕಳೂ ಪವಾಡ ಸೃಷ್ಟಿಸಬಲ್ಲರು!

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 17th December 2020 12:00 AM  |   Last Updated: 16th December 2020 11:26 PM   |  A+A-


hanaclasu

ನಿಮ್ಮ ಮಕ್ಕಳೂ ಪವಾಡ ಸೃಷ್ಟಿಸಬಲ್ಲರು!

Posted By : Srinivas Rao BV
Source : Online Desk

ನಾವು ಚಿಕ್ಕವರಿದ್ದಾಗ ಮುಕ್ಕಾಲು ಪಾಲು ಶಾಲೆಯ ಬಳಿ ಇರುತ್ತಿದ್ದ ಸಣ್ಣ ಪುಟ್ಟ ಸ್ಟೇಷನರಿ ಅಂಗಡಿಗಳಲ್ಲಿ ಒಂದು ಉಳಿಕೆಯ ಸ್ಕೀಮ್ ಇರುತ್ತಿತ್ತು. 10, 25. 50 ಮತ್ತು 100 ರೂಪಾಯಿ ಉಳಿಸುವ ಒಂದು ಸ್ಕೀಮ್ ಅದಾಗಿತ್ತು. ಐದು ಪೈಸೆ, ಹತ್ತು, ಇಪ್ಪತೈದು, ಐವತ್ತು, ಒಂದು ರೂಪಾಯಿ ಉಳಿಸಬಹುದಾಗಿತ್ತು. ಒಂದು ಸಣ್ಣ ಪೋಸ್ಟ್ ಕಾರ್ಡ್ ಗಾತ್ರದ ಕಾರ್ಡ್ ನಮಗೆ ನೀಡಲಾಗುತ್ತಿತ್ತು. ನಾವು ಹಣ ನೀಡಿದಾಗ ಹಣ ನಮೂದಿಸಿದ ಬಾಕ್ಸ್ ಮೇಲೆ ಸಣ್ಣ ಗೆರೆ ಎಳೆದು ಸಹಿ ಹಾಕುತ್ತಿದ್ದರು. ಹೀಗೆ ಉಳಿಸಿದ ಹಣದಲ್ಲಿ ಅಂದಿನ ಸಮಯದಲ್ಲಿ ಪ್ರಸಿದ್ಧವಾಗಿದ್ದ ಹೀರೋ ಪೆನ್ನು ಕೊಳ್ಳುತಿದ್ದೆವು. ಹೆಚ್ಚಿನ ಹಣದಲ್ಲಿ ಇಷ್ಟವಾದ ಕಾಮಿಕ್ ಪುಸ್ತಕಗಳನ್ನ ಕೂಡ ಕೊಳ್ಳುತ್ತಿದ್ದೆವು. ಇದನ್ನ ಮೀರಿದ ಬಯಕೆಗಳು ನಮಗಿರಲಿಲ್ಲ ಏಕೆಂದರೆ ಜಗತ್ತು ಕೂಡ ಹಾಗೆ ಇತ್ತು.

ಇವತ್ತು ಜಗತ್ತು ಬದಲಾಗಿದೆ. ಅಪ್ಪ-ಅಮ್ಮನ ಬಳಿ ಹಣವೂ ಹೇರಳವಾಗಿದೆ. ಮಕ್ಕಳಿಗೆ 'ಇಲ್ಲ' ಎಂದು ಹೇಳುವ ಪರಿಪಾಠ ಕಡಿಮೆಯಾಗುತ್ತಿದೆ. ಅವರು ಬಯಸಿದ್ದು ಅವರಿಗೆ ಕ್ಷಣದಲ್ಲಿ ಸಿಗುತ್ತಿದೆ. ಹೀಗಾಗಿ ಮಕ್ಕಳಿಗೆ ಹಣದ ಮೌಲ್ಯದ ಬಗ್ಗೆ ತಿಳಿಯುತ್ತಿಲ್ಲ. ಮಕ್ಕಳೂ ಕೂಡ ಕೇಳಿದ್ದ ಕೊಡಿಸದಿದ್ದರೆ ಧಮ್ಕಿ ಹಾಕುವ ಮಟ್ಟಕ್ಕೆ ಬದಲಾಗಿದ್ದಾರೆ. ನೀವು ಮಾಡಿದ್ದು ತಪ್ಪು ಅಥವಾ ಹೀಗೆ ಮಾಡಬಾರದು ಎಂದು ಸ್ವಲ್ಪ ಧ್ವನಿಯೇರಿಸಿ ಹೇಳಿದರೆ ಸಾಕು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಸೂಕ್ಷ್ಮತೆಯನ್ನ ಬೆಳೆಸಿಕೊಳ್ಳುತ್ತಿದ್ದಾರೆ. ಚಿಕ್ಕಂದಿನಿಂದ 'ಬೇಡ' ಎಂದು ಹೇಳುವುದು ಮಾಡಿದ್ದರೆ ಮಕ್ಕಳು ಇಷ್ಟು ಸೂಕ್ಷ್ಮವಾಗುತ್ತಿರಲಿಲ್ಲ. ಇರಲಿ

