ಬಾಟಲ್-ಮದ್ಯ ಎರಡೂ ಬದಲಾಗದ 'ಹೊಸ' ಬಜೆಟ್! 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಬಾಟಲ್-ಮದ್ಯ ಎರಡೂ ಬದಲಾಗದ 'ಹೊಸ' ಬಜೆಟ್!
ಬಾಟಲ್-ಮದ್ಯ ಎರಡೂ ಬದಲಾಗದ 'ಹೊಸ' ಬಜೆಟ್!

ಬಜೆಟ್ ಎನ್ನುವುದು ಆದಾಯದ ಮೂಲ ಮತ್ತು ಖರ್ಚಿನ ದಾರಿಯನ್ನ ತೋರಿಸುವ ಒಂದು ಲೆಕ್ಕ ಪತ್ರ. ಮುಂದಿನ ಒಂದು ವರ್ಷ ಇಷ್ಟು ಆದಾಯದ ಸಂಗ್ರಹಣೆ ಇಂತಹ ಮೂಲಗಳಿಂದ ಆಗುತ್ತದೆ  ಮತ್ತು ಅದನ್ನ ಇಂತಿಂತಹ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ದೇಶದ ಜನರಿಗೆ ಹೇಳುವ ಪತ್ರ. ಆದಾಯ ಮತ್ತು ವ್ಯಯದ ನಡುವಿನ ಅಂತರವನ್ನ ಬಜೆಟ್ ಡಿಫಿಸಿಟ್ ಮತ್ತು ಬಜೆಟ್ ಸರ್ಪ್ಲಸ್ ಎಂದು ಕರೆಯಲಾಗುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿದ್ದರೆ ಅದನ್ನ ಬಜೆಟ್ ಡಿಫಿಸಿಟ್ ಎನ್ನುತ್ತಾರೆ.

ಹಾಗೆಯೇ ಆದಾಯ ಹೆಚ್ಚಾಗಿದ್ದು ಖರ್ಚು ಕಡಿಮೆಯಿದ್ದರೆ ಅದನ್ನ ಬಜೆಟ್ ಸರ್ಪ್ಲಸ್ ಎಂದು ಕರೆಯಲಾಗುತ್ತದೆ. ಜಗತ್ತಿನ ಬೆರಳೆಣಿಕೆಯಷ್ಟು ದೇಶಗಳು ಬಜೆಟ್ ಸರ್ಪ್ಲಸ್ ಹೊಂದಿವೆ. ಉಳಿದಂತೆ ಎಲ್ಲಾ ದೇಶಗಳೂ ವಿತ್ತೀಯ ಕೊರತೆಯನ್ನ ಅನುಭವಿಸುತ್ತಿವೆ. ಕಳೆದ ವರ್ಷ 3.3 ಪ್ರತಿಶತ ವಿತ್ತೀಯ ಕೊರತೆಯನ್ನ ಅಂದಾಜಿಸಲಾಗಿತ್ತು. ಆದರೆ ವಾಸ್ತವದಲ್ಲಿ ಅದಕ್ಕಿಂತ ಹೆಚ್ಚಿನ ಕೊರತೆಯನ್ನ ಸರಕಾರ ಅನುಭವಿಸಿತು. ಇದನ್ನ ಗಣನೆಗೆ ತೆಗೆದುಕೊಂಡು ಪ್ರಸ್ತುತ ವರ್ಷಕ್ಕೆ ಬಜೆಟ್ ಡಿಫಿಸಿಟ್ ಅನ್ನು 3.8 ಕ್ಕೆ ನಿಗದಿ ಪಡಿಸಲಾಗಿದೆ. ಅರ್ಥ ಶಾಸ್ತ್ರಜ್ಞರು ಮಾರುಕಟ್ಟೆಯ ಇಂದಿನ ಪರಿಸ್ಥಿತಿಯ ಆಧಾರದ ಮೇಲೆ ಇದು 4 ಪ್ರತಿಶತಕ್ಕೆ ಏರಬಹುದು ಎನ್ನುವ ಭಯವನ್ನ ವ್ಯಕ್ತಪಡಿಸಿದ್ದಾರೆ. ಅಂದರೆ ಗಮನಿಸಿ ನೂರು ರೂಪಾಯಿ ಖರ್ಚು ಮಾಡಲೇಬೇಕಾದ ಪರಿಸ್ಥಿತಿ ಇದೆ. ಆದರೆ ಆದಾಯ ಮಾತ್ರ 96 ರೂಪಾಯಿ. ಉಳಿದ ನಾಲ್ಕು ರೂಪಾಯಿ ತರುವುದು ಎಲ್ಲಿಂದ? ಇದು ಒಂದು ವರ್ಷದ ಕಥೆಯಾದರೆ ಹೇಗಾದರೂ ಅನುಸರಿಸಿಕೊಂಡು ಹೋಗಬಹುದು, ಇದು ಪ್ರತಿ ವರ್ಷದ ಕಥೆ. ಹೀಗೆ ವರ್ಷದಿಂದ ವರ್ಷಕ್ಕೆ ಹಣದ ಕೊರತೆಯನ್ನ ತುಂಬುವುದು ಹೇಗೆ? ಹೀಗಾಗಿ ಹಲವಾರು ಕ್ಷೇತ್ರಗಳಿಗೆ ಇಂತಿಷ್ಟು ಎಂದು ನಿಗದಿ ಮಾಡಿದ ಹಣದಲ್ಲಿ ಕಡಿತ ಮಾಡಲಾಗುತ್ತದೆ. ಇದು ಸ್ಥೂಲವಾಗಿ ಭಾರತದ ಬಜೆಟ್ ಕಥೆ. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಪ್ರತಿ ನೂರು ರೂಪಾಯಿ ಗೆ ನಾಲ್ಕು ರೂಪಾಯಿ ನಮ್ಮ ಬಳಿ ಕೊರತೆಯಿದೆ. 

ಇನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತು ಬಹುತೇಕ ಮಾಧ್ಯಮಗಳಲ್ಲಿ ಎಲ್ಲವೂ ಚರ್ಚೆಗೆ ಒಳಪಟ್ಟಿವೆ. ಹೆಚ್ಚು ಸದ್ದಾಗಬೇಕಿದ್ದ ಆದರೆ ಸದ್ದಾಗದ ಬಹುಮುಖ್ಯವಾದ ಎರಡು ವಿಷಯಗಳ ಬಗ್ಗೆ ಇಂದು ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. 

ನಾನ್ ರೆಸಿಡೆಂಟ್ ಇಂಡಿಯನ್ ಅಥವಾ ಎನ್.ಆರ್.ಐ ಎಂದು ಕರೆಸಿಕೊಳ್ಳುವ ಅನಿವಾಸಿ ಭಾರತೀಯ ಜಗತ್ತಿನ ಬೇರೆ ದೇಶದಲ್ಲಿ ಇನ್ಕಮ್ ಟ್ಯಾಕ್ಸ್ ಕಟ್ಟಿಲ್ಲದಿದ್ದರೆ ಆತ ಭಾರತದಲ್ಲಿ ಅದಕ್ಕೆ ತೆರಿಗೆ ಕಟ್ಟಬೇಕು ಎನ್ನುವ ಒಂದು ಹೊಸ ತಿದ್ದುಪಡಿ ಗಲ್ಫ್ ಮತ್ತಿತರ ದೇಶಗಳಲ್ಲಿ ವಾಸಿಸುವ ಅಸಂಖ್ಯಾತ ಅನಿವಾಸಿ ಭಾರತೀಯರಿಗೆ ಶಾಕ್ ಕೊಟ್ಟಿದೆ. ಅಂದರೆ ಗಮನಿಸಿ ಬಹಳಷ್ಟು ಗಲ್ಫ್ ದೇಶದಲ್ಲಿ ಇನ್ಕಮ್ ಟ್ಯಾಕ್ಸ್ ಇಲ್ಲ. ಹೀಗಾಗಿ ಇಲ್ಲದ ಟ್ಯಾಕ್ಸ್ ಯಾರೂ ಕಟ್ಟುವುದಿಲ್ಲ. ಅಂದರೆ ಲಕ್ಷಾಂತರ ಜನ ಗಲ್ಫ್ ನಲ್ಲಿ ದುಡಿದು ಗಳಿಸಿದ ಆದಾಯಕ್ಕೆ ಭಾರತದಲ್ಲಿ ತೆರಿಗೆ ಕಟ್ಟಬೇಕೇ?  ಇದಕ್ಕೆ ಉತ್ತರ ಇಲ್ಲ. ನಿಜವಾಗಿಯೂ ಬೇರೆ ದೇಶದಲ್ಲಿ ಕಷ್ಟ ಪಟ್ಟು ದುಡಿದು ಸಂಪಾದಿಸಿದ ಹಣದ ಮೇಲೆ ಭಾರತದಲ್ಲಿ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. ಆದರೆ ಹೀಗೆ ದುಡಿದು ಭಾರತದಲ್ಲಿ ಅದರಿಂದ ಮನೆ ಖರೀದಿಸಿ ಅದನ್ನ ಬಾಡಿಗೆಗೆ ಕೊಟ್ಟಿದ್ದರೆ ಅಂತಹ ಬಾಡಿಗೆ ಆದಾಯಕ್ಕೆ ಭಾರತದಲ್ಲಿ ತೆರಿಗೆ ಕಟ್ಟಬೇಕು. ಹೀಗಾಗಿ ನಿಜವಾಗಿ ದುಡಿಯುವ ಮತ್ತು ತೆರಿಗೆಯನ್ನ ವಂಚಿಸಲು ಪ್ರಯತಿಸಿದ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. 

