ಜಗತ್ತಿಗೆ ತನ್ನ ದೈತ್ಯ ಶಕ್ತಿಯನ್ನ ಕರೋನ ಮೂಲಕ ತೋರುತ್ತಿದೆ ಚೀನಾ! 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಜಗತ್ತಿಗೆ ತನ್ನ ದೈತ್ಯ ಶಕ್ತಿಯನ್ನ ಕರೋನ ಮೂಲಕ ತೋರುತ್ತಿದೆ ಚೀನಾ! 

ಇಂದಿಗೆ ಕರೋನ ವೈರಸ್ ಹೆಸರು ಕೇಳದವರಾರು? ಚೀನಾ ದೇಶ ಜಗತ್ತಿನ ಹಿರಿಯಣ್ಣನ ಸ್ಥಾನದಿಂದ ಅಮೆರಿಕವನ್ನ ಹೊರದಬ್ಬಿ ಆ ಸ್ಥಾನದಲ್ಲಿ ಕೂರಲು ಕಳೆದ ಒಂದು ದಶಕದಿಂದ ಪ್ರಯತ್ನ ಮಾಡುತ್ತಲೇ ಇದೆ.

ಮೂರ್ನಾಲ್ಕು ವರ್ಷದ ಹಿಂದೆ ಆ ಪಟ್ಟಕ್ಕೆ ಬಹಳ ಸಮೀಪವೂ ಬಂದಿತ್ತು. ಅಮೆರಿಕ ದೇಶದ ಜೊತೆಗಿನ ವಾಣಿಜ್ಯ ಕಾದಾಟ (ಟ್ರೇಡ್ ವಾರ್) ಮುಗಿಯುವುದಿಲ್ಲ ಎನ್ನುವ ಮಟ್ಟಕ್ಕೆ ಬಂದು ನಿಂತ್ತಿತ್ತು. ವಿಶ್ವದ ಈ ಎರಡು ದೊಡ್ಡ ಆರ್ಥಿಕ ಶಕ್ತಿಗಳ ನಡುವಿನ ಕಾದಾಟ ಬೇರೆ ಸಣ್ಣ-ಪುಟ್ಟ ದೇಶಗಳ ಆರ್ಥಿಕತೆ ಮೇಲೆ ಬಹಳ ಪರಿಣಾಮ ಬೀರಿತ್ತು. ಈ ಮಧ್ಯೆ ಅಮೆರಿಕ ಮತ್ತು ಚೀನಾ ಕೂಡ ಬಹಳಷ್ಟು ಆರ್ಥಿಕವಾಗಿ ಕುಸಿದವು. ಹಿಂದೆಲ್ಲ ಅಮೆರಿಕ ತನ್ನ ಆರ್ಥಿಕತೆ ಹದಗೆಟ್ಟಾಗ ಬೇರೆ ದೇಶಗಳ ಮೇಲೆ ಯುದ್ಧ ಸಾರಿ ತನ್ನ ಜನರ ಗಮನವನ್ನ ಪೂರ್ಣವಾಗಿ ಯುದ್ಧದ ಕಡೆಗೆ ಸೆಳೆಯುತ್ತಿತ್ತು. ಇಂತಹ ಚಾಣಕ್ಯ ನಡೆಯಿಂದ ಅದು ಸಮಯವನ್ನ ಗಳಿಸಿ, ಹಳಿ ತಪ್ಪಿದ ತನ್ನ ಆರ್ಥಿಕತೆಯನ್ನ ದಾರಿಗೆ ತರುವ ಪ್ರಯತ್ನ ಮಾಡುತ್ತಿತ್ತು. ಅಂದಿಗೆ ಇದು ಕಾನ್ಸ್ಪಿರೆಸಿ ಥಿಯರಿ ಅನ್ನಿಸಿತ್ತು. ಇಂದಿಗೆ ಇದು ಸತ್ಯ ಎನ್ನುವುದು ಜಗಜ್ಜಾಹೀರಾಗಿದೆ.

