ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ 'ನಿಯಂತ್ರಣ ಮೀರಿದ ಸಂಗ್ರಹಣೆ' ಕಾರಣ!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ 'ನಿಯಂತ್ರಣ ಮೀರಿದ ಸಂಗ್ರಹಣೆ' ಕಾರಣ!
ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ 'ನಿಯಂತ್ರಣ ಮೀರಿದ ಸಂಗ್ರಹಣೆ' ಕಾರಣ!

ಇವತ್ತು ಜಗತ್ತು ಈ ಮಟ್ಟಿಗೆ ಬದಲಾಗಿರುವುದಕ್ಕೆ ಪ್ರಮುಖ ಕಾರಣ ನಾವು ಹಣಕ್ಕೆ ನೀಡುತ್ತಿರುವ ಪ್ರಾಮುಖ್ಯತೆ.

ಹಣವೆನ್ನುವುದು ನಮ್ಮ ಸೃಷ್ಟಿ. ಇಬ್ಬರಿಗಿಂತ ಹೆಚ್ಚು ಜನ ಈ ಕಾಗದದ ತುಂಡಿನಲ್ಲಿ ಇಟ್ಟ ನಂಬಿಕೆ, ಇಂದು ಜಗತ್ತನ್ನ ಇಲ್ಲಿಗೆ ತಂದು ನಿಲ್ಲಿಸಿದೆ. ಅವನು ನಂಬಿದ ಅಂದ ಮೇಲೆ ಅದರಲ್ಲಿ ಏನೋ ಇದೆ ಎಂದು ನಾನು, ನಾನು ನಂಬಿದ್ದೇನೆ ಎಂದು ನನ್ನ ನಂಬಿದ ಇನ್ನ ಹತ್ತು ಜನ, ಅವರು ನಂಬಿದರು ಎಂದು ಇನ್ನೊಂದಷ್ಟು ಜನ, ಹೀಗೆ ಮೌಲ್ಯವೇ ಇಲ್ಲದ ಪುಟಾಣಿ ಕಾಗದದ ತುಂಡಿಗೆ ಸೃಷ್ಟಿಕರ್ತನನ್ನೇ ಕುಣಿಸುವ ತಾಕತ್ತು ಕೊಟ್ಟಿದ್ದು ಮಾತ್ರ ನಮ್ಮ ಕಲೆಕ್ಟಿವ್ ನಂಬಿಕೆ ಅಥವಾ ಮನಸ್ಥಿತಿ. ಪೇಪರ್ ಹಣ ಸತ್ತು, ಡಿಜಿಟಲ್ ಹಣದ ಉಗಮವಾಗಲೇ ಆಗಿ ಹೋಗಿದೆ. 

ಪೇಪರ್ ಹಣ ಸೃಷ್ಟಿಸಿದ ನೂರಾರು ಪಟ್ಟು ಅವಾಂತರವನ್ನ ಡಿಜಿಟಲ್ ಹಣ ಸೃಷ್ಟಿಸಲಿದೆ. ಈ ಗದ್ದಲದ ಜಗತ್ತಿನಲ್ಲಿ ಇದನ್ನ ಸಂಯಮದಿಂದ ಓದುವ, ಕೇಳುವ ವ್ಯವಧಾನ ಯಾರಿಗಿದೆ?  ಈಗ ನೀವೊಂದು ಪ್ರಶ್ನೆಯನ್ನ ಕೇಳಬಹುದು, ಮನಸ್ಥಿತಿ ಬದಲಾಯಿಸಿಕೊಂಡರೆ ಹಣವನ್ನ ರಿಪ್ಲೇಸ್ ಮಾಡಬಹುದೇ? ಹಣವಿಲ್ಲದೆ ಬದುಕಬಹುದೇ? ವಿನಿಮಯಕ್ಕೆ ಏನಾದರೂ ವಸ್ತು ಬೇಕಲ್ಲವೇ? ಅಂತಹ ವಸ್ತು ಹಣದ ಜಾಗವನ್ನ ಆಕ್ರಮಿಸುವುದಿಲ್ಲ ಎನ್ನುವ ಗ್ಯಾರಂಟಿ ಏನು? ಹೀಗೆ ಒಂದು ಎಂದದ್ದು ಹತ್ತು ಪ್ರಶ್ನೆಗಳಾಗಬಹುದು. ಇದಕ್ಕೆಲ್ಲಾ ಉತ್ತರವಿದೆ, ಹಣಕ್ಕೆ ಪರ್ಯಾಯ ನಾವು ಸೃಷ್ಟಿಸಬಹುದು, ಹಣದ ಸಹಾಯವಿಲ್ಲದೆ ಬದುಕಬಹುದು. ಸಣ್ಣ ಪೇಪರ್ ತುಂಡಿನ ಮೇಲಿಟ್ಟಿರುವ ನಂಬಿಕೆ ಪರ್ಯಾಯದಲ್ಲಿ ಕೂಡ ಇಟ್ಟರೆ ಇದು ಸಾಧ್ಯ.