ಹಾಗಾದರೆ ಇದೇನು ಹೊಸ ತಿದ್ದುಪಡಿ? ಇದರ ಅವಶ್ಯಕತೆಯೇನು? ಎನ್ನುವ ಪ್ರಶ್ನೆ ಕೂಡ ಉದ್ಭವಾಗುವುದು ಸಹಜ. ಗಮನಿಸಿ ಬಹಳಷ್ಟು ಜನ ಹೈ-ನೆಟ್ ವರ್ತ್ ಇಂಡಿವಿಜುಯಲ್ ಗಳು (ಸಾಹುಕಾರರು ಎನ್ನೋಣ) ಭಾರತದಲ್ಲಿ ತೆರಿಗೆ ಕಟ್ಟುವುದನ್ನ ತಪ್ಪಿಸಿಕೊಳ್ಳಲು ಬೇರೆ ಬೇರೆ ದೇಶಗಳಲ್ಲಿ ವಾಸ ಮಾಡುತ್ತಾರೆ. ಜಗತ್ತಿನ ಎಲ್ಲಾ ದೇಶಗಳಲ್ಲಿ ಅಲ್ಲಿ ಎಷ್ಟು ದಿನ ವಾಸಿಸಿದ್ದರು ಎನ್ನುವುದರ ಆಧಾರದ ಮೇಲೆ ಅಲ್ಲಿ ತೆರಿಗೆ ಕಟ್ಟಬೇಕೇ?ಅಥವಾ ಬೇಡವೇ? ಎನ್ನುವುದನ್ನ ನಿರ್ಧರಿಸಲಾಗುತ್ತದೆ. ಉದಾಹರೆಣೆಗೆ ಭಾರತದಲ್ಲಿ ವ್ಯಕ್ತಿಯೊಬ್ಬ ವರ್ಷದಲ್ಲಿ 180 ದಿನಕ್ಕಿಂತ ಹೆಚ್ಚು ದಿನ ವಾಸವಿದ್ದರೆ ಆಗ ಅವರು ತೆರಿಗೆಯನ್ನ ಕಟ್ಟಬೇಕಾಗುತ್ತದೆ. ಆತನನ್ನ ಸ್ಥಳೀಯ ಎಂದು ಗುರುತಿಸಲಾಗುತ್ತದೆ. ಆದರೆ ನಮ್ಮ ಸಾಹುಕಾರರು ಎಲ್ಲಿಯೂ ಒಂದೆಡೆ ಅಷ್ಟು ದಿನ ನೆಲೆ ನಿಲ್ಲುವುದಿಲ್ಲ. ಹೀಗಾಗಿ ಜಗತ್ತಿನ ಯಾವ ಭಾಗದಲ್ಲೂ ಅವರನ್ನ ಸ್ಥಳೀಯ ಎನ್ನಲಾಗದು. ಹೀಗಾಗಿ ಎಲ್ಲಿಯೂ ತೆರಿಗೆ ಕಟ್ಟದೆ ಐಷಾರಾಮಿ ಜೀವನ ನಡೆಸುವ ಇಂತವರನ್ನ ತೆರಿಗೆಯ ಬಲೆಗೆ ಕೆಡವಲು ಸರಕಾರ ತಿದ್ದುಪಡಿ ತಂದಿದೆ. ಹೀಗಾಗಿ ಹಿಂದೆ ಇದ್ದ 180 ದಿನವನ್ನ 120 ದಿನಕ್ಕೆ ಇಳಿಸಲಾಗಿದೆ. ಅಲ್ಲದೆ ಇಂತಹ ಸಾಹುಕಾರರು ಜಗತ್ತಿನ ಇತರೆಡೆ ತೆರಿಗೆ ಕಟ್ಟಿಲ್ಲದಿದ್ದರೆ ಅವರ ಗ್ಲೋಬಲ್ ಇನ್ಕಮ್ ಅನ್ನು ಭಾರತದಲ್ಲಿ ಉತ್ಪತ್ತಿಯಾದ ಆದಾಯ ಎಂದು ಪರಿಗಣಿಸಿ ತೆರಿಗೆಯನ್ನ ಹಾಕಲಾಗುತ್ತದೆ. ಇದೊಂದು ಸಾಹುಕಾರರನ್ನ ಗುರಿಯಾಗಿಸಿ ತಂದಿರುವ ತಿದ್ದುಪಡಿ. ಜಗತ್ತಿನ ಯಾವುದೆ  ಮೂಲೆಯಲ್ಲಿ ನಿಜವಾಗಿ ದುಡಿಯುತ್ತಿರುವ ಯಾವೊಬ್ಬ ವ್ಯಕ್ತಿಯೂ ಇದರ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. 