ಸೌತ್ ಅಮೇರಿಕಾದಲ್ಲಿ ಪೆರು ಎನ್ನುವ ದೇಶವಿದೆ. ಇಲ್ಲಿ ಸ್ಪ್ಯಾನಿಷ್ ಭಾಷೆಯನ್ನ ಮಾತನಾಡುತ್ತಾರೆ. ಈ ದೇಶದಲ್ಲಿ ಪ್ರತಿ ಹತ್ತು ಜನರಲ್ಲಿ 3 ರಿಂದ 4 ಜನ ಯಾವುದೇ ಬ್ಯಾಂಕಿಂಗ್ ವ್ಯವಸ್ಥೆಯನ್ನ ಬಳಸುತ್ತಿಲ್ಲ. ಇಂತಹ ದೇಶದಲ್ಲಿ 6ನೇ ಡಿಸೆಂಬರ್ 2004 ರಲ್ಲಿ ಹೋಸೆ ಅಡೋಲ್ಫೋ ಎನ್ನುವ ಬಾಲಕನ ಜನನವಾಗುತ್ತದೆ. ಇಂದಿಗೆ ಈ ಹುಡುಗ ಎಕೋಲಾಜಿಕಲ್ ಬ್ಯಾಂಕ್ ಫಾರ್ ಕಿಡ್ಸ್- ಇಂತಹ ಪ್ರಥಮ ಬ್ಯಾಂಕ್ ತೆರೆದವನು ಎನ್ನುವ ಹೆಗ್ಗಳಿಕೆ ಗಳಿಸಿದ್ದಾನೆ. 20 ಮಕ್ಕಳಿಂದ ಶುರುವಾದ ಈ ಬ್ಯಾಂಕಿನಲ್ಲಿ ಇಂದು 3೦೦೦ ಜನ ಸದಸ್ಯರಿದ್ದಾರೆ.

ಹೊಸೆಗೆ ಯೂನಿಸೆಫ್ ನೀಡುವ Child and Youth Finance International Award 2014ರಲ್ಲಿ ಲಭಿಸಿದೆ. ಜೊತೆಗೆ Children’s Climate Prize ಕೂಡ 2018ರಲ್ಲಿ ಸಿಕ್ಕಿದೆ. ಇಷ್ಟೆಲ್ಲಾ ಸಾಧನೆಯನ್ನ ಇಂದಿಗೆ 16 ರ ಹರೆಯದ ಹೋಸೆ ಮಾಡಿದ್ದಾನೆ ಅಂದ ತಕ್ಷಣ ನೀವು ಅವರ ಕುಟುಂಬ ಸದೃಢವಾಗಿರಬೇಕು, ಅಪ್ಪನಿಂದಲೋ, ಅಮ್ಮನಿಂದಲೋ ಅಥವಾ ಕುಟುಂಬದ ಇತರ ಸದಸ್ಯರ ಸಹಾಯದಿಂದ ಹೀಗಾಗಿರಬೇಕು ಎನ್ನುವ ನಿರ್ಧಾರಕ್ಕೆ ಬರುವುದಿದ್ದರೆ ಸ್ವಲ್ಪ ನಿಧಾನಿಸಿ.