ಇಂದು ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ನಮಗೆ ಹಣಕಾಸು ವ್ಯವಸ್ಥೆ ಬೇಕಿಲ್ಲ ಅಷ್ಟರಮಟ್ಟಿಗೆ. ಪ್ರಕೃತ್ತಿಯಲ್ಲಿ ನೀರಿದೆ, ಆಹಾರವಿದೆ, ತೈಲವಿದೆ ಪ್ರಕೃತ್ತಿ ಎಂದೂ ಅದಕ್ಕೆ ಹಣ ಕೇಳಿಲ್ಲ. ಅಂದರೆ ಪುಕ್ಕಟೆ ಸಿಗುವ ವಸ್ತುಗಳ ಮೇಲೆ ಬೆಲೆ ಹೇರಿ ಅದಕ್ಕೂ ತೆರಿಗೆ ಹಾಕಿ ಸಾಧಿಸುವುದಾದರೂ ಏನು? ಜಗತ್ತಿನ ಪ್ರತಿಯೊಬ್ಬ ಪ್ರಜೆಯೂ ಸುಖವಾಗಿ ಬಾಳಲು ಬೇಕಾಗಿರುವ ಸಂಪತ್ತು ಇಲ್ಲಿದೆ ಆದರೆ ಅದು ಕೆಲವೇ ಕೆಲವು ವ್ಯಕ್ತಿಗಳ ಮನೆಯಲ್ಲಿ ಕೊಳೆಯುತ್ತಾ ಬಿದ್ದಿದೆ. ಹೀಗೆ ಜಗತ್ತಿನ ಹೆಚ್ಚು ಸಂಪನ್ಮೂಲದ ಮೇಲೆ ಹಿಡಿತ ಹೊಂದಿರುವವರ ಸಂಖ್ಯೆ 1 ಪ್ರತಿಶತಕ್ಕಿಂತ ಕಡಿಮೆ. ನಾವೆಲ್ಲಾ ಒಂದಾದರೆ? ಯೋಚಿಸಿ ನೋಡಿ ನಾವು 99 ಪ್ರತಿಶತ ಅವರು ಕೇವಲ 1 ಪ್ರತಿಶತ. ನೂರಾರು ಕುರಿಯ ಕಾಯಲು ಒಬ್ಬ ಮನುಷ್ಯ ಸಾಕು ಅಲ್ವಾ? ಹಾಗಾಗಿದೆ ನಮ್ಮ ಸ್ಥಿತಿ. ಜಾತಿ ಧರ್ಮ ಭಾಷೆ ಹೀಗೆ ನೂರಾರು ಹೆಸರಲ್ಲಿ ಛಿದ್ರವಾಗಿರುವ ನಮಗೆ ಒಗ್ಗಟ್ಟಾಗಲು ಸಾಧ್ಯವೇ? ಅದು ಸಾಧ್ಯವಾದರೆ ಬದುಕು ಹಸನಾಗುತ್ತದೆ.

ನಾಗರೀಕತೆ ಬೆಳೆಯುತ್ತಾ ಬಂದಂತೆಲ್ಲ ನಾವು ತಿನ್ನುವ ಆಹಾರ ಮತ್ತು ಉಡುಪಿನಲ್ಲಷ್ಟೇ ಅಲ್ಲ ಎಲ್ಲದರಲ್ಲೂ ಬದಲಾವಣೆ ಕಂಡಿದೆ. ವಿನಿಮಯ ಮಾಧ್ಯಮವಾಗಿ ಕಣ್ಣಿಗೆ ಕಂಡದ್ದನ್ನೆಲ್ಲ ಬಳಸುತ್ತಿದ್ದೆವು. ಅಕ್ಕಿ ಬದಲಿಗೆ ರಾಗಿ... ಜೋಳದ ಬದಲಿಗೆ ಕುರಿ... ಹೀಗೆ ಉದಾಹರಿಸುತ್ತ ಹೋಗಬಹುದು. 