ಮೊದಲ ಸಾಲುಗಳಲ್ಲಿ ಹೇಳಿದಂತೆ ನಮ್ಮ ದೇಶ ಬಜೆಟ್ನಲ್ಲಿ ವಿತ್ತೀಯ ಕೊರತೆಯನ್ನ ಅನುಭವಿಸುತ್ತಿದೆ. ಹಣವೇ ಇಲ್ಲವೆಂದ ಮೇಲೆ ಖರ್ಚು ಮಾಡುವುದು ಹೇಗೆ? ಕೆಲವೊಂದು ಖರ್ಚಿಗೆ ಕಡಿವಾಣ ಹಾಕಿ ಬಜೆಟ್ ಸರಿದೂಗಿಸುವುದು ಒಂದು ರೀತಿ. ಆದರೆ ಖರ್ಚು ಅವಶ್ಯಕವಾಗಿ ಮಾಡಲೇಬೇಕಾದ ಸಂದರ್ಭದಲ್ಲಿ ಏನು ಮಾಡುವುದು? ಹಣ ತರಲೇಬೇಕಾದ ದರ್ದು ಸರಕಾರದ ಮುಂದಿರುತ್ತದೆ. ಆಗ ಸರಕಾರ ಡಿಸೈನ್ವೆಸ್ಟ್ಮೆಂಟ್ ಗೆ ಮುಂದಾಗುತ್ತದೆ. 

ಏನಿದು ಡಿಸ್ ಇನ್ವೆಸ್ಟ್ಮೆಂಟ್? 

ಸರಕಾರ ಬಹಳಷ್ಟು ಸಂಸ್ಥೆಗಳ ಮೇಲೆ ಹೂಡಿಕೆಯನ್ನ ಮಾಡಿರುತ್ತದೆ. ಹೀಗೆ ಹೂಡಿಕೆ ಮಾಡಿದ ಹಣವನ್ನ ಮರಳಿ ಪಡೆಯುವುದಕ್ಕೆ ಡಿಸ್ ಇನ್ವೆಸ್ಟ್ಮೆಂಟ್ ಎನ್ನುತ್ತಾರೆ. ಅಂದರೆ ತನ್ನ ಬಳಿಯಿದ್ದ ಷೇರನ್ನ ಜನ ಸಾಮಾನ್ಯರಿಗೆ ಅಥವಾ ಬೇರೊಬ್ಬರಿಗೆ ಮಾರಿ ತನ್ನ ಹಣವನ್ನ ವಾಪಸ್ಸು ಪಡೆಯುವ ಪ್ರಕ್ರಿಯೆ. ಗಮನಿಸಿ ಹಿಂದೆ ಐಡಿಬಿಐ ಬ್ಯಾಂಕಿನಲ್ಲಿ ಸರಕಾರ ನೂರು ಪ್ರತಿಶತ ಹೂಡಿಕೆ ಮಾಡಿತ್ತು. ಇಂದಿಗೆ 51 ಕ್ಕೂ ಹೆಚ್ಚು ಪಾಲುದಾರಿಕೆ ಎಲ್.ಐ.ಸಿ ಹೊಂದಿದೆ. ಸರಕಾರ 47 ಪ್ರತಿಶತ ಮಾಲೀಕತ್ವ ಹೊಂದಿದೆ. ಈ ವರ್ಷ ಐಡಿಬಿಐ ಬ್ಯಾಂಕಿನಲ್ಲಿ ಇರುವ ತನ್ನ 47ಪ್ರತಿಶತ ಷೇರುಗಳನ್ನ ಕೂಡ ಸರಕಾರ ಮಾರಲು ಬಯಸಿದೆ. ಹಾಗೆಯೇ ಎಲ್.ಐ.ಸಿ ಯಲ್ಲಿ ಕೂಡ ಸರಕಾರದ ಬಹಳಷ್ಟು ಹಣವಿದೆ. ಅದನ್ನ ಕೂಡ ಐಪಿಒ (ಇನಿಷಿಯಲ್ ಪಬ್ಲಿಕ್ ಆಫ್ಫರಿಂಗ್) ಮೂಲಕ ಮಾರಿ ಹಣವನ್ನ ಪಡೆಯುವ ಇರಾದೆ ವ್ಯಕ್ತಪಡಿಸಿದೆ. 

