ಭಾರತ-ಅಮೆರಿಕಾ ವಾಣಿಜ್ಯ ಒಪ್ಪಂದ: ಅಡ್ವಾಂಟೇಜ್ ಇಂಡಿಯ! 

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ಭಾರತ-ಅಮೆರಿಕಾ ವಾಣಿಜ್ಯ ಒಪ್ಪಂದ :ಅಡ್ವಾಂಟೇಜ್ ಇಂಡಿಯ!
ಭಾರತ-ಅಮೆರಿಕಾ ವಾಣಿಜ್ಯ ಒಪ್ಪಂದ :ಅಡ್ವಾಂಟೇಜ್ ಇಂಡಿಯ!

ನಿನ್ನೆ ನನ್ನ ಹಳೆಯ ಸ್ನೇಹಿತನೊಬ್ಬನಿಗೆ ಸುಮ್ಮನೆ ಕರೆ ಮಾಡಿದ್ದೆ. ಹೆಚ್ಚಿನ ವಿಶೇಷವೇನೂ ಇರಲಿಲ್ಲ. ಎಲ್ಲವೂ ಸರಿಯಾಗಿ ನಡೆಯುತ್ತಿದೆಯೇ? ಎಂದು ಕೇಳುವುದಷ್ಟೇ ಉದ್ದೇಶವಾಗಿತ್ತು. ಎರಡು ನಿಮಿಷ ಮೀರಿದ ಮಾತುಕತೆಯಲ್ಲಿ ಆತ ಐದು ಬಾರಿ ಇನ್ನೇನು ಸಮಾಚಾರ ಎಂದು ಕೇಳಿದ. ಏನಿಲ್ಲ ಸುಮ್ಮನೆ ನಿನ್ನ ವಿಚಾರಿಸಿಕೊಳ್ಳಲು ಫೋನ್ ಮಾಡಿದ್ದೆ ಎಂದರೆ ಆತನಿಗೆ ನಂಬಿಕೆ ಬಂದಂತೆ ಕಾಣಲಿಲ್ಲ. ಕೊನೆಗೂ ಎರಡು ನಿಮಿಷದೊಳಗೆ ಫೋನ್ ಕಟ್ ಮಾಡಿದ್ದಾಯ್ತು. 

ಇದನ್ನ ಇಲ್ಲಿ ಉಲ್ಲೇಖಿಸುವ ಉದ್ದೇಶವೇನು? ಇಂದು ಮಹಾನಗರಗಳಲ್ಲಿ ಜನರಿಗೆ ಪುರುಸೊತ್ತು ಇಲ್ಲ. ಚೆನ್ನಾಗಿದ್ದೀಯಾ ಎಂದು ಕೇಳಲು ಕರೆ ಮಾಡಿದ್ದಾರೆ ಎಂದರೆ ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಎಲ್ಲರಿಗೂ ಏನಾದರೊಂದು ಕೆಲಸ ಆಗಬೇಕಿರುತ್ತದೆ. ಅವಾಗ ಮಾತ್ರ ಇತರರ ನೆನಪಾಗುತ್ತೆ. ಮತ್ತು ಆಗ ಮಾತ್ರ ಫೋನ್ ಕಾಲ್ ಮಾಡುತ್ತಾರೆ. ಇದು ಯಾರನ್ನೂ ಹಂಗಿಸುವ ಉದ್ದೇಶದಿಂದ ಬರೆದದ್ದಲ್ಲ. ಬದಲಿಗೆ ಇಂದಿನ ಸಮಾಜ ಇರುವುದೇ ಹೀಗೆ ಎನ್ನುವುದನ್ನ ತಿಳಿಸುವುದಕ್ಕೆ, ಜನ ಸಾಮಾನ್ಯರ ಮಟ್ಟದಲ್ಲಿ, ಬದುಕಿನಲ್ಲಿ ಇಂತಹ ಬದಲಾವಣೆ ಆಗಿರುವಾಗ ಇನ್ನು ಜಗತ್ತಿನ ದೇಶಗಳ ಹಣಕಾಸು ಸ್ಥಿತಿ ಬದಲಾಗದೆ ಉಳಿದಿದೆಯೇ? ಇಂದು ಒಂದು ದೇಶ ಇನ್ನೊಂದು ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದರೆ ಅದರ ಹಿಂದೆ ವಾಣಿಜ್ಯ ಉದ್ದೇಶ ಇದ್ದೇ ಇರುತ್ತದೆ. ಇದರಲ್ಲಿ ಯಾವ ಸಂಶಯ ಬೇಡ. 

