ಎರಡು ಸಾವಿರದ ಇಪ್ಪತ್ತು, ಯಾವ ಹೂಡಿಕೆಯಲ್ಲಿಲ್ಲ ಆಪತ್ತು? 

ವರ್ಷದಿಂದ ವರ್ಷಕ್ಕೆ ಸಣ್ಣ ಉಳಿತಾಯದ ಮೇಲೂ ಕೂಡ ಬ್ಯಾಂಕ್ಗಳು ನೀಡುತ್ತಿದ್ದ ಬಡ್ಡಿಯ ದರ ಕುಸಿಯುತ್ತ ಬಂದಿದೆ. ಭಾರತದಂತ ದೊಡ್ಡ ದೇಶದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವರ ಸಂಖ್ಯೆ ಅತ್ಯಂತ ಕಡಿಮೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವರ್ಷದಿಂದ ವರ್ಷಕ್ಕೆ ಸಣ್ಣ ಉಳಿತಾಯದ ಮೇಲೂ ಕೂಡ ಬ್ಯಾಂಕ್ಗಳು ನೀಡುತ್ತಿದ್ದ ಬಡ್ಡಿಯ ದರ ಕುಸಿಯುತ್ತ ಬಂದಿದೆ. ಭಾರತದಂತಹ ದೊಡ್ಡ ದೇಶದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಅತ್ಯಂತ ಕಡಿಮೆ. ವಸ್ತು ಸ್ಥಿತಿ ಹೀಗಿರುವಾಗ ಸರಕಾರವನ್ನ ಅಥವಾ ಸನ್ನಿವೇಶವನ್ನ ಹಳಿಯುತ್ತ ಕೂರುವುದು ಪ್ರಶ್ನೆಗೆ ಸಮಾಧಾನವಲ್ಲ. ಷೇರು ಮಾರುಕಟ್ಟೆ ಗುಮ್ಮನೇನೂ ಅಲ್ಲ. ಅದರ ಬಗ್ಗೆ ಇರುವ ಜ್ಞಾನ ಕಡಿಮೆಯಿರುವುದರಿಂದ ಜನ ಸಾಮಾನ್ಯರಲ್ಲಿ ಅದು ನಮಗಲ್ಲ ಎನ್ನುವ ಒಂದು ಭಾವನೆ ಬಂದಿದೆ. ಹೀಗೆ ಹೇಳಿದ ಮಾತ್ರಕ್ಕೆ ಎಲ್ಲರೂ ಷೇರು ಮಾರುಕಟ್ಟೆಯಲ್ಲಿ ಹಣವನ್ನ ಹೂಡಬೇಕು ಎಂದರ್ಥವಲ್ಲ. ಆದರೆ ಜಗತ್ತು ಕಳೆದ ಐದು ವರ್ಷದಲ್ಲಿ ತೀವ್ರ ಬದಲಾವಣೆ ಕಂಡಿದೆ. ಹೀಗಾಗಿ ನಮ್ಮ ಬಳಿ ಇರುವ ಹಣವನ್ನ ದುಡಿಸಿಕೊಳ್ಳುವ ಜಾಣ್ಮೆ ಅವಶ್ಯಕವಾಗಿದೆ. ಉಳಿದಂತೆ ಹೂಡಿಕೆ ಸಮಯದಲ್ಲಿ ಹೆಚ್ಚಿನ ಪರಾಮರ್ಶೆ ಅವಶ್ಯಕ ಎನ್ನವುದನ್ನ ಓದುಗರ ಅರಿತುಕೊಳ್ಳುವುದು ಒಳಿತು. 

ನಮ್ಮ ಸ್ಟಾಕ್ ಮಾರ್ಕೆಟ್ 2020 ರಲ್ಲಿ ಹೇಗಿರುತ್ತದೆ? 