ಮನುಷ್ಯ ತನ್ನ ಅವಶ್ಯಕತೆಗೆ ಅನುಗುಣವಾಗಿ 'ಹಣ' ಎನ್ನುವ ಪದವನ್ನ ಹುಟ್ಟಿಹಾಕಿದ. ನೂರಾರು ವರ್ಷ ಪೇಪರ್ ಮನಿ ತನಗಿನ್ನಾರು ಸಾಟಿ ಇಲ್ಲ ಎನ್ನುವಂತೆ ಮೆರೆಯಿತು. ಇದೀಗ ಎಲ್ಲವೂ ಡಿಜಿಟಲ್. ಹಣ ಹುಟ್ಟುವ ಮುಂಚೆ, ಸಾಲವನ್ನ ಸಾಲ ಎನ್ನುವುದಕ್ಕೆ ಮುಂಚೆ ಕೂಡ ಶೇಖರಣೆ ನಡೆಯುತಿತ್ತು. 

ಇದೊಂದು ಮನುಷ್ಯನ ಹುಟ್ಟು ಗುಣ. ಬಹು ದೊಡ್ಡ ಸಂಸ್ಥೆಯ ಮುಖ್ಯಸ್ಥನಿರಬಹುದು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಕಸ ಗುಡಿಸುವನಿರಬಹುದು ಎಲ್ಲರಿಗೂ ನಾಳಿನ ಬದುಕಿಗೆ ಒಂದಷ್ಟು ಶೇಖರಿಸಿಡಬೇಕು ಎನ್ನುವ ಹಪಾಹಪಿ ಮಾತ್ರ ಇದ್ದದ್ದೇ! ಹಣದ ಉಗಮ ಮನುಷ್ಯನ ಈ ಮೂಲಭೂತ ಗುಣಕ್ಕೆ ಹಾಲೆರೆದಂತಾಗಿದೆ.

ಹಣದ ಉಗಮಕ್ಕೆ ಮುಂಚೆ ಒಂದಷ್ಟು ಶೇಖರಣೆಗೆ ಸೀಮಿತವಾಗಿದ್ದ ಆಸೆ, ಹಪಾಹಪಿಕೆ ಇದರಿಂದ ಲಾಗಾಮಿಲ್ಲದೆ ಕುದುರೆಯಂತಾಗಿದೆ, ಮುಂದಿನ ಪೀಳಿಗೆಗೆ ಎಂದು ಕೂಡಿಡುವ ಹುಚ್ಚು ಮನುಷ್ಯನನ್ನ ಆವರಿಸಿದೆ.

ಇತಿಹಾಸದಲ್ಲಿ ಹಣದ ಸಹಾಯವಿಲ್ಲದೆ ಶತಮಾನಗಳ ಕಾಲ ಸಮೃದ್ಧ ಸಮಾಜ ಕಟ್ಟಿ ಬಾಳಿದ ಉದಾಹರಣೆ ಇದೆ. ಹೌದ? ಎನ್ನುವ ಕೂತಹಲಕ್ಕೆ ಇಂಕಾ ನಾಗರೀಕತೆ ಉತ್ತರ. ಇಂಕಾ ನಾಗರೀಕತೆ ಕೇಳದವರು ಯಾರು? ಇಂಕಾ ಎಂದ ತಕ್ಷಣ  ನೆನಪಿಗೆ ಬರುವುದು ದಕ್ಷಿಣ ಅಮೆರಿಕಾದ 'ಪೆರು' ದೇಶ. ಆದರೆ ಇದು ಪೆರುವಷ್ಟೇ ಅಲ್ಲ, ಬೊಲಿವಿಯಾ, ಈಕ್ವಾಡೋರ್, ಮಧ್ಯ ಚಿಲಿ, ಉತ್ತರ ಅರ್ಜೆಂಟೀನಾ, ದಕ್ಷಿಣ ಕೊಲಂಬಿಯಾಗಳನ್ನ  ಒಳಗೊಂಡ ಒಂದು ಮಹಾನ್ ಸಾಮ್ರಾಜ್ಯವಾಗಿತ್ತು. ಇಂತಹ ಇಂಕಾ ಜನರು ವಿನಿಮಯವನ್ನಾಗಿ ಯಾವುದೇ ವಸ್ತು ಬಳಸದೆ ಅಂದಿನ ಸಂಪದ್ಭರಿತ ಮತ್ತು ದೊಡ್ಡ ನಾಗರೀಕತೆ ಕಟ್ಟುವಲ್ಲಿ ಯಶಸ್ವಿಯಾಗಿದ್ದರು ಎನ್ನುವುದು ಇಂದಿಗೆ ನಂಬಲು ಅಸಾಧ್ಯ! ಆದರೆ ಆ ಜನಾಂಗ ಹಣ ಅಥವಾ ಇನ್ಯಾವುದೇ ಶೇಖರಿಸಲ್ಪಡುವ ವಸ್ತುಗಳನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸದೆ ಸಾರ್ಥಕ ಬದುಕ ಬದುಕಿದ ನಿದರ್ಶನ ನಮ್ಮ ಮುಂದಿದೆ.