ಕಳೆದ ಐದಾರು ವರ್ಷದಲ್ಲಿ ಜಗತ್ತು ಬಹಳ ಬದಲಾವಣೆ ಹೊಂದಿದೆ. ಒಂದು ದೇಶದ ಮೇಲೆ ಇತರ ದೇಶಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಚೀನಾ ದೇಶ ಅಮೆರಿಕಾ ದೇಶದೊಂದಿಗೆ ಟ್ರೇಡ್ ವಾರ್ ಗೆ ಇಳಿದ ನಂತರ ಮತ್ತು ಇತ್ತೀಚಿನ ಕರೋನ ವೈರಸ್ ನಂತರ ಜಗತ್ತಿನ ದೇಶಗಳಿಗೆ ಚೀನಾ ದೇಶವೊಂದರ ಮೇಲೆ ಅವಲಂಬನೆ ’ಘಾತಕ’ಕಾರಿಯಾಗಬಹುದು ಎನ್ನುವ ಅರಿವಾಗಿದೆ. ಕರೋನ ವೈರಸ್ ಗೆ ಮುಂಚೆಯೇ ಯೂರೋಪಿಯನ್ ಯೂನಿಯನ್ ಮತ್ತು ಅಮೇರಿಕ ಮತ್ತಿತರ ದೇಶಗಳು ಚೀನಾ ಪ್ಲಸ್ ಒನ್ ಎನ್ನುವ ನೀತಿಯನ್ನ ತಮ್ಮದಾಗಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದವು. ಚೀನಾ ಪ್ಲಸ್ ಒನ್ ಅಂದರೆ, ತತ್ಕಾಲಕ್ಕೆ ಚೀನಾದೊಂದಿಗೆ ವ್ಯಾಪಾರವನ್ನ ಒಮ್ಮೆಲೇ ಕಡಿತಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಚೀನಾದ ಜೊತೆಗೆ ವ್ಯಾಪಾರ ಮಾಡುತ್ತಾ ಇನ್ನೊಂದು ನಂಬಲರ್ಹ ದೇಶದೊಂದಿಗೆ ವ್ಯಾಪಾರ ಹೆಚ್ಚಿಸಿಕೊಳ್ಳುವುದು. ಪ್ಲಸ್ ಒನ್ ಜಾಗವನ್ನ ಜಗತ್ತಿನಲ್ಲಿ ಭಾರತಕ್ಕಿಂತ ಸಮರ್ಥವಾಗಿ ತುಂಬುವ ದೇಶ ಸದ್ಯದ ಮಟ್ಟಿಗೆ ಯಾವುದೂ ಇಲ್ಲ. 