ಕಳೆದ ವಿತ್ತೀಯ ವರ್ಷದಲ್ಲಿ ಒಂದು ಲಕ್ಷದ ಐದು ಸಾವಿರ ಕೋಟಿ ರೂಪಾಯಿಯನ್ನ ಡಿಸ್ ಇನ್ವೆಸ್ಟ್ಮೆಂಟ್ ಮೂಲಕ ಮರಳಿ ಪಡೆಯಲು ಬಜೆಟ್ ಮಾಡಿತ್ತು. ಆದರೆ ಇದರಲ್ಲಿ ಅದು ಬಹಳ ದೊಡ್ಡ ಮಟ್ಟದಲ್ಲಿ ಸೋತು ಕೇವಲ 18 ಸಾವಿರ ಕೋಟಿ ರೂಪಾಯಿವನ್ನ ಮರಳಿ ಪಡೆಯಿತು. ಮಾರ್ಚ್ 2020 ರಲ್ಲಿ ಕನಿಷ್ಠ 65 ಸಾವಿರ ಕೋಟಿ ಈ ವಿಧಾನದಲ್ಲಿ ವಾಪಸ್ಸು ಪಡೆಯಲು ಸರಕಾರ ಆದೇಶ ಹೊರಡಿಸಿದೆ. ಅಂತೆಯೇ 2020-21ರ ವಿತ್ತೀಯ ವರ್ಷದಲ್ಲಿ ಅಂದರೆ 1  ನೇ ಏಪ್ರಿಲ್ 2020 ರಿಂದ 31, ಮಾರ್ಚ್ 2021 ರಲ್ಲಿ ಒಂದು ಲಕ್ಷ 20 ಸಾವಿರ ಕೋಟಿ ರೂಪಾಯಿಯನ್ನ ಡಿಸ್ ಇನ್ವೆಸ್ಟ್ ಮಾಡುವ ಆಶಯವನ್ನ ಹೊಂದಿದೆ. ಒಟ್ಟಿನಲ್ಲಿ ಹತ್ತಿರಹತ್ತಿರ ಎರಡು ಲಕ್ಷ ಕೋಟಿ ರೂಪಾಯಿ ಬಂಡವಾಳ ಹಿಂತೆಗೆಯುವಿಕೆಗೆ ಸರಕಾರ ಮುಂದಾಗಿದೆ. 

ಇದರಿಂದ ಏನಾಗಬಹದು? 