2019ರ ಅಂತ್ಯಕ್ಕೆ ಸ್ಟಾಕ್ ಮಾರ್ಕೆಟ್ ಸಾಕಷ್ಟು ಅಭಿವೃದ್ಧಿ ಕಂಡಿತು. ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಸ್ಟಾಕ್ ಮಾರ್ಕೆಟ್ ನಲ್ಲಿ ನುರಿತ ಹೂಡಿಕೆದಾರರು ಸಾಕಷ್ಟು ಯಶಸ್ಸು ಕಂಡರು. ಈ ವರ್ಷ ಕೂಡ ಹೇಳಿಕೊಳ್ಳುವಂತಹ ತೊಂದರೆಗಳು ಸದ್ಯದ ಮಟ್ಟಿಗೆ ಕಾಣುತ್ತಿಲ್ಲ. ಭಾರತದ ಮಟ್ಟಿಗೆ ಹೇಳುವುದಾದರೆ ಈ ವರ್ಷ ಸುಲಲಿತವಾಗಿ ಸಾಗಬೇಕು. ಆದರೇನು..., ನಾರ್ತ್ ಕೊರಿಯಾ ಮತ್ತು ಅಮೇರಿಕ ನಡುವಿನ ಟ್ವೀಟ್ ಸಮರವನ್ನ ಕಂಡಿರುವವರು ಅವುಗಳ ನಡುವಿನ ಹೊಡೆದಾಟವನ್ನ ಅಲ್ಲಗಳೆಯುವುದಿಲ್ಲ. ಈ ರೀತಿ ಅಂತರರಾಷ್ಟ್ರೀಯ ವಿದ್ಯಮಾನಗಳನ್ನ ಮತ್ತು ಊಹಿಸಲಾಗದೆ ಘಟಿಸುವ ವಿಷಯಗಳನ್ನ ಪಕ್ಕಕ್ಕೆ ಇಟ್ಟು ನೋಡಿದರೆ ಸ್ಟಾಕ್ ಮಾರ್ಕೆಟ್ ಈ ವರ್ಷವೂ ಒಳ್ಳೆಯ ಫಸಲನ್ನ ನೀಡುವ ಸಾಧ್ಯತೆಗಳಿವೆ.

ಥೀಮ್ ಆಧಾರಿತ ಸ್ಟಾಕ್ ಮೇಲಿನ ಹೂಡಿಕೆಗೆ ಹೆಚ್ಚು ಒತ್ತು ನೀಡಿ: 

ಬಜೆಟ್ನಲ್ಲಿ ಕೇಂದ್ರ ಸರಕಾರ ಖಂಡಿತವಾಗಿ ಗ್ರಾಮಿಣಾಭಿವೃದ್ದಿಗೆ ಹೆಚ್ಚಿನ ಮಹತ್ವ ನೀಡಿದೆ. ಹೀಗೆ ರೂರಲ್ ಡೆವಲಪ್ಮೆಂಟ್ ಹೆಸರಿನ ಬಾಂಡ್ಗಳನ್ನ ಕೇಂದ್ರ ಸರಕಾರ ಜಾರಿಗೆ ತರಲಿದೆ. ಇವು ಎಲ್ಲಾ ರೀತಿಯಲ್ಲೂ ಹೆಚ್ಚಿನ ಸುರಕ್ಷತೆಯಿಂದ ಕೂಡಿವೆ ಜೊತೆಗೆ ಹೆಚ್ಚಿನ ಆದಾಯವನ್ನೂ ನೀಡಲಿದೆ. ಇದೊಂದೇ ಅಂತಲ್ಲ ಯಾವುದೇ ರೀತಿಯ ನಿಗದಿತ, ಹೆಸರಿಟ್ಟು ಬಿಡುಗಡೆ ಮಾಡುವ ಬಾಂಡ್ ಗಳ ಮೇಲಿನ ಹೂಡಿಕೆ ಉತ್ತಮವಾಗಿರುತ್ತದೆ. ಉದಾಹರಣೆಗೆ ಗೋಲ್ಡ್ ಬಾಂಡ್, ಮೂಲಭೂತ ಸೌಕರ್ಯ ಹೆಚ್ಚಿಸಲು ಬಿಡುಗಡೆ ಮಾಡುವ ಬಾಂಡ್ ಗಳು ಇತ್ಯಾದಿ... ಇವುಗಳು ಕೇಂದ್ರ ಸರಕಾರದ ಅಭಯವನ್ನ ಹೊಂದಿರುತ್ತದೆ. ಹೀಗಾಗಿ ಹೆಚ್ಚು ಸುರಕ್ಷಿತ ಮತ್ತು ಬ್ಯಾಂಕ್ ನಲ್ಲಿ ಹಣ ಇಡುವುದಕ್ಕಿಂತ ಹೆಚ್ಚಿನ ಆದಾಯವನ್ನ ಖಂಡಿತ ತಂದು ಕೊಡುತ್ತವೆ. 

ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ ಗಳ ಮೇಲಿನ ಹೂಡಿಕೆ 2020 ರಲ್ಲೂ ಒಳ್ಳೆಯ ಫಸಲು ತಂದುಕೊಡಲಿದೆ. 
ಇಲ್ಲಿ ಕೂಡ ಮಿಡ್ ಟರ್ಮ್ ನಿಂದ ಲಾಂಗ್ ಟರ್ಮ್ ಹೂಡಿಕೆ ಹೆಚ್ಚಿನ ಲಾಭವನ್ನ ಖಂಡಿತ ತಂದುಕೊಡುತ್ತದೆ. ಮಾರುಕಟ್ಟೆಯಲ್ಲಿ ಸಣ್ಣ ಪುಟ್ಟ ಏರಿಳಿತಗಳು ಸದಾ ಇದ್ದೇ ಇರುತ್ತದೆ. ಲಾಂಗ್ ಟರ್ಮ್ ನಲ್ಲಿ ಇಂತಹ ಸಣ್ಣ ಪುಟ್ಟ ಏರಿಳಿತಗಳ ಲಾಭ-ನಷ್ಟ ಎಲ್ಲವೂ ಹೊಂದಾಣಿಕೆಯಾಗಿ ನಮ್ಮ ನಿರೀಕ್ಷಿತ ಲಾಭವನ್ನ ತಂದುಕೊಡುತ್ತದೆ. ಮಾರುಕಟ್ಟೆಯ ಏರಿಳಿತ ಹೇಗೆ ಇರಲಿ ನಿಮ್ಮ ಹೂಡಿಕೆ ಸದಾ ಸಮತೋಲಿತವಾಗಿರಲಿ ಆಗ ಮಾರುಕಟ್ಟೆ ಕುಸಿದರೂ ನಿಮಗೆ ಹೆಚ್ಚಿನ ನಷ್ಟ ಆಗುವುದಿಲ್ಲ. 2017/2018 ರಲ್ಲಿ ರಿಲಯನ್ಸ್ ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ 70 ಪ್ರತಿಶತ ಲಾಭವನ್ನ ತಂದುಕೊಟ್ಟಿದೆ.  ಎಲ್ ಅಂಡ್ ಟಿ ಇನ್ಫ್ರಾ ಮ್ಯೂಚುಯಲ್ ಫಂಡ್ 60 ಪ್ರತಿಶತ ಲಾಭವನ್ನ ತಂದುಕೊಟ್ಟಿದೆ. ಉಳಿದಂತೆ ಮೆಜಾರಿಟಿ ಮ್ಯೂಚುಯಲ್ ಫಂಡ್ ಗಳು ನೆಲ ಕಚ್ಚಿವೆ. ಹೀಗಾಗಿ ನಮ್ಮ ಸಲಹೆ 'ವಿಷಯಾಧಾರಿತ ಅಥವಾ ನಿಗದಿತ ಹೆಸರಿಟ್ಟ ಯೋಜನೆಗಳ ಮೇಲಿನ ಹೂಡಿಕೆ' ಹೆಚ್ಚಿನ ಲಾಭ ತಂದು ಕೊಡುತ್ತದೆ ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಕೂಡ ಉತ್ತಮ. 

ಪಬ್ಲಿಕ್ ಸೆಕ್ಟರ್ ಬ್ಯಾಂಕ್ಗಳು ಮತ್ತು ಇತರ ಫೈನಾನ್ಸಿಯಲ್ ಸರ್ವಿಸ್ ನೀಡುವ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮುನ್ನವಿರಲಿ ಎಚ್ಚರ. 