ಒಂದು ದೇಶ ಇನ್ನೊಂದು ದೇಶದೊಂದಿಗೆ ಮಾಡುವ ವ್ಯಾಪಾರ ವಹಿವಾಟಿಗೆ ಟ್ರೇಡ್ ಎನ್ನುತ್ತೇವೆ. ಹಾಗೆಯೇ ಭಾರತದಿಂದ ಬೇರೆ ದೇಶಕ್ಕೆ ಕಳಿಸಿದ ಉತ್ಪನ್ನಗಳನ್ನ ರಫ್ತು ಎನ್ನುತ್ತೇವೆ. ಬೇರೆ ದೇಶದಿಂದ ನಮಗೆ ಬೇಕಾದ ಉತ್ಪನ್ನಗಳನ್ನ ತರಿಸಿಕೊಂಡರೆ ಅದನ್ನ ಆಮದು ಎನ್ನುತ್ತೇವೆ. ಅಲ್ಲದೆ ನಮ್ಮ ಆಮದು ಮತ್ತು ರಫ್ತು ಸಮವಾಗಿದ್ದರೆ ಅದನ್ನ ಟ್ರೇಡ್ ಬ್ಯಾಲೆನ್ಸ್ ಎಂದು ಅಥವಾ ಟ್ರೇಡ್ ಈಕ್ವಲ್ ಎಂದು ಕರೆಯುತ್ತೇವೆ. ರಫ್ತು ಹೆಚ್ಚಾಗಿದ್ದು ಆಮದು ಕಡಿಮೆಯಿದ್ದರೆ ಅದನ್ನ ಟ್ರೇಡ್ ಸರ್ಪ್ಲಸ್ ಎನ್ನುತ್ತಾರೆ. ಆಮದು ಹೆಚ್ಚಾಗಿದ್ದು ರಫ್ತು ಕಡಿಮೆಯಿದ್ದರೆ ಅದನ್ನ ಟ್ರೇಡ್ ಡೆಫಿಸಿಟ್ ಎನ್ನುತ್ತಾರೆ.  ಉದಾಹರಣೆಗೆ ಭಾರತದಿಂದ ಅಮೇರಿಕ ದೇಶಕ್ಕೆ ಕಳಿಸಿದ ವಸ್ತು 100, ಮತ್ತು ತರಿಸಿಕೊಂಡ ವಸ್ತು 100 ಎಂದುಕೊಂಡರೆ ಅದನ್ನ ಟ್ರೇಡ್ ಬ್ಯಾಲೆನ್ಸ್ ಎನ್ನಬಹುದು. ಅಮೆರಿಕಕ್ಕೆ ಕಳಿಸದ ವಸ್ತುವಿನ ಮೌಲ್ಯ 100 ಮತ್ತು ಅಲ್ಲಿಂದ ತರಿಸಿಕೊಂಡ ವಸ್ತುವಿನ ಮೌಲ್ಯ 80 ಇದ್ದರೆ ಉಳಿದ 20 ಟ್ರೇಡ್ ಸರ್ಪ್ಲಸ್ ಎನಿಸಿಕೊಳ್ಳುತ್ತದೆ. ಅದೇ ಆಮದು 1೦೦ ಇದ್ದು ರಫ್ತು 70 ಇದ್ದರೆ ಉಳಿದ 30 ಟ್ರೇಡ್ ಡೆಫಿಸಿಟ್ ಎನ್ನಿಸಿಕೊಳ್ಳುತ್ತದೆ. ಸರಳವಾಗಿ ಹೇಳಬೇಕೆಂದರೆ ಯಾವುದೇ ದೇಶ ತನ್ನ ಸರಕನ್ನ ಹೆಚ್ಚು ಮಾರಲು ಬಯಸುತ್ತದೆ. ಏನಿಲ್ಲವೆಂದರೂ ಟ್ರೇಡ್ ಬ್ಯಾಲೆನ್ಸ್ ಮಾಡಲಂತೂ ಪ್ರಯತ್ನಿಸುತ್ತದೆ. ಟ್ರೇಡ್ ಡೆಫಿಸಿಟ್ ಯಾವ ದೇಶಕ್ಕೂ ಒಳ್ಳೆಯದಲ್ಲ. 

ಇವತ್ತೇನಾಗಿದೆ ಗೊತ್ತಾ? ಭಾರತ ಅಮೇರಿಕ ದೇಶದ ಜೋತೆಗಿನ ವಾಣಿಜ್ಯ ಸಂಬಂಧದಲ್ಲಿ ಸರ್ಪ್ಲಸ್ ನಲ್ಲಿದೆ. 2018-19 ರ ಅಂಕಿ-ಅಂಶದ ಪ್ರಕಾರ ಭಾರತ 16. 85 ಬಿಲಿಯನ್ ಅಮೆರಿಕನ್ ಡಾಲರ್ ಸರ್ಪ್ಲಸ್ ಹೊಂದಿತ್ತು. ಇತ್ತೀಚಿನ ಅಂಕಿ-ಅಂಶಗಳು ಅಂದರೆ 2019-20 ರ ಸಂಖ್ಯೆಗಳು ಬರಬೇಕಿದೆ ಆದರೆ ಟ್ರೆಂಡ್ ಪ್ರಕಾರ ಭಾರತ ತನ್ನ ಸರ್ಪ್ಲಸ್ ಅನ್ನು ಮುಂದುವರಿಸಿಕೊಂಡು ಹೋಗಲಿದೆ. ಇವೆರಡು ದೇಶದ ಮಧ್ಯದ ಒಟ್ಟು ವಾಣಿಜ್ಯ ಮೌಲ್ಯ 88ಬಿಲಿಯನ್ ದಾಟಿದೆ . 2020ರ ಪ್ರಕಾರ ಇವೆರೆಡು ದೇಶದ ವಹಿವಾಟು 68 ಬಿಲಿಯನ್ ಡಾಲರ್ ಮುಟ್ಟಿದೆ. ಇದು ಚೀನಾದ 65 ಬಿಲಿಯನ್ ನ್ನು ಮೀರಿಸಿ ಹೊಸ ಭಾಷ್ಯ ಬರೆದಿದೆ. 