ಚೀನಾ, ಜಗತ್ತನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಡಲು ಬಯಾಲಾಜಿಕಲ್ ವೆಪನ್ಸ್ ಅನ್ನು ತಯಾರಿಸುತ್ತಲೇ ಇರುತ್ತದೆ, ಕರೋನ ಕೂಡ ಅಂಥಹದ್ದೇ ಒಂದು ಅಸ್ತ್ರ. ಚೀನಾದ ಆರ್ಥಿಕತೆ ಹಳ್ಳ ಹಿಡಿದಿದೆ. ಹೀಗಾಗಿ ಬೇಕಂತಲೆ ಕರೋನ ವೈರಸ್ ಅನ್ನು ಬಿಟ್ಟಿದ್ದಾರೆ. ಇದು ಜಗತ್ತಿನ ಮತ್ತು ತನ್ನ ದೇಶದ ಜನರ ಗಮನವನ್ನ ಆರ್ಥಿಕತೆಯಿಂದ ದೂರ ಕರೆದುಕೊಂಡು ಹೋಗುವ ಉದ್ದೇಶದಿಂದ ಮಾಡಿದ್ದಾರೆ ಎನ್ನುವ ಒಂದು  ಕಾನ್ಸ್ಪಿರೆಸಿ ಥಿಯರಿ ಚೀನಾದ ಬಗ್ಗೆ ಹಬ್ಬಿದೆ.  

ಥಿಯರಿಗಳು ಸಾವಿರ ಹೇಳಲಿ, ಹೇಳುವ ಮತ್ತು ಅದನ್ನ ಹೆಚ್ಚುಹೆಚ್ಚು ಹಂಚುವ ಮತ್ತು ಅದನ್ನ ನಿಜವೆಂದು ನಂಬುವಂತೆ ಮಾಡುವ ಹುನ್ನಾರಗಳು ನಡೆಯುತ್ತಲೆ ಇರುತ್ತವೆ. ಇದನ್ನ ಸತ್ಯವೆಂದು ಜನರನ್ನ ನಂಬಿಸಲು ಅಮೆರಿಕನ್ನರು ಅಂದಿಗೆ, ಚೀನಿಯರು ಇಂದಿಗೆ ಮಾಡಿದ ಪ್ರಯತ್ನಗಳನ್ನು ಎಳೆಎಳೆಯಾಗಿ ಬಿಡಿಸಿ ನೋಡಿದರೆ ಇದೊಂದು ವ್ಯವಸ್ಥಿತ ಸಂಚು ಎನ್ನುವುದು ಗೊತ್ತಾಗುತ್ತದೆ. ಅಮೆರಿಕದ ವಿಷಯದಲ್ಲಿ ಇದು ಇಂದು ಎಲ್ಲರಿಗೂ ತಿಳಿದೇ ಇದೆ. ಕರೋನ ವಿಷಯದಲ್ಲಿ ಚೀನಾ ಇದೇ ಹಾದಿಯಲ್ಲಿದೆ. ಹೇಗೆ ಎನ್ನುವುದನ್ನು ನೋಡೋಣ. 