ಇಂಕಾ ಸಾಮ್ರಾಜ್ಯದ ನೆರೆ ಹೊರೆಯಲ್ಲಿ ಇದ್ದ ಅಸ್ಟಕ್ ಮತ್ತು ಮಾಯನ್ನರು ಹುರಳಿ ಬೀಜವನ್ನ ಮತ್ತು ಬಟ್ಟೆಯನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸುತ್ತಿದ್ದರು ಆದರೆ ಇಂಕನ್ನರು ಮಾತ್ರ  ಇಂತಹ ವಿಷಯಗಳಿಗೆ ತಲೆ ಕೆಡೆಸಿಕೊಳ್ಳದೆ ತಮ್ಮದೇ ಆದ 'ಮಿತ' ಎನ್ನುವ ಪದ್ಧತಿಯನ್ನ ಚಾಲ್ತಿಗೆ ತಂದಿದ್ದರು. ಅದರ ಪ್ರಕಾರ 15 ವರ್ಷ ತುಂಬಿದ ಪ್ರತಿ ಇಂಕಾ ಪುರುಷ  ದೇಶಕ್ಕಾಗಿ ಕೆಲಸ ಮಾಡಬೇಕಿತ್ತು. ಎಷ್ಟು ಕೆಲಸವಿದೆ ಎನ್ನುವುದರ ಮೇಲೆ ವರ್ಷದಲ್ಲಿ ಎಷ್ಟು ದಿನ ಕೆಲಸ ಮಾಡಬೇಕು ಎನ್ನುವುದರ ನಿರ್ಧಾರವಾಗುತ್ತಿತ್ತು. ಹೆಚ್ಚೆಂದರೆ ವರ್ಷದ 70 ಭಾಗ ಕೆಲಸ ಉಳಿದ 30 ಭಾಗ ವಿಶ್ರಾಂತಿ. ಇದಕ್ಕೆ ಬದಲಾಗಿ ವಾಸಿಸಲು ಕಟ್ಟಡ, ಉಡಲು ಬಟ್ಟೆ, ಸೇವಿಸಲು ಆಹಾರ, ವಿಹಾರಕ್ಕೆ ಉತ್ತಮ ರಸ್ತೆ ಹೀಗೆ ಬದುಕಲು ಏನು ಬೇಕೋ ಅವೆಲ್ಲವೂ ಪುಕ್ಕಟೆ ಸಿಗುತಿತ್ತು. ಮನೋದೈಹಿಕ ಸ್ಥಿತಿಗೆ ಅನುಗುಣವಾಗಿ ಕೆಲಸ ಹಂಚಲಾಗುತಿತ್ತು. ಅದೊಂತರಹ 'ಎಲ್ಲವೂ ಎಲ್ಲರಿಗೆ ಸೇರಿದ್ದು' ಎನ್ನುವ ಭಾವನೆ ಮೇಲೆ ಕಟ್ಟಲ್ಪಟ್ಟ ನಾಗರೀಕತೆ.