ಬ್ಯಾಂಕ್ಗಳಲ್ಲಿ ಹಣವನ್ನ ಠೇವಣಿ ಇರಿಸುವುದು ಹೆಚ್ಚು ಲಾಭದಾಯಕವಲ್ಲ ಆದರೆ ಅದೇ ಹಣದಲ್ಲಿ ಬ್ಯಾಂಕಿನ ಷೇರು ಖರೀದಿ ಖಂಡಿತ ಹೆಚ್ಚಿನ ಲಾಭವನ್ನ ತಂದುಕೊಡುತ್ತದೆ. ಕೇಂದ್ರ ಸರಕಾರ ಬ್ಯಾಂಕ್ಗಳು ಕುಸಿಯದಂತೆ ತಡೆಯಲು ಕಟಿಬದ್ಧವಾಗಿದೆ. ಹೇಳಿದಂತೆ ಬ್ಯಾಂಕ್ನಲ್ಲಿ ಬಂಡವಾಳ ಮರು ಹೂಡಿಕೆ ಮಾಡಿದೆ. ಇದು ಹೂಡಿಕೆದಾರರಲ್ಲಿ ಹೆಚ್ಚಿನ ವಿಶ್ವಾಸ ತಂದಿದೆ. ವಸ್ತುಸ್ಥಿತಿ ಹೀಗಿದ್ದೂ ಭಾರತೀಯ ಬ್ಯಾಂಕುಗಳ ಸ್ಥಿತಿ ಹೂಡಿಕೆ ಮಾಡಲು ಸೂಕ್ತವಾಗಿಲ್ಲ. ಅಂದರೆ ಬ್ಯಾಂಕಿಂಗ್ ಷೇರುಗಳನ್ನ ಕೊಳ್ಳುವಾಗ ಎಚ್ಚರವಿರಲಿ. ಇಲ್ಲಿ ಚಿನ್ನಕ್ಕಿಂತ ಕಸವೇ ಜಾಸ್ತಿ ಸಿಗುವ ಸಾಧ್ಯತೆಗಳಿವೆ. ಅಲ್ಲದೆ ಮುಂಬರುವ ದಿನಗಳಲ್ಲಿ ಬ್ಯಾಂಕಿಂಗ್ ಸೇವೆ ಉಳಿದುಕೊಂಡು ಬ್ಯಾಂಕುಗಳು ಕಳೆದುಹೋಗುವುದು ಸತ್ಯ. ಈ ಹಳೆಯ ವ್ಯವಸ್ಥೆ ದಿನಗಳನ್ನ ಎಣಿಸುತ್ತಿದೆ. ಹೀಗಾಗಿ ಇಲ್ಲಿ ಹೂಡಿಕೆ ಮಾಡದಿರುವುದು ಲೇಸು. 

ಪೀರ್ ಟು ಪೀರ್ ಲೆಂಡಿಂಗ್: 

ನಿಮ್ಮ ಬಳಿ ಹೆಚ್ಚಿನ ಹಣವಿದ್ದರೆ ನೀವೇ ಬಾಂಕ್ನಂತೆ ಕಾರ್ಯ ನಿರ್ವಹಿಸಬಹದು! ಪೀರ್ ಟು ಪೀರ್ ಎನ್ನುವುದು ಜನಸಾಮನ್ಯ ಇನ್ನೊಬ್ಬ ಜನ ಸಾಮಾನ್ಯನಿಗೆ ಮಧ್ಯವರ್ತಿಯ ಸಹಾಯವಿಲ್ಲದೆ ಹಣವನ್ನ ಸಾಲ ನೀಡಲು ಮತ್ತು ಪಡೆಯಲು ನಿರ್ಮಾಣವಾಗಿರುವ ವೇದಿಕೆ. ಇಲ್ಲಿ ನೋಂದಾಯಿಸಿಕೊಂಡು ಸಾಲ ಪಡೆಯುವವನ ಕ್ರೆಡಿಬಿಲಿಟಿ ವೀಕ್ಷಿಸಿ ನೀವೇ ನೇರವಾಗಿ ಹಣವನ್ನ ಸಾಲ ಕೊಡಬಹುದು ಮತ್ತು ನಿಗದಿತ ಬಡ್ಡಿಯನ್ನೂ ವಿಧಿಸಬಹದು. ಇದು ಇತ್ತೀಚೆಗಷ್ಟೇ ಭಾರತದಲ್ಲಿ ತನ್ನ ಪುಟ್ಟ ಹೆಜ್ಜೆಯನ್ನ ಇಡುತ್ತಿದೆ. ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ಮನಸಿದ್ದವರು ಖಂಡಿತ ಇಲ್ಲಿ ಹೂಡಿಕೆ ಮಾಡಬಹುದು. ಪ್ರಾರಂಭದಲ್ಲಿ ಇವು ಖಂಡಿತ ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ. 