  1. ಈ ಲೇಖನ ಬರೆಯುತ್ತಿರುವಾಗ (19/೦2/2020) ಜಗತ್ತಿನಾದ್ಯಂತ ಕರೋನ ವೈರಸ್ ನಿಂದ ಸೋಂಕಿಗೆ ತುತ್ತಾಗಿರುವವರ ಸಂಖ್ಯೆ 75 ಸಾವಿರ ಎನ್ನುತ್ತದೆ ಅಂಕಿ-ಅಂಶ. ಗಮನಿಸಿ ಜಗತ್ತಿನ ಒಟ್ಟು ಜನಸಂಖ್ಯೆ ಹತ್ತಿರಹತ್ತಿರ 750 ಕೋಟಿ! 75 ಸಾವಿರವನ್ನ 750 ಕೋಟಿಯಿಂದ ಭಾಗಿಸಿದರೆ ಸಿಗುವ ಭಾಗಲಬ್ಧ ಎಷ್ಟು? ಅದು ನಗಣ್ಯ. ಇದನ್ನ ಜಾಗತಿಕ ಸಮಸ್ಯೆ ಎನ್ನುವಂತೆ ಬಿಂಬಿಸಲಾಗುತ್ತಿದೆ. 
  2. ಹೀಗೆ ಸೋಂಕಿಗೆ ತುತ್ತಾಗಿ ಸತ್ತವರ ಸಂಖ್ಯೆ 2 ಸಾವಿರ. ಇದನ್ನ ನಮ್ಮ ಜಗತ್ತಿನ ಜನಸಂಖ್ಯೆಗೆ ಹೋಲಿಸಿದರೆ ಎಷ್ಟು ಪ್ರತಿಶತ ಎನ್ನುವುದನ್ನ ಕಷ್ಟಪಟ್ಟು ಹೇಳಬೇಕು..., ಅಷ್ಟು ಸಣ್ಣ ಸಂಖ್ಯೆಯದು. ಜಗತ್ತಿನಾದ್ಯಂತ ಪ್ರತಿ ದಿನ ರಸ್ತೆ ಅಪಘಾತದಲ್ಲಿ ಮೂರುವರೆ ಸಾವಿರ ಜನ ಸಾಯುತ್ತಾರೆ ಎನ್ನುತ್ತದೆ ಅಂಕಿ-ಅಂಶ. ಕರೋನ ವೈರಸ್ ನಿಂದ ಸತ್ತವರ ಸಂಖ್ಯೆ ಇಲ್ಲಿಯವರೆಗೆ ಎರಡುಸಾವಿರ ಮಾತ್ರ!
  3. ಜಪಾನಿನಲ್ಲಿ ಹೊಸ 7 ಜನರಿಗೆ ಈ ವೈರಸ್ ತಗುಲಿದೆ, ಮುನ್ನೂರು ಜನ ಅಮೆರಿಕನ್ ಪ್ರಜೆಗಳಿಗೆ ಸೋಂಕು ತಗುಲಿದೆ ಎನ್ನುವ ತಲೆಬರಹಗಳು ಎಲ್ಲೆಡೆ ರಾರಾಜಿಸುತ್ತಿವೆ. ಪ್ರಿಂಟ್ ಮೀಡಿಯಾಗಳು ಮತ್ತು ಡಿಜಿಟಲ್ ಮೀಡಿಯಾಗಳು ಜಿದ್ದಿಗೆ ಬಿದ್ದವರಂತೆ ಜಗತ್ತು ಕೊನೆಯಾಗುತ್ತದೆ ಎನ್ನುವಂತೆ ಈ ವಿಷಯಗಳನ್ನ ವೈಭವೀಕರಿಸಿ ತೋರಿಸುತ್ತಿವೆ. 
  4. ಚೀನಾ ದೇಶ, ಕರೋನ ವೈರಸ್ ಸೋಂಕಿಗೆ ತುತ್ತಾದ ರೋಗಿಗಳಿಗೆ ಸೇವೆ ನೀಡುತ್ತಾ ಸತ್ತ ಯಾವುದೆ ವೈದ್ಯ ಅಥವಾ ಆಸ್ಪತ್ರೆ ಸಿಬ್ಬಂದಿಯನ್ನ 'ಹುತಾತ್ಮ' ಎಂದು ಪರಿಗಣಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ.

ಮೇಲಿನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ. ಕರೋನ ವೈರಸ್ ಪಿಡುಗು ಅಂಕಿ ಸಂಖ್ಯೆಯ ಲೆಕ್ಕದಲ್ಲಿ ಲೆಕ್ಕವೇ ಅಲ್ಲ! ಆದರೆ ಅದರ ಅಬ್ಬರ, ಜನ ಮನದಲ್ಲಿ ಅದರ ಬಗ್ಗೆ ಎಷ್ಟು ಭಯ ಹುಟ್ಟು ಹಾಕಿದ್ದಾರೆ ಎಂದರೆ ಅದು ನಿಜಕ್ಕೂ ದೊಡ್ಡ ಲೆಕ್ಕ!! ಹೀಗೆ ಇದನ್ನ ಲೆಕ್ಕಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬಿಂಬಿಸಲು ಪ್ರಮುಖ ಕಾರಣ ಜನರ ಏಕಾಗ್ರತೆಯನ್ನ ಬೇರೆಡೆ ಸೆಳೆಯುವುದು, ತನ್ಮೂಲಕ ಸಮಯವನ್ನ ಗಳಿಸಿ ಹಾದಿ ತಪ್ಪಿದ ತನ್ನ ಆರ್ಥಿಕತೆಯನ್ನ ಸರಿಪಡಿಸಿಕೊಳ್ಳಲು ಪ್ರಯತ್ನಿಸುವುದು. ಹಾಗೊಮ್ಮೆ ಜನ ಇದರಿಂದ ವಿಚಲಿತರಾಗಿಲ್ಲ ಎಂದರೆ ಕರೋನ ಖಂಡಿತ ಮತ್ತಷ್ಟು ಉಗ್ರ ರೂಪ ತಾಳುತ್ತದೆ. 

ಇವೆಲ್ಲಾ ಒಂದೆಡೆ ಮಾಹಿತಿಗಾಗಿ ಹೇಳಿದ್ದಾಯ್ತು. ನಿಜವಾಗಿ ಈ ಕರೋನ ವೈರಸ್ ನಿಂದಾಗಿ ಚೀನಾ ತನ್ನ ಉದ್ದೇಶದಲ್ಲಿ ಸಫಲವಾಗಿದೆಯೆ? ಎನ್ನುವ ಪ್ರಶ್ನೆಗೆ ಉತ್ತರ ಹೌದು ಎಂದು ನೀಡಬೇಕಾಗುತ್ತದೆ. ಹೇಗೆ? ಏನು? ಎನ್ನುವುದನ್ನ ತಿಳಿಯುವ ಪ್ರಯತ್ನ ಮಾಡೋಣ. 

  1. ಎಲ್ಲಕ್ಕೂ ಮೊದಲಿಗೆ ಜಗತ್ತಿನಲ್ಲಿ 100 ಗೃಹಪಯೋಗಿ ವಸ್ತುಗಳಿವೆ ಎಂದುಕೊಂಡರೆ ಅದರಲ್ಲಿ 35 ಚೀನಾ ದೇಶ ಉತ್ಪಾದಿಸುತ್ತಿದೆ. 
  2. ಹೈ-ಟೆಕ್ ಗೂಡ್ಸ್ ಗಳ ವಿಷಯದಲ್ಲೂ ಹೀಗೆ. ನೂರರಲ್ಲಿ ನಲವತ್ತಾರು ಚೀನಾ ದೇಶ ತಯಾರು ಮಾಡುತ್ತಿದೆ. 
  3. ಇನ್ನು ಟೆಕ್ಸ್ ಟೈಲ್, ಉಡುಪು ಉತ್ಪಾದನೆಯಲ್ಲಿ ಜಗತ್ತಿನ ಅರ್ಧಕ್ಕೂ ಹೆಚ್ಚು ಉಡುಪು ಉತ್ಪಾದನೆ ಚೀನಾದಲ್ಲಿ ಆಗುತ್ತಿದೆ. ನೂರರಲ್ಲಿ 54 ಪ್ರತಿಶತ ಉಡುಪುಗಳು ಮೇಡ್ ಇನ್ ಚೀನಾ!
  4. ಕೈಗಾರಿಕಾ ವಲಯದಲ್ಲಿ ಬಳಸುವ 38 ಪ್ರತಿಶತ ಮೆಷಿನರಿಗಳು ಚೀನಾದಿಂದ ಬರುತ್ತಿವೆ. ಆಟೋಮೊಬೈಲ್ ಇಂಡಸ್ಟ್ರಿ ಕೂಡ ಚೀನಾದ ಅಣತಿಯಿಲ್ಲದೆ ಅಲುಗಾಡುವಂತಿಲ್ಲ. 
  5. ಪ್ಲಾಸ್ಟಿಕ್, ರಬ್ಬರ್, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಉತ್ಪನ್ನಗಳು ಹೀಗೆ ಜಗತ್ತಿನಲ್ಲಿ ಇಂದು ಬಳಕೆಯಲ್ಲಿರುವ ಬಹುತೇಕ ಉತ್ಪನ್ನಗಳ 3೦ ರಿಂದ 4೦ ಪ್ರತಿಶತ ತಯಾರಿಸುವುದು ಚೀನಾ!! 