ಸೂಕ್ಷ್ಮವಾಗಿ ನೋಡಿದರೆ ಇಲ್ಲಿಯೂ ವಿನಿಮಯ ಉಂಟು ಅದರೆ ಅದು ಕಣ್ಣಿಗೆ ಕಾಣುವ ರೂಪದಲ್ಲಿ ಇಲ್ಲ ಅಷ್ಟೇ. ಇಲ್ಲಿ 'ಸೇವೆ' (ಸರ್ವಿಸ್)ಯೇ ವಿನಿಮಯ. ಸೇವೆ ಸಂಗ್ರಹಿಸಿಡಲು ಆಗದ ಇರುವ ವಿನಿಮಯ ಹೀಗಾಗಿ ಆ ನಾಗರಿಕತೆ ಹೆಚ್ಚು ಸಂತೋಷದಿಂದ ಬದುಕಲು ಸಾಧ್ಯವಾಯಿತು. ಸಂಗ್ರಹಿಸಿ ಇಡಬಹುದಾದ ಯಾವುದೇ ವಿನಿಮಯ ಬದುಕಲ್ಲಿ ಬೇಕಿಲ್ಲದ ಪೈಪೋಟಿ ಅಲ್ಲದೆ ಮತ್ತೇನೂ ನೀಡದು. ಇದನ್ನ ಅರ್ಥ ಮಾಡಿಕೊಳ್ಳದೆ ಹಣವನ್ನ ಮುಖ್ಯ ಮಾಡಿರುವುದು ಮತ್ತು ಇದು ಶೇಖರಣೆಗೆ ಸುಲುಭವಾಗಿರುವುದು ಕಪ್ಪು ಹಣ ಸಂಗ್ರಹಕ್ಕೆ ಮುಖ್ಯ ಕಾರಣವಾಗಿದೆ. ಹಾಗೆ ನೋಡಿದರೆ ಸಂಗ್ರಹ, ಮುಂದಕ್ಕೆ ಬೇಕಾಗಬಹುದು ಎಂದು ಕೂಡಿಡುವುದು ಮನಷ್ಯನ ಸಹಜ ಗುಣ. ಹಣದ ಸೃಷ್ಟಿಗೂ ಮುಂಚೆಯೆ  ಕಲಹಗಳು ಆಗಿರುವುದಕ್ಕೆ ಪುರಾವೆಗಳಿವೆ.  

ಅಂದರೆ ಗಮನಿಸಿ 'ಹಣ' ಎನ್ನುವುದು ಇಲ್ಲದೆ ಇದ್ದಾಗ ಕೂಡ ಮನುಷ್ಯ ತನ್ನ ಮೂಲಭೂತ ಗುಣವಾದ ಸಂಗ್ರಹಣೆಯಿಂದ ಸಮಸ್ಯೆಗಳನ್ನ ಹುಟ್ಟು ಹಾಕುತ್ತಿದ್ದಾನೆ. ಉದಾಹರಣೆಗೆ ಜಾಯಿಕಾಯಿ (ಆಡು ಭಾಷೆಯಲ್ಲಿ ಜಾಕಾಯಿ) ಮೇಲಿನ ಹಿಡಿತ/ಸಾಮ್ಯಕ್ಕಾಗಿ ಘೋರ ಯುದ್ಧವೇ ನಡೆದು ಹೋಗಿದೆ.  ಇಂಡೋನೇಷ್ಯಾ ದಲ್ಲಿರುವ 'ರನ್' ಎನ್ನುವ ದ್ವೀಪದ ಮೇಲಿನ ಅಧಿಪತ್ಯಕ್ಕಾಗಿ ನಡೆದ ಯುದ್ಧ ಇತಿಹಾಸದ ಪುಟಗಳ ಕೆದುಕುತ್ತಾ ಹೋದರೆ ವಿಸ್ತಾರವಾಗಿ ತೆಗೆದು ಕೊಳ್ಳುತ್ತಾ ಹೋಗುತ್ತದೆ. ಡಚ್ಚರು ಮತ್ತು ಬ್ರಿಟಿಷರ ನಡುವೆ ಜಾಕಾಯಿ ಮೇಲಿನ ಹಿಡಿತ ಮತ್ತು ಸಂಗ್ರಹಣೆಗಾಗಿ ಹತ್ತಾರು ಸಾವಿರ ಜನರು ರಕ್ತವನ್ನ ಈ ದ್ವೀಪದಲ್ಲಿ ಹರಿಸಿದ್ದಾರೆ.