ಹೋಸೆ ಅತಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವನು. ಪೆರುವಿನ ಬಹುತೇಕ ಮಕ್ಕಳಂತೆ ಬೆಳಿಗ್ಗೆ ತಿಂಡಿ ತಿನ್ನದೇ ಶಾಲೆಗೆ ಹೋಗ ಬೇಕಾದ ಪರಿಸ್ಥಿತಿ. ಬಡತನವನ್ನ ಹತ್ತಿರದಿಂದ ಕಂಡವನು ಹೋಸೆ. ತನ್ನ ಗೆಳೆಯರು ಮತ್ತು ತನ್ನ ಸ್ಥಿತಿಯನ್ನ ಒಂದಷ್ಟು ಸುಧಾರಿಸಲು ಬಾಲಕ ಹೊಸೆಗೆ ಒಂದು ಐಡಿಯಾ ಹೊಳೆಯುತ್ತದೆ. ಒಂದು ಸಣ್ಣ ಬ್ಯಾಂಕ್ ಏಕೆ ತೆಗೆಯಬಾರದು ಎನ್ನುವುದು ಆ ಐಡಿಯಾ. ತನ್ನ ಏಳನೇ ವಯಸ್ಸಿನಲ್ಲಿ ತನ್ನ ಶಾಲೆಯ ಒಂದಷ್ಟು ಗೆಳೆಯರನ್ನ ಮತ್ತು ಶಿಕ್ಷಕರನ್ನ ಇದರ ಬಗ್ಗೆ ಹೇಳಿ ಒಪ್ಪಿಗೆ ಪಡೆದು ಶುರು ಮಾಡುತ್ತಾನೆ. ಅಂದಿಗೆ ಇದೊಂದು ಪ್ರಯೋಗಾತ್ಮಕ ಕ್ರಿಯೆಯಾಗಿತ್ತು  ನಂತರ ಇದು Banco Cooperativo del Estudiante Bartselana (ಸ್ಟೂಡೆಂಟ್ ಕೋ-ಆಪರೇಟಿವ್ ಬ್ಯಾಂಕ್-ಬಾರ್ಟ್ಸೆಲೆನ) ಎನ್ನುವ ಹೆಸರಿನ ಈ ಬ್ಯಾಂಕ್ ಆಗಿ ಪರಿವರ್ತನೆಯಾಗುತ್ತದೆ. ಇದರ ಕಾರ್ಯ ವೈಖರಿ ಬಹಳ ಅಚ್ಚರಿ ಹುಟ್ಟಿಸುತ್ತದೆ.

ಸದಸ್ಯ ಮಕ್ಕಳು ಪ್ಲಾಸ್ಟಿಕ್ ಬಾಟೆಲ್ ಮತ್ತಿತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನ ತಂದು ಇಲ್ಲಿ ನೀಡುತ್ತಾರೆ. ಅದಕ್ಕೆ ಇಂತಿಷ್ಟು ಎನ್ನುವ ಹಣವನ್ನ ಆ ಸದಸ್ಯ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಇಷ್ಟು ಹಣ ಉಳಿಸಬೇಕು ಎನ್ನುವ ಗುರಿಯನ್ನ ನಿಗದಿಪಡಿಸಲಾಗುತ್ತದೆ. ಈ ಹಣವನ್ನ ಶಾಲೆಯ ಫೀಸು ಕಟ್ಟಲು ಅಥವಾ ಬೆಳಗಿನ ಉಪಹಾರ ಸೇವಿಸಲು ಮಾತ್ರ ಉಪಯೋಗಿಸಬಹುದು, ಉಳಿದಂತೆ ಈ ಹಣವನ್ನ ತೆಗೆಯಲು ಬಿಡುವುದಿಲ್ಲ. ಶಾಲೆಯ ಶುಲ್ಕ ಅಥವಾ ಪುಸ್ತಕ ಅಥವಾ ತಿಂಡಿಗೆ ಕಡಿಮೆ ಬಂದರೆ ಅದಕ್ಕೆ ಸಣ್ಣ ಪ್ರಮಾಣದ ಸಾಲವನ್ನ ಕೂಡ ನೀಡಲಾಗುತ್ತದೆ. ಅದನ್ನ ನಂತರದ ದಿನಗಳಲ್ಲಿ ತೀರಿಸಿದರೆ ಸಾಕು.