ಚೀನಾದಲ್ಲಿ ವುಹಾನ್ ಎನ್ನುವ ನಗರವಿದೆ. ಈ ನಗರದಲ್ಲಿ ಒಂದು ಕೋಟಿ ಮೀರಿದ ಜನಸಂಖ್ಯೆಯಿದೆ. ಈ ನಗರ ಒಂದರಿಂದ ಚೀನಾ ದೇಶದ 16 ಪ್ರತಿಶತ ಜಿಡಿಪಿ ಉತ್ಪಾದನೆಯಾಗುತ್ತಿದೆ. 3೦೦ಕ್ಕೂ ಹೆಚ್ಚು ಫಾರ್ಚುನ್ ಫೈವ್ ಹಂಡ್ರೆಡ್ ಕಂಪನಿಗಳು ಇಲ್ಲಿ ತಮ್ಮ ನೆಲೆಯನ್ನ ಕಂಡುಕೊಂಡಿವೆ. ಇಲ್ಲಿ ಚೀನಾ ಸರಕಾರ ಪಬ್ಲಿಕ್ ಟ್ರಾನ್ಸ್ಪೋರ್ಟ್ ತಾತ್ಕಾಲಿಕವಾಗಿ ನಿಲ್ಲಿಸಿದೆ. ಹೆಚ್ಚಿನ ರಜಾ ದಿನವನ್ನ ಘೋಷಿಸಿದೆ. ಎಲ್ಲಕ್ಕೂ ಮುಖ್ಯವಾಗಿ 2020 ರ ಪ್ರಥಮ ತ್ರೈಮಾಸಿಕದಲ್ಲಿ 15 ಪ್ರತಿಶತ ಉತ್ಪಾದನೆಯನ್ನ ಕಡಿತಗೊಳಿಸುವುದಾಗಿ ಹೇಳಿದೆ. 

ಗಮನಿಸಿ ಚೀನಾ ಹೇಳಿ ಕೇಳಿ ಜಗತ್ತಿನ ಕಾರ್ಖಾನೆಯಂತೆ ದಶಕಗಳಿಂದ ದುಡಿದು ಅತ್ಯಂತ ಕಡಿಮೆ ಬೆಲೆಯಲ್ಲಿ ತನ್ನ ಉತ್ಪನ್ನಗಳನ್ನ ಮಾರಿ, ಇಡಿ ಜಗತ್ತನ್ನ ತನ್ನ ಮೇಲೆ ಅವಲಂಬಿಸುವಂತೆ ಮಾಡಿತು. ಚೀನಾ ದೀರ್ಘಕಾಲದ ನಿಖರ ಧ್ಯೇಯ ಇಟ್ಟು ಕೊಂಡು ಕೆಲಸ ಮಾಡಿದ್ದರ ಫಲ ಇಂದು ಅದು ತನ್ನ ಉತ್ಪಾದನೆಯನ್ನ ಕಡಿಮೆ ಮಾಡಿದರೆ ಸಾಕು ಜಗತ್ತಿನ ಎಲ್ಲಾ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಹೊಡೆತ ಬೀಳುತ್ತದೆ. ಇಲ್ಲಿ ಬಹುಮುಖ್ಯವಾಗಿ ಕೆಲಸ ಮಾಡುವುದು ಸಪ್ಲೈ ಚೈನ್ ಚೀನಾ ತನಗೆ ಬೇಕಾಗ ಹಾಗೆ ಇದನ್ನ ನಿಯಂತ್ರಿಸುವ ಶಕ್ತಿ ಮತ್ತು ಸಾಮರ್ಥ್ಯ ಹೊಂದಿದೆ. 