ಇತರೆ ಕ್ಷೇತ್ರಗಳ ಹೂಡಿಕೆ:  ಕಮಾಡಿಟಿ ಮಾರ್ಕೆಟ್ನಲ್ಲಿ ಹಣವನ್ನ ಹೂಡಬಹುದು. ಸಕ್ಕರೆ, ಚಿನ್ನ ಈ ವರ್ಷ ವೃಷಭ ಓಟ ಓಡುವ ಸಾಧ್ಯತೆಯಿದೆ. ಉಳಿದಂತೆ ಐಟಿ ಕ್ಷೇತ್ರ, ಕ್ಯಾಪಿಟಲ್ ವಸ್ತುಗಳ ಮೇಲಿನ ಹೂಡಿಕೆ, ಮೂಲ ಸೌಕರ್ಯಗಳ ಬಾಂಡ್ ಗಳ ಮೇಲಿನ ಹೂಡಿಕೆ ಕೂಡ ಚೆನ್ನಾಗಿರುವ ಸಾಧ್ಯತೆಯಿದೆ.  ಯಾವುದೇ ರೀತಿಯ ಅಸುರಕ್ಷತೆ ಬಯಸದವರು ಎಂದಿನಂತೆ ಪಿಪಿಎಫ್, ಸೇವಿಂಗ್ ಬಾಂಡ್, ಪೋಸ್ಟ್ ಆಫೀಸ್ ತಿಂಗಳ ಆದಾಯ ತರುವ ಯೋಜನೆ, ಎನ್ ಎಸ್ ಸಿ ತರಹದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಗಳನ್ನ ಮಾಡಬಹುದು. 

ಉಳಿದಂತೆ ಆಟೋಮೊಬೈಲ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳು ಹೇಳಿಕೊಳ್ಳುವಂತಹ ಬದಲಾವಣೆ ಕಾಣುವುದಿಲ್ಲ. ಅಂದರೆ ಅಲ್ಪ ಮಟ್ಟಿಗಿನ ಚೇತರಿಕೆ ಕಂಡರೂ ಮಾರುಕಟ್ಟೆಯಲ್ಲಿ ಆವರಿಸಿರುವ ಕಾರ್ಮೋಡ ಚದುರುವುದಕ್ಕೆ ಸಮಯ ಬೇಕು. ಹೀಗಾಗಿ ಈ ವರ್ಷ ಈ ಎರಡೂ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮುನ್ನ ಒಂದಷ್ಟು ಜಾಗ್ರತೆ ಅಗತ್ಯ. ಹಣವಿದ್ದವರು, ವಿದ್ಯೆಯಿದ್ದವರು ಮತ್ತು ಕೃಷಿಯಲ್ಲಿ ಆಸಕ್ತಿ ಇದ್ದವರು ಖಂಡಿತ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಮುಂದುವರಿಯುವುದು ಎಲ್ಲಾ ತರಹದಲ್ಲೂ ಒಳ್ಳೆಯದು. ಜಾಗತಿಕ ಮಟ್ಟದಲ್ಲಿ ತಲ್ಲಣಗಳು ಹೆಚ್ಚಾದಷ್ಟು ಸ್ಥಿರತೆ ನೀಡುವುದು ಕೃಷಿಯೊಂದೇ! ಅಲ್ಲದೆ ಟೆಕ್ನಾಲಜಿ ಕಂಪನಿಗಳು ಈ ಕಾರ್ಯಕ್ಷೇತ್ರವನ್ನ ಕೂಡ ಸಾಕಷ್ಟು ಹಸಿರಾಗಿಸಿದೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಈಗಿನ ಸಮಯದಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ. 