ಗಮನಿಸಿ ಸರಕಾರದ ಬಂಡವಾಳ ಇದ್ದರೆ ಅದರ ಆಡಳಿತ ಮಂಡಳಿ ಕೂಡ ಸರಕಾರದ್ದೇ ಅಲ್ಲವೇ? ಹೀಗಾಗಿ ಅದೊಂದು ಸರಕಾರಿ ಸಂಸ್ಥೆ ಇದ್ದಂತೆಯೆ ಸರಿ. ಬಂಡವಾಳ ಮರಳಿ ಪಡೆಯುವಿಕೆಯಿಂದ ಸರಕಾರದ ಕಂಟ್ರೋಲ್ ತಪ್ಪುತ್ತದೆ. ಯಾರು ಇದರಲ್ಲಿ ಬಂಡವಾಳ ಹೂಡುತ್ತಾರೆ ಅವರು ಅದಕ್ಕೆ ಮಾಲೀಕರಾಗುತ್ತಾರೆ. ಸರಕಾರ ಕಳೆದ ಮೂರ್ನಾಲ್ಕು ವರ್ಷದಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನ ಬದಲಿಸಲು ಹರಸಾಹಸ ಪಡುತ್ತಿದೆ. ಬ್ಯಾಂಕಿಂಗ್ ಕ್ಷೇತದಲ್ಲಿ ಪ್ರೈವೇಟ್ ಹೂಡಿಕೆ ಬರಲಿ ಎನ್ನುವುದು ಸರಕಾರದ ಆಶಯ ಎನ್ನುವುದಕ್ಕೆ ಐಡಿಬಿಐ ಬ್ಯಾಂಕ್ ನ ಬಂಡವಾಳ ವಾಪಸ್ಸು ಪಡೆಯುವ ನಿರ್ಧಾರ ಇಂಬು ಕೊಟ್ಟಿದೆ. ಹಾಗೆಯೇ ಎಲ್.ಐ.ಸಿ ಯಲ್ಲಿನ ಬಂಡವಾಳ ತೆಗೆಯುವ ನಿರ್ಧಾರ ಕೂಡ ಮುಂಬರುವ ದಿನಗಳಲ್ಲಿ ಕೇಂದ್ರ ಸರಕಾರ ಎಲ್ಲವನ್ನೂ ಹೆಚ್ಚು ಹೆಚ್ಚು ಖಾಸಗೀಕರಣಗೊಳಿಸುವ ಇರಾದೆ ಹೊಂದಿದೆ ಎಂದು ನಿಚ್ಚಳವಾಗಿ ಹೇಳಬಹುದು. 

ಕೇಂದ್ರ ಸರಕಾರ ಈ ನಡೆ ಒಳ್ಳೆಯದೋ? ಅಥವಾ ಕೆಟ್ಟದ್ದೋ? ಎನ್ನವುದು ಮತ್ತೊಂದು ದೊಡ್ಡ ಮಟ್ಟದ ಚರ್ಚೆಗೆ ಒಳಗಾಗಬೇಕು. ಆದರೆ ವಿಪಕ್ಷಗಳು ಇಂತಹ ವಿಷಯದ ಬಗ್ಗೆ ಉಸಿರೆತ್ತದೆ ಇರುವುದು ಮಾತ್ರ ಸೋಜಿಗ. 

ಕೊನೆ ಮಾತು: ಭಾರತ ಒಂದು ಅತ್ಯಂತ ದೊಡ್ಡ ದೇಶ ನೂರನಲವತ್ತು ಕೋಟಿ ಜನಸಂಖ್ಯೆಯನ್ನ ಒಪ್ಪಿಸುವ ಬಜೆಟ್ ಭಗವಂತನಿಂದಲೂ ಕೊಡಲು ಸಾಧ್ಯವಿಲ್ಲ. ಅದೆಂತಹುದೇ ಒಳ್ಳೆಯ ಯೋಜನೆ ಇದ್ದರೂ ಅದು ನೂರು ಕೋಟಿ ಜನರಿಗೆ ಉಪಯೋಗವಾಗುವಂತಿದ್ದರೂ ಉಳಿದ ನಲವತ್ತು ಕೋಟಿ ಜನ ಸರಕಾರವನ್ನ ದೂಷಿಸದೆ ಬಿಡುವುದಿಲ್ಲ. ಅಲ್ಲದೆ ಸರಕಾರ ತನಗೆ ಬರಬೇಕಾದ ಆದಾಯವನ್ನ ಬಿಟ್ಟರೆ ಮತ್ತೆ ಖರ್ಚಿಗೆ ಹಣವೆಲ್ಲಿಂದ ಬಂದೀತು? ಹೀಗಾಗಿ ಇಂದಿನ ಬಜೆಟ್ ಅಂತಲ್ಲ ಯಾವುದೇ ಬಜೆಟ್ ಯಾವುದೇ ಸರಕಾರ ಮಂಡಿಸಲಿ, ರಿಬೇಟ್ ಅಥವಾ ಮನ್ನಾ ಎನ್ನುವ ಮಾತುಗಳು ಪ್ರಜೆಗಳ ಮೂಗಿಗೆ ತುಪ್ಪ ಸವರುವ ಕೆಲಸವಷ್ಟೇ. ಈ ಕೈಯಲ್ಲಿ ಒಂದು ಕೊಟ್ಟು ಇನ್ನೊಂದು ಕೈಯಲ್ಲಿ ವಾಪಸ್ಸು ಪಡೆದಿರುತ್ತಾರೆ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com