ಕೊನೆ ಮಾತು: ಸಿಂಧಿಗಳು ಮತ್ತು ಗುಜರಾತಿಗಳು ಮೂಲತಃ ವ್ಯಾಪಾರಿಗಳು. ಇವರದ್ದು ಮುಕ್ಕಾಲು ಪಾಲು ಕುಟುಂಬ ವ್ಯವಹಾರ. ಸಂಸ್ಥೆ ಎಷ್ಟೇ ದೊಡ್ಡದಾಗಿ ಬೆಳೆದರೂ ಅದು ಕುಟುಂಬದ ನಿಯಂತ್ರಣದಲ್ಲೆ ಇರುತ್ತದೆ. ಈ ಜನರು ಯಾವುದೇ ಕೆಲಸಕ್ಕೆ ಒಬ್ಬರನ್ನ ಅವಲಂಬಿಸುವುದಿಲ್ಲ. ಪರ್ಯಾಯವಾಗಿ ಇನ್ನೊಬ್ಬನನ್ನ ತಯಾರು ಮಾಡಿರುತ್ತಾರೆ. ಜಗತ್ತು ಈ ವ್ಯಾಪಾರಿ ಮನೆತನದ ಸೂತ್ರವನ್ನ ಅನುಸರಿಸಿದ್ದರೆ ಇಂದು ಚೀನಾದ ಕಪಿಮುಷ್ಠಿಯಲ್ಲಿ ಜಗತ್ತು ನಲುಗಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ ಕಾಕತಾಳೀಯ ಅನ್ನಿ ಅಥವಾ ಏನೇ ಅನ್ನಿ ಗುಜರಾತಿನ ಒಂದು ನಗರ ಸೂರತ್ ಡೈಮಂಡ್ ಇಂಡಸ್ಟ್ರಿಗೆ ಪ್ರಸಿದ್ಧಿ. ಹಾಂಗ್ ಕಾಂಗ್ ಇವರ ಪ್ರಮುಖ ಗ್ರಾಹಕ. ಕರೋನ ವೈರಸ್ ಸಲುವಾಗಿ ಹಾಂಗ್ ಕಾಂಗ್ ನಿದ್ದೆ ಮಾಡುತ್ತಿದೆ. ಹೀಗಾಗಿ ಸೂರತ್ 8 ಸಾವಿರ ಕೋಟಿ ವ್ಯಾಪಾರ ಕಳೆದುಕೊಳ್ಳುವ ಭೀತಿಯಲ್ಲಿದೆ. ಜಗತ್ತಿನಾದ್ಯಂತ ಒಂದು ಸಣ್ಣ ವೈರಸ್ ಸಾವಿರಾರು ಕೋಟಿ ರೂಪಾಯಿ ವ್ಯಾಪಾರವನ್ನ ನುಂಗಿದೆ ಎಂದರೆ ಅದರ ಹಿಂದಿನ ತಲೆಗಳ ತಾಕತ್ತು ಎಷ್ಟಿರಬಹುದು? ಎನ್ನುವ ಅಂದಾಜು ನಿಮ್ಮದಾಗುತ್ತದೆ. ಸದ್ಯದ ಮಟ್ಟಿಗೆ ಚೀನಾ ಜಗತ್ತನ್ನ ತನ್ನ ಕಿರು ಬೆರಳಲ್ಲಿ ಆಡಿಸುತ್ತಿದೆ. ವಿರೋಧಿಸಿದರೆ ಕರೋನ ವೈರಸ್ ಇದ್ದೇ ಇದೆಯಲ್ಲ...!!  

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com