ಗಮನಿಸಿ ಟ್ರಂಪ್ ಅವರು ಭಾರತದಲ್ಲಿ ಹೊಸ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಲು ಬಂದಿದ್ದರು. ಅವರು ಬಂದಿದ್ದ ಈ ಸಮಯದಲ್ಲಿ ಜಗತ್ತಿನಲ್ಲಿ ಎರಡು ಬಹುದೊಡ್ಡ ಬದಲಾವಣೆಯಾಗಿದೆ. 

  1. ಚೀನಾ ಅಮೇರಿಕ ದೇಶದೊಂದಿಗಿನ ಟ್ರೇಡ್ ವಾರ್ ನಿಂದ ಸಾಕಷ್ಟು ಮೆತ್ತಗಾಗಿದೆ. ಅದರ ಅಭಿವೃದ್ಧಿ ಓಟ ಬಹಳ ಕುಂಠಿತಗೊಂಡಿದೆ.  ಜೊತೆಗೆ ಇತ್ತೀಚಿನ ಕರೋನ ವೈರಸ್ ಅದರ ಉತ್ಪನ್ನಗಳ ತಯಾರಿಸುವ ವೇಗವನ್ನ ಇನ್ನಷ್ಟು ಕುಸಿಯುವಂತೆ ಮಾಡಿದೆ. ಇದರಿಂದ  ಚೀನಾ ಪ್ಲಸ್ ಒನ್ ಎನ್ನುವ ನೀತಿಯನ್ನ ಜಗತ್ತು ಅಳವಡಿಸಿಕೊಳ್ಳಲು ಉತ್ಸುಕವಾಗಿದೆ.
  2. ಬ್ರೆಕ್ಸಿಟ್ ನಂತರ ಬ್ರಿಟನ್ ಅದರ ಜೊತೆಗೆ ಯೂರೋಪಿಯನ್ ಯೂನಿಯನ್ ಕೂಡ ಯಾವುದೇ ವಿಷಯದಲ್ಲೂ ಕುಳಿತು ಚೌಕಾಸಿ ಮಾಡುವ ತಾಕತ್ತು ಉಳಿಸಿಕೊಂಡಿಲ್ಲ. ಭಾರತ-ಚೀನಾ ವ್ಯಾಪಾರಕ್ಕಿಂತ ಈ ವರ್ಷ ಭಾರತ-ಅಮೇರಿಕಾ ವ್ಯಾಪಾರ ಹೆಚ್ಚಾಗಿದೆ. ಅಂದರೆ ಎಲ್ಲಾ ತರದಲ್ಲೂ ಚೀನಾ ಕುಸಿಯುತ್ತಿರುವ ಸಂದರ್ಭದಲ್ಲಿ ಅಮೇರಿಕ ಭಾರತದೊಂದಿಗೆ ಕೈ ಜೋಡಿಸಲು ಬಂದಿದೆ. ಬ್ರಿಟನ್ ಆಫ್ರಿಕನ್ ದೇಶಗಳ ಕಡೆ ಮುಖ ಮಾಡಿದೆ . 

ಇದರಿಂದ ಒಂದಂಶವಂತೂ ಸ್ಪಷ್ಟ, ಇಂದು ಭಾರತ ಅಮೆರಿಕದ ಜೊತೆಗೆ ವ್ಯಾಪಾರ ಬಯಸುವುದಕ್ಕಿಂತ ಒಂದು ಪ್ರತಿಶತ ಹೆಚ್ಚು ಅಮೇರಿಕ ಬಯಸುತ್ತದೆ.