ಹೋಸೆ ತ್ಯಾಜ್ಯವಸ್ತುಗಳನ್ನ ರಿ-ಸೈಕಲ್ ಮಾಡುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾನೆ. ಹೀಗಾಗಿ ತನ್ನ ಸ್ನೇಹಿತ ಸದಸ್ಯರು ತಂದು ನೀಡುವ ಪ್ಲಾಸ್ಟಿಕ್ ಗೆ ಹಣ ನೀಡಲು ಸಾಧ್ಯವಾಗಿದೆ. ಇಂದಿಗೆ 16 ವಯಸ್ಸಿನ ಹೊಸೆಗೆ ಸದಸ್ಯರನ್ನ 20 ಸಾವಿರಕ್ಕೆ ಏರಿಸುವ ಕನಸಿದೆ. ದೇಶದ ನ್ಯಾಷನಲ್ ಬ್ಯಾಂಕ್ ನೊಂದಿಗೆ ಸಂವಹನ ನಡೆಸಿದ್ದಾನೆ. ದೇಶದ ಎಲ್ಲೆಡೆ ಇಂತಹ ಬ್ಯಾಂಕ್ ನಿರ್ಮಾಣ ಮಾಡುವ ಕನಸು ಆತನದು. ಮಕ್ಕಳು ಹಸಿದು ಶಾಲೆಗೆ ಹೋಗಬಾರದು, ಶಾಲೆ ತಪ್ಪಿಸಬಾರದು, ವಿದ್ಯಾಭ್ಯಾಸದಿಂದ ವಚಿಂತನಾಗಬಾರದು ಎನ್ನುವುದು ಉದ್ದೇಶ. ಹೊಸೆಯ ಕನಸಿನ ಈ ಬ್ಯಾಂಕ್ನಲ್ಲಿ ಹೊಸೆಗಿಂತ ವಯಸ್ಸಿನಲ್ಲಿ ದೊಡ್ಡವರು ಬರೋಬ್ಬರಿ 8 ಮಂದಿ ಕೆಲಸ ಮಾಡುತ್ತಿದ್ದಾರೆ. ಹೊಸೆಯ ಅಪ್ಪ, ಮಗನ ದೂರದೃಷ್ಟಿಯಲ್ಲಿ ಇರುವ ಅಪಾರ ಭವಿಷ್ಯವನ್ನ ಗಮನಿಸಿ, ತಾನು ಮಾಡುತ್ತಿದ್ದ ಕೆಲಸವನ್ನ ತೊರೆದು ಹೊಸೆಯ ಬ್ಯಾಂಕಿನಲ್ಲಿ ಕೆಲಸ ಮಾಡಲು ಶುರು ಮಾಡಿದ್ದಾರೆ. ಗಮನಿಸಿ ಯಶಸ್ವಿ ಅಥವಾ ಪ್ರಸಿದ್ಧ ಮಕ್ಕಳನ್ನ ಕಂಡ ತಕ್ಷಣ ನಾವು ಅವರ ಕುಟುಂಬ ಸಹಾಯ ಮಾಡಿರಬಹುದು ಎನ್ನುವ ಗುಮಾನಿಯಿಂದ ನೋಡುತ್ತೇವೆ. ಹೊಸೆಯ ವಿಷಯದಲ್ಲಿ ಇದು ತದ್ವಿರುದ್ಧವಾಗಿದೆ.

ನಮ್ಮ ಮಕ್ಕಳಿಗೆ ನಾವು ಮೊದಲು ಕೆಲವು ಮೂಲಭೂತ ವಿಷಯಗಳನ್ನ ತಿಳಿಸಿ ಹೇಳಬೇಕಾಗುತ್ತದೆ. ಸಾಮಾನ್ಯವಾಗಿ ಮಕ್ಕಳು ಅವರಿಗೇನು ತಿಳಿಯುತ್ತದೆ ಎನ್ನುವುದು ನಮ್ಮ ಅನಿಸಿಕೆ. ಆದರೆ ಅದು ತಪ್ಪು. ಹೋಸೆ ಆರು ವರ್ಷದ ಬಾಲಕನಾಗಿದ್ದಾಗ ಆತನ ತಂದೆ, ಹಣ ಮತ್ತು ಅದರ ಬವಣೆಯ ಕುರಿತು ಆತನಿಗೆ ಬಿಡಿಸಿ ಹೇಳಿದ್ದುದರ ಫಲ ಹೊಸೆಯ ಬದುಕು ಬದಲಾಗಿದೆ. ನಾವು ಯಾರೊಂದಿಗೂ ನಮ್ಮನ್ನ ನಾವು ಹೋಲಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ನಮ್ಮ ಮಕ್ಕಳು ಹೊಸೆಯಂತಾಗಬೇಕು ಅಂತೇನಿಲ್ಲ, ಆದರೆ ಬದುಕಿನಲ್ಲಿ ಹಣಕಾಸು ಕುರಿತು ನಿಖರತೆಗಳಿದ್ದರೆ ಅಷ್ಟರ ಮಟ್ಟಿಗೆ ಬದುಕು ಸಲೀಸಾಗಿ ನಡೆದುಕೊಂಡು ಹೋಗುತ್ತದೆ. ಹೀಗಾಗಿ ಎಲ್ಲಕ್ಕೂ ಮೊದಲು ನಾವು ನಮ್ಮ ಮಕ್ಕಳಿಗೆ ನಾಲ್ಕು ವಿಷಯವನ್ನ ತಿಳಿಸಬೇಕಾಗುತ್ತದೆ.