ಹಣ ಯಾವತ್ತಿಗೂ ರಾಜ: 
ಮಾರುಕಟ್ಟೆ ಹೆಚ್ಚಿನ ಏರಿಳಿತಕ್ಕೆ ಒಳಗಾದಾಗ ಯಾರ ಕೈಲಿ ಹಣವಿರುತ್ತೋ ಅವನು ರಾಜ! ಈ ಮಾತು ಎಂದೆದಿಗೂ ಸತ್ಯ!! ಇದನ್ನ ಹೇಳುವು ಉದ್ದೇಶ ಇಷ್ಟೇ ನಿಮ್ಮ ಬಳಿ 100 ರೂಪಾಯಿ ಹೂಡಿಕೆ ಮಾಡಲು ಇದೆಯೆಂದುಕೊಳ್ಳಿ ಅದರಲ್ಲಿ ಕನಿಷ್ಠ 20 ರೂಪಾಯಿ ಹಣದ ರೂಪದಲ್ಲೇ ಇರಲಿ! ಅಂದರೆ ಹೂಡಿಕೆ ಕೇವಲ 80 ರೂಪಾಯಿ ಆಗಿರಲಿ. ನಾಳೆ ಯಾವ ಹೊಸ ಅವಕಾಶ ನಿಮ್ಮ ಬಾಗಿಲ ಬಡಿಯಬಹುದು ಬಲ್ಲವರಾರು? 

ಇವತ್ತು ಜಗತ್ತು ಪೂರ್ತಿ ಕ್ರಿಪ್ಟೋ ಕರೆನ್ಸಿ ಹಿಂದೆ ಹುಚ್ಚನಂತೆ ಓಡುತ್ತಿದೆ. ಇದು ಭಾರತದಲ್ಲಿ ಕಾನೂನುಬದ್ಧವಲ್ಲ. ಅಲ್ಲದೆ ಇದನ್ನ ಒಮ್ಮೆ ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ. 100 ಕ್ರಿಪ್ಟೋ ಕರೆನ್ಸಿಯಲ್ಲಿ ಅರ್ಧದಷ್ಟು ಎಲ್ಲಿದೆ ಎನ್ನುವ ಮಾಹಿತಿಯೇ ಇಲ್ಲ!! ಇವೆಲ್ಲಾ ಅತ್ಯಂತ ಹೆಚ್ಚು ಹಣವಂತರು ಆಡುವ ಆಟ ಇದರಲ್ಲಿ ಹೂಡಿಕೆ ಮಾಡಿ ಹಣವನ್ನ ಕಳೆದುಕೊಳ್ಳಬೇಡಿ. 

ಕೊನೆ ಮಾತು: ಯಾವುದರ ಮೇಲಿನ ಹೂಡಿಕೆಯಾದರೂ ಸರಿಯೇ ಅದರ ಪೂರ್ಣ ಜ್ಞಾನ ಮತ್ತು ಅರಿವಿಲ್ಲದೆ ಮಾಡುವ ಹೂಡಿಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಮಾಡುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವೃದ್ಧಿಸುವ ಕಾರ್ಯ ಮಾತ್ರ ನಿಲ್ಲದೆ ಸಾಗುತ್ತಿರಲಿ. 2020 ಹೂಡಿಕೆಯ ದೃಷ್ಟಿಯಿಂದ ಫಲಪ್ರದವಾಗಿರಲಿ. ಭಯ ಮತ್ತು ಅಜ್ಞಾನ ಅಥವಾ ಮಾಹಿತಿ ಕೊರತೆ ಮನಸ್ಸಿನಲ್ಲಿ ಸಂಶಯ ಉಂಟುಮಾಡುತ್ತದೆ. ಸಂಶಯದೊಂದಿಗೆ ಹೂಡಿಕೆ ಮಾತ್ರ ಮಾಡುವುದು ಬೇಡ. ಅಪಾಯವಿಲ್ಲದ ಹೂಡಿಕೆ ಇಲ್ಲವೇ ಇಲ್ಲ! ಅಪಾಯವೆಂದು ಹೂಡಿಕೆ ಮಾಡದೆ ಇರುವುದು ಎಲ್ಲಕ್ಕಿಂತ ದೊಡ್ಡ ಅಪಾಯ. 


- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com