ಹಾಗೆ ನೋಡಲು ಹೋದರೆ ಭಾರತ ಕೂಡ ಅಮೇರಿಕ ದೇಶದೊಂದಿಗೆ ಟ್ರೇಡ್ ವಾರ್ ನಲ್ಲಿ ತೊಡಗಿಸಿಕೊಂಡಿತ್ತು. ಅಮೇರಿಕ ಭಾರತದ ಹಲವಾರು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದಾಗ ಭಾರತ ಕೂಡ ತಕ್ಷಣ ಅದಕ್ಕೆ ಪ್ರತಿಕ್ರಿಯೆ ನೀಡಿತ್ತು. ಅಲ್ಲದೆ ಸದ್ಯದ ಮಟ್ಟಿಗೆ ಅಮೇರಿಕ ಭಾರತದ ಕೃಷಿ ವಲಯ ಮತ್ತು ಹೈನುಗಾರಿಕೆಯಲ್ಲಿ ವ್ಯಾಪಾರ ಕೇಳುತ್ತಿದೆ. ಭಾರತದ ಅರ್ಧಕ್ಕೂ ಹೆಚ್ಚು ಜನಸಂಖ್ಯೆ ಕೃಷಿ ಮತ್ತು ಹೈಗಾರಿಕೆಯ ಮೇಲೆ ಅವಲಂಬಿತ. ಹೀಗಾಗಿ ಮೋದಿಯವರು ಅಷ್ಟು ಸುಲಭವಾಗಿ ಇದನ್ನ ಒಪ್ಪುವುದಿಲ್ಲ. ಅಲ್ಲದೆ ಉಳಿದ ಟ್ರೇಡ್ ಅಗ್ರಿಮೆಂಟ್ ಗಳಿಗೂ ಕೂಡ ಮೋದಿ  ಸುಮ್ಮನೆ ಸಹಿ ಮಾಡುವವರಲ್ಲ. ಇದನ್ನ ಅರಿತೆ ಟ್ರಂಪ್ ಮೋದಿಯನ್ನ ಟಫ್ ಗೈ, ಕಠಿಣ ಮನುಷ್ಯ ಎಂದಿರಬಹುದು. 

ಕೊನೆ ಮಾತು: ಅಮೆರಿಕಕ್ಕೆ ನಾವು ಡಿಫೆನ್ಸ್ ಡೀಲ್ ಕೊಡುತ್ತಿದ್ದೇವೆ ಅದಕ್ಕೆ ಆತ ಭಾರತಕ್ಕೆ ಬಂದಿದ್ದ, ಅಥವಾ ಅವರಿಗೆ ಹೆಚ್ಚು ಲಾಭ ಅದಕ್ಕೆ ಇಲ್ಲಿಗೆ ಬಂದಿದ್ದಾರೆ. ಅಲ್ಲಿ ಅವರು ಈ ವರ್ಷ ಚುನಾವಣೆ ಗೆಲ್ಲಬೇಕಿದೆ, ಅಲ್ಲಿನ ಭಾರತೀಯರ ಓಲೈಸಲು ಇಲ್ಲಿಗೆ ಬಂದಿದ್ದರು, ಎನ್ನುವ ಬಾಲಿಶ ಹೇಳಿಕೆಗಳನ್ನ ಬಿಟ್ಟು ದೂರದೃಷ್ಟಿ ಇಟ್ಟುಕೊಂಡು ನೋಡಿದರೆ ಭಾರತಕ್ಕೆ ಇದರಿಂದ ಹೆಚ್ಚು ಲಾಭ!. ಈ ಲಾಭ ಅಮೇರಿಕಾ ದೇಶದ ಜೊತೆಯ ಒಪ್ಪಂದದಿಂದ ಮಾತ್ರ ಆಗಬೇಕು ಅಂತಿಲ್ಲ.  ಚೀನಾ ಪ್ಲಸ್ ಒನ್ ನೀತಿಯ ಅಡಿಯಲ್ಲಿ ಮೊದಲು ಅಮೇರಿಕ ನಮ್ಮೊಂದಿಗೆ ಸಹಿ ಹಾಕಿದರೆ ಅದರ ಹಿಂದೆಯೇ, ಬ್ರಿಟನ್, ಯೂರೋಪಿಯನ್ ಯೂನಿಯನ್ ಗಳು ಬರುತ್ತವೆ ಇದರಲ್ಲಿ ಯಾವುದೇ ಅನುಮಾನವಿಲ್ಲ. ಇವತ್ತಿನ ಪರಿಸ್ಥಿತಿಯನ್ನ ನಮ್ಮ ಒಳಿತಿಗಾಗಿ ಸರಿಯಾಗಿ ಬಳಸಿಕೊಂಡರೆ ಚೀನಾ, ಅಮೆರಿಕಾ ಅಥವಾ ಬೇರಾವುದೇ ದೇಶ ಭಾರತದ ಪ್ರಗತಿಯ ಓಟವನ್ನ ತಡೆಯುವುದು ಸುಲಭ ಸಾಧ್ಯವಲ್ಲ.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com