  1. ಹಣ ಎಂದರೇನು? ಎಲ್ಲಿಂದ ಬರುತ್ತದೆ?: ಸಾಮಾನ್ಯವಾಗಿ ಹಿರಿಯರು ಮಕ್ಕಳಿಗೆ ಹಣದ ಬಗ್ಗೆ ಹೇಳುವುದು ಕಡಿಮೆ. ಅವರು ಕೇಳಿದಾಗ ಅದಕ್ಕೆ ತಕ್ಕಂತೆ ಹಣ ನೀಡಿದರೆ ಅಲ್ಲಿಗೆ ತಮ್ಮ ಕರ್ತವ್ಯ ಮುಗಿಯಿತು ಎನ್ನುವ ಭಾವನೆಯನ್ನ ಹೊಂದಿದ್ದಾರೆ. ಇದು ತಪ್ಪು, ಮಕ್ಕಳಿಗೆ ಹಣ ಏಕೆ ಮುಖ್ಯ, ಅದನ್ನ ಗಳಿಸಲು ಇರುವ ಮಾರ್ಗಗಳಾವುವು? ಅದರ ಗಳಿಕೆ ಎಷ್ಟು ಕಷ್ಟ ಇತ್ಯಾದಿಗಳನ್ನ ಬಿಡಿಸಿ ಹೇಳಬೇಕು.
  2. ಉಳಿಕೆ ಎಂದರೇನು? ಏಕೆ ಉಳಿಸಬೇಕು? ಹೇಗೆ ಉಳಿಸಬೇಕು?: ಗಳಿಸಿದ ಹಣವನ್ನ ಏಕೆ ಉಳಿಸಬೇಕು, ಉಳಿಕೆಯ ಮಹತ್ವ, ಮತ್ತು ಎಲ್ಲಿ ಮತ್ತು ಹೇಗೆ ಉಳಿಸಬೇಕು ಎನ್ನುವುದನ್ನ ಅವರಿಗೆ ಹೇಳಬೇಕು. ಅವರಿಗೆ ಸಣ್ಣ ಪುಟ್ಟ ಕೆಲಸವನ್ನ ನೀಡಿ ಅದನ್ನ ಪೂರೈಸಿದರೆ ಇಷ್ಟು ಹಣ ಎಂದು ಅವರಿಗೆ ಹೇಳುವುದು ಹಣದ ಬದಲು ನೀವೇ ಕೈಯಲ್ಲಿ ಬರೆದ ಬಾಂಡ್ ನೀಡುವುದು, ಇಂತಹ ಕೆಲಸಗಳಿಗೆ ಉತ್ತೇಜನ ನೀಡುವುದು ಮಾಡಬೇಕು.
  3. ಹಣವನ್ನ ಏಕೆ ಖರ್ಚು ಮಾಡಬೇಕು? ಮತ್ತು ಹೇಗೆ ಖರ್ಚು ಮಾಡಬೇಕು?: ಹಣ ಗಳಿಕೆ ಮತ್ತು ಉಳಿಕೆ ಮಾತ್ರ ಮಾಡಿದರೆ ಸಮಾಜ ನಿಂತ ನೀರಾಗುತ್ತದೆ. ಹಣವನ್ನ ಖರ್ಚು ಕೂಡ ಮಾಡಬೇಕು. ಹಣ ಕೇವಲ ಒಂದೆಡೆ, ಕೆಲವು ವ್ಯಕ್ತಿಗಳ ಕೈಯಲ್ಲಿ ಸಂಗ್ರಹವಾದರೆ ಅದು ಸಮಾಜಕ್ಕೆ ಮಾರಕ. ಹೀಗಾಗಿ ಎಲ್ಲಿ, ಹೇಗೆ ಮತ್ತು ಎಷ್ಟು ಖರ್ಚು ಉತ್ತಮ ಎನ್ನುವುದರ ಸಮೀಕರಣ ಕೂಡ ಮಕ್ಕಳಿಗೆ ಹೇಳಿಕೊಡಬೇಕು.
  4. ಹಣಕ್ಕೆ ಮೌಲ್ಯವಿದೆಯೇ ಅಥವಾ ಪದಾರ್ಥಕ್ಕೆ ಮೌಲ್ಯವಿದೆಯೇ?: ಮುಕ್ಕಾಲು ಪಾಲು ಜನ ಹಿರಿಯರಿಗೆ ಇದರ ಬಗ್ಗೆ ನಿಖರ ಮಾಹಿತಿ ಇಲ್ಲ. ಗಮನಿಸಿ ಮೌಲ್ಯವಿರುವುದು ಪದಾರ್ಥಕ್ಕೆ ಹೊರತು ಹಣಕ್ಕಲ್ಲ! ಹಣ ಪದಾರ್ಥದ ಮೌಲ್ಯ ಅಳೆಯಲು ಇರುವ ಒಂದು ಸಾಧನವಷ್ಟೇ. ಈ ವಿಷಯವನ್ನ ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು.