ಇದರ ಅರ್ಥ ಬಹಳ ಸರಳ. ಹಣವಿರಲಿ ಅಥವಾ ಬಿಡಲಿ ಮನುಷ್ಯ ಸಂಗ್ರಹಣೆ ಎನ್ನುವ ಮನೋವ್ಯಾಧಿಯಿಂದ ಹೊರಬರಲಾರ. ಸಣ್ಣ ಸಣ್ಣ ಪ್ರಾಣಿ ಪಕ್ಷಿಗಳು ಕೂಡ ಸಂಗ್ರಹಣೆ ಮಾಡುತ್ತವೆ. ಆದರೆ ಚಳಿಗಾಲಕ್ಕೋ, ಮಳೆಗಾಲಕ್ಕೋ ಎಂದು ಒಂದಷ್ಟು ಸಂಗ್ರಹಿಸುತ್ತವೆ. ಆದರೆ ಮನುಷ್ಯ ಪ್ರಾಣಿ ಮಾತ್ರ ಮುಂದಿನ ತಲೆಮಾರುಗಳಿಗೆ ಕೂಡ ಸಂಗ್ರಹಿಸಿಡಲು ಶುರು ಮಾಡಿದ್ದು ಎಲ್ಲಾ ಸಮಸ್ಯೆಯ ಮೂಲ. ಇದಕ್ಕೆ ಪರಿಹಾರವಿಲ್ಲವೇ? ಇದಕ್ಕೆ ಉತ್ತರ ಖಂಡಿತ ಇದೆ. ನೋಡಿ ನಾವು ಸಂಗ್ರಹಣೆಯನ್ನ ಖಂಡಿತ ತಪ್ಪಿಸಲು ಸಾಧ್ಯವಿಲ್ಲ. ಆದರೆ ಒಬ್ಬನೇ ಮನುಷ್ಯ ಕೋಟ್ಯಂತರ ಜನರ ಸಂಗ್ರಹಣೆಯನ್ನ ತಾನಿಟ್ಟು ಕೊಳ್ಳುವುದು ಅಪರಾಧ. ಹೀಗಾಗಿ ಸಾವಿರಾರು ಕೋಟಿ ಒಬ್ಬನ ಬಳಿ ಸಂಗ್ರಹವಾಗುವ ಬದಲು ಲಕ್ಷಾಂತರ ರೂಪಾಯಿ ಕೋಟ್ಯಂತರ ಜನರ ಬಳಿ ಸಂಗ್ರಹವಾದರೆ ಅಲ್ಲಿಗೆ ಒಂದಷ್ಟು ಅಸಮಾನತೆ ನಿಯಂತ್ರಣಕ್ಕೆ ಬರುತ್ತದೆ.

ಜಗತ್ತು ಹಿಂದೆದೂ ಕಂಡು ಕೇಳರಿಯದಷ್ಟು ಕೆಲವೇ ಕೆಲವು ಜನರ ಕಪಿಮುಷ್ಠಿಯಲ್ಲಿ ಸಿಲುಕಿದೆ. ಇವರ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಇರುವುದು ಸಹಕಾರ ಸಂಸ್ಥೆ ಹುಟ್ಟುಹಾಕುವುದು. ಸಾಧ್ಯವಾದಷ್ಟೂ ದೊಡ್ಡ ಬ್ರಾಂಡ್ ಗಳನ್ನ ಕೊಳ್ಳದೆ ಇರುವುದು ಅದಕ್ಕೆ ಪರ್ಯಾಯವಾಗಿ ನಮ್ಮದೇ ಆದ ಒಂದು ಬ್ರಾಂಡ್ ಸೃಷ್ಟಿಸುವುದು ಮತ್ತು ಅದನ್ನ ಸದಸ್ಯರ ನಡುವೆ ಮಾರಾಟ ಮಾಡುವುದು ಮಾಡಿದರೆ ನಿಧಾನವಾಗಿ  'ಅವರ' ಮಾರುಕಟ್ಟೆ ಮೌಲ್ಯ ಕುಗ್ಗುತ್ತದೆ. ಎಲ್ಲಕೂ ಮೊದಲು ಒಂದು ಸಾಮಾನ್ಯ ಉದ್ದೇಶ ಆಯ್ದುಕೊಳ್ಳಬೇಕು. ಸಾಮಾನ್ಯ ಉದ್ದೇಶವನ್ನ ಇಷ್ಟಪಡುವ ಮತ್ತು ಅದರಲ್ಲಿ ನಂಬಿಕೆ ಇರುವ ಜನರನ್ನ ಒಗ್ಗೂಡಿಸಬೇಕು. ಅವರಿಂದ ಒಂದಷ್ಟು ಹಣ ಸಂಗ್ರಹಿಸಬೇಕು, ಸಹಕಾರಿ ಸಂಸ್ಥೆ ಎಂದು ನೊಂದಾಯಿಸಿಕೊಳ್ಳಬೇಕು, ಮತ್ತು ಸಾಮಾನ್ಯ ಉದ್ದೇಶಕ್ಕಾಗಿ ನಿರಂತರ ನಿಷ್ಠೆಯಿಂದ ದುಡಿಯಬೇಕು. ಉದಾಹರಣೆ ನೋಡಿ ಮೂರರಿಂದ ಐದು ಸಾವಿರ ಜನರಿರುವ ಒಂದು ಹಳ್ಳಿಯ ಜನರನ್ನ ಸೇರಿಸಿ ಒಂದು ಸಹಕಾರಿ ಸಂಸ್ಥೆ ತೆಗೆದರೆ ಮತ್ತು ಅಲ್ಲಿನ ಎಲ್ಲಾ ಉತ್ಪನ್ನಗಳ ಅಲ್ಲಿನ ಸದಸ್ಯರ ನಡುವೆ ಕೊಳ್ಳುವುದು ಮಾರುವುದು ನಡೆದರೆ ಅಲ್ಲಿ ರಿಲಯನ್ಸ್ ಫ್ರೆಶ್ಗೆ ಏನು ಕೆಲಸವಿರುತ್ತದೆ ನೀವೇ ಹೇಳಿ? ಜನರ ಪ್ರತಿಯೊಂದು ಬೇಕುಗಳನ್ನ ಪಟ್ಟಿ ಮಾಡಿ ಅದನ್ನ ಅಲ್ಲೇ ಸ್ಥಳೀಯವಾಗಿ ಉತ್ಪಾದಿಸಲು ಅಲ್ಲಿನ ಜನರನ್ನೇ ಪ್ರೋತ್ಸಾಹಿಸಿದರೆ ಹಳ್ಳಿಯ ಜನ ಪಟ್ಟಣಕ್ಕೆ ಕೆಲಸ ಹುಡುಕಿ ಬರುವ ಪ್ರಮೇಯವಿರುವುದಿಲ್ಲ. ಅವರ ಕೊತ್ತಂಬರಿ ಸೊಪ್ಪನ್ನ ಹತ್ತು ಪೈಸೆಗೆ ಕೊಂಡು ರುಪಾಯಿಗೆ ಮಾರಲು ರಿಲಯನ್ಸ್ ಫ್ರೆಶ್ಗೂ ಸಾಧ್ಯವಾಗುವುದಿಲ್ಲ.

ಕೊನೆ ಮಾತು: ಜಗತ್ತಿನ ಇಂದಿನ ಎಲ್ಲಾ ಸಮಸ್ಯೆಗಳಿಗೆ ಹಣ ಕಾರಣ ಎನ್ನುವುದಕ್ಕಿಂತ ಅದರ ನಿಯಂತ್ರಣ ಮೀರಿದ ಸಂಗ್ರಹಣೆ ಕಾರಣವಾಗಿದೆ. ಇಂತಹ ಸಂಗ್ರಹಣೆಯನ್ನ ಸಂಘಟನೆಯ ಮೂಲಕ ತಡೆಯಬಹುದು. ದಿನ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಭೇದಭಾವ ಸೃಷ್ಟಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರನ್ನೂ ಸಂಘಟಿಸಿ, ಸಾಮಾನ್ಯ ಗುರಿಯ ಕಡೆಗೆ ನಡೆಸುವುದು ಸುಲಭದ ಮಾತಲ್ಲ. ಆದರೆ ಇದು ತುರ್ತಾಗಿ ಆಗಬೇಕಿರುವ ಕೆಲಸ. ಅಲ್ಲಿಯವರೆಗೆ ವ್ಯವಸ್ಥೆ ಬದಲಾಗಲು ಸಾಧ್ಯವಿಲ್ಲ.

ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com