ಕೊನೆಮಾತು: ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಈ ಬದಲಾವಣೆಯನ್ನ ಖಂಡಿತ ನಿಲ್ಲಿಸುವ ಶಕ್ತಿ ನಮಗಿಲ್ಲ. ಆದರೆ ಬದಲಾವಣೆಗೆ ತಕ್ಕ ಹಾಗೆ ನಮ್ಮ ಮಕ್ಕಳನ್ನ ಹೊಂದಿಕೊಳ್ಳುವಂತೆ ತಯಾರು ಮಾಡುವ ಶಕ್ತಿ ನಮಗಿದೆ. ವರ್ಷದಲ್ಲಿ ಒಂದು ದಿನವೋ, ಎರಡು ದಿನವೋ ಕುಳಿತು ಹೇಳಿದರೆ ನಮ್ಮ ಮಕ್ಕಳು ಕೇಳುವ ಸ್ಥಿತಯಲ್ಲಿರುವುದಿಲ್ಲ. ಹೀಗಾಗಿ ಇದೊಂದು ನಿರಂತರ ಕ್ರಿಯೆ. ಮಕ್ಕಳಿಗೆ ಸದಾ ಇಂತಹ ವಿಷಯಗಳನ್ನ ತಿಳಿಸುತ್ತ, ಅವುಗಳ ಸಾಧಕ-ಬಾಧಕಗಳನ್ನ ಚರ್ಚಿಸುತ್ತಾ ಇದ್ದರೆ ಅವರು ಕೂಡ ಪವಾಡವನ್ನ ಸೃಷ್ಟಿಸಬಲ್ಲರು. ದೂರದ ದೇಶದ ಹೋಸೆ ಮಾಡಿರುವ ಸಾಧನೆಯನ್ನ ನೋಡಿ ಮೂಗಿನ ಮೇಲೆ ಬೆರಳಿಡುವ ಮುನ್ನಾ ನಮ್ಮೆಲ್ಲರ ಮನೆಯಲ್ಲೂ ಹೋಸೆ ಅಥವಾ ಅವನಿಗಿಂತ ಹೆಚ್ಚಿನ ಸಾಧನೆ ಮಾಡುವ ಮಕ್ಕಳಿದ್ದಾರೆ ಎನ್ನುವುದು ನೆನಪಿರಲಿ. ಅವರಿಗೆ ಬೇಕಾಗಿರುವುದು ಸೂಕ್ತ ವಾತಾವರಣ ಮತ್ತು ಒಂದಷ್ಟು ಪ್ರೋತ್ಸಾಹ. ಅದನ್ನ ತಪ್ಪದೆ ನೀಡುವಿರಲ್ಲ